ಅನು ವೈದ್ಯನಾಥನ್ – ಮಹಿಳಾ ಸಾಧಕಿ, ಆಲ್​ರೌಂಡರ್

ಟೀಮ್​​ ವೈ.ಎಸ್​​.

0

ಕಥೆಗಾರಳಾಗಿ, ನಾನು ನನ್ನ ವೃತ್ತಿಯನ್ನು ಆಸ್ವಾದಿಸುತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ನಾನು ಬರೆಯುತ್ತಿರುವ ಕಥೆಗಳಲ್ಲಿ ಕೆಲವೊಂದು ವೈಯುಕ್ತಿಕವಾಗಿ ನನ್ನ ಹೃದಯವನ್ನು ನಾಟಿವೆ. ಈ ಕಥೆ ಅಂತಹ ಹಲವು ಕಥೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ.

ನೀವು ಅವರನ್ನು ಏನು ಬೇಕಾದರೂ ಕರೆಯಿರಿ, ಅಥ್ಲೀಟ್, ಉದ್ಯಮಿ, ಡಾಕ್ಟರ್, ಪ್ರೊಫೆಸರ್, ಮಗಳು, ಸೋದರಿ… ಅವರಿಗೆ ಎಲ್ಲವೂ ಹೊಂದುತ್ತವೆ. ಅವರನ್ನು ನೀವೂ ಭೇಟಿಯಾಗಿರಿ- ಅವರೇ ಅನುವೈದ್ಯನಾಥನ್, ಮಹಿಳಾ ಸಾಧಕಿ, ಸವ್ಯಸಾಚಿ

ಕ್ರೀಡಾಪಟುವಾಗಿ ಅನು

ಐರನ್​​ಮ್ಯಾನ್ ಟ್ರಯಾಥ್ಲಾನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅನು ವೈದ್ಯನಾಥನ್, ಈ ಯಶಸ್ಸು ಸಾಧಿಸಿದ ಮೊದಲ ಭಾರತೀಯ ಮಹಿಳೆಯಾಗಿ ಪ್ರಸಿದ್ಧಿಗೆ ಬಂದರು. ಟ್ರಯಥ್ಲಾನ್ ಎನ್ನುವುದು ವಿಶಿಷ್ಟ ಸ್ಪರ್ಧೆಯಾಗಿದೆ. ಇದರಲ್ಲಿ ಸ್ಪರ್ಧಿಯು 3.8 ಕಿಲೋಮೀಟರ್ ಈಜು, 180 ಕಿಲೋಮೀಟರ್ ಬೈಕಿಂಗ್ ಮತ್ತು 42.2 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಕ್ರೀಡೆಯಲ್ಲಿ ಹೆಚ್ಚಿನ ಗಮನ ಹರಿಸಿದ ಅನು, ಹಾಫ್-ಐರನ್​ಮ್ಯಾನ್ ವಿಶ್ವ ಚಾಂಪಿಯನ್​ಶಿಪ್​​ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಷ್ಟೇ ಅಲ್ಲ, ಅಲ್ಟ್ರಾಮ್ಯಾನ್ ಡಿಸ್ಟಾನ್ಸ್ ಸ್ಪರ್ಧೆ ಪೂರೈಸಿದ ಏಕೈಕ ಏಷ್ಯಾದ ಕ್ರೀಡಾಪಟು ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಇಂತಹ ವಿಶಿಷ್ಟ ಸ್ಪರ್ಧೆಯಲ್ಲಿ ಅವರಿಗೆ ಆಸಕ್ತಿ ಹುಟ್ಟಿದ್ದೂ ಒಂದು ಆಸಕ್ತಿದಾಯಕ ಕಥೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸಿಸುತ್ತಿದ್ದ ಅನು ತನ್ನ ಶಾಲೆಗಾಗಿ ಪ್ರತಿದಿನ ಮಲ್ಲೇಶ್ವರಂಗೆ 7 ಕಿಲೋಮೀಟರ್ ದೂರ ಸೈಕಲ್​​ನಲ್ಲಿ ತೆರಳುತ್ತಿದ್ದರು. ಬೇಸಿಗೆ ರಜೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದರು. ತನ್ನ ಮೂಲ ಊರಾದ ತಮಿಳುನಾಡಿಗೆ ಹೋದಾಗ ಅಕ್ಕಪಕ್ಕದ ಕೆರೆಗಳಲ್ಲಿ ಈಜುತ್ತಿದ್ದರು. ಕಾಲೇಜಿನಲ್ಲಿದ್ದಾಗ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾಗ, ಓಟದಲ್ಲಿ ಆಸಕ್ತಿ ಹೆಚ್ಚಾಯಿತು.

ಅತ್ಯಂತ ಪ್ರಮುಖ ವಿಚಾರವೇನೆಂದರೆ, ಅನು ಸ್ವಯಂ ಪ್ರೇರೇಪಣೆ ಇರುವ ವ್ಯಕ್ತಿ. ಎಲ್ಲವನ್ನೂ ತನ್ನ ಆಸಕ್ತಿಯಂತೆಯೇ ಮಾಡುತ್ತಿದ್ದರು. ಉತ್ತಮ ಯಶಸ್ಸು ಪಡೆಯಲು, ಆಥವಾ ಯಾವುದರಿಂದಲಾದರೂ ದೂರವಿರಲು ಅವರ ಮೇಲೆ ಯಾವುದೇ ಒತ್ತಡ ಇರಲಿಲ್ಲ.

“ನಾನು ತುಂಬಾ ಸಾಮಾನ್ಯವಾದ ಬಾಲ್ಯ ಕಳೆದೆ. ನನ್ನ ಪೋಷಕರು ಕಷ್ಟಪಟ್ಟು ದುಡಿಯುತ್ತಿದ್ದರು. ನಾನು ಸ್ಪರ್ಧಾತ್ಮಕ ವಿದ್ಯಾರ್ಥಿಯಾಗಿರಲಿಲ್ಲ. ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ನನ್ನ ವಿದ್ಯಾಭ್ಯಾಸದ ಬಗ್ಗೆ ನನಗೆ ಹೆಮ್ಮೆ ಇದೆ. ಯಾಕೆಂದರೆ, ನನ್ನ ಸಾಮರ್ಥ್ಯವನ್ನು ಅದರಿಂದಲೇ ಅಳೆಯುತ್ತಿದ್ದೆ,” ಎನ್ನುತ್ತಾರೆ ಅನು. ಎಂಜಿನಿಯರಿಂಗ್ ಓದುವುದರಿಂದ ಆರಂಭಿಸಿ, ಕಂಪ್ಯೂಟರ್ ಸೈನ್ಸ್​​ನಲ್ಲಿ ಡಾಕ್ಟರೇಟ್ ಪಡೆಯುವುದು ಕ್ರೀಡಾಳುವಾಗುವುದು ಎಲ್ಲವೂ ಅವರ ಇಚ್ಚೆಯಂತೇ ನಡೆಯಿತು. “ನಾನು ಪಿಹೆಚ್​​ಡಿ ಮತ್ತು ಕ್ರೀಡೆಯನ್ನು ಹಂತಹಂತವಾಗಿ ಪೂರೈಸಿದೆ. ನಾನು, ಏಕಕಾಲಕ್ಕೆ ಎಲ್ಲದರಲ್ಲೂ ಯಶಸ್ಸು ಪಡೆಯುವಷ್ಟು ಸಾಮರ್ಥ್ಯ ಹೊಂದಿರಲಿಲ್ಲ. ಯಾವುದರಲ್ಲಾದರೂ ಯಶಸ್ಸು ಪಡೆಯಬೇಕಾದರೆ, ನೀವು ಎಲ್ಲವನ್ನೂ ಅದಕ್ಕಾಗಿ ಮೀಸಲಿಡಬೇಕು. ನೀವು ಗಮನ ಕೇಂದ್ರೀಕರಿಸುವ ವಿಚಾರದಿಂದ ಯಾವುದೂ ನಿಮ್ಮನ್ನು ವಿಚಲಿತಗೊಳಿಸಬಾರದು,” ಎಂದು ವಿವರಿಸುತ್ತಾರೆ ಅನು. ಹಾಗಿದ್ದರೂ, ಅನು ಅವರು ಎಲ್ಲವನ್ನೂ ತುಂಬಾ ಸಂಘಟಿತವಾಗಿ ಮಾಡುತ್ತಿದ್ದರು. ಹೀಗಾಗಿ ಗರಿಷ್ಟ ಯಶಸ್ಸು ಪಡೆಯಲು ಸಾಧ್ಯವಾಯಿತು.

ಕ್ರೀಡಾಳುವಾಗಿ ಯಶಸ್ಸು ಪಡೆಯಲು ಟೈಮೆಕ್ಸ್ ಅವರ ಕೊಡುಗೆಯೂ ಸಾಕಷ್ಟಿದೆ. ಟೈಮೆಕ್ಸ್​​ನ ಪ್ರಾಯೋಜಕತ್ವ ಇಲ್ಲದೇ ಹೋಗಿದ್ದರೆ, ಸಾಧಿಸುವುದು ಸಾಧ್ಯವಿರಲಿಲ್ಲ ಎಂದು ವಿನಮ್ರವಾಗಿ ಹೇಳುತ್ತಾರೆ ಅನು. “ಈ ವಿಚಾರಗಳನ್ನು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ. ನೀವು ಏನಾದರೂ ಮಾಡಬೇಕು ಎಂದು ನಿರ್ಧರಿಸಿದೆ, ಮಾಡಲು ಆರಂಭಿಸಿದೆ. ನಿಮಗೆ ದಾರಿ ಸಿಕ್ಕಿಯೇ ಸಿಗುತ್ತದೆ. ಉಳಿದದ್ದೆಲ್ಲವೂ ಅಂದರೆ ಕೀರ್ತಿ, ಹಣ, ಬೆಂಬಲ ಎಲ್ಲವೂ ನಿಮ್ಮನ್ನು ಹಿಂಬಾಲಲಿಸಿಕೊಂಡು ಬರುತ್ತದೆ. ಯಾರಾದರೂ ಕಿರಿಯ ಕ್ರೀಡಾಳುಗಳು ಪತ್ರ ಬರೆದು ನಿಮ್ಮ ಸ್ಫೂರ್ತಿಯಿಂದಾಗಿಯೇ ನಾನು ಈ ಕ್ರೀಡೆ ಆಯ್ದುಕೊಂಡಿದ್ದೇನೆ ಎಂದರೆ ಅದರಿಂದ ತುಂಬಾ ಖುಷಿಯಾಗುತ್ತದೆ,” ಎನ್ನುತ್ತಾರೆ ಅನು.

ಟ್ರಯಥ್ಲಾನ್ ಬಗ್ಗೆ ಮಾಹಿತಿ ನೀಡಲು ಮತ್ತು ತರಬೇತಿ ನೀಡಲು ಯಾವುದಾದರೂ ಅಕಾಡೆಮಿ ಆರಂಭಿಸುತ್ತೀರಾ ಎಂದರೆ ಅದರ ಬಗ್ಗೆ ಆಸಕ್ತಿ ಇಲ್ಲ ಎನ್ನುತ್ತಾರೆ ಅನು. “ನಾನು ಈಗಾಗಲೇ ನನ್ನ ಇತಿಮಿತಿಯಲ್ಲಿ ಕ್ರೀಡೆಗೆ ಪ್ರಚಾರ ನೀಡುತ್ತಿದ್ದೇನೆ. ವೃತ್ತಿಯಲ್ಲಿರುವ ವ್ಯಕ್ತಿಯಾಗಿದ್ದೂ ನಾನು ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇದೇ ನಾನು ಈ ಕ್ರೀಡೆಗಾಗಿ ಸಲ್ಲಿಸುವ ಸೇವೆ. ನಾನು ಇಲ್ಲಿ ಸಾಮಾಜಿಕ ಕ್ರಾಂತಿಯೊಂದನ್ನು ಆರಂಭಿಸಲು ಬಂದಿಲ್ಲ ಎನ್ನುವುದು ನನಗೆ ಗೊತ್ತಿದೆ. ಇದರಲ್ಲಿ ಸೋಲು ಖಚಿತ,” ಎನ್ನುತ್ತಾರೆ ಅನು. ಹೀಗಿದ್ದರೂ ಕೂಡಾ ಟ್ರಯಥ್ಲಾನ್ ಆರಿಸಿಕೊಳ್ಳುವ ಯಾವುದೇ ಕ್ರೀಡಾಳುವಿಗೂ ತಮ್ಮಲ್ಲಿರುವ ಜ್ಞಾನಸಂಪತ್ತನ್ನು ಹಂಚಿಕೊಳ್ಳಲು ಅವರು ಸಿದ್ಧರಿದ್ದಾರೆ

ಉದ್ಯಮಿಯಾಗಿ ಅನು

ಅನು ಅವರು ಬೆಂಗಳೂರಿನಲ್ಲಿ ಪಾಟ್ಅನ್ಮಾರ್ಕ್ಸ್ ಎನ್ನುವ ಉದ್ಯಮವನ್ನೂ ಸ್ಥಾಪಿಸಿದ್ದಾರೆ. 2001ರಲ್ಲಿ ಆರಂಭವಾದ ಪಾಟ್ಅನ್ಮಾರ್ಕ್ಸ್ ಲಾಭದಾಯಕವಾಗಿಯೇ ನಡೆಯುತ್ತಿದೆ ಎನ್ನುತ್ತಾರೆ ಅನು. “ಜೀವನ ಚೆನ್ನಾಗಿದೆ, ಆದರೆ ಮಾರುಕಟ್ಟೆ ಕಠಿಣವಾಗಿದೆ. ಐಪಿ ಎಂದರೇನು ಎನ್ನುವುದನ್ನು ನಾವು ಜನರಿಗೆ ಅರ್ಥ ಮಾಡಿಕೊಡುವುದೇ ಅರಂಭದಲ್ಲಿ ದೊಡ್ಡ ಸವಾಲಾಗಿತ್ತು. ಈಗಿನ ಹೂಡಿಕೆದಾರರು ತುಂಬಾ ಸ್ಮಾರ್ಟ್ ಆಗಿದ್ದಾರೆ, ಮತ್ತು ಪರಿಶ್ರಮ ಪಡುತ್ತಾರೆ,” ಎನ್ನುತ್ತಾರೆ ಅನು. ಸಧ್ಯ ಬೆಂಗಳೂರು, ಚೆನ್ನೈ ಮತ್ತು ಆಸ್ಟಿನ್​​ನಲ್ಲಿ ಇವರ ಕಚೇರಿಗಳಿದ್ದು, 12 ಜನರು ಕೆಲಸ ಮಾಡುತ್ತಿದ್ದಾರೆ.

ಕ್ರೀಡೆ ಮತ್ತು ಉದ್ಯಮದ ಜೀವನದಲ್ಲಿ ಏನಾದರೂ ಸಮಾನ ಅಂಶಗಳು ಇವೆಯೇ? ಖಂಡಿತಾ ಇದೆ ಎನ್ನುತ್ತಾರೆ ಅನು. ಕ್ರೀಡೆ ಮತ್ತು ಪ್ಯಾಟ್ಅನ್ಮಾರ್ಕ್​ನ ಸಿದ್ಧಾಂತಗಳು ಒಂದೇ. ಯೋಚನೆಯೂ ಒಂದೇ ಎನ್ನುತ್ತಾರವರು. “ನಾನು ಪಾಲ್ಗೊಳ್ಳುತ್ತಿರುವ ಕ್ರೀಡೆ ಎಲ್ಲದಕ್ಕಿಂತ ಹೆಚ್ಚಿನ ಶಿಸ್ತನ್ನು ಬಯಸುತ್ತದೆ. ಉದ್ಯಮದಲ್ಲೂ ಹಾಗೆಯೇ. ನೀವು ಮೂರು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ, ನಿಮಗೆ ಸಾಕಷ್ಟು ಹಣದ ಹರಿವು ಬರುತ್ತಿದೆಯೆಂದರೆ ಅದಕ್ಕೆ ಶಿಸ್ತೇ ಕಾರಣ. ಕ್ರೀಡೆಯಲ್ಲಾದರೆ ನಿಮ್ಮ ಎನರ್ಜಿಯನ್ನು ಕಾಪಾಡಲೇ ಬೇಕಾಗುತ್ತದೆ. ಹಾಗೆಯೇ ಉದ್ಯಮದಲ್ಲೂ ನೀವು ನಿರಂತರ ಪರಿಶ್ರಮ ಪಡದಿದ್ದರೆ ಯಶಸ್ಸು ಸಿಗುವುದಿಲ್ಲ” ಎಂದು ವಿವರಿಸುತ್ತಾರೆ ಅನು.

ಇವಲ್ಲದೆ, ಎರಡರ ಮಧ್ಯೆ ಮತ್ತಷ್ಟು ಸಾಮ್ಯತೆಗಳೂ ಇವೆ. ಎರಡೂ ಕೂಡಾ ಸ್ಪರ್ಧಾತ್ಮಕ ಜಗತ್ತು. ದಿನಂಪ್ರತಿ ನೂರಾರು ಜನರನ್ನು ನಿಭಾಯಿಸಬೇಕಾಗುತ್ತದೆ. ಕಷ್ಟ ಕಾಲದಲ್ಲಿದ್ದಾಗಲೂ ಅಗತ್ಯತೆಗಳಿಗೆ ಹೇಗೆ ಸ್ಪಂದಿಸುತ್ತೀರಿ ಎನ್ನುವುದು ಅತ್ಯಂತ ಮುಖ್ಯವಾಗುತ್ತದೆ.

ಪ್ಯಾಟ್ಎನ್ಮಾರ್ಕ್ಸ್ ಈಗ ಹೊಸದಾಗಿ ಕಾರ್ಯಕ್ರಮವೊಂದನ್ನು ಆರಂಭಿಸಿದೆ. ವಿದ್ಯಾರ್ಥಿಗಳಿಗೂ ಐಪಿ ಆರಂಭಿಸುವಂತೆ ಪ್ರೇರೇಪಿಸುತ್ತಿದೆ. ಅನು ಅವರ ತಂದೆ ತಾಯಿ ಇಬ್ಬರೂ ಐಪಿ ಕ್ಷೇತ್ರದಲ್ಲಿ ಇದ್ದುದರಿಂದ ಅನು ಕೂಡಾ ಇದೇ ಕ್ಷೇತ್ರವನ್ನು ಉದ್ಯಮಕ್ಕೆ ಆರಿಸಿಕೊಂಡರು. ತಾಯಿ ಅಲಮೇಲು ವೈದ್ಯನಾಥನ್ ಅವರು ಭಾರತದಲ್ಲಿ ನೋಂದಣಿಯಾದ ಎರಡನೇ ಪೇಟೆಂಟ್ ಅಟಾರ್ನಿಯಾಗಿದ್ದರು. ಮಕ್ಕಳಾದ ಮೇಲೆ ಪದವಿ ಪಡೆದ ಹೆಗ್ಗಳಿಕೆ ಅವರದ್ದು. “ಅವರ ತಲೆಮಾರಿಗೆ ಇದು ಪಾತ್ ಬ್ರೇಕಿಂಗ್ ಸಾಧನೆಯಾಗಿತ್ತು. ಆ ಮನಸ್ಥಿತಿಯೇ ವಿಭಿನ್ನ. ಅಮ್ಮನಂತಹ ಮಹಿಳೆಯರು ಯಾಕೆ ಭಿನ್ನ ಎಂದರೆ, ಅವರು ನಮ್ಮ ನಿಮ್ಮಂತಹ ಮುಕ್ತ ಪರಿಸರದಲ್ಲಿ ಬೆಳೆದಿರಲಿಲ್ಲ. ಅವರು ನಮ್ಮನ್ನು ಕೂಡಾ ಹಾಗೆಯೇ ಬೆಳೆಸಿದರು. ವಿದ್ಯಾಭ್ಯಾಸದಲ್ಲಿ ನಾವು ಮುಂದೆ ಇರಬೇಕು ಎಂದು ಬಯಸಲಿಲ್ಲ. ಅದೇ ಜೀವನ ಎಂದು ನಮಗೆ ಕಲಿಸಲಿಲ್ಲ,”ಎನ್ನುತ್ತಾರೆ ಅನು.

ಪ್ಯಾಟ್ಎನ್ಮಾರ್ಕ್ಸ್​​ನಲ್ಲಿ ಅನು ಅವರು ಡೆವಲಪ್​​ಮೆಂಟ್ ಮತ್ತು ಗ್ರಾಹಕ ಸಂಪರ್ಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ತಂಡದಲ್ಲಿ ಇಂಜಿನಿಯರ್​ಗಳು ವಕೀಲರು ಇದ್ದು, ವಿವಿಧ ಕಚೇರಿಗಳಲ್ಲಿ ನೆರವು ನೀಡುತ್ತಿದ್ದಾರೆ. ಇವರ ಬಹುತೇಕ ಗ್ರಾಹಕರು ಭಾರತೀಯರೇ ಆಗಿದ್ದಾರೆ. ಉದ್ಯಮಿಯಾಗಿ ತಾವು ಮಾಡುತ್ತಿರುವ ಕೆಲಸವನ್ನು ನಿರಂತರವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವುದೇ ತಮ್ಮ ಗುರಿ ಎನ್ನುತ್ತಾರೆ ಅನು. ಐಪಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಕಂಪನಿಗಳ ಮೇಲೆ ಅವರು ಹೆಚ್ಚು ಗಮನಹರಿಸುತ್ತಿದ್ದಾರೆ. ಸಧ್ಯಕ್ಕೆ ಯಾವುದೇ ವಿಸ್ತರಣೆ ಯೋಜನೆ ಅವರ ಮುಂದಿಲ್ಲ. ನಮ್ಮ ಕ್ಷೇತ್ರದಲ್ಲಿ ಸಂಖ್ಯೆಗಿಂತ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ಎನ್ನುತ್ತಾರೆ ಅವರು.

ವ್ಯಕ್ತಿಯಾಗಿ ಅನು

ವ್ಯಕ್ತಿಯಾಗಿ ಅನು ಎಲ್ಲರಿಗೂ ತುಂಬಾ ಇಷ್ಟವಾಗುತ್ತಾರೆ. ಕಾರಣ, ಅವರು ಪ್ರಚಾರದ ಹಿಂದೆ ಬಿದ್ದಲ್ಲ. ತನ್ನ ಬ್ಯುಸಿ ಕೆಲಸದ ಮಧ್ಯೆಯೂ ದಿನಕ್ಕೆ 25 ನಿಮಿಷಗಳ ಕಾಲ ವ್ಯಾಯಾಮ ಮಾಡುವ ಅವರು, ಎರಡು ಮಕ್ಕಳ ತಾಯಿಯೂ ಆಗಿದ್ದಾರೆ. ತಾನು ಜನರಿಂದ ಪಡೆಯುತ್ತಿರುವ ಗೌರವದಷ್ಟೇ ಗೌರವವನ್ನು ತನ್ನ ಉದ್ಯಮದ ಪ್ರತಿಸ್ಪರ್ಧಿಗಳಿಗೂ ಕೊಡುತ್ತಾರೆ. ದೇಶದ ಮೇಲೆ ಕ್ರೀಡೆ ಪ್ರಭಾವ ಬೀರುತ್ತದೆಯೋ ಅಥವಾ ಉದ್ಯಮವೋ ಎಂಬ ಪ್ರಶ್ನೆಗೆ ಅವರಲ್ಲಿ ಬೇರೆಯದ್ದೇ ಉತ್ತರವಿದೆ. “ಸುರಕ್ಷಿತ ರಸ್ತೆಗಳು, ಮತ್ತು ಮಹಿಳೆಯರಿಗೆ ಗೌರ ಇವೆರಡೇ ಬಹುಶ ಕ್ರೀಡೆ ಮತ್ತು ಉದ್ಯಮ ಎರಡಕ್ಕಿಂತಲೂ ಹೆಚ್ಚಾಗಿ ನಮ್ಮ ದೇಶವನ್ನು ಪ್ರಭಾವಿಸಬಲ್ಲುವು. ಉದ್ಯಮವನ್ನು ಉದ್ಯಮವಾಗಿಯೇ ನೋಡಬೇಕು. ಎಲ್ಲರಿಗೂ ಉದ್ಯಮ ನಡೆಸುವ ಕಿಚ್ಚು ಇರುವುದಿಲ್ಲ. ನಿಮಗೆ ಉದ್ಯಮಿಯಾಗುವ ಕಿಚ್ಚು ಇದ್ದರೆ, ಉಳಿದವರಿಗಿಂತ ಒಳ್ಳೆಯ ಉತ್ಪನ್ನಗಳನ್ನು ಕೊಡಬಹುದು” ಎನ್ನುತ್ತಾರೆ ಅನು.

ಉದ್ಯಮದಲ್ಲಿಯೇ ಆಗಲಿ, ಬದುಕಿನಲ್ಲಿಯೇ ಆಗಲಿ ನೆಗಟಿವ್ ವಿಚಾರಗಳನ್ನು ಮತ್ತು ನೆಗಟಿವ್ ವ್ಯಕ್ತಿಗಳನ್ನು ದೂರ ಇಡಬೇಕು ಎನ್ನುವುದು ಅವರ ಸಲಹೆ. ಮನೆಯಲ್ಲಿ ಟಿವಿಯನ್ನೂ ಇರಿಸಿಕೊಳ್ಳದ ಅನು, ನೆಗಟಿವಿಟಿಯಿಂದ ದೂರ ಇರಲು ಅದೇ ಮುಖ್ಯ ಮಾರ್ಗ ಎನ್ನುತ್ತಾರೆ. “ನನಗೆ ಒತ್ತಡ ಎನಿಸಿದಾಗ, ಅಥವಾ ಕೆಲಸದಿಂದ ಸುಸ್ತಾದಾಗ, ನಾನು ಆ ಕೆಲಸ ನಿಲ್ಲಿಸಿ ಬೇರೆ ಕೆಲಸ ಮಾಡುತ್ತೇನೆ, ಟಿವಿ ನಿಮ್ಮ ಮನೆಗೆ ಹೊತ್ತು ತರುವ ಸದ್ದು, ನೆಗೆಟಿವಿಟಿ ಯಾವುದೂ ನನ್ನ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತೇನೆ, ಎನ್ನುತ್ತಾರೆ ಅನು.

ಇಷ್ಟೆಲ್ಲಾ ಆದ್ಮೇಲೆ, ಅನು ಅವರ ತಾಯಿಯನ್ನು ಮಾತನಾಡಿಸದೇ ಇದ್ದರೆ ಈ ಕಥೆ ಅಪೂರ್ಣ ಎಂದು ನಮಗೆ ಅನ್ನಿಸಿತು. ಅನು ಅವರಿಗೆ ಅವರ ತಾಯಿಯೇ ಸ್ಫೂರ್ತಿ, ಮಾದರಿ. ಅಲಮೇಲು ವೈದ್ಯನಾಥನ್ ಅವರೂ ತಮ್ಮ ಮಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. “ಅನು ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತಾಳೆ. ಅವಳು ಏನನ್ನೂ ಕೇಳುತ್ತಿರಲಿಲ್ಲ. ಏನನ್ನೂ ಹೇಳಿಸಿಕೊಳ್ಳುತ್ತಿರಲಿಲ್ಲ. ಅವೆಲ್ಲವೂ ಅವಳ ಅಪ್ಪನಿಂದ ಬಂದ ಗುಣಗಳು. ಅವಳಿಗೆ ಏನು ಮಾಡಬೇಕು? ಏನು ಮಾಡಬಾರದು ಎನ್ನುವ ಸ್ಪಷ್ಟತೆ ಇದೆ. ನಾನು ನನ್ನ ಮಗಳನ್ನು ಒಳ್ಳೆಯ ಮಹಿಳೆಯಾಗಿ ಬೆಳೆಸಬೇಕು, ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇರಬಾರದು ಎಂದುಕೊಂಡಿದ್ದೆ. ನಾನು ಹೇಳದೆಯೇ ಆಕೆ ಅದೇ ರೀತಿಯಲ್ಲಿ ಬೆಳೆದಿದ್ದಾಳೆ,” ಎನ್ನುತ್ತಾರೆ ಅಲಮೇಲು. ಆದರೆ, ಮಗಳ ಕ್ರೀಡಾಸಕ್ತಿಯನ್ನು ತಾವು ನಿರ್ಲಕ್ಷಿಸಿದ್ದಾಗಿ ಅವರು ಒಪ್ಪಿಕೊಳ್ಳುತ್ತಾರೆ. “ಅದು ಎಲ್ಲವೂ ಅವರ ಸ್ವಂತ ಪರಿಶ್ರಮದ ಫಲ. ಈ ವಿಚಾರದಲ್ಲಿ ಪೋಷಕರಾಗಿ ನಾವು ಅವಳಿಗೆ ಸಲಹೆ ಮತ್ತು ಸುರಕ್ಷತೆ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ಕ್ರೀಡೆಯ ಬಗ್ಗೆ ಏನೂ ಗೊತ್ತಿಲ್ಲ. ಅವಳು ಏನು ಸಾಧನೆ ಮಾಡಿದ್ದಾಳೆ ಎನ್ನುವುದನ್ನು ತಿಳಿದುಕೊಳ್ಳಲು ನಮಗೆ ವರ್ಷಗಳೇ ಹಿಡಿಯಿತು,” ಎನ್ನುತ್ತಾರೆ ಅನು ಅವರ ತಾಯಿ. ಒಟ್ಟಿನಲ್ಲಿ ಅನು ವೈದ್ಯನಾಥನ್​​ ಕರ್ನಾಟಕದ ಮಾದರಿ ಹೆಣ್ಣುಮಗಳು ಅನ್ನೋದರಲ್ಲಿ ಸಂದೇಹವೇ ಬೇಡ.

Related Stories

Stories by YourStory Kannada