ಬೆಂಗಳೂರಲ್ಲೊಬ್ಬ ಮಾರ್ಜಾಲ ಪ್ರಿಯ...!

ಕೃತಿಕಾ

0

ಹಳ್ಳಿಗಳಲ್ಲಿ ಮನೆಗೆ ಒಂದು ಬೆಕ್ಕು ಸಾಕುವ ಸಂಪ್ರದಾಯ ಇತ್ತು. ಆದ್ರೆ ಈಗ ಅದೂ ಕೂಡ ಕಡಿಮೆಯಾಗುತ್ತಿದೆ. ನಗರ ಪ್ರದೇಶಗಳಲ್ಲಿ ನಾಯಿಗಳನ್ನು ಮನೆಗಳಲ್ಲಿ ಸಾಕುವವರೇ ಹೆಚ್ಚು. ವಿವಿಧ ತಳಿಯ ನಾಯಿಗಳನ್ನು ಮನೆಗಳಲ್ಲಿ ಸಾಕೋದೇನು ಈ ಕಾಲದಲ್ಲಿ ವಿಭಿನ್ನ ಅಂತ ಅನ್ನಿಸೋದಿಲ್ಲ. ಆದ್ರೆ ಸಿಲಿಕಾನ್ ಸಿಟಿ ಬೆಂಗಳೂರಲ್ಲೊಂದು ಮನೆಯಿದೆ. ಈ ಮನೆಯ ತುಂಬ ನೂರಾರು ಬೆಕ್ಕುಗಳು ಸರಾಗವಾಗಿ ಓಡಾಡಿಕೊಂಡಿರುತ್ತವೆ. ಇಲ್ಲಿ ಅವಕ್ಕೆ ಯಾವ ಅಂಜಿಕೆಯೂ ಇಲ್ಲ. ಇವುಗಳನ್ನು ಕಂಟ್ರೋಲ್​​ ಮಾಡಲು ಅಂಕೆ, ಅಡೆತಡೆ ಯಾವುದೂ ಇಲ್ಲ. ಮನೆಯ ತುಂಬ ಬೆಕ್ಕುಗಳದ್ದೇ ಕಲರವ. ಮಿಯಾವ್.. ಮಿಯಾವ್ ಎನ್ನುತ್ತಾ ಮನೆಯ ತುಂಬಾ ಚೆಕ್ಕುಗಳದ್ದೇ ಆಟಾಟೋಪ. ಹೌದು ಬೆಕ್ಕನ್ನು ಕಂಡ್ರೆ ಓಡಿಸುವರ ಹಾಗೂ ಅದನ್ನು ಕೆಟ್ಟ ಶಕುನವೆಂದು ಪ್ರತಿಪಾದಿಸುವವರ ಮಧ್ಯೆ ವಿಭಿನ್ನವಾದ ಮಾರ್ಜಾಲ ಪ್ರಿಯರೊಬ್ಬರು ವಿಭಿನ್ನ ವ್ಯಕ್ತಿತ್ವವಾಗಿ ನಿಲ್ಲುತ್ತಾರೆ.

ಹೌದು ಬೆಂಗಳೂರಿನ ಸಂಪಂಗಿರಾಮ ನಗರದ ನಿವಾಸಿ ಅಕ್ಮಲ್ ಖಾನ್ ಎಂಬುವವರೇ ಹೀಗೆ ವಿಭಿನ್ನ ಹವ್ಯಾಸ ಹೊಂದಿದ ವ್ಯಕ್ತಿ. ಮೂಲತಃ ಹಾಸನದವರಾದ ಅಕ್ಮಲ್ , ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಉದ್ಯಮಿಯಾಗಿರುವ ಅಕ್ಮಲ್ ಖಾನ್, ತನ್ನ ಮನೆಯಲ್ಲಿ ತರಹೇವಾರಿಯ ಬೆಕ್ಕುಗಳಿಗೆ ಆಶ್ರಯ ನೀಡಿದ್ದಾರೆ.

ಈ ಮನೆಯಲ್ಲಿ ದೇಶೀಯ ತಳಿಯ ಬೆಕ್ಕುಗಳಿಂದ ಹಿಡಿದು ವಿದೇಶೀ ತಳಿಗಳ ಬೆಕ್ಕುಗಳೂ ಇವೆ. ಪರ್ಶಿಯನ್, ಕೆನಡಿಯನ್,ಬ್ರಿಟನ್ ಹೀಗೆ ವೈವಿಧ್ಯಮಯ ವಿದೇಶಿ ತಳಿಯ ಬೆಕ್ಕುಗಳ ಅಕ್ಮಲ್ ಖಾನ್ ಅವರ ಮನೆಯಲ್ಲಿವೆ. ಇಪ್ಪತ್ತಕ್ಕೂ ಹೆಚ್ಚು ಬೆಕ್ಕುಗಳನ್ಬು ಅಕ್ಮಲ್ ಖಾನ್ ತಮ್ಮ ಮನೆಯಲ್ಲಿ ಸಾಕಿದ್ದಾರೆ. ಬೆಕ್ಕುಗಳನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುವ ಅಕ್ಮಲ್ ಖಾನ್ ಅವುಗಳಿಗಾಗಿ ಪ್ರತ್ಯೇಕವಾಗಿ ಆಹಾರ ಪದಾರ್ಥಗಳನ್ನು ಖರೀದಿಸಿ ತರುತ್ತಾರೆ. ಮನೆಯಲ್ಲಿ ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಕುಣಿಯುತ್ತಾ ಆಟವಾಡುವ ಬೆಕ್ಕುಗಳನ್ನು ಕಂಡಾಗ ನಿಮ್ಮ ಒತ್ತಡವೆಲ್ಲ ಪರಿಹಾರವಾಗಿ ನೀವು ಅವಗಳೊಂದಿಗೆ ಆಟಕ್ಕಿಳಿಯುತ್ತೀರಾ ಎನ್ನುತ್ತಾರೆ ಅಕ್ಮಲ್ ಖಾನ್.

ಇನ್ನು ಮನೆಯಲ್ಲಿ ಎಲ್ಲೆಡೆಯೂ ಈ ಬೆಕ್ಕುಗಳಿಗೆ ಮುಕ್ತ ಅವಕಾಶವಿದೆ. ಮನೆಯ ಅಡುಗೆ ಮನೆಯಿಂದ ಹಿಡಿದು ಬೆಡ್ ರೂಂ ತನಕ. ಈ ಬೆಕ್ಕುಗಳು ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡಬಹುದು..! ಹೀಗಾಗಿ ಅವುಗಳು ತಮ್ಮ ಬೆಕ್ಕಿನ ನಡಿಗೆಯಿಂದ ಸದಾ ಗಮನ ಸೆಳೆಯುತ್ತಿರುತ್ತವೆ. ಬ್ರೌನ್,ಗ್ರೇ,ಬ್ಲಾಕ್,ವೈಟ್ ಸೇರಿದಂತೆ ವಿವಿಧ ಬಣ್ಣದ ಬೆಕ್ಕುಗಳಿವೆ. ಇನ್ನೂ ವಿಶೇಷ ಅಂದ್ರೆ ಈ ಮನೆಯಲ್ಲಿರೋ ಪ್ರತೀ ಬೆಕ್ಕಿಗೂ ತನ್ನದೇ ಆದ ಪ್ರತ್ಯೇಕ ತಟ್ಟೆಗಳಿವೆ. ಬೆಕ್ಕುಗಳು ತಮ್ಮ ತಮ್ಮ ತಟ್ಟೆಗಳಲ್ಲೇ ಊಟ ಮಾಡಬೇಕು. ಇಂತದ್ದೊಂದು ಶಿಸ್ತಿನ ನಿಯಮ ಬಿಟ್ಟರೆ ಈ ಬೆಕ್ಕುಗಳಿಗೆ ಮತ್ಯಾವ ಅಂಕೆಯೂ ಇಲ್ಲ. ಊಟದ ವೇಳೆಯಲ್ಲಿಯೂ ಈ ಬೆಕ್ಕುಗಳು ತಮ್ಮ-ತಮ್ಮ ತಟ್ಟೆಯಲ್ಲಿಯೇ ಆಹಾರ ತಿನ್ನುವ ಮೂಲಕ ಶಿಸ್ತು ಪಾಲಿಸುತ್ತವೆ. ಇದರ ಜೊತೆಗೆ ಬೆಕ್ಕುಗಳು ಪರಸ್ಪರ ಜಗಳ ಕೂಡ ಮಾಡಿಕೊಳ್ಳುವುದಿಲ್ಲ. ಅಷ್ಟು ಅನ್ಯೂನ್ಯವಾಗಿ ಮನೆ ಮಂದಿಯೆಲ್ಲ ಖುಷಿಪಡುವಂತೆ ಮನೆ ತುಂಬಾ ಓಡಾಡಿಕೊಂಡಿರುತ್ತವೆ ಈ ಬೆಕ್ಕುಗಳು.

ಮನೆಯ ಹಿರಿಯರನ್ನೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿರುವ ಕಲಿಗಾಲದಲ್ಲಿ ಅಕ್ಮಲ್ ಖಾನ್ ಬೆಕ್ಕುಗಳನ್ನೇ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಕೇವಲ ಅಕ್ಮಲ್ ಖಾನ್ ಮಾತ್ರವಲ್ಲದೇ ಅವರ ಪತ್ನಿ, ಮಗಳು ಕೂಡಾ ಅಪ್ಪನ ಈ ಬೆಕ್ಕಿನ ಪ್ರೇಮದಲ್ಲಿ ಕೈಜೋಡಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿ-ಪ್ರೇಮ,ಸಂಬಂಧಗಳು ಮರೀಚಿಕೆಯಾಗಿರುವ ಹೊತ್ತಿನಲ್ಲಿ ಅಕ್ಮಲ್ ಖಾನ್ ಮನೆಯಲ್ಲಿ ಮಕ್ಕಳಂತೆ ಬೆಕ್ಕುಗಳು ಮಮತೆಯ ಮಡಿಲನ್ನು ಪಡೆಯುತ್ತಿವೆ.