ಆಲೂಗಡ್ಡೆ ವ್ಯವಹಾರದಲ್ಲಿ 25 ಕೋಟಿ ರೂಪಾಯಿ ಲಾಭ..! ಇದು ಭಾರತದ ಆಲೂಗಡ್ಡೆ ಕಿಂಗ್​​ನ ಯಶೋಗಾಥೆ

ಟೀಮ್​ ವೈ.ಎಸ್​. ಕನ್ನಡ

0

ಭಾರತೀಯರ ಆಹಾರ ಪದ್ಧತಿಯಲ್ಲಿ ವೈವಿಧ್ಯತೆಗಳಿವೆ. ಅದ್ರಲ್ಲೂ ಕೆಲವು ತರಕಾರಿ, ಆಹಾರ ವಸ್ತುಗಳು ದೈನಂದಿನ ಬದುಕಿನಲ್ಲಿ ಪ್ರಮುಖ ಸ್ಥಾನಗಳಿಸಿವೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳೋದು ಆಲೂಗಡ್ಡೆ. ಭಾರತೀಯರಿಗೆ ಆಲೂಗಡ್ಡೆ ಅತೀ ಹೆಚ್ಚು ಪ್ರಿಯವಾಗಿರುವ ಆಹಾರ ವಸ್ತು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಪ್ರತೀ ದಿನ ಇಡೀ ಭಾರತದಲ್ಲಿ ಒಂದು ಲಕ್ಷ ಟನ್ ಆಲೂಗಡ್ಡೆಯನ್ನ ಆಹಾರ ವಸ್ತು ರೂಪದಲ್ಲಿ ಬಳಸುತ್ತಿರುವುದೇ ಇದಕ್ಕೆ ಸಾಕ್ಷಿ. ಇನ್ನು ಇಡೀ ವಿಶ್ವದಲ್ಲೇ ಭಾರತ ಆಲೂಗಡ್ಡೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಕಳೆದ ವರ್ಷ 4.75 ಕೋಟಿ ಟನ್ ನಷ್ಟು ಆಲೂ ಬೆಳೆಯಲಾಗಿದೆ. ಇನ್ನು ಜಗತ್ತಿನಲ್ಲಿ ಆಲೂಗಡ್ಡೆ ಗೋಧಿ, ಅಕ್ಕಿ ನಂತ್ರದ ಪ್ರಮುಖ ಸ್ಥಾನವನ್ನ ಪಡೆದಿದೆ. ಅಲ್ಲದೆ ಬಾಳೆಹಣ್ಣಿನ ನಂತ್ರ ಹೆಚ್ಚು ಪೌಷ್ಠಿಕತೆಯನ್ನ ಹೊಂದಿರುವ ಆಹಾರವಸ್ತುವಾಗಿ ಆಲೂಗಡ್ಡೆ ಗುರುತಿಸಿಕೊಂಡಿದೆ. ಇನ್ನು ಭಾರತಕ್ಕೆ ಆಲೂಗಡ್ಡೆ ಬಂದಿದ್ದಾದ್ರೂ ಹೇಗೆ ಅನ್ನೋದು ಅತ್ಯಂತ ಕುತೂಹಲಕಾರಿ ಸಂಗತಿ. ಇತಿಹಾಸದ ಪ್ರಕಾರ ಆಲೂಗಡ್ಡೆ ಯೂರೋಪ್ ಮೂಲದಿಂದ ಭಾರತಕ್ಕೆ 17ನೇ ಶತಮಾನದಲ್ಲಿ ಬಂದಿದೆ ಎನ್ನಲಾಗಿದೆ.

ಆಲೂಗಡ್ಡೆ ಇಷ್ಟೊಂದು ಪ್ರಸಿದ್ಧಿ ಪಡೆಯಲು ವಿವಿಧ ಕಾರಣಗಳಿವೆ. ಅತ್ಯುನ್ನತ ಪೌಷ್ಠಿಕಾಂಶಗಳು, ಸುಲಭವಾಗಿ ಜೀರ್ಣವಾಗುವ ಶಕ್ತಿ, ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್, ಕಬ್ಬಿಣಾಂಶ, ವಿಟಮಿನ್ ಗಳು ಹಾಗೂ ಹೇರಳವಾದ ಫೈಬರ್ ಅಂಶಗಳನ್ನ ಒಳಗೊಂಡಿದೆ. ಸೆಂಟ್ರಲ್ ಪೊಟ್ಯಾಟೋ ರಿಸರ್ಚ್ ಇನ್ಟಿಟ್ಯೂಶನ್ ( ಸಿಪಿಆರ್​​ಐ ) ಪ್ರಕಾರ ಆಲೂಗಡ್ಡೆಯಲ್ಲಿ ಇತರೆ ತರಕಾರಿಗಳಿಗಿಂತ ಅತೀ ಹೆಚ್ಚು ಪೋಷಕಾಂಶ, ಕ್ಯಾಲೋರಿಗಳು ತುಂಬಿವೆ. ಇದು ಒಂದೆಡೆಯಾದ್ರೆ ಆಲೂ ಫ್ರೈಗಳು, ಸಾಂಬಾರ್ ಗಳು ಯಾವತ್ತಿಗೂ ಭೋಜನ ಪ್ರಿಯರನ್ನ ಸೆಳೆಯುತ್ತವೆ. ಹೀಗೆ ಅತೀ ಹೆಚ್ಚು ಬೇಡಿಕೆ ಹೊಂದಿರುವ ಆಹಾರ ವಸ್ತುಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಆಲೂ ಬೆಲೆ ಸಹಜವಾಗೇ ಆಕಾಶ ಮುಟ್ಟಿದೆ. ಹಾಗಾಗಿ ಹೆಚ್ಚು ಸುದ್ದಿ ಮಾಡಿಯೂ ಆಲೂ ಗುರುತಿಸಿಕೊಂಡಿದೆ. ಇನ್ನು ಈ ಗೆಡ್ಡೆ ಜಾತಿಗೆ ಸೇರುವ ತರಕಾರಿ ಕೆಲವು ರೈತರ ಜೇಬನ್ನೂ ಭರ್ತಿ ಮಾಡಿದೆ ಅಂದ್ರೆ ಅದು ಅತಿಶಯೋಕ್ತಿಯಲ್ಲ. ಕೆಲವರಂತೂ ದೊಡ್ಡ ಮಟ್ಟದಲ್ಲಿ ಆಲೂ ಪೂರೈಸುವ ಮೂಲಕ ದೊಡ್ಡ ಮಟ್ಟದ ಆದಾಯಗಳಿಸುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಪುಣೆ ಮೂಲದ ಸಿದ್ಧಿ ವಿನಾಯಕ್ ಅಗ್ರಿ ಪ್ರೊಸೆಸಿಂಗ್ ( ಎಸ್ ವಿ ಅಗ್ರಿ ) ಕಂಪನಿ ಹಾಗೂ ಇದ್ರ ಸಂಸ್ಥಾಪಕ ನಿರ್ದೇಶಕ ಹೇಮಂತ್ ಗೌರ್.

ಆಲೂ ಜೊತೆಗೆ ಬೆಳೆದ ನಂಟು..

45 ವರ್ಷದ ಹೇಮಂತ್ 16 ವರ್ಷಗಳ ಕಾಲ ಕಾರ್ಪೊರೇಟ್ ವಲಯಗಳಾದ ಮ್ಯಾರಿಕೋ, ಐಟಿಸಿ ಹಾಗೂ ವಾಲ್ ಮಾರ್ಟ್ ನಂತಹ ಕಂಪನಿಗಳಲ್ಲಿ 16 ವರ್ಷಗಳ ಕಾಲ ಕೆಲಸ ಮಾಡಿದ್ರು. ಆದ್ರೆ ಅವರು ಕಂಡುಕೊಂಡಿದ್ದು ಆಲೂಗಡ್ಡೆಯಲ್ಲಿರುವ ಲಾಭದ ಬ್ಯುಸಿನೆಸನ್ನ.. ರೈತ ಆಲೂ ಬೆಳೆಯುವ ಹೊಲದಿಂದ ಪ್ಲೇಟ್ ವರೆಗೂ ಚೈನ್ ಸಪ್ಲೈ ಸಿಸ್ಟಮ್ ಬ್ಯುಸಿನೆಸ್ ನಲ್ಲಿ ಹೇಮಂತ್ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. “ ಉತ್ಪಾದನೆ ಹಾಗೂ ಪೂರೈಕೆಯ ಚೈನ್ ಸಿಸ್ಟಮ್ ನಲ್ಲಿ ದೊಡ್ಡ ಅಂತರವಿದೆ. ಹೀಗಾಗಿ ಉತ್ಪಾದನೆಯ ನಿಜವಾದ ಬೆಲೆಯನ್ನ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ” ಅಂತ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ರೈತರ ಮೀಟ್ ನಲ್ಲಿ ಹೇಮಂತ್ ಗೌರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗ್ರಾಹಕರ ಜಾಗದಲ್ಲಿ ಕುಳಿತು ಯೋಚಿಸುವುದು ಹೇಮಂತ್ ಸ್ಪೆಷಾಲಿಟಿ. ಹೀಗಾಗಿ ಅವರಿಗೆ ಗ್ರಾಹಕರ ಮನಸ್ಥಿತಿ ಬೇಗನೆ ಅರ್ಥವಾಗುತ್ತದೆ. ಹೀಗಾಗೇ ಕಾರ್ಪೋರೇಟ್ ವಲಯದ ಕೆಲಸಕ್ಕೂ ಗುಡ್ ಬೈ ಹೇಳಿ ಉದ್ಯಮಿಯಾಗಲು ಅವರು ಬಯಸಿದ್ರು. ಆದ್ರೆ ಮತ್ತೆ ಕಾರ್ಪೋರೇಟ್ ವಲಯಕ್ಕೆ ವಾಪಸ್ಸಾಗ್ತಿರಾ ಅಂತ ಅವರನ್ನೇನಾದ್ರೂ ಕೇಳಿದ್ರೆ ಅವರು ಕೊಡುವ ಉತ್ತರ ಡಿಫರೆಂಟ್.. ಉತ್ತರಖಂಡ್ ನ ಜಿಬಿ ಪಾಂಟ್ ವಿವಿಯಲ್ಲಿ ಅಗ್ರಿಕಲ್ಚರ್ ಹಾಗೂ ಟೆಕ್ನಾಲಜಿಯಲ್ಲಿ ಶಿಕ್ಷಣ ಪೂರೈಸಿದ ಹೇಮಂತ್ ರೈತರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ಅಲ್ಲಿ ಅವರ ಬದುಕು ಹಾಗೂ ಬ್ಯುಸಿನೆಸ್ ಬಗ್ಗೆ ಅಭ್ಯಾಸ ನಡೆಸಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಹೊಂದಿಸುವ ಸಾಹಸಕ್ಕೆ ಕೈ ಹಾಕಿದ್ರು. ಅವರ ಅದೃಷ್ಠಕ್ಕೆ ರೈತರು ಹೇಮಂತ್ ಅವರಿಗೆ ಬೆಂಬಲ ಸೂಚಿಸಿದ್ರು.

“ದೆಹಲಿಯ ಪಾಟ್ಪಾರ್ಗಂಜ್ ಎಂಬ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ನಾನು ಜನಿಸಿದ್ದು. ನನ್ನ ಕುಟುಂಬದಲ್ಲಿದ್ದ ಬಹುತೇಕರು ಎಂಜಿನಿಯರ್ ಗಳು. ಹೀಗಾಗಿ ಅವರು ಯಾರೂ ಬ್ಯುಸಿನೆಸ್ ಬಗ್ಗೆ ಯೋಚಿಸಿದವರೂ ಅಲ್ಲ. ಹೀಗಾಗಿ ನಾನು 35 ವರ್ಷಕ್ಕಿಂತ ಮೊದಲು ಬ್ಯುಸಿನೆಸ್ ಗೆ ಕೈ ಹಾಕಿ ಪರೀಕ್ಷಿಸಬೇಕು ಅಂತ ತೀರ್ಮಾನಿಸಿದ್ದೆ. ಆದ್ರೆ ವ್ಯವಹಾರಗಳು ಯಾವತ್ತೂ ಸವಾಲಿದ್ದು ಹಾಗೂ ಸ್ವಂತ ಬ್ಯುಸಿನೆಸ್ ಯಾವತ್ತೂ ಕೈ ಹಿಡಿಯೋದಿಲ್ಲ ಅಂತ ಎಲ್ಲರೂ ನನ್ನ ಆತ್ಮವಿಶ್ವಾಸವನ್ನ ಕುಗ್ಗಿಸಿದ್ರು. ಆದ್ರೆ ನಾನು ನನ್ನ ಪ್ರಯತ್ನ ಬಿಡಲಿಲ್ಲ ” - ಹೇಮಂತ್ ಗೌರ್, ಸಿದ್ಧಿ ವಿನಾಯಕ್ ಅಗ್ರಿ ಪ್ರೊಸೆಸಿಂಗ್ ಸಂಸ್ಥಾಪಕ ನಿರ್ದೇಶಕ

ಸಾಗಿ ಬಂದ ಹಾದಿ..

2009ರಲ್ಲಿ ಹೇಮಂತ್ ಎಸ್ ವಿ ಆಗ್ರಿಯನ್ನ ಶುರುಮಾಡಿದ್ರು. ಆಲೂಗಡ್ಡೆ ಬೆಳೆ ಬೆಳೆಯುವ ಮುನ್ನ ಹಾಗೂ ಬೆಳೆದ ನಂತ್ರದ ಸಮಸ್ಯೆಗಳಿಗೆ ಪರಿಹಾರ ಕೊಡುವ ಸಾಹಸಕ್ಕೆ ಮುಂದಾದ್ರು. ಅಲ್ಲದೆ ಅವರ ಈ ದೊಡ್ಡ ಸಾಹಸಕ್ಕೆ 25 ಕೋಟಿ ರೂಪಾಯಿ ಅಗತ್ಯವಿತ್ತು. ಇದ್ರಲ್ಲಿ ಅಸ್ಪಾಡಾ ಕಂಪನಿ ಹೇಮಂತ್ ಗೆ ಬೆಂಬಲವಾಗಿ 10 ಕೋಟಿ ರೂಪಾಯಿ ನೀಡಿತು. 2011ರಲ್ಲಿ ಎಸ್ ಒ ಎನ್ ಜಿ ಕಂಪನಿ 5 ಕೋಟಿ ರೂಪಾಯಿಗಳ ನೆರವು ನೀಡಿತು. ಅಲ್ಲದೆ ಹೇಮಂತ್ ಕಂಪನಿಯೊಂದಿಗೆ ಪಾರ್ಟರ್ ಶಿಪ್ ಕೂಡ ಬೆಳೆಸಿತು. ಇದ್ರ ಭರಪೂರ ಲಾಭ ಪಡೆದ ಇವರ ಕಂಪನಿ ದೊಡ್ಡ ಮಟ್ಟದ ಲಾಭ ಗಳಿಸಿತು. ಈಗಾಗಲೇ ಇವರ ಎಸ್ ವಿ ಅಗ್ರಿ 60 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದು ಮುಂದಿನ ವರ್ಷಕ್ಕೆ 500 ಕೋಟಿ ರೂಪಾಯಿ ವ್ಯವಹಾರ ನಡೆಸುವ ಟಾರ್ಗೆಟ್ ಹೊಂದಿದೆ. ವಿಶೇಷ ಅಂದ್ರೆ ಇದನ್ನ ಆಲೂಗಡ್ಡೆ ಬೆಳೆಗಾರರೊಂದಿಗೆ ಹಂಚಿಕೊಳ್ಳಲು ಹೇಮಂತ್ ಬಯಸುತ್ತಿದ್ದಾರೆ. ಅಲ್ಲದೆ ಮುಂದಿನ 10 ವರ್ಷ ಆಲೂಗಡ್ಡೆ ವ್ಯವಹಾರದಲ್ಲೇ ದೊಡ್ಡ ಯಶಸ್ಸು ಸಾಧಿಸುವ ವಿಶ್ವಾಸವನ್ನ ಅವರು ಹೊಂದಿದ್ದಾರೆ.

ಇನ್ನು ಆಲೂಗಡ್ಡೆ ಚೈನ್ ಸಿಸ್ಟಮ್ ನಲ್ಲಿರುವ ಸಮಸ್ಯೆಗಳನ್ನೂ ಹೇಮಂತ್ ಬಿಚ್ಚಿಡುತ್ತಾರೆ. ಆಲೂ ದರಕ್ಕೆ ತಕ್ಕಂತೆ ಶೇರುದಾರರು ನಿರ್ಧಾರ ಬದಲಾಯಿಸುತ್ತಾ ಇರುತ್ತಾರೆ. ಅಲ್ಲದೆ ಈ ಚೈನ್ ಸಿಸ್ಟಮ್ ನಲ್ಲಿ ಮೂರು ನಾಲ್ಕು ಮಂದಿ ಮಿಡ್ಲ್ ಮನ್ ಗಳು ಸೇರಿಕೊಂಡು ಒಡೆಯಲು ಯತ್ನಿಸುತ್ತಾರೆ ಅಂತ ಅವರು ವಿವರಿಸುತ್ತಾರೆ. ಹೀಗಾಗಿ ರೈತರೊಂದಿಗೆ ನೇರ ಸಂಪರ್ಕ ಕಾಯ್ದುಕೊಳ್ಳುವುದು ಹಾಗೂ ಅಗತ್ಯ ತಂತ್ರಜ್ಞಾನಗಳನ್ನ ಹೊಂದುವುದು ಅನಿವಾರ್ಯ ಅನ್ನೋದು ಹೇಮಂತ್ ಅವರ ಮನದ ಮಾತು. ಇನ್ನು ದೇಶದ ವಿವಿಧ ಭಾಗದಲ್ಲಿರುವ ಗ್ರಾಹಕರ ವರ್ತನೆಯೂ ವಿಭಿನ್ನವಾಗೇ ಇರುತ್ತೆ. ಬಿಹಾರದಂತಹ ಮಾರುಕಟ್ಟೆಯಲ್ಲಿ ಪ್ರೀಮಿಯಂ ಆಲೂಗಡ್ಡೆಯ ಪ್ರತಿ ಕೆಜಿಗೆ 10 ರಿಂದ 15 ಶೇಕಡಾ ಲಾಭ ಕೈ ಸೇರುತ್ತದೆ. ಹೀಗಾಗಿ ಉತ್ತಮ ಗುಣಮಟ್ಟದ ಆಲೂಗಡ್ಡೆ ಬೀಜವನ್ನ ರೈತರಿಗೆ ಒದಗಿಸಲು ಸದಾ ಯತ್ನಿಸುವ ಮೂಲಕ ಬ್ಯುಸಿನೆಸ್ ಕೋನದಲ್ಲಿ ನೋಡುವುದಾಗಿ ಹೇಮಂತ್ ಹೇಳುತ್ತಾರೆ.

ಲೇಖಕರು: ದೀಪ್ತಿ ನಾಯರ್​​
ಅನುವಾದಕರು: ಬಿಆರ್​ಪಿ ಉಜಿರೆ

Related Stories