'ಎ ಬೇಸಿಕ್ ಕಾನ್ಸೆಪ್ಟ್ ಡಿಸೈನ್' : ನಿಮ್ಮ ಬಳಿಯಿರುವ ಕಸವೇ ವಿನ್ಯಾಸದ ಸಂಪತ್ತು..!

ಟೀಮ್​ ವೈ.ಎಸ್​. ಕನ್ನಡ

'ಎ ಬೇಸಿಕ್ ಕಾನ್ಸೆಪ್ಟ್ ಡಿಸೈನ್' : ನಿಮ್ಮ ಬಳಿಯಿರುವ ಕಸವೇ ವಿನ್ಯಾಸದ ಸಂಪತ್ತು..!

Thursday January 21, 2016,

4 min Read

2007ರ ಸಮಯ, ರಾಹುಲ್ ಖದಾಲಿಯಾ ಬೆಂಗಳೂರಿನ `ಎನ್‍ಐಎಫ್‍ಟಿ'ಯಲ್ಲಿ ಎಕ್ಸೆಸ್ಸರಿ ಡಿಸೈನಿಂಗ್ ಕಲಿಯುತ್ತಿದ್ರು. ಅವೆನ್ಯೂ ರೋಡ್ ಬಳಿಯಿರುವ ಪುಟ್ಟ ಗಲ್ಲಿಯಲ್ಲಿ ಕಂಡ ದೃಶ್ಯ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿತ್ತು. ಟೀ ಅಂಗಡಿಯಲ್ಲಿ ಕುಳಿತಿದ್ದ ರಾಹುಲ್, ಚಹಾ ಸವಿಯುತ್ತಿದ್ರು. ಕೊಳಕು ಬಟ್ಟೆಯಲ್ಲಿ ಸುತ್ತಿದ್ದ ಪುಟ್ಟ ಮಗುವೊಂದು ರಸ್ತೆ ಪಕ್ಕದಲ್ಲಿ ಮಲಗಿತ್ತು. ಯಾರ ಮಗುವಿರಬಹುದು ಅನ್ನೋ ಕುತೂಹಲದಲ್ಲಿ ರಾಹುಲ್ ಸುತ್ತಮುತ್ತ ನೋಡಿದ್ರು. ಅಷ್ಟೊತ್ತಿಗೆ ಚಹಾ ಅಂಗಡಿಯ ಇನ್ನೊಂದು ಬದಿಯಿಂದ ಯುವತಿಯೊಬ್ಬಳು ಬಂದ್ಲು. ಆಕೆ ಕೂಡ ಕೊಳಕಾದ ಬಟ್ಟೆ ತೊಟ್ಟಿದ್ಲು, ಮುಖಕ್ಕೆಲ್ಲಾ ಮಣ್ಣು ಮೆತ್ತಿಕೊಂಡಿತ್ತು, ಕೂದಲು ಕೂಡ ಕೆದರಿತ್ತು. ಅವಳ ಕೈಯಲ್ಲಿ 2 ಗ್ಲಾಸ್ ಇತ್ತು, ಒಂದರಲ್ಲಿ ಸ್ವಲ್ಪ ಹಾಲು, ಇನ್ನೊಂದರಲ್ಲಿ ನೀರು. ಆ ಮಗುವನ್ನೆತ್ತಿಕೊಂಡ ಯುವತಿ, ನಿಧಾನವಾಗಿ ಕೈಬೆರಳಲ್ಲೇ ಹನಿ ಹನಿಯಾಗಿ ಮೊದಲು ಹಾಲು ಕುಡಿಸಿ ನಂತರ ನೀರು ಕುಡಿಸಿದ್ಲು.

ಅಲ್ಲಿಂದ ಎಚ್‍ಎಸ್‍ಆರ್ ಲೇಔಟ್‍ನಲ್ಲಿದ್ದ ಕ್ಯಾಂಪಸ್‍ಗೆ ಹೊರಟಿದ್ದ ರಾಹುಲ್ ಅವರನ್ನ, ಕಾಫಿಯ ಘಮ ತಡೆದು ನಿಲ್ಲಿಸಿತ್ತು. ಆ ರೆಸ್ಟೋರೆಂಟ್‍ನಲ್ಲಿ ತಾಯಿ-ಮಗ ಸ್ನ್ಯಾಕ್ಸ್ ಸವಿಯುತ್ತ ಕುಳಿತಿದ್ರು. ಕೆಲ ಹೊತ್ತಿನಲ್ಲೇ ಅಲ್ಲಿಂದೆದ್ದು ಹೊರಟ್ರು, ಆರ್ಡರ್ ಮಾಡಿದ್ದ ತಿನಿಸಿನಲ್ಲಿ ಅರ್ಧಕ್ಕರ್ಧ ಟೇಬಲ್ ಮೇಲೆ ಚೆಲ್ಲಿತ್ತು. ಎಲ್ಲವನ್ನೂ ವೇಸ್ಟ್ ಮಾಡಿ ಅವರು ಹೊರಟು ಹೋಗಿದ್ರು. ಅವರು ಚೆಲ್ಲಿದ್ದ ಆಹಾರ ಆ ಬಡ ತಾಯಿ ಮಗುವಿಗೆ 2 ದಿನಕ್ಕೆ ಸಾಕಾಗುವಷ್ಟಿತ್ತು.

image


ಒಂದೇ ತೆರನಾದ ಆ ಎರಡು ದೃಶ್ಯಗಳಲ್ಲಿನ ದ್ವಂದ್ವ ರಾಹುಲ್ ಅವರ ಮನಸ್ಸನ್ನು ತಟ್ಟಿತ್ತು. ತಮ್ಮ ವಿನ್ಯಾಸಗಳಲ್ಲಿ ಇಂತಹ ವೇಸ್ಟೇಜ್ ಅನ್ನು ತಪ್ಪಿಸಲು ಸಮರ್ಥನೀಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ರಾಹುಲ್ ಮನಗಂಡರು. ಅವರ ಮನಸ್ಸಿನಲ್ಲಿ ಹೊಸ ಪರಿಕಲ್ಪನೆಯಿತ್ತು, ಆದ್ರೆ ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಅನ್ನೋ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಕಾಕತಾಳೀಯವೆಂಬಂತೆ ಅದೇ ವರ್ಷ ಅವರು ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ವಿಷಯಗಳನ್ನು ಅಧ್ಯಯನ ಮಾಡಿದ್ರು. ಇದರಿಂದ ಪ್ರೇರಿತರಾದ ಅವರು ಸುಸ್ಥಿರ ಅಭಿವೃದ್ಧಿ ಮತ್ತು ವಿನ್ಯಾಸದ ಬಗ್ಗೆ ವಿವಿಧ ವಿಷಯಗಳನ್ನು ಪರಿಶೋಧಿಸಿದ್ರು.

ಒಂದು ಮೂಲ ಪರಿಕಲ್ಪನೆಯ ನಿರ್ಮಾಣ

ಡಿಸೈನ್ ಕನ್ಸಲ್ಟೆನ್ಸಿಯೊಂದರಲ್ಲಿ ಕೆಲಸ ಮಾಡ್ತಿದ್ದ ರಾಹುಲ್, 2011ರಲ್ಲಿ ಸ್ವಂತ ಕಂಪನಿಯೊಂದನ್ನು ಆರಂಭಿಸಿದ್ರು, ಆ ಸಂಸ್ಥೆಯ ಹೆಸರು - `ಎಬಿಸಿಡಿ - ಎ ಬೇಸಿಕ್ ಕಾನ್ಸೆಪ್ಟ್ ಡಿಸೈನ್'. ``ಅಂದಿನಿಂದ ಇಂದಿನವರೆಗೂ ಎಬಿಸಿಡಿ ಹಲವು ಏರಿಳಿತಗಳನ್ನು ಕಂಡಿದೆ, ಆದ್ರೆ ಮನಸ್ಸಿನಲ್ಲಿ ಒಂದು ದೃಢ ನಿರ್ಧಾರವನ್ನು ಮೂಡಿಸಿದೆ. ಪ್ರತಿ ಬಾರಿಯೂ ಸಮರ್ಥನೀಯ ಚಿಂತನೆ ಮತ್ತು ಸಂರಕ್ಷಣೆಗಾಗಿ ವಿನ್ಯಾಸ ಎಂಬ ಮೂಲ ಗುರಿಯತ್ತ ನನ್ನನ್ನು ಮುನ್ನುಗ್ಗಿಸಿದೆ'' ಎನ್ನುತ್ತಾರೆ 34ರ ಹರೆಯದ ರಾಹುಲ್. ವಿವಿಧ ವಿಧಾನಗಳನ್ನು ಬಳಸಿಕೊಂಡು ಬದುಕುಳಿಯುವುದೇ ಎಬಿಸಿಡಿ ಹಿಂದಿನ ಪರಿಕಲ್ಪನೆ. ಇದು ಪ್ರತಿಯೊಬ್ಬ ವ್ಯಕ್ತಿಗೂ ಭಾವನಾತ್ಮಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ ಬೇರೆ ಬೇರೆ ಅರ್ಥವನ್ನು, ದೃಷ್ಟಿಕೋನವನ್ನು ಹೊಂದಿದೆ. ಯಾವುದೇ ಪ್ರದೇಶದಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಸಮರ್ಥನೀಯ ಉದ್ದೇಶಗಳನ್ನು ಪೂರೈಸುವುದು ಈ ಸಂಸ್ಥೆಯ ನಿಜವಾದ ಉದ್ದೇಶ. ಆರ್ಥಿಕ ಕೇಂದ್ರಿತ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳಲು ಮಾರುಕಟ್ಟೆ ಇನ್ನೂ ವಿಕಾಸ ಹೊಂದುತ್ತಿದೆ ಅನ್ನೋದು ರಾಹುಲ್ ಅವರ ಅಭಿಪ್ರಾಯ. ``ಸಿಎಸ್‍ಆರ್ ಚಟುವಟಿಕೆಗಳ ಮೂಲಕ ಮಾತ್ರವಲ್ಲ, ವ್ಯವಹಾರದ ತಂತ್ರಗಳ ಮೂಲಕವೂ ಸಮರ್ಥನೀಯ ಬ್ರಾಂಡ್‍ಗಳನ್ನು ನಿರ್ಮಿಸುವುದು ನಮ್ಮ ಉದ್ದೇಶ. ನಿಜವಾದ ಅರ್ಥದಲ್ಲಿ ವ್ಯಾಪಾರದ ನೀತಿಗಳ ಮರು ಕಾರ್ಯನೀತಿ ರೂಪಿಸುವಿಕೆ'' ಅಂತಾ ರಾಹುಲ್ ವಿವರಿಸ್ತಾರೆ.

`ದಿ ಸೆಕೆಂಡ್ ಲೈಫ್'ನಲ್ಲಿ ಉಸಿರಾಟ

ಎಬಿಸಿಡಿ 2 ಭಾಗಗಳಿರುವ ಸಂಸ್ಥೆ. ವಿನ್ಯಾಸ ಸೇವೆ ಮತ್ತು ಉತ್ಪನ್ನಗಳು `ಸಿ ಸೆಕೆಂಡ್ ಲೈಫ್' ಅಡಿಯಲ್ಲಿ ಬರುತ್ತವೆ. `ದಿ ಸೆಕೆಂಡ್ ಲೈಫ್' ಒಂದು ಸ್ವಯಂ ಚಾಲಿತ ಯೋಜನೆ. ಡಿಸೈನ್ ಸರ್ವೀಸ್‍ನಿಂದ ಬಂದ ಆದಾಯದಲ್ಲಿ ಕಾರ್ಯನಿರ್ವಹಿಸುತ್ತದೆ. ಉತ್ಪನ್ನ ಮತ್ತು ಸೇವೆಗಳ ಮೂಲಕ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ರಾಹುಲ್ `ದಿ ಸೆಕೆಂಡ್ ಲೈಫ್' ಅನ್ನು ಆರಂಭಿಸಿದ್ದಾರೆ. ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವಂತಹ ಸಣ್ಣ ಉದ್ಯಮದ ಉದಾಹರಣೆಗಳನ್ನು ಜನರ ಮುಂದಿಡಲು ರಾಹುಲ್ ಪ್ರಯತ್ನಿಸುತ್ತಿದ್ದಾರೆ. ಸಮರ್ಥನೀಯ ಮತ್ತು ಪಾರದರ್ಶಕ ಸ್ವಾವಲಂಬಿ ವ್ಯವಹಾರ ಮಾದರಿಯನ್ನು ಅಳವಡಿಸುವುದು ನಮ್ಮ ಉದ್ದೇಶ ಎನ್ನುತ್ತಾರೆ ರಾಹುಲ್. ಬೆಂಗಳೂರಿನ ಸುತ್ತಮುತ್ತ ಇರುವ ತ್ಯಾಜ್ಯ ಮಾರಾಟಗಾರರಿಂದ ರಾಹುಲ್ ಸಾಮಾಗ್ರಿಗಳನ್ನು ಸಂಗ್ರಹಿಸುತ್ತಾರೆ. ತಿರಸ್ಕøತ ಸಿನಿಮಾ ಪೋಸ್ಟರ್‍ಗಳು, ಬಿಳಿ ಹಾಳೆಗಳು, ಒಂದೇ ಬದಿಯ ಪೇಪರ್‍ನಂತಹ ವಸ್ತುಗಳನ್ನು ಅವರೇ ನಿರಂತರವಾಗಿ ಪೂರೈಕೆ ಮಾಡುತ್ತಾರೆ.

ತ್ಯಾಜ್ಯ ಸಂಪತ್ತಿನ ಹುಡುಕಾಟ

ಆಗಾಗ ವ್ಯಾಪಾರಿಗಳನ್ನು ಸಂಪರ್ಕಿಸುವ ರಾಹುಲ್, ಡಾಕ್ಯುಮೆಂಟ್ ಬಾಕ್ಸ್‍ನಂತಹ ಮರುಬಳಕೆಗೆ ಯೋಗ್ಯವಾದ ವಸ್ತುಗಳೇನಾದರೂ ಇವೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಸುತ್ತುವ ಪೇಪರ್‍ಗಳನ್ನು ಬಳಸಿ ಆ ಬಾಕ್ಸ್‍ಗಳನ್ನು ಮತ್ತೆ ಬಳಕೆಗೆ ಯೋಗ್ಯವನ್ನಾಗಿ ಮಾಡಲಾಗುತ್ತದೆ. ಕಾರ್ಪೊರೇಟ್ ದಾಖಲೆಗಳನ್ನು ಇಡಲು ಆ ಬಾಕ್ಸ್‍ಗಳನ್ನು ಮಲೇಷಿಯಾದಿಂದ ತರಿಸಲಾಗುತ್ತಿದೆ. ಒಮ್ಮೆ ಅದನ್ನು ಬಳಸಿ ಬಿಸಾಡಲಾಗುತ್ತದೆ. ಅಂತಹ ತ್ಯಾಜ್ಯಗಳನ್ನು ಗುರುತಿಸಿ ಅದನ್ನು ಬಳಸಿಕೊಳ್ಳಲಾಗುತ್ತದೆ.

ಜನರನ್ನು ಗಮನಿಸುತ್ತ, ಅವರ ವರ್ತನೆ, ಪರಪಸ್ಪರ ಬೆಸೆಯುವಿಕೆ, ಸಂದರ್ಭಗಳು ಹಾಗೂ ವ್ಯವಸ್ಥೆಯನ್ನು ನೋಡಿ ಪ್ರೇರಿತನಾಗಿದ್ದೇನೆ ಎನ್ನುತ್ತಾರೆ ರಾಹುಲ್. ಲಿಂಗ, ಜಾತಿ, ಧರ್ಮ, ಸಮಾಜದ ತಡೆ, ಆರ್ಥಿಕ ತಡೆ, ದುರಾಸೆ ಇದ್ಯಾವುದನ್ನೂ ಲೆಕ್ಕಿಸದೆ ಕೇವಲ ಮಾನವೀಯತೆ ಎಂಬ ಅಂಶವನ್ನಾಧರಿಸಿ ಬಹುತೇಕ ವ್ಯವಸ್ಥೆಗಳು ಕೆಲಸ ಮಾಡುತ್ತವೆ. ಆದ್ರೆ ಆರ್ಥಿಕ ಅಭಿವೃದ್ಧಿ ನೀತಿಗಳ ನಿರಂತರ ಪ್ರಭಾವ ಮಾನವೀಯತೆಯ ಮೇಲಾಗುತ್ತಿದೆ ಅನ್ನೋದು ರಾಹುಲ್ ಅವರ ಅಭಿಪ್ರಾಯ.

`ದಿ ಸೆಕೆಂಡ್ ಲೈಫ್'ನ ತಂಡ ವಿವಿಧ ವಸ್ತುಗಳನ್ನು ಬಳಸಿ ಎರಡನೇ ಸೆಟ್‍ನ ಉತ್ಪನ್ನಗಳನ್ನು ತಯಾರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶ ಗಿಟ್ಟಿಸುವ ನಿಟ್ಟಿನಲ್ಲಿ ಹೋಲ್‍ಸೇಲ್ ಆರ್ಡರ್‍ಗಳನ್ನು ಪಡೆಯುತ್ತಿದೆ. ಕರಕುಶಲ ವಸ್ತುಗಳ ವಿಭಾಗದಲ್ಲಿ ಅದರಲ್ಲೂ, ಕೈಯಿಂದ್ಲೇ ತಯಾರಿಸಿದ ಹಾಗೂ ಮರುಬಳಕೆಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಉದ್ಯೋಗ ಸೃಷ್ಟಿಸುವುದು ರಾಹುಲ್ ಅವರ ಉದ್ದೇಶ. ಇದುವರೆಗೆ `ದಿ ಸೆಕೆಂಡ್ ಲೈಫ್' ತಂಡ 1 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ.

image


ಮಾರುಕಟ್ಟೆ...

ಸಂರಕ್ಷಣೆ ಬಗ್ಗೆ ಹೆಚ್ಚು ಗಮನಹರಿಸುವುದರಿಂದ ಮರುಬಳಕೆಯ ಉತ್ಪನ್ನಗಳನ್ನ ಬಳಸಿ ಈ ಬಗ್ಗೆ ಜಾಗೃತಿ ಮೂಡಿಸುವುದು ಸುಲಭವಾಗ್ತಿದೆ. `ಅರೋರಾ ಫೈಬರ್ಸ್', `ಗ್ರೀನ್ ಪವರ್', `ಲಿಕ್ವಿಡ್ ಗೋಲ್ಡ್' ಮತ್ತು `ಕ್ಲೀನಿಂಗ್ ಇ-ವೇಸ್ಟ್‍ಲ್ಯಾಂಡ್'ನಂತಹ ಕಂಪನಿಗಳು ಕೂಡ ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡ ಈ ಬಗ್ಗೆ ಹೆಚ್ಚು ಒತ್ತುಕೊಡುತ್ತಿರುವುದು ಸ್ವಾಗತಾರ್ಹ. `ರಿಸೈಕಲ್ ಟ್ರೇಡ್ ಇಂಡಿಯಾ'ದ ಅಧ್ಯಯನದ ಪ್ರಕಾರ ಗುಜರಾತ್‍ನ ಶೇ.10ಕ್ಕೂ ಅಧಿಕ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮರುಬಳಕೆ ಮಾಡಲಾಗುತ್ತಿದೆ. ದೇಶದಲ್ಲಿ ವಾರ್ಷಿಕ 4.4 ಬಿಲಿಯನ್ ಪೌಂಡ್ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಲಾಗುತ್ತಿದೆ. ಆದ್ರೂ ಈ ಉತ್ಪನ್ನಗಳು ಮುಖ್ಯವಾಹಿನಿಯ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ.

`ಎ ಬೇಸಿಕ್ ಕಾನ್ಸೆಪ್ಟ್ ಡಿಸೈನ್' ತಯಾರಿಸುತ್ತಿರುವ ಅಪ್‍ಸೈಕಲ್ಡ್ ಉತ್ಪನ್ನಗಳಿಗೆ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. `ಹಿಪ್ ಸೈಕಲ್', `ಟೆರ್ರಾ ಸೈಕಲ್', `ಪ್ಲೇಬ್ಯಾಕ್ ಕ್ಲೋಥಿಂಗ್'ನಂತಹ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿವೆ. ಭಾರತದಲ್ಲಿ `ಹಾಥಿ ಚಾಪ್' ಉತ್ಪನ್ನಗಳು ಹೆಚ್ಚು ಜನಪ್ರಿಯವಾಗಿವೆ. ಇವು ಕೂಡ ಇದುವರೆಗೆ ಮುಖ್ಯವಾಹಿನಿಯ ಮಾರುಕಟ್ಟೆ ಪ್ರವೇಶಿಸಿಲ್ಲ. ಹಾಗಾಗಿ ಎಬಿಸಿಡಿ ಸಂಸ್ಥೆಯ ಭವಿಷ್ಯ ಏನಾಗಲಿದೆ ಅನ್ನೋದಕ್ಕೆ ಸಮಯವೇ ಉತ್ತರಿಸಲಿದೆ.

ಲೇಖಕರು: ಸಿಂಧು ಕಶ್ಯಪ್

ಅನುವಾದಕರು: ಭಾರತಿ ಭಟ್