ನಾರಿಯರು ಸೀರೆ ಉಟ್ಕೊಂಡೇ ಓಡ್ಬಹುದು : ಮಿಲಿಂದ್ ಸೋಮನ್​ ಹೊಸ ಐಡಿಯಾ 

ಟೀಮ್ ವೈ.ಎಸ್.ಕನ್ನಡ 

0

ಮ್ಯಾರಥಾನ್ ಅಂದ್ಮೇಲೆ ಟ್ರ್ಯಾಕ್ ಸೂಟ್ ಇರ್ಬೇಕು, ಓಡಲು ಅನುಕೂಲವಾಗುವಂತಹ ಬೂಟುಗಳಿರಬೇಕು. ಆದ್ರೆ ಓಡುವ ಆಸೆಯಿದ್ರೂ ಅದೆಷ್ಟೋ ಸ್ತ್ರೀಯರು ಟ್ರ್ಯಾಕ್ ಸೂಟ್ ಧರಿಸಲು ಮುಜುಗರಪಡ್ತಾರೆ. ಇದೇ ಕಾರಣಕ್ಕೆ ಮ್ಯಾರಥಾನ್ನಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕ್ತಾರೆ. ಆದ್ರೆ ಇನ್ಮೇಲೆ ಈ ಸಮಸ್ಯೆಯೇ ಇರುವುದಿಲ್ಲ. ಸೀರೆ ಉಟ್ಕೊಂಡು ಬೇಕಾದ್ರೂ ಓಡ್ಬಹುದು. ಅರೆ ಅದ್ಹೇಗೆ ಅಂತಾ ಆಶ್ಚರ್ಯಪಡಬೇಡಿ. ಇದೆಲ್ಲ ಮಾಡೆಲ್, ನಟ ಹಾಗೂ ಅಥ್ಲೀಟ್ ಮಿಲಿಂದ್ ಸೋಮನ್ ಅವರ ಮಾಸ್ಟರ್ ಪ್ಲಾನ್. ಕಳೆದ ಕೆಲ ವರ್ಷಗಳಿಂದ ಮಿಲಿಂದ್ ಸೋಮನ್ ಪಿಂಕಥಾನ್ ಆಯೋಜಿಸುತ್ತಿದ್ದಾರೆ. 2016ರ ಸಪ್ಟೆಂಬರ್ 4ರಂದು ಪಿಂಕಥಾನ್​ನ ನಾಲ್ಕನೇ ಆವೃತ್ತಿ ನಡೆಯಲಿದೆ. ಪಿಂಕಥಾನ್​ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಮಹಿಳೆಯರಿಗಾಗಿ ವಿಶೇಷ ಸೀರೆಯೊಂದನ್ನು ವಿನ್ಯಾಸಗೊಳಿಸುತ್ತಿದ್ದಾರೆ.

ಸಾಂಪ್ರದಾಯಿಕ ನಿಕ್ಕರ್ ಧರಿಸಿ ಓಡುವುದು ಎಲ್ಲರಿಗೂ ಇಷ್ಟವಿಲ್ಲ. ಕೆಲವರು ಶಾರ್ಟ್ಸ್​ ಹಾಕಿಕೊಳ್ಳಲು ಮುಜುಗರ ಪಡ್ತಾರೆ. ಅಂಥವರಿಗಾಗಿ ಈ ವಿಶೇಷ ಸೀರೆಯನ್ನು ತಯಾರಿಸಲಾಗ್ತಿದೆ. ಅದಕ್ಕೆ ಅತ್ಯಂತ ಕಡಿಮೆ ಬಟ್ಟೆ ಬಳಸಲಾಗಿದ್ದು, ಹಗುರವಾಗಿದೆ. ಅದನ್ನು ಧರಿಸಿ ಅವರು ಆರಾಮಾಗಿ ಓಡಬಹುದು. ``ಶಾಪಿಂಗ್, ಮದುವೆ, ಸಮಾರಂಭ, ಕಿಟಿ ಪಾರ್ಟಿ, ಮನೆಯಲ್ಲಿ ಭೋಜನ ಕೂಟ ಹೀಗೆ ಎಲ್ಲದಕ್ಕೂ ಬೇರೆ ಬೇರೆ ತೆರನಾದ ಸೀರೆಗಳಿವೆ. ಸಂದರ್ಭಕ್ಕೆ ತಕ್ಕಂತೆ ಭಾರತೀಯ ನಾರಿಯರು ಸೀರೆ ಉಡುತ್ತಾರೆ. ಆದ್ರೆ ಓಟ ಹಾಗೂ ವ್ಯಾಯಾಮದಂತಹ ದೈಹಿಕ ಕಸರತ್ತುಗಳಿಗೆ ಅನುಕೂಲವಾಗುವಂತಹ ಸೀರೆಯನ್ನು ಇದುವರೆಗೆ ಯಾರೂ ವಿನ್ಯಾಸಗೊಳಿಸಿಲ್ಲ. ಯೋಗ ಅಥವಾ ಉಳಿದ ಕಸರತ್ತುಗಳನ್ನು ಸೀರೆ ಉಟ್ಟುಕೊಂಡೇ ಆರಾಮಾಗಿ ಮಾಡಬಹುದು'' ಎನ್ನುತ್ತಾರೆ ಮಿಲಿಂದ್ ಸೋಮನ್.

ದೆಹಲಿಯ ಖ್ಯಾತ ಡಿಸೈನರ್ ಒಬ್ಬರಿಂದ ರನ್ನಿಂಗ್ ಸಾರಿಯನ್ನು ವಿನ್ಯಾಸ ಮಾಡಿಸಲಾಗ್ತಿದೆ. ಬನಾರಸಿ ಮತ್ತು ಇಲ್ಕಟ್ನಂತಹ ಪ್ರಸಿದ್ಧ ನೇಯ್ಗೆ ಶೈಲಿಯನ್ನು ಬಳಸಬೇಕೆಂಬುದು ಮಿಲಿಂದ್ ಸೋಮನ್ ಅವರ ಅಭಿಲಾಷೆ. ``ನಾನು ಬನಾರಸಿ ಅಥವಾ ಚಂದೇರಿ ಸೀರೆ ಉಟ್ಟು ಓಡುತ್ತೇನೆಂದು ಮಹಿಳೆಯರು ಆತ್ಮವಿಶ್ವಾಸದಿಂದ ಹೇಳುವಂತಾಗಬೇಕು'' ಅನ್ನೋದು ಮಿಲಿಂದ್ ಅವರ ಅಭಿಪ್ರಾಯ.

ಸ್ವತಃ ಮಿಲಿಂದ್ ಸೋಮನ್ ಅವರೇ ಅಥ್ಲೀಟ್. ಫಿಟ್ & ಫೈನ್ ಆಗಿರೋ ಅವರು ಸಂಸ್ಕರಿಸಿದ ಸಕ್ಕರೆಯೊಂದನ್ನು ಬಿಟ್ಟು ಬೇರೆಲ್ಲವನ್ನೂ ಸೇವಿಸುತ್ತಾರಂತೆ. ಉತ್ತಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬೇಕಂದ್ರೆ ಪ್ರಮುಖವಾಗಿ ನಾಲ್ಕು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎನ್ನುತ್ತಾರೆ ಅವರು. ಮೊದಲನೆಯದಾಗಿ ಅಗತ್ಯವಿದ್ದಷ್ಟು ನಿದ್ದೆ ಮಾಡಬೇಕು. ಯಾಕಂದ್ರೆ ನಿದ್ದೆ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ದೇಹ ಮರು ಶಕ್ತಿ ಪಡೆದುಕೊಳ್ಳುತ್ತದೆ. ಎರಡನೆಯದು ಆಹಾರ, ಆರೋಗ್ಯಕರ ಆಹಾರವನ್ನು ನೀವು ಸೇವಿಸಬೇಕು. ಮನೆಯಲ್ಲಿ ತಯಾರಿಸಿದ ತಾಜಾ ಆಹಾರ ಅತ್ಯಂತ ಒಳ್ಳೆಯದು. ಮೂರನೆಯದು ನಿಯಮಿತವಾದ ವ್ಯಾಯಾಮ. ನಾಲ್ಕನೆಯದು ಮತ್ತು ಕೊನೆಯದು ಸಕಾರಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳುವುದು. ಯಾವುದೇ ಸಂದರ್ಭವಾಗಿರಲಿ ಅದರಿಂದ ನೀವು ಧನಾತ್ಮಕ ಪಾಠ ಕಲಿಯಬೇಕು. ಎಂತಹ ಕೆಟ್ಟ ಪರಿಸ್ಥಿತಿಯೇ ಆಗಿರಲಿ ಅದರಿಂದ ನೀವೇನನ್ನಾದ್ರೂ ಕಲಿಯಬೇಕು, ಹಾಗಾದಲ್ಲಿ ಮಾತ್ರ ನೀವು ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಅನ್ನೋದು ಮಿಲಿಂದ್ ಸೋಮನ್ ಅವರ ಸಲಹೆ.   

ಇದನ್ನೂ ಓದಿ...

ವಯಸ್ಸಿನಲ್ಲೇನಿದೆ..? ಉದ್ಯಮಿಗಳಿಗೆ ಅದು ಕೇವಲ ಸಂಖ್ಯೆಯಷ್ಟೇ..

ಪ್ಲಾಸ್ಟಿಕ್, ರಬ್ಬರ್ ತ್ಯಾಜ್ಯದಿಂದ ಅಂದದ ಮನೆ : ಉದ್ಯಮದಿಂದ್ಲೇ ಬಡತನ ನಿರ್ಮೂಲನೆ

Related Stories

Stories by YourStory Kannada