ಪ್ರಶ್ನೆ ಸರಿಯಾಗಿದ್ರೆ ಸಿಗುತ್ತೆ ಉತ್ತರ...ಚರ್ಚೆಯಲ್ಲಿಲ್ಲ ಲಿಂಗ ತಾರತಮ್ಯಕ್ಕೆ ಪರಿಹಾರ

ಟೀಮ್​ ವೈ.ಎಸ್​​

ಪ್ರಶ್ನೆ ಸರಿಯಾಗಿದ್ರೆ ಸಿಗುತ್ತೆ ಉತ್ತರ...ಚರ್ಚೆಯಲ್ಲಿಲ್ಲ ಲಿಂಗ ತಾರತಮ್ಯಕ್ಕೆ ಪರಿಹಾರ

Tuesday November 03, 2015,

4 min Read

ಲೇಖಕರು: ಶ್ರದ್ಧಾಶರ್ಮಾ, ಯುವರ್​​ಸ್ಟೋರಿ ಸಂಸ್ಥಾಪಕಿ

ನೀವು ಸರಿಯಾದ ಪ್ರಶ್ನೆ ಕೇಳದಿದ್ರೆ ಸರಿಯಾದ ಉತ್ತರ ಸಿಗೋದೇ ಇಲ್ಲ. ಸರಿಯಾದ ಕ್ರಮದಲ್ಲಿ ಕೇಳಿದ ಪ್ರಶ್ನೆ ಉತ್ತರವನ್ನೂ ತಾನಾಗಿಯೇ ಸೂಚಿಸುತ್ತೆ. ನೀವು ಕೇಳುವ ಪ್ರಶ್ನೆ ಎ-ಬಿ-ಸಿಯ ವರ್ಗೀಕರಣ. ಅನ್ವೇಷಿಸುವ ಮನಸ್ಸೇ ಸಮಸ್ಯೆಯನ್ನೂ ಬಗೆಹರಿಸುತ್ತದೆ ಅನ್ನೋದು ಎಡ್ವರ್ಡ್ ಹೊಡ್ನೆಟ್ ಅವರ ಮಾತು. ಪ್ರಶ್ನೆ, ಚರ್ಚೆ, ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಯುವರ್‍ಸ್ಟೋರಿ ಡಾಟ್ ಕಾಮ್‍ನ ಸಂಸ್ಥಾಪಕಿ ಶ್ರದ್ಧಾ ಶರ್ಮಾ ಗಮನಸೆಳೆಯುವಂತಹ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಅವರ ಅನುಭವ ಹಾಗೂ ಪ್ರತಿಪಾದನೆಗಳನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

image


ಅಲ್ಲಿ ಹೆಣ್ಣಾಗಿ ಹುಟ್ಟುವುದೇ ಒಂದು ಅಪರಾಧವಿದ್ದಂತೆ. ಅಂಥ ಜಾಗದಿಂದ ಬಂದವಳು ನಾನು. ಸಮಾಜದಲ್ಲಿ ಮಹಿಳೆಯರನ್ನು ಕೀಳಾಗಿ ನೋಡುವುದು ಸರ್ವೇ ಸಾಮಾನ್ಯವಾಗ್ಬಿಟ್ಟಿದೆ. ಇವತ್ತು ನಾನಿರುವ ಹಂತ ತಲುಪಲು ನಾನು ಪಟ್ಟ ಶ್ರಮ, ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಮಹಿಳಾ ಉದ್ಯಮಿಗಳಿಗಾಗಿ ಏನನ್ನೂ ಮಾಡ್ತಿಲ್ಲ ಅನ್ನೋ ಆಪಾದನೆ ಕೂಡ ನನ್ನ ಮೇಲಿದೆ. ಬಿಹಾರದ ಮಹಿಳೆಯರಿಗಾಗಿ ನೀನೇನು ಮಾಡಿದ್ದೀಯಾ ಅಂತಾ ನನ್ನ ಅಜ್ಜಿ ಯಾವಾಗ್ಲೂ ಕೇಳ್ತಾ ಇದ್ರು. ಅವರು ಪಕ್ಕಾ ಸ್ತ್ರೀವಾದಿ. 16 ವರ್ಷಕ್ಕೆ ಅವರಿಗೆ ಮದುವೆಯಾಗಿದ್ರು. 18ನೇ ವರ್ಷದಲ್ಲಿ ಗಂಡನನ್ನು ಕಳೆದುಕೊಂಡು ವಿಧವೆಯಾದ್ರು. ಬದುಕಲ್ಲಿ ಹತಾಶರಾಗದೆ ಓದು ಮುಂದುವರಿಸಿ ಬಿಹಾರದ ಮೊದಲ ಮಹಿಳಾ ನಾಗರೀಕ ಸೇವಕಿ ಎನಿಸಿಕೊಂಡ್ರು. ಭಾಗಲ್ಪುರದ ರೇಷ್ಮೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತ ಕೈಗಳನ್ನೇ ಕಳೆದುಕೊಂಡ ಮಹಿಳೆಯರನ್ನು ಭೇಟಿಯಾಗು ಅನ್ನೋದು ಅವರ ಸಲಹೆ. ಅಷ್ಟೇ ಅಲ್ಲ ಅಲ್ಲಿ ನಡೆದ ಘಟನೆಗಳನ್ನು ಅವರು ವಿವರಿಸ್ತಾ ಇದ್ರೆ ಮೈಯೆಲ್ಲಾ ನಡುಗುತ್ತೆ. ನಿವೃತ್ತಿಯ ನಂತರ ಅವರು ಬಿಹಾರದಲ್ಲಿ ಮಹಿಳಾ ಸಬಲೀಕರಣಕ್ಕೆ `ಜಾಗೋ ಬೆಹೆನ್' ಎಂಬ ಎನ್‍ಜಿಓ ಒಂದನ್ನು ಆರಂಭಿಸಿದ್ರು. ಆಗ ನಾನಿನ್ನೂ ಚಿಕ್ಕವಳು, ಶಾಲೆ ಮುಗಿಸಿ ಅಜ್ಜಿಯ ಕೆಲಸಕ್ಕೆ ಸಾಥ್ ಕೊಡ್ತಿದ್ದೆ. ಇವತ್ತು ನಾನೇನನ್ನಾದ್ರೂ ಸಾಧಿಸಿದ್ದೀನೆಂದ್ರೆ ಅದು ನನ್ನ ಅಜ್ಜಿಯ ಜೊತೆಗಿನ ಒಡನಾಟದ ಪರಿಣಾಮ ಅಷ್ಟೇ.

ನನ್ನ ಪ್ರಕಾರ ಲಿಂಗ ಸಮಾನತೆ ಅನ್ನೋದು ತೀರಾ ವೈಯಕ್ತಿಕ ವಿಚಾರ. ಮಹಿಳೆಯರ ಬಗ್ಗೆ ಮಾತನಾಡಬೇಕು ಎನಿಸಿದಾಗಲೆಲ್ಲ ನಾನು ಕಷ್ಟಪಟ್ಟು ಸುಮ್ಮನಾಗ್ತೇನೆ. ಯಾಕಂದ್ರೆ ಮಾತನಾಡುವುದರಿಂದ ಏನೂ ಪ್ರಯೋಜನ ಇಲ್ಲ ಅನ್ನೋದು ನನಗೆ ಅರ್ಥವಾಗಿದೆ, ಅದರ ಬದಲು ಏನನ್ನಾದರೂ ಮಾಡಬೇಕು. ಮನೆಗೆ ಮರಳುವ ನಮ್ಮ ರಾಜ್ಯದ ಮಹಿಳೆಯರಿಗೆಲ್ಲ ನಾನು ಮಾದರಿಯಾಗಬೇಕು. ಅವಳಿಂದ ಸಾಧ್ಯ ಎಂದಾದ್ರೆ ನಮ್ಮಿಂದ್ಯಾಕೆ ಸಾಧ್ಯವಿಲ್ಲ ಎಂಬ ಛಲ ಅವರಲ್ಲಿ ಮೂಡಬೇಕು.

ಇನ್ನು ಉದ್ಯಮ ಲೋಕದ ಬಗ್ಗೆ ಹೇಳೋದಾದ್ರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು, ತಂತ್ರಜ್ಞಾನ ಗೋಷ್ಠಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಇವನ್ನೆಲ್ಲ ನೋಡ್ತಿದ್ರೆ ನನಗೆ ನಿಜಕ್ಕೂ ಅಚ್ಚರಿಯಾಗುತ್ತೆ. ಈ ಸಂಭಾಷಣೆಗಳಿಂದ ಪ್ರಯೋಜನವಾಗಬಹುದೇನೋ, ಆದ್ರೆ ಅವು ಬರೀ ಸಂಭಾಷಣೆಗಳಷ್ಟೆ. ಅಂತಹ ಚರ್ಚೆಯಲ್ಲಿ ಭಾಗವಹಿಸಲು ನನಗೆ ಇಷ್ಟವಿಲ್ಲ. ನಾನು ಮಹಿಳೆಯರಿಗಾಗಿ ಏನನ್ನಾದರೂ ಮಾಡಬಯಸುತ್ತೇನೆ. ನಾವು ಪ್ರಶ್ನೆ ಕೇಳ್ತಿದ್ದೇವೆ ಅಂದ್ರೆ ಸರಿಯಾದುದನ್ನೇ ಕೇಳೋಣ. ಆಳವಾದ ಚಿಂತನೆಗೆ ದೂಡುವಂಥ ಪ್ರಶ್ನೆ ಕೇಳೋಣ. ಸಾಮೂಹಿಕ ಹಾಗೂ ವೈಯಕ್ತಿಕ ಉತ್ತರಗಳನ್ನು ಪಡೆಯೋಣ.

ಪ್ರಶ್ನೆಗಳಿಗೆ ಹೋಗುವ ಮುನ್ನ ನನ್ನ ಕಥೆಯನ್ನೇ ನಿಮಗೆ ಹೇಳಬಯಸುತ್ತೇನೆ. ಒಂದು ವಾರ ನಾನು ದೆಹಲಿಯಲ್ಲಿದೆ. ಮೂರು ದಿನ ಟೆಕ್‍ಸ್ಪಾರ್ಕ್ಸ್​​ ಸ್ಥಳದಲ್ಲೂ ಉಳಿದೆ. ಅದರರ್ಥ ನಾನು ಮನೆಯಲ್ಲಿ ಕಳೆದ ಸಮಯ ಅತ್ಯಂತ ಕಡಿಮೆ. ನಾನು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಕಳೆದ 7 ವರ್ಷಗಳಿಂದ ಮನೆಯ ಕರ್ತವ್ಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಯಾಕಂದ್ರೆ ನನ್ನ ಪತಿಯ ಬೆಂಬಲ ನನಗಿದೆ. ಮನೆ ಕೆಲಸಗಳನ್ನು ಮಾಡಲು ಅವರು ಬಿಡೋದಿಲ್ಲ, ಯಾಕಂದ್ರೆ ಅದಕ್ಕಿಂತಲೂ ಮುಖ್ಯವಾದ ಕೆಲಸ ನನಗಿದೆ ಅನ್ನೋದು ಅವರಿಗೆ ಗೊತ್ತು. ನಾನೊಬ್ಬ ಮಹಿಳೆ ಎಂಬ ಭಾವನೆಯಲ್ಲಿ ಅವರು ನನ್ನನ್ನು ನಡೆಸಿಕೊಳ್ಳುವುದಿಲ್ಲ.

ನಿಜವಾಗಿಯೋ ಲಿಂಗ ಸಮಾನತೆ ಬಗ್ಗೆ ಅರಿವು ಮೂಡಿಸಬೇಕೆಂದಿದ್ದಲ್ಲಿ ಆ ಬಗ್ಗೆ ಪ್ರಶ್ನೆಗಳನ್ನು ಎಸೆಯುತ್ತ, ಅದನ್ನು ಪರಿಹರಿಸುತ್ತ, ಆಳವಾದ ವಿಷಯಗಳ ಮೇಲೆ ಕೆಲಸ ಮಾಡಬೇಕು. ಉದ್ಯಮ ಕ್ಷೇತ್ರಗಳತ್ತ ಮಹಿಳೆಯರು ಯಾಕೆ ಬರುತ್ತಿಲ್ಲ? ಮಹಿಳಾ ಉದ್ಯಮಿಗಳಿಗೆ ಬಂಡವಾಳದ ಕೊರತೆ ಯಾಕೆ ಕಾಡ್ತಿದೆ? ಭಾರತದಲ್ಲಿ ಮಹಿಳೆಯರು ಯಾಕೆ ಉದ್ಯಮ ಮುನ್ನಡೆಸಲು ಸಾಧ್ಯವಾಗ್ತಿಲ್ಲ? ನಮ್ಮಲ್ಲಿ ಮಹಿಳಾ ಹೂಡಿಕೆದಾರರಿಲ್ಲವೇ? ಹೀಗೆ ಪ್ರಶ್ನೆಗಳನ್ನು ಕೇಳ್ತಾ ಹೋದ್ರೆ ಅದು ಮುಗಿಯದ ಕಥೆ. ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಜವಾಬ್ಧಾರಿ ಸಮಾಜದ ಮೇಲಿದೆ, ನಮ್ಮ ಮನೆಯಿಂದಲೇ ಅದು ಆರಂಭವಾಗಬೇಕಿದೆ.

ಮಗಳು ಹೊಸ ಉದ್ಯಮಕ್ಕಾಗಿ ವಾರದ 7 ದಿನಗಳು ದಿನದ 24 ಗಂಟೆ ದುಡಿಮೆ ಮಾಡಿದ್ರೆ ಪೋಷಕರು ಅದನ್ನು ಬೆಂಬಲಿಸ್ತಾರಾ? ನಿಮ್ಮ ಸೊಸೆಯಂದಿರು ಮತ್ತು ಮೊಮ್ಮಕ್ಕಳಿಗೆ ಯಶಸ್ಸಿನ ಹಾದಿಯಲ್ಲಿ ನಡೆಯಲು ನೀವು ಎಷ್ಟರ ಮಟ್ಟಿಗೆ ಸಹಕರಿಸಿದ್ದೀರಾ? ಮನೆಕೆಲಸ ಮಾಡುವವರ್ಯಾರು? ಅಕ್ಕಪಕ್ಕದವರು ಏನಂತಾರೋ ಅನ್ನೋ ಚಿಂತೆ ಬಿಟ್ಟು ಬೆಂಬಲಿಸಿದ್ದೀರಾ? ನಿಮ್ಮ ಪತ್ನಿ, ಗೆಳತಿ ಅಥವಾ ಸಹೋದರಿಯ ಬೆಂಬಲಕ್ಕಾಗಿ ನಿಮ್ಮ ವೃತ್ತಿಯನ್ನೇ ತ್ಯಾಗ ಮಾಡಿದ ಗಂಡಸರು ಎಷ್ಟು ಮಂದಿ ಇದ್ದಾರೆ? ಭಾವನಾತ್ಮಕವಾಗಿ ಯೋಚಿಸದೆ ಮಹಿಳಾ ಉದ್ಯಮಿಗಳಿಗೆ ನೆರವಾದ ಹೂಡಿಕೆದಾರರು ಎಷ್ಟು ಜನರಿದ್ದಾರೆ? ಇವೆಲ್ಲ ನಿಜಕ್ಕೂ ಉತ್ತರಿಸಲು ಕಷ್ಟವಾಗುವಂತಹ ಪ್ರಶ್ನೆಗಳು. ಈ ಬಗ್ಗೆ ಚರ್ಚೆ ನಡೆಸುತ್ತ ಸಮಯ ವ್ಯರ್ಥ ಮಾಡುವ ಉದ್ದೇಶ ನಮ್ಮದಲ್ಲ. ಮಹಿಳೆಯರು ಬೇಡಿಕೆ ಮುಂದಿಡಲು ಸಿದ್ಧವಿದ್ದಾರೆ. ಗನಸೆಳೆಯಲು ಅವರು ಅರ್ಹರು ಕೂಡ.

ಮಹಿಳಾ ಪ್ರಾತಿನಿಧ್ಯದ ಬಗ್ಗೆ ಮಾತನಾಡ್ತಾ ಹೋದ್ರೆ ಗಂಟೆಗಳೇ ಸಾಲೊಲ್ಲ. ಒಬ್ಬ ಮಹಿಳೆ ತಮ್ಮ ವೃತ್ತಿ ಜೀವನವನ್ನು ಅರ್ಧದಲ್ಲೇ ಅಂತ್ಯಗೊಳಿಸ್ತಾಳೆ ಅಂದ್ರೆ ಅದಕ್ಕೆ ಕಾರಣ ಈ ಸಮಾಜ ಮತ್ತು ಕೌಟುಂಬಿಕ ಒತ್ತಡವಲ್ಲದೆ ಬೇರೇನೂ ಅಲ್ಲ. ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೂಕ್ತ ಬೆಂಬಲ ಸಿಗ್ತಾ ಇಲ್ಲ. ಮಕ್ಕಳು, ಪತಿ, ಮನೆ, ಸಂಸಾರ ಹೀಗೆ ಜವಾಬ್ದಾರಿಗಳ ಹೊರೆ ತಾಳಲಾರದೆ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಬೇಕಾದ ಪರಿಸ್ಥಿತಿ ಬರುತ್ತದೆ.

ಈ ಜಗತ್ತು ಸಮರ ಭೂಮಿಯಿದ್ದಂತೆ. ಪ್ರತಿಯೊಬ್ಬ ಮಹಿಳೆಯೂ ಪುರುಷರಿಗೆ ಸರಿಸಮಾನಳು. ಮೀಸಲಾತಿ ಹಾಗೂ ಲಿಂಗದ ಆಧಾರದ ಮೇಲೆ ಅವಳು ಕೂಡ ಯುದ್ಧದಲ್ಲಿ ಹೋರಾಡಲು ಬಯಸುತ್ತಾಳೆ. ಇನ್ನು ಮಹಿಳಾ ಮೀಸಲಾತಿ ಅನ್ನೋದು ಸೀಮಿತ ಮಾರ್ಗವಷ್ಟೆ, ಶಾಶ್ವತ ದಾರಿಯಂತೂ ಅಲ್ಲ. ಟೆಕ್‍ಸ್ಪಾರ್ಕ್ಸ್​​ 2015ನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಇಲ್ಲಿ ಭಾರತದ 6 ಮಹತ್ವಾಕಾಂಕ್ಷಿ ಉದ್ಯಮಗಳನ್ನ ಪರಿಚಯಿಸಲಾಯ್ತು. ಡಜನ್‍ಗಟ್ಟಲೆ ಸ್ಪಾನ್ಸರ್‍ಗಳನ್ನು, 3000 ಸಾವಿರ ಪ್ರೇಕ್ಷಕರನ್ನು ಇದು ಆಕರ್ಷಿಸಿದೆ. ಯುವರ್‍ಸ್ಟೋರಿ ಆಯೋಜಿಸಿದ್ದ ಕಾರ್ಯಕ್ರಮ ಇದು. ಇದನ್ನು ಮಹಿಳೆಯರೇ ಮುನ್ನಡೆಸಿದ ಕಾರ್ಯಕ್ರಮ ಅಂದ್ರೆ ತಪ್ಪಿಲ್ಲ. ವಿಶೇಷ ಅಂದ್ರೆ ಸ್ಪೀಕರ್ ಹಾಗೂ ಪ್ಯಾನಲಿಸ್ಟ್​​​​ ಗಳಿಗಾಗಿ ಆಯ್ಕೆ ಮಾಡಿರುವವರಲ್ಲಿ ಡಜನ್‍ಗಟ್ಟಲೆ ಮಹಿಳೆಯರಿದ್ದಾರೆ.

ಮಹಿಳಾ ಉದ್ಯಮದ ಬಗ್ಗೆ ಮಾತನಾಡೋದಾದ್ರೆ ಆ ಪರಿಸರದಲ್ಲಿ ಅವರನ್ನು ಅವರು ಗುರುತಿಸಿಕೊಳ್ಳಬೇಕು. ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಲೇಬೇಕು. ಮಹಿಳಾ ಉದ್ಯಮಿಗಳು ಇತರರಿಗೆ ಮಾದರಿಯಾಗಬೇಕು, ಪ್ರೇರಣೆಯಾಬಗೇಕು. ಸಮಾಜ, ಪೋಷಕರು, ಸಹೋದರ-ಸಹೋದರಿಯರು, ಪತ್ನಿಯರು, ಚಿಕ್ಕಪ್ಪ-ಚಿಕ್ಕಮ್ಮ, ಪ್ರಾಧ್ಯಾಪಕರು ಸಲಹೆಗಾರರು, ಸ್ನೇಹಿತರು ಎಲ್ಲರೂ ಮಹಿಳೆಯರು ಹಾಗೂ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವ ಅಗತ್ಯವಿದೆ. ಅದರಿಂದ ನೀವು ಸ್ತ್ರೀವಾದಿ ಎನಿಸಿಕೊಳ್ಳುವುದಿಲ್ಲ. ಒಬ್ಬ ಉತ್ತಮ ಮನುಷ್ಯ ಎನಿಸಿಕೊಳ್ತೀರಾ. ಮಹಾತ್ಮಾ ಗಾಂಧಿಯವರು ಹೇಳಿದಂತೆ "ಜಗತ್ತಿನಲ್ಲಿ ನೀವು ಕಾಣಬಯಸುವ ಬದಲಾವಣೆಯನ್ನು ನಿಮ್ಮಲ್ಲಿ ಕಾಣಿರಿ''.