ಬೆಳಕು ಹಂಚುತಿರುವ ಮಹಿಳೆ-ನೂರ್ ಜಹಾನ್..!

ವಿಶಾಂತ್​​

0

ಅದು ಉತ್ತರಪ್ರದೇಶದ ಕಾನ್‍ಪುರ ಜಿಲ್ಲೆಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಬೇರಿ ದರಿಯಾವಾನ್ ಗ್ರಾಮ. ಸುಮಾರು 50 ಕುಟುಂಬಗಳು ವಾಸಿಸುತ್ತಿರುವ ಈ ಕುಗ್ರಾಮದಲ್ಲಿ ಇಂದಿಗೂ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ರಸ್ತೆ, ಕುಡಿಯುವ ನೀರು, ಶೌಚಾಲಯವಿರಲಿ ವಿದ್ಯುತ್ ಸಂಪರ್ಕವೂ ಇನ್ನೂ ಈ ಗ್ರಾಮದ ಕಡೆಗೆ ಸುಳಿದಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿತ್ತು. ಅದರಲ್ಲೂ ಹೆಚ್ಚಾಗಿ ಓದುತ್ತಿರುವ ಮಕ್ಕಳು ರಾತ್ರಿಯಾದ್ರೆ ಸಾಕು ಬುಡ್ಡಿ ದೀಪದ ಮೊರೆ ಹೋಗಬೇಕಿತ್ತು. ಸರಿಯಾದ ಬೆಳಕಿಲ್ಲದೇ ಓದಲು ಪರದಾಡಬೇಕಿತ್ತು. ಆದ್ರೆ ಮೂರು ವರ್ಷಗಳಿಂದೀಚೆಗೆ ಈ ಗ್ರಾಮದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಒಬ್ಬ ದಿಟ್ಟ ಮಹಿಳೆ ಗ್ರಾಮದಲ್ಲಿ ಬೆಳಕು ಹರಿಸುವ ಕೆಲಸ ಮಾಡುತ್ತಿದ್ದಾರೆ.

ಇವರು ನೂರ್ ಜಹಾನ್

ನೂರ್ ಜಹಾನ್. ಹುಟ್ಟಿದ್ದು ಬೆಳೆದದ್ದೆಲ್ಲಾ ಬೇರಿ ದರಿಯಾವಾನ್ ಗ್ರಾಮದಲ್ಲೇ. ಪತಿ 20 ವರ್ಷಗಳ ಹಿಂದೆ ಪತಿ ಅಕಾಲಮರಣವನ್ನಪ್ಪಿದ ಬಳಿಕ ನೂರ್ ಜಹಾನ್‍ಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳು, ಕುಟುಂಬದ ಜವಾಬ್ದಾರಿ ಇವರ ಹೆಗಲ ಮೇಲೆ ಬಿತ್ತು. ಶಿಕ್ಷಣ ಪಡೆದಿರಲಿಲ್ಲ. ಬೇರೆ ಕೆಲಸ ಏನು ಗೊತ್ತಿರಲಿಲ್ಲ. ಹೀಗಾಗಿಯೇ ಹೊಲ ಗದ್ದೆಗಳಲ್ಲಿ ಕೂಲಿ ಕೆಲಸ ಮಾಡತೊಡಗಿದ್ರು. ಹೀಗೆ ದಿನಪೂರ್ತಿ ಬೆವರು ಹರಿಸಿ ಬಿಸಿಲು, ಮಳೆಯೆನ್ನದೆ ದುಡಿದ್ರೂ, ಅವರ ಕೈ ಸೇರುತ್ತಿದ್ದುದು ಕೇವಲ 15 ರೂಪಾಯಿಯಷ್ಟೇ. ‘ಹೀಗಾಗಿ ಹೊಟ್ಟೆ ತುಂಬಾ ಊಟ ಮಾಡುವುದೇ ಅಪರೂಪ ಎನ್ನುವಂತಾಗಿತ್ತು’. ಅಂತ ಹಿಂದಿನ ದಿನಗಳನ್ನು ಸ್ಮರಿಸಿಕೊಂಡು ಭಾವುಕರಾಗ್ತಾರೆ 55 ವರ್ಷದ ನೂರ್ ಜಹಾನ್.

ಬದಲಾವಣೆ ಹೇಗಾಯ್ತು?

ಮೂರು ವರ್ಷಗಳ ಹಿಂದೆ ಸ್ವಯಂ ಸೇವಾ ಸಂಸ್ಥೆಯೊಂದು ಬೇರಿ ದರಿಯಾವಾನ್ ಗ್ರಾಮದಲ್ಲಿ ಸಮುದಾಯ ರೇಡಿಯೋ ಸ್ಥಾಪಿಸಿತು. ಅದೇ ಸಂದರ್ಭದಲ್ಲಿ ನೂರ್ ಜಹಾನ್ ಮನೆಗೆ ಸೌರಶಕ್ತಿಚಾಲಿತ ಲಾಟೀನ್‍ಅನ್ನು ನೀಡಿತ್ತು. ದಿನದಲ್ಲಿ ಚಾರ್ಜ್ ಮಾಡಿ, ರಾತ್ರಿ ಸಮಯದಲ್ಲಿ ಸೋಲಾರ್ ಲ್ಯಾಂಪ್‍ಅನ್ನು ಬಳಸುತ್ತಿದ್ದ ನೂರ್ ಜಹಾನ್ ಕ್ರಮೇಣ ಅದನ್ನು ಬಾಡಿಗೆ ರೂಪದಲ್ಲಿ ಬೇರೆಯವರಿಗೂ ನೀಡಲಾರಂಭಿಸಿದ್ರು. ಈ ವಿಷಯ ತಿಳಿದ ಆ ಎನ್‍ಜಿಓ ಮತ್ತೆ ನೂರ್ ಜಹಾನ್ ಸಹಾಯಕ್ಕೆ ಬಂತು. ಸುಮಾರು 50 ಸೋಲಾರ್ ಲ್ಯಾಂಪ್‍ಗಳನ್ನು ನೂರ್ ಜಹಾನ್‍ಗೆ ಕೊಡಿಸುವ ಮೂಲಕ ಅವರ ಜೀವನವನ್ನೇ ಬದಲಿಸಿತು.

ನಂತರ ನೂರ್ ಜಹಾನ್ ಎಂದೂ ಹಿಂದಿರುಗಿ ನೋಡಲಿಲ್ಲ. 50 ಮನೆಗಳಿರುವ ಬೇರಿ ದರಿಯಾವಾನ್ ಗ್ರಾಮದಲ್ಲಿ 50 ಸೋಲಾರ್ ಲ್ಯಾಂಪ್‍ಗಳನ್ನು ಬಾಡಿಗೆ ರೂಪದಲ್ಲಿ ನೀಡಲಾರಂಭಿಸಿದ್ರು. ಪ್ರತಿ ಸೋಲಾರ್ ಲ್ಯಾಂಪ್‍ಗೆ ದಿನದ ಬಾಡಿಗೆ ಕೇವಲ 3.30 ರೂಪಾಯಿ, ಅಥವಾ ಪ್ರತಿ ತಿಂಗಳಿಗೆ 100 ರೂಪಾಯಿ. ಕಡಿಮೆ ದರದಲ್ಲಿ ಬಾಡಿಗೆ ರೂಪದಲ್ಲಿ ಸಿಗುವ ಲ್ಯಾಂಪ್‍ನಿಂದ ಗ್ರಾಮಸ್ಥರೂ ಖುಷಿಯಾದ್ರು. ರಾತ್ರಿ ಸಮಯದಲ್ಲಿ ಪೂರ್ತಿ ಚಾರ್ಜ್ ಆದ ಸೋಲಾರ್ ಲ್ಯಾಂಪ್ ತೆಗೆದುಕೊಂಡು ಹೋಗುವ ಜನ ಮತ್ತೆ ಅದನ್ನು ಚಾರ್ಜ್ ಮಾಡಲು ಬೆಳಗ್ಗೆ ವಾಪಸ್ ತಂದುಕೊಡ್ತಾರೆ. ಈ ಸೌರಶಕ್ತಿ ಚಾಲಿತ ಲ್ಯಾಟೀನ್‍ಗಳನ್ನು ಚಾರ್ಜ್ ಮಾಡಲೆಂದೇ ನಾಲ್ಕು ಸೋಲಾರ್ ಪ್ಯಾನಲ್‍ಗಳನ್ನೂ ನೂರ್ ಜಹಾನ್ ಮನೆ ಮೇಲೆ ಅಳವಡಿಸಲಾಗಿದೆ.

ಈ ಮೂಲಕ ಕಳೆದ ಮೂರು ವರ್ಷಗಳಿಂದ ನೂರ್ ಜಹಾನ್ ಬದುಕೂ ಹಸನಾಗಿದೆ. ಜೊತೆಗೆ ಕತ್ತಲಲ್ಲಿ ಪರಿತಪಿಸುತ್ತಿದ್ದ ಬೇರಿ ದರಿಯಾವಾನ್ ಗ್ರಾಮದ ಜನರ ಜೀವನದಲ್ಲೂ ಕೊಂಚ ಮಟ್ಟಿಗಾದ್ರೂ ಬೆಳಕು ಹರಿಸಿದೆ. ಅಲ್ಲದೇ ಪರೀಕ್ಷಾ ಸಮಯದಲ್ಲಿ ಪರದಾಡುತ್ತಿದ್ದ ವಿದ್ಯಾರ್ಥಿಗಳ ಜೀವನದಲ್ಲೂ ಬೆಳಕು ಹರಿಸಿದೆ.

ಮೋದಿ ಮನ್ ಕಿ ಬಾತ್‍ನಲ್ಲಿ ನೂರ್!!!

ಇನ್ನು ಇದೇ ನವೆಂಬರ್ 29ರಂದು ಪ್ರಧಾನಿ ನರೇಂದ್ರ ಮೋದಿಯವರು ರೇಡಿಯೋದಲ್ಲಿ ನಡೆಸಿಕೊಟ್ಟ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ನೂರ್ ಜಹಾನ್ ಕುರಿತು ಮಾತನಾಡಿದ್ದಾರೆ. ‘ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡುವವರಿಗೆ ನೂರ್ ಜಹಾನ್‍ರ ಕೆಲಸ ಸ್ಫೂರ್ತಿ ತುಂಬಲಿದೆ’ ಎಂದು ನೂರ್ ಜಹಾನ್ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರಧಾನಿಯೇ ತನ್ನ ಹೆಸರು ಹೇಳಿ, ತನ್ನ ಕೆಲಸವನ್ನು ಹೊಗಳಿರುವುದು ನೂರ್ ಜಹಾನ್‍ರಲ್ಲೂ ಸಾಕಷ್ಟು ಸಂತಸ ಮೂಡಿಸಿದೆ. ಜೊತೆಗೆ ಸರ್ಕಾರದ ಸಹಾಯದ ನಿರೀಕ್ಷೆಯನ್ನೂ ಮೂಡಿಸಿದೆ. ಈಗಿರುವ 50 ಸೋಲಾರ್ ಲ್ಯಾಂಪ್‍ಗಳ ಜೊತೆಗೆ ಇನ್ನೂ 50 ಲ್ಯಾಂಪ್‍ಗಳನ್ನು ಖರೀದಿಸಿ ಬೇರಿ ದರಿಯಾವಾನ್ ಗ್ರಾಮ ಮಾತ್ರವಲ್ಲ ಸುತ್ತಮುತ್ತಲಿನ ಗ್ರಾಮಸ್ಥರಿಗೂ ನೆರವಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ ನೂರ್ ಜಹಾನ್.

ಹೀಗೆ ತನ್ನ ಜೀವನ ಕಟ್ಟಿಕೊಳ್ಳಲು ಸೋಲಾರ್ ಲ್ಯಾಂಪ್ ಮೊರೆ ಹೋದ ನೂರ್ ಜಹಾನ್ ತನಗೆ ಅರಿವಿಲ್ಲದೆಯೇ ತನ್ನದೇ ರೀತಿಯಲ್ಲಿ ಪ್ರಕೃತಿ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ. ಅವರಿಗೆ ಶುಭವಾಗಲಿ... ಜೊತೆಗೆ ಇನ್ನಾದ್ರೂ ಮಾಲಿನ್ಯ ರಹಿತ ನಿಸರ್ಗ ಸ್ನೇಹೀ ಜೀವನದ ಕುರಿತು ಜನರಲ್ಲೂ ಅರಿವು ಮೂಡಲಿ...