ಸ್ನಾಕ್ಸ್ ಆರೋಗ್ಯಕ್ಕೆ ಹಾಳಲ್ಲ ! ಇಲ್ಲಿದೆ ಹೆಲ್ತಿ ಕುರುಂಕುರುಂ

ಟೀಮ್​ ವೈ.ಎಸ್​​.

ಸ್ನಾಕ್ಸ್ ಆರೋಗ್ಯಕ್ಕೆ ಹಾಳಲ್ಲ ! ಇಲ್ಲಿದೆ ಹೆಲ್ತಿ ಕುರುಂಕುರುಂ

Wednesday September 30, 2015,

4 min Read

ಕುರುಂ ಕುರುಂ ಅಂತ ಮೆಲ್ಲುವ ತಿಂಡಿಗಳನ್ನು ಕಂಡ್ರೆ ಯಾರಿಗೆ ತಾನೆ ಬಾಯಲ್ಲಿ ನೀರೂರಲ್ಲ ಹೇಳಿ? ಆದ್ರೆ, ಅವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಎಚ್ಚರಿಕೆಯ ಮಧ್ಯೆಯೇ ಜನ ಅಳುಕಿನಿಂದಲೇ ಅವುಗಳನ್ನು ಸೇವಿಸಿ, ಬೊಜ್ಜು ಮತ್ತಿತರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ಊಟದ ವೇಳೆ ಎಷ್ಟೇ ಆಹಾರ ತಿಂದರೂ ಸಂಜೆಯಾಗುತ್ತಿದ್ದಂತೆ ಬಾಯಿಚಪಲ ಶುರುವಾಗಿಬಿಡುತ್ತದೆ. ಸುಮಾರು ಒಂದೂವರೆ ದಶಕಗಳ ಕಾಲ ತೂಕದ ಸಮಸ್ಯೆ ಕ್ಷೇತ್ರದಲ್ಲಿ ದುಡಿದ ಜಾಸ್ಮಿನ್ ಕೌರ್ ಅವರಿಗೆ, ಆಹಾರದ ಸಮಸ್ಯೆ ಬಗ್ಗೆ ಹೆಚ್ಚಿನ ಮಾಹಿತಿ ಇತ್ತು. ಡಯಟ್ ಫೈಲ್ಯೂರ್ ಆದ ರೋಗಿಗಳ ಸಮಸ್ಯೆ ಗೊತ್ತಿತ್ತು. ಹೀಗಾಗಿ, ಅಂತಹವರಿಗೆ ಏನಾದರೂ ಮಾಡಲೇ ಬೇಕು ಎಂಬ ತುಡಿತ ಅವರಲ್ಲಿ ಕೊರೆಯುತ್ತಲೇ ಇತ್ತು. ಪರಿಣಾಮವಾಗಿ ಶುರುವಾಗಿದ್ದೇ ಗ್ರೀನ್ ಸ್ನಾಕ್ ಕೋ.

ಟೇಸ್ಟಿಯಾಗಿರುವ, ಕ್ರಂಚಿ, ಮತ್ತು ಪೌಷ್ಟಿಕಾಂಶ ಉಳ್ಳ ಸ್ನಾಕ್ಸ್​​ಗಳಿಗಾಗಿ ಅವರೂ ಹುಡುಕಾಡುತ್ತಿದ್ದರು. ಆಗ ತಾವೇ ತಯಾರಿಸಿ ಮಾರಲು ಶರುಮಾಡಿದರು. ಆ ಪ್ರಯತ್ನದ ಫಲವೇ ದಿ ಗ್ರೀನ್ ಸ್ನಾಕ್ ಕೋ. "ಮಾರುಕಟ್ಟೆಯಲ್ಲಿ ಇಂತಹ ಸ್ನಾಕ್ಸ್​​ಗಳು ಲಭ್ಯವಿರಲಿಲ್ಲ."ಎನ್ನುತ್ತಾರೆ ಕೌರ್. ತಮ್ಮ ನೌಕರಿಗೆ ಗುಡ್‍ಬೈ ಹೇಳಿದ ಕೌರ್, ತಮ್ಮ ಸಂಸ್ಥೆಯ ಮೇಲೆ ಕೆಲಸ ಆರಂಭಿಸಿದರು. ಜಾಗತಿಕವಾಗಿ ಲಭ್ಯವಿರುವ ಹಲವು ಆರೋಗ್ಯಕಾರಿ ಸ್ನಾಕ್ಸ್​​ಗಳ ಮೇಲೆ ಸಂಶೋಧನೆ ನಡೆಸಿದರು. ಹಸಿರೆಲೆ ಕೇಲ್‍ನಿಂದ ತಯಾರಿಸುವ ಒಂದು ಸ್ನಾಕ್ಸ್​​ಗೆ ಎಲ್ಲಾ ದೇಶಗಳಲ್ಲಿ ಬೇಡಿಕೆ ಇರುವುದು ಗಮನಕ್ಕೆ ಬಂತು.

image


ಕೇಲ್‍ನಿಂದ ಕ್ರಿಸ್ಪಿ ಖಾದ್ಯವನ್ನು ತಯಾರಿಸಲು ಕೌರ್ ನಿರ್ಧರಿಸಿದರು. "ಸ್ನ್ಯಾಕ್ಸ್​​ಗೆ ಸಂಬಂಧಿಸಿದಂತೆ ಭಾರತೀಯ ಗ್ರಾಹಕರ ಅಭಿರುಚಿ ಬೇರೆಯೇ ಇರುತ್ತದೆ. ಇದನ್ನು ನೋಡಿದಾಗ ನನಗೆ ಒಂಥರಾ ಅಂಜಿಕೆಯಾಗಿತ್ತು." ಎನ್ನುತ್ತಾರೆ ಜಾಸ್ಮಿನ್.

ಆರೋಗ್ಯಕಾರಿ ಸ್ನಾಕ್ಸ್ ತಯಾರಾಗಿದ್ದು ಹೇಗೆ?

ಆದರೆ, ತಾವು ತಯಾರಿಸಿದ ಉತ್ಪನ್ನಕ್ಕೆ ಗ್ರಾಹಕರಿಂದ ಭರ್ಜರಿ ಬೇಡಿಕೆ ಬಂತು. ಅದನ್ನು ಕಂಡು ಖುದ್ದು ಜಾಸ್ಮಿನ್ ಅವರಿಗೇ ಅಚ್ಚರಿಯಾಗಿತ್ತು. ಬಹುತೇಕ ಜನರಿಗೆ ಕೇಲ್ ಬಗ್ಗೆ ಅರಿವಿತ್ತು. ಆದರೆ ಭಾರತದಲ್ಲಿ ಸ್ನಾಕ್ಸ್ ರೂಪದಲ್ಲಿ ಅದರ ಉತ್ಪನ್ನಗಳು ಬಿಡುಗಡೆಯಾಗುವುದನ್ನು ಕಾಯುತ್ತಿದ್ದರು. “ ನಾವು ಇನ್ನೂ ಮಾರಾಟ ಆರಂಭಿಸಿರಲಿಲ್ಲ. ಸ್ಯಾಂಪಲ್‍ಗಳನ್ನು ಕೊಡುತ್ತಿದ್ದೆವು ಅಷ್ಟೇ. ಆದರೆ. ಆಗಲೇ ಗ್ರಾಹಕರು ಪದೇ ಪದೇ ಬಂದು ಹೆಚ್ಚು ಉತ್ಪನ್ನಗಳನ್ನು ನೀಡುವಂತೆ ಮನವಿ ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡು ಉದ್ಯಮ ಸ್ಥಾಪಿಸಬೇಕು ಎಂದು ಆಗಲೇ ನಾನು ತೀರ್ಮಾನಿಸಿದೆ.” ಎನ್ನುತ್ತಾರೆ ಜಾಸ್ಮಿನ್.

ದಿ ಗ್ರೀನ್ ಸ್ನಾಕ್ ಕಂಪನಿಯ ಕೇಲ್ ಉತ್ಪನ್ನದ ಮೂರು ಮಾದರಿಯ ಚಿಪ್ಸ್​​​ಗಳ ಮೂಲಕ ಮಾರುಕಟ್ಟೆ ಪ್ರವೇಶಿಸಿತು. ಮುಂಬೈನ ವಿವಿಧ ಶಾಪ್‍ಗಳಲ್ಲಿ ಮಾರಾಟ ಶುರುವಾಯಿತು. ಇದಕ್ಕಿರುವ ಡಿಮ್ಯಾಂಡ್ ಕಂಡ ಚಿಲ್ಲರೆ ವ್ಯಾಪಾರಿಗಳು, ಆಹಾರದ ಮಳಿಗೆಗಳು, ಆಹಾರದ ವೆಬ್‍ಸೈಟ್‍ಗಳು, ಆಹಾರ ವಿಮರ್ಶಕರು ಬ್ಲಾಗರ್‍ಗಳು ಕೂಡಾ ಇತ್ತ ಗಮನ ಹರಿಸಿದರು.” ಎಂದು ಜಾಸ್ಮಿನ್ ವಿವರಿಸುತ್ತಾರೆ. “ನಾವು ಆರಂಭಿಸಿದ ಎರಡೇ ತಿಂಗಳುಗಳಲ್ಲಿ ದೊಡ್ಡ ಸಂಭ್ರಮವೊಂದು ಎದುರಾಗಿತ್ತು. ಅದೇನೆಂದರೆ, ವಿಶೇಷ ಆಹಾರಗಳ ಮೆಕ್ಕಾ ಎಂದೇ ಖ್ಯಾತಿ ಪಡೆದಿರುವ ಫುಡ್‍ಹಾಲ್ ನಿಂದ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ಕರೆ ಬಂತು. ನಮ್ಮ ಇಡೀ ವ್ಯವಹಾರಕ್ಕೆ ತಿರುವು ಸಿಕ್ಕಿತು.” ಎನ್ನುತ್ತಾರೆ ಜಾಸ್ಮಿನ್.

image


ಪ್ರಕ್ರಿಯೆ..

ದಿ ಗ್ರೀನ್ ಸ್ನಾಕ್ ಕೊ ಮತ್ತು ಕೇಲ್ ಚಿಪ್ಸ್ ಮೂಲಕ ಸಂಸ್ಥೆ ತಳಮಟ್ಟದಿಂದ ವ್ಯವಹಾರ ಆರಂಭಿಸಿತು. ಆರೋಗ್ಯ, ಆಹಾರ, ಪೌಷ್ಟಿಕಾಂಶಕ್ಕೆ ಸಂಬಂಧಿಸಿ ಇರುವ ಜ್ಞಾನವನ್ನೆಲ್ಲಾ ಪ್ರಯೋಗಿಸಬೇಕಾಯಿತು. ಗ್ರೀನ್ ಸ್ನಾಕ್ ಆರಂಭದ ಹಿಂದೆ ಪೌಷ್ಟಿಕ, ಆರೋಗ್ಯಕಾರಿ ಮತ್ತು ಸ್ವಾದಿಷ್ಟ ಸ್ನಾಕ್ಸ್​​ಗಳನ್ನು ಜನರಿಗೆ ನಿಜವಾಗಿಯೂ ಉಪಕಾರಿಯಗುವಂತೆ ತಲುಪಿಸಬೇಕು ಎನ್ನುವ ಸಿದ್ಧಾಂತವಿದೆ ಎನ್ನುತ್ತಾರೆ ಜಾಸ್ಮಿನ್. ಖಾದ್ಯಗಳನ್ನೆಲ್ಲಾ ತಾಜಾ ಹಾಗೂ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಮಾಡಲಾಗುತ್ತಿದೆ. ಯಾವುದೇ ಆ್ಯಡೆಡ್ ಶುಗರ್, ಸಂರಕ್ಷಕಗಳು, ಎಂಎಸ್‍ಜಿಗಳನ್ನು ಬಳಸುತ್ತಿಲ್ಲ.

ಚಿಪ್ಸ್​​ಗಳನ್ನು ತಯಾರಿಸಲು ಅಮೆರಿಕಾದಿಂದ ಯಂತ್ರವನ್ನು ತರಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಚಿಪ್ಸ್​​ಗಳನ್ನು ತಯಾರಿಸಲಾಗುತ್ತಿದೆ. ಆರಂಭದಲ್ಲಿ ಜಾಸ್ಮಿನ್ ಒಬ್ಬರೇ ಉದ್ಯಮ ಆರಂಭಿಸಿದರೂ, ಈಗ ಐದು ಮಂದಿ ದುಡಿಯುತ್ತಿದ್ದಾರೆ. “ನನ್ನ ಪತಿ ನನ್ನ ನವ್ಯೋದ್ಯಮ ಪ್ರಯಾಣಕ್ಕೆ ಬಂಡೆಯಂತೆ ಬೆನ್ನೆಲುಬಾಗಿ ನಿಂತಿದ್ದಾರೆ,” ಎನ್ನುತ್ತಾರೆ ಜಾಸ್ಮಿನ್. ತಂಡದ ಬಹುತೇಕ ಸದಸ್ಯರು ನವ್ಯೋದ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅವರೆಲ್ಲರೂ ಬ್ರ್ಯಾಂಡ್ ಸೃಷ್ಟಿಸುವುದಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಭಾರತದಲ್ಲಿ ಇನ್ನೂ ಉದ್ದಗಲಕ್ಕೆ ತಲುಪದ ಆರೋಗ್ಯಕಾರಿ ಸ್ನಾಕ್ಸ್ ವಲಯದ ನೇತಾರನಾಗಲು ಶ್ರಮಿಸುತ್ತಿದ್ದಾರೆ.

ಸವಾಲುಗಳು

ಸವಾಲುಗಳಿಲ್ಲದೆ ಯಾವುದೇ ನವ್ಯೋದ್ಯಮ ಹುಟ್ಟುಹಾಕಲು ಸಾಧ್ಯವಿಲ್ಲ. ಜಾಸ್ಮಿನ್ ಪ್ರಕಾರ, ದೊಡ್ಡ ಸವಾಲೆಂದರೆ ಸರಿಯಾದ ಜನರನ್ನು ಜೊತೆಗಾರರನ್ನಾಗಿ ಆರಿಸಿಕೊಳ್ಳುವುದು. ಜೊತೆಗಾರರಿಗೂ ಒಂದೇ ದೃಷ್ಟಿಕೋನ, ಮತ್ತು ಉದ್ಯಮದೆಡೆಗೆ ಸಮಾನ ತುಡಿತವಿರಬೇಕು. ನವ್ಯೋದ್ಯಮದಲ್ಲಿ ದುಡಿಯಲು ಇಚ್ಚೆ ಇರಬೇಕು.

“ಮತ್ತೊಂದು ದೊಡ್ಡ ಸವಾಲೆಂದರೆ, ಗ್ರಾಹಕರನ್ನು ಶಿಕ್ಷಿತರನ್ನಾಗಿಸುವುದು. ಸಧ್ಯ ಅವರು ಯಾವುದನ್ನು ಆರೋಗ್ಯಕಾರಿ ಎಂದು ನಂಬಿಕೊಂಡಿದ್ದಾರೋ ಅದನ್ನು ಪ್ರಶ್ನಿಸುವಂತೆ ಮಾಡಬೇಕು. ನಮ್ಮ ಅನುಭವದ ಪ್ರಕಾರ, ಬಹುತೇಕ ಜನರಿಗೆ ಆರೋಗ್ಯಕಾರಿ ಉತ್ಪನ್ನಗಳ ಬಗ್ಗೆ ತಪ್ಪು ಮಾಹಿತಿ ಇದೆ. ಅವರು ಕಂಡದ್ದೆಲ್ಲವನ್ನೂ ಆರೋಗ್ಯಕಾರಿ ಎಂದು ಕೊಳ್ಳುತ್ತಾರೆ. ಯಾರೇ ಹೇಳಿದರೂ ನಂಬುತ್ತಾರೆ. ಕಂಡದ್ದೆಲ್ಲವನ್ನೂ ಸೇವಿಸಿ, ದೀರ್ಘಕಾಲದಲ್ಲಿ ನಾನಾ ರೋಗಗಳಿಗೆ ಗುರಿಯಾಗುತ್ತಾರೆ ಎನ್ನುತ್ತಾರೆ ಜಾಸ್ಮಿನ್.

ಮಾರುಕಟ್ಟೆ :

ಕೆಲ ತಿಂಗಳುಗಳ ಹಿಂದೆ ಗ್ರೀನ್ ಸ್ನಾಕ್ ಕಂಪನಿಯು ಕೇಲ್ ಚಿಪ್ಸ್​​ಗಳನ್ನು ಬಿಡುಗಡೆ ಮಾಡಿತು. ಸಧ್ಯಕ್ಕೆ ಮುಂಬೈ, ದೆಹಲಿ, ಪುಣೆ ಸೇರಿದಂತೆ 40ಕ್ಕೂ ಹೆಚ್ಚು ಚಿಲ್ಲರೆ ಮತ್ತು ವಿಶೇಷ ಆಹಾರಗಳ ಮಳಿಗೆಗಳಲ್ಲಿ ಲಭ್ಯವಿದೆ. ಇದರ ಹೊರತಾಗಿ ಸುಮಾರು 10ಕ್ಕೂ ಹೆಚ್ಚು ವಿಶೇಷ ಆಹಾರಗಳ ವೆಬ್‍ಸೈಟ್‍ಗಳಲ್ಲೂ ಈ ಉತ್ಪನ್ನಗಳು ಮಾರಾಟ ಮಾಡಲ್ಪಡುತ್ತಿವೆ. ಕೆಫೆ ಮತ್ತು ರೆಸ್ಟೋರಂಟ್‍ಗಳ ಜೊತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಕಳೆದ ಮೂರು ತಿಂಗಳಲ್ಲಿ ಮೂರು ಪಟ್ಟು ಮಾರಾಟ ಹೆಚ್ಚಾಗಿದೆ. ಈ ತಂಡವು ಪ್ರತಿತಿಂಗಳು 15 ಪಿಒಎಸ್‍ಗಳನ್ನು ಸೇರಿಸುತ್ತಿದೆ.

ಈಗಿನ ಗ್ರಾಹಕರು ತಮ್ಮ ಫಿಟ್‍ನೆಸ್ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಯೋಗ ಬಾರ್ಸ್ ಮತ್ತು ವೆಲೆನ್ಷಿಯಾ ಡ್ರಿಂಕ್ಸ್ ಸೇರಿದಂತೆ ಮಾರುಕಟ್ಟೆಯಲ್ಲಿ ಹಲವು ಆರೋಗ್ಯ ಸ್ನಾಕ್ಸ್ ಮತ್ತು ಪಾನಿಯಗಳು ಲಭ್ಯವಿವೆ. ಹೆಲ್ತ್ ಫುಡ್ ಕ್ಷೇತ್ರವು ಸುಮಾರು 22,500 ಕೋಟಿ ರೂಪಾಯಿ ಮಾರುಕಟ್ಟೆ ಹೊಂದಿದೆ ಎನ್ನುತ್ತದೆ ಬ್ಯುಸಿನೆಸ್ ಸ್ಟಾಂಡರ್ಡ್ ವರದಿ. “ಅರೋಗ್ಯ ಮತ್ತು ಜೀವನಶೈಲಿ ವಿಧಾನದಲ್ಲಿ ಚಿಕಿತ್ಸೆಗೆ ಬದಲಾಗಿ ಮುಂಜಾಗರೂಕತೆ ವಿಚಾರದಲ್ಲಿ ಜನರು ಹೆಚ್ಚಿನ ಒಲವು ತೋರುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ, ಪೌಷ್ಟಿಕಾಂಶವುಳ್ಳ, ಹೆಚ್ಚುವರಿ ಗುಣಗಳುಳ್ಳ ಆಹಾರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳು ಬೇಡಿಕೆಯ ಜಾಗ ಸೃಷ್ಟಿಸಿಕೊಳ್ಳಲಿವೆ” ಎನ್ನುತ್ತಾರೆ ಜಾಸ್ಮಿನ್. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಲ್ತಿ ಸ್ನಾಕ್‍ಗಳ ಮಾರುಕಟ್ಟೆಯು ಹೆಚ್ಚು ಬೆಳವಣಿಗೆ ಸಾಧಿಸಿದೆ ಮತ್ತು ಹಲವು ಬ್ರಾಂಡ್ ಹಾಗೂ ಆಯ್ಕೆಗಳನ್ನು ಹೊಂದಿದೆ.

ದಿ ಗ್ರೀನ್ ಕೋ, ಭಾರತದಲ್ಲಿ ಹೆಲ್ತಿ ಸ್ನಾಕಿಂಗ್‍ಅನ್ನು ಮುನ್ನಲೆಗೆ ತರಲು ಬಯಸಿದೆ. ಈ ತಂಡವು ವೈವಿಧ್ಯಮಯ ಟೇಸ್ಟಿ ಮತ್ತು ಹೆಲ್ತಿ ಸ್ನಾಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಉದ್ದೇಶಿಸಿದೆ. ತನ್ನ ಮಾರಾಟ ಜಾಲ ವಿಸ್ತರಿಸಲು ಉದ್ದೇಶಿಸಿರುವ ಸಂಸ್ಥೆ ದೇಶದ ಎಲ್ಲಾ ಮೆಟ್ರೋ ಮತ್ತು ಮಿನಿ ಮೆಟ್ರೋ ನಗರಗಳಲ್ಲಿ ಪ್ರಮುಖ ಚಿಲ್ಲರೆ ಮಾರಾಟಗಾರರ ಮೂಲಕ ಜನರನ್ನು ತಲುಪಲು ತಂತ್ರ ರೂಪಿಸುತ್ತಿದೆ.

“ಬಲಿಷ್ಟವಾದ ತಂಡವನ್ನು ಕಟ್ಟುವುದನ್ನು ಮುಂದುವರಿಸಲಿದ್ದೇವೆ. ನಮಗೆ ಬ್ರ್ಯಾಂಡ್ ಬೆಳೆಸುವ ಮತ್ತು ಇತರ ಮಾರುಕಟ್ಟೆಗಳನ್ನು ತಲುಪಲು ಸಹಕರಿಸುವ ಬ್ಯಾಕ್ ಎಂಡ್ ಸಪೋರ್ಟ್ ತಂಡ ಬೇಕಾಗಿದೆ. ಮತ್ತಷ್ಟು ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಗೊಳಿಸುವ ಸಂಸ್ಥೆಯ ತಂತ್ರವನ್ನು ಪರಿಣಾಮಕಾರಿಯಾಗಿ ಜಾರಿಮಾಡಬೇಕಾಗಿದೆ. ಜನರಿಗೆ ಆರೋಗ್ಯಕಾರಿ ಮತ್ತು ಸುರಕ್ಷಿತ ಆಹಾರ ಕೊಡುವುದು ನಮ್ಮ ಉದ್ದೇಶ” ಎನ್ನುತ್ತಾರೆ ಜಾಸ್ಮಿನ್.