ಶಿ ಕ್ಯಾನ್ ಡ್ರೈವ್...! ಮಹಿಳೆಯರೇ ಸ್ಥಾಪಿಸಿದ ಸಂಸ್ಥೆ..!

ಟೀಮ್​​ ವೈ.ಎಸ್​​.

0

ಮಹಿಳೆಯರಿಗಾಗಿ ಮಹಿಳೆಯೇ ಸ್ಥಾಪಿಸಿದ ಭಾರತದ ಏಕೈಕ ಕಾರು ಚಾಲನೆ ತರಬೇತಿ ಸಂಸ್ಥೆ ಶಿ ಕ್ಯಾನ್ ಡ್ರೈವ್. ಇದನ್ನು ಆರಂಭಿಸಿದವರು ಸ್ನೇಹಾ ಕಾಮತ್.

ಸಾಂಪ್ರದಾಯಿಕ ಮಾರ್ವಾರಿ ಕುಟುಂಬದ ನಾಲ್ವರು ಸಹೋದರಿಯರ ಪೈಕಿ ಕಿರಿಯವರು ಸ್ನೇಹಾ. ಚಿಕ್ಕಂದಿನಿಂದಲೇ ಸದಾ ಹೊಸದೇನನ್ನಾದರೂ ಮಾಡಲು ಸ್ನೇಹಾ ಇಚ್ಛಿಸಿದ್ದರು. ಅರ್ಥಶಾಸ್ತ್ರ ಪದವೀಧರೆಯಾದ ಸ್ನೇಹ ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಮುಂಬೈನಲ್ಲೇ. ಸಮಾಜಶಾಸ್ತ್ರ ವಿಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದಲ್ಲದೇ ಸ್ನೇಹಾ ಸರ್ಟಿಫೈಡ್ ಸರ್ವಿಸ್ ಇಂಜಿನಿಯರ್ ಕೋರ್ಸ್‌ನಲ್ಲಿ ಎಂಎಸ್ ಪದವಿಯನ್ನೂ ಪಡೆದುಕೊಂಡಿದ್ದಾರೆ.

ಬಂಡಾಯವೇಳುವ ಪ್ರವೃತ್ತಿಯನ್ನು ಹುಟ್ಟುಹಾಕಿದ ಬಾಲ್ಯ

ಸ್ನೇಹಾರ ಪೋಷಕರು ವಿಚ್ಛೇದನ ಪಡೆದಿದ್ದರಿಂದ ಅವರು ಕಹಿಯಾದ ಬಾಲ್ಯದ ಅನುಭವವನ್ನು ಹೊಂದಿದ್ದಾರೆ. ತಮ್ಮ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಸಮಯ ಮತ್ತು ನಾಲ್ವರು ಸೋದರ, ಸೋದರಿಯರು ಬೇರೆಯಾಗಿ ಜೀವಿಸಬೇಕಾದ ಅನಿವಾರ್ಯತೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಅದು ಬಹಳ ಕಷ್ಟದ ದಿನಗಳಾದ್ದರಿಂದ ಸ್ನೇಹಾರ ಸೋದರಿ 7ನೇ ತರಗತಿಯಲ್ಲೇ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಸ್ನೇಹಾ ತಮ್ಮ 17ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ಸ್ನೇಹಾ ಹಾಗೂ ಅವರ ಒಡಹುಟ್ಟಿದವರು ತಮ್ಮ ಪೋಷಕರ ಗಮನ ಸೆಳೆಯಲು, ಅವರ ಸಮಯವನ್ನು ತಮಗಾಗಿ ಪಡೆದುಕೊಳ್ಳಲು ತಂದೆಯಿಂದ ತಾಯಿಯ ಕಡೆ, ತಾಯಿಯಿಂದ ತಂದೆಯ ಕಡೆ ಹೋಗುತ್ತಿದ್ದ ಸಮಯವನ್ನು ನೆನೆಯುತ್ತಾರೆ. ತಮ್ಮ ತಾಯಿಯಿಂದ ಈ ಹೋರಾಟದ ಮನೋಭಾವವನ್ನು ಸ್ನೇಹಾ ರೂಢಿಸಿಕೊಂಡಿದ್ದಾರೆ.

ಮೊಟ್ಟಮೊದಲು ಸ್ನೇಹಾ, ಕಲಾತ್ಮಕ ವಸ್ತುಗಳ ಮಾರಾಟಮಳಿಗೆಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಸ್ನೇಹಾ ಗ್ರೀಟಿಂಗ್ ಕಾರ್ಡ್‌ಗಳನ್ನು ಗ್ರಾಹಕರಿಗೆ ಮಾರಬೇಕಾಗಿತ್ತು. ಈ ವೃತ್ತಿಯಲ್ಲಿ ಸ್ನೇಹಾ ಪ್ರತಿ ತಿಂಗಳು 1000 ರೂಪಾಯಿಗಳನ್ನು ದುಡಿಯುತ್ತಿದ್ದರು. ಇದರಿಂದಲೇ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿದರು.

ಮುಂದಿನ ಕೆಲವು ವರ್ಷಗಳು

ನಂತರದ 10 ವರ್ಷಗಳಲ್ಲಿ ಸ್ನೇಹಾ ವಿವಿಧ ಕ್ಷೇತ್ರಗಳಲ್ಲಿ, ವಿವಿಧ ಸಾಮರ್ಥ್ಯದ ಕಾರ್ಯನಿರ್ವಹಿಸಿದರು. ಈ ವೇಳೆ ಸ್ನೇಹಾ ಯಾವುದೋ ಒಬ್ಬ ಬಾಸ್‌ನ ಕೈಕೆಳಗೆ ಕೆಲಸ ಮಾಡಲು ತಮಗೆ ಮನಸ್ಸಿಲ್ಲ ಎಂಬುದನ್ನು ಕಂಡುಕೊಂಡರು. ಇದೇ ವೇಳೆ ಅವರು ಮದುವೆಯಾಗಿ ಪ್ರಗ್ನೆನ್ಸಿ ಬ್ರೇಕ್ ಪಡೆದುಕೊಂಡರು.

ಕೆಲ ಕಾಲದ ನಂತರ ಸ್ನೇಹಾಗೆ ನಿಜವಾಗಿಯೂ ಚೆನ್ನಾಗಿ ಕಾರು ಚಲಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು. ಸ್ನೇಹಾರ ಸೋದರ ಅವರಿಗೆ ಕಾರು ಚಲಾಯಿಸುವುದನ್ನು ಹೇಳಿಕೊಟ್ಟಿದ್ದ ಮತ್ತು ಸ್ನೇಹಾ ಆಗಾಗ ಸುಮ್ಮನೆ ಲಾಂಗ್ ಡ್ರೈವ್ ಹೋಗುತ್ತಿದ್ದರು. ಪುರುಷ ಕಾರು ತರಬೇತುದಾರರು ಅನೇಕ ಬಾರಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಅಲ್ಲದೇ ಮಹಿಳೆಯರು ಸುಮ್ಮನೆ ಕಾಲ ಕಳೆಯಲು ಡ್ರೈವಿಂಗ್ ಕಲಿಯಲು ಬರುತ್ತಾರೆ. ಡ್ರೈವಿಂಗ್ ಬಗ್ಗೆ ಅವರು ಸೀರಿಯಸ್ ಆಗಿರುವುದಿಲ್ಲ ಎಂದುಕೊಂಡಿರುತ್ತಾರೆ ಎನ್ನುತ್ತಾರೆ ಸ್ನೇಹಾ. ಬಹಳಷ್ಟು ಯೋಚಿಸಿದ ಬಳಿಕ ಸ್ನೇಹಾ ತಮ್ಮ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರು.

ಒಬ್ಬ ಪುರುಷ ಬಾಸ್ ಕೈಕೆಳಗೆ ಕೆಲಸ ಮಾಡುವುದು ಅದೆಷ್ಟು ಹಿಂಸೆಯೋ, ಅಷ್ಟೇ ಹಿಂಸೆ ಪುರುಷ ಕಾರು ಡ್ರೈವಿಂಗ್ ತರಬೇತುದಾರನ ಪಕ್ಕದಲ್ಲಿ ಕುಳಿತು ಡ್ರೈವಿಂಗ್ ಕಲಿಯುವುದು. ಪುರುಷರು ಸಲೀಸಾಗಿ ಡ್ರೈವ್ ಮಾಡುತ್ತಾರೆ ಎಂದರೆ ಅದರರ್ಥ ಅವರು ಒಳ್ಳೆಯ ತರಬೇತುದಾರರೂ ಆಗಿದ್ದಾರೆ ಎಂದಲ್ಲ ಎಂಬುದು ಸ್ನೇಹಾರ ಅಭಿಪ್ರಾಯ.

ಪುರುಷರ ಇಂಥಾ ಮನಸ್ಥಿತಿಗಳು ಬದಲಾಗಬೇಕಿದೆ ಎನ್ನುತ್ತಾರೆ ಸ್ನೇಹಾ. ಪುರುಷರ ಇಂತಹ ಮನಸ್ಥಿತಿಗಳೇ ಸ್ನೇಹಾರನ್ನು ಮಹಿಳೆಯರಿಗೆ ಡ್ರೈವಿಂಗ್ ತರಬೇತಿ ನೀಡಲು ಪ್ರೇರಕವಾಯಿತು. ಕಾರು ಚಲಾಯಿಸುವುದರ ಮೂಲಕ ಮಹಿಳೆಯರ ಮೇಲಿನ ಪುರುಷರ ಅಭಿಪ್ರಾಯಗಳಿಗೆ ಬಲವಾದ ಪೆಟ್ಟುಕೊಡುತ್ತಿರುವುದಾಗಿ ಅವರು ಭಾವಿಸಿದರು. ಆದರೆ ಮೊದಲು ಇದಕ್ಕೆ ಸ್ನೇಹಾರ ಕುಟುಂಬಸ್ಥರು ಬೆಂಬಲಿಸಲಿಲ್ಲ. ಆದರೆ ಸ್ವಭಾವತಃ ಧೈರ್ಯವಂತೆಯಾಗಿದ್ದ ಸ್ನೇಹ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು.

ಶಿ ಕ್ಯಾನ್ ಡ್ರೈವ್ ನ ಆರಂಭ

2012ರಲ್ಲಿ ಶಿ ಕ್ಯಾನ್ ಡ್ರೈವ್ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಸ್ನೇಹಾ ಸುಮಾರು 400 ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಆದರೆ ಶಿ ಕ್ಯಾನ್ ಡ್ರೈವ್ ಸಂಸ್ಥೆಯಾಗಿಯೇ ಉಳಿದಿದೆಯೇ ಹೊರತು ಡ್ರೈವಿಂಗ್ ಸ್ಕೂಲ್ ಆಗಿ ಅಲ್ಲ. ಅದನ್ನೂ ಶೀಘ್ರದಲ್ಲೇ ಮಾಡುವ ಗುರಿಹೊಂದಿದ್ದಾರೆ ಸ್ನೇಹಾ. ತಮ್ಮ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವ ರೀತಿಯಿಂದ ಸ್ನೇಹಾ ಜನಪ್ರಿಯತೆ ಗಳಿಸಿದ್ದಾರೆ.

ಕಾರಿನೊಳಗೆ ಕಾಲಿಟ್ಟ ಕೂಡಲೇ ತಮ್ಮ ವಿದ್ಯಾರ್ಥಿಯ ಆಸಕ್ತಿಗಳನ್ನು ತಿಳಿದುಕೊಳ್ಳುತ್ತಾರೆ ಸ್ನೇಹಾ. ಪ್ರತಿಯೊಬ್ಬರಿಂದಲೂ ವಿಭಿನ್ನ ಉತ್ತರಗಳನ್ನು ಪಡೆದಿದ್ದಾರೆ. ಮಹಿಳೆಯರು ಮಹತ್ವಾಕಾಂಕ್ಷೆಗಳನ್ನು ಹೊಂದಿರುತ್ತಾರೆ. ಆದರೆ ತಮ್ಮ ಮಿತಿಯೊಳಗೆ ಮಾತ್ರ ಯೋಚಿಸುತ್ತಾರೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಅಂತಹ ಮಹಿಳೆಯರು ಚಿಪ್ಪಿನಿಂದ ಹೊರಬರಲು ಮತ್ತು ಅವರದ್ದೇ ಆದ ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಲು ಸ್ನೇಹಾ ಪ್ರೋತ್ಸಾಹ ನೀಡುತ್ತಾರೆ.

ಅನುಭವಗಳು

ತಮ್ಮ ಕಾರಿನಲ್ಲೇ ಡ್ರೈವಿಂಗ್ ಕಲಿತ ತಮ್ಮ ಮೊದಲ ವಿದ್ಯಾರ್ಥಿಯನ್ನು ಸ್ನೇಹಾ ನೆನಪಿಸಿಕೊಳ್ಳುತ್ತಾರೆ. ಆ ವಿದ್ಯಾರ್ಥಿ 2ನೇ ದಿನವೇ ಕಾರನ್ನು ಮತ್ತೊಂದು ಕಾರಿಗೆ ಗುದ್ದಿಸಿದ್ದರು. ಜನ ಸ್ನೇಹಾರತ್ತ ಅಚ್ಚರಿಯ ನೋಟ ಬೀರಿದ್ದರು. ಗುದ್ದಿದ ಕಾರಿನ ರಿಪೇರಿಗಾಗಿ ಸ್ನೇಹ ಹಣ ಪಾವತಿಸಿದ್ದರು ಮತ್ತು ಎಲ್ಲವೂ ಒಮ್ಮೆಲೇ ಸರಿಯಾಯಿತು. ಇಲ್ಲಿಯವರೆಗೂ ಆ ವಿದ್ಯಾರ್ಥಿಯೇ ನನ್ನ ಪ್ರೀತಿಗೆ ಪಾತ್ರಳಾದವಳು ಎಂದು ಸ್ನೇಹಾ ನೆನಪಿಸಿಕೊಳ್ಳುತ್ತಾರೆ. ದಹೀಸರ ಹೆದ್ದಾರಿಯಿಂದ ಬಾಂದ್ರಾದ ಗಡಿಯವರೆಗೂ ಸ್ನೇಹಾರ ಕಾರ್ಯಾಚರಣೆ ಹಬ್ಬಿದೆ.

ಸ್ನೇಹಾರ ಓರ್ವ ವಿದ್ಯಾರ್ಥಿನಿಗೆ ಈಗ 58 ವರ್ಷ. ಅವರ ಹೆಸರು ಲೀಲಾ ದೇಶಪಾಂಡೆ. ಲೀಲಾರಿಗೆ ಡ್ರೈವಿಂಗ್ ಕಲಿಯಲೇಬೇಕೆಂಬ ಆಸೆ. ಲೀಲಾರನ್ನು ಅವರ ಪತಿ ಮತ್ತು ಯುಎಸ್‌ನಲ್ಲಿರುವ ಮಗನಿಂದ ಡ್ರೈವಿಂಗ್ ಕಲಿಯಲು ಪ್ರೋತ್ಸಾಹ ದೊರಕಿರಲಿಲ್ಲ. ಅವರಿಬ್ಬರೂ ಲೀಲಾರಿಗಾಗಿ ಡ್ರೈವರ್ ನೇಮಿಸುವುದೇ ಉತ್ತಮ ಎನ್ನುತ್ತಿದ್ದರು. ಆದರೆ ಲೀಲಾ ತಾವೇ ಸ್ವತಃ ಡ್ರೈವಿಂಗ್ ಕಲಿಯಬೇಕೆಂಬ ಛಲ ಹೊಂದಿದ್ದರು. ಡ್ರೈವಿಂಗ್ ಕಲಿತರು ಕೂಡ. ಈ ಬಗ್ಗೆ ಲೀಲಾರಿಗೆ ಬಹಳ ಸಂತೋಷವಿದೆ ಎಂದು ಹೇಳುತ್ತಾರೆ ಸ್ನೇಹಾ.

ಬಿಡುವಿರದ ವೇಳಾಪಟ್ಟಿ

ಡ್ರೈವಿಂಗ್ ಸ್ನೇಹಾರನ್ನು ಇಡೀ ದಿನ ಬ್ಯುಸಿಯಾಗಿಟ್ಟಿರುತ್ತದೆ. 7.30ರ ಹೊತ್ತಿಗೆ ತಮ್ಮ ದಿನವನ್ನು ಆರಂಭಿಸುವ ಸ್ನೇಹಾ ಮಧ್ಯರಾತ್ರಿಯ ಹೊತ್ತಿಗೆ ಬಿಡುವಾಗುತ್ತಾರೆ. ಬೇರೆ ಬೇರೆ ವೃತ್ತಿನಿರತರಾಗಿರುವವರಿಗೆ ಡ್ರೈವಿಂಗ್ ಕಲಿಯಲು ಸಂಜೆಯಷ್ಟೇ ಸಮಯ ಸಿಗುತ್ತದೆ. ಹೀಗಾಗಿ ಸ್ನೇಹಾರಿಗೆ ಸಮಯವೇ ಇರುವುದಿಲ್ಲ. ಆದರೂ ಮಧ್ಯಾಹ್ನದ ವೇಳೆಗೆ ಬಿಡುವು ಮಾಡಿಕೊಂಡು ತಮ್ಮ 7 ವರ್ಷದ ಮಗಳಿಗಾಗಿ ಸಮಯವನ್ನು ಮೀಸಲಿಡುತ್ತಾರೆ. ನಂತರ ಸಂಜೆ ಮತ್ತೆ ಕೆಲಸಕ್ಕೆ ತೆರಳುತ್ತಾರೆ.

10 ದಿನದಲ್ಲಿ ಅವರು ಡ್ರೈವಿಂಗ್ ಕಲಿಯದಿದ್ದರೆ ಅವರ ಪಾವತಿಸಿದ್ದ ಶುಲ್ಕವನ್ನು ಹಿಂತಿರುಗಿಸುವ ನೀತಿ ಹಾಕಿಕೊಂಡಿದ್ದಾರೆ ಸ್ನೇಹಾ. ಆದರೆ ಇಲ್ಲಿಯವರೆಗೆ ಯಾವುದೇ ವಿದ್ಯಾರ್ಥಿಗೂ ಮರುಪಾವತಿಸುವ ಪರಿಸ್ಥಿತಿ ಬಂದಿಲ್ಲ. ಮಹಿಳೆಯರು ಅಷ್ಟು ಆಸಕ್ತಿಯಿಂದ ಡ್ರೈವಿಂಗ್ ಕಲಿಯುತ್ತಿದ್ದಾರೆ ಎನ್ನುತ್ತಾರೆ ಸ್ನೇಹಾ.

ಭವಿಷ್ಯದ ಯೋಜನೆ

ಈಗಾಗಲೇ ಬಿಬಿಸಿ ಮತ್ತು ವಿವಿಧ ಗೌರವಾನ್ವಿತ ಪ್ರಕಾಶನಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ ಸ್ನೇಹಾ. ಈಗ ಸಮಾಜಕ್ಕೇನಾದರೂ ವಾಪಸ್ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಕಾರು ಡ್ರೈವಿಂಗ್‌ ತರಬೇತಿ ನೀಡಿ ಅವರನ್ನು ತಮ್ಮೊಂದಿಗೆ ಕೆಲಸಕ್ಕೆ ಸೇರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ. ಇವರಲ್ಲಿ ಕೆಲವರನ್ನು ಕಚೇರಿ ಕಾರು ಡ್ರೈವರ್‌ಗಳಾಗಿ ಕೆಲವು ಕಂಪನಿಗಳಲ್ಲಿ ನೇಮಿಸುವಂತೆ ಶಿಫಾರಸು ಸಹ ಮಾಡುವ ಚಿಂತನೆಯಲ್ಲಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರು ಕೆಲಸದವರಾಗಿಯೇ ಇರಬೇಕಿಲ್ಲ ಎನ್ನುತ್ತಾರೆ ಸ್ನೇಹಾ. ಪ್ಯಾನ್ ಇಂಡಿಯಾದ ಚಳುವಳಿಯಲ್ಲೂ ತಮ್ಮ ಸೇವೆ ಒದಗಿಸಲು ಉತ್ಸುಕರಾಗಿದ್ದಾರೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿದರೆ ಅವರು ಅನೇಕ ಅಚ್ಚರಿಗಳನ್ನು ಸಾಧಿಸಬಲ್ಲರು ಎಂಬುದು ಸ್ನೇಹಾರ ವಿಶ್ವಾಸ.