'ಸಾವಯವ ರಾಜ್ಯ ಸಿಕ್ಕಿಂ'ನಿಂದ ನಾವು ಕಲಿಯಬೇಕಾದ ಪಾಠ..

ಟೀಮ್ ವೈ.ಎಸ್.ಕನ್ನಡ 

0

ಹಸಿರು ಕ್ರಾಂತಿಗೆ ಗುಡ್ ಬೈ, ಸಾವಯವ ಕೃಷಿಗೆ ಹಾಯ್ ಹಾಯ್...ಸಿಕ್ಕಿಂ ರಾಜ್ಯ ಈಗ ಸಂಪೂರ್ಣ ಸಾವಯವಮಯವಾಗಿದೆ. ಹಾಲಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ ಪ್ರಯತ್ನದ ಫಲವಾಗಿ ರೈತರು ಪ್ರಾಯೋಗಿಕವಾಗಿ ಸಾವಯವ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. 2003ರಲ್ಲೇ ಸಿಕ್ಕಿಂ ಅನ್ನು ಸಂಪೂರ್ಣ ಸಾವಯವ ರಾಜ್ಯವನ್ನಾಗಿ ಮಾಡುವುದಾಗಿ ಚಾಮ್ಲಿಂಗ್ ಘೋಷಿಸಿದ್ದರು. ಸಮಾಜದ ಕೆಲ ಕೃಷಿ ಶಾಖೆಗಳ ಪ್ರತಿಭಟನೆಯನ್ನು ಅವರು ಎದುರಿಸಿದ್ದಾರೆ. ಇದೀಗ 12 ವರ್ಷಗಳ ನಂತರ ಅವರ ಕನಸು ನನಸಾಗಿದೆ. ಅಷ್ಟೇ ಅಲ್ಲ ಸಿಕ್ಕಿಂ ದೇಶದ ಮೊದಲ ಸಾವಯವ ರಾಜ್ಯವಾಗಲಿದೆ ಅಂತಾ ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಘೋಷಿಸಿದ್ದರು.

ಎರಡನೇ ಹಸಿರು ಕ್ರಾಂತಿ ಯುಪಿಎ ಸರ್ಕಾರದ ಉದ್ದೇಶವಾಗಿತ್ತು. ಆಸ್ಸಾಂ ಸೇರಿದಂತೆ ವಿವಿಧೆಡೆ ಸಾಂದ್ರೀಕೃತ ಬೇಸಾಯ ಪದ್ಧತಿ ಜಾರಿಗೆ ತರುವ ಪ್ರಯತ್ನವೂ ನಡೆದಿತ್ತು. ಆದ್ರೆ ನರೇಂದ್ರ ಮೋದಿ ಸರ್ಕಾರ ಸಿಕ್ಕಿಂ ರಾಜ್ಯದಲ್ಲಿ ಸಾವಯವ ಕೃಷಿ ಅಳವಡಿಕೆಗೆ ಪ್ರೋತ್ಸಾಹ ನೀಡಿದೆ ಮತ್ತು ಸದೃಢ ರಾಜಕೀಯ ಬುನಾದಿಯನ್ನೂ ಹಾಕಿದೆ. ಕೀಟನಾಶಕಗಳು ಮತ್ತು ರಸಗೊಬ್ಬರ ಬಳಕೆಯ ಹಳೆ ಕೃಷಿ ಪದ್ಧತಿಯನ್ನು ಪರಿವರ್ತಿಸುವ ಸಂದರ್ಭದಲ್ಲಿ ಸಹಜವಾಗಿಯೇ ಅಡೆತಡೆಗಳು, ಪ್ರತಿಭಟನೆಗಳು ಎದುರಾದ್ವು. ರಾಜ್ಯಕ್ಕೆ ಬೇಕಾದಷ್ಟು ಆಹಾರ ಧಾನ್ಯಗಳ ಉತ್ಪಾದನೆ ಕೂಡ ಸಾಧ್ಯವಾಗುತ್ತಿಲ್ಲ. ಸಾವಯವ ಕೃಷಿ ಅಳವಡಿಸಿದ್ರೆ ಉತ್ಪಾದನೆ ಕುಸಿತದಿಂದ ಕಂಡು ರೈತರು ಸಂಕಷ್ಟಕ್ಕೀಡಾಗುತ್ತಾರೆ ಅನ್ನೋ ಆರೋಪಗಳಿದ್ದವು. ಆದ್ರೆ ಸಿಎಂ ಚಾಮ್ಲಿಂಗ್ ತಮ್ಮ ನಿರ್ಧಾರದಿಂದ ವಿಚಲಿತರಾಗಲಿಲ್ಲ. ``ಸಾವಯವ ಕೃಷಿ ಅಳವಡಿಸಿದ್ರೆ ರೈತರು ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲವಾಗಲಿದೆ ಅನ್ನೋದು ಖಚಿತ. ರಾಜ್ಯಕ್ಕೆ ಬೇಕಾದಷ್ಟು ಆಹಾರ ಉತ್ಪಾದನೆ ಮಾಡುವಷ್ಟು ಭೂಮಿ ನಮ್ಮಲ್ಲಿಲ್ಲ. ಹಾಗಾಗಿ ಸಿಕ್ಕಿಂನಲ್ಲಿ ಏನನ್ನು ಬೆಳೆಯಬಹುದು ಅನ್ನೋದನ್ನು ನಿರ್ಧರಿಸಿದ್ದೇವೆ, ಅಷ್ಟೇ ಅಲ್ಲ ಸಾವಯವ ಕೃಷಿಯಿಂದ ಮಾತ್ರ ಅದಕ್ಕೆ ಹೆಚ್ಚಿನ ಮೌಲ್ಯ ಕಲ್ಪಿಸಲು ಸಾಧ್ಯ'' ಎನ್ನುತ್ತಾರೆ ರಾಜ್ಯದ ಕೃಷಿ ಇಲಾಖೆ ಕಾರ್ಯದರ್ಶಿ ಖೋರ್ಲೋ ಭುಟಿಯಾ. ರಾಸಾಯನಿಕ ಮುಕ್ತ ಉತ್ಪಾದನೆಯೇ ಈ ರೂಪಾಂತರದ ಗುರಿ ಅನ್ನೋದು ಅವರ ಸ್ಪಷ್ಟ ನುಡಿ.

77,000 ಹೆಕ್ಟೇರ್ ಭೂಮಿಯನ್ನು ಈಗಾಗ್ಲೇ ಸಣ್ಣ ಸಣ್ಣ ವಿಭಾಗಗಳನ್ನಾಗಿ ಮಾಡಿ ಸಾವಯವ ಪದ್ಧತಿಗೆ ಬದಲಾಯಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಂತೆ ಸಿಕ್ಕಿಂನಲ್ಲಿ ಈ ಮೊದಲಿನ ಕೃಷಿ ಪದ್ಧತಿಯಲ್ಲಿ ಅತಿಯಾಗಿ ರಾಸಾಯನಿಕಗಳನ್ನು ಬಳಸುತ್ತಿರಲಿಲ್ಲ ಅನ್ನೋದು ಸಮಾಧಾನಕರ ಸಂಗತಿ. ರಾಜ್ಯವನ್ನು ಸಾವಯವಮಯ ಮಾಡಲು ಸಿಎಂ ಚಾಮ್ಲಿಂಗ್ ಮಾಡಿದ ಮೊದಲ ಕೆಲಸ ಅಂದ್ರೆ ರಾಸಾಯನಿಕ ಮತ್ತು ರಸಗೊಬ್ಬರಗಳ ಮೇಲೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿದ್ದು. ನಿಧಾನವಾಗಿ ಸರ್ಕಾರ ಅವುಗಳ ಮೇಲೆ ನಿಷೇಧವನ್ನೂ ಹೇರಲು ಯೋಜನೆ ರೂಪಿಸ್ತು. ಈ ಸಾವಯವ ರೂಪಾಂತರ ಕೇವಲ ರೈತರು ಮತ್ತು ಗುತ್ತಿಗೆದಾರರ ಪ್ರಯತ್ನಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಎಲ್ಲ ವಿಭಾಗಗಳು ಇದಕ್ಕಾಗಿ ಒಗ್ಗೂಡಿ ಶ್ರಮಿಸಿವೆ. ಇದ್ರಿಂದ ಹಲವು ಯುವಕರು ಸ್ವತಂತ್ರವಾಗಿ ಇದಕ್ಕೆ ಸಂಬಂಧಪಟ್ಟ ಉದ್ಯಮ ಆರಂಭಿಸಲು ಪ್ರೇರಣೆಯಾಗಿದೆ.

ಕೃಷಿ ರಾಜ್ಯವೊಂದರ ನಿರ್ಮಾಣದಿಂದ ಆಗುವ ಅನುಕೂಲಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ಮೊದಲ ಹಂತ. ಇದಕ್ಕಾಗಿಯೇ `ದಿ ಸಿಕ್ಕಿಂ ಆರ್ಗೆನಿಕ್ ಮಿಷನ್' ಅನ್ನು ಆರಂಭಿಸಲಾಯ್ತು. ಸಾಯವಯ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದು ಒದಗಿಸುತ್ತಿದೆ. ಸಾವಯವ ವಿಧಾನದಲ್ಲಿ ಕೃಷಿ ಮಾಡುವ ರೈತರಿಗೆ ಬೀಜ ಮತ್ತು ಗೊಬ್ಬರವನ್ನು ಪೂರೈಸುತ್ತಿದೆ. ಇದನ್ನು ಸರಿಯಾಗಿ ಅಳವಡಿಸಿಕೊಳ್ಳಲು ರೈತರನ್ನು ಬೇರೆಡೆಗೆ ಕಳುಹಿಸಿ ತರಬೇತಿ ಕೂಡ ನೀಡಲಾಗಿದೆ. ಇತ್ತೀಚೆಗಷ್ಟೆ ಲಂಡನ್ನಿಂದ ವಾಪಸ್ಸಾಗಿರುವ ಯುವ ಉದ್ಯಮಿ ಬಿನಿತಾ ಚಾಮ್ಲಿಂಗ್, `ಆರ್ಗೆನಿಕ್ ಸಿಕ್ಕಿಂ' ಹೆಸರಿನ ಸ್ಟಾರ್ಟ್ಅಪ್ ಒಂದನ್ನು ಆರಂಭಿಸಿದ್ದಾರೆ. ಇದು ಮಧ್ಯವರ್ತಿಗಳ ಹಾವಳಿಯನ್ನು ನಿವಾರಿಸುತ್ತಿದೆ ಮತ್ತು ದೇಶದ ಯಾವ ಭಾಗದಲ್ಲಾದ್ರೂ ಅಥವಾ ಜಗತ್ತಿನ ಎಲ್ಲಾದ್ರೂ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದು, ರೈತರ ಜೊತೆ ನೇರವಾಗಿ ವ್ಯವಹರಿಸುತ್ತದೆ. ಅಷ್ಟೇ ಅಲ್ಲ ಮಧ್ಯವರ್ತಿಗಳ ಹಾವಳಿ ತಡೆದು ಸಾವಯವ ಕೃಷಿ ಮಾಡುತ್ತಿರುವ ರೈತರಿಗೆ ಲಾಭ ಸಿಗುವಂತೆ ಮಾಡುತ್ತಿದೆ.

ಸರ್ಕಾರ ಕೂಡ `ಸಿಕ್ಕಿಂ ಆರ್ಗೆನಿಕ್ ಮಾರ್ಕೆಟ್' ಅನ್ನು ಆರಂಭಿಸಿದೆ. ಇಲ್ಲಿ ಹಣ್ಣು, ದ್ವಿದಳ ಧಾನ್ಯ, ತರಕಾರಿ, ಉಪ್ಪಿನಕಾಯಿ ಹೀಗೆ ಎಲ್ಲ ಸಾವಯವ ಉತ್ಪನ್ನಗಳನ್ನೂ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ರಸಗೊಬ್ಬರಕ್ಕೆ ಬದಲಾಗಿ ಕೃಷಿಗೆ ಹಸುವಿನ ಗೊಬ್ಬರ, ಸಸ್ಯಗಳ ಉಳಿಕೆಯನ್ನು ಬಳಸಲಾಗುತ್ತಿದೆ. ಕ್ರಿಮಿನಾಶಕಗಳಿಗೆ ಬದಲಾಗಿ ಬೇವು, ಬೆಳ್ಳುಳ್ಳಿ ಮತ್ತು ಅಣಬೆಯನ್ನು ಬಳಸಲಾಗುತ್ತಿದೆ. ಸಾವಯವ ಮತ್ತು ಸಾಂಪ್ರದಾಯಿಕ ಪ್ರಬೇಧದ ತರಕಾರಿಗಳ ಮಧ್ಯೆ ಅಷ್ಟಾಗಿ ಬೆಲೆ ವ್ಯತ್ಯಾಸವಿಲ್ಲ. ಸಾವಯವ ಪದಾರ್ಥಗಳ ಬೆಲೆ ಶೇ.20-25ರಷ್ಟು ಅಧಿಕ. ಆದ್ರೆ ಅರಿಶಿನದಂತಹ ಮಸಾಲೆ ಪದಾರ್ಥಗಳ ಬೆಲೆ ಕೊಂಚ ಜಾಸ್ತಿ. ``ಈ ಬಗ್ಗೆ ಜನರು ಪ್ರಶ್ನಿಸಿದಾಗಲೆಲ್ಲ ಸಾವಯವ ಪದಾರ್ಥಗಳ ಅನುಕೂಲತೆಗಳನ್ನು ಅವರಿಗೆ ವಿವರಿಸುತ್ತೇವೆ, ಅವರು ಅದನ್ನು ಅರ್ಥಮಾಡಿಕೊಳ್ತಾರೆ'' ಎನ್ನುತ್ತಾರೆ `ಸಿಕ್ಕಿಂ ಆರ್ಗೆನಿಕ್ ಮಾರ್ಕೆಟ್' ಮಳಿಗೆ ನಡೆಸುತ್ತಿರುವ ತಿವಾರಿ. ಪ್ರತಿದಿನ ಇಲ್ಲಿ 2000-3000 ರೂಪಾಯಿ ವಹಿವಾಟು ನಡೆಸಲಾಗುತ್ತಿದೆ.

ಸಾವಯವ ಕೃಷಿ ಅಳವಡಿಸಿಕೊಳ್ಳುವ ಮೂಲಕ ಕ್ರಿಮಿನಾಶಕಗಳಿಂದ ಬೆಳೆಗಳಿಗೆ ತಗುಲುತ್ತಿದ್ದ ರೋಗಗಳಿಂದ ರೈತರು ಮುಕ್ತಿ ಪಡೆದಿದ್ದಾರೆ. ಅದರಲ್ಲೂ ಸಿಕ್ಕಿಂನ ಜನಪ್ರಿಯ ಬೆಳೆ ಶುಂಠಿಗೆ ತಗುಲುತ್ತಿದ್ದ ಬೇರುಕಾಂಡ ರೋಗ ಈಗ ಮಾಯವಾಗಿದೆ. ``ಕೇವಲ 55 ಕೋಟಿ ರೂಪಾಯಿ ವೆಚ್ಚ ಮಾಡಿ ಸಾವಯವ ಕೃಷಿ ರಾಜ್ಯವನ್ನಾಗಿ ಸಿಕ್ಕಿಂ ಅನ್ನು ಬದಲಾಯಿಸಿರುವುದ ಹೆಮ್ಮೆ ತಂದಿದೆ'' ಎನ್ನುತ್ತಾರೆ ಭುಟಿಯಾ. ದಿನೇ ದಿನೇ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಕೂಡ ಹೆಚ್ಚುತ್ತಿದ್ದು, ರೈತರು ಶೇ.20ರಷ್ಟು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಸಾವಯವ ಪ್ರವಾಸೋದ್ಯಮದಲ್ಲೂ ಸಿಕ್ಕಿಂ ಆದಾಯ ಗಳಿಸುತ್ತಿದೆ.

ಸಾವಯವ ರಾಜ್ಯವಾಗಿ ಬದಲಾಗಿರುವ ಸಿಕ್ಕಿಂ ದೇಶದ ಇತರ ಎಲ್ಲ ರಾಜ್ಯಗಳಿಗೂ ಮಾದರಿ ಹಾಗೂ ಸ್ಪೂರ್ತಿ. ಪ್ರಗತಿ ಮತ್ತು ಅಭಿವೃದ್ಧಿಯೆಡೆಗೆ ಇಡುವ ಹೆಜ್ಜೆಯನ್ನು ಪ್ರಕೃತಿಯೂ ಅನುಸರಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಆಂಧ್ರ, ಕೇರಳ, ಅರುಣಾಚಲಪ್ರದೇಶ ಮತ್ತು ಮಿಜೋರಾಂ ಕೂಡ ಇದೇ ಹಾದಿಯಲ್ಲಿ ಸಾಗುತ್ತಿವೆ.

ಇದನ್ನೂ ಓದಿ...

ವೀಕೆಂಡ್​ಗೂ ಒಂದೇ ದರ, ವೀಕ್​ಡೇಸ್​ನಲ್ಲೂ ಅದೇ ರೇಟ್​​..!

ಬದಲಾಯಿತು ದೂರದರ್ಶನ- ಸ್ಮಾರ್ಟ್​ಫೋನ್​ನಲ್ಲೂ ಟಿವಿಯ ದರ್ಶನ


Related Stories

Stories by YourStory Kannada