ತಾಂಜಾನಿಯಾದಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಸಂಕಷ್ಟ : ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ  

ಟೀಮ್ ವೈ.ಎಸ್.ಕನ್ನಡ 

1

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೊರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ನೆರವಿಗೆ ಸದಾ ಸಿದ್ಧರಾಗಿರ್ತಾರೆ. ಯಾವುದೇ ಸಮಯದಲ್ಲಾದ್ರೂ ಭಾರತೀಯರ ಅಳಲು ಆಲಿಸಿ ಸಹಾಯಮಾಡುವ ಕರುಣಾ ಹೃದಯಿ ಸುಷ್ಮಾ. ಈ ಬಾರಿ ಸುಷ್ಮಾ ಸ್ವರಾಜ್ ತಾಂಜಾನಿಯಾದಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿನಿಗೆ ಸಹಾಯಹಸ್ತ ನೀಡಿದ್ದಾರೆ, ಅದು ಕೂಡ ಆಕೆ ನೆರವು ಕೇಳುವ ಮುನ್ನವೇ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಓದುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಚರಣ್ಯ ಕಣ್ಣನ್, ಖಾಸಗಿ-ಸಾರ್ವಜನಿಕ ಸಹಭಾಗಿತ್ವ ವಿಷಯದ ಮೇಲೆ ಕೋರ್ಸ್ ಪೂರ್ಣಗೊಳಿಸಲು ತಾಂಜಾನಿಯಾಗೆ ತೆರಳಿದ್ಲು.

ತಾಂಜಾನಿಯಾದಲ್ಲಿ ದುಷ್ಕರ್ಮಿಯೊಬ್ಬ ಅವಳ ಬ್ಯಾಗನ್ನೇ ಎಗರಿಸಿದ್ದ. ಹೋಟೆಲ್​ಗೆ ಮರಳುತ್ತಿದ್ದಾಗ ಬೈಕ್​ನಲ್ಲಿ ಬಂದ ದುಷ್ಕರ್ಮಿ ಚರಣ್ಯಾಳ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದ. 'ನನ್ನ ಬಳಿಯಿದ್ದ 2 ಫೋನ್, ಹಣ, ಕ್ರೆಡಿಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಎಲ್ಲವನ್ನೂ ಕಳೆದುಕೊಂಡಿದ್ದೆ. ಕೈಕಾಲುಗಳಿಗೆಲ್ಲ ಗಾಯವಾಗಿತ್ತು, ಹಣೆಯ ಮೇಲೆ ಬೊಬ್ಬೆ ಬಂದಿತ್ತು’ ಅಂತಾ ಚರಣ್ಯ ಘಟನೆ ಬಗ್ಗೆ ವಿವರಿಸಿದ್ದಾಳೆ.

ಬೇರೆ ದಾರಿ ಕಾಣದ ಚರಣ್ಯ ತಾಂಜಾನಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತೆರಳಿ ಸಹಾಯ ಕೇಳಿದ್ಲು. ಆದ್ರೆ ಅಲ್ಲಿನ ಅಧಿಕಾರಿ 2 ಕೋಟಿ ಕೊಟ್ರೂ ನಾನೇನೂ ಮಾಡಲು ಸಾಧ್ಯವಿಲ್ಲ ಎಂದುಬಿಟ್ಟಿದ್ರು. ಹೊಸ ಪಾಸ್ಪೋರ್ಟ್ ನೀಡಲು ಮೂರು ವಾರ ಬೇಕು, ಹಾಗಾಗಿ ತುರ್ತು ಪ್ರಮಾಣಪತ್ರ ಪಡೆದು ಭಾರತಕ್ಕೆ ಮರಳುವಂತೆ ಸೂಚಿಸಿದ್ದರು.

ಮರಳಿ ಹಾರ್ವರ್ಡ್ ಸ್ಕೂಲ್ ಗೆ ಚರಣ್ಯ ಹೋಗಬೇಕಾಗಿತ್ತು, ಎರಡು ತಿಂಗಳು ಕಾಯಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲ ಅಮೆರಿಕದಲ್ಲಿ ಆಕೆಯ 2 ವರ್ಷದ ಪುಟ್ಟ ಮಗು ಕೂಡ ಇತ್ತು. ‘ನೀನು ಯಾರಿಗೆ ಬೇಕಾದ್ರೂ ಟ್ವೀಟ್ ಮಾಡು, ಅವರೇನು ಮಾಡಲು ಸಾಧ್ಯ? ಮಾಡಬೇಕಾಗಿರೋದು ನಾವೇ’ ಅಂತಾ ಉಡಾಫೆಯಿಂದ ನುಡಿದಿದ್ದರು ಆ ಅಧಿಕಾರಿ.

''ಧೂತಾವಾಸ ಕಚೇರಿಗೆ ಬಂದ್ರೂ ಸಹಾಯ ಸಿಗದೆ ಹತಾಶಳಾಗಿ ಹೊರನಡೆದಿದ್ದೆ. ಕೈಯಲ್ಲಿ ಬಿಡಿಗಾಸಿಲ್ಲ, ಉಳಿದುಕೊಳ್ಳಲು ಸ್ಥಳವಿಲ್ಲ. ಮುಂದೇನು ಅನ್ನೋದೇ ತೋಚದಂತಾಗಿತ್ತು’’ ಅಂತಾ ಚರಣ್ಯ ‘ದಿ ನ್ಯೂಸ್ ಮಿನಿಟ್’ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ರು. ಆದ್ರೆ ಚರಣ್ಯ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿರಲಿಲ್ಲ, ಸಹಾಯವನ್ನೂ ಕೇಳಿರಲಿಲ್ಲ. ಚರಣ್ಯಾಳ ಸಂಕಷ್ಟವನ್ನು ಅರಿತ ಸುಷ್ಮಾ ಖುದ್ದಾಗಿ ಆಕೆಗೆ ಟ್ವೀಟ್ ಮಾಡಿದ್ದರು. ತಾಂಜಾನಿಯಾದಲ್ಲಿ ಅಲಕ್ಷ ಮತ್ತು ದರ್ಪದಿಂದ ವರ್ತಿಸಿದ ಭಾರತೀಯ ಅಧಿಕಾರಿಯ ಹೆಸರು ಕೇಳಿದ್ದರು.

ಸುಷ್ಮಾ ಸ್ವರಾಜ್ ಅವರು ಕೇಳಿದ್ದ ಮಾಹಿತಿಯನ್ನೆಲ್ಲ ಚರಣ್ಯ ಒದಗಿಸುತ್ತಿದ್ದಂತೆ ಆಕೆಗೆ ಎದುರಾಗಿದ್ದ ಸಮಸ್ಯೆಯೆಲ್ಲ ದೂರವಾಗಿತ್ತು. ಖುದ್ದಾಗಿ ಡೆಪ್ಯೂಟಿ ಹೈಕಮಿಷನರ್, ಚರಣ್ಯಗೆ ಬೇಕಾದ ವ್ಯವಸ್ಥೆಯನ್ನೆಲ್ಲ ಮಾಡಿಕೊಟ್ಟಿದ್ದರು. ಬಳಿಕ ಚರಣ್ಯ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಅರ್ಪಿಸಿದ್ದಾಳೆ.

ಮಾನವೀಯ ಕರ್ತವ್ಯಗಳ ಮೂಲಕ ಸುಷ್ಮಾ ಸ್ವರಾಜ್ ಗೌರವಾನ್ವಿತ ಸಚಿವೆ ಎನಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಕಳಕಳಿಯ ಬಗ್ಗೆ ಅಪಾರ ಪ್ರಶಂಸೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ.  

ಇದನ್ನೂ ಓದಿ.. 

ಸೈಕಲ್​ನಲ್ಲಿ ಹಣ್ಣು ಮಾರುತ್ತಿದ್ದ ಸುರಿಂದರ್ ಸಿಂಗ್ ಕೋಟ್ಯಾಧಿಪತಿಯಾದ ಕಹಾನಿ..  

ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ"ಕಲರ್​ಕಾಗೆ"