ಚಳಿಯಿಂದ ನಿಮಗೆ ರಕ್ಷಣೆ ಬೇಕಾ..? ಪ್ರೇಮ್ಸ್​​​​ಗೊಂದು ವಿಸಿಟ್​​ ಕೊಡಿ..!

ಟೀಮ್​​ ವೈ.ಎಸ್​​​

0

ಯಾವುದೋ ಹುಚ್ಚು ಆಸೆಯ ಬೆನ್ನು ಹತ್ತಿದ ಭಾರತದ ಮಹಿಳೆಯೊಬ್ಬಳು 1970ರಲ್ಲಿ ಅಮೆರಿಕಾಕ್ಕೆ ಹೋಗುತ್ತಾಳೆ. ಆದರೆ ಅಲ್ಲಿಗೆ ಹೋದ ಮೇಲೆ ಅವಳಿಗೆ ತಿಳಿಯುತ್ತದೆ ಅವಳ ಬಳಿ ಸಾಕಷ್ಟು ಹಣ ಇಲ್ಲ ಎಂದು. ವಿದೇಶಿ ನೆಲದಲ್ಲಿ, ಹಣವಿಲ್ಲದೇ ಯಾರ ಪರಿಚಯವಿಲ್ಲದೇ ಕೆಲ ಕಾಲ ತನ್ನನ್ನು ತಾನು ನಿರ್ವಹಿಸಿಕೊಳ್ಳುತ್ತಾಳೆ. ತನ್ನದೇ ಆದ ದಾರಿ ಕಂಡುಕೊಳ್ಳುತ್ತಾಳೆ. ಅವಳಲ್ಲಿದ್ದ ಪ್ರಯಾಣದ ಡಿಎನ್‌ಎಯಿಂದಾಗಿ ಅವಳು ತನ್ನ ಆರಾಮದಾಯಕ ವಲಯದಿಂದ ಹೊರಗೆ ಜಿಗಿಯುತ್ತಾಳೆ. ಅವಳು ಅದರಲ್ಲಿ ಯಶಸ್ವಿಯೂ ಆಗುತ್ತಾಳೆ. ತನ್ನ ಮಾತೃಭೂಮಿಗೆ ಹಿಂದಿರುಗುವ ವೇಳೆಗೆ ಜೀವಮಾನದಲ್ಲೇ ಮರೆಯಲಾರದ ಮನೋಜ್ಞ ಅನುಭವದ ಬುತ್ತಿಯನ್ನು ತನ್ನೊಂದಿಗೆ ಹೊತ್ತು ತರುತ್ತಾಳೆ ಆಕೆ. ಈ ಮಹಿಳೆ ಬೇರಾರೂ ಅಲ್ಲ. ಯುಕ್ತಿ ಜಂಘ್ಯಾನಿ ಮತ್ತು ದೀಪ್ತಿ ಜಂಘ್ಯಾನಿ.

ಪ್ರಯಾಣ, ಪ್ರವಾಸ ಎಂಬುದು ಈ ಕುಟುಂಬದವರ ರಕ್ತದಲ್ಲಿಯೇ ಇದೆ. ವಿಶೇಷವಾಗಿ ಶೀತ ಪ್ರದೇಶಗಳಿಗೆ ಪ್ರವಾಸ ಹೋಗುವುದನ್ನು ಇವರು ತುಂಬಾ ಇಷ್ಟಪಡುತ್ತಾರೆ. ಚಾರಣ ಮತ್ತು ಉತ್ತರಭಾರತದ ಪರ್ವತಗಳನ್ನು ಹತ್ತುವುದೆಂದರೆ ಇವರಿಗೆ ಬಲು ಪ್ರೀತಿ. ಯುಕ್ತಿ ಹಾಗೂ ದೀಪ್ತಿಯವರ ತಾಯಿ ವಂದನಾ ಜಂಘ್ಯಾನಿಯವರಿಗೂ ಪ್ರವಾಸವೆಂದರೆ ತುಂಬಾ ಇಷ್ಟ. 1996ರಲ್ಲಿ ಶೀತ ಪ್ರದೇಶಗಳಿಗೆ ಪ್ರವಾಸ ಹೋಗುವ ಪ್ರವಾಸಿಗರಿಗಾಗಿ, ಶೀತ ಪ್ರದೇಶಗಳಿಗೆ ಕೊಂಡೊಯ್ಯಲೇಬೇಕಾದ ವಸ್ತುಗಳ ಪ್ರೇಮ್ಸ್ ಎಂಬ ಮಳಿಗೆಯನ್ನು ಮುಂಬೈನ ಖಾರ್ ಪ್ರಾಂತ್ಯದಲ್ಲಿ ತೆರೆಯುತ್ತಾರೆ.

ಯುಕ್ತಿ ಮತ್ತು ದೀಪ್ತಿ ಜಂಘ್ಯಾನಿ
ಯುಕ್ತಿ ಮತ್ತು ದೀಪ್ತಿ ಜಂಘ್ಯಾನಿ

ಈಗ ಪ್ರಖ್ಯಾತವಾಗಿರುವ ಈ ಮಳಿಗೆ ಪ್ರವಾಸಿಗರಿಗೆ ಬಲು ಅಚ್ಚುಮೆಚ್ಚು. ಇದನ್ನೇ ದಾಳವಾಗಿ ಬಳಸಿಕೊಂಡು ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ಅನೇಕ ಜನರಿಗೆ ನಮ್ಮ ಸಂಗ್ರಹದಲ್ಲಿರುವ ಉತ್ಪನ್ನಗಳ ಅವಶ್ಯಕತೆ ಇದೆ ಎಂಬುದು ಯುಕ್ತಿ ಹಾಗೂ ದೀಪ್ತಿಯ ಅರಿವಿಗೆ ಬಂದಿದೆ. ಅಲ್ಲದೇ ಪ್ರಸ್ತುತ ಇವರು ಮುಂಬೈನ ಹೊರಭಾಗದಿಂದಲೂ ಬೇಡಿಕೆ ಪಡೆಯುತ್ತಿದ್ದಾರೆ. ಈ ಅಗತ್ಯಗಳನ್ನು ಪೂರೈಸಲು ಇ-ಕಾಮರ್ಸ್ ಒಂದು ಅತ್ಯುತ್ತಮ ವೇದಿಕೆ ಎನ್ನುತ್ತಾರೆ ಯುಕ್ತಿ. ದೀಪ್ತಿಯವರ ಜೊತೆ ಯುಕ್ತಿಯೂ ಸಹ ಇ-ಕಾಮರ್ಸ್ ವಹಿವಾಟುಗಳನ್ನು ನೋಡಿಕೊಳ್ಳುತ್ತಾರೆ. ಯುಕ್ತಿ ಸಿಎ ಮುಗಿಸಿದ್ದು, ದೀಪ್ತಿ ವೃತ್ತಿಪರ ಮಾಧ್ಯಮಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಸಂಸ್ಥೆಗೆ ಅಜ್ಜಿ ಸೂಚಿಸಿರುವ ಪ್ರೇಮ್ಸ್ ಎಂಬ ಹೆಸರನ್ನೇ ಇಟ್ಟಿರುವ ಇವರು ಚಳಿಗಾಲದ ಉಡುಗೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಂಜು ಮತ್ತು ಚಳಿಗೆ ಜಾಕೆಟ್‌ಗಳು, ಉಲ್ಲನ್ ಕೋಟ್‌ಗಳು, ಥರ್ಮಲ್‌ಗಳು, ಸ್ವೆಟ್ ಶರ್ಟ್ ಗಳು, ರೈನ್‌ಕೋಟ್‌ಗಳಂತಹ ಎಲ್ಲಾ ವಿಧದ ಚಳಿಗಾಲದ ಉಡುಗೆಗಳನ್ನು ಇವರು ಮಾರುತ್ತಿದ್ದಾರೆ. ಮುಖ್ಯವಾಗಿ ಇವರು ಭಾರತದ ಬ್ರಾಂಡ್‌ಗಳಿಗೆ ಹೆಚ್ಚಿನ ಪ್ರಚಾರ ಕೊಡುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಬ್ರಾಂಡ್‌ಗಳನ್ನು ಹೊಂದಿರುವ ಇವರ ಮಳಿಗೆಯಲ್ಲಿ ಶೇ.90ರಷ್ಟು ಭಾರತೀಯ ಬ್ರಾಂಡ್‌ಗಳೇ ಇವೆ ಎನ್ನುತ್ತಾರೆ ಯುಕ್ತಿ.

ಯಾವ ಬ್ರಾಂಡ್‌ಗಳನ್ನು ಮಾರಿದರೆ ನಿಜಕ್ಕೂ ಲಾಭ ಬರುತ್ತದೆ ಎಂಬುದರ ಬಗ್ಗೆ ತಾವೀಗ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ನಮ್ಮಲ್ಲಿ ಶಾಪಿಂಗ್ ಮಾಡಿದರೆ ಇನ್ನೊಂದು ಪ್ರವಾಸ ಹೋಗಿಬರುವಷ್ಟು ನಿಮ್ಮ ಹಣ ಉಳಿತಾಯವಾಗುತ್ತದೆ ಎಂದು ನಗುತ್ತಾ ಹೇಳುತ್ತಾರೆ ಯುಕ್ತಿ.

ಮಾರುಕಟ್ಟೆಯಲ್ಲಿ ನಿರ್ದಿಷ್ಟ ಸಲಕರಣೆಗಳ ಕೊರತೆಯಿರುವ ಕಾರಣ ತಮ್ಮದೇ ಆದ ಉತ್ಪಾದನಾ ಘಟಕವನ್ನು ನಿರ್ಮಿಸಿರುವ ಯುಕ್ತಿ ಮತ್ತು ದೀಪ್ತಿ, ಈ ಮೂಲಕ ತಮ್ಮ ಶ್ರೇಣಿಯನ್ನು ವಿಸ್ತಾರಗೊಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. 10 ಜನರನ್ನು ಹೊಂದಿರುವ ಈ ಪ್ರೇಮ್ಸ್ ಮಳಿಗೆ, ಪ್ರವಾಸಿಗರ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಗ್ರಾಹಕರಿಗೆ ಆಪ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದೇ ಮನಸ್ಥಿತಿಯ ಪ್ರವಾಸಿಗರು ಒಂದೆಡೆ ಸೇರಿ ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುವಂತಹ ಒಂದು ಕಾರ್ಯಕ್ರಮ ಮಾಡಬೇಕೆಂಬ ಉದ್ದೇಶವೂ ಪ್ರೇಮ್ಸ್ ಸಂಸ್ಥೆಗಿದೆ. ತಮ್ಮ ಬ್ಲಾಗ್ ಮೂಲಕ ಈ ಕಾರ್ಯವನ್ನು ನಿರ್ವಹಿಸಲು ಯತ್ನಿಸುತ್ತಿದ್ದಾರೆ ಯುಕ್ತಿ ಮತ್ತು ದೀಪ್ತಿ.

ಕೆಲ ತಿಂಗಳ ಹಿಂದಷ್ಟೇ ಇ-ಕಾಮರ್ಸ್ ಮಳಿಗೆಯನ್ನು ತೆರೆದಿರುವ ಪ್ರೇಮ್ಸ್ ತಂಡ ಪ್ರತಿದಿನವೂ ತನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ನಿರತವಾಗಿದೆ. ಚಿಲ್ಲರೆ ವಲಯದಲ್ಲಿ ಇ- ಕಾಮರ್ಸ್ ವೇದಿಕೆಯನ್ನು ಬಳಸಿಕೊಂಡು ಈ ಮುಖಾಂತರ ಅಭಿವೃದ್ಧಿಯ ಪಥದತ್ತ ಸಾಗಿದೆ ಪ್ರೇಮ್ಸ್. ಆಫ್‌ಲೈನ್ ಉದ್ಯಮಗಳಿಗೆ ಆನ್‌ಲೈನ್ ಮಾರುಕಟ್ಟೆ ಉತ್ತಮ ಬೆಂಬಲ ನೀಡುತ್ತಿದೆ. ಇದು ಭಾರತದಲ್ಲಿ ಇ-ಕಾಮರ್ಸ್ ವೇದಿಕೆಯ ಬೆಳವಣಿಗೆಗಿರುವ ಸಂಭಾವ್ಯ ಅವಕಾಶವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.

Related Stories