ಟೀಮ್ ವೈ.ಎಸ್.ಕನ್ನಡ
ಭಾರತದಲ್ಲಿ ಕೈಗಾರಿಕೆಗಳನ್ನು ಆರಂಭಿಸಿರುವ ರಾಷ್ಟ್ರಗಳ ಪೈಕಿ ಜಪಾನ್ಗೆ 2ನೇ ಸ್ಥಾನ. 1200ಕ್ಕೂ ಹೆಚ್ಚು ಜಪಾನ್ ಸಂಸ್ಥೆಗಳು ಭಾರತದಲ್ಲಿ ಕಾರ್ಯಾಚರಿಸುತ್ತಿವೆ. ಹಲವು ಸಂಸ್ಥೆಗಳು ಭಾರತದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಮಾಡಿಕೊಂಡಿವೆ. ಅತ್ಯುತ್ತಮ ಗುಣಮಟ್ಟದ ಹಿನ್ನೆಲೆಯಲ್ಲಿ ಭಾರತದಲ್ಲಿ ಜಪಾನ್ ಸಂಸ್ಥೆಗಳು ಮನೆ ಮಾತಾಗಿವೆ. ಈ ಸಂದರ್ಭದಲ್ಲಿ ಒಂದು ಮಾತನ್ನು ನೆನಪಿನಲ್ಲಿಡಬೇಕಾಗಿದೆ. ಉತ್ಪಾದನಾ ವಲಯದ ಸಂಸ್ಥೆಗಳ ಬಗ್ಗೆ ಮಾತನಾಡುವಾಗ ಮೊದಲು ವ್ಯಕ್ತವಾಗುವುದೇ ಟೀಕೆ.. ಈ ಸಂಸ್ಥೆಗಳ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಅಲ್ಲದೇ ಕೇವಲ ಲಾಭದ ದೃಷ್ಟಿ ಮಾತ್ರ ನೋಡುವ ಈ ಸಂಸ್ಥೆಗಳು, ಮಾನವ ಕಲ್ಯಾಣ ಚಟುವಟಿಕೆಗಳಿಂದ ಬಹು ದೂರ. ಆದರೆ ಈ ಎಲ್ಲಾ ಟೀಕೆಗಳಿಗೆ ಜಪಾನಿನ ಸಂಸ್ಥೆಗಳು ಅದರಲ್ಲೂ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳು ಅಪವಾದವಾಗಿವೆ.
ಸಮುದಾಯ ಅಭಿವೃದ್ಧಿ ಮರೀಚಿಕೆಯಲ್ಲ.. ಬದಲಾಗಿ ವಾಸ್ತವ.. ಎಂಬುದನ್ನು ಜಪಾನಿನ ಹಲವು ಸಂಸ್ಥೆಗಳು ಸಾಬೀತುಪಡಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸೌಲಭ್ಯ, ಶುಚಿತ್ವಕ್ಕೆ ಒತ್ತು, ಮಹಿಳಾ ಸಬಲೀಕರಣ, ಮೂಲ ಸೌಲಭ್ಯ ಅಭಿವೃದ್ಧಿ ಹೀಗೆ ಹತ್ತು ಹಲವು ಯೋಜನೆಗಳಲ್ಲಿ ಜಪಾನ್ ಸಂಸ್ಥೆಗಳು ಕೈ ಜೋ಼ಡಿಸಿವೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎಂದೇ ಗುರುತಿಸಿರುವ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೂಡಿಕೆ ಕರ್ನಾಟಕ ಸಮಾವೇಶದಲ್ಲಿ ಜಪಾನ್ ಪೆವಿಲಿಯನ್ ಆಕರ್ಷಣೆಯ ಕೇಂದ್ರ ಬಿಂದು. ಇತರ ರಾಷ್ಟ್ರಗಳ ಪ್ರತಿನಿಧಿಗಳು ಜಪಾನ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಭಾರತದಲ್ಲಿನ ಜಪಾನ್ ರಾಯಭಾರಿ ಜುನಿಚಿಕವಾಯಿ, ಜಪಾನ್ ಸಾಧನೆಯನ್ನು ಬಣ್ಣಿಸಿದರು. ಭಾರತದಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಯೋಜನೆಯಡಿಯಲ್ಲಿ ಜಪಾನ್ ಸಂಸ್ಥೆಗಳು ಅತ್ಯುತ್ತಮ ಸಾಧನೆ ಮಾಡಿವೆ ಎಂದು ಹೇಳಿದರು. ಸೋನಿ, ಹೋಂಡಾ, ಹಿಟಾಚಿ ಹೀಗೆ ಪ್ರತಿಷ್ಠಿತ ಸಂಸ್ಥೆಗಳ ಹೆಸರು ಮಾತ್ರ ಜನರಿಗೆ ತಿಳಿದಿದೆ. ಆದರೆ ಇದಲ್ಲದೆ ಜಪಾನ್ನ ಹಲವು ಚಿಕ್ಕ ಚಿಕ್ಕ ಸಂಸ್ಥೆಗಳು ಜನ ಮೆಚ್ಚುಗೆ ಗಳಿಸಿವೆ ಎನ್ನುತ್ತಾರೆ ಜುನಿಚಿಕವಾಯಿ.
ಆರಂಭದ ದಿನದಲ್ಲಿ ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನೆಗೆ ಮಾತ್ರ ಗಮನ ಹರಿಸಿದ್ದ ಟೊಯೋಟಾ, ಬಳಿಕ ಪರಿಸರದ ಅಭಿವೃದ್ಧಿಗೆ ಕೂಡ ಗಮನ ಹರಿಸಿತು. ಭಾರತದಂತಹ ಅಭಿವೃದ್ಧಿ ಶೀಲ ಆರ್ಥಿಕತೆಯ ದೇಶದಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿತ್ತು. ಬಿಡದಿ ಕೈಗಾರಿಕಾ ಅಸೋಸಿಯೇಷನ್ ಸ್ಥಾಪಿಸಿವುದರ ಮೂಲಕ, ಸಮಾಜಮುಖಿ ಸೇವೆಗಳಿಗೆ ಒಂದು ವೇದಿಕೆ ಕಲ್ಪಿಸಲು ನಿರ್ಧರಿಸಲಾಯಿತು. ಅಭಿವೃದ್ಧಿಯಲ್ಲಿ ಸ್ಥಳೀಯ ಜನರ ಸಹ ಭಾಗಿತ್ವ ಮತ್ತು ಕೊಡುಗೆ ಇದರ ಅಂತರ್ಗತ ಭಾಗಗಳಾಗಿದ್ದವು. ಹೀಗೆ ಸಂಸ್ಥೆಯ ಅಭಿವೃದ್ಧಿಯೊಂದಿಗೆ ಸ್ಥಳೀಯ ಜನರ ಜೀವನ ಮಟ್ಟ ಹೆಚ್ಚಳ ಮತ್ತು ಆ ಪರಿಸರದಲ್ಲಿ ಮೂಲ ಭೂತ ಸೌಲಭ್ಯಕ್ಕೆ ಆದ್ಯತೆ ಸಂಸ್ಥೆಯ ನೀತಿ ನಿರೂಪಣೆಯ ಭಾಗಗಳಾದವು ಎನ್ನುತ್ತಾರೆ ಕಿರ್ಲೋಸ್ಕರ್ ಡಿಜಿಎಂ ಹಾಗೂ ಬಿಐಎ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ರಾಘವೇಂದ್ರ ಹೆಗ್ಡೆ .
ಬಿಐಎ ಅಂದರೆ ಬಿಡದಿ ಕೈಗಾರಿಕಾ ಸಂಘಟನೆ ಮೂಲಕ ಹಲವು ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ರಸ್ತೆ ಅಭಿವೃದ್ಧಿ, ದಾರಿ ದೀಪ ವ್ಯವಸ್ಥೆ, ಶಾಲೆಗೆ ಮೂಲ ಭೂತ ಸೌಲಭ್ಯ ಹೀಗೆ ಹತ್ತು ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆರೋಗ್ಯ ತಪಾಸಣಾ ಶಿಬಿರ ಕೂಡ ಹಮ್ಮಿಕೊಳ್ಳಲಾಗಿದೆ.
ಜಪಾನಿನ ಕೆಹಿನ್ ಪೀ ಸಂಸ್ಥೆಯ ಮುಖ್ಯಸ್ಥರಾಗಿರುವ ಮಸಾಕಿಯಾಶೀಮಾ ಕೂಡ ಇದಕ್ಕೆ ಧ್ವನಿ ಗೂಡಿಸಿದ್ದಾರೆ. ಗ್ರಾಮೀಣ ಶಾಲೆಗಳ ದುಸ್ಥಿತಿ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಕಾರ್ಖಾನೆ ನೌಕರರ ಮಕ್ಕಳು ಕಲಿಯುತ್ತಿರುವ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಇದು ಒಂದೆರಡು ಸಂಸ್ಥೆಗಳ ಮಾತಲ್ಲ. ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹತ್ತು ಹಲವು ಜಪಾನ್ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ.
Related Stories
March 14, 2017
March 14, 2017
March 14, 2017
March 14, 2017
Stories by YourStory Kannada