ಸೆಕೆಂಡ್​​ಹ್ಯಾಂಡ್​​ ಐಟಮ್​​ಗಳಿಗೂ ಇಲ್ಲಿದೆ ಗ್ಯಾರೆಂಟಿ..!

ಆರ್​​.ಪಿ.

ಸೆಕೆಂಡ್​​ಹ್ಯಾಂಡ್​​ ಐಟಮ್​​ಗಳಿಗೂ ಇಲ್ಲಿದೆ ಗ್ಯಾರೆಂಟಿ..!

Tuesday October 27, 2015,

3 min Read

ಜನರು ಕಡಿಮೆ ಬೆಲೆಯ ತಂತ್ರಜ್ಞಾನ ವಸ್ತುಗಳ ಬಗ್ಗೆ ಮಾತನಾಡಿದಾಗ ಅವರ ತಲೆಗೆ ಮೊದಲು ಹೊಳೆಯೋದು ಜನಜಂಗುಳಿ ಇರೋ ನವದೆಹಲಿಯ ನೆಹರೂ ಮಾರ್ಕೆಟ್ ಅಂಗಡಿಗಳು. ಆದ್ರೆ ಅದಕ್ಕಿಂತ ಉತ್ತಮವಾದ ಆಯ್ಕೆ ಇದ್ದರೆ ಹೇಗೆ?

2012ರಲ್ಲಿ ರಾಹುಲ್ ಚೌಧರಿ ಮತ್ತು ಆನಂದ್ ತಾತೇರ್ ಗುರಗಾವ್‍ನಲ್ಲಿ ರಿಬೂಟ್ ಅನ್ನೋ ಸ್ಟಾರ್ಟ್‍ಅಪ್ ಸಂಸ್ಥೆಯನ್ನು ಶುರುಮಾಡಿದರು. ಕಡಿಮೆ ಬೆಲೆಯ ಪರಿಸರ ಸ್ನೇಹಿ ನವೀಕರಿಸಿದ ವಸ್ತುಗಳ ಆಯ್ಕೆಗಳಾದ ತಿರಸ್ಕರಿಸಲಾದ ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್ಲೆಟ್ಸ್, ಮೊಬೈಲ್ ಫೋನ್ಸ್ ಮತ್ತು ಇತರೆ ವಸ್ತುಗಳನ್ನು ಹೊಸ ಜೀವದೊಂದಿಗೆ ಇವರು ಭಾರತಕ್ಕೆ ಪರಿಚಯಿಸಿದರು.

image


“2011 ರಲ್ಲಿ ಭಾರತಕ್ಕೆ ಮರಳಿ ಬಂದಾಗ ನವೀಕರಿಸಿದ ವಸ್ತುಗಳಿಗೆ ಇಲ್ಲಿ ಮಾರುಕಟ್ಟೆ ಇಲ್ಲವೆಂದು ತಿಳಿಯಿತು. ಆದ್ರೆ ಅಮೆರಿಕದ ಪರಿಸ್ಥಿತಿಯೇ ಬೇರೆ. 27 ರಾಜ್ಯಗಳ 50 ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ನವೀಕರಿಸಿದ ಪಿಸಿಗಳನ್ನು ಮಾತ್ರ ಖರೀದಿಸುತ್ತಾರೆ” ಎನ್ನುತ್ತಾರೆ ರಾಹುಲ್.

ನವೀಕರಣಕ್ಕೆ ಒಳಗಾದ ವಸ್ತುಗಳು ಕಾರಣಾಂತರಗಳಿಂದ ತಯಾರಕರಿಗೆ ಅಥವಾ ಮಾರಾಟಗಾರರಿಗೆ ಹಿಂತಿರುಗಿಸಿದ ವಸ್ತುಗಳಾಗಿವೆ. ನವೀಕರಿಸಿದ ವಸ್ತುಗಳನ್ನು ಮರು ಮಾರಾಟ ಮಾಡುವ ಮುನ್ನ ಅದರ ಕಾರ್ಯ ಕ್ಷಮತೆ ಪರೀಕ್ಷಿಸಿ ದೋಷಗಳನ್ನು ಪರಿಹರಿಲಾಗುತ್ತದೆ. ಇದು ಪೂರ್ವ ಮಾಲೀಕತ್ವ ಹೊಂದಿದ್ದ ಕಾರುಗಳಿಗೆ ಸಮ. ಬೆಲೆಗೆ ಮಹತ್ವ ಕೊಡೋ ಭಾರತದಲ್ಲಿ, 1000 ಜನರಲ್ಲಿ 16 ಜನ ಮಾತ್ರ ಕಂಪ್ಯೂಟರ್ ಹೊಂದಿರಲು ಅದೇ ಬೆಲೆ ಕಾರಣವಾಗಿದೆ. ಕಡಿಮೆ ಬೆಲೆಯ ನವೀಕರಿಸಿದ ವಸ್ತುಗಳು ಈ ಅಂತರವನ್ನು ಕಡಿಮೆ ಮಾಡಬಲ್ಲದು. ರಿಬೂಟ್ ಶುರುಮಾಡಿದ ರಾಹುಲ್ ಮತ್ತು ಆನಂದ್ ಮನದಲ್ಲೂ ಇದೇ ಯೋಚನೆ ಇತ್ತು.

“ಪಿಸಿಯನ್ನು ಕೇವಲ 5 ಸಾವಿರಕ್ಕೆ ಮಾರಾಟ ಮಾಡಿದರೆ ಅದನ್ನು ಕೊಳ್ಳುವವರು ಹೆಚ್ಚಾಗುತ್ತಾರೆ. ನಮ್ಮ ದೇಶದಲ್ಲಿ ಬೆಲೆಗೆ ಅತಿಯಾದ ಮಹತ್ವ ಕೊಡುತ್ತಾರೆ” ಎನ್ನುತ್ತಾರೆ ರಾಹುಲ್.

ರಿಬೂಟ್ ಏನು ಮಾಡುತ್ತದೆ?

ತಿರಸ್ಕರಿಸಲಾದ ವಸ್ತುಗಳನ್ನು ಸಮಂಜಸವಾದ ಬೆಲೆಗೆ ರಿಬೂಟ್ ಕೊಳ್ಳುತ್ತದೆ ಮತ್ತು ನಮ್ಮದೇ ಫ್ಯಾಕ್ಟರಿಯಲ್ಲಿ ಅದನ್ನು ನವೀಕರಿಸಲಾಗುತ್ತದೆ. ಅದನ್ನು ಪ್ಯಾಕ್ ಮಾಡಿ ಮರು ಮಾರಾಟ ಮಾಡುವ ಮುನ್ನ ಗುಣಮಟ್ಟ ಖಾತ್ರಿಗಾಗಿ 16 ಅಂಶಗಳ ಪರೀಕ್ಷೆ ಮಾಡಲಾಗುತ್ತದೆ. “ಹಳೇ ಕಂಪ್ಯೂಟರ್‍ಗಳ ಬಾಹ್ಯ ಸೌಂದರ್ಯವನ್ನು ಹೊಸದರಂತೆ ಮಾಡಲು ನಾವು ಹಲವು ವರ್ಷಗಳನ್ನು ತೆಗೆದುಕೊಂಡಿದ್ದೀವಿ. ಅಲ್ಲದೇ ಹಿಂದಿನ ಮಾಲೀಕರ ಬಗ್ಗೆ ಕಂಪ್ಯೂಟರ್‍ನಲ್ಲಿರೋ ಎಲ್ಲ ಮಾಹಿತಿಯನ್ನು ನಾವು ಅಳಿಸಿ ಹಾಕುತ್ತೇವೆ. ಇದೊಂದು ರೀತಿ ಮಾಸ್ಟರ್ ಹೆಲ್ತ್ ಚೆಕ್‍ಅಪ್ ಇದ್ದ ಹಾಗೆ” ಎನ್ನುತ್ತಾರೆ ರಾಹುಲ್.

ನವೀಕರಿಸಿದ ವಸ್ತುಗಳಿಗೆ ಒಂದು ವರ್ಷ ಬದಲಾವಣೆ ಖಾತರಿ ಕೊಡೋ ವಿಶ್ವದ ಏಕೈಕ ಕಂಪನಿ ರಿಬೂಟ್. ಇದು ಮೈಕ್ರೋಸಾಫ್ಟ್​​ನಲ್ಲಿ ನೊಂದಾಯಿತ ನವೀಕರಣ ಕಂಪನಿ ಮತ್ತು ಪಿಸಿ-ಲ್ಯಾಪ್‍ಟಾಪ್‍ಗಳಿಗೆ ಮೂಲ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅನ್ನು 600 ರೂಗಳಿಗೆ ಹಾಕಲಾಗುತ್ತದೆ. 4999 ರಿಂದ ಶುರುವಾಗೋ ಪಿಸಿ ಬೆಲೆ ಅದರ ವಿವರದ ಆಧಾರದಲ್ಲಿ ಹೆಚ್ಚಳವಾಗುತ್ತದೆ ಮತ್ತು ನವೀಕರಿಸಲಾದ ಸ್ಮಾರ್ಟ್ ಫೋನ್ಸ್​​​ 999 ರಿಂದ ದೊರಕುತ್ತದೆ.

ವಲಯವಾರು ಪಾಲುದಾರರ ಮೂಲಕ ರಿಬೂಟ್ 11 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಪ್ರತಿ ರಾಜ್ಯದ ವಲಯವಾರು ಪಾಲುದಾರ 7 ಚಿಲ್ಲರೆ ಮಾರಾಟ ಕೇಂದ್ರಗಳನ್ನು ಶುರುಮಾಡೋ ಜವಾಬ್ದಾರಿ ಹೊಂದಿದ್ದಾರೆ. ಮಾರಾಟ ಕೇಂದ್ರದಲ್ಲಿ ಪಿಸಿ, ಲ್ಯಾಪ್‍ಟಾಪ್, ಮೊಬೈಲ್, ಟ್ಯಾಬ್ಲೆಟ್ ಮತ್ತು ಬಿಡಿಭಾಗಗಳು ಸಿಗುವಂತೆ ರೂಪಿಸಲಾಗಿದೆ. ಈಗಾಗಲೇ ದೇಶದಲ್ಲಿ ಈ ರೀತಿಯ 19 ಕೇಂದ್ರಗಳಿವೆ.

ನವೀಕರಿಸಿದ ವಸ್ತುಗಳನ್ನು ಭಾರತದಲ್ಲಿ ಕೊಳ್ಳುವವರು ಯಾರು?

ಶಿಕ್ಷಣ ಸಂಸ್ಥೆಗಳು: ಶಾಲೆ, ಕಾಲೇಜು, ಪಾಲಿಟೆಕ್ನಿಕ್ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸಂಸ್ಥೆಯ ಮುಖ್ಯ ಗ್ರಾಹಕರು. ವ್ಯಾಪಾರದ ಶೇ40 ಪಾಲು ಇವರದ್ದಾಗಿದೆ.

ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮದಾರರು: ಶೇ20 ರಷ್ಟು ವ್ಯಾಪಾರ ಇವರಿಂದಾಗುತ್ತದೆ.

ಚಿಲ್ಲರೆ ಗ್ರಾಹಕರು: ವಲಯ ಪಾಲುದಾರರ ಮೂಲಕ ಶೇ20 ರಷ್ಟು ವ್ಯಾಪಾರ ಚಿಲ್ಲರೆ ಗ್ರಾಹಕರಿಂದ ಆಗುತ್ತದೆ.

ಸರ್ಕಾರಿ, ಸರ್ಕಾರೇತರ, ಎನ್‍ಜಿಒ: ಈ ಸಂಸ್ಥೆಗಳಿಂದ ಇನ್ನುಳಿದ ಶೇ 20 ರಷ್ಟು ವ್ಯಾಪಾರವಾಗುತ್ತದೆ.

ನವೀಕರಿಣ ಒಂದು ಸೇವೆಯಾಗಿ...

ರಾಸ್ (ರಿಫರ್ಬಿಷ್ಮೆಂಟ್ ಆಸ್ ಎ ಸರ್ವಿಸ್) ಯೋಜನೆಯಡಿ ಕಾರ್ಪೊರೇಟ್ ವಲಯಕ್ಕೆ ರಿಬೂಟ್ ಸೇವೆ ಒದಗಿಸುತ್ತದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ಸಂಸ್ಥೆಯು ನವೀಕರಿಸಿದ ಐಟಿ ಉತ್ಪನ್ನಗಳನ್ನು ದಾನವಾಗಿ ಕೊಡುತ್ತದೆ. “ನಾವು ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ನವೀಕರಿಸಿ ಕೂಡಲೇ ದಾನವಾಗಿ ಕೊಡುತ್ತೇವೆ. ಈ ವಸ್ತುಗಳು ಹೊಸದರಂತೆಯೇ ಇರುತ್ತವೆ ಮತ್ತು ಖಾತರಿಯೂ ಸಿಗುತ್ತದೆ” ಎಂದು ಹೇಳ್ತಾರೆ ರಾಹುಲ್. ಇ-ಕಸವನ್ನು ನಿರ್ವಹಿಸಲು ದೊಡ್ಡ ಕಂಪನಿಗಳೊಂದಿಗೆ ಮರುಖರೀದಿ ಯೋಜನೆ ಮತ್ತು ಗ್ರಾಹಕ ವಸ್ತುಗಳಿಗೆ ಸಂರಕ್ಷಣಾ ಯೋಜನೆ ರಿಬೂಟ್‍ನಲ್ಲಿದೆ.

ಅವಕಾಶ

ವಿವಿಧ ಹಾರ್ಡ್‍ವೇರ್ ಮಾರುಕಟ್ಟೆಯ ಅಧ್ಯಯನದ ಅನುಸಾರ ಸುಪ್ತ ಮಾರುಕಟ್ಟೆಯಲ್ಲಿ ಕಂಪ್ಯೂಟರ್ ಬೇಡಿಕೆ 50 ದಶಲಕ್ಷ ಯೂನಿಟ್ ಗಿಂತಲೂ ಹೆಚ್ಚು. ಈಗಿರೋ ಮಾರುಕಟ್ಟೆಯ ಜತೆಯಲ್ಲಿ 50 ಸಾವಿರದಿಂದ 60 ಸಾವಿರ ಕೋಟಿವರೆಗೂ ಮಾರುಕಟ್ಟೆಯಿದೆ. ಮತ್ತೊಂದು ಅಧ್ಯಯನದ ಪ್ರಕಾರ ನವೀಕರಿಸಿದ ವಸ್ತುಗಳಿಗೆ ಒಂದು ಲಕ್ಷ ಕೋಟಿ ಮೌಲ್ಯದ ಮಾರುಕಟ್ಟೆ ಇದೆ.

ಈ ವಲಯದಲ್ಲಿರೋ ಸವಾಲುಗಳು

“ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಮತ್ತು ಅಸಂಘಟಿತ ಐಟಿ ವಸ್ತುಗಳ ವಲಯದೊಂದಿದೆ ಗ್ರಾಹಕರು ನಮ್ಮನ್ನು ಹೋಲಿಸುವುದನ್ನು ತಡೆಯುವುದು ನಮ್ಮ ಪ್ರಮುಖ ಸವಾಲು. ನವೀಕರಿಸಿದ ವಸ್ತುಗಳ ಬಗ್ಗೆ ತಿಳುವಳಿಕೆ, ಪ್ರಕ್ರಿಯೆ, ಗುಣಮಟ್ಟದ ಬಗ್ಗೆ ತಿಳಿಸಲು ದಿನವೂ ಪ್ರಯತ್ನಪಡುತ್ತಿದ್ದೇವೆ” ಅಂತಾರೆ ರಾಹುಲ್. ತಿರಸ್ಕರಿಸಲಾದ ವಸ್ತುಗಳನ್ನು ನವೀಕರಣಕ್ಕೆ ಪಡೆಯುವುದು ಮತ್ತೊಂದು ದೊಡ್ಡ ಸವಾಲು.

ಇಂದು ಮತ್ತು ಮುಂದೆ

ಸಧ್ಯಕ್ಕೆ ಸುಮಾರು 20ಸಾವಿರ ನವೀಕರಿಸಿದ ಪಿಸಿಗಳನ್ನು ಕಂಪನಿ ದೇಶಾದ್ಯಂತ ಮಾರಾಟ ಮಾಡಿದೆ. ಅಲ್ಲದೇ therebootstore.com ಹೆಸರಿನ ಇ-ಕಾಮರ್ಸ್ ಮಳಿಗೆಯನ್ನೂ ಹೊಂದಿದೆ. ಮುಂದೆ 250ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆ ಮೂಲಕ ಎಲ್ಲ ರಾಜ್ಯದಲ್ಲೂ ಅಸ್ತಿತ್ವ ಸ್ಥಾಪಿಸೋ ಯೋಜನೆ ಇದೆ.

ನೆಹರು ಮಾರ್ಕೆಟ್ ರೀತಿಯ ಸ್ಥಳಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತದಾ? ಅನ್ನೋದು ಈಗಿರೋ ಪ್ರಶ್ನೆ

“ಹಾಗಾಗಲ್ಲ. ಯಾಕಂದ್ರೆ ಈಗಿರೋ ಅಸಂಘಟಿತ ವಲಯಗಳನ್ನು ಧೂಳೀಪಟ ಮಾಡುವ ಉದ್ದೇಶ ನಮ್ಮಲ್ಲಿಲ್ಲ. ಸೆಕೆಂಡ್ ಹ್ಯಾಂಡ್ ಅಥವಾ ಬಳಸಿದ ವಸ್ತುಗಳಿಗಿಂತ ನವೀಕರಣ ವಸ್ತುಗಳು ಹೇಗೆ ಭಿನ್ನ ಎಂಬುದರ ಬಗ್ಗೆ ಪರಿಣಾಮ ಬೀರಿ, ತಿಳುವಳಿಕೆ ಮೂಡಿಸುವುದಷ್ಟೇ ನಮ್ಮ ಉದ್ದೇಶ” ಅಂತಾರೆ ರಾಹುಲ್.