ಆಹಾರೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಯನಕ್ಕೆ ನಾಂದಿ ಹಾಡಿದ ರಾಜು ಭೂಪತಿ

ಟೀಮ್​ ವೈ.ಎಸ್​.ಕನ್ನಡ

0

ಜೀವನದಲ್ಲಿ ಏರಿತಗಳು ಸಾಮಾನ್ಯ. ಸಣ್ಣ-ದೊಡ್ಡ ವೈಫಲ್ಯಗಳು ನಮ್ಮ ಬೆನ್ನು ಬೀಳುತ್ತವೆ. ಮಹಾನ್ ಕನಸೊಂದು ಕುಸಿದು ಬೀಳುತ್ತದೆ. ಆದ್ರೆ ಸೋಲಿನಿಂದ ಪಾಠ ಕಲಿತು ಮುನ್ನಡೆಯುವವನು ಜಾಣ. ವೈಫಲ್ಯವನ್ನು ಯಶಸ್ಸಿಗೆ ಬಳಸಿಕೊಳ್ಳುವುದು ಅತಿ ಮುಖ್ಯ. ಅದೆಷ್ಟೋ ಬಾರಿ ಸೋಲು ಎಂಬುದು ಮನೆ ಬಾಗಿಲು ತಟ್ಟಿದೆ,ಮನೆಯೊಳಗೆ ಹೋಗಿ ಬಂದಿದೆ. ಆದ್ರೆ ಹೋರಾಟ ನಿಂತಿಲ್ಲ. ನಿರಂತರ ಹೋರಾಟ ಹಾಗೂ ಹಾರ್ಡ್ ವರ್ಕ್ ಗೆ ಹೆದರಿ ವೈಫಲ್ಯ ಓಡಿ ಹೋಗಿದೆ. ಯಶಸ್ಸು ಲಭಿಸಿದೆ. ಸೋಲು-ಗೆಲುವು,ಏರಿಳಿತ, ಸುಖ-ದುಃಖಗಳು ಜೀವನವನ್ನು ಒಂದು ಅನನ್ಯ ಕಥೆಯಾಗಿ ಮಾಡಿದೆ.

ಈ ಕಥೆ ರಾಜು ಭೂಪತಿಯವರದ್ದು. ಇವರು ಮನಸ್ಸು ಮಾಡಿದ್ದರೆ ವೈದ್ಯರಾಗಬಹುದಿತ್ತು. ವೈದ್ಯರಾಗಿದ್ದರೆ ಆಹಾರ ಉದ್ಯಮಕ್ಕೆ ಒಬ್ಬ ಹೊಸ ಹಾಗೂ ಮಹಾನ್ ಕನಸನ್ನು ಹೊತ್ತಿರುವ ಉದ್ಯಮಿ ಸಿಗ್ತಾ ಇರಲಿಲ್ಲ. ರಾಜು ಜೀವನದಲ್ಲಿ ದೊಡ್ಡ ಸಾಧನೆಗಳ ಜೊತೆಗೆ ಸಾಕಷ್ಟು ಪ್ರಕ್ಷುಬ್ಧ ಕ್ಷಣಗಳಿವೆ. ಏರಿಳಿತಗಳಿವೆ.ಯಸ್ಸನ್ನು ಗಳಿಸಲು ಅವರು ಸಾಕಷ್ಟು ಸಂಘರ್ಷ ನಡೆಸಿದ್ದಾರೆ.

ರಾಜು ಭೂಪತಿ ಕಥೆ ಶುರುವಾಗುವುದು ಆಂಧ್ರಪ್ರದೇಶದ ಅಮ್ಲಾಪುರದಿಂದ. ತಂದೆ ನರಸಿಂಹ ರಾಜು ಹೋಮಿಯೋಪತಿ ವೈದ್ಯರಾಗಿದ್ದರು. ಸಾಮಾಜಸೇವೆ ಹಾಗೂ ಆಧ್ಯಾತ್ಮದ ಬಗ್ಗೆ ತಂದೆಗೆ ಸಾಕಷ್ಟು ಒಲವಿತ್ತು. ಅವರು ರೋಗಿಗಳಿಗೆ ಉಚಿತವಾಗಿ ಸೇವೆ ನೀಡುತ್ತಿದ್ದರು. ತಂದೆಯ ಕಾರ್ಯ ನೋಡಿ ರಾಜು ಪ್ರಭಾವಿತರಾಗಿದ್ದರು. ತಾವೂ ವೈದ್ಯರಾಗಬೇಕೆಂಬ ಕನಸು ಕಂಡಿದ್ದರು.

"ಆ ದಿನಗಳನ್ನು ನೆನಪಿಸಿಕೊಳ್ಳುವ ಭೂಪತಿ ನಮ್ಮ ತಂದೆ ಪ್ರಸಿದ್ಧ ವೈದ್ಯರಾಗಿದ್ದರು. ಪ್ರತಿ ದಿನ ಮನೆಗೆ ಸಾಕಷ್ಟು ಜನರು ಬಂದು ಹೋಗ್ತಾ ಇದ್ದರು. ಜನರ ನಡುವೆ ನಾನು ತಂದೆಯವರನ್ನು ಭೇಟಿಯಾಗುವದೇ ಕಷ್ಟವಾಗ್ತಾ ಇತ್ತು. ತಂದೆಯ ಸಮಾಜಸೇವೆ ನನ್ನನ್ನು ಆಕರ್ಷಿಸಿತ್ತು. ನಾನು ವೈದ್ಯನಾಗಲು ಬಯಸಿದೆ. ಅದಕ್ಕಾಗಿ ಇಂಟರ್ ನಲ್ಲಿ ಜೀವಶಾಸ್ತ್ರ, ಭೌತಶಾಸ್ತ್ರ,ರಾಸಾಯನಿಕ ಶಾಸ್ತ್ರವನ್ನು ಆಯ್ದುಕೊಂಡೆ. ಕಾಲೇಜಿಗೆ ಹೋಗುವವರೆಗೆ ನನ್ನ ಜೀವನ ಚೆನ್ನಾಗಿತ್ತು. ಆದ್ರೆ ವಿಜ್ಞಾನ ನನಗೆ ಅರ್ಥವಾಗ್ತಾ ಇರಲಿಲ್ಲ. ನಾನು ಏನು ಮಾಡಬಲ್ಲೆ ಎಂಬುದು ನನಗೆ ತಿಳಿಯುತ್ತಿರಲಿಲ್ಲ.’’

ತಂದೆ ಕೂಡ ಮಗ ವೈದ್ಯನಾಗಲಿ ಎಂದು ಬಯಸಿದ್ದರು. ಹಾಗಾಗಿ ಭೂಪತಿ ಎಂ.ಸೆಟ್ ಪರೀಕ್ಷೆ ಬರೆದ್ರು. ಆದ್ರೆ ಅದ್ರಲ್ಲಿ ಎಂಬಿಬಿಎಸ್ ಗೆ ಅರ್ಹತೆ ಪಡೆಯುವಷ್ಟು ಅಂಕ ಬರಲಿಲ್ಲ. ಇದು ಇಡೀ ಕುಟುಂಬವನ್ನು ಚಿಂತೆಗೆ ತಳ್ಳಿತ್ತು. ಆದ್ರೆ ಡೆಂಟಲ್ ಹಾಗೂ ಹೋಮಿಯೋಪಥಿ ಸೀಟು ಸಿಗುವ ಸಾಧ್ಯತೆ ಇತ್ತು. ತಂದೆ ಕೂಡ ಹೋಮಿಯೋಪತಿ ವೈದ್ಯರಾಗಿದ್ದರಿಂದ ಅವರು ಇದಕ್ಕೆ ಒಪ್ಪಿಗೆ ನೀಡಿದ್ರು. ಒಂದೊಳ್ಳೆ ಹೋಮಿಯೋಪಥಿ ಕಾಲೇಜಿನ ಹುಡುಕಾಟ ಶುರುವಾಯ್ತು. ಕರ್ನಾಟಕದ ಹುಬ್ಬಳ್ಳಿ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುವ ನಿರ್ಧಾರ ಕೈಗೊಳ್ಳಲಾಯ್ತು. ಕಾಲೇಜಿನಲ್ಲಿ ಸೀಟ್ ಕೂಡ ಸಿಗ್ತು. ಚಿಕ್ಕಪ್ಪನ ಜೊತೆ ಹುಬ್ಬಳ್ಳಿಗೆ ಬಂದ್ರು ರಾಜು. ಸರತಿ ಸಾಲಿನಲ್ಲಿ ನಿಂತ ರಾಜು ಮುಂದಿನ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡ್ರು. ಮನೆಯಿಂದ ದೂರವಿದ್ದು, ಮೋಜು ಮಸ್ತಿಯಲ್ಲಿ ಕಾಲ ಕಳೆಯಬಹುದೆಂದುಕೊಂಡಿದ್ದರು. ಆದ್ರೆ ಇವರು ಕನಸು ನನಸಾಗಲಿಲ್ಲ. ಇನ್ನೇನು ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಬೇಕು, ಆಗ ಬಂದ ಚಿಕ್ಕಪ್ಪ, ಬಾ ಮನೆಗೆ ಹೋಗೋಣ. ತಂದೆಯವರ ಪ್ಲಾನ್ ಬದಲಾಗಿದೆ ಎಂದ್ರು. ಇದು ರಾಜು ಅವರ ಕನಸಿನ ಗೋಪುರವನ್ನು ಬೀಳಿಸಿತ್ತು.

ಹುಬ್ಬಳ್ಳಿಯಿಂದ ವಾಪಸ್ ಬಂದ ರಾಜು ಭೂಪತಿಯವರಿಗೆ ಗುಡಿವಾಡಾ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್ ಸೀಟ್​ ಸಿಗುವ ಸಾಧ್ಯತೆ ಇತ್ತು. ಎನ್ ಸಿಸಿ ಕ್ಯಾಂಟಿಡೇಟ್ ಆಗಿದ್ದ ರಾಜು ಭೂಪತಿಗೆ ಎನ್ ಸಿಸಿ ಕೋಟಾದಲ್ಲಿ ಸೀಟ್ ಸಿಗುವ ಸಂಭವವಿತ್ತು. ದುರಾದೃಷ್ಟಕ್ಕೆ ಇವರ ಸಂದರ್ಶನವಿದ್ದ ದಿನವೇ ಸರ್ಕಾರ ಹೊಸ ನೀತಿ ಜಾರಿಗೊಳಿಸಿತ್ತು. ಎನ್ ಸಿಸಿ ಕೋಟಾದ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ವೇಟಿಂಗ್ ಲೀಸ್ಟ್ ನಲ್ಲಿದ್ದದ್ದ ರಾಜು ಭೂಪತಿ ನಿರಾಶೆಗೊಂಡರು.

ಇದರ ನಂತ್ರ ರಾಜು ಭೂಪತಿ ಹಳೆ ಕಾಲೇಜಿನಲ್ಲಿ ಯಾವುದೇ ಕೋರ್ಸ್ ಮಾಡಲು ಇಷ್ಟಪಡಲಿಲ್ಲ.ಹಾಗಾಗಿ ಮತ್ತೊಮ್ಮೆ ಎಂ.ಸೆಟ್ ಬರೆದರು. ಬೇರೆ ಊರಿಗೆ ಹೋಗಿ ಅಲ್ಲಿ ಪರೀಕ್ಷೆ ಬರೆದು ಬಂದ್ರು. ಆದ್ರೆ ಈ ಬಾರಿಯೂ ರಾಜು ಭೂಪತಿ ಅಂದುಕೊಂಡಿದ್ದು ಆಗಲಿಲ್ಲ. ಅವರ ರ್ಯಾಂಕ್ ಐದರಿಂದ ಆರು ಡಿಜಿಟ್​ಗೆ ಬಂದು ನಿಂತಿತ್ತು.

ವೈದ್ಯನಾಗುವ ಇವರ ಕನಸಿನ ದಾರಿ ಮುಚ್ಚಿತ್ತು. ಹಾಗಾಗಿ ಆಂಧ್ರಪ್ರದೇಶದ ಕಾಕಿನಾಡದ ಒಂದು ಪದವಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಶುರುಮಾಡಿದ್ರು. ಡಿಗ್ರಿ ಮುಗಿಸಿದ ಇವರು ಸಾವಯವ ರಾಸಾಯನ ಶಾಸ್ತ್ರದಲ್ಲಿ ಪಿಜಿ ಮಾಡುವ ನಿರ್ಧಾರ ಕೈಗೊಂಡರು. ಡಿಗ್ರಿಯಲ್ಲಿ ಮೂರು ವರ್ಷವೂ ರಾಜು ಭೂಪತಿಯವರಿಗೆ ಕೇವಲ ಪಾಸಿಂಗ್ ಅಂಕ ಮಾತ್ರ ಸಿಕ್ಕಿತ್ತು. ಆದ್ರೂ ಇವರು ಪಿಜಿಗೆ ಅದೇ ವಿಷಯವನ್ನು ಆಯ್ದುಕೊಂಡು ಭೋಪಾಲ್ ನ ಒಂದು ಕಾಲೇಜ್ ನಲ್ಲಿ ಎಂಎಸ್ ಸಿ ಪದವಿ ಪಡೆದರು.

ರಾಜು ಭೂಪತಿಯವರ ಅಣ್ಣ ಐಟಿ ಕ್ಷೇತ್ರದಲ್ಲಿದ್ದರು. ಅವರ ಸಲಹೆ ಪಡೆದ ಭೂಪತಿ ಒಂದು ತಿಂಗಳು ಪ್ರೋಗ್ರಾಮಿಂಗ್ ಕಲಿತರು. ಈ ವೇಳೆ ಅಮೆರಿಕಾದಿಂದ ಬಂದ ಪಕ್ಕದ ಮನೆಯವರೊಬ್ಬರು ಕಂಪನಿ ತೆರೆಯಲು ನಿರ್ಧರಿಸಿದ್ದರು. ಉದ್ಯೋಗದ ಆಫರ್ ನೀಡಿದ್ರು. ಇದು ಭೂಪತಿಯವರಿಗೆ ಬಂದ ಮೊದಲ ಆಫರ್ ಆಗಿತ್ತು. ಅಣ್ಣನ ಸಲಹೆ ಮೇರೆಗೆ ಕೆಲಸಕ್ಕೆ ಸೇರಿದ್ರು. ಕೆಲಸಕ್ಕೆ ಸೇರುವ ವೇಳೆ ಮತ್ತೊಮ್ಮೆ ಆಘಾತವಾಗಿತ್ತು. ಕಂಪನಿ ಮಾಲೀಕರು ಲ್ಯಾಬ್ ಅಸಿಸ್ಟೆಂಟ್ ಹುದ್ದೆಯನ್ನು ಭೂಪತಿಯವರಿಗೆ ನೀಡಲು ಮುಂದಾಗಿದ್ದರು. ಜೊತೆಗೆ 10 ಸಾವಿರ ವೇತನ ಕೊಡುವುದಾಗಿ ಹೇಳಿದ್ದರು. ಭೂಪತಿಯವರ ಪೆಟ್ರೋಲ್ ಖರ್ಚು 5 ಸಾವಿರವಾಗ್ತಾ ಇತ್ತು. ಕಾರ್ಮಿಕರಿಗಿಂತ ಕಡಿಮೆ ವೇತನ ಬರುತ್ತೆ. ನಾನು ಅಷ್ಟು ಅಯೋಗ್ಯನಾ ಎಂದು ಕೊಂಡ ಭೂಪತಿ,ಅನಿವಾರ್ಯವಾಗಿ ಕೆಲಸ ಒಪ್ಪಿಕೊಂಡರು. ಆದ್ರೆ ಪಾಲಕರಿಗೆ ಈ ವಿಷಯ ಹೇಳಿರಲಿಲ್ಲ. ಆರಂಭದಲ್ಲಾದ ನೋವು ಕೊನೆಯಲ್ಲಿ ಇರಲಿಲ್ಲ. ಇವರ ಕೆಲಸ ಮೆಚ್ಚಿ ಮಾಲೀಕರು 15 ಸಾವಿರ ರೂಪಾಯಿ ನೀಡಿದ್ದರು.

ಇದನ್ನು ಓದಿ: ಪ್ರಯೋಗಕ್ಕೆ ಮುನ್ನುಡಿ ಬರೆದ "ಬೊಂಬೆಯಾಟ"

ಮೊದಲ ಬಾರಿ ರಾಜು ಭೂಪತಿಯವರ ಕಾರ್ಯವನ್ನು ಒಬ್ಬ ವ್ಯಕ್ತಿ ಮೆಚ್ಚಿ ಹೊಗಳಿದ್ದರಂತೆ. ಇದನ್ನು ನೆನಪಿಸಿಕೊಂಡು ಭಾವುಕರಾಗುವ ಭೂಪತಿ ಆ ದಿನವನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಭೂಪತಿ ಆರು ತಿಂಗಳುಗಳ ಕಾಲ ಆ ಕಂಪನಿಯಲ್ಲಿ ಕೆಲಸ ಮಾಡಿದ್ರು. ಆ ಕಂಪನಿಗೆ ಸಾಕಷ್ಟು ಉದ್ಯೋಗಿಗಳು ಬಂದಿದ್ದರು. ಬಿಟೆಕ್ ಮುಗಿಸಿದ್ದ ಕೆಲವರ ಸಂಬಳ ಭೂಪತಿಗಿಂತ ಜಾಸ್ತಿ ಇತ್ತು. ಇದಕ್ಕೆಲ್ಲ ಕಾರಣ ಡಿಗ್ರಿ ಎಂಬುದನ್ನು ಅರಿತ ಭೂಪತಿ ಅವರಿಗಿಂತ ಮುಂದೆ ಸಾಗುವ ನಿರ್ಧಾರ ಕೈಗೊಂಡರು. ಒಂದು ವರ್ಷದಲ್ಲಿ ಅದನ್ನು ಸಾಧಿಸಿ ತೋರಿಸಿದ್ರು.

2001ರ ವೇಳೆಗೆ ಭೂಪತಿ aplab ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು. ತಮ್ಮ ಪ್ರಾಮಾಣಿಕ ಕೆಲಸ ಹಾಗೂ ಪರಿಶ್ರಮದಿಂದಾಗಿ ಇವರು ಸಹಾಯಕ ಮ್ಯಾನೇಜರ್ ಹುದ್ದೆ ತಲುಪಿದ್ರು. ಕಂಪನಿಯ ಉಪಾಧ್ಯಕ್ಷ ಸ್ಥಾನಕ್ಕೆ ಕೂಡ ಹೋದ್ರು.ಪ್ರತಿ ಕ್ಷಣವೂ ಇವರು ಸಾಕಷ್ಟು ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸಬೇಕಾಗಿತ್ತು. ಮರೆಯಲಾಗದ ಎರಡು ಘಟನೆಗಳ ಬಗ್ಗೆ ಹೇಳ್ತಾರೆ ಭೂಪತಿ. 

"ನಾನು ಅಮೆರಿಕಾದಿಂದ ವಾಪಸ್ ಬರಬೇಕೆಂದಾಗ ಬರಲಾಗಲಿಲ್ಲ. ಅಲ್ಲೆ ಇರಬೇಕೆಂದಾಗ ವಾಪಸ್ ಬರುವ ಅನಿವಾರ್ಯತೆ ಎದುರಾಯಿತು. ಕಂಪನಿ ಕೆಲಸದ ಮೇಲೆ ನನ್ನನ್ನು ಅಮೆರಿಕಾಕ್ಕೆ ಕಳುಹಿಸಿತ್ತು. ಅಲ್ಲಿ 500 ಜನರ ಬಾಸ್ ಆಗಿದ್ದೆ ನಾನು. ಈ ವೇಳೆ ನನ್ನ ಹೆಂಡತಿ ಗರ್ಭಿಣಿಯಾಗಿದ್ದಳು. ನನ್ನ ಕೈನಲ್ಲಿ ಹಣ ಇರಲಿಲ್ಲ. ಹಾಗಾಗಿ ವಾಪಸ್ ಬರುವ ನಿರ್ಧಾರ ಮಾಡಿದೆ. ಇದನ್ನು ಕೇಳಿದ ಸಿಇಓ ಕೆಲಸ ಬಿಟ್ಟು ಬರಬಹುದು ಎಂದಿದ್ದರು. ಇದಕ್ಕೆ ನಾನು ಓಕೆ ಎಂದೆ. ಆದ್ರೆ ಸಿಇಓ ಮನಸ್ಸು ಮಾಡಲಿಲ್ಲ. ಇನ್ನು ಮೂರ್ನಾಲ್ಕು ತಿಂಗಳ ಬಳಿಕ ವಾಪಸ್ ಬರುವಂತೆ ನನ್ನ ಮನವೊಲಿಸಿದ್ರು. ಭಾರತಕ್ಕೆ ಬಂದ ನಾಲ್ಕೈದು ವರ್ಷದಲ್ಲಿ ಮತ್ತೆ ಅಮೆರಿಕಾಕ್ಕೆ ಹೋದೆ. ನನ್ನ ಸಂಬಂಧಿಕರೆಲ್ಲ ಅಮೆರಿಕಾದಲ್ಲಿ ನೆಲೆಸಿದ್ದರು. ಹಾಗಾಗಿ ನಾನು ಅಲ್ಲಿಯೇ ನೆಲೆ ನಿಲ್ಲುವ ನಿರ್ಧಾರಕ್ಕೆ ಬಂದೆ. ಮನೆಯೊಂದನ್ನು ಖರೀದಿಸಿದ್ದೆ. ಅಲ್ಲಿರಲು ಸಂಪೂರ್ಣ ಮನಸ್ಸು ಮಾಡಿದ್ದೆ. ಆದ್ರೆ ದೂರವಾಣಿ ಕರೆ ಮಾಡಿದ ಸಿಇಓ ಭಾರತಕ್ಕೆ ಮರಳುವಂತೆ ಹೇಳಿದ್ರು. 5000 ಕೆಲಸಗಾರರ ಹೊಣೆಯನ್ನು ನನ್ನ ಮೇಲೆ ಹೊರಿಸಿದ್ರು. ಹಾಗಾಗಿ ಅಲ್ಲಿಂದ ಗಂಟುಮೂಟೆ ಕಟ್ಟಿದೆ.’’

12 ವರ್ಷಗಳಲ್ಲಿ ಭೂಪತಿ 14 ಬಾರಿ ಮನೆ ಬದಲಾಯಿಸಿದ್ದರು. ಒಂದು ಕಾಲದಲ್ಲಿ ಆಫೀಸ್ ಒಳಗೆ ಕುಳಿತು ಕೆಲಸ ಮಾಡ್ತಾ ಇದ್ದ ಭೂಪತಿ ಈಗ ದೊಡ್ಡ ಹುದ್ದೆಯಲ್ಲಿದ್ದರು. ಅವರಿಗೆ ಗೌರವ ಸಿಗ್ತಾ ಇತ್ತು. ಐಟಿ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದ್ದರು.ಆಗ ಭೂಪತಿ ಮನದಲ್ಲಿ ಹೊಸದೊಂದು ತುಡಿತ ಶುರುವಾಗಿತ್ತು. ಐಟಿ ಕ್ಷೇತ್ರದಲ್ಲಿ ಮಾಡಿದ್ದು ಸಾಕು, ಬೇರೆ ಇನ್ನೇನೋ ಮಾಡಬೇಕೆಂದುಕೊಂಡ ಭೂಪತಿ ಕೆಲಸ ಬಿಟ್ಟರು. ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು. ಒಂದು ಅಲ್ಬಂ ಕೂಡ ಹೊರತಂದರು. ಫಿಲ್ಮ್ ನಲ್ಲಿ ಆಗುವ ಕಥೆಯಂತಾಯ್ತು ಭೂಪತಿ ಸ್ಥಿತಿ. ಲಕ್ಷಾಂತರ ಸಂಬಳ ಬರುವ ಕೆಲಸ ಬಿಟ್ಟು ಬೀದಿಗೆ ಬಂದಿದ್ದರು ಇವರು.

ಕೆಲಸ ಬಿಟ್ಟ ಆ ದಿನಗಳ ಬಗ್ಗೆ ಹೀಗೆ ಹೇಳ್ತಾರೆ ರಾಜು ಭೂಪತಿ. 

"15 ವರ್ಷಗಳವರೆಗೆ ನಾನು ಸಾಕಷ್ಟು ಕೆಲಸ ಮಾಡಿದ್ದೆ. ಆದ್ರೆ ನಾನು ಯಾರು ಎಂಬುದು ನನಗೆ ಗೊತ್ತಿರಲಿಲ್ಲ. ಕೆಲಸ ಬಿಡುವುದು ಸಣ್ಣ ವಿಷಯವಾಗಿರಲಿಲ್ಲ. ನನ್ನನ್ನು ತಡೆಯುವವರು ಯಾರೂ ಇರಲಿಲ್ಲ. ಪತ್ನಿ ಪ್ರತಿ ಹೆಜ್ಜೆಯಲ್ಲೂ ಸಹಾಯ ಮಾಡ್ತಿದ್ದಳು. ಕೆಲಸ ಬಿಟ್ಟು ತಂದೆ ಬಗ್ಗೆ ಪುಸ್ತಕ ಬರೆಯಲು ಶುರುಮಾಡಿದೆ. ಎರಡು ತಿಂಗಳಲ್ಲಿ ಮುಗಿಯಿತು. ಲಕ್ಷಾಂತರ ಜನರನ್ನು ಪುಸ್ತಕ ತಲುಪಿತ್ತು. ಬದುಕಿದ್ದಾಗ ತಂದೆ ಬಳಿ ಕಳೆದ ಸಮಯ ಕಡಿಮೆ. ಬದುಕಿದ್ದಾಗ ಅವರನ್ನು ಅರ್ಥ ಮಾಡಿಕೊಂಡಿದ್ದಕ್ಕಿಂತ ಜಾಸ್ತಿ ಸಾವನ್ನಪ್ಪಿದ ನಂತ್ರ ಅರ್ಥ ಮಾಡಿಕೊಂಡಿದ್ದೆ. ಅವರು ಆಧ್ಯಾತ್ಮಿಕ ನಾಯಕರಾಗಿದ್ದರು. ಮಹಾನ್ ವ್ಯಕ್ತಿತ್ವ ಅವರದ್ದು’’.

ಮತ್ತೆ ಕೆಲಸಕ್ಕೆ ಸೇರುವ ಉದ್ದೇಶ ಅವರಿಗಿರಲಿಲ್ಲ. ಆಪ್ತರ ಸಲಹೆ ಮೇರೆಗೆ ಕನ್ಸಲ್ಟೆನ್ಸಿ ಶುರುಮಾಡಿದ್ರು. ನಂತ್ರ ಆಪ್ತ ಮಿತ್ರ ಸಂದೀಪ್ ಜೊತೆ ಸೇರಿ ಆಹಾರೋದ್ಯಮಕ್ಕೆ ಕಾಲಿಟ್ಟರು. ಮೊದಲು ಈ ಉದ್ಯಮ ಆರಾಮವೆನಿಸಿತ್ತು. ಐದು ರೂಪಾಯಿಯಲ್ಲಿ ಆಗ್ತಿದ್ದ ಇಡ್ಲಿಯನ್ನು 50 ರೂಪಾಯಿಗೆ ಮಾರಾಟ ಮಾಡಿದ್ರೆ 45 ರೂಪಾಯಿ ಲಾಭ ಬರುವುದು. ಲಾಭ ಗಳಿಗೆ ಉದ್ದೇಶದಿಂದ ಇವರು ಈ ಉದ್ಯಮ ಶುರುಮಾಡಿದ್ರು. ಇದರಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡ್ರು. ಡಿಲೆವರಿ ಕ್ಷೇತ್ರದಲ್ಲಿ ವ್ಯಾಪಾರ ಶುರುಮಾಡಿದ್ರು. ವಿಶ್ವದಲ್ಲಿ ಮೊದಲ ಭಾರತೀಯ ಫಾಸ್ಟ್ ಫುಡ್ ಹೋಮ್ ಡಿಲೆವರಿ ಪಟ್ಟ Hello Curry ಮುಡಿಗೇರ್ತು. Hello Curry ಆರಂಭದ ಕೆಲವೇ ತಿಂಗಳಿನಲ್ಲಿ ಫಂಡ್ ಬರಲು ಶುರುವಾಯ್ತು,ವ್ಯಾಪಾರ ಯಶಸ್ವಿಯಾಗಿ ಮುಂದುವರೆಯಿತು.

ರಾಜು ಅವರಿಗೆ ಆಮ್ಲೆಟ್ ಕೂಡ ಮಾಡಲು ಬರುತ್ತಿರಲಿಲ್ಲ.ಹೈದ್ರಾಬಾದ್ ನ ಗ್ಯಾರೇಜೊಂದರಲ್ಲಿ ಚಿಕ್ಕದಾಗಿ ಇವರ ಉದ್ಯಮ ಶುರುವಾಯ್ತು. ಮೊದಲು ಹೈದ್ರಾಬಾದ್ ನಂತ್ರ ದಕ್ಷಿಣ ಭಾರತದಲ್ಲಿ ನಂಬರ್ 1 ಆಯ್ತು ಇವರ Hello Curry. ಜಾಗತಿಕ ಮಟ್ಟದಲ್ಲಿ ಉದ್ಯಮ ಬೆಳೆಸುವ ಗುರಿ ಹೊಂದಿರುವ ಭೂಪತಿ,ಇದೊಂದು ದೀರ್ಘ ಪಯಣ ಎನ್ನುತ್ತಾರೆ. ತಕ್ಷಣವಾಗಲು ಇದು ಸಿನಿಮಾವಲ್ಲ. 8-9 ಸಾವಿರ ಸಂಬಳ ಪಡೆಯುವ ಡಿಲೇವರಿ ಹುಡುಗರು ಯಾವಾಗ ಬೇಕಾದ್ರೂ ಕೆಲಸ ಬಿಡಬಹುದು. ಇನ್ನು ಗ್ರಾಹಕರ ವಿಚಾರಕ್ಕೆ ಬಂದಾಗ ಅವರು ಯಾವ ಆಹಾರ ಮೆಚ್ಚಿಕೊಳ್ತಾರೆ,ಯಾವ ಆಹಾರದ ಬಗ್ಗೆ ಕೆಟ್ಟದಾಗಿ ಮಾತನಾಡ್ತಾರೆ ಹೇಳಲು ಸಾಧ್ಯವಿಲ್ಲ. ಯಶಸ್ಸು ಎಲ್ಲ ಸಮಯದಲ್ಲಿಯೂ ಬರುತ್ತದೆ ಎಂಬುದು ಕಷ್ಟ. ಒಮ್ಮೆ ನಾವು ಶೂನ್ಯಕ್ಕಿಳಿದಿದ್ದೆವು. ಬೆಂಗಳೂರಿನಲ್ಲಿ 6 ಔಟ್ ಲೆಟ್ ಶುರುಮಾಡಿದ್ದೆವು. ಅದ್ರಲ್ಲಿ ನಾಲ್ಕು ಯಶಸ್ವಿಯಾಯ್ತು. ಇನ್ನೆರಡನ್ನು ಮುಲಾಜಿಲ್ಲದೆ ಮುಚ್ಚಿದೆವು. ಪ್ರತಿ ಕ್ಷಣದಲ್ಲಿಯೂ ಸವಾಲು, ಹೋರಾಟ ಮಾಮೂಲಿ. ಪ್ರತಿಯೊಂದು ಕೆಲಸಕ್ಕೂ ಮಹತ್ವ ನೀಡಿದಾಗ ಮಾತ್ರ ಯಶಸ್ಸು ಸಾಧ್ಯ. ಸಮಯವನ್ನು ಹಾಳು ಮಾಡಬೇಡಿ ಎಂದು ಯುವಕರಿಗೆ ಭೂಪತಿ ಸಲಹೆ ನೀಡಿದ್ದಾರೆ. 35 ವರ್ಷದೊಳಗೆ ಏನು ಮಾಡಬೇಕೋ ಅದನ್ನು ಮಾಡಿ. ಕೇವಲ ಹಣ ಮಾಡುವ ಉದ್ದೇಶವಿಟ್ಟುಕೊಳ್ಳಬೇಡಿ. ಏನಾದ್ರೂ ಹೊಸದನ್ನು ಮಾಡುವ ಗುರಿ ಇರಲಿ ಎನ್ನುತ್ತಾರೆ ಭೂಪತಿ. 

ಇದನ್ನು ಓದಿ:

1. ಹಿರಿಯ ಐಎಎಸ್​​ ಅಧಿಕಾರಿಯಿಂದ ಜೀವ ಜಲಕ್ಕಾಗಿ ಜಾಗೃತಿ

2. ಆರಂಭವಾಗಿದ್ದು 2 ಲಕ್ಷದಿಂದ.. ಈಗ 2 ಕೋಟಿಯ ವಹಿವಾಟು..!

3. ಶೋಷಿತ ಮಹಿಳೆಯರಿಗೆ ಆಸರೆ ಜೊತೆ ಆತ್ಮವಿಶ್ವಾಸ ತುಂಬುತ್ತಿರುವ ಮಹಿಳೆ ಸುನಿತಾ ಕೃಷ್ಣನ್

Related Stories