ಖಾಲಿ ಬಾಟಲಿಯಲ್ಲಿ ಬೆಳಕು..! ಪವರ್​​ಕಟ್​​ನ ಭೀತಿ ಇದಕ್ಕಿಲ್ಲ..!

ವಿಶಾಂತ್​​

ಖಾಲಿ ಬಾಟಲಿಯಲ್ಲಿ ಬೆಳಕು..! ಪವರ್​​ಕಟ್​​ನ ಭೀತಿ ಇದಕ್ಕಿಲ್ಲ..!

Friday October 30, 2015,

3 min Read

ಬೆಂಗಳೂರಿನಲ್ಲಿ ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದರಲ್ಲೂ ಪವರ್ ಕಟ್ ಸಮಸ್ಯೆಯಂತೂ ಬೆಂಗಳೂರಿಗರನ್ನ ಬೆಂಬಿಡದೇ ಕಾಡುತ್ತಿದೆ. ನಗರದ ಪ್ರತಿಷ್ಠಿತ ಏರಿಯಾಗಳು ಕೂಡ ಇದರಿಂದ ಹೊರತಾಗಿಲ್ಲ. ಇನ್ನು ಸ್ಲಂಗಳ ಕಥೆ ಕೇಳಬೇಕಾ..? ಅಲ್ಲಿ ರಾತ್ರಿ ಬಿಡಿ , ಹಗಲೂ ಬರೀ ಕತ್ತಲೇ. ಇಂತಹ ಕೊಳೆಗೇರಿಗಳಿಗೆ ಬೆಳಕು ನೀಡುವ ಕೆಲಸವನ್ನು ಮಾಡ್ತಿದೆ ಇಲ್ಲೊಂದು ತಂಡ. ಇವತ್ತು ಬಾಟಲಿ ಪಾನೀಯಗಳನ್ನು ಬಳಸುವವರೇ ಹೆಚ್ಚು. ಆದ್ರೆ ಹೆಚ್ಚಿನವರು ಅದನ್ನು ಕುಡಿದು ಸಿಕ್ಕ ಸಿಕ್ಕಲ್ಲಿ ಬಿಸಾಕಿ ಬಿಡ್ತಾರೆ. ಆದ್ರೆ ಇದೇ ಬಾಟಲಿಗಳು ಬೆಂಗಳೂರಿನಲ್ಲಿ ಒಂದಷ್ಟು ಮನೆಗಳಿಗೆ ಬೆಳಕು ನೀಡ್ತವೆ ಅಂದ್ರೆ ನಂಬೋದು ಕಷ್ಟ ಅನ್ಸುತ್ತೆ ಅಲ್ವಾ? ಆದ್ರೆ ಇದು ನಿಜ. ಕಸದಿಂದ ರಸ ಮಾಡೋಹಾಗೇ, ಇಲ್ಲೊಂದು ಟೀಮ್ ಕಸದಿಂದ ಕರೆಂಟ್ ಮಾಡ್ತಿದೆ.

image


ಲೋಡ್‍ಶೆಡ್ಡಿಂಗ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಎಲ್ಲಿ ನೋಡಿದ್ರೂ ಬರೀ ಕಟ್ಟಡಗಳೇ ಕಾಣಿಸುತ್ತವೆ. ಅದರಲ್ಲೂ ರಾತ್ರಿ ವೇಳೆಯಲ್ಲಿ ಬೆಂಗಳೂರನ್ನು ದೂರದಿಂದ ನಿಂತು ನೋಡೋದೇ ಚೆಂದ. ಎಲ್ಲೆಡೆ ಝಗಮಗಿಸುವ ಬೆಳಕೇ ಕಾಣಿಸುತ್ತದೆ. ಆದ್ರೆ ಇದೇ ಕಾಂಕ್ರೀಟ್ ಕಾಡಿನೊಳಗೆ ಅದೆಷ್ಟೋ ಜನ ಹಗಲು ಹೊತ್ತಲ್ಲೇ ಕತ್ತಲಲ್ಲಿ ಬದುಕು ದೂಡುತ್ತಿದ್ದಾರೆ. ನಗರದ ಅದೆಷ್ಟೋ ಸ್ಲಂಗಳಲ್ಲಿ ಇಂದಿಗೂ ಬೆಳಕು ಅನ್ನೋದು ಮರೀಚಿಕೆ. ಅಂತಹವರ ಮನೆಗಳನ್ನು ಬೆಳಗಿಸುವ ಕೆಲಸವನ್ನು ಸಂಸ್ಥೆಯೊಂದು ಮಾಡುತ್ತಿದೆ ಅದೇ ಲೀಟರ್ ಆಫ್ ಲೈಟ್. ಅಂದ್ಹಾಗೆ ಲೀಟರ್ ಆಫ್ ಲೈಟ್ ಅನ್ನೋದು ಒಂದು ಅಭಿಯಾನ. 2011 ರಲ್ಲಿ ಈ ಅಭಿಯಾನ ಆರಂಭವಾಯಿತು. ಈ ಅಭಿಯಾನದ ಹಿಂದಿದ್ದ ರೂವಾರಿ ಬ್ರೆಝಿಲ್‌ನ ಆಲ್‌ಫ್ರೆಡೊ ಮೋಸರ್ ಎಂಬ ಮೆಕ್ಯಾನಿಕ್. ಬಳಿಕ ಇದೇ ಪ್ರಯೋಗಗಳು ಜಗತ್ತಿನ ಅನೇಕ ದೇಶಗಳಲ್ಲಿ ನಡೆದವು. ಇದೀಗ ಹದಿನೈದು ದೇಶಗಳಲ್ಲಿ ಈ ತಂಡ ಕೆಲಸ ನಿರ್ವಹಿಸುತ್ತಿದೆ. ಭಾರತದಲ್ಲೂ ಮುಂಬೈ, ದೆಹಲಿ, ಕೋಲ್ಕತ್ತ ಮತ್ತು ಚೆನ್ನೈ ನಗರಗಳ ಅನೇಕ ಸ್ಲಂಗಳಲ್ಲಿ ಲೀಟರ್ ಆಫ್ ಲೈಟ್ ಬೆಳಕು ನೀಡುವ ಕಾಯಕದಲ್ಲಿ ತೊಡಗಿವೆ.

image


ದೇಶದ ಪ್ರಮುಖ ನಗರಗಳಲ್ಲಿರುವ ಈ ಲೀಟರ್ ಆಫ್ ಲೈಟ್ ಯೋಜನೆ ಸದ್ಯ ಬೆಂಗಳೂರಿನಲ್ಲೂ ಪ್ರಚಲಿತಲ್ಲಿದೆ. ಅಂದಹಾಗೇ ಉದ್ಯಾನ ನಗರಿಗೆ ಇದನ್ನು ಪರಿಚಯಿಸಿದವರು ಪಂಕಜ್ ದೀಕ್ಷಿತ್ ಹಾಗೂ ತೃಪ್ತಿ. ಆರೋಹ ಎಂಬ ಸಂಸ್ಥೆಯ ಮೂಲಕ ಅವರು ಸ್ಲಂ ನಿವಾಸಿಗಳ ಮನೆಗಳಿಗೆ ಬೆಳಕು ತುಂಬೋ ಕೆಲಸದಲ್ಲಿ ತೊಡಗಿದ್ದಾರೆ. ಹರಿಯಾಣದವರಾದ ತೃಪ್ತಿ ಟೆಕ್ ಮಹೀಂದ್ರಾದಲ್ಲಿ ಉದ್ಯೋಗಿ. ಇನ್ನು ಪಂಕಜ್ ಸ್ವಂತ ಉದ್ಯಮ ಮಾಡುತ್ತಿದ್ದಾರೆ. ಆದ್ರೆ ಇವರಿಗಿದ್ದದ್ದು ಸಮಾಜ ಸೇವೆಯ ತುಡಿತ. ಹಾಗಾಗಿ ಕೈ ಹಾಕಿದ್ದು ಬೆಳಕು ನೀಡುವ ಕಾರ್ಯಕ್ಕೆ. ಇನ್ನು ಇವರಿಬ್ಬರ ಜೊತೆ ಇನ್ನೂ ಅನೇಕರು ಕೈ ಜೋಡಿಸಿದ್ದಾರೆ. ವಿವಿಧ ಉನ್ನತ ಹುದ್ದೆಯಲ್ಲಿರುವ ಇಪ್ಪತ್ತೈದು ಮಂದಿ ಈ ಸಂಸ್ಥೆಯ ಸದಸ್ಯರಾಗಿದ್ದು, ಬಿಡುವಿನ ಸಮಯದಲ್ಲಿ ಇವರಿಬ್ಬರ ಜೊತೆ ಕೈ ಜೋಡಿಸುತ್ತಾರೆ.

ಖರ್ಚು ಕಡಿಮೆ, ಕರೆಂಟ್ ಬಿಲ್ ಬರೋದಿಲ್ಲ!

ಅಂದ್ಹಾಗೆ ಬೆಳಕು ನೀಡಲು ಆರೋಹ ಸಂಸ್ಥೆ ಅನುಸರಿಸುತ್ತಿರೋದು ಅತ್ಯಂತ ಸರಳವಾದ ವಿಧಾನ. ಮೊದಲಿಗೆ ನಿರುಪಯುಕ್ತವಾದ ಬಾಟಲಿಗಳಿಗೆ ಶುದ್ಧವಾದ ನೀರನ್ನು ತುಂಬಿಸಲಾಗುತ್ತೆ. ಬಳಿಕ ಅದಕ್ಕೆ ಬ್ಲೀಚಿಂಗ್ ಪೌಡರನ್ನು ಹಾಕಲಾಗುತ್ತೆ. ನಂತ್ರ ಮನೆಯ ಛಾವಣಿಗೆ ಸಣ್ಣ ರಂಧ್ರ ಮಾಡಿ ಅದಕ್ಕೆ ಈ ಬಾಟಲಿಯನ್ನು ಅಂಟಿಸಲಾಗುತ್ತೆ. ಇನ್ನು ಸೂರ್ಯನ ಕಿರಣಗಳು ಈ ಬಾಟಲಿಯೊಳಗಿನ ನೀರನ್ನು ಮುಟ್ಟುತ್ತಿದ್ದಂತೆ ಬೆಳಕು ಪ್ರಖರವಾಗಿ ವಿಸ್ತರಿಸುತ್ತೆ. ಈ ಮೂಲಕ ನಿಮಗೆ ಖರ್ಚಿಲ್ಲದ, ತಿಂಗಳಿಗೊಮ್ಮೆ ಬಿಲ್ ಬಾರದ 55 ವ್ಯಾಟ್ ಬಲ್ಬ್‍ಅನ್ನು ಉಚಿತವಾಗಿ ಬಳಸಬಹುದು.

image


ಪ್ರಾಯೋಗಿಕವಾಗಿ ಬೆಂಗಳೂರಿನ ಈಜೀಪುರದ ಕೊಳೆಗೇರಿಯೊಂದರಲ್ಲಿಯೇ ಈ ರೀತಿ ಆರು ಬಾಟಲ್‌ಗಳನ್ನು ಅಳವಡಿಸಲಾಗಿತ್ತು. ಅದಕ್ಕೆ ಉತ್ತಮ ಫಲಿತಾಂಶ ದೊರೆತಿತ್ತು. ಅಂದಿನಿಂದ ಆರೋಹಾ ಸದಸ್ಯರು ಅನೇಕ ಕೊಳೆಗೇರಿಗಳನ್ನು ಗುರುತಿಸಿ, ಈಜೀಪುರ ಮಾತ್ರವಲ್ಲದೆ ನಂದಿದುರ್ಗ ರಸ್ತೆ, ಕೋರಮಂಗಲದ ಚಿಂದಿ ಆಯುವವರ ಕಾಲೋನಿಯಲ್ಲೂ ಇವುಗಳನ್ನು ಅಳವಡಿಸಿದ್ದಾರೆ. ಐವತ್ತಕ್ಕೂ ಹೆಚ್ಚಿನ ಮನೆಗಳಿಗೆ ಬಾಟಲಿ ಲೈಟ್ ಗಳು ಬೆಳಕು ನೀಡುತ್ತಿವೆ. ಹಗಲಿಗೇನೋ ಬಾಟಲಿ ಲೈಟ್ ಗಳು ಬೆಳಕು ನೀಡ್ತವೆ. ಹಾಗಾದ್ರೆ ರಾತ್ರಿ ವೇಳೆ ಬೆಳಕಿಗೇನು ಮಾಡೋದು ಅನ್ನೋ ಚಿಂತೆ ಕಾಡೋದು ಸಹಜ. ಆದ್ರೆ ಆರೋಹ ಸಂಸ್ಥೆ ಇದಕ್ಕೂ ಪರಿಹಾರ ಕಂಡುಕೊಂಡಿದೆ. ಅದಕ್ಕಾಗಿ ಮೊರೆ ಹೋಗಿದ್ದು ಸೋಲಾರ್ ದೀಪಗಳಿಗೆ. ಅದರಂತೆ ಸ್ಲಂಗಳಿಗೆ ಸಂಸ್ಥೆ ತನ್ನ ಸ್ವಂತ ಖರ್ಚಿನಲ್ಲೇ ಸೋಲಾರ್ ಲೈಟ್‌ಗಳನ್ನು ಪರಿಚಯಿಸಿದೆ. ವಿಶೇಷ ಎಂದರೆ ಈ ಸೋಲಾರ್ ದೀಪಗಳಲ್ಲೂ ಬಾಟಲಿಯನ್ನು ಉಪಯೋಗಿಸಲಾಗಿದೆ. ಎಲೆಕ್ಟ್ರಾನಿಕ್ ಸರ್ಕ್ಯೂಟ್, ಸೋಲಾರ್ ಪ್ಯಾನೆಲ್ ಮತ್ತು ಬ್ಯಾಟರಿಯಿರುವ ಈ ಲೈಟ್‌ಗಳನ್ನು ಆರೋಹಾ ಸಂಸ್ಥೆಯೇ ತಯಾರು ಮಾಡುತ್ತೆ.

ಬೆಂಗಳೂರಿನ ಕೋರಮಂಗಲ, ಹೆಬ್ಬಾಳ ಸಮೀಪ, ಬನಶಂಕರಿಯಲ್ಲಿಯೂ ಈ ರೀತಿಯ ಲೈಟ್ ಗಳಿವೆ. ಆರೋಹಾ ಸಂಸ್ಥೆಯ ಈ ಕಾರ್ಯ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ತೆಲಂಗಾಣದ ವಿಕರಾಬಾದ್‌ನ ಬುಡಕಟ್ಟು ಪ್ರದೇಶದಲ್ಲಿ, ವಿಶಾಖಪಟ್ಟಣ ಸೇರಿದಂತೆ ನಾಲ್ಕು ಬುಡಕಟ್ಟು ಹಾಡಿಗಳಲ್ಲಿ ಸೋಲಾರ್ ಲೈಟ್‌ಗಳನ್ನು ಪರಿಚಯಿಸಿದೆ. ಇನ್ನು ಪಿಇಟಿ ಬಾಟಲಿಯನ್ನು ಬಳಸಿ ಮೂರು ಮಾದರಿಯ ಲೈಟ್‌ಗಳನ್ನು ಕಂಡುಕೊಳ್ಳಲಾಗಿದೆ. ಡೇಲೈಟ್, ಸ್ಟ್ರೀಟ್ ಲೈಟ್, ಹೋಮ್ ಲೈಟ್. ಸದ್ಯಕ್ಕೆ ತಂಡವೇ ಈ ಮಾದರಿಗಳನ್ನು ತಯಾರಿಸುತ್ತಿದೆ. ಇವು ಐದು ವರ್ಷಗಳವರೆಗೂ ಯಾವುದೇ ಸಮಸ್ಯೆಯಿಲ್ಲದೆ ಕೆಲಸ ನಿರ್ವಹಿಸಬಲ್ಲವು.

image


ಅಂದ್ಹಾಗೆ ಡೇ ಲೈಟ್ ಗೆ ತಗಲುವ ಖರ್ಚು ಹೆಚ್ಚೆಂದರೆ ನೂರು ರೂಪಾಯಿ. ಆದರೆ ಸೋಲಾರ್ ಬೆಂಬಲಿತ ಲೈಟ್‌ಗೆ 5,000 ರೂಪಾಯಿ ಖರ್ಚಾಗುತ್ತೆ. ಹೋಮ್ ಲೈಟ್‌ಗೆ 1,000 ರೂಪಾಯಿ ಬೇಕು. ಸದ್ಯಕ್ಕೆ ತಂಡವೇ ದೇಣಿಗೆ ಹಣದ ಮೂಲಕ ಖರ್ಚನ್ನು ಭರಿಸುತ್ತಿದೆ. ಕರ್ನಾಟಕದಲ್ಲಿ ತುಮಕೂರು, ಬೆಂಗಳೂರಿನ ಗಡಿ ಭಾಗಗಳು, ವಿಜಯಪುರ, ಚಿಕ್ಕಬಳ್ಳಾಪುರ, ಕನಕಪುರ ಇನ್ನೂ ಹಲವೆಡೆ ಈ ಲೈಟ್‌ಗಳನ್ನು ಅಳವಡಿಸುವ ಕುರಿತ ಚರ್ಚೆ ನಡೆಯುತ್ತಿದೆ. ಇನ್ನು 2015 ಅನ್ನು ಅಂತರರಾಷ್ಟ್ರೀಯ ಬೆಳಕಿನ ವರ್ಷ ಎಂದು ಆಚರಿಸಲಾಗುತ್ತಿದೆ. ಹಾಗಾಗಿ ಈ ವರ್ಷವೇ ಈ ಯೋಜನೆಯನ್ನು ಆದಷ್ಟು ಜನರಿಗೆ ಪರಿಚಯಿಸಬೇಕೆಂಬ ಉದ್ದೇಶ ಆರೋಹ ಸಂಸ್ಥೆಯದ್ದು. ಆರೋಹಾ ಸಂಸ್ಥೆಯಿಂದಾಗಿ ಕತ್ತಲಲ್ಲಿದ್ದ ಅದೆಷ್ಟೋ ಸ್ಲಂಗಳಲ್ಲಿ ಇವತ್ತು ಬೆಳಕಿನದ್ದೇ ದರ್ಬಾರ್. ಹಳ್ಳಿಗಳಿಗೂ ಇದನ್ನು ಪರಿಚಯಿಸೋ ಯೋಜನೆ ಆರೋಹಕ್ಕಿದೆ. ಸರ್ಕಾರವೂ ಇದಕ್ಕೆ ಕೈಜೋಡಿಸಿದ್ರೆ ಆರೋಹ ಸಂಸ್ಥೆಯ ಕೆಲಸ ಇನ್ನಷ್ಟು ಸರಾಗವಾಗುತ್ತೆ.