ಗಾರ್ಡನ್​ ಸಿಟಿಯಲ್ಲಿ ಇ-ಟಾಯ್ಲೆಟ್​​ ಮ್ಯಾಜಿಕ್​​

ವಿಶ್ವಾಸ್​ ಭಾರಾಧ್ವಾಜ್​

0

ಸ್ವಚ್ಛ ಭಾರತ್ ಅಭಿಯಾನ ಶುರುವಾದ ನಂತರ ಪ್ರತಿಯೊಂದು ನಗರಗಳ ನೈರ್ಮಲ್ಯದ ಕಡೆಗೆ ಸಂಬಂಧಪಟ್ಟ ನಗರಾಡಳಿತ ಗಮನ ಹರಿಸತೊಡಗಿದೆ. ದಕ್ಷಿಣ ಭಾರತದಲ್ಲಿ ಅಷ್ಟೇ ಏಕೆ ಇಡೀ ಭಾರತದ ಎಲ್ಲಾ ಮೆಟ್ರೋ ಹಾಗೂ ಕಾಸ್ಮೋ ಪಾಲಿಟನ್ ಪಟ್ಟಣಗಳಲ್ಲಿ ಅತ್ಯಂತ ಕ್ಲೀನ್ ಸಿಟಿ ಅಂತ ಹೆಸರಾಗಿರೋದು ನಮ್ಮ ಬೆಂಗಳೂರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರು ಸಹ ಸ್ವಚ್ಛತೆಯ ವಿಚಾರದಲ್ಲಿ ಕೊಂಚ ಸಮಸ್ಯೆಗಳನ್ನು ಎದುರಿಸಿತ್ತು. ಸ್ವಚ್ಛ ಬೆಂಗಳೂರು ಅಭಿಯಾನದಡಿಯಲ್ಲಿ ಸಿಲಿಕಾನ್ ನಗರಿಯ ಸ್ವಚ್ಛತೆಯತ್ತ ಬಿಬಿಎಂಪಿ ಮುತುವರ್ಜಿ ವಹಿಸಿತ್ತು. ಆದರೆ ನಗರಪ್ರದೇಶದ ವ್ಯಾಪ್ತಿಯೊಳಗೆ ಸಾಕಷ್ಟು ಸಮರ್ಪಕ ಶೌಚಾಲಯಗಳಿರದ ಕಾರಣ ಸ್ವಚ್ಛ ಬೆಂಗಳೂರು ಅಭಿಯಾನಕ್ಕೆ ಕೊಂಚ ಹಿನ್ನಡೆಯಾಗಿತ್ತು. ಪಾದಾಚಾರಿ ಮಾರ್ಗಗಳು ಹಾಗೂ ಅಂಡರ್‍ಪಾಸ್‍ಗಳು ಬಹಿರಂಗ ಮೂತ್ರವಿಸರ್ಜನೆಯ ತಾಣಗಳಾಗಿ ಗಬ್ಬು ನಾರುತ್ತಿದ್ದವು. ಆದರೆ ಇನ್ಮುಂದೆ ಫುಟ್‍ಪಾತ್ ಮೇಲೆ ಚಲಿಸುವ ಪಾದಾಚಾರಿಗಳಿಗೆ ಮೂಗು ಮುಚ್ಚಿಕೊಳ್ಳೋ ತಾಪತ್ರಯ ಕಡಿಮೆಯಾಗ್ಬಹುದು. ಬಯಲು ಶೌಚ ತಡೆಗಟ್ಟಿ ಸ್ವಚ್ಛ ಬೆಂಗಳೂರು ನಿರ್ಮಿಸುವ ಉದ್ದೇಶದಿಂದ ಬಿಬಿಎಂಪಿ ಇ-ಟಾಯ್ಲೆಟ್‍ಗಳ ನಿರ್ಮಾಣ ಮಾಡಿದೆ. ಇ-ಟಾಯ್ಲೆಟ್ ಕುರಿತಾದ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಉದ್ಯಾನ ನಗರಿಯಲ್ಲಿ ನಿರ್ಮಿಸಲಾಗುತ್ತಿರುವ ಇ-ಟಾಯ್ಲೆಟ್‍ಗಳು ಸಂಪೂರ್ಣ ಸ್ವಯಂನಿಯಂತ್ರಿತ ಟಾಯ್ಲೆಟ್‍ಗಳಾಗಿವೆ. ಒಂದು ಅಥವಾ ಎರಡು ರೂಪಾಯಿ ನಾಣ್ಯ ಹಾಕಿದರೆ ಶೌಚಾಲಯದ ಬಾಗಿಲು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ಉಪಯೋಗಿಸೋ ಮುನ್ನ ಹಾಗೂ ಬಳಸಿದ ಬಳಿಕ ಈ ಶೌಚಾಲಯಗಳು ಆಟೋಮೇಟಿಕ್ ಅಗಿ ಪ್ಲಶ್ ಆಗುತ್ತೆ. ಅಷ್ಟೇ ಅಲ್ಲ ಐದು ಜನ ಟಾಯ್ಲೆಟ್ ಬಳಸಿದ ಬಳಿಕ ಸ್ವಯಂಚಾಲಿತವಾಗಿ ಟಾಯ್ಲೆಟ್‍ನ ನೆಲ ಸ್ವಚ್ಛಗೊಳಿಸೋ ವ್ಯವಸ್ಥೆಯೂ ಇಲ್ಲಿದೆ. ಇದೆಲ್ಲಾ ಸೌಕರ್ಯಗಳು ಈಗ ನಿರ್ಮಿಸಲಾಗುತ್ತಿರುವ ಇ-ಶೌಚಾಲಯದ ವಿಶೇಷತೆ. ಈ ಟಾಯ್ಲೆಟ್‍ಗಳಲ್ಲಿ ಕಡಿಮೆ ನೀರು ಹಾಗೂ ವಿದ್ಯುತ್ ಬಳಕೆಯ ಸೌಲಭ್ಯ ಕಲ್ಪಿಸಲಾಗಿದೆ. ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಒಟ್ಟು 75 ಇ-ಟಾಯ್ಲೆಟ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಖಾಸಗಿಯಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲೂ 12 ಇ-ಟಾಯ್ಲೆಟ್‍ಗಳನ್ನು ನಿರ್ಮಿಸಲಾಗಿದೆ.

ಇದನ್ನು ಓದಿ: ಆನ್‍ಲೈನ್‍ನಲ್ಲೂ ಸಿಗುತ್ತೆ ಪೂಜೆಗೆ ಬೇಕಾಗುವ ವಸ್ತುಗಳು

ಇ-ಟಾಯ್ಲೆಟ್‍ಗೆ ಸಂಬಂಧಿಸಿದಂತೆ ಮೊಬೈಲ್ ಆ್ಯಪ್ ಅನ್ನು ಮೇಯರ್ ಮಂಜುನಾಥ ರೆಡ್ಡಿ ಬಿಡುಗಡೆ ಮಾಡಿದ್ದಾರೆ. ಇ-ಶೌಚಾಲಯದ ಮೊಬೈಲ್ ಆ್ಯಪ್ ಬಳಸಿ ಗೂಗಲ್ ನಕ್ಷೆಯ ಮುಖಾಂತರ ಸಮೀಪದ ಇ-ಟಾಯ್ಲೆಟ್‍ನ ಸ್ಥಳ ಹಾಗೂ ತಲುಪಬಹುದಾದ ದಾರಿ ತಿಳ್ಕೋಬಹುದು. ಜಿಪಿಎಸ್ ತಂತ್ರಜ್ಞಾನದ ಸಮರ್ಪಕ ಬಳಕೆ ಈ ಆ್ಯಪ್‍ನಲ್ಲಿ ಮಾಡಿಕೊಳ್ಳಲಾಗಿದೆ. ಜೊತೆಗೆ ಟಾಯ್ಲೆಟ್‍ನ ವ್ಯವಸ್ಥೆ ಹಾಗೂ ನಿರ್ವಹಣೆಯ ಕುರಿತಾಗಿ ಯಾವುದಾದರೂ ದೂರು ಅಥವಾ ಸಲಹೆಗಳನ್ನೂ ಈ ಆ್ಯಪ್ ಮೂಲಕವೇ ನೀಡಬಹುದಾಗಿದೆ. ಈ ಮೊಬೈಲ್ ಆ್ಯಪ್‍ನಿಂದ ಪಾಲಿಕೆಯ ಕಾರ್ಯವೂ ಸುಲಭವಾಗುತ್ತೆ. ಕುಳಿತಲ್ಲಿಂದಲೇ ನಗರದ ಇ-ಶೌಚಾಲಯಗಳ ಕಾರ್ಯಕ್ಷಮತೆ, ಉಪಯೋಗಿಸುವವರ ಸಂಖ್ಯೆ ಮುಂತಾದ ವರದಿ ಪಡೆಯಬಹುದಾಗಿದೆ.

ಇ-ಟಾಯ್ಲೆಟನ್ನು ದೇಶದ 19 ರಾಜ್ಯಗಳಲ್ಲಿ, ಒಟ್ಟು 1600 ಟಾಯ್ಲೆಟ್‍ಗಳನ್ನು ಇರಾಮ್ ಸೈಂಟಿಫಿಕ್ ಸೊಲ್ಯೂಷನ್ ಕಂಪೆನಿ ನಿರ್ಮಿಸಿದೆ. ಉತ್ತಮ ಸ್ಟೀಲ್ ಬಳಸಿ ನಿರ್ಮಿಸಿರೋ ಒಂದು ಇ-ಟಾಯ್ಲೆಟಿನ ಖರ್ಚು ಸುಮಾರು 3.5 ಲಕ್ಷ ರೂಪಾಯಿ. ನಗರದಲ್ಲಿ ಈಗ ಮೊದಲನೇ ಹಂತದ ನಿರ್ಮಾಣ ಕಾರ್ಯ ಸಂಪೂರ್ಣ ಮುಗಿದಿದ್ದು, ಎರಡನೇ ಹಂತದಲ್ಲಿ ಒಟ್ಟು 200 ಟಾರ್ಯೆಟ್‍ಗಳ ನಿರ್ಮಾಣದ ಗುರಿಯಿದೆ. ಜೊತೆಗೆ ಮಹಿಳೆಯರಿಗಾಗಿ ವಿಶೇಷ ಸೌಲಭ್ಯವಿರೋ ಇ-ಟಾಯ್ಲೆಟ್‍ಗಳನ್ನು ನಿರ್ಮಿಸುವ ಉದ್ದೇಶವೂ ಇದೆ. ಸಾರ್ವಜನಿಕರು ರಸ್ತೆ ಬದಿಗಳನ್ನು, ಫುಟ್‍ಪಾತ್‍ಗಳನ್ನು ಶೌಚ ಕಾರ್ಯಕ್ಕೆ ಬಳಸದೇ ಇ-ಟಾಯ್ಲೆಟ್‍ಗಳನ್ನು ಸದುಪಯೋಗ ಪಡಿಸಿಕೊಂಡರೇ ನಗರ ಸ್ವಚ್ಛವಾಗಿರೋದ್ರ ಜೊತೆ ಸರ್ಕಾರದ ಉದ್ದೇಶವೂ ಈಡೇರಿದಂತಾಗುತ್ತೆ. ಈ ರೀತಿಯಲ್ಲಾದ್ರೂ ಸ್ವಚ್ಛ ಬೆಂಗಳೂರಿನ ಕನಸು ನನಸಾಗುತ್ತದಾ ಅನ್ನೋದು ಬೆಂಗಳೂರಿಗರ ಕುತೂಹಲ.

ಇದನ್ನು ಓದಿ

1. ಬೆಳ್ಳಿತೆರೆಯಿಂದ ಬ್ಯುಸಿನೆಸ್‍ವರೆಗೂ...

2. ಪಕುಮೇನಿಯಾ ಪಕ್ವವಾದ ಕಥೆ...!

3. ದಾವಣಗೆರೆಯಲ್ಲಿ ಬೆಣ್ಣೆ ದೋಸೆಗಿಂತಲೂ ಫೇಮಸ್ ‘ಗಂಗಾವತಿ ಎಕ್ಸ್​​ಪೋರ್ಟ್ಸ್’..!

Related Stories

Stories by YourStory Kannada