ನೀವೂ ಆಗಬಹುದು 'ಜೇಮ್ಸ್ ಬಾಂಡ್'

ಟೀಮ್​ ವೈ.ಎಸ್​.ಕನ್ನಡ

0

ಹಾಲಿವುಡ್ ಪತ್ತೆದಾರಿ ಸರಣಿ ಸಿನೆಮಾಗಳಾದ ಜೇಮ್ಸ್ ಬಾಂಡ್, ಮಿಷನ್ ಇಂಪಾಸಿಬಲ್​ಗಳಲ್ಲಿನ 'ಏಜೆಂಟ್ 007', 'ಏಜೆಂಟ್ ಹಂಟ್' ನೀವಾಗಬೇಕೆನ್ನುವ ಆಸೆ ನಿಮಗಿದೆಯೇ? ಐಪಿಎಸ್ ಪರೀಕ್ಷೆ ಪಾಸಾಗದೆ ನೀವು ಪೊಲೀಸರಂತೆ ಕೊಲೆ ಪ್ರಕರಣಗಳನ್ನು ಭೇದಿಸುವ ಹುಮ್ಮಸ್ಸು ನಿಮ್ಮಲಿದ್ದರೆ ಅದನ್ನು ನಿಜವಾಗಿಸುವ ಅವಕಾಶ ನಿಮ್ಮ ಮುಂದಿದೆ. ಆದರೆ, ಅದು ಆಟದ ಮೂಲಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ 'ಎಸ್ಕೇಪ್ ಹಂಟ್ ಗೇಮ್' ಇದೀಗ ಬೆಂಗಳೂರಿಗೆ ಬಂದಿದೆ. ಅದು ನಿಮ್ಮಲ್ಲಿರುವ ಡಿಟೆಕ್ಟಿವ್​ನನ್ನು ಹೊರತರುತ್ತದೆ.

ಒಂದು ಕೋಣೆ, ಅದರಲ್ಲಿ ನೀವು ಲಾಕ್ ಆಗಿದ್ದೀರಿ. ಅಲ್ಲಿಂದ ಹೊರಬರಲು ಆ ಕೋಣೆಯಲ್ಲಿಯೇ ನೂರಾರು ಕ್ಲೂಗಳಿವೆ. ಆ ಸುಳಿವುಗಳ ಮೂಲಕ ನೀವು ಕೋಣೆಯಿಂದ ಹೊರಬರುವುದಷ್ಟೇ ಅಲ್ಲದೆ, ಒಂದು ಕೊಲೆ ಅಥವಾ ಅಪರಾಧ ಪ್ರಕರಣವನ್ನು ಸರಾಗವಾಗಿ ಇತ್ಯರ್ಥ ಮಾಡಬಹುದು. ಅದಕ್ಕೆ ನಿಮಗಿರುವ ಸಮಯ ಕೇವಲ 60 ನಿಮಿಷ. ಅಷ್ಟರೊಳಗೆ ನೀವು ಆ ಕೋಣೆಯಲ್ಲಿನ ಕ್ಲೂಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪ್ರಕರಣ ಬೇಧಿಸಬೇಕು. ಈ ಅವಕಾಶವನ್ನು ನಿಮಗೆ ಕಲ್ಪಿಸುತ್ತಿರುವುದು 'ಎಸ್ಕೇಪ್ ಹಂಟ್' ಎಂಬ ಗೇಮ್. ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಈ ಗೇಮ್ ತಾಣಕ್ಕೆ ನೀವು ಭೇಟಿ ಕೊಟ್ಟರೆ ನಿಮಗೆ ನಿಜಕ್ಕೂ ಹೊಸ ಅನುಭವವುಂಟಾಗುತ್ತದೆ. ನಿಮ್ಮನ್ನು ಒಬ್ಬ ಗೂಢಾಚಾರನನ್ನಾಗಿ ಪರಿವರ್ತಿಸಿ, ತಾಳ್ಮೆಯನ್ನು ಕಲಿಸಿಕೊಡುತ್ತದೆ.

ಮೂರು ರೀತಿಯ ಗೇಮ್...

ಸದ್ಯ ಬೆಂಗಳೂರಿನಲ್ಲಿ ಆರಂಭವಾಗಿರುವ ಎಸ್ಕೇಪ್ ಹಂಟ್ ಗೇಮ್ ಮೂರು ವಿಭಾಗದಲ್ಲಿ ನಡೆಯಲಿದೆ. ಬಾಲಿವುಡ್ ಮರ್ಡರ್, ಆ್ಯಂಕರೇಜ್ ಅಸಾಸಿನೇಷನ್, ಟ್ರಾಪ್ಡ್ ಇನ್ ಆ್ಯನ್ ಅನೌನ್ ಟೆಂಪಲ್ ಎಂಬ ಹೆಸರಿನಿಂದ ಆ ಗೇಮ್​ಗಳನ್ನು ಕರೆಯಲಾಗುತ್ತದೆ. ಅದರೆ, ಆ ಆಟಕ್ಕಾಗಿ ನೀವು ಕೋಣೆ ಹೊಕ್ಕರೆ ನಿಮಗೆ ಸಿಗುವ ಕ್ಲೂಗಳು ಮಾತ್ರ ವಿಭಿನ್ನವಾದಂತಹದ್ದು. ಬಾಲಿವುಡ್ ಮರ್ಡರ್​ನಲ್ಲಿ ಹಿಂದಿ ಸಿನಿಮಾಗಳಿಗೆ ಸಂಬಂಧಿಸಿದ ವಿಷಯಗಳು ಮತ್ತು ಚಿತ್ರಣಗಳಿರಲಿವೆ. ಅದರ ನಡುವೆ ಕ್ಲೂಗಳನ್ನು ಇಡಲಾಗಿರುತ್ತದೆ. ಇನ್ನು, ಆ್ಯಂಕರೇಜ್ ಗೇಮ್​ನಲ್ಲಿ ಹಡಗು ಹಾಗೂ ಟ್ರಾಪ್ಡ್ ಇನ್ ಆ್ಯನ್ ಅನೌನ್ ಟೆಂಪಲ್​ನಲ್ಲಿ ದೇವಸ್ಥಾನದ ಚಿತ್ರಣವಿರಲಿದೆ. ಆ ಚಿತ್ರಣದ ನಡುವೆ ನೀವು ಕೊಲೆ ಪ್ರಕರಣ ಬೇಧಿಸುವಂತಹ ಮತ್ತು ಕೋಣೆಯಿಂದ ಹೊರ ಬರುವಂತಹ ಕ್ಲೂ ನಿಮಗೆ ಸಿಗಲಿದೆ. ಅದನ್ನು ನೀವು ಎಚ್ಚರಿಕೆಯಿಂದ ಗಮನಿಸಿ ಗಡಿಯಾರದ ನಿಮಿಷದ ಮುಳ್ಳು 60 ಬಾರಿ ತಿರುಗುವುದರೊಳಗೆ ಕೋಣೆಯಿಂದ ಹೊರಬರಬೇಕು.

ನಾಲ್ಕು ವಿಭಾಗದಲ್ಲಿ ಗೇಮ್...

ಈ ಗೇಮನ್ನು ನಾಲ್ಕು ವಿಭಾಗಗಳಲ್ಲಿ ಆಡಲು ಅವಕಾಶವಿದೆ. ಸ್ನೇಹಿತರು ಮತ್ತು ಕುಟುಂಬದವರು, ಕಂಪನಿಗಳ ಉದ್ಯೋಗಿಗಳ ಗುಂಪು, ಇಬ್ಬರು ಹಾಗೂ ಆನ್ಲೈನ್ ಮೂಲಕ ಈ ಗೇಮ್ ಆಡಬಹುದಾಗಿದೆ. ಈ ಆಟ ಆಡಲು ಮೊದಲಿಗೆ ಈ ವೆಬ್​ಸೈಟ್​ಗೆ ಭೇಟಿ ನೀಡಿ ನೀವು ಯಾವ ಆಟ ಆಡಬೇಕೆಂದು ಬಯಸುತ್ತೀರಿ ಎಂಬುದನ್ನು ತಿಳಿಸಬೇಕು. ಆನಂತರ ನೀವು ಯಾವಾಗ ಎಸ್ಕೇಪ್ ಹಂಟ್​ಗೆ ಬರುತ್ತೀರಿ ಎಂಬುದನ್ನು ಬುಕ್ ಮಾಡಿಕೊಳ್ಳಬೇಕು. ಇಬ್ಬರು ಈ ಆಟವಾಡಲು 1,198 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಈ ಬಗ್ಗೆ ವೆಬ್​ಸೈಟ್​ನಲ್ಲೂ ಹೆಚ್ಚಿನ ಮಾಹಿತಿ ದೊರೆಯಲಿದೆ.

ವಿದೇಶಗಳಲ್ಲೂ ಪ್ರಸಿದ್ಧಿ...

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕ, ಜರ್ಮನಿ, ಯುಎಇ, ಭಾರತ ಸೇರಿದಂತೆ 21 ದೇಶಗಳಲ್ಲಿ ಈ ಎಸ್ಕೇಪ್ ಹಂಟ್ ಪ್ರಸಿದ್ಧವಾಗಿದೆ. ಭಾರತದಲ್ಲಿ ಬೆಂಗಳೂರು ಸೇರಿದಂತೆ ದೆಹಲಿ, ಹೈದರಾಬಾದ್​ಗಳಲ್ಲಿ ಈ ಗೇಮ್​ ತಾಣಗಳಿವೆ. ವಿಶ್ವದಾದ್ಯಂತ ಒಟ್ಟು 210 ಕೋಣೆಗಳಿವೆ. ಅಲ್ಲದೆ ಈವರೆಗೆ 1,06,04,213 ನಿಮಿಷಗಳಷ್ಟು ಆಟ ಆಡಲಾಗಿದೆ. ನೀವು ಗೇಮ್​ ಪ್ರಿಯರಾಗಿದ್ರೆ ಒಮ್ಮೆ ಈ ಆಟವನ್ನು ಟ್ರೈಮಾಡಿ.