"ಅಮಿತಾಬ್‍ರಿಂದ ಬೇಷ್ ಎನಿಸಿಕೊಂಡ ಬಾಲಕಿ - ಆಕೆಯಿಂದಾಗಿದೆ ಗ್ರಾಮದಲ್ಲಿ ಶೌಚಾಲಯ ಕ್ರಾಂತಿ"

ಪಿ.ಅಭಿನಾಷ್​​

0

ಆಕೆ ಇಂದು ದೇಶದಾದ್ಯಂತ ಸುದ್ದಿಯಾಗಿದ್ದಾಳೆ . ಅದೆಷ್ಟೋ ಮಂದಿಗೆ ಪ್ರೇರೇಪಣೆಯಾಗಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ಕಂಡ ಸ್ವಚ್ಛ ಭಾರತದ ಕನಸನ್ನ ತನ್ನೂರಲ್ಲಿ ನನಸು ಮಾಡಿದ್ದಾಳೆ. ಆಕೆ ನಮ್ಮ ಕನ್ನಡದ ಹುಡುಗಿ ಅನ್ನೋದೆ ಹೆಮ್ಮೆಯ ವಿಚಾರ. ಹೌದು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಾಲೇನಹಳ್ಳಿ ಗ್ರಾಮದ ಪ್ರೌಡ ಶಾಲಾ ವಿದ್ಯಾರ್ಥಿನಿ ಲಾವಣ್ಯ ಎನ್ನುವ ಛಲಗಾತಿಯ ಯಶೋಗಾಥೆ ಇದು. ಬಾಲಿವುಡ್​​ನ ಬಿಗ್‍ಬಿ ಅಮಿತಾಬ್ ಬಚ್ಚನ್​​ ಈಕೆಯ ಸಾಧನೆಯನ್ನ ರಿಯಾಲಿಟಿ ಶೋ ಒಂದರಲ್ಲಿ ಹಾಡಿಹೊಗಳಿದ್ದಾರೆ. ಅಂದಹಾಗೇ ಆಕೆ ಮಾಡಿದ ಸಾಧನೆ "ಶೌಚಾಲಯ ಕ್ರಾಂತಿ"

ಲಾವಣ್ಯ 9ನೇ ತರಗತಿ ಓದುತ್ತಿರುವ ಹುಡುಗಿ. ಶೌಚಾಯಲ ವ್ಯವಸ್ಥೆಯೇ ಇಲ್ಲದ ಕುಗ್ರಾಮದಲ್ಲಿ ಅನ್ನ ನೀರು ಬಿಟ್ಟು, ಶೌಚಾಲಯ ಕಟ್ಟಿಸಿಕೊಂಡಿದ್ದಾಳೆ. ಆ ಮೂಲಕ ತನ್ನೂರಿನ ಸುಮಾರು ನೂರಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯವನ್ನ ನಿರ್ಮಾಣಕ್ಕೆ ಪ್ರೇರೇಪಣೆಯಾಗಿದ್ದಾಳೆ.

ಉಪವಾಸ ಸತ್ಯಾಗ್ರಹ

ಲಾವಣ್ಯ ಒಮ್ಮೆ ತನ್ನೂರಿನ್ಲಲಿ ನಡೆದ ಸ್ವಚ್ಛ ಭಾರತ ಆಂದೋಲನದಲ್ಲಿ ಪಾಲ್ಗೊಂಡಿದ್ದಳು. ಈ ಆಂದೋಲನದಲ್ಲಿ ಬಯಲು ಶೌಚದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಗಿತ್ತು. ಶೌಚಾಲಯ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲಾಗಿತ್ತು. ಇದ್ರಿಂದ ಪ್ರೇರೇಪಿತಗೊಂಡ ಲಾವಣ್ಯ ಅಂದೇ ಮನೆಗೆ ಬಂದು ಶೌಚಾಲಯ ಕಟ್ಟಿಸುವಂತೆ ಕೇಳಿಕೊಳ್ಳುತ್ತಾಳೆ. ಆದ್ರೆ, ಬಡಕೂಲೀ ಕಾರ್ಮಿದ ಪೋಷಕರು ಶೌಚಾಲಯ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ನಮ್ಮ ಬಳಿ ಅಷ್ಟು ಹಣವಿಲ್ಲ ಅಂತಾ ಮಗಳಿಗೆ ಬುದ್ದಿ ಹೇಳಿ ಸುಮ್ಮನಾಗುತ್ತಾರೆ. ಆದ್ರೆ, ಲಾವಣ್ಯ ಮಾತ್ರ ಸುಮ್ಮನಾಗುವುದಿಲ್ಲ. ಶೌಚಾಲಯ ಕಟ್ಟಿಸಲೇ ಬೇಕು ಅಂತಾ ಹಠ ಹಿಡಿಯುತ್ತಾಳೆ. ಆಗಲೂ ಪೋಷಕರು ಕೇಳದೆ ಇದ್ದಾಗ ಉಪವಾಸ ಶುರು ಮಾಡ್ತಾಳೆ. ನಲವತ್ತೆಂಟು ಗಂಟೆಗಳ ಕಾಲ ಅನ್ನ ನೀರನ್ನ ತ್ಯಜಿಸುತ್ತಾಳೆ. ಮಗಳ ಮನವೊಲಿಸಲು ಆಗದ ಪೋಷಕರು ಕೊನೆಗೆ ನಮ್ಮ ಬಳಿ ಹಣವಿಲ್ಲ ಅಂತಾ ಸಂತೈಸಲು ಮುಂದಾಗ್ತಾರೆ ನಂತ್ರ ಶೌಚಾಲಯ ನಿರ್ಮಾಣಕ್ಕೆ ಗ್ರಾಮಪಂಚಾಯ್ತಿಯಿಂದ ಅನುದಾನ ಸಿಗುವುದರ ಬಗ್ಗೆ ಹೇಳಿ ಪೋಷಕರನ್ನೂ ಗ್ರಾಮಪಂಚಾಯ್ತಿ ಕಚೇರಿಗೆ ಕರೆದುಕೊಂಡು ಹೋಗ್ತಾಳೆ. ಆದ್ರೆ, ಆವತ್ತು ಕಛೇರಿಗೆ ರಜೆ ಇದ್ದುದ್ದರಿಂದ ಅಧಿಕಾರಿಗಳು ಸಿಗೋದಿಲ್ಲ. ಆದರೂ ಲಾವಣ್ಯ ಮಾತ್ರ ಹಿಂದೆ ಸರಿಯಲಿಲ್ಲ. ಗ್ರಾಮ ಪಂಚಾಯ್ತಿ ಮುಂದೆಯೇ ಉಪವಾಸ ಸತ್ಯಾಗ್ರಹ ಆರಂಭಿಸುತ್ತಾಳೆ. ಮರುದಿನ ಅಧಿಕಾರಿಗಳು ಆಗಮಿಸಿ ಲಾವಣ್ಯಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡುವ ಯೋಜನೆ ಬಗ್ಗೆ ತಿಳಿಸಿ, ಸರ್ಕಾರದಿಮದ ಹಣ ಕೊಡಿಸುವುದಾಗಿ ಭರವಸೆ ನೀಡ್ತಾರೆ. ಇದಕ್ಕೂ ಲಾವಣ್ಯ ಒಪ್ಪದೆ ಇದ್ದಾಗ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರೇ ಹಣ ಹಾಕಿ ಲಾವಣ್ಯ ಮನೆಯಲ್ಲಿ ಶೌಚಾಯಲ ನಿರ್ಮಾಣ ಮಾಡಿಕೊಡ್ತಾರೆ.

"ನನ್ನ ಮಗಳು ಒಂದು ದಿನ ಬಂದು ನಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿ ಅಂದಳು. ಆದ್ರೆ ಅಷ್ಟು ಹಣ ನಮ್ಮ ಬಳಿ ಇಲ್ಲ ಅಂತಾ ಹೇಳಿ ಸುಮ್ಮನಾದೆ. ಪ್ರತಿನಿತ್ಯ ಶಾಲೆಗೆ ಹೋಗುವಾಗ ನನಗೆ ಹೇಳಿ ಹೋಗ್ತಿದ್ದ ಲಾವಣ್ಯ ಅಂದು ನನ್ನ ಕಡೆ ತಿರುಗಿಯೂ ನೋಡದೆ ಹೋದಳು. ನಂತ್ರ ಊಟ ತಿಂಡಿ ಮಾಡುವುದನ್ನೂ ಬಿಟ್ಟುಬಿಟ್ಟಳು. ಹಾಗಾಗಿ ಗ್ರಾಮ ಪಂಚಾಯ್ತಿ ಸಹಾಯದಿಂದ ಮನೆಯಲ್ಲಿ ಒಂದು ಶೌಚಾಲಯವನ್ನು ಕಟ್ಟಿಸಿದೆವು" ಅಂತಾರೆ ಲಾವಣ್ಯಳ ತಂದೆ.

ಗ್ರಾಮಕ್ಕೆ ಸ್ಪೂರ್ತಿ

ನಂತ್ರ ಲಾವಣ್ಯ ಮನೆಯಲ್ಲಿ ಶೌಚಾಲಯ ನಿರ್ಮಾಣವಾದ ನಂತ್ರ ಇತರೆ ಮಕ್ಕಳು ನಮಗೆ ಶೌಚಾಲಯ ಬೇಕು ಅಂತಾ ಪಟ್ಟು ಹಿಡಿಯುತ್ತಾರೆ. ಮಕ್ಕಳ ಬಲವಂತಕ್ಕೆ ಇಡೀ ಊರಿನಲ್ಲಿ ಶೌಚಾಲಯಗಳು ನಿರ್ಮಾಣವಾಗುತ್ತವೆ. ಇಂದು ಹಾಲೇನಹಳ್ಳಿಯಲ್ಲಿ ನೂರಕ್ಕೂ ಹೆಚ್ಚು ಶೌಚಾಲಯಗಳಿವೆ. ಗ್ರಾಮದ ಯಾರೊಬ್ಬರು ಈಗ ಬಯಲು ಶೌಚ ಮಾಡುತ್ತಿಲ್ಲ. ಬದಲಾಗಿ ತಮ್ಮ ತಮ್ಮ ಮನೆಗಳಲ್ಲಿ ನಿರ್ಮಾಣವಾಗಿರುವ ಶೌಚಾಲಯಗಳನ್ನೇ ಬಳಸುತ್ತಿದ್ದಾರೆ. ಇದ್ರಿಂದ, ಗ್ರಾಮ ಸ್ವಚ್ಛ ಗ್ರಾಮವಾಗಿ ಮಾರ್ಪಟ್ಟಿದೆ. ಗ್ರಾಮದ ಸ್ವಚ್ಛತೆ ವಿಚಾರ ಇತರೆ ಹಳ್ಳಿಗಳಿಗೂ ಹರಡಿ, ಅಕ್ಕಪಕ್ಕದ ಗ್ರಾಮಗಳಲ್ಲೂ ಶೌಚಾಲಯ ಕ್ರಾಂತಿ ಆರಂಭವಾಗಿದೆ. 

"ನನಗೆ ಬಯಲು ಶೌಚಕ್ಕೆ ಹೋಗುವುದು ಇಷ್ಟವಿರಲಿಲ್ಲ. ಶೌಚಾಲಯ ನಿರ್ಮಾಣ ಮಾಡಿದ್ರೆ ಏನೆಲ್ಲಾ ಪ್ರಯೋಜನೆಗಳಾಗುತ್ತವೆ ಅನ್ನೋದ್ರ ಬಗ್ಗೆ ಶಾಲೆಯಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೆ. ನಮ್ಮ ಮೇಷ್ಟ್ರು ಇದರ ಬಗ್ಗೆ ತಿಳಿಸಿ ಹೇಳಿದ್ರು. ಹಾಗಾಗಿ ಶೌಚಾಲಯವನ್ನ ನಿರ್ಮಾಣ ಮಾಡಿಸಲೇಬೇಕು ಅಂತಾ ಹಠ ಹಿಡಿದೆ. ನಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣವಾದ ನಂತ್ರ ನಮ್ಮ ಸ್ನೇಹಿತರಿಗೂ ತಿಳಿಸಿದೆ. ಆಗ ಅವರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನ ಕಟ್ಟಿಸುವಂತೆ ಅವರ ತಂದೆ ತಾಯಿಗೆ ಹೇಳಿದ್ರು. ಇದ್ರಿಂದ, ನಮ್ಮ ಊರಿನಲ್ಲಿ ಈಗ ಎಲ್ಲಾ ಮನೆಗಳಲ್ಲೂ ಶೌಚಾಲಯಗಳು ನಿರ್ಮಾಣವಾಗಿವೆ. ಇದ್ರಿಂದ ನನಗೆ ತುಂಬಾ ಖುಷಿಯಾಗಿದೆ " ಅಂತಾಳೆ ಲಾವಣ್ಯ.

9ನೇ ತರಗತಿಯ ಲಾವಣ್ಯ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಮನ್ನಣೆ ಪಡೆದಿರುವುದು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತೆ ಮಾಡಿದೆ. ಬಿಗ್‍ಬಿ ಅಮಿತಾಭ್ ಖುದ್ದು ಲಾವಣ್ಯಳನ್ನ ಹಾಡಿಹೊಗಳಿದ್ದಾರೆ.

Related Stories