ಭಾರತದಲ್ಲಿ ವಿವೇಚನೆಯ ಶಾಪಿಂಗ್ ಟ್ರೆಂಡ್...

ಟೀಮ್​​ ವೈ.ಎಸ್​​. ಕನ್ನಡ

ಭಾರತದಲ್ಲಿ ವಿವೇಚನೆಯ ಶಾಪಿಂಗ್ ಟ್ರೆಂಡ್...

Friday December 11, 2015,

3 min Read

ಪ್ರತಿ ತಿಂಗಳು ಫ್ಯಾಷನ್ ಬ್ರಾಂಡ್‍ಗಳು ಹೊಸ ಹೊಸ ಬಗೆಯ ಕಲೆಕ್ಷನ್‍ಗಳನ್ನು ಹೊರತರ್ತಾ ಇರೋದ್ರಿಂದ ಗ್ರಾಹಕರು ಮಳಿಗೆಯ ಕಿಟಕಿಗಳಲ್ಲಿ ಇಣುಕಿದ್ರೆ ಹೊಸತನ್ನೇ ನೋಡಬಹುದು. ಅವಶ್ಯಕತೆಯಿಲ್ಲದ್ದನ್ನು ಕೊನೆಯ ಬಾರಿಗೆ ನೀವು ಕೊಂಡಿಕೊಂಡಿದ್ದು ಯಾವಾಗ? ಖಂಡಿತವಾಗ್ಲೂ ನೀವು ಬಯಸದೇ ಇದ್ದಿದ್ದನ್ನೇ ಖರೀದಿಸಿರುತ್ತೀರಾ. ಆದ್ರೆ ನಿಮಗೆ ಯಾವುದರ ಅವಶ್ಯಕತೆ ಇದೆ, ಅಥವಾ ನಿಮಗೇನು ಬೇಕು ಎಂಬುದನ್ನು ಖರೀದಿ ಪ್ರಕ್ರಿಯೆ ಆಧರಿಸಿಲ್ಲ. ಫ್ಯಾಷನ್ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಲೇಟೆಸ್ಟ್ ಟ್ರೆಂಡ್‍ಗೆ ತಕ್ಕಂತಹ ಒಂದು ಉಡುಪನ್ನಾದ್ರೂ ಸ್ವಂತ ಕಪಾಟಿನಲ್ಲಿ ಹೊಂದಬೇಕು ಅನ್ನೋದೇ ನಿಮ್ಮ ಬಯಕೆ. ಬ್ರಾಂಡ್‍ಗಳು ತಮ್ಮ ವೇಗವನ್ನು ಹೆಚ್ಚಿಸಿವೆ, ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ, ಫ್ಯಾಷನ್ ದುನಿಯಾವನ್ನು ಆಳುತ್ತಿವೆ ಅನ್ನೋದು ನಿಮ್ಮ ಸುತ್ತಮುತ್ತ ಗಮನಿಸಿದಾಗ ಸ್ಪಷ್ಟವಾಗುತ್ತದೆ. ವಿವೇಚನೆಯುಳ್ಳ ಶಾಪಿಂಗ್ ಅನ್ನು ಉತ್ತೇಜಿಸುವ 7 ಪ್ರಮುಖ ಅಂಶಗಳು ಇಲ್ಲಿವೆ.

image


1) ಶೋಧ

ಮೊದಲೆಲ್ಲ ಸಿನಿಮಾ ಹಾಗೂ ಹಾಡುಗಳನ್ನು ನೋಡಿ ಎಲ್ಲರೂ ಹೊಸ ಫ್ಯಾಷನ್ ಬಗ್ಗೆ ತಿಳಿದುಕೊಳ್ತಾ ಇದ್ರು. ಅದಕ್ಕೆ ಹೆಚ್ಚಿನ ಮಾನ್ಯತೆ ನೀಡುತ್ತಿದ್ರು. ಅದ್ರಲ್ಲೂ ಬಾಲಿವುಡ್ ಫ್ಯಾಷನ್ ಅತ್ಯಂತ ಉತ್ತಮವಾದದ್ದು ಅನ್ನೋ ಭಾವನೆಯಿತ್ತು. ಈಗ ಫ್ಯಾಷನ್ ಮ್ಯಾಗಝೀನ್‍ಗಳ ಎಂಟ್ರಿ, ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಗ್ರಾಹಕರು ಫ್ಯಾಷನ್ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಶೋಧ, ಫ್ಯಾಷನ್ ಮತ್ತು ಸ್ಟೈಲ್‍ನ ಅಂತರ್ಗತ ಭಾಗವಾಗಿದೆ. ಅದನ್ನು ನೀವು ಮ್ಯಾಗಝೀನ್‍ಗಳಲ್ಲಿ ನೋಡಬಹುದು, ಅಥವಾ ಚಿತ್ರಗಳನ್ನು ಶೇರ್ ಮಾಡಿಕೊಳ್ಳುವ ವೇದಿಕೆಗಳಾದ `ಪಿಂಟರೆಸ್ಟ್' ಮತ್ತು `ಇನ್‍ಸ್ಟಾಗ್ರಾಮ್'ಗಳಲ್ಲಿ ಕಾಣಬಹುದು.

2) ಆಕಾಂಕ್ಷೆ

ಹಾಲಿ ಟ್ರೆಂಡ್‍ಗೆ ತಕ್ಕಂತಹ, ವಾರ್ಡ್‍ರೋಬ್‍ನ್ನು ಅಪ್‍ಡೇಟ್ ಮಾಡುವಂತಹ ಸ್ಟೈಲ್‍ನ ಉಡುಪುಗಳನ್ನು ಹೊಂದಲು ಗ್ರಾಹಕರು ಬಯಸುತ್ತಾರೆ. ಸಿನಿಮಾ ಲಾಂಚ್ ಸಂದರ್ಭದಲ್ಲಿ ನಟ-ನಟಿಯರು ಧರಿಸಿದಂತಹ ಧಿರಿಸು, ಸಾಮಾಜಿಕ ಜಾಲತಾಣಗಳಲ್ಲಿ `ಔಟ್‍ಫಿಟ್ ಆಫ್ ದಿ ಡೇ' ಹೆಸರಲ್ಲಿ ಅವರು ಪೋಸ್ಟ್ ಮಾಡಿದಂಥಹ ಉಡುಪು ಹಾಗೂ ಅಲಂಕಾರಿಗ ಸಾಮಾಗ್ರಿಗಳನ್ನು ಖರೀದಿಸಲು ಗ್ರಾಹಕರು ಇಚ್ಛಿಸುತ್ತಾರೆ. ತಮ್ಮದೇ ಅರ್ಥದಲ್ಲಿ ಎಲ್ಲರೂ ಫ್ಯಾಷನ್ ಐಕಾನ್‍ಗಳಾಗಲು ಬಯಸುತ್ತಾರೆ. ಭಾರತ 1.3 ಬಿಲಿಯನ್ ಜನಸಂಖ್ಯೆಯುಳ್ಳ, ಮಹತ್ವಾಕಾಂಕ್ಷಿ ದೇಶ. ಚೀನಾವನ್ನು ಬಿಟ್ರೆ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಏಕೈಕ ರಾಷ್ಟ್ರ. `ಮೆಕಿನ್ಸೆ' ಅಂದಾಜಿನ ಪ್ರಕಾರ 2025ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆಯ ಮೌಲ್ಯ 1.5 ಟ್ರಿಲಿಯನ್ ಡಾಲರ್‍ನಷ್ಟಾಗಲಿದೆ. ಅಮೆರಿಕ, ಜಪಾನ್, ಚೀನಾ ಮತ್ತು ಬ್ರಿಟನ್ ಬಳಿಕ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ ಹೊಂದಿರುವ ಐದನೇ ರಾಷ್ಟ್ರ ಭಾರತ. ಆದಾಯ ಗಳಿಕೆಯಲ್ಲಿನ ಹೆಚ್ಚಳ ಮತ್ತು ವೆಚ್ಚದ ಸಾಮಥ್ರ್ಯದಲ್ಲಿನ ಹೆಚ್ಚಳದಿಂದಾಗಿ ಭಾರತದಲ್ಲಿ ಮೇಲ್ಮಧ್ಯಮ ವರ್ಗದ ಜನಸಂಖ್ಯೆ ಅಧಿಕವಾಗುತ್ತಿದೆ. ಇಂಟರ್ನೆಟ್ ಸಂಪರ್ಕದಲ್ಲಿನ ಹೆಚ್ಚಳ, ಸ್ಮಾರ್ಟ್ ಫೋನ್ ಹವಾ ಮತ್ತು ನಗರೀಕರಣದಿಂದಾಗಿ ನಮ್ಮ ಕೈಯಲ್ಲಿ ಯಶಸ್ಸಿನ ಕಥೆಗಳೇ ಇವೆ.

3) ಸಹಸ್ರಾರು

ಶಾಪಿಂಗ್ ಬಕೆಟ್‍ನ ದೊಡ್ಡ ಪಾಲನ್ನು ಹದಿಹರೆಯದವರು ಮತ್ತು ಯುವತಿಯರೇ ರೂಪಿಸುತ್ತಾರೆ. ಟೀನೇಜ್‍ನಲ್ಲಿ ಖರೀದಿ ಹುಮ್ಮಸ್ಸು ಹೆಚ್ಚಾಗಿರುವುದರಿಂದ ಬ್ರಾಂಡ್‍ಗಳು ಯುವಜನತೆಯನ್ನೇ ಟಾರ್ಗೆಟ್ ಮಾಡುತ್ತಿವೆ. ಯುವ ಜನತೆಯ ಮನಸ್ಥಿತಿಯನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಬ್ರಾಂಡ್‍ಗಳು ತಮ್ಮ ಉತ್ಪನ್ನ ಬಳಸುವ ಹವ್ಯಾಸವನ್ನು ಅವರಲ್ಲಿ ಬೆಳೆಸುತ್ತಿವೆ. ವರ್ಷಗಳವರೆಗೆ ಈ ಬಾಂಧವ್ಯವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ.

4) ಮೊಬೈಲ್ ಮತ್ತು ಅಂತರ್ಜಾಲ

ಗ್ರಾಹಕರು ಉತ್ತಮ ಬೆಲೆಗೆ ಉತ್ತಮ ಉತ್ಪನ್ನವನ್ನು ಕಂಡುಕೊಳ್ಳಲು ಮೊಬೈಲ್ ಮತ್ತು ಆನ್‍ಲೈನ್ ಪೋರ್ಟಲ್‍ಗಳನ್ನೇ ಅವಲಂಬಿಸಿದ್ದಾರೆ. ಈ ಮೂಲಕ ಒಬ್ಬ ಗ್ರಾಹಕ ಪ್ರತಿದಿನ ಇಂಟರ್ನೆಟ್‍ಗಾಗಿ ವ್ಯಯಿಸುವ ಸಮಯ ಎಷ್ಟು ಗೊತ್ತಾ? ಬರೋಬ್ಬರಿ 299 ನಿಮಿಷಗಳು. ಟಿವಿ ಜಾಹೀರಾತಿಗೆ ವ್ಯಯಿಸುವ ಸಮಯ ಕೇವಲ 159 ನಿಮಿಷಗಳಾದ್ರೆ, ರೇಡಿಯೋಗಳಲ್ಲಿ 71 ನಿಮಿಷ ಮತ್ತು ಮುದ್ರಣ ಮಾಧ್ಯಮಗಳಲ್ಲಿ 50 ನಿಮಿಷ ಅನ್ನೋದನ್ನು `ನೀಲ್ಸನ್' ತನ್ನ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ. ಬಳಕೆದಾರರ ಜೊತೆಗೂಡಿ ಅವಕಾಶದ ಕಿಟಕಿಗಳನ್ನು ತೆರೆಯಲು ಉದ್ಯಮಗಳು ಡಿಜಿಟಲೀಕರಣದ ಮೊರೆಹೋಗಿವೆ. ಗ್ರಾಹಕರು ವಿಕಾಸ ಹೊಂದುತ್ತಿದ್ದಾರೆ. ಉದಯೋನ್ಮುಖ ಮಾಧ್ಯಮಗಳ ನೆರವಿನೊಂದಿಗೆ ಬ್ರಾಂಡ್‍ಗಳು ಈ ಕ್ರಾಂತಿಯನ್ನು ಮುನ್ನಡೆಸುತ್ತಿವೆ. `ಬಿಸಿಜಿ' ವರದಿಯ ಪ್ರಕಾರ, ಡಿಜಿಟಲ್ ಪ್ರಭಾವದಿಂದ ಖರೀದಿಯ ಮೌಲ್ಯ 2016ರ ವೇಳೆಗೆ 150 ಬಿಲಿಯನ್ ಡಾಲರ್‍ಗೆ ತಲುಪಲಿದೆ.

5) ವ್ಯವಹಾರ V/S ಅನುಭವ

ಸಾಮಾನ್ಯವಾಗಿ ಪುರುಷರು ಖರೀದಿಸಿದ್ರೆ, ಮಹಿಳೆಯರು ಶಾಪಿಂಗ್ ಮಾಡ್ತಾರೆ. ಪುರುಷರ ಪಾಲಿಗೆ ಉಡುಪುಗಳ ಖರೀದಿ ಒಂದು ವ್ಯವಹಾರವಿದ್ದಂತೆ. ಬಿಳಿ ಶರ್ಟ್ ಹಾಗೂ ಕಡುನೀಲಿ ಬಣ್ಣದ ಪ್ಯಾಂಟ್ ಬೇಕು ಅಂತಾದ್ರೆ, ಅದು ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಒಂದೆರಡು ಮಳಿಗೆಗೆ ಹೋಗಿ ಟ್ರೈ ಮಾಡಿ ಸೂಕ್ತ ಎನಿಸಿದ್ದನ್ನು ಕೊಂಡುಕೊಳ್ಳುವುದು ಅಷ್ಟೆ. ಆದ್ರೆ ಇದು ಮಹಿಳೆಯರ ಪಾಲಿಗೆ ಅತ್ಯಂತ ವಿಸ್ತಾರವಾದ ಮತ್ತು ವೈಯಕ್ತಿಕ ಕೆಲಸ. ಚಟುವಟಿಕೆಗಿಂತ ಮಿಗಿಲಾಗಿ ಒಂದು ಅನುಭವ. ಮಹಿಳೆಯರು ಒಮ್ಮೆ ಅಂಗಡಿ ಪ್ರವೇಶಿಸಿದ್ರೆ, ತಮಗೆ ಅಗತ್ಯವಿರುವ ಉಡುಪಿನ ಕಡೆಗೆ ಮಾತ್ರ ಗಮನಹರಿಸುವುದಿಲ್ಲ, ಅದಕ್ಕೆ ಬೇಕಾದ ಮ್ಯಾಚಿಂಗ್ ಚಪ್ಪಲಿ, ಅಲಂಕಾರಿಕ ಸಾಮಾಗ್ರಿ ಆಭರಣಗಳಿಗಾಗಿ ಹುಡುಕಾಡುತ್ತಾರೆ.

6) ಭೌಗೋಳಿಕ ನಿರ್ಬಂಧ

ಸದ್ಯ ಮೆಟ್ರೋಪಾಲಿಟನ್ ನಗರಗಳು ಮತ್ತು ಕೆಲ ಟೈರ್ 2 ಸಿಟಿಗಳು ಮಾತ್ರ ಪ್ರಮುಖ ಬ್ರಾಂಡ್‍ಗಳನ್ನು ಹೊಂದಿವೆ. ಸ್ಪೂರ್ತಿಯ ಪರಿವರ್ತನೆಗೆ ಭೌಗೋಳಿಕ ನಿರ್ಬಂಧಗಳು ತಡೆಯಾಗಿವೆ. ಒಂದು ಹಂತದವರೆಗೆ ಈ ತಡೆಗೋಡೆಯನ್ನು ಆನ್‍ಲೈನ್ ಶಾಪಿಂಗ್ ಕೆಡವಿ ಹಾಕಿದೆ. `ಇನ್‍ಸ್ಟಾಗ್ರಾಮ್', `ಪಿಂಟರೆಸ್ಟ್'ನಂತಹ ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಗ್ರಾಹಕರಿಗೆ ಸ್ಪೂರ್ತಿಯನ್ನು ಉಣಬಡಿಸಲಾಗುತ್ತಿದೆ. ಲೇಟೆಸ್ಟ್ ಟ್ರೆಂಡ್‍ಗಳನ್ನು ಹೊಂದುವ ಬಯಕೆಯನ್ನು `ಎಂ-ಕಾಮರ್ಸ್' ಸಂಸ್ಥೆಗಳು ಕೂಡ ಈಡೇರಿಸುತ್ತಿವೆ.

7) ಕಡಿಮೆ ಪ್ರಯತ್ನ

ಅಗತ್ಯವಾದ ಅಥವಾ ಬೇಕೆನಿಸಿದ ಉತ್ಪನ್ನಗಳ ಮೇಲೆ ಹಣ ವ್ಯಯಿಸಲು ಬ್ರಾಂಡ್‍ಗಳು ಗ್ರಾಹಕರ ಮನವೊಲಿಸುವುದು ವಿವೇಚನೆಯುಳ್ಳ ಶಾಪಿಂಗ್‍ಗೆ ಅತ್ಯವಶ್ಯ. ಆನ್‍ಲೈನ್ ಸೈಟ್‍ಗಳಲ್ಲಿರುವ ತಮ್ಮಿಷ್ಟದ ಉಡುಪುಗಳನ್ನು ನೋಡಿ ಗ್ರಾಹಕರು ಮನಸೋಲುತ್ತಾರೆ. ಅದನ್ನು ಖರೀದಿಸಲು ಬಯಸುತ್ತಾರೆ, ಈ ಮೂಲಕ ಶಾಪಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತಾರೆ. ವಿವೇಚನೆಯುಳ್ಳ ಶಾಪಿಂಗ್ ಭವಿಷ್ಯದಲ್ಲೂ ಅಸ್ಥಿತ್ವದಲ್ಲಿರಲಿದೆ. ಆದ್ರೆ ಇಟ್ಟಿಗೆ ಮತ್ತು ಗಾರೆ ಮಳಿಗೆಗಳಿಗೆ ಕುತ್ತು ಬರುತ್ತಿರುವುದಂತೂ ಸುಳ್ಳಲ್ಲ. ಸುಲಭವಾಗುತ್ತಿರುವ ಸಂಶೋಧನೆ, ಮೊಬೈಲ್ ಡಿವೈಸ್ ಮೂಲಕ ಸರಳ ಖರೀದಿ, ಪ್ರಯತ್ನ ಕಡಿಮೆ ಮಾಡುವಿಕೆ ಮತ್ತು ವೈಯಕ್ತೀಕರಣ, ಆರ್ಥಿಕತೆಯಲ್ಲಿ ಈ ವರ್ತನೆಯನ್ನು ಜೀವಂತವಾಗಿರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

ಅನವಾದಕರು: ಭಾರತಿ ಭಟ್​​​