ಸ್ಟಾರ್ಟ್​ಅಪ್‍ಗಳಲ್ಲಿ ಉದ್ಯೋಗಿಗಳ ಸಾಮೂಹಿಕ ವಜಾ - ಕಾರಣ ವಿವರಿಸಲು ಹೊರಟ ಉದ್ಯಮಿಗಳು..

ಟೀಮ್​ ವೈ.ಎಸ್​. ಕನ್ನಡ

0

2015ರಲ್ಲಿ ಔದ್ಯಮಿಕ ಕ್ಷೇತ್ರ ಬಹಳಷ್ಟು ಏರಿಳಿತಗಳನ್ನು ಕಂಡಿದೆ. ಸಾಕಷ್ಟು ಬಂಡವಾಳ ಕೂಡ ಹರಿದು ಬಂದಿದೆ. ಇವೆಲ್ಲದರ ಜೊತೆ ಜೊತೆಗೆ ಕಾರ್ಮಿಕರನ್ನು ವಜಾ ಮಾಡುವ ಪ್ರವೃತ್ತಿ ಕೂಡ ಹೆಚ್ಚಾಗಿದೆ. ರಿಯಲ್ ಎಸ್ಟೇಟ್‍ನಿಂದ ಹಿಡಿದು ಫುಡ್‍ಟೆಕ್, ಆಟೊಮೊಬೈಲ್ ಕ್ಷೇತ್ರದವರೆಗೂ ಸಿಬ್ಬಂದಿ ವಜಾ ಟ್ರೆಂಡ್ ವ್ಯಾಪಿಸಿದೆ. ಹೌಸಿಂಗ್, ಗ್ರಾಬ್‍ಹೌಸ್, ಝೊಮ್ಯಾಟೊ, ಟಿನಿಔಲ್, ಫುಡ್ ಪಾಂಡಾ ಮತ್ತು ಗೋಝೂಮೊನಂತಹ ಘಟಾನುಘಟಿ ಕಂಪನಿಗಳು ಕೂಡ ನೌಕರರನ್ನು ಕೆಲಸದಿಂದ ಕಿತ್ತು ಹಾಕಿವೆ. ಈ ಬೆಳವಣಿಗೆ ಕೆಲವರ ಚಿಂತೆಗೆ ಕಾರಣವಾದ್ರೆ, ಇನ್ನು ಕೆಲವರಿಗೆ ಪಾಠ ಕಲಿಸಿದೆ. ನೇಮಕಾತಿ ಸಂದರ್ಭದಲ್ಲಿ, ಹಣ ವ್ಯಯಿಸುವ ಮುನ್ನ ಜಾಗರೂಕರಾಗಿರಬೇಕು ಅನ್ನೋದು ಅರಿವಾಗಿದೆ. ಇತ್ತೀಚಿನ ಏರಿಳಿತಗಳಿಂದಾಗಿ ಉದ್ಯಮ ಕ್ಷೇತ್ರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

``ಉದ್ಯಮವನ್ನು ನಾವು 2 ರೀತಿಯಲ್ಲಿ ನೋಡಬಹುದು. ಆದಾಯವನ್ನು ಬೆನ್ನಟ್ಟುವುದು ಮತ್ತು ಪ್ರಮಾಣವನ್ನು ಬೆನ್ನಟ್ಟುವುದು. ಈ ಹುಡುಕಾಟದಲ್ಲಿ ಆದಾಯದ ಕಡೆಗೆ ಹೆಚ್ಚು ಗಮನ ನೀಡದೆ ವ್ಯಾಪಾರದಲ್ಲಿ ನಷ್ಟವಾಗುವ ಸಂಭವವೇ ಹೆಚ್ಚು'' ಎನ್ನುತ್ತಾರೆ ಕಾರ್‍ದೇಖೋದ ಸಹ ಸಂಸ್ಥಾಪಕ ಅಮಿತ್ ಜೈನ್. ಪ್ರಸ್ತುತ ಸ್ಥಿತಿ ನೆಲೆಯ ಸ್ಥಾಪನೆಯ ಅಗತ್ಯವಿಲ್ಲದ ಘಾತೀಯ ವಿಸ್ತರಣೆಯಂತಾಗಿದೆ. ವಿಸ್ತರಣೆಯನ್ನು ಬೆನ್ನಟ್ಟುವ ಭರದಲ್ಲಿ ಹಲವು ಕಂಪನಿಗಳು ಇನ್ನಷ್ಟು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿವೆ. ಪರಿಣಾಮ ಸಂಸ್ಥೆಯ ಬೆಳವಣಿಗೆ ನಿರೀಕ್ಷಿತ ಮಟ್ಟ ತಲುಪಿಲ್ಲ. ನಿಧಿ ಖಾಲಿಯಾದಾಗ ಉದ್ಯಮಗಳು ವೆಚ್ಚ ಕಡಿಮೆ ಮಾಡುವ ಪ್ರಯತ್ನದಲ್ಲಿ ತೊಡಗುತ್ತವೆ ಅನ್ನೋದು ಅಮಿತ್ ಜೈನ್ ಅವರ ಅಭಿಪ್ರಾಯ.

2008ರಲ್ಲಿ ಕಾರ್‍ದೇಖೋ ಲಾಂಚ್ ಆಗಿದೆ. ಮೊದಲ ಸುತ್ತಿನಲ್ಲಿ 2013ರಲ್ಲಿ ಸೀಕ್ವೊಯಾ ಕ್ಯಾಪಿಟಲ್‍ನಿಂದ 15 ಮಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದೆ. ಕಳೆದ ವರ್ಷ ಚೈನೀಸ್ ಫಂಡ್ಸ್ `ಹಿಲ್‍ಹೌಸ್ ಕ್ಯಾಪಿಟಲ್' ಮತ್ತು ಟೈಬೌರ್ನ್ ಕ್ಯಾಪಿಟಲ್‍ನಿಂದ 50 ಮಿಲಿಯನ್ ಡಾಲರ್ ಬಂಡವಾಳ ಗಿಟ್ಟಿಸಿಕೊಂಡಿದೆ. ಒಂದ್ಕಡೆ ಕೆಲವು ಸಂಸ್ಥೆಗಳು ಸಿಬ್ಬಂದಿ ಕಡಿತ ಮಾಡ್ತಾ ಇದ್ರೆ, ಇನ್ನೊಂದ್ಕಡೆ ಕಾರ್‍ದೇಖೋ ನೌಕರರ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಮುಂದಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಕಾರ್‍ದೇಖೋ ಆದಾಯ ಕೂಡ ಡಬಲ್ ಆಗಲಿದೆ ಅನ್ನೋ ನಿರೀಕ್ಷೆ ಅಮಿತ್ ಅವರದ್ದು.

ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ಸಕಾಲದಲ್ಲಿ ಖರೀದಿಸಲು ಮಾರುಕಟ್ಟೆ ಒದಗಿಸುತ್ತಿರುವ ಗುರ್‍ಗಾಂವ್‍ನ ಸಂಸ್ಥೆ ಸೈಬರ್‍ಶೆಫ್‍ನ ಸಂಸ್ಥಾಪಕಿ ನೇಹಾ ಪುರಿ ಅವರ ಪ್ರಕಾರ, ಪರಿಪಕ್ವವಾದ ಕೆಲವು ಉದ್ಯಮಗಳು ಕೂಡ ಅನಗತ್ಯ ಸಂಪನ್ಮೂಲಗಳ ಮೇಲೆ ಅಧಿಕ ವೆಚ್ಚ ಮಾಡುವ ಮೂಲಕ ತಪ್ಪು ಮಾಡಿವೆ. ಸಮಪನ್ಮೂಲ ಖಾಲಿಯಾಗ್ತಿದ್ದಂತೆ ಕಂಪನಿಗಳು ಹೆಚ್ಚುವರಿ ವೆಚ್ಚ ಕಡಿತದ ಜೊತೆಗೆ ಉದ್ಯೋಗಿಗಳನ್ನು ಕೂಡ ವಜಾ ಮಾಡುತ್ತಿವೆ. ಬಂಡವಾಳ ಸಿಗುತ್ತಿದ್ದಂತೆ ಪ್ರಮಾಣ ಹೆಚ್ಚಿಸುವ ಭರದಲ್ಲಿ ಉದ್ಯಮಗಳು ವರ್ಕ್‍ಫೋರ್ಸ್ ಅನ್ನು ದುಪ್ಪಟ್ಟು ಮಾಡುವುದು ಬಹುದೊಡ್ಡ ತಪ್ಪು ಅನ್ನೋದು ನೇಹಾ ಅವರ ಅಭಿಪ್ರಾಯ. ಬಂಡವಾಳ ಖಾಲಿಯಾಗುತ್ತಿದ್ದಂತೆ ಅಲ್ಲಿ ಬೆಳವಣಿಗೆ ಇರುವುದಿಲ್ಲ, ನೌಕರರಿಗೆ ಕೆಲಸವಿಲ್ಲದಂತಾಗುತ್ತದೆ.

``ಸ್ಟಾರ್ಟ್‍ಅಪ್ ಇಂಡಸ್ಟ್ರಿಗಳಲ್ಲಿ ಉದ್ಯೋಗಿಗಳ ವಜಾ ವಿಚಾರದ ಬಗ್ಗೆ ಅಪಪ್ರಚಾರವಾಗುತ್ತಿದೆ. ನೇವಕಾತಿ ಮತ್ತು ವಜಾ ಇವೆರಡೂ ಉದ್ಯಮವೊಂದರ ಅಂಗಗಳು. ಕೆಲಸಗಾರರನ್ನು ವಜಾ ಮಾಡುವುದು ಸರ್ವೇಸಾಮಾನ್ಯ, ಆದ್ರೂ ಈ ಬಗ್ಗೆ ಅತಿಯಾಗಿ ಸುದ್ದಿ ಮಾಡುತ್ತಿರುವುದೇಕೆ? ಉದ್ಯೋಗಿಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಕಂಪನಿಗಳ ಬಗ್ಗೆ ಏಕೆ ಸುದ್ದಿಯಾಗುತ್ತಿಲ್ಲ'' ಅನ್ನೋದು ನೇಹಾ ಅವರ ಪ್ರಶ್ನೆ.

2015ರ ಫೆಬ್ರವರಿಯಲ್ಲಿ `ಸೈಬರ್‍ಚೆಫ್' ಮಾರುಕಟ್ಟೆಯನ್ನು ಪ್ರವೇಶಿಸಿದೆ. ಮುಂಬೈನಲ್ಲಿ ಮಾತ್ರವಲ್ಲ, ದೆಹಲಿ ಮತ್ತು ಪುಣೆಯಲ್ಲಿ ಕೂಡ ಕಾರ್ಯಾಚರಣೆಗಿಳಿದಿದೆ. ದೇಶಾದ್ಯಂತ ಅದನ್ನು ವಿಸ್ತರಿಸುವ ನಿಟ್ಟಿನಲ್ಲಿ ಜಾಗರೂಕತೆಯಿಂದ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ಅಂತಾ ನೇಹಾ ತಿಳಿಸಿದ್ದಾರೆ. ಮಾಧ್ಯಮಗಳ ಪ್ರಚಾರದ ನಡುವೆಯೂ ಉದ್ಯಮಗಳು ಸದ್ದಿಲ್ಲದೇ ಯಶಸ್ಸಿನತ್ತ ಮುನ್ನುಗ್ಗುತ್ತಿವೆ. ಪ್ರಮುಖ ಬೆಳವಣಿಗೆಗಳು ನಡೆಯುತ್ತಿರುವುದು ಮೌಲ್ಯಮಾಪನದಲ್ಲೇ ಹೊರತು ಉತ್ಪನ್ನದಲ್ಲಲ್ಲ ಎನ್ನುತ್ತಾರೆ ಸೇಲ್ಸ್‍ಶಾರ್ಕ್‍ನ ಸಹ ಸಂಸ್ಥಾಪಕ ಅಜಯ್ ಚೌಹಾಣ್. ಆದಾಯ ಗಳಿಕೆಯಲ್ಲಿನ ಹಿನ್ನಡೆಯಿಂದ ಉದ್ಯೋಗಿಗಳನ್ನು ವಜಾ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ. ಒಂದು ಯಶಸ್ವಿ ಉದ್ಯಮವನ್ನು ಮುನ್ನಡೆಸಲು, ಗ್ರಾಹಕರು ವಾಹ್ ಎನ್ನುವಂತಹ ಅದ್ಭುತ ಉತ್ಪನ್ನವನ್ನು ಪ್ರಸ್ತುತಪಡಿಸಬೇಕು ಅನ್ನೋದು ಅಜಯ್ ಅವರ ಅಭಿಪ್ರಾಯ.

`ಸೇಲ್ಸ್‍ಶಾರ್ಕ್' ಅಮೆರಿಕದಲ್ಲಿರುವ ಸೇಲ್ಸ್ ಮತ್ತು ಮಾರ್ಕೆಟಿಂಗ್ ಆಟೊಮೇಷನ್ ವೇದಿಕೆ. ವರ್ಜಿನಿಯಾದಲ್ಲಿ ಸೇಲ್ಸ್‍ಶಾರ್ಕ್ ಕಚೇರಿಯಿದ್ದು, 2014ರಲ್ಲಿ ಅದು ಕಾರ್ಯಾರಂಭ ಮಾಡಿದೆ. 2015ರ ಎಪ್ರಿಲ್‍ನಲ್ಲಿ ಗುರ್‍ಗಾಂವ್‍ನಲ್ಲಿ ಕಚೇರಿ ತೆರೆಯುವ ಮೂಲಕ ಭಾರತಕ್ಕೂ ಅದು ಕಾಲಿಟ್ಟಿದೆ. ಸೇಲ್ಸ್‍ಶಾರ್ಕ್ ಆ್ಯಪ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತದೆ. ಆರಂಭದಲ್ಲಿ ಸಂಸ್ಥಾಪಕರು 1 ಮಿಲಿಯನ್ ಡಾಲರ್ ನಿಧಿಯನ್ನು ಹೂಡಿಕೆ ಮಾಡಿದ್ರು. ಬಳಿಕ ಇಂಡೋ-ಅಮೆರಿಕನ್ ಉದ್ಯಮಿ ಸೈಫ್ ಅಹಮದ್, 2 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಸದ್ಯ ನೇಮಕಾತಿಯಲ್ಲಿ ನಿರತವಾಗಿರುವ ಕಂಪನಿ ಸಿಬ್ಬಂದಿ ಸಂಖ್ಯೆಯನ್ನು 25-50ಕ್ಕೇರಿಸಲು ಮುಂದಾಗಿದೆ.

ಔದ್ಯಮಿಕ ಕ್ಷೇತ್ರದಲ್ಲಿ ಬಂಡವಾಳಗಾರರೇ ಬಹುದೊಡ್ಡ ಆಟಗಾರರು. ಮೂಲಭೂತ ತತ್ವಗಳು ಮತ್ತು ಅರ್ಥಶಾಸ್ತ್ರ ಘಟಕದ ಬಗ್ಗೆ ಗಮನಹರಿಸುವಂತೆ ಸ್ಟಾರ್ಟ್‍ಅಪ್‍ಗಳಿಗೆ ವಿಸಿ ಮಂಡಳಿ ಸೂಚಿಸಿರುತ್ತದೆ. ಬಂಡವಾಳ ಉಳಿಸಿಕೊಳ್ಳಲು ವೆಚ್ಚ ಕಡಿತವೊಂದೇ ದಾರಿ ಅನ್ನೋದು ಅವರ ತತ್ವ. ಈ ಮೂಲಕ ಸಂಸ್ಥೆಯ ಭವಿಷ್ಯವೂ ಸುದೀರ್ಘವಾಗಿರುತ್ತೆ ಜೊತೆಗೆ ಯಶಸ್ಸು ಕೂಡ ದಕ್ಕಲಿದೆ. ಉದ್ಯೋಗಿಗಳನ್ನು ವಜಾ ಮಾಡುವುದರಿಂದ ಉದ್ಯಮ ಕ್ಷೇತ್ರಕ್ಕೆ ಅಷ್ಟೇನೂ ಪ್ರಯೋಜನವಾಗುವುದಿಲ್ಲ ಅನ್ನೋದು `ಪಿವಿಸಿ'ಯ ಮ್ಯಾನೇಜಿಂಗ್ ಪಾರ್ಟ್‍ನರ್ ಪೀಶ್ ಚೋಪ್ರಾ ಅವರ ಅಭಿಪ್ರಾಯ. ಸ್ಟಾರ್ಟ್‍ಅಪ್‍ಗಳು ವ್ಯಾಪಾರದ ಮೂಲಭೂತ ತತ್ವಗಳನ್ನು ಬದಲಾಯಿಸಿಕೊಳ್ಳಬೇಕು ಎನ್ನುತ್ತಾರೆ ಅವರು.

ಉದ್ಯೋಗಿಗಳನ್ನು ವಜಾ ಮಾಡುವುದರಿಂದ ಕಂಪನಿಯ ಕಾರ್ಯಾಚರಣೆ ಮೇಲೆ ರುಣಾತ್ಮಕ ಪ್ರಭಾವ ಉಂಟಾಗುತ್ತದೆ. ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ನೌಕರರು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದ್ರಿಂದ ರಾಜೀನಾಮೆಗಳ ಸಂಖ್ಯೆ ಕೂಡ ಹೆಚ್ಚಾಗುತ್ತದೆ, ಉನ್ನತ ಹುದ್ದೆಯಲ್ಲಿರುವವರು ಕೂಡ ಕೆಲಸ ತ್ಯಜಿಸುತ್ತಾರೆ. ಸಮರ್ಥ ಉದ್ಯೋಗಿಗಳನ್ನು ಕಳೆದುಕೊಳ್ಳುವುದರಿಂದ ಯಾವ ಕಂಪನಿಗೂ ಒಳಿತಾಗುವುದಿಲ್ಲ ಎನ್ನುತ್ತಾರೆ ಪೀಶ್.

ಪ್ರಸ್ತುತ ಸಂದರ್ಭ ಇಂಡಸ್ಟ್ರಿಗಳಿಗೆ ಎಚ್ಚರಿಕೆಯ ಕರೆಘಂಟೆ. ಅಹಿತಕರ ಸುದ್ದಿಗಳ ನಡುವೆಯೇ, ಪ್ರಬಲವಾದ ವ್ಯಾಪಾರ ಮೂಲಭೂತ ತತ್ವಗಳೊಂದಿಗೆ ಕಂಪನಿಗಳು ಬಂಡವಾಳ ಸೆಳೆದುಕೊಳ್ಳುತ್ತಿವೆ. ಈ ಸಮಸ್ಯೆಯ ನಡುವೆಯೂ ಹೈಪರ್ ಲೋಕಲ್ ಡೆಲಿವರಿ ಕಂಪನಿಯಲ್ಲಿ ಶ್ರೀಘ್ರದಲ್ಲೇ ಹೂಡಿಕೆ ಮಾಡುತ್ತಿರುವುದಾಗಿ ಪೀಶ್ ಮಾಹಿತಿ ನೀಡಿದ್ದಾರೆ.

ಲೇಖಕರು: ತೌಸಿಫ್​ ಆಲಮ್​
ಅನುವಾದಕರು: ಭಾರತಿ ಭಟ್​​

Related Stories