ನೀರು, ಆಹಾರವಿಲ್ಲದೆ 65 ವರ್ಷಗಳಿಂದ ಬದುಕಿರುವ ಸನ್ಯಾಸಿ!

ವಿಶಾಂತ್​

ನೀರು, ಆಹಾರವಿಲ್ಲದೆ 65 ವರ್ಷಗಳಿಂದ ಬದುಕಿರುವ ಸನ್ಯಾಸಿ!

Saturday April 16, 2016,

3 min Read

ಆಹಾರವಿಲ್ಲದೆ ಮೂರ್ನಾಲ್ಕು ದಿನಗಳ ಕಾಲ ಬದುಕಬಹುದು. ಆದರೆ ನೀರಿಲ್ಲದೆ ಒಂದು ದಿನವೂ ಇರಲು ಸಾಧ್ಯವಿಲ್ಲ. ಆದರೆ ಒಬ್ಬ ಸನ್ಯಾಸಿ ಕಳೆದ 66 ವರ್ಷಗಳಿಂದ ನೀರೂ ಕುಡಿದಿಲ್ಲ, ಒಂದು ಅಗುಳು ಅನ್ನವನ್ನೂ ಸೇವಿಸಿಲ್ಲ! ಅಸಾಧ್ಯ ಎನಿಸಿದರೂ ಇದು ಸತ್ಯ. ಕಾರಣ ಅವರ ಮೇಲೆ ಈಗಾಗಲೇ ಎರಡು ಬಾರಿ ವೈಜ್ಞಾನಿಕ ತಪಾಸಣೆ ಮಾಡಲಾಗಿದ್ದು, ವಿಜ್ಞಾನಕ್ಕೇ ಸವಾಲಾಗಿದ್ದಾರೆ.

image


ಇವರು ಪ್ರಹ್ಲಾದ್ ಜಾನಿ

ಅರೆ, ಇದೇನಿದು ಸನ್ಯಾಸಿ ಸೀರೆ ಧರಿಸಿದ್ದಾರಲ್ಲಾ? ಕಿವಿಗೆ ಓಲೆ, ಜುಮಕಿ, ಹಣೆಗೆ ಬೊಟ್ಟು, ಮೂಗಿಗೆ ಮೂಗುತಿ, ಕೈಯಲ್ಲಿ ಬಳೆ ಬೇರೆ ಹಾಕಿದ್ದಾರೆ. ಸನ್ಯಾಸಿನಿಯಂತಿದ್ದಾರಲ್ಲಾ ಅಂತ ಆಶ್ಚರ್ಯವಾಗುತ್ತಿದೆ ಅಲ್ಲವೇ? ಹೌದು ಇವರೇ ಪ್ರಹ್ಲಾದ್ ಜಾನಿ ಅಥವಾ ಮಾತಾಜಿ ಅಥವಾ ಚುನರಿವಾಲಾ ಮಾತಾಜಿ. 1929ರ ಆಗಸ್ಟ್ 13ರಂದು ರಾಜಸ್ಥಾನದ ಮೆಹ್ಸಾನಾ ಜಿಲ್ಲೆಯ ಚರಾಡಾದಲ್ಲಿ ಜನಿಸಿದ ಮಾತಾಜಿ ತಮ್ಮ ಏಳನೇ ವಯಸ್ಸಿನಲ್ಲೇ ಮನೆಯ ತೊರೆದರಂತೆ. ಕಾಡಿನಲ್ಲಿ ಬದುಕುತ್ತಾ ಸನ್ಯಾಸಿಗಳೊಂದಿಗೆ ಹಳ್ಳಿ ಹಳ್ಳಿ ಸುತ್ತುತ್ತಿದ್ದ ಅವರು, 11ನೇ ವಯಸ್ಸಿನಲ್ಲಿ ತಾಯಿ ಅಂಬಾ ಭವಾನಿಯ ಭಕ್ತರಾದರು. ಅಂಬಾ ಭವಾನಿಯಂತೆಯೇ ತಾವೂ ಕೂಡ ಆಗಿನಿಂದಲೇ ಕೆಂಪು ಸೀರೆ, ಒಡವೆ, ಹೂ ಧರಿಸಲಾರಂಭಿಸಿದರು. ಹೀಗಾಗಿಯೇ ಅವರಿಗೂ ಮಾತಾಜಿ ಎಂದು ಹೆಸರು ಬಂತು.

ಇದನ್ನು ಓದಿ: ಉದ್ಯೋಗ ಕ್ಷೇತ್ರದಲ್ಲಿ ಸಹಜ ಸೌಂದರ್ಯವಂತರಾಗಿ ಗುರುತಿಸಿಕೊಳ್ಳುವುದು ಹೇಗೆ.. ?

1960ರಿಂದ ಅನ್ನ ನೀರು ಮುಟ್ಟಿಲ್ಲ!

ವಿಶೇಷ ಅಂದರೆ ಅಂಬಾ ಭವಾನಿಯ ಅನುಗ್ರಹದಿಂದ ಪ್ರಹ್ಲಾದ್ ಮಾತಾಜಿ 1960ರಿಂದ ಅನ್ನ, ನೀರು ಮುಟ್ಟಿಲ್ಲವಂತೆ. ಹೀಗೆ ಅವರು ಆಹಾರ ಸೇವಿಸಿ ಹಾಗೂ ನೀರು ಕುಡಿದು ಈಗ 66 ವರ್ಷಗಳೇ ಕಳೆದಿವೆ. 1970ರ ದಶಕದಿಂದ ಗುಜರಾತ್‍ನಲ್ಲಿರುವ ಅಂಬಾಜಿ ದೇವಾಲಯದ ಸಮೀಪದ ಗುಹೆಯಲ್ಲಿ ವಾಸವಿರುವ ಮಾತಾಜಿ ಪ್ರತಿದಿನ ಬೆಳಗ್ಗೆ 4 ಗಂಟೆಗೇ ಏಳುತ್ತಾರೆ. ಬಹುತೇಕ ಸಮಯ ಧ್ಯಾನ, ಪೂಜೆಗಳಲ್ಲಿಯೇ ಕಳೆಯುವುದು ಅವರ ಮತ್ತೊಂದು ವಿಶೇಷತೆ. ಅವರ ಪ್ರಕಾರ ಅವರು ತಿನ್ನದಿದ್ದರೂ, ನೀರು ಕುಡಿಯದಿದ್ದರೂ, ಅಂಬಾ ಭವಾನಿ ತಾಯಿಯೇ ಅವರ ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತಾರಂತೆ. ಇದರಿಂದಾಗಿ ವರ್ಷಾನುಗಟ್ಟಲೆ ಉಪವಾಸವಿದ್ದರೂ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ.

image


ಏನಂತಾವೆ ವೈಜ್ಞಾನಿಕ ಪರೀಕ್ಷೆಗಳು?

ಪ್ರಹ್ಲಾದ್ ಜಾನಿ ಅವರ ಮೇಲೆ ಇದುವರೆಗೆ 2003ರಲ್ಲಿ ಹಾಗೂ 2010ರಲ್ಲಿ ಎರಡು ಬಾರಿ ವೈಜ್ಞಾನಿಕ ಪರೀಕ್ಷೆಗಳು ನಡೆದಿವೆ. ಅಹ್ಮದಾಬಾದ್‍ನ ಸ್ಟೆರ್ಲಿಂಗ್ ಹಾಸ್ಪಿಟಲ್ಸ್‍ನ ವೈದ್ಯ ಡಾ. ಸುಧೀರ್ ಶಾಹ್ ಅವರೇ, ಮಾತಾಜಿಯವರನ್ನು ಪರೀಕ್ಷೆಗೆ ಒಳಪಡಿಸಿದ್ದರು.

2003ರಲ್ಲಿ ಮೊದಲ ಬಾರಿಗೆ ನಡೆದ ಪರೀಕ್ಷೆಯಲ್ಲಿ 10 ದಿನಗಳ ಕಾಲ ಪ್ರಹ್ಲಾದ್ ಜಾನಿ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಆಗ ಅವರನ್ನು ಟಾಯ್ಲೆಟ್ ಇಲ್ಲದ ಒಂದು ಕೊಠಡಿಯಲ್ಲಿ ಇಡಲಾಗಿತ್ತು. ಆದರೆ ಅವರು ಆ ಹತ್ತೂ ದಿನಗಳ ಕಾಲ ಮಲಮೂತ್ರವಿಸರ್ಜನೆ ಮಾಡಿಲ್ಲವಂತೆ. ಹತ್ತು ದಿನಗಳ ನಂತರ ಅವರ ತೂಕ ಸ್ವಲ್ಪ ಕಡಿಮೆಯಾಗಿದ್ದು ಬಿಟ್ಟರೆ, ಇನ್ನಾವುದೇ ಬದಲಾವಣೆ ಆಗಿರಲಿಲ್ಲವಂತೆ. ಅವರು ಎಂದಿನಂತೆ ಆರೋಗ್ಯವಾಗಿಯೇ ಇದ್ದರು ಎನ್ನುತ್ತಾರೆ ವೈದ್ಯರು.

ಇನ್ನು 2010ರಲ್ಲಿ ಎರಡನೇ ಬಾರಿಗೆ ನಡೆದ ಪರೀಕ್ಷೆಯಲ್ಲಿ ಸ್ಟೆರ್ಲಿಂಗ್ ಹಾಸ್ಪಿಟಲ್ಸ್‍ನ ಡಾ. ಸುಧೀರ್ ಶಾಹ್ ಅವರೊಂದಿಗೆ ಡಿಫೆನ್ಸ್ ಇನ್ಸ್‍ಟಿಟ್ಯೂಟ್ ಆಫ್ ಫಿಸಿಯಾಲಜಿ ಅಲೀಡ್ ಸೈನ್ಸಸ್ ಅಥವಾ ದೀಪಾಸ್‍ನ 35 ಮಂದಿಯ ತಂಡವೂ ಪಾಲ್ಗೊಂಡಿತ್ತು. ಕಾರಣ ಪ್ರಹ್ಲಾದ್ ಜಾನಿ ಅವರು ಹೀಗೆ ದಿನಗಟ್ಟಲೆ, ತಿಂಗಳುಗಟ್ಟಲೆ ಮಾತ್ರವಲ್ಲ ವರ್ಷಗಟ್ಟಲೆ ಅನ್ನ, ನೀರು ಸೇವಿಸದೇ ಇರುವುದಕ್ಕೆ ವೈಜ್ಞಾನಿಕ ಕಾರಣ ಕಂಡು ಹಿಡಿದರೆ ಅದರಿಂದ ಗಡಿ ಕಾಯುವ ಸೈನಿಕರಿಗೆ, ಪ್ರಕೃತಿ ವಿಕೋಪಕ್ಕೆ ತುತ್ತಾದ ಜನಸಾಮಾನ್ಯರಿಗೆ ಹಾಗೂ ದಿನಗಟ್ಟಲೆ ಬಾಹ್ಯಾಕಾಶ ಯಾತ್ರೆ ಹೊರಡುವ ಗಗನಯಾತ್ರಿಗಳಿಗೆ ಸಹಾಯವಾಗುತ್ತೆ ಹಾಗೂ ವೈಜ್ಞಾನಿಕವಾಗಿ ತುಂಬ ಉಪಯೋಗವಾಗುತ್ತೆ ಎಂದು ದೀಪಾಸ್ ಈ ಬಾರಿ ಪ್ರಹ್ಲಾದ್ ಜಾನಿ ಅವರ ತಪಾಸಣೆಗೆ ಮುಂದಾಗಿತ್ತು.

image


ಈ ತಂಡ ಪ್ರಹ್ಲಾದ್ ಅವರ ಮೇಲೆ ನಾನಾ ಬಗೆಯ ಟೆಸ್ಟ್‍ಗಳನ್ನು ಮಾಡಿತು. ರಕ್ತ ಪರೀಕ್ಷೆ, ಸ್ಕ್ಯಾನಿಂಗ್, ದಿನದ 24 ತಾಸುಗಳೂ ಸಿಸಿಟಿವಿ ಕ್ಯಾಮರಾದಲ್ಲಿ ಅವರ ವೀಕ್ಷಣೆ ಮಾಡಲಾಯ್ತು. ಮಾತ್ರವಲ್ಲದೇ ಎಲ್ಲದರ ವೀಡಿಯೋ ರೆಕಾರ್ಡಿಂಗ್ ಕೂಡ ಮಾಡಿಕೊಳ್ಳಲಾಯ್ತು. ಈ ಸಂದರ್ಭದಲ್ಲಿ ಅವರು ಪ್ರತಿದಿನ ಕೇವಲ ಎರಡು ಬಾರಿ ನೀರು ಉಪಯೋಗಿಸುವುದು ಬೆಳಕಿಗೆ ಬಂತು. ಒಮ್ಮೆ ಬಾಯಿ ಮುಕ್ಕಳಿಸುವಾಗ ಮತ್ತೊಮ್ಮೆ ಸ್ನಾನ ಮಾಡುವಾಗ. ಇದನ್ನು ಬಿಟ್ಟರೆ ಅವರು ಮತ್ತೆ ನೀರನ್ನಾಗಲೀ ಅಥವಾ ಆಹಾರ ಪದಾರ್ಥಗಳನ್ನಾಗಲೀ ಮುಟ್ಟುತ್ತಿರಲಿಲ್ಲ. ಅಲ್ಲದೇ ಅವರ ಕೊಠಡಿಯಲ್ಲಿದ್ದ ಶೌಚಾಲಯಕ್ಕೂ ಈ ಟೆಸ್ಟ್ ಸಂದರ್ಭದಲ್ಲಿ ಬೀಗ ಜಡಿಯಲಾಗಿತ್ತು.

ಹೀಗೆ ಸಮಾರು 15 ದಿನಗಳ ತಪಾಸಣೆಯ ಬಳಿಕ ಅವರು ಏನನ್ನೂ ತಿನ್ನುವುದೂ ಬೆಳಕಿಗೆ ಬರಲಿಲ್ಲ, ಕುಡಿಯುವುದಿರಲಿ, ಟಾಯ್ಲೆಟ್‍ಗೆ ಒಮ್ಮೆಯೂ ಹೋಗಲಿಲ್ಲ. ಆದರೆ ಎಲ್ಲ ಪರೀಕ್ಷೆಗಳ ಫಲಿತಾಂಶವೂ ನಾರ್ಮಲ್ ಎಂದು ಬರುತ್ತಿತ್ತು. ಈ ಮೂಲಕ ಅವರು ಹೇಗೆ ಬದುಕಿದ್ದಾರೆ ಎಂಬುದು ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಆದರೆ ಕೆಲ ವಿದೇಶೀ ವೈದ್ಯಕೀಯ ಸಂಸ್ಥೆಗಳೂ ಸೇರಿದಂತೆ ಭಾರತದಲ್ಲಿಯೂ ಕೆಲ ವೈದ್ಯರ ತಂಡ ಇದನ್ನು ಅಲ್ಲಗೆಳೆದಿವೆ.

ವಿದೇಶಗಳಿಗೂ ಹರಡಿದೆ ಮಾತಾಜಿ ಮೋಡಿ!

ಆಸ್ಟ್ರಿಯಾ, ಜರ್ಮನಿ ಹಾಗೂ ಅಮೆರಿಕಾದ ಹಲವು ಟೀಮ್‍ಗಳು ಭಾರತಕ್ಕೆ ಬಂದು ಪ್ರಹ್ಲಾದ್ ಜಾನಿಯವರ ತಪಾಸಣೆ ನಡೆಸಿ, ಅವರ ಮೇಲೆ ಪ್ರಯೋಗ ಮಾಡುವುದಾಗಿ ತಿಳಿಸಿವೆ. ಅವರ ಕುರಿತು ಡಿಸ್ಕವರಿ ಚಾನೆಲ್‍ನಲ್ಲಿ ಡಾಕ್ಯುಮೆಂಟರಿ ಪ್ರಸಾರವಾಗಿದ್ದ, ಇಚಿಡಿಪೆಂಡೆಂಟ್ ಟೆಲಿವಿಷನ್ ನೆಟ್‍ವರ್ಕ್‍ನವರೂ ಕಾರ್ಯಕ್ರಮ ಮಾಡಿದ್ದಾರೆ. ಜೊತೆಗೆ ಆಸ್ಟ್ರಿಯಾದ ತಂಡವೊಂದು ಪ್ರಹ್ಲಾದ್ ಜಾನವಿಯವರನ್ನು ಭೇಟಿಯಾಗಿ ಅವರೂ ಒಂದು ಡಾಕ್ಯುಮೆಂಟರಿ ಮಾಡಿದ್ದಾರೆ. ಇಟಲಿಯ ರೈ 2 ಎಂಬ ವಾಹಿನಿಯಲ್ಲೂ ಮಾತಾಜಿ ಕುರಿತು ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ. 

ಇದನ್ನು ಓದಿ:

1. ಚಾಯ್ವಾಲಾ ಆಗಿದ್ದವ ''ಮಿಸ್ಟರ್ ದೆಹಲಿ''ಯಾದ ಯಶೋಗಾಥೆ

2. ಅಂಗವೈಕಲ್ಯವನ್ನೇ ಮೀರಿ ನಿಂತ ದಿಟ್ಟೆ : ಸ್ಟೇಜ್ ನಲ್ಲಿ ‘ಮಾಸ್ಟರ್’ ಆಫ್ ಸೆರೆಮನಿ..!

3. ಮಹಿಳಾ ಉದ್ಯಮಿಗಳಿಗಾಗಿ ``ಸ್ಟ್ಯಾಂಡ್‍ಅಪ್ ಇಂಡಿಯಾ''