ಉದ್ಯಮದಲ್ಲಿ ಬಂಡವಾಳ ಹೂಡಿಕೆಯ ಸಂದರ್ಭ ಮಹಿಳೆಯರಿಗೆ ಎದುರಾಗುವ ಸಮಸ್ಯೆಗಳು

ಟೀಮ್​​ ವೈ.ಎಸ್​. ಕನ್ನಡ

0

ಕಾಲ ಬದಲಾಗಿದೆ. ಗಂಡು-ಹೆಣ್ಣು ಎಂಬ ತಾರತಮ್ಮ ಸಾಕಷ್ಟು ಮಟ್ಟಿಗೆ ಕಡಿಮೆಯಾಗಿದೆ. ಹೆಣ್ಣು ನಾಲ್ಕು ಗೋಡೆಗಳ ನಡುವಿನ ಅಡಿಗೆ ಕೋಣೆಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಬದಲಾಗುತ್ತಿರುವ ಸಮಾಜದಲ್ಲಿ ಆಕೆಯೂ ಮುನ್ನಡೆಯುತ್ತಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವ ಹೆಣ್ಣು ತಾನು ಕೂಡಾ ಯಾರಿಗೇನೂ ಕಮ್ಮಿಯಲ್ಲಿ ಅನ್ನೋವಷ್ಟರ ಮಟ್ಟಿಗೆ ಬೆಳೆದುನಿಂತಿದ್ದಾಳೆ.

ಶಿಕ್ಷಣ, ತಂತ್ರಜ್ಞಾನ, ವ್ಯಾಪಾರ, ಆಡಳಿತ ಹೀಗೆ ವೈವಿಧ್ಯಮಯ ಕ್ಷೇತ್ರದಲ್ಲೂ ಆಕೆ ತನ್ನ ಛಾಪು ಮೂಡಿಸುತ್ತಿದ್ದಾಳೆ. ಕಠಿಣವಾದ ಕ್ಷೇತ್ರದಲ್ಲೂ ಎಲ್ಲಾ ಅಡೆ ತಡೆಗಳನ್ನು ಹಿಂದಿಕ್ಕಿ ಸಾಧನೆ ಮಾಡಿದ್ದಾಳೆ. ನೀಲಿ ಗಗನದಾಚೆ ವಿಮಾನಗಳಲ್ಲಿ, ಭೋರ್ಗರೆವ ಸಮುದ್ರದ ನಡುವೆ ನೌಕಾದಳದಲ್ಲಿ ಹೀಗೆ ಅನೇಕ ಅಪಾಯಕಾರಿ ಕ್ಷೇತ್ರಗಳಲ್ಲೂ ಆಕೆಯ ಸಾಧನೆ ಗಮನಾರ್ಹವಾಗಿದೆ. ಪುರುಷರಿಗಷ್ಟೇ ನಿಭಾಯಿಸಲು ಸಾಧ್ಯ ಅಂತ ಅಂದುಕೊಂಡಿರುವ ಉದ್ಯಮದಲ್ಲಿಯೂ ಆಕೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾಳೆ.

ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ವಿಯಾದ ಅನೇಕ ಮಹಿಳೆಯರೂ ಇದ್ದಾರೆ. ಆದ್ರೆ ಉದ್ಯಮ ಎಂದು ಬಂದಾಗ ಮಹಿಳೆಯರ ಪಾಲಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮುಖ್ಯ. ಆದ್ರೆ ಮಹಿಳೆಯರು ಉದ್ಯಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೋ ಇಲ್ಲವೋ ಎಂಬ ಅನುಮಾನದಿಂದ ಹೂಡಿಕೆದಾರರು ಮಹಿಳೆಯರ ಉದ್ಯಮದಲ್ಲಿ ಭಾಗಿಯಾಗಲು ಹಿಂಜರಿಯುತ್ತಾರೆ.

ಉದ್ಯಮ ಎಂದ ಕೂಡಲೇ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ನಿಯಮಗಳು ಸೃಷ್ಟಿಯಾಗಿಬಿಡುತ್ತದೆ. ಪುರುಷರಿಗೆ ಮದುವೆ, ಮನೆ, ಮಕ್ಕಳ, ಸಂಸಾರದ ಜಂಜಾಟಗಳಿದ್ದರೂ ಅದು ಮುಖ್ಯವೆನಿಸುವುದಿಲ್ಲ. ಅದೇ ಮಹಿಳೆ ವಿವಾಹಿತಳಾಗಿದ್ದಲ್ಲಿ ಉದ್ಯಮದಲ್ಲಿ ಆಕೆಗೆ ಅವಕಾಶಗಳು ಗಣನೀಯವಾಗಿ ಕಡಿಮೆಯಾಗಿಬಿಡುತ್ತದೆ. ಅದರಲ್ಲೂ ಮಹಿಳೆಗೆ ಗಂಡ, ಮಕ್ಕಳು, ಕುಟುಂಬದ ಜವಾಬ್ದಾರಿ ಇದೆ ಎಂದು ತಿಳಿದ ಮೇಲಂತೂ ಹೂಡಿಕೆದಾರರು ಬಂಡವಾಳ ಹೂಡಿಕೆಗೆ ಹಿಂಜರಿಯುತ್ತಾರೆ.

ಉದ್ಯಮದಲ್ಲಿ ಬಂಡವಾಳ ತೊಡಗಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಮಹಿಳೆಯರು ಎದುರಿಸಬೇಕಾಗಿ ಬರುವ ಸಮಸ್ಯೆಗಳು ಹಲವಾರು. ಈ ಕುರಿತು ಮೂವರು ಉದ್ಯಮಿ ರಂಗದ ಮಹಿಳೆಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಓಯಿಂಡ್ರಿಲಾ ದಾಸ್​​​ಗುಪ್ತಾ- ಈಟ್,ಶಾಪ್, ಲವ್ ಸಹ ಸಂಸ್ಥಾಪಕಿ

ಓಯಿಂಡ್ರಿಲಾ ದಾಸ್​ಗುಪ್ತಾ ಹೆಸರುವಾಸಿ ಉದ್ಯಮಿ. ಇತ್ತೀಚಿಗೆ ಇವರ ಕಂಪೆನಿ ಚಿಲ್ಲರೆ ಸಂಘಟಿತ ವ್ಯಾಪಾರಿಗಳಿಂದ ಸ್ವಾಧೀನಕ್ಕೆ ಒಳಪಟ್ಟಿತ್ತು. ಉದ್ಯಮದಲ್ಲಿನ ಈ ಸೋಲು ಓಯಿಂಡ್ರಿಲಾ ಕೌಟುಂಬಿಕ ಬದುಕಿನಲ್ಲೂ ಅಲ್ಲೋಲ ಕಲ್ಲೋಲ ಎಬ್ಬಿಸಿತು. ಈ ಸಂದರ್ಭದಲ್ಲಿ ಓಯಿಂಡ್ರಿಲಾ ಗರ್ಭಿಣಿಯಾಗಿದ್ದು, ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದರು. ಹೀಗಾಗಿ ಮತ್ತೆ ಉದ್ಯಮದತ್ತ ಗಮನಹರಿಸುವುದು ಕಷ್ಟವಾಯಿತು. ಉದ್ಯಮವನ್ನು ಬಿಟ್ಟು ಕುಟುಂಬ, ಬರುವ ಮಗುವಿನ ಬಗ್ಗೆ ಹೆಚ್ಚು ಕಾಳಜಿ ವಹಿಸು ಎಂಬುದಾಗಿಯೇ ಮನೆಯ ಸದಸ್ಯೆರೆಲ್ಲರೂ ಓಯಿಂಡ್ರಿಲಾಗೆ ಉಪದೇಶಿಸಿದ್ರು

‘ಗಂಡಸರಿಗೆ ಕೆಲವೊಮ್ಮೆ ಹೆಂಗಸರ ಭಾವನೆಯೇ ಅರ್ಥವಾಗುವುದಿಲ. ಅವರ ಪಾಲಿಗೆ ನಾವೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಯಂತ್ರಗಳಂತೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಉದ್ಯಮಿ ಓಯಿಂಡ್ರಿಲಾ ದಾಸ್​​ಗುಪ್ತಾ.

ಹೂಡಿಕೆದಾರರು ಕಂಪೆನಿ, ಉದ್ಯಮದ ಬಗ್ಗೆ ತಿಳಿದುಕೊಳ್ಳುವ ಮೊದಲೇ ಮಹಿಳೆಗೆ ಕುಟುಂಬವಿದೆ ಎಂಬುವುದು ಮುಖ್ಯವಾಗಿಬಿಡುತ್ತದೆ, ಉದ್ಯಮದ ವಿಷಯಕ್ಕೆ ಬಂದಾಗ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚು ಅವಕಾಶವನ್ನು ಕಲ್ಪಿಸಲಾಗುತ್ತದೆ ಅನ್ನೋದು ಓಯಿಂಡ್ರಿಲಾ ಅಭಿಪ್ರಾಯ. ಮಹಿಳೆಯರಿಗೆ ಶೈಕ್ಷಣಿಕ ಅರ್ಹತೆಯಿದ್ದರೂ ಪುರುಷರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಯಾವುದೇ ಮಾನದಂಡ ಇಲ್ಲದೆಯೂ ಪುರುಷರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಅನ್ನೋದು ಓಯಿಂಡ್ರಿಲಾ ಅನಿಸಿಕೆ.

ಓಯಿಂಡ್ರಿಲಾ ಉದ್ಯಮ ಆರಂಭಿಸಿದ್ರೂ ಅವರ ಪತಿಯೇ ಹೂಡಿಕೆದಾರರ ಜತೆ ಮಾತಿಗೆ ಮುಂದಾಗುತ್ತಿದ್ದರು. ಮಹಿಳೆಗೆ ಇವೆಲ್ಲವನ್ನೂ ನಿಭಾಯಿಸುವುದು ಕಷ್ಟ ಎಂಬುವುದು ಅವರ ಅನಿಸಿಕೆಯಾಗಿತ್ತು. ಆದ್ರೆ ಮಹಿಳೆ ಯಾವುದೇ ಕೆಲಸವನ್ನು ಒಂದು ಸಾರಿ ಅರಿತುಕೊಂಡರೆ ಲೀಲಾಜಾಲವಾಗಿ ನಿರ್ವಹಿಸಬಲ್ಲಳು ಅಂತಾರೆ ಓಯಿಂಡ್ರಿಲಾ.

ಮಾಸೂಮ್ ಮಿನವಾಲಾ, ಮಾಲೀಕರು ಸ್ಟೈಲ್ ಫಿಸ್ಟಾ

ಮಾಸೂಮ್ ಮಿನವಾಲಾ. ಮುಂಬೈ ಮೂಲದ ಗುಜರಾತಿ ಮಹಿಳೆ. ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಾಸೂಮ್ ಉದ್ಯಮದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಉದ್ಯಮ ಕ್ಷೇತ್ರದಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಮಾಸೂಮ್​​ಗೆ ಉತ್ತಮ ಪ್ರತಿಫಲವೇ ದೊರಕಿತ್ತು.

ಒಬ್ಬಳು ಮಹಿಳೆ ಉದ್ಯಮ ಕ್ಷೇತ್ರದಲ್ಲಿ ಕಾಲಿಡುತ್ತಾಳೆಂದರೆ ಅದು ಕೇವಲ ಹಣದ ವ್ಯಯವಲ್ಲ. ಖಾಸಗಿ ಜೀವನದ ಬಹುಭಾಗ ಸಮಯ ಕೂಡಾ ಈ ಉದ್ಯಮದಲ್ಲೇ ಕಳೆದುಹೋಗಿಬಿಡುತ್ತದೆ. ಖಾಸಗಿ ಬದುಕು ಕೂಡಾ ಮುಖ್ಯ ಮತ್ತು ಅನಿವಾರ್ಯವಾದ ಕಾರಣ ನೀವು ಜಾಗರೂಕತೆಯಿಂದ ಉದ್ಯಮವನ್ನು ನಿರ್ವಹಿಸಬೇಕಾಗುತ್ತದೆ ಅನ್ನೋ ಅಭಿಪ್ರಾಯ ಮಾಸೂಮ್ ಅವರದ್ದು..

ಯಾವುದೇ ಹೂಡಿಕೆದಾರ ಉದ್ಯಮಿಯ ಜೀವನದ ಬಗ್ಗೆ ಪ್ರಶ್ನಿಸಿದರೆ ಅದು ಅತಿರೇಕವೆನಿಸುವುದಿಲ್ಲ ಬದಲಾಗಿ ಅನಿವಾರ್ಯವೆನಿಸಿಬಿಡುತ್ತದೆ. ಮಾಸೂಮ್ ಮಿನವಾಲಾ ಮೊದಲಿಗೆ ಸಭೆ ಕರೆದಿದ್ದಾಗ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿರಲ್ಲಿಲ್ಲವಂತೆ. ಬದಲಾಗಿ ಮುಂದಿದ್ದ ಹೂಡಿಕೆದಾರರಲ್ಲಿ ತನ್ನ ಕುಟುಂಬ, ಬೆಳದು ಬಂದ ರೀತಿ, ಪೋಷಕರು ತನ್ನ ಬಗ್ಗೆ ಇಟ್ಟುಕೊಂಡಿದ್ದ ಕನಸುಗಳು ಇವೆಲ್ಲದರ ಬಗ್ಗೆಯೂ ಮಾಹಿತಿ ನೀಡಿದೆ. ಇದೆಲ್ಲವೂ ನನಗೆ ಹೂಡಿಕೆದಾರರಿಂದ ಪ್ರತಿಕೂಲವಾದ ವಾತಾವರಣವನ್ನೇ ನಿರ್ಮಿಸಿಕೊಟ್ಟಿತ್ತು. ಎಲ್ಲರೂ ನನ್ನ ಉದ್ಯಮದಲ್ಲಿ ಬಂಡವಾಳ ಹೂಡಿಕೆಗೆ ಮುಂದಾದ್ರು ಅಂತ ಖುಷಿಯಿಂದ ಹೇಳ್ತಾರೆ ಮಾಸೂಮ್.

ಉಳಿತಾಯಕ್ಕೂ ಮೀರಿ ಹೆಚ್ಚು ಶ್ರಮಪಡಬೇಕಾಗಿ ಬಂದರೂ ಮಾಸೂಮ್ ಮಿನವಾಲಾ ಎದೆಗುಂದದ ಎಲ್ಲವನ್ನೂ ಎದುರಿಸಿ ಉದ್ಯಮ ಕ್ಷೇತ್ರದಲ್ಲಿ ಮುನ್ನಡೆದ್ರು. ಹೀಗಾಗಿಯೇ ಉದ್ಯಮ ಕ್ಷೇತ್ರದಲ್ಲಿ ಯಶಸ್ವೀ ಮಹಿಳೆಯಾಗಿ ಗುರುತಿಸಿಕೊಂಡ್ರು.

ಬಿಂದಿಯಾ ಮಹೇಶ್ವರಿ, ವಿಪಿ, ಸಿಐಒ, ಆಂಜೆಲ್ ನೆಟ್ ವರ್ಕ್, ಮುಂಬೈ

ಮುಂಬೈನ ಆಂಜೆಲ್ ನೆಟ್ ವರ್ಕ್ಸ್​​ ಸಿಐಒ ಬಿಂದಿಯಾ ಮಹೇಶ್ವರಿ. ಮಹಿಳೆಯರ ಸಮೂಹವೇ ಬಂಡವಾಳಕ್ಕಾಗಿ ಎದುರು ನೋಡುತ್ತಿರುತ್ತದೆ, ಆದ್ರೆ ಇಲ್ಲಿ ಆಕೆ ಕುಟುಂಬವನ್ನು ಹೊಂದಿದ್ದಾಳಾ ಇಲ್ಲವೋ ಎಂಬುದನ್ನು ಬಂಡವಾಳ ಹೂಡಿಕೆದಾರರು ಪ್ರಶ್ನಿಸುತ್ತಾರೆ ಅಂತ ಹೇಳುತ್ತಾರೆ ಬಿಂದಿಯಾ..

ನಾವಿನ್ನೂ ಪುರುಷಪ್ರಧಾನವಾದ ಕುಟುಂಬ ವ್ಯವಸ್ಥೆಯಲ್ಲಿದ್ದೆವು. ಹೀಗಾಗಿ ನಮ್ಮ ಭವಿಷ್ಯವೆಂಬುದು ಮೊದಲೇ ನಿರ್ಧರಿಸಲ್ಪಟ್ಟಂತೆ ಇರುತ್ತಿತ್ತು. ವಿದ್ಯಾಭ್ಯಾಸ ಮುಗಿದ ಕೂಡಲೇ ಮದುವೆ, ಬಳಿಕ ಮಕ್ಕಳು ಸಂಸಾರ. ಹೆಣ್ಣು ಮಕ್ಕಳ ಬದುಕು ಇಷ್ಟೇ ಎಂಬುದನ್ನು ಕುಟುಂಬದ ಹಿರಿಯ ಸದಸ್ಯರು ಮೊದಲೇ ನಿರ್ಧರಿಸಿಬಿಡುತ್ತಿದ್ದರು. ಆದ್ರೆ ನಾನು ಇವೆಲ್ಲರಿಂದ ಹೊರಬಂದು ಹೊಸತೇನನ್ನಾದರೂ ಸಾಧಿಸಬೇಕೆಂದು ತೀರ್ಮಾನಿಸಿದೆ.

ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಎದುರಾಗುವ ಸಮಸ್ಯೆಗಳು ಅನೇಕ. ಆಕೆ ಕುಟುಂಬವನ್ನು ಹೊಂದಿದ್ದಲ್ಲಿ ಕೆಲಸದ ಬಗ್ಗೆ ಆಕೆ ಎಷ್ಟರಮಟ್ಟಿಗಿನ ಸಮಯ ನೀಡಲು ಸಾಧ್ಯ, ಆಕೆಯ ಬದ್ಧತೆ ಎಂಬ ಪ್ರಶ್ನೆಗಳೆಲ್ಲವೂ ಮುಖ್ಯವಾಗಿಬಿಡುತ್ತದೆ. ಉದ್ಯೋಗದಾತ ಮತ್ತು ಉದ್ಯೋಗಿಗಿಂತಲೂ ಹೂಡಿಕೆದಾರ ಮತ್ತು ಉದ್ಯಮಿಯ ಸಂಬಂಧ, ವಹಿವಾಟು ವಿಭಿನ್ನವಾಗಿರುತ್ತದೆ. ಹೀಗಾಗಿ ಆಕೆಯ ಕೌಟುಂಬಿಕ ಜೀವನದ ಬಗ್ಗೆ ಆತ ಪ್ರಶ್ನೆಗಳು ಕೇಳಿದಾಗ ಅಸಹಜವೆನಿಸುವುದಿಲ್ಲ. ಬದಲಾಗಿ ಅವಶ್ಯವೆನಿಸುತ್ತೆ ಅಂತಾರೆ ಬಿಂದಿಯಾ ಮಹೇಶ್ವರಿ.

ಕಾರ್ಪೋರೇಟ್ ಜಗತ್ತಿನಲ್ಲಿ ಸನ್ನಿವೇಶ, ವಿಭಿನ್ನವಾಗಿದೆ. ಮಹಿಳೆ ಉದ್ಯಮದಲ್ಲಿ ತೊಡಗಿಕೊಂಡರೂ ಹಲವು ನಿಬಂಧನೆಗಳು ಆಕೆಗೆ ಅಡ್ಡಿಯನ್ನುಂಟು ಮಾಡುತ್ತವೆ. ಇವುಗಳನ್ನೆಲ್ಲಾ ಎದುರಿಸಿ ಆಕೆ ಖಾಸಗಿ ಜೀವನದಲ್ಲೂ, ವೃತ್ತಿಪರ ಜೀವನದಲ್ಲೂ ಯಶಸ್ವಿಯಾಗಬೇಕಾಗುತ್ತದೆ. ಯಂತ್ರದಲ್ಲಿ ಹಾಕಿದ ಹುಲ್ಲಿನಂತೆ ಆಕೆಯ ಪರಿಸ್ಥಿತಿ. ಬಿಸಿಯಿರೋ ತುಪ್ಪ ನುಂಗಲಾಗದ, ಉಗುಳಲಾಗದ ಇಕ್ಕಟ್ಟು. ಸಂಸ್ಥೆಗೆ ಮಹಿಳೆಗೇ ಸ್ಥಾಪಕಿಯಾಗಿದ್ದಲ್ಲಿ ಆಕೆ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅಂತಾರೆ ಬಿಂದಿಯಾ..

ಒಟ್ಟಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಎದುರಾಗುವ ಸಮಸ್ಯೆಗಳು ಹಲವಾರು. ಆದರೆ ಸಾಧಿಸುವ ಮನಸ್ಸಿದ್ದರೆ ಎಲ್ಲಾ ತೊಂದರೆಗಳನ್ನು ನಿವಾಳಿಸಿ ಯಶಸ್ವಿಯಾಗಲು ಸಾಧ್ಯ ಅನ್ನೋದನ್ನು ಹಲವು ಮಹಿಳೆಯರು ಸಾಬೀತುಪಡಿಸಿದ್ದಾರೆ.

ಲೇಖಕರು: ಬಿಂಜಾಲ್​​​ ಷಾ
ಅನುವಾದಕರು: ವಿನುತಾ