60ರಲ್ಲೂ ಬೆಳಗಿದ `ಆರತಿ'

ಟೀಮ್​ ವೈ.ಎಸ್​​.

0

ಮೇಕ್ ಇನ್ ಇಂಡಿಯಾ ಕನಸನ್ನು ಮೊದಲು ಬಿತ್ತಿದವರು ಪ್ರಧಾನಿ ನರೇಂದ್ರ ಮೋದಿ. ನಮೋ ಕನಸನ್ನ ಸಾಕಾರಗೊಳಿಸಲು ಭಾರತೀಯರೆಲ್ಲ ಟೊಂಕಕಟ್ಟಿ ನಿಂತಿದ್ದಾರೆ. ಅದ್ರಲ್ಲೂ 60ರ ಹರೆಯದ ಮಹಿಳೆಯೊಬ್ರು ಸ್ವಂತ ಉದ್ಯಮ ಆರಂಭಿಸಿ ಯಶಸ್ಸನ್ನೂ ಗಳಿಸಿದ್ದಾರೆ. ನಾವ್ ಹೇಳ್ತಾ ಇರೋದು ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಅವರ ತವರು ರಾಂಚಿಯ ದಿಟ್ಟ ಮಹಿಳೆ ಆರತಿ ಪೊದ್ದರ್ ಅವರ ಬಗ್ಗೆ. ಆರತಿ ಅವರೇ ತಯಾರಿಸ್ತಾ ಇರೋ ನೆಹರು ಜಾಕೆಟ್ ಈಗ ದೇಶದ ಉದ್ದಗಲಕ್ಕೂ ಪ್ರಸಿದ್ಧಿ ಪಡೆದಿದೆ. ಕಳೆದ ವರ್ಷವಷ್ಟೇ ವಸ್ತ್ರೋದ್ಯಮಕ್ಕೆ ಕಾಲಿಟ್ಟಿರುವ ಆರತಿ ಪೊದ್ದರ್ ಅವರಿಗೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಸಾಧನೆಗೆ ಎಂದೂ ವಯಸ್ಸು ಅಡ್ಡಿಯಾಗುವುದಿಲ್ಲ. ಆರತಿ ಅವರದ್ದು ಕೂಡ ಇದೇ ಅಭಿಮತ. ಅಷ್ಟಕ್ಕೂ 60ನೇ ವಯಸ್ಸಿನಲ್ಲೂ ಸ್ವಂತ ಬ್ಯುಸಿನೆಸ್ ಆರಂಭಿಸಲು ಆರತಿ ಪೊದ್ದರ್ ಅವರಿಗೆ ಸ್ಪೂರ್ತಿಯಾದವರು ಅವರ ತಂದೆ. ಆರಂಭಕ್ಕೆ ತಡವಾಯ್ತು ಎಂಬ ಮಾತೇ ಇಲ್ಲ ಎನ್ನುತ್ತಿದ್ದ ಆರತಿ ಪೊದ್ದರ್ ಅವರ ತಂದೆ 72ರ ಇಳಿವಯಸ್ಸಿನಲ್ಲಿ ಹೊಸ ಉದ್ಯಮವನ್ನು ಶುರು ಮಾಡಿದ್ದರು.

60 ವರ್ಷದ ಆರತಿ ಪೊದ್ದರ್ ಈಗ ಮಲ್ಬೆರಿ ಲೈಫ್ ಸ್ಟೈಲ್ ಕಂಪನಿಯ ಮಾಲಕಿ. ರಾಂಚಿ ಮೂಲದ ಈ ಕಂಪನಿ ನೆಹರೂ ಜಾಕೆಟ್ ಉತ್ಪಾದನೆ ಹಾಗೂ ಮಾರಾಟದಲ್ಲಿ ಸೈ ಎನಿಸಿಕೊಂಡಿದೆ. ನೆಹರೂ ಜಾಕೆಟ್ಟನ್ನೇ ಆರತಿ ಯಾಕೆ ಆಯ್ಕೆ ಮಾಡಿಕೊಂಡ್ರು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡೋದು ಸಹಜ. ಈ ಕಂಪನಿಯ ಕಲ್ಪನೆ ಅವರ ಮನಸ್ಸಿನಲ್ಲಿ ಮೂಡಿದ್ದೇ ವಿಶೇಷ. ಟಿವಿ ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ನೆಹರೂ ಜಾಕೆಟ್ ಹಾಕಿಕೊಂಡು ಮಿಂಚುವುದನ್ನ ನೋಡಿದಾಗಲೇ ಆರತಿ ಅವರಿಗೆ ಇಂಥದ್ದೊಂದು ಯೋಚನೆ ಹೊಳೆದಿತ್ತು. ಜೊತೆಗೆ ನೆಹರೂ ಜಾಕೆಟ್ ಆಕರ್ಷಕ ದೇಸಿ ಉತ್ಪನ್ನವಾಗಿರೋದ್ರಿಂದ ಇದೇ ಉದ್ಯಮಕ್ಕೆ ಕೈಹಾಕಬೇಕು ಎಂದು ಆರತಿ ನಿರ್ಧರಿಸಿಬಿಟ್ಟಿದ್ರು. ಅವರ ಆಲೋಚನೆ ನಿಜಕ್ಕೂ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ. ಯಾಕಂದ್ರೆ ದೇಶದ ಮೂಲೆ ಮೂಲೆಯಲ್ಲೂ ಆರತಿ ಪೊದ್ದರ್ ಅವರ ಕಂಪನಿಯ ನೆಹರೂ ಜಾಕೆಟ್ ಜನಪ್ರಿಯವಾಗಿದೆ.

ಆರತಿ ಪೊದ್ದರ್ ಅವರ ಈ ಯಶಸ್ವಿ ಪಯಣ ನಿಜಕ್ಕೂ ಅದ್ಭುತ. ಬಿಹಾರದ ಪಾಟ್ನಾ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದಿದ್ದ ಆರತಿ, ತುಂಬು ಕುಟುಂಬದ ಸೊಸೆಯಾದರು. ಅವರ ಸಂಗಾತಿ ಕೂಡ ಉದ್ಯಮಿಯೇ. ಸ್ಟೀಲ್ ಪೀಠೋಪಕರಣಗಳ ತಯಾರಿಕಾ ಕಾರ್ಖಾನೆಯ ಒಡೆಯ. ಆರತಿ ಈ ವ್ಯವಹಾರದಲ್ಲಿ ಪತಿಗೆ ಹೆಗಲಾಗಿದ್ದರು. ಆರತಿ ಅವರ ಕಿರಿಯ ಪುತ್ರ ಕೂಡ ಸ್ವಂತ ಉದ್ದಿಮೆಯನ್ನ ಆರಂಭಿಸ್ತಾರೆ. ಆಗಲೇ ಆರತಿ ಅವರಿಗೂ ಕೂಡ ಹೊಸದೊಂದು ಯೋಚನೆ ಮೊಳಕೆಯೊಡೆದಿತ್ತು. ಮಗನಿಂದ ಪ್ರೇರಣೆ ಪಡೆದ ಆರತಿ ತಾವೇ ಸ್ವಂತವಾಗಿ ಕಂಪನಿ ಆರಂಭಿಸೋ ಮನದಾಸೆಯನ್ನು ಮನೆಯವರ ಮುಂದಿಟ್ಟರು. ಅವರ ಆಸೆಗೆ ನೀರೆರೆದ ಕುಟುಂಬದವರು ಹೊಸ ಸಂಸ್ಥೆ ಶುರು ಮಾಡಲು ಗ್ರೀನ್ ಸಿಗ್ನಲ್ ಕೊಡ್ತಾರೆ. ರಾಂಚಿಯಲ್ಲಿ ಬ್ಯುಸಿನೆಸ್ ಮಾಡೋದು ಆರತಿಗೆ ಕಷ್ಟವೇನೂ ಆಗಲಿಲ್ಲ. ಯಾಕಂದ್ರೆ ಅಲ್ಲಿ ಅವರಿಗೆ ಯಾರೂ ಪ್ರತಿಸ್ಪರ್ಧಿಗಳಿರಲಿಲ್ಲ. ಕಳೆದ ವರ್ಷ ಡಿಸೆಂಬರ್‍ನಿಂದಲೇ ಆನ್‍ಲೈನ್‍ನಲ್ಲಿ ಇವರು ನೆಹರೂ ಜಾಕೆಟ್‍ಗಳ ಮಾರಾಟ ಆರಂಭಿಸಿದ್ದಾರೆ. ಹೀಗೆ ಬಾಯಿಂದ ಬಾಯಿಗೆ ಹರಡಿ ಆರತಿ ಅವರ ಕಂಪನಿ ತಯಾರಿಸುತ್ತಿರೋ ನೆಹರೂ ಜಾಕೆಟ್ ಬಹು ಜನಪ್ರಿಯವಾಗಿದೆ.

ಮಲ್ಬೆರಿ ಲೈಫ್‍ಸ್ಟೈಲ್ ಕಂಪನಿಯ ನೆಹರೂ ಜಾಕೆಟ್‍ಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ದೆಹಲಿಯಿಂದ ಆರತಿ ಕಚ್ಚಾ ವಸ್ತುಗಳನ್ನ ತರಿಸ್ತಾರೆ. ರೇಷ್ಮೆ ಉಡುಪುಗಳಿಗೆ ಫೇಮಸ್ ಆಗಿರೋ ಭಾಗಲ್​​​ಪುರ್​​​​ನಿಂದಲೇ ಸಿಲ್ಕ್ ಕೊಂಡುಕೊಳ್ತಾರೆ. ಬರೀ ಆನ್‍ಲೈನ್‍ನಲ್ಲಿ ಮಾತ್ರವಲ್ಲ ವಿವಿಧೆಡೆ ಅಂಗಡಿಗಳನ್ನೂ ತೆರೆಯುವ ಯೋಜನೆ ಆರತಿ ಪೊದ್ದರ್ ಅವರದ್ದು. ಸಧ್ಯ ಪುರುಷರಿಗಾಗಿ ಮಾತ್ರ ನೆಹರೂ ಜಾಕೆಟ್ ತಯಾರಿಸಲಾಗ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಜಾಕೆಟ್‍ಗಳನ್ನೂ ತಯಾರಿಸಲು ಆರತಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ವಿಶೇಷ ಅಂದ್ರೆ ಜಾರ್ಖಂಡ್‍ನ ನೂತನ ಮುಖ್ಯಮಂತ್ರಿಗಳು ಪದಗ್ರಹಣ ಸಮಾರಂಭದಲ್ಲಿ ಧರಿಸಿದ್ದು ಆರತಿ ಪೊದ್ದರ್ ಅವರ ಕಂಪನಿಯೇ ತಯಾರಿಸಿದ ಜಾಕೆಟ್ಟನ್ನ. ಸಿಎಂ ಕಚೇರಿಯಿಂದ ಕರೆಮಾಡಿದ್ದ ಸಿಬ್ಬಂದಿ ವಿಶಿಷ್ಟ ಜಾಕೆಟ್ ಸಿದ್ಧಮಾಡುವಂತೆ ಕೇಳಿದ್ದರು. ಅದೊಂದು ಹೆಮ್ಮೆಯ ಕ್ಷಣ ಎಂದು ಆರತಿ ನೆನಪಿಸಿಕೊಳ್ಳುತ್ತಾರೆ.

ಆಗಾಗ ನಗರ ಸಂಚಾರ ಮಾಡುವ ಅವರು ಹೊಸ ಬಗೆಯ ವಿನ್ಯಾಸ ಹಾಗೂ ಜನರ ಇಷ್ಟ ಕಷ್ಟಗಳನ್ನ ತಿಳಿದುಕೊಳ್ತಾರೆ. ಅದಕ್ಕೆ ತಕ್ಕಂತೆ ಜಾಕೆಟ್‍ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಾರೆ. ಪತಿ ಹಾಗೂ ಇಬ್ಬರು ಮಕ್ಕಳ ಬೆಂಬಲ ಹಾಗೂ ಪ್ರೋತ್ಸಾಹ ಆರತಿ ಅವರನ್ನ ಯಶಸ್ವಿ ಉದ್ಯಮಿಯನ್ನಾಗಿ ಮಾಡಿದೆ. 60ರ ಹರೆಯದಲ್ಲೂ ಏಕಾಂಗಿಯಾಗಿ ವಿನೂತನ ಉದ್ದಿಮೆ ಆರಂಭಿಸಿ ಯಶ ಕಂಡ ಆರತಿ ಪೊದ್ದರ್ ಅವರ ಹಾದಿಯಲ್ಲೇ ಸಾಗಿದರೆ ಯಶಸ್ಸು ಕಷ್ಟವೇನಲ್ಲ.

Related Stories