"ಲೇಡಿ ಯು ಆರ್ ನಾಟ್ ಎ ಮ್ಯಾನ್"...ಮಹಿಳೆಯರಿಗೆ ಅಪೂರ್ವ ಪುರೋಹಿತ್ ಸಲಹೆ

ಟೀಮ್​​ ವೈ.ಎಸ್​​. ಕನ್ನಡ

"ಲೇಡಿ ಯು ಆರ್ ನಾಟ್ ಎ ಮ್ಯಾನ್"...ಮಹಿಳೆಯರಿಗೆ ಅಪೂರ್ವ ಪುರೋಹಿತ್ ಸಲಹೆ

Sunday December 06, 2015,

7 min Read

2013ರ ಮಾರ್ಚ್‍ನಲ್ಲಿ ಫೇಸ್‍ಬುಕ್ ಸಿಓಓ ಶೆರಿಲ್ ಸ್ಯಾಂಡ್‍ಬರ್ಗ್ ಅವರ `ಲೀನ್ ಇನ್' ಪುಸ್ತಕ ಪ್ರಕಟವಾಗಿತ್ತು. ಓದುಗರ ಮನಗೆದ್ದಿದ್ದ ಈ ಪುಸ್ತಕ ಬಿಸಿ ಬಿಸಿ ದೋಸೆಯಂತೆ ಮಾರಾಟವಾಗಿತ್ತು. ಅಷ್ಟೇ ಅಲ್ಲ 21ನೇ ಶತಮಾನದ ಮಹಿಳೆಯರ ಕಾರ್ಯಸ್ಥಳದ ಬಗೆಗಿನ ಸಂವಹನಕ್ಕಾಗಿ ಅತ್ಯಮೂಲ್ಯ ವಾಹಿನಿಯೊಂದು ತೆರೆದುಕೊಂಡಿತ್ತು. ಅದೇ ವರ್ಷ ಜುಲೈನಲ್ಲಿ `ರೇಡಿಯೋ ಸಿಟಿ 91.1'ನ ಸಿಇಓ ಅಪೂರ್ವ ಪುರೋಹಿತ್ ಕೂಡ `ಲೇಡಿ ಯು ಆರ್ ನಾಟ್ ಎ ಮ್ಯಾನ್ - ದಿ ಅಡ್ವೆಂಚರ್ಸ್ ಆಫ್ ಎ ವುಮೆನ್ ಎಟ್ ವರ್ಕ್' ಪುಸ್ತಕವನ್ನು ಪ್ರಕಟಿಸಿದ್ದರು. ಈ ಪುಸ್ತಕ ಸಹ ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ಪುಸ್ತಕ ಎನಿಸಿಕೊಂಡಿತ್ತು. ಒಂದೇ ವಿಚಾರಧಾರೆ ಹೊಂದಿದ್ದ ಪುಸ್ತಕಗಳು ಒಂದೇ ವರ್ಷ ಪ್ರಕಟವಾಗಿದ್ದು ನಿಜಕ್ಕೂ ಕಾಕತಾಳೀಯ. ಸ್ಯಾಂಡ್‍ಬರ್ಗ್ ಅವರು ಬರೆದ ಪುಸ್ತಕ ಅಮೂಲ್ಯವಾದದ್ದಾದ್ರೂ, ಭಾರತೀಯ ಮಹಿಳೆಯರು ಪುರೋಹಿತ್ ಅವರ ಕೆಲಸವನ್ನು ಹೆಚ್ಚು ಗುರುತಿಸಲು ಒಲವು ತೋರಿದ್ದರು. ಯಾಕಂದ್ರೆ ಅವರ ಪುಸ್ತಕ ಭಾರತದಲ್ಲಿ ನಡೆಯುತ್ತಿರುವ ಹೋರಾಟಗಳ ಸಂದರ್ಭಕ್ಕೆ ಉಚಿತವಾಗಿತ್ತು.

image


ಮಹಿಳಾವಾದಿ ಎಂದು ಕರೆಸಿಕೊಳ್ಳುವುದು ಅಪೂರ್ವ ಪುರೋಹಿತ್ ಅವರಿಗೆ ಇಷ್ಟವಿಲ್ಲ, ಹಣೆಪಟ್ಟಿಯನ್ನು ಅವರು ದ್ವೇಷಿಸುತ್ತಾರೆ. ಹಣೆಪಟ್ಟಿ ನಿಮ್ಮ ಚಿಂತನೆ ಮತ್ತು ಸಾಧನೆಯ ಕಲ್ಪನೆಗೆ ನಿರ್ಬಂಧ ವಿಧಿಸುತ್ತದೆ. ಅಪೂರ್ವ ವೃತ್ತಿ ಜೀವನ ಆರಂಭಿಸಿದಾಗಿನಿಂದ್ಲೂ ಕಾರ್ಯಸ್ಥಳದಲ್ಲಿ ಲಿಂಗ ಸಮತೋಲನ ಕಾಪಾಡಲು ಹೋರಾಟ ಮಾಡುತ್ತಿದ್ದಾರೆ. ಈಗ ಅವರು ಸಂಸ್ಥೆಯೊಂದರ ಸಿಇಓ. ದೇಶದ ಮಾಧ್ಯಮ ಲೋಕದಲ್ಲಿರುವ ಕೆಲವೇ ಕೆಲವು ಮಹಿಳಾ ಸಿಇಓಗಳ ಪೈಕಿ ಅಪೂರ್ವ ಕೂಡ ಒಬ್ಬರು. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಅವಕಾಶ ಮತ್ತು ವಿಕಾಸದ ಪಾತ್ರ ಎಷ್ಟು ಮಹತ್ವದ್ದು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅವರು ಹಂಚಿಕೊಂಡಿದ್ದಾರೆ.

ನೀವೀಗ ಏನು ಮಾಡುತ್ತಿದ್ದೀರಾ ಎಂಬುದನ್ನು ನಿಮ್ಮ ಮಾರ್ಗಕ್ಕೆ ವಿವರಿಸಿ

ಆತ್ಮ ಶೋಧನಾ ಕೃತಿ ಒಳ್ಳೆಯ ಕಥೆಯಾಗಬಲ್ಲುದೇ? ಯಾಕಂದ್ರೆ ಬದುಕು ಅವಕಾಶಗಳತ್ತ ನೆಗೆತ ಮತ್ತು ಸಂಪರ್ಕ ಜೋಡಣೆಯಿಂದ ಕೂಡಿದೆ. ಪದವಿಯಲ್ಲಿ ಭೌತಶಾಸ್ತ್ರ ಓದ್ತಾ ಇದ್ದಾಗ ನನ್ನಮ್ಮ, ಮ್ಯಾನೇಜ್‍ಮೆಂಟ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆಯುವಂತೆ ಒತ್ತಾಯಿಸುತ್ತಿದ್ದರು. ಯಾಕಂದ್ರೆ ನನ್ನ ಸೋದರ ಸಂಬಂಧಿಯೊಬ್ಳು ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಿಟಿಬ್ಯಾಂಕ್‍ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ಲು. ಅದೇ ಕನಸನ್ನು ಮಗಳಿಗಾಗಿಯೂ ತಾಯಿ ಕಟ್ಟಿಕೊಂಡಿದ್ರು. ಅವರೊಬ್ಬ ಅಸಾಧಾರಣ ಮಹಿಳೆ, ಜೊತೆಗೆ ನನ್ನ ತಾಯಿ. ಅವರೊಬ್ಬ ಶಿಕ್ಷಕಿ, ಮನಃಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿದ್ದಾರೆ. ಸಹೋದರ ಹಾಗೂ ನನ್ನ ನಡುವೆ ಯಾವತ್ತೂ ವಿಭಿನ್ನತೆ ತೋರಿಲ್ಲ. ನಾವಿಬ್ಬರೂ ಅವರ ಪಾಲಿಗೆ ಒಂದೇ. ಜೀವನದಲ್ಲಿ ಏನನ್ನಾದ್ರೂ ಸಾಧಿಸಿ ಅನ್ನೋ ಪ್ರೋತ್ಸಾಹದ ಮಾತುಗಳನ್ನು ಅವರು ಆಡುತ್ತಿದ್ರು.

ಕೊನೆಗೂ ಕ್ಯಾಟ್ ಪರೀಕ್ಷೆ ಬರೆದ ನಾನು ಬೆಂಗಳೂರು ಐಐಎಂನಲ್ಲಿ ಅವಕಾಶ ಗಿಟ್ಟಿಸಿಕೊಂಡೆ. ಕ್ಲಾಸ್‍ನಲ್ಲಿ ಯಾವಾಗ್ಲೂ ಟಾಪರ್ ಆಗಿದ್ದಾಕ್ಷಣ ಎಲ್ಲವನ್ನೂ ಮಾಡುವುದು ಅಸಾಧ್ಯ ಅನ್ನೋದು ಆಗ ನನಗೆ ಅರಿವಾಗಿತ್ತು. ಆ ಎರಡು ವರ್ಷಗಳು ತಂಗಾಳಿಯಂತೆ ಕಳೆದುಹೋಗಿದ್ದವು. ಇಂದಿನ ಜನತೆಯಂತೆ ನಾವು ವಿಕಸನಗೊಂಡಿರಲಿಲ್ಲ, ಆಗ ಇಂಟರ್ನೆಟ್ ಕೂಡ ಇರಲಿಲ್ಲ. ವಿಭಿನ್ನ ಜನರೊಂದಿಗೆ ಮಾತನಾಡುವ ಮೂಲಕವೇ ವೃತ್ತಿಯ ಆಯ್ಕೆಯನ್ನು ಹುಡುಕಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಹೀಗೆ ಒಮ್ಮೆ ಊಟಕ್ಕೆ ಕುಳಿತಿದ್ದಾಗ ಯಾರೋ `ಎಚ್‍ಟಿಎ'ನಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಳ್ಳುತ್ತಿದ್ರು. ಅದನ್ನು ಕೇಳಿ ನನ್ನಲ್ಲೂ ಉತ್ಸಾಹ ಮೂಡಿತ್ತು, ನಾನು ಬೇಸಿಗೆ ತರಬೇತಿಗಾಗಿ ತೆರಳಿದೆ. ಆ ಎರಡು ತಿಂಗಳ ಸಮಯವನ್ನು ನಾನು ತುಂಬಾ ಎಂಜಾಯ್ ಮಾಡಿದ್ದೆ, ಬ್ರಾಂಡ್, ಸೃಜನಶೀಲತೆ ಮತ್ತು ಕಥೆ ಹೇಳುವಿಕೆಯಲ್ಲೇ ನನ್ನ ಭವಿಷ್ಯವಿದೆ ಎಂದು ನನಗನಿಸಿತ್ತು.

`ಎಚ್‍ಟಿಎ'ನಲ್ಲಿ 2 ವರ್ಷ ಕೆಲಸ ಮಾಡಿದ ನನಗೆ, `ಝೀ ಟಿವಿ'ಯನ್ನು ಮುನ್ನಡೆಸುವಂತೆ ಆಹ್ವಾನ ಬಂದಿತ್ತು. ಜಾಹೀರಾತಿನಿಂದ ಹಿಡಿದು ಸೃಜನಶೀಲ ಉದ್ಯಮದ ನಿರ್ವಹಣೆ ನನಗೆ ಆಸಕ್ತಿದಾಯಕ ಬದಲಾವಣೆ ಎನಿಸಿತ್ತು. ಬಳಿಕ ಆಗಷ್ಟೇ ಆರಂಭವಾಗಿದ್ದ `ಟೈಮ್ಸ್ ಆಫ್ ಇಂಡಿಯಾ'ದ ದೂರದರ್ಶನ ವಿಭಾಗದ ಹೊಣೆ ಹೊತ್ತುಕೊಳ್ಳುವಂತೆ ಮಾಜಿ ಸಹೋದ್ಯೋಗಿಯೊಬ್ರು ಆಹ್ವಾನ ನೀಡಿದ್ರು. `ರೇಡಿಯೋ ಸಿಟಿ'ಯ ಷೇರುಗಳನ್ನೆಲ್ಲ ಖಾಸಗಿ ಬಂಡವಾಳಗಾರರು ಪಡೆದುಕೊಂಡಾಗ, ನನ್ನ ಕಾರ್ಯವೈಖರಿಯ ಅರಿವಿದ್ದವರೊಬ್ರು ಕಾರ್ಯಕ್ರಮ ನಡೆಸಿಕೊಡುವಂತೆ ಮನವಿ ಮಾಡಿಕೊಂಡ್ರು. ಉದ್ಯಮಿಯಾಗಿ ಇದು ನನ್ನ ಮೊದಲ ಹೆಜ್ಜೆ. ನನ್ನ ಬದುಕು ಖುಷಿಯ ಅಪಘಾತಗಳ ಸರಣಿಯಿಂದ್ಲೇ ತುಂಬಿ ಹೋಗಿತ್ತು. ಜೀವನದಲ್ಲಿ ನಾನು ಒಮ್ಮೆಯೂ ನನ್ನ `ಸಿವಿ' ಅಥವಾ `ರೆಸ್ಯೂಮ್' ತಯಾರಿಸಿಲ್ಲ. ನಾನು ಅಲಂಕರಿಸಿದ ಪ್ರತಿ ಹುದ್ದೆಯೂ ನನಗೆ ಅದಾಗಿಯೇ ಒಲಿದು ಬಂದಿತ್ತು. ಇದು ಎಲ್ಲರಿಗೂ ಪಾಠವಾಗಬಲ್ಲದು.

ನಾವ್ಯಾರೂ ಜೀವನದ ಬಗ್ಗೆ ಯೋಜನೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಪ್ರತಿದಿನವೂ ನಾವು ಜೀವಿಸಬೇಕು, ನಮಗಾಗಿ ಗೌರವ ಸಂಪಾದಿಸಬೇಕು. ನನ್ನನ್ನು `ಝೀ ಟಿವಿ'ಯ ಅಧ್ಯಕ್ಷೆಯನ್ನಾಗಿ ಮಾಡಿದ್ದ ಬಾಸ್, ಮುಂದೊಮ್ಮೆ ನಾನು ಎಲ್ಲರೂ ಹುಬ್ಬೇರಿಸುವಂತಹ ಸಾಧನೆ ಮಾಡುತ್ತೇನೆಂದು ಬೆಟ್ ಕಟ್ಟಿದ್ರು. ಯಾಕಂದ್ರೆ ನಾನು ಹೇಗೆ ಕೆಲಸ ಮಾಡುತ್ತೇನೆಂಬುದು ಅವರಿಗೆ ಗೊತ್ತಿತ್ತು. ತಯಾರಿ, ಅವಕಾಶವನ್ನು ಭೇಟಿಯಾದಾಗ್ಲೇ ಅದೃಷ್ಟ ನಿಮ್ಮದಾಗೋದು. `ಝೀ ಟಿವಿ'ಯ ಅಧ್ಯಕ್ಷೆಯಾಗುತ್ತೇನೆಂದು ನನಗೆ ಗೊತ್ತಿರಲೇ ಇಲ್ಲ. ನನ್ನ ಪರಿಶ್ರಮ, ಪ್ರಾಮಾಣಿಕತೆ ಹಾಗೂ ಬುದ್ಧಿವಂತಿಕೆ ನನ್ನನ್ನು ಅಲ್ಲಿಗೆ ಕರೆದೊಯ್ದಿತ್ತು. ನಮ್ಮ ಗೌರವ ಹೆಚ್ಚಿಸಿಕೊಳ್ಳುವತ್ತ ನಾವು ಗಮನಹರಿಸಿದ್ರೆ ಸಾಕು, ನಮ್ಮನ್ನು ಯಾರೋ ಗಮನಿಸುತ್ತಿರುತ್ತಾರೆ, ಬದುಕನ್ನು ಬದಲಾಯಿಸುತ್ತಾರೆ.

ನೀವು ಯಾವುದರಲ್ಲಿ ನಿಪುಣರಿದ್ದೀರೋ ಅದನ್ನೇ ವೃತ್ತಿಯಾಗಿ ಆಯ್ದುಕೊಳ್ಳಬೇಕೆಂಬ ನಿರ್ಧಾರ ಮಾಡಬೇಡಿ...

ನಾವು ಯಾವುದರಲ್ಲಿ ನಿಪುಣರಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ನಮ್ಮ ಶೈಕ್ಷಣಿಕ ಸಾಧನೆ ಆಧಾರದ ಮೇಲೆ ನಾವು ವೃತ್ತಿಯನ್ನು ಆಯ್ದುಕೊಳ್ಳುತ್ತೇವೆ. ಸಮೀಪವರ್ತಿಗಳ ಒತ್ತಡ, ಒಳ್ಳೆ ಸಂಬಳ ಇದಕ್ಕೆಲ್ಲ ತಲೆಬಾಗುತ್ತೇವೆ. ಅವಕಾಶಗಳ ಅನ್ವೇಷಣೆ, ಕಲ್ಪನೆಗಳ ಶೋಧನೆಯಲ್ಲಿ ತೊಡಗಿದಾಗ ನಮ್ಮ ಜೀವನದ ನಿಜವಾದ ಆಸಕ್ತಿ ಎಲ್ಲಿದೆ ಎಂಬುದರ ಅರಿವಾಗುತ್ತದೆ. ನೀವು ಯಾವುದಾದರೂ ಒಂದು ವಿಷಯದಲ್ಲಿ ನಿಪುಣರೆಂದು ನಿರ್ಧಾರ ಮಾಡಿಕೊಂಡ್ರೆ, ಅದರ ಕಡೆ ಮಾತ್ರ ಗಮನ ಹರಿಸುತ್ತೀರಾ. ಆಗ ಬೇರೆ ಎಲ್ಲ ಅವಕಾಶಗಳ ಬಾಗಿಲು ಮುಚ್ಚಿ ಹೋಗುತ್ತದೆ.

image


ವಿಷಯದ ಮೇಲಿನ ಪರಿಪಕ್ವತೆಯ ಬದಲು ಒಬ್ಬ ವ್ಯಕ್ತಿಯಾಗಿ ನೀವು ಹೊರಹೊಮ್ಮಬೇಕು. ವೃತ್ತಿಯ ಆಯ್ಕೆ ಬಗ್ಗೆ ವಿಶಾಲ ದೃಷ್ಟಿಕೋನವಿರಲಿ. ಜೀವನದ ಬಗೆಗಿನ ನಿಮ್ಮ ತತ್ವ, ಕೆಲಸ ಮತ್ತು ಬೆಳವಣಿಗೆಯನ್ನು ಪ್ರೋತ್ಸಾಹಿಸುವ ವರ್ತನೆಯ ಬಗ್ಗೆ ಮಾತ್ರ ಗಮನಕೊಡಿ.

ನಿಮ್ಮ ಸುದೀರ್ಘ ಜೀವನದ ಪಥದಲ್ಲಿ ಈ ಪುಸ್ತಕ ಒಂದು ಕ್ಷಣ ನಿಮ್ಮನ್ನು ಕುದಿಸುತ್ತದೆ. ಪೆನ್ನು ಹಾಗೂ ಕಾಗದವನ್ನು ಹೊರತೆಗೆಯಲು ಯಾವುದಾದರೂ ನಿರ್ದಿಷ್ಟ ಘಟನೆ ಕಾರಣವಾಗಿದೆಯಾ?

ನನ್ನ ತಂಡದೊಡನೆ ಕೆಲಸ ಮಾಡುವ ವಿಧಾನ, ಕಲಿಸುವಿಕೆ ಎಲ್ಲವೂ ಕಥೆ ಹೇಳುವ ಮೂಲಕವೇ. ಒಬ್ಬ ನಾಯಕಿಯಾಗಿ ಕಥೆಗಳು ನನ್ನ ಕೆಲಸದ ಅವಿಭಾಜ್ಯ ಅಂಗ. ನಾನು ಈ ಪುಸ್ತಕವನ್ನು ಬರೆಯಲು 3 ತಿಂಗಳು ಸಮಯ ತೆಗೆದುಕೊಂಡಿದ್ದೇನೆಂದು ಸಂದರ್ಶನವೊಂದರಲ್ಲಿ ಹೇಳಿದ್ದೆ. ಆದ್ರೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ನನ್ನ ಸಹೋದ್ಯೋಗಿಯೊಬ್ಬಳು ಅಲ್ಲಗಳೆದಿದ್ಲು, ಈ ಪುಸ್ತಕ ಬರೆಯಲು ಅಪೂರ್ವ ಅವರಿಗೆ 3 ತಿಂಗಳು ಬೇಕಾಗಿಲ್ಲ, ಇಂತಹ ಕಥೆಗಳನ್ನು ಅವರು 15 ವರ್ಷಗಳಿಂದಲೂ ಹೇಳುತ್ತ ಬಂದಿದ್ದಾರೆ ಎಂದಿದ್ಲು ಆಕೆ.

ಯಾವುದನ್ನು ನಾವು ಗಮನಿಸುವುದಿಲ್ಲವೋ ಅಲ್ಲೇ ಅವಕಾಶಗಳಿರುತ್ತವೆ. ನನ್ನ ಪತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಶಿಫ್ಟ್ ಆಗಿದ್ರು. ಆದ್ರೆ ನನ್ನ ಕಚೇರಿ ಮುಂಬೈನಲ್ಲಿದ್ದಿದ್ರಿಂದ ನಾನು ಮನಸ್ಸಿಲ್ಲದ ಮನಸ್ಸಿನಿಂದ ಬೆಂಗಳೂರಿಗೆ ಬರಬೇಕಾಯ್ತು. ವಾರದ 2-3 ದಿನಗಳನ್ನು ಮುಂಬೈನಲ್ಲಿ ಕಳೆದ್ರೆ, ಉಳಿದ ಸಮಯ ನಾನು ಬೆಂಗಳೂರಲ್ಲಿ ಇರುತ್ತಿದ್ದೆ. ಕೆಲ ದಿನಗಳಲ್ಲೇ `ವುಮೆನ್ ಎಟ್ ವರ್ಕ್' ಅನ್ನೋ ಹೆಸರಲ್ಲಿ ಬ್ಲಾಗ್ ಒಂದನ್ನು ಬರೆಯಲು ಆರಂಭಿಸಿದೆ. ಇದು ಹಲವರನ್ನು ಆಕರ್ಷಿಸಿತ್ತು, ಪ್ರಕಾಶಕರು ಕೂಡ ನನ್ನ ಬರವಣಿಗೆ ಬಗ್ಗೆ ಆಸಕ್ತಿ ತೋರಿದ್ರು. ನನ್ನ ಬ್ಲಾಗ್ ಬರವಣಿಗೆಯನ್ನೇ ಪುಸ್ತಕವನ್ನಾಗಿ ಪ್ರಕಟಿಸಲು ಮುಂದಾದ್ರು. ಬಳಿಕ ನಾನು ಬ್ಲಾಗ್ ಬರವಣಿಗೆಯನ್ನೆಲ್ಲ ಅಧ್ಯಾಯವನ್ನಾಗಿ ಮಾಡಿ ಪುನರ್‍ವಿಂಗಡಿಸಿದೆ. ಮೂರು ತಿಂಗಳೊಳಗೆ ಪುಸ್ತಕ ಸಂಪೂರ್ಣ ಸಿದ್ಧವಾಗಿತ್ತು. ಪ್ರಕಟವಾಗ್ತಿದ್ದಂತೆ ಅತಿ ಹೆಚ್ಚು ಮಾರಾಟವಾದ ಪುಸ್ತಕ ಎನಿಸಿಕೊಂಡಿತ್ತು, ಜೊತೆಗೆ ಬೇರೆ ಬೇರೆ ಸ್ಥಳೀಯ ಭಾಷೆಗಳಿಗೂ ಅದನ್ನು ಭಾಷಾಂತರಿಸಲಾಗಿದೆ.

ಕಾರ್ಯಕ್ಷೇತ್ರ ಪರಿಸರದಲ್ಲಿ ಫಿಟ್ ಆಗಿರಬೇಕು ಎಂಬ ಕಾರಣಕ್ಕೆ ಮಹಿಳೆಯರು ಸಾಧ್ಯವಾದಷ್ಟು ಲೈಂಗಿಕ ಬದುಕಿನಿಂದ ದೂರವಿರುತ್ತಾರೆ ಅಂತಾ ಸ್ಯಾಂಡ್‍ಬರ್ಗ್ `ಲೀನ್ ಇನ್' ಪುಸ್ತಕದಲ್ಲಿ ಬರೆದಿದ್ದಾರೆ. ನೀವು ಕೂಡ ದೇಶದ ಮಹಿಳಾ ಸಿಇಓಗಳಲ್ಲೊಬ್ಬರು. ಆ ಪುಸ್ತಕ ಭಾರತದ ಕುರಿತಾಗಿಯೇ ಬರೆದದ್ದು. ನಿಮ್ಮ ವೃತ್ತಿ ಬದುಕಿನಲ್ಲಿ ನಿಮಗೆ ಎಂದಾದರೂ ಅಭದ್ರತೆ ಕಾಡಿದೆಯಾ? ಪುಸ್ತಕ ಬರೆಯುವ ಮುನ್ನ ಅಂತಹ ಕಮೆಂಟ್ ಹಾಗೂ ಟೀಕೆಗಳನ್ನು ಎದುರಿಸಿದ್ದೀರಾ?

ನನ್ನ ಬಗ್ಗೆ ನಾನು ಮಹಿಳೆ ....ಪುರುಷ ಎಂಬಂತೆ ಯೋಚನೆ ಮಾಡುವುದಿಲ್ಲ. ಐಐಎಂನಲ್ಲಿ 120 ಹುಡುಗರು ಹಾಗೂ 9 ಹುಡುಗಿಯರಿದ್ರು. ನೀನು ಹುಡುಗಿ ಎಂಬ ಕಾರಣಕ್ಕೆ ನಿನಗೆ ಒಳ್ಳೆ ಅಂಕ ಬಂದಿದೆ ಅನ್ನೋ ಮಾತುಗಳೆಲ್ಲ ಹರಿದಾಡುತ್ತಿದ್ವು. ಅವ್ಯಕ್ತವಾದ ಲಿಂಗ ಭೇದ ಅಲ್ಲಿ ಇದ್ದೇ ಇದೆ. ಆದ್ರೆ ಮುಂಬೈನಲ್ಲಿ ನನ್ನ ಕೆಲಸದ ಮೂಲಕ ಎಲ್ಲರೂ ನನ್ನನ್ನು ಗುರುತಿಸಿದ್ದಾರೆ. ನಾವು ಬೆಂಗಳೂರಿಗೆ ಬಂದಾಗ ಎಲ್ಲರೂ ನನ್ನ ಪತಿ, ಮತ್ತವರ ಕೆಲಸದ ಬಗ್ಗೆ ಕೇಳುತ್ತಿದ್ರು. ಒಳ್ಳೆ ಮನೆಗೆಲಸದವರು ಸಿಕ್ಕಿದ್ದಾರಾ ಎಂದೆಲ್ಲ ಕೇಳುತ್ತಿದ್ದರೇ ಹೊರತು ನಾನು ಕೆಲಸ ಮಾಡುತ್ತಿದ್ದೇನೋ? ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ.

ಮಹಿಳೆಯರು ತಮ್ಮ ಸಾಮರ್ಥ್ಯ ವನ್ನು ಅಪ್ಪಿಕೊಳ್ಳಲು ಮುಂದಡಿ ಇಡುತ್ತಿಲ್ಲ ಎಂಬ ಕಾರಣಕ್ಕೆ ಈ ಪುಸ್ತಕ ಬರೆದಿದ್ದೇನೆ. ಅವರು ಅದರಿಂದ ಪಲಾಯನ ಮಾಡುತ್ತಿದ್ದಾರೆ. ಮಹಿಳಾ ಸಿಇಓಗಳ ಬಗ್ಗೆ ಯಾವುದೇ ವಿಶೇಷತೆಯಿಲ್ಲ ಅನ್ನೋದನ್ನು ತಿಳಿಸುವುದು ನನ್ನ ಉದ್ದೇಶ. ನಾವು ಪುರುಷರಿಗೆ ಸರಿಸಮಾನರು. ನಾವು ಪರಿಶ್ರಮಪಡುತ್ತೇವೆ, ಸುಲಭವಾಗಿ ಯಾವುದನ್ನೂ ಬಿಟ್ಟುಕೊಡುವುದಿಲ್ಲ. ಈಗ ನೀವು ಮುಂದಡಿ ಇಡದೇ ಇದ್ರೆ 10 ವರ್ಷಗಳ ಬಳಿಕ ಒಳ್ಳೆಯ ವೃತ್ತಿ ಜೀವನ ನಿಮ್ಮದಾಗಿರುವುದಿಲ್ಲ. ಈಗ ನೀವು ಪಲಾಯನ ಮಾಡಿದ್ರೆ ಮರಳಿ ಬರುವುದು ಅಸಾಧ್ಯ.

ನಿಮ್ಮ ಬದಲು ಒಬ್ಬ ಪುರುಷ ಈ ಪುಸ್ತಕವನ್ನು ಬರೆದಿದ್ರೆ ಅದನ್ನು ಯುವಜನತೆಗೆ ನಾಯಕತ್ವದ ಪಾಠ ಹೇಳುವ ಪುಸ್ತಕ ಎಂದೇ ಹೆಸರಿಸಲಾಗುತ್ತಿತ್ತು. ಎಲ್ಲಾ ವೃತ್ತಿ ಬುದ್ಧಿವಂತಿಕೆಯಿಂದ ತುಂಬಿದ್ದರೂ ಅದನ್ನು ಕೇವಲ ಮಹಿಳೆಯರಿಗೆ ಸೀಮಿತವಾಗಿಸುತ್ತಿರುವುದೇಕೆ? ಇದರಿಂದ ನಿಮಗೆ ಹತಾಶೆಯಾಗಿದೆಯೇ?

ಬದುಕಿನುದ್ದಕ್ಕೂ ನಾನು ಗೆಲ್ಲಲಸಾಧ್ಯವಾದಂತಹ ಹೋರಾಟಗಳನ್ನು ನಿರ್ಲಕ್ಷಿಸಿದ್ದಕ್ಕೆ ನನಗೆ ಸಂತೋಷವಿದೆ. ಜನರ ಪೂರ್ವಾಗ್ರಹ ಪೀಡಿತ ಆಲೋಚನೆಗೆ ಏನು ಮಾಡಲು ಸಾಧ್ಯ? ಎಲ್ಲರನ್ನೂ ಮಣಿಸಲು ನನ್ನಿಂದ ಸಾಧ್ಯವಿಲ್ಲ. ಅರ್ಥಪೂರ್ಣ ಬದಲಾವಣೆ ತರಲು ನನ್ನ ಅನುಭವಗಳನ್ನು ಹಂಚಿಕೊಳ್ಳಬಹುದಷ್ಟೆ. ನಿಧಾನವಾಗಿಯಾದರೂ ಬದಲಾವಣೆ ನಿಶ್ಚಿತ.

ಮೊದಲು ನಿಮ್ಮ ಹಕ್ಕುಗಳಿಗಾಗಿ ಮಹಿಳೆಯರು ಹೋರಾಡಿದ್ದರು, ಈಗ ಮಹಿಳೆಯರ ಹಕ್ಕುಗಳಿಗಾಗಿ ನಾನು ಹೋರಾಡುತ್ತಿದ್ದೇನೆ ಎಂದೆಲ್ಲ ನೀವು ಹೇಳಿದ್ದೀರಾ. ಆಸ್ತಿ ಮತ್ತು ಮತವನ್ನು ನಾವು ಆನುವಂಶಿಕವಾಗಿ ಪಡೆಯಬಹುದು. ಹೊಸ ತಲೆಮಾರಿನವರು ಇದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆಂದು ನಿಮಗನಿಸುತ್ತಿದೆಯೇ? ನಮಗಿಂತ ಮೊದಲು ಬಂದವರ ಅನುಕೂಲತೆಗಳನ್ನು ಬಳಸಿಕೊಳ್ಳುವಲ್ಲಿ ನಾವು ನಿರತರಾಗಿದ್ದೀವಾ? ಅದನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿಲ್ಲವೇ?

ಇದನ್ನು ನಾನು ಒಪ್ಪಲು ಸಾಧ್ಯವಿಲ್ಲ. ಕಠಿಣ ಪಂದ್ಯಗಳನ್ನು ಗೆದ್ದಂತೆ ಅನಿಸುತ್ತಿದೆ. ಸಮಾನತೆ ಕಾಗದದ ಮೇಲಾದರೂ ಇದೆ, ಅದು ನಮ್ಮದು. ಆದ್ರೆ ಇದು ಹಾಗಲ್ಲ, ಸಮರ ಭೂಮಿಯೇ ಸ್ಥಳಾಂತರವಾಗಿದೆ. ಮಹಿಳೆಯರು ಅತಿಯಾದ ನಿರೀಕ್ಷೆಗಳಿಂದ ಹುಚ್ಚರಾಗುತ್ತಿದ್ದಾರೆ, ವಿಭಿನ್ನ ಪಾತ್ರಗಳನ್ನು ನಾವು ನಿಭಾಯಿಸಬೇಕು ಎಂಬ ಒತ್ತಡ ಅವರಲ್ಲಿದೆ. ನಮ್ಮಂತವರು ಅವರನ್ನು ಉತ್ತೇಜಿಸಬಹುದಷ್ಟೆ. ಅವರವರ ಕದನದಲ್ಲಿ ಅವರೇ ಹೋರಾಡಬೇಕು. ನಿರೀಕ್ಷೆಗಳನ್ನು ನೀವು ಹೇಗೆ ಪೂರೈಸುತ್ತೀರಾ ಎಂಬುದಕ್ಕಿಂತ, ನಿಮ್ಮ ವ್ಯಕ್ತಿತ್ವಕ್ಕಾಗಿ ಎಂತಹ ನಿರೀಕ್ಷೆಗಳನ್ನು ಒಡ್ಡಿಕೊಳ್ಳುತ್ತಿರಾ ಎಂಬುದು ಬಹಳ ಮುಖ್ಯ.

ಮಹಿಳೆ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ ಎಂಬ ಇಂದ್ರಾ ನೂಯಿ ಅವರ ಕಮೆಂಟ್ ಬಗ್ಗೆ ಮಾತನಾಡದೇ ಇದ್ರೆ ಮಹಿಳೆಯರ ಸಮಾನತೆ ಮೇಲಿನ ಚರ್ಚೆ ಅಪೂರ್ಣವಾಗುತ್ತದೆ. ಇಂದ್ರಾ ನೂಯಿ ಅವರ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನನ್ನ ಪ್ರಕಾರ ಅವರನ್ನು ತಪ್ಪಾಗಿ ಅರ್ಥೈಸಲಾಗಿದೆ. ನೀವೊಬ್ಬ ಸಿಇಓ ಆಗಿದ್ರೂ, ಪತ್ನಿ ಮತ್ತು ತಾಯಿಯೂ ಕೂಡ ಹೌದು, ಆ ಪಾತ್ರಗಳನ್ನು ನಿಮ್ಮ ಕೈಲಾದ ಮಟ್ಟಿಗೆ ನಿಭಾಯಿಸಬೇಕೆಂಬುದು ಇಂದ್ರಾ ನೂಯಿ ಅವರ ಮಾತಿನ ಅರ್ಥ. ಪುರುಷನಾಗಿರಲಿ, ಅಥವಾ ಮಹಿಳೆಯಾಗಿರಲಿ ಕಾರ್ಯಕ್ಷೇತ್ರದಲ್ಲಿ ಮಾತ್ರ ನೀವು ಸಿಇಓ. ಒಮ್ಮೆ ಮನೆ ಪ್ರವೇಶಿಸಿದರೆ ನೀವು ಆ ಕುಟುಂಬದ ಸದಸ್ಯರಷ್ಟೆ. ಇದು ವಾಸ್ತವ, ನಾವು ಆದ್ಯತೆ ಮೇರೆಗೆ ಕೆಲಸ ಮಾಡಬೇಕಿದೆ.

ಕೆಲಸದ ಅವಧಿ ಬಳಿಕ ಪುರುಷರು ಹೊರಗಡೆ ಕಾಲ ಕಳೆಯುತ್ತಾರೆ. ಕುಡಿಯೋದು, ಪಾರ್ಟಿ ಮಾಡೋದು, ಗಾಲ್ಫ್ ಆಡೋದು ಮಾಡ್ತಾರೆ. ಆದ್ರೆ ಮಹಿಳೆಯರು ಕಚೇರಿ ಮುಗಿಸಿ ಮನೆಗೆ ಬೇಕಾದ ದಿನಸಿ ಖರೀದಿಗೆ ಹೊರಡುತ್ತಾರೆ. ಮಕ್ಕಳ ಹೋಮ್‍ವರ್ಕ್ ತಿದ್ದುತ್ತಾರೆ. ಅದರಲ್ಲೇನು ಸಮಾನತೆ ಇದೆ?

ನಿಜ, ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಶ್ರಮಪಡುತ್ತಾರೆ. ಪತ್ನಿಯರು ಮೌನವಾಗಿ ಕಾರ್ಮಿಕರಂತೆ ಪತಿಯ ಯಶಸ್ಸಿಗಾಗಿ ಶ್ರಮಿಸದೇ ಇದ್ರೆ ಪುರುಷರು ಮುಂದೆ ಬರುತ್ತಿರಲಿಲ್ಲ. ಎಲ್ಲವನ್ನೂ ನಿಭಾಯಿಸಬಲ್ಲ ಛಾತಿ ಮಹಿಳೆಯರಿಗಿದೆ. ಪತ್ನಿ, ತಾಯಿ, ಸಹೋದರಿ, ಮಗಳು ಹೀಗೆ ಎಲ್ಲ ಪಾತ್ರವನ್ನೂ ಯಶಸ್ವಿಯಾಗಿ ಒಬ್ಬ ಸ್ತ್ರೀ ನಿಭಾಯಿಸುತ್ತಾಳೆ. ಪುರುಷರು ಕೇವಲ ಒಂದು ಪಾತ್ರವನ್ನು ಮಾತ್ರ ನಿರ್ವಹಿಸುತ್ತಾರೆ.

image


``ಕಾರ್ಯಕ್ಷೇತ್ರದಲ್ಲಿ ನಿಮ್ಮನ್ನು ನೀವು ಡಿಸೆಕ್ಷುವಲೈಸ್ ಮಾಡಿಕೊಳ್ಳುವ ಅಗತ್ಯವಿಲ್ಲ, ಆದ್ರೆ ಹೆಣ್ಣು ಎಂದು ತೋರ್ಪಡಿಸಿಕೊಳ್ಳಬೇಡಿ'' ಅನ್ನೋದು ನಿಮ್ಮ ಮಂತ್ರ. ಆದ್ರೆ ತುಂಬಾ ಹಿಂದಿನಿಂದ್ಲೂ ಮಹಿಳೆಯರು ಕಾರ್ಯಕ್ಷೇತ್ರದಲ್ಲಿರುವುದರಿಂದ ಹಾನಿಯಾಗಿ ಹೋಗಿದೆ. ಸಾಮಾಜಿಕ ತಪ್ಪುಗಳು, ಶಿಕ್ಷಣದಲ್ಲಿ ತಾರತಮ್ಯ, ಗುಪ್ತ ಪಠ್ಯಕ್ರಮ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಲಿಂಗ ಭೇದಭಾವವನ್ನು ತಹಬದಿಗೆ ತರಲು ಸಾಧ್ಯವಾಗಿಲ್ಲ. ಇದಕ್ಕೆ ಪರಿಹಾರವೇನು?

ನಾನು ಮತ್ತೊಮ್ಮೆ ಹೇಳ್ತಿದ್ದೇನೆ, ಕೆಲವು ಯುದ್ಧಗಳಲ್ಲಿ ನೀವು ಹೋರಾಡಬಹುದು, ಇನ್ನು ಕೆಲವನ್ನು ನಾಳೆಗಾಗಿ ಬಿಟ್ಟುಬಿಡಬೇಕು. ನಾವೆಲ್ಲ ಆತ್ಮಪ್ರಜ್ಞೆ ಮೂಡಿಸಿಕೊಳ್ಳಬೇಕು. ಆ ಜವಾಬ್ಧಾರಿ ಹೊಂದಾಣಿಕೆ ಮಾಡಿಕೊಳ್ಳುವಂಥದ್ದಲ್ಲ. ಪ್ರತಿವರ್ಷ ಹುಟ್ಟುಹಬ್ಬದಂದು ನಿಮ್ಮ ಬಳಿ ಇರುವ ಒಂದು ಭಾವನಾತ್ಮಕ ಸರಕನ್ನು ಬಿಸಾಡಿ. ಅದರ ಬಗ್ಗೆ ಯೋಚಿಸಬೇಡಿ, ಬದುಕು ಉತ್ತಮವಾಗುತ್ತದೆ.

ಅಗಲುವಿಕೆಯ ಸಲಹೆ...

ನೀವೊಬ್ಬ ಮಹಿಳೆ ಎಂಬ ವಾಸ್ತವವನ್ನು ಎಂಜಾಯ್ ಮಾಡಿ. ಅದನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಪ್ರತಿದಿನ ನಾವು ಪ್ರಯತ್ನಿಸಬೇಕು, ನಮ್ಮ ಅತ್ಯತ್ತಮ ಆವೃತ್ತಿಯಾಗಲು ಮುಂದಾಗಬೇಕು ಅನ್ನೋ ಮಾತನ್ನು ಪುಸ್ತಕವೊಂದರಲ್ಲಿ ನಾನು ಓದಿದ್ದೆ. ಈ ಚಿಂತನೆ ಯಾವಾಗಲೂ ನನ್ನನ್ನು ತುದಿಗಾಲಲ್ಲಿ ನಿಲ್ಲಿಸುತ್ತೆ.

ಲೇಖಕರು: ರಾಖಿ ಚಕ್ರಬೊರ್ತಿ

ಅನುವಾದಕರು: ಭಾರತಿ ಭಟ್​​​