ಯುವ ಕಾಫಿ ಬೆಳೆಗಾರನ ‘ವಿವೇಕ’ದ ಮಾತು...

ವಿಶಾಂತ್​​

0

ಕೃಷಿ ನಮ್ಮ ದೇಶದ ಬೆನ್ನೆಲುಬು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಭಾವದಿಂದಾಗಿ ನಮ್ಮ ಗ್ರಾಮೀಣ ಜನರ ಜೀವನಶೈಲಿ ಬದಲಾಗುತ್ತಿದೆ. ಅಕಾಲಿಕ ಮಳೆ, ಬರಗಾಲ, ಏರುತ್ತಿರುವ ಖರ್ಚು-ವೆಚ್ಚಗಳಿಂದಾಗಿ ಕೃಷಿ ಮಾಡಲಾಗದೇ ರೈತ ಕುಟುಂಬಗಳು ಗ್ರಾಮಗಳನ್ನು ತೊರೆದು ನಗರ ಪ್ರದೇಶ ಸೇರುತ್ತಿವೆ. ಇನ್ನೂ ಕೆಲ ಯುವಕ- ಯುವತಿಯರು ಹೊಲ- ಗದ್ದೆ- ತೋಟಗಳಲ್ಲಿ ಮೈ, ಕೈ ಮಣ್ಣು ಮಾಡಿಕೊಳ್ಳೋದಕ್ಕಿಂತ ನಗರದಲ್ಲಿನ ಗಾಮೆಂಟ್ಸ್​​​ನಲ್ಲಿ ಕೆಲಸ ಮಾಡೋದೇ ಚಂದ ಅಂತ ಸಿಟಿಗಳತ್ತ ಮುಖ ಮಾಡುತ್ತಿದ್ದಾರೆ. ಆದ್ರೆ ಇಲ್ಲೊಬ್ಬರು ನಗರದಿಂದ ವಾಪಸ್ ಹಳ್ಳಿಗೆ ತೆರಳಿ, ಕಾಫಿ ತೋಟವನ್ನು ಅಭಿವೃದ್ಧಿಪಡಿಸಿ ಯಶಸ್ವಿಯಾಗಿದ್ದಾರೆ. ಈ ಮೂಲಕ ನಗರಗಳತ್ತ ಮುಖ ಮಾಡುತ್ತಿರುವ ಗ್ರಾಮೀಣ ಯುವಕರಿಗೆ ಮಾದರಿಯಾಗಿದ್ದಾರೆ.

ಇವರು ವಿವೇಕ್ ಭಾಸ್ಕರ್

ವಿವೇಕ್ ಭಾಸ್ಕರ್ ಹುಟ್ಟಿದ್ದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮರಹಾದಿಗೆ ಗ್ರಾಮದಲ್ಲಿ. ಭಾಸ್ಕರ್ ಮತ್ತು ಗೀತಾ ದಂಪತಿಯ ಕಿರಿಯ ಪುತ್ರ. ಅಣ್ಣ ವಿಶಾಂತ್ ಜೊತೆ ಮೈಸೂರು ಹಾಗೂ ಹಾಸನಗಳಲ್ಲೇ ಶಾಲಾ ಶಿಕ್ಷಣ ಪಡೆದರು ವಿವೇಕ್. ನಂತರ ಎಲೆಕ್ಟ್ರಿಕಲ್ಸ್ ವಿಭಾಗದಲ್ಲಿ ಐಟಿಐ ಶಿಕ್ಷಣ ಪೂರ್ಣಗೊಳಿಸಿ ಬೇರೆ ಯುವಕರಂತೆ ಕೆಲಸವನ್ನರಸಿ ಬೆಂಗಳೂರಿಗೆ ಬಂದರು. ಅವರಿಗೆ ಫೆರೋ ಪ್ಲಸ್ ಕಂಪನಿಯಲ್ಲಿ ಇಂಟೀರಿಯರ್ ಡಿಸೈನಿಂಗ್ ಸೂಪರ್‍ವೈಸರ್ ಆಗಿ ಕೆಲಸವೂ ದೊರೆಯಿತು. ಆದ್ರೆ ಬೆಂಗಳೂರಿನ ಬ್ಯುಸಿ ಲೈಫ್ ಮತ್ತು ಆಧುನಿಕ ಲೈಫ್‍ಸ್ಟೈಲ್‍ನಲ್ಲಿ ಅವರಿಗೆ ಹೆಚ್ಚು ಕಾಲ ಇರಲು ಇಷ್ಟವಾಗಲಿಲ್ಲ. ಹೀಗಾಗಿ ಐದಾರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ ಬಳಿಕ ಮತ್ತೆ ಊರಿನ ದಾರಿ ಹಿಡಿದರು.

ಕಾಫಿ ತೋಟದ ಅಭಿವೃದ್ಧಿ

ಈಗ್ಗೆ ಮೂರು ವರ್ಷಗಳ ಹಿಂದೆ ವಿವೇಕ್ ಮರಹಾದಿಗೆಯ ಹಾದಿ ಹಿಡಿದರು. ಕಂಪ್ಯೂಟರ್ ಮುಂದೆ ಕುಳಿತು ಇಂಟೀರಿಯರ್ ಡಿಸೈನಿಂಗ್ ಮಾಡುತ್ತಿದ್ದ ವಿವೇಕ್ ಊರಿಗೆ ಬಂದು ತೋಟದ ಕೆಲಸ ಮಾಡತೊಡಗಿದರು. ಮೌಸ್ ಹಿಡಿಯುತ್ತಿದ್ದ ಕೈಗೆ ಗುದ್ದಲಿ ಬಂತು.

ಅಣ್ಣನೂ ಬೆಂಗಳೂರಿನಲ್ಲೇ ಇದ್ದ ಕಾರಣ ತಂದೆ- ತಾಯಿ ಮಾತ್ರ ಊರಿನಲ್ಲಿದ್ದರು. 40 ಎಕರೆ ಕಾಫಿ ತೋಟ, 10 ಎಕರೆ ಗದ್ದೆ ನೋಡಿಕೊಳ್ಳುವುದು ಅವರಿಗೂ ಕಷ್ಟವಾಗುತ್ತಿತ್ತು. ಅದೇ ಸಮಯದಲ್ಲಿ ಊರು ಸೇರಿದ ವಿವೇಕ್ ಎಲ್ಲಾ ಜವಾಬ್ದಾರಿಗಳನ್ನೂ ತಮ್ಮ ಹೆಗಲಿಗೆ ಹಾಕಿಕೊಂಡರು. ಹಂತ ಹಂತವಾಗಿ ತೋಟವನ್ನು ಅಭಿವೃದ್ಧಿಪಡಿಸತೊಡಗಿದ್ರು.

ಸವಾಲುಗಳು

ಈಗೀಗ ಕಾಫಿ ತೋಟದಲ್ಲಿ ಕೆಲಸ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿಯೇ ಸೀಸನ್‍ನಲ್ಲಿ ಕಾಫಿ ಕೀಳುವಾಗ, ಒಣಗಿಸುವಾಗ ಹಗಲು ರಾತ್ರಿಯೆನ್ನದೇ ಶ್ರಮಿಸಿದರು ವಿವೇಕ್. ನೀರಿನ ಸಮಸ್ಯೆ ಎದುರಾದ ಕಾರಣ ಕಟ್ಟೆ ನಿರ್ಮಿಸಿದರು. ನೀರನ್ನು ಶೇಖರಿಸಿಟ್ಟು, ಅಲ್ಲಿಂದಲೇ ತೋಟಕ್ಕೆ ನೀರುಣಿಸತೊಡಗಿದರು. ಜೊತೆಗೆ ತಾವೇ ಖುದ್ದು ನಿಂತು ತೋಟದ ಕಳೆ ಆಗಿರಬಹುದು, ಕಾಲ ಕಾಲಕ್ಕೆ ಗೊಬ್ಬರ, ಔಷಧಿ ಎಲ್ಲವನ್ನೂ ಸಿಂಪಡಿಸತೊಡಗಿದರು. ಅದೇ ಸಮಯದಲ್ಲಿ ಕಾಫಿಗೆ ಒಳ್ಳೆಯ ಬೆಲೆ ದೊರೆಯಿತು. ಮೂರು ವರ್ಷಗಳ ಹಿಂದೆ ಎಕರೆಗೆ 12 ರಿಂದ 15 ಚೀಲ ಕಾಫಿ ಸಿಗುತ್ತಿತ್ತು, ಆದ್ರೀಗ ಎಕರೆಗೆ 25 ಚೀಲ ಇಳುವರಿ ದೊರೆಯುತ್ತಿದೆ. ಅಲ್ಲದೇ ಚೀಲಕ್ಕೆ 3 ಸಾವಿರ ರೂಪಾಯಿಯಂತೆ 14 ರಿಂದ 15 ಲಕ್ಷ ರೂಪಾಯಿ ಗಳಿಸುತ್ತಿದ್ದ ಜಾಗದಲ್ಲೇ ವಿವೇಕ್ ಈಗ 30 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಅಲ್ಲದೇ ಕಾಫಿ ಜೊತೆಗೆ ಮೆಣಸನ್ನೂ ಬೆಳೆಯುತ್ತಿರುವುದರಿಂದ ಅದರಿಂದಲೂ ಹೆಚ್ಚು ಲಾಭ ದೊರೆಯುತ್ತಿದೆ.

ವಿವೇಕ್ ಏನಂತಾರೆ?

‘ಭವಿಷ್ಯಕ್ಕೆ ಒಳ್ಳೆಯದಾಗಬೇಕು ಅಂದ್ರೆ ಅದಕ್ಕೆ ಈಗಿನಿಂದಲೇ ಪ್ಲ್ಯಾನ್ ಮಾಡಿಕೊಳ್ಳಬೇಕು. ನಾನು ಬೆಂಗಳೂರಿನಿಂದ ಊರಿಗೆ ಬಂದಾಗ ತೋಟ, ಗದ್ದೆಗಳ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಈಗ ತುಂಬಾ ತಿಳಿದುಕೊಂಡಿದ್ದೇನೆ. ಕೃಷಿಯಲ್ಲಿ ಕಷ್ಟ ಇಲ್ಲ ಅಂತೇನಲ್ಲ. ಇಲ್ಲೂ ಹಲವು ಸವಾಲುಗಳಿವೆ. ಮೊದಲು ಕಷ್ಟವೆನಿಸಿತು. ಆದ್ರೆ ಕ್ರಮೇಣ ಎಲ್ಲವನ್ನೂ ಎದುರಿಸಿ ಇವತ್ತು ಒಂದು ಹಂತಕ್ಕೆ ಬಂದಿದ್ದೇನೆ. ಬೆಂಗಳೂರಿನಲ್ಲಿ ಕೆಲಸ ಮಾಡುವಾಗಲೂ ಪ್ರತಿದಿನ 8ರಿಂದ 10 ತಾಸು ಕೆಲಸ ಮಾಡುತ್ತಿದ್ದೆ. ಈಗ ತೋಟದಲ್ಲಿ ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡ್ತೀನಿ. ಅಲ್ಲಿ ಯಾರ ಕೈಕೆಳಗೋ, ಮತ್ತೊಬ್ಬರಿಗಾಗಿ ಕೆಲಸ ಮಾಡುತ್ತಿದ್ದೆ. ಆದ್ರೆ ಇಲ್ಲಿ ನನಗೆ ನಾನೇ ಮಾಲೀಕ. ನನ್ನ ಭವಿಷ್ಯದ ಒಳಿತಿಗಾಗಿ ದುಡಿಯುತ್ತಿದ್ದೇನೆ. ಒಟ್ಟಾರೆ ಹೇಳಬೇಕಂದ್ರೆ ನಗರದ ಜೀವನಕ್ಕಿಂತ ನನಗೆ ಹಳ್ಳಿಯ ಜೀವನ ಮತ್ತು ಕೆಲಸ ಸಮಾಧಾನ ನೀಡಿದೆ.’ ಅಂತ ನಗುತ್ತಾರೆ ವಿವೇಕ್.

ಇನ್ನು ಇತ್ತೀಚೆಗಷ್ಟೇ ಟ್ರ್ಯಾಕ್ಟರ್ ಖರೀದಿಸಿರುವ ವಿವೇಕ್ ತೋಟ ಮತ್ತು ಗದ್ದೆ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಜೊತೆಗೆ ಕಾಫಿ ಬೆಳೆಯನ್ನು ಕ್ಲೀನಿಂಗ್ ಮತ್ತು ಪಲ್ಪಿಂಗ್ ಮಾಡಲು ಈ ಹಿಂದೆ ಪಲ್ಪಿಂಗ್ ಮೆಷಿನ್ ಹೊಂದಿರುವ ಬೇರೆಯವರ ತೋಟಕ್ಕೆ ಹೋಗಬೇಕಿತ್ತು. ಈಗ ತಮ್ಮ ತೋಟದಲ್ಲೇ ಸುಮಾರು ಒಂದು ಸಾವಿರ ಚೀಲದಷ್ಟು ಕಾಫಿ ಬೆಳೆಯುತ್ತಿರುವ ಕಾರಣ ವಿವೇಕ್ ತಾವೇ ಪಲ್ಪರ್‍ಅನ್ನು ಖರೀದಿಸಿದ್ದಾರೆ. ಈ ಮೂಲಕ ತಮ್ಮ ತೋಟವನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದಾರೆ.

ಹೀಗೆ ವಿವೇಕ್ ನಗರದ ಜಂಜಾಟಗಳಿಂದ ದೂರಾಗಿ ಮತ್ತೆ ತಮ್ಮ ಹುಟ್ಟೂರು ಸೇರಿ ಸುಖೀ ಜೀವನ ಕಟ್ಟಿಕೊಂಡಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.

Related Stories