‘ಆ’ ಮಹಿಳೆಯರ ಬದುಕು ಬದಲಾಯಿಸಿದ ಹೊಸ ‘ಲೈಟ್’ ಕಥೆ

ಟೀಮ್​​ ವೈ.ಎಸ್​​.

0

ಬೆಳಕಿನತ್ತ

32 ವರ್ಷದ ಜಯೀತಾ (ಹೆಸರು ಬದಲಾಯಿಸಲಾಗಿದೆ) ಅವರು ಕಳೆದ 7 ವರ್ಷಗಳಿಂದ ಕೋಲ್ಕತ್ತಾದ ಮುನ್ಷಿಗಂಜ್ ಎಂಬ ವೇಶ್ಯಾಗೃಹವೊಂದರಲ್ಲಿ ಜೀವನ ನಡೆಸುತ್ತಿದ್ದರು. ಈ ಜೀವನದಿಂದ ಬೇಸತ್ತಿದ್ದ ಜಯೀತಾ 2012ರ ಸೆಪ್ಟಂಬರ್​​ನಲ್ಲಿ ಡಿವೈನ್ ಸ್ಕ್ರಿಪ್ಟ್ ಸೇರಿಕೊಂಡರು. ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದ ಜಯೀತಾ ಅತ್ಯಲ್ಪ ಅವಧಿಯಲ್ಲಿ ಕೆಲಸದ ತಾಂತ್ರಿಕತೆಯನ್ನು ಕಲಿತುಕೊಂಡರು. ಸುಮಾರು ಒಂದೂವರೆ ವರ್ಷಗಳ ಕಾಲ ದುಡಿದ ಅವರಿಗೆ ಹೆಚ್ಚಿನ ಸಂಬಳದ ಆಮಿಷದೊಂದಿಗೆ ಲೆದರ್ ಫ್ಯಾಕ್ಟರಿಯೊಂದು ಕೆಲಸಕ್ಕೆ ಕರೆಯಿತು. ಈಗ ಅವರು ವೇಶ್ಯಾಗೃಹದಲ್ಲಿಲ್ಲ. ಗೌರವಯುತವಾದ ಬಾಳು ಬದುಕುತ್ತಿದ್ದಾರೆ.

ಜಯೀತಾರಂತೆಯೇ, 28 ವರ್ಷದ ಫರ್ಝಾನಾ ಕೂಡಾ 12 ವರ್ಷಗಳ ಕಾಲ ವೇಶ್ಯಾಗೃಹದಲ್ಲಿ ಕೆಲಸ ಮಾಡಿದ್ದರು. ಕೆಲ ವರ್ಷಗಳ ಹಿಂದೆ ಪಿಂಪ್ ಒಬ್ಬ ಆಕೆಯನ್ನು ಮುನ್ಷಿಗಂಜ್​​ಗೆ ಕರೆತಂದಿದ್ದ. ಯಾರೋ ಹಿತೈಷಿಗಳು 2013ರ ಜನವರಿಯಲ್ಲಿ ಡಿವೈನ್ ಸ್ಕ್ರಿಪ್ಟ್​​ಗೆ ಸೇರಿಸಿದ್ದರು. ಕಳೆದ ಮಾರ್ಚ್​ನಲ್ಲಿ ಅವರಿಗೆ ಒಳ್ಳೆಯ ಕೆಲಸ ಸಿಕ್ಕಿದೆ. ಈಗ ಅವರಿಗೆ ವೇಶ್ಯಾಗೃಹದಲ್ಲಿ ಸಿಗುತ್ತಿದ್ದುದಕ್ಕಿಂತ ಹೆಚ್ಚಿನ ಹಣ ಸಿಗುತ್ತಿದೆ. ಹಳೆಯದನ್ನೆಲ್ಲಾ ಮರೆತಿರುವ ಅವರು ಈಗ ಹೊಸ ಜೀವನ ಸಾಗಿಸುತ್ತಿದ್ದಾರೆ.

ಬದಲಾವಣೆಯ ಬದುಕು

ಜಯೀತಾ, ಫರ್ಜಾನಾರಂತೆ ಕೋಲ್ಕತ್ತಾದ ಖಿದ್ದಿರ್​​ಪುರ್ ಪ್ರದೇಶದ ಹಲವು ಯುವತಿಯರು ಡಿವೈನ್ ಸ್ಕ್ರಿಪ್ಟ್ ಸೇರಿದ ಬಳಿಕ ಹೊಸ ಬದುಕು ಕಂಡುಕೊಂಡಿದ್ದಾರೆ. ಮಹುವಾ ಸುರ್ ರೇ ಅವರಿಂದ ಸ್ಥಾಪಿಸಲ್ಪಟ್ಟ ಡಿವೈನ್ ಸ್ಕ್ರಿಪ್ಟ್ ಸೊಸೈಟಿ ವೇಶ್ಯಾಗೃಹಗಳಲ್ಲಿ ನರಳುತ್ತಿರುವ ಮಹಿಳೆಯರಿಗೆ ಹೊಸ ಬಾಳು ಕಲ್ಪಿಸುತ್ತಿದೆ. ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ವೃತ್ತಿಪರ ಕೆಲಸ ಮಾಡುತ್ತಿದ್ದರೂ, ಮಹುವಾ ಅವರ ಮನಸ್ಸೆಲ್ಲವೂ ವೇಶ್ಯಾವಾಟಿಕೆಯಲ್ಲಿ ಸಿಲುಕಿರುವ ದುರ್ದೈವಿಗಳಿಗೆ ಸಹಾಯ ಮಾಡಲು ಹಾತೊರೆಯುತ್ತಿತ್ತು. “ಡಿವೈನ್ ಸ್ಕ್ರಿಪ್ಟ್ ಆರಂಭಿಸುವುದಕ್ಕೂ ಮುನ್ನ, ನನ್ನ ಎಲ್ಲಾ ವೃತ್ತಿ ಬದುಕಿನ ಉದ್ದಕ್ಕೂ, ನಾನು ಎರಡು ತತ್ವಗಳನ್ನು ಪಾಲಿಸಿದ್ದೇನೆ, ಒಂದು ಪರಿಣಾಮಕಾರಿ ಮತ್ತೊಂದು ಸುಸ್ಥಿರತೆ. ಈ ಹಿಂದೆ ನಾನು ಉಪ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಎನ್​​ಜಿಒದಲ್ಲಿ ಕೂಡಾ ನಾನು ಇದೇ ಚಿಂತನೆ ಮಾಡುತ್ತಿದ್ದೆ. ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರ ಬದುಕನ್ನು ಸುಧಾರಿಸಲು ನಡೆಸುತ್ತಿರುವ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿರಲಿಲ್ಲ. ಅವರಿಗೂ ಸುಸ್ಥಿರವಾದ ಬದುಕು ಕಲ್ಪಿಸಿ ಅವರ ಮಾನಸಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಬಗ್ಗೆ ಯೋಚನೆ ಮಾಡುತ್ತಿದ್ದೆ ಎನ್ನುತ್ತಾರೆ ಮಹುವಾ.

ಇವೆಲ್ಲವೂ ಮಹಿಳೆಯರನ್ನು ವೇಶ್ಯಾಗೃಹದಿಂದ ಹೊರತರಲು ಸಾಕಾಗುವುದಿಲ್ಲ ಎಂದು ಮಹುವಾ ನಿರ್ಧರಿಸಿದ್ದರು. ಅವರಿಗೆ ಆರ್ಥಿಕವಾಗಿ ಸ್ವತಂತ್ರ ಮತ್ತು ಗೌರವಯುತ ಬದುಕು ಬಾಳಲು ಪರ್ಯಾಯ ಆರ್ಥಿಕ ಮೂಲಗಳು ಬೇಕಾಗಿದ್ದವು. “ನಾವು ಕಾರ್ಯನಿರತ ಹೆಣ್ಮಕ್ಕಳ ಹಾಸ್ಟೆಲ್ ಒಂದರ ಜೊತೆಗೂಡಿ 2011ರಲ್ಲಿಯೇ ಒಂದು ಸಂಸ್ಥೆಯನ್ನು ಆರಂಭಿಸಿದ್ದೆವು. ವೇಶ್ಯೆಯರ ಮಕ್ಕಳು ಸಣ್ಣ ಕೋಣೆಗಳಲ್ಲಿ ವಾಸಿಸುವುದರಿಂದ ಯಾವುದೇ ಕಾರಣಕ್ಕೂ ಅವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮಾಂಸದಂಧೆಗೆ ಸಿಲುಕಬಾರದು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಜೊತೆಜೊತೆಗೆ ನಾವು, ಸೈಕಲ್ ಟೈರ್ ಮತ್ತು ಟ್ಯೂಬ್​​ಗಳನ್ನು ಬಳಸಿಕೊಂಡು ವಿವಿಧ ಉತ್ಪನ್ನಗಳನ್ನು ತಯಾರಿಸುವ ಉತ್ಪಾದನಾ ಘಟಕವೊಂದನ್ನೂ ಸ್ಥಾಪಿಸಿದೆವು. ಈ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ವೇಶ್ಯೆಯರಿಗೆ ಬದಲಿ ಆರ್ಥಿಕ ಸೌಲಭ್ಯ ಒದಗಿಸುವ ಕೆಲಸ ಆರಂಭಿಸಿದೆವು” ಎನ್ನುತ್ತಾರೆ ಮಹುವಾ.

ಸುರಕ್ಷತೆ ಮೊದಲು

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪ್ರಾಜೆಕ್ಟ್ ಮ್ಯಾನೇಜ್​​ಮೆಂಟ್, ಲೈಂಗಿಕ ಆರೋಗ್ಯ, ಮಕ್ಕಳ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 20 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಮಹುವಾ ಅವರು ವೇಶ್ಯಾಗೃಹದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ 18 ವರ್ಷ ಮೇಲ್ಪಟ್ಟ ಮಕ್ಕಳ ಬದುಕನ್ನು ರಕ್ಷಿಸಲು ಕಟಿಬದ್ಧರಾಗಿದ್ದರು. “ಈ ಮಕ್ಕಳು ರಾತ್ರಿ ವೇಳೆ ತಮ್ಮ ತಾಯಿಯ ಜೊತೆಗೇ ವಾಸಿಸುತ್ತಿದ್ದುದರಿಂದ ಇಂತಹ ಬದುಕಿಗೆ ತೆರೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ನಾವು ಡಿವೈನ್ ಸ್ಕ್ರಿಪ್ಟ್ ಮೂಲಕ ಪ್ರಾಯೋಜಿತ ಕಾರ್ಯಕ್ರಮಗಳನ್ನೂ ಆರಂಭಿಸಿದ್ದೇವೆ. ಪ್ರಾಯೋಜಕರ ಮೂಲಕ ನಾವು, ವೇಶ್ಯೆಯರ ಮಕ್ಕಳನ್ನು ವಸತಿ ಶಾಲೆಗೆ ಸೇರಿಸಿ ಅವರಿಗೆ ಒಳ್ಳೆಯ ಶಿಕ್ಷಣ, ಪೌಷ್ಟಿಕರ ಆಹಾರ ಒದಗಿಸಿ, 18 ವರ್ಷ ತುಂಬುವವರೆಗೆ ಒಳ್ಳೆಯ ವಾತಾವರಣದಲ್ಲಿ ಬೆಳೆಸುತ್ತೇವೆ. ಒಂದು ಹಂತದವರೆಗೆ ಶಿಕ್ಷಣ ಪಡೆದ ಈ ಮಕ್ಕಳು, ಸುಸ್ಥಿರವಾದ ಉದ್ಯೋಗಕ್ಕೆ ಸೇರಿಕೊಂಡು ತಮ್ಮ ತಾಯಿಯನ್ನು ವೇಶ್ಯಾವೃತ್ತಿಯಿಂದ ಹೊರತಂದು ಗೌರವಯುತವಾಗಿ ಬದುಕು ಕಲ್ಪಿಸಲು ಸಾಧ್ಯವಾಗುತ್ತದೆ. ನಮ್ಮ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ನಿರ್ಲಕ್ಷಿಸಲ್ಪಟ್ಟ ಸಮುದಾಯ ಹಾಗೂ ರೆಡ್​​ಲೈಟ್ ಪ್ರದೇಶಗಳ ಮಹಿಳೆಯರು ಎರಡು ಶಿಫ್ಟ್​​ಗಳಲ್ಲಿ ಕೆಲಸ ಮಾಡುತ್ತಾರೆ,” ಎಂದು ತಮ್ಮ ಸಂಸ್ಥೆಯ ಚಟುವಟಿಕೆಯನ್ನು ವಿವರಿಸುತ್ತಾರೆ ಮಹುವಾ.

ಒಂದು ಗೌರವಯುತವಾದ ಬದುಕು

ರೆಡ್​​ಲೈಟ್ ಏರಿಯಾದ ಮಹಿಳೆಯರಿಗೆ ಪರ್ಯಾಯ ಬದುಕು ಕಲ್ಪಿಸುವುದು ಮಹುವಾರ ಪ್ರಾಥಮಿಕ ಗುರಿಯಾಗಿದೆ. ಇದನ್ನು ಈಡೇರಿಸಿಕೊಳ್ಳಲು ಅವರು ತಮ್ಮದೇ ಹಾದಿ ಹಿಡಿದುಕೊಂಡಿದ್ದಾರೆ. “ವೇಶ್ಯೆಯರು ರಾತ್ರಿ ಬೆಳಗಾಗುವುದರೊಳಗೆ ತಮ್ಮ ವೃತ್ತಿ ಬಿಟ್ಟು ಹೊರಗೆ ಬರುವುದಿಲ್ಲ ಎನ್ನುವುದು ನಮಗೆ ಗೊತ್ತಿದೆ. ಆದರೆ ನಮ್ಮ ಉತ್ಪಾದನಾ ಘಟಕದಲ್ಲಿನ ಉದ್ಯೋಗಗಳು ಅವರಿಗೆ ಮುಖ್ಯವಾಹಿನಿಗೆ ಬರಲು ಸಹಾಯ ಮಾಡುತ್ತವೆ. ಅವರು ಬೇರೆ ಗುಂಪುಗಳ ಜೊತೆಗೆ ಬೆರೆಯುವುದರಿಂದ, ಸುಲಭದಲ್ಲಿ ನೌಕರಿ ಸಿಗುತ್ತದೆ. ಅವರಿಗೆ ಅಂತರ್-ವ್ಯಕ್ತಿ ಸಂವಹನ ಕಲೆಯನ್ನೂ ಹೇಳಿಕೊಟ್ಟು ಆತ್ಮವಿಶ್ವಾಸ ತುಂಬಲು ನಾವು ನೆರವಾಗುತ್ತೇವೆ. ನಮ್ಮ ಉತ್ಪನ್ನಗಳಲ್ಲಿ ಬಹುತೇಕ ರಫ್ತಾಗುತ್ತವೆ. ಅಮೇಜಾನ್ ಮತ್ತು ಪೇಟಿಎಂನಲ್ಲೂ ಲಿಸ್ಟ್ ಮಾಡಿದ್ದೇವೆ. ನಮ್ಮ ಸಮಾಜವು ಅವರಿಗೆ ಬದಲಿ ಜೀವನಾಧಾರ ಕಲ್ಪಿಸುತ್ತದೆ ಮತ್ತು ಸ್ವಂತ ಕಾಲಿನ ಮೇಲೆ ನಿಂತು ಗೌರವದಿಂದ ಬದುಕುವಂತೆ ಮಾಡುತ್ತದೆ. ಇನ್ನೂ ಹೆಚ್ಚಿನ ಮಹಿಳೆಯರಿಗೆ ಇಂತಹ ಅವಕಾಶ ಕಲ್ಪಿಸಬೇಕಾದರೆ, ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಬೇಕಾಗಿದೆ. ಬೇರೆ ದೇಶಗಳಿಗೂ ರಫ್ತು ಮಾಡಬೇಕಾಗಿದೆ. ಹೊಸ ಬದುಕು ಕಂಡುಕೊಳ್ಳಲು ಹಾತೊರೆಯುತ್ತಿರುವ ಮಹಿಳೆಯರಿಗೆ ಹೊಸ ಜೀವನದ ನೀಡಲು ನಮಗೆ ಇದೊಂದೇ ದಾರಿ ಇರುವುದು,” ಎನ್ನುತ್ತಾರೆ ಮಹುವಾ.

ಇವರ ಅತ್ಯುತ್ತಮ ಅಂಶವೆಂದರೆ, ಇವರು ರೆಡ್​​ಲೈಟ್ ಪ್ರದೇಶಗಳ ಮಹಿಳೆಯರು ಮತ್ತು ಹುಡುಗಿಯರ ಮಧ್ಯೆ ಯಾವುದೇ ಬೇಧ ಎನಿಸುವುದಿಲ್ಲ. ಹುಡುಗಿಯರಲ್ಲಿ ನಾನಾ ಪ್ರತಿಭೆಗಳಿರುವುದರಿಂದ ಅವರಿಗೆ ಬೇಗನೇ ಉದ್ಯೋಗ ಸಿಗುತ್ತದೆ. ಶಿಸ್ತು, ಕಚೇರಿ ನೀತಿ, ಗುರಿ ನಿರ್ದೇಶಿತ ನಡವಳಿಕೆ ಮತ್ತು ಶುಚಿತ್ವವನ್ನು ಕಲಿಸಿಕೊಡುವ ಮೂಲಕ ಹೆಣ್ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಲು ನೆರವಾಗುತ್ತೇವೆ.

ಸಬಲೀಕರಣದ ಹಾದಿ

ಡಿವೈನ್ ಸ್ಕ್ರಿಪ್ಟ್ ಸೇರಿದ ಬಳಿಕ, ಖಿದಿರ್​​​ಪುರ್​​​ನ ನಲುಗಿರುವ ಮಹಿಳೆಯರ ಬದುಕು 360 ಡಿಗ್ರಿ ಬದಲಾಗಿದೆ. ಅವರನ್ನು ಕತ್ತಲ ಕೂಪದಿಂದ ಬೆಳಕಿನತ್ತ ತರಲು ಮಹುವಾ ಅವರು ಅವಿಶ್ರಾಂತ ದುಡಿಯುತ್ತಿದ್ದಾರೆ. “ಕಳೆದ ನಾಲ್ಕು ವರ್ಷಗಳಲ್ಲಿ ನಾವು 14 ಯುವತಿಯರಿಗೆ ಆಸರೆ ಕಲ್ಪಿಸಿದ್ದೇವೆ. ಅವರನ್ನು ಮುಖ್ಯವಾಹಿನಿಗೆ ತರಲು ಬೇಕಾದ ನೆರವು ನೀಡಿದ್ದೇವೆ. ಪ್ರಾಯೋಜಿತ ಕಾರ್ಯಕ್ರಮಗಳ ಮೂಲಕ 11 ಮಕ್ಕಳಿಗೆ ನಾವು ಬೆಂಬಲ ನೀಡಿದ್ದೇವೆ. ನಮ್ಮ ಉತ್ಪಾದನಾ ಘಟಕದಲ್ಲಿ 32-35 ಮಹಿಳೆಯರು ಸಧ್ಯಕ್ಕೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಿವಿಧ ವಲಯಗಳಲ್ಲಿ ತರಬೇತಿಯನ್ನೂ ನೀಡುತ್ತಿದ್ದೇವೆ. ನಮ್ಮ ಘಟಕದ ಮೂಲಕ ಕಳೆದ ನಾಲ್ಕು ವರ್ಷಗಳ ಕಾರ್ಯಾಚರಣೆಯಲ್ಲಿ 6 ಹೆಣ್ಮಕ್ಕಳನ್ನು ಮುಖ್ಯವಾಹಿನಿಗೆ ತಂದಿದ್ದೇವೆ, ಎಂದು ಮಾತು ಮುಗಿಸುತ್ತಾರೆ ಮಹುವಾ.

Related Stories

Stories by YourStory Kannada