ಬರಡು ನೆಲದಲ್ಲಿ ಹಸಿರ ಸಿರಿ...ಒಂಟಿಯಾಗಿ 1360 ಎಕರೆ ಕಾಡು ಬೆಳೆಸಿದ ಧೀರ

ಟೀಮ್​​ ವೈ.ಎಸ್​​.

ಬರಡು ನೆಲದಲ್ಲಿ ಹಸಿರ ಸಿರಿ...ಒಂಟಿಯಾಗಿ 1360 ಎಕರೆ ಕಾಡು ಬೆಳೆಸಿದ ಧೀರ

Wednesday November 04, 2015,

3 min Read

ಕಾಡು ಬೆಳೆಸಿ ನಾಡು ಉಳಿಸಿ ಅನ್ನೋ ಮಾತೇ ಇದೆ. ಆದ್ರೆ ಅತ್ಯಮೂಲ್ಯ ಅರಣ್ಯ ಸಂಪತ್ತಿಗೆ ಈಗ ರಕ್ಷಣೆಯಿಲ್ಲ. ಮಾನವನ ಸ್ವಾರ್ಥಕ್ಕೆ ಅರಣ್ಯ ನಶಿಸಿ ಹೋಗ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಮರಗಳ ಮಾರಣ ಹೋಮವೇ ನಡೆಯುತ್ತಿದೆ. ಆದ್ರೆ ಇಡೀ ವಿಶ್ವಕ್ಕೇ ಮಾದರಿಯಾಗಬಲ್ಲಂಥ ವನ್ಯಜೀವಿ ಪ್ರೇಮಿಯೊಬ್ಬರು ಅಸ್ಸಾಂನಲ್ಲಿದ್ದಾರೆ. ವನಸಿರಿಯ ರಕ್ಷಣೆಗೆ ತಮ್ಮ ಬದುಕನ್ನೇ ಸವೆಸಿದ್ದಾರೆ. ಅವರೇ ಜಾದವ್ ಮೊಲಾಯ್ ಪಯೇಂಗ್. ಇವರು ಆಸ್ಸಾಂನ ಜೋರ್ಹತ್ ಜಿಲ್ಲೆಯ ಮಿಶಿಂಗ್ ಬುಡಕಟ್ಟು ಜನಾಂಗಕ್ಕೆ ಸೇರಿದವರು. 1979ರ ಸಮಯ. ಆಸ್ಸಾಂನ ಸಂದ್ಬರ್‍ನಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಹಾವುಗಳು, ವನ್ಯಜೀವಿಗಳೆಲ್ಲ ನೆರೆಯಲ್ಲಿ ಕೊಚ್ಚಿ ಹೋಗಿದ್ವು. ಆ ದೃಶ್ಯಗಳನ್ನು ನೋಡಿದ ಜಾದವ್ ಅವರು ತಲ್ಲಣಿಸಿ ಹೋಗಿದ್ರು. ಮೂಕ ಪ್ರಾಣಿಗಳ ಮರಣ ಅತೀವ ದುಖಃವನ್ನುಂಟು ಮಾಡಿತ್ತು. ಆ ಬರಡು ನೆಲವನ್ನು ಹಸನಾಗಿಸಲು ಜಾದವ್ ಪಣತೊಟ್ರು. ಅಲ್ಲಿ ದಟ್ಟ ಅರಣ್ಯ ಬೆಳೆಸಲು ನಿರ್ಧರಿಸಿದ್ರು.

image


ತಮ್ಮ ಯೋಜನೆಯನ್ನು ವಿವರಿಸಿದ್ರೂ ಜಾದವ್ ಅವರಿಗೆ ಅರಣ್ಯ ಇಲಾಖೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಕಾಡು ಬೆಳೆಸುವ ಜಾದವ್ ಯತ್ನಕ್ಕೆ ಸಾಥ್ ಕೊಡಲು ಅರಣ್ಯ ಇಲಾಖೆ ನಿರಾಕರಿಸಿತ್ತು. ಇದರಿಂದ ಅನ್ಯ ದಾರಿ ಕಾಣದೇ ಜಾದವ್ ತಮ್ಮ ಓದನ್ನು ಅರ್ಧಕ್ಕೇ ನಿಲ್ಲಿಸಿದ್ರು. ಮನೆಯನ್ನೂ ತೊರೆದ ಅವರು ಪ್ರತ್ಯೇಕವಾಗಿ ಬದುಕಲು ಶುರು ಮಾಡಿದ್ರು. ಬರಡು ನೆಲದಲ್ಲೇ ಸಸಿಗಳನ್ನು ನೆಟ್ಟ ಜಾದವ್ ಬೆಳಿಗ್ಗೆ ಮತ್ತು ಸಂಜೆ ಅವುಗಳಿಗೆ ನೀರುಣಿಸುತ್ತಿದ್ರು. ಕೆಂಪು ಇರುವೆಗಳನ್ನು ತಮ್ಮ ಊರಿನಿಂದ ತಂದು ಸಂದ್ಬರ್‍ನಲ್ಲಿ ಬಿಟ್ರು. ಪ್ರಕೃತಿ ಕೂಡ ಜಾದವ್ ಅವರ ನಿರಂತರ ಪ್ರಯತ್ನಕ್ಕೆ ಸ್ಪಂದಿಸಿತ್ತು. ಸಂದ್ಬರ್‍ನಲ್ಲಿ ಸಮೃದ್ಧವಾಗಿ ಮರಗಳು ಬೆಳೆದು ನಿಂತವು. ಜೊತೆಗೆ ಪ್ರಾಣಿ ಸಮೂಹವೂ ಬೀಡುಬಿಟ್ಟಿತ್ತು. ಘೇಂಡಾಮೃಗ ಮತ್ತು ಬಂಗಾಳದ ಹುಲಿ ಸೇರಿಂದತೆ ಹತ್ತಾರು ಬಗೆಯ ಪ್ರಾಣಿಗಳು ಸಂದ್ಬರ್‍ನಲ್ಲಿ ನೆಲೆಸಿದ್ವು. ನೂರಕ್ಕೂ ಹೆಚ್ಚು ಜಿಂಕೆಗಳು, ಮೊಲಗಳು ಈ ಕಾಡಿನಲ್ಲಿ ಸುತ್ತಾಡಿಕೊಂಡಿವೆ. ನೂರಾರು ಪಕ್ಷಿಗಳಿಗೆ ಈ ಅರಣ್ಯ ಆವಾಸಸ್ಥಾನವಾಗಿದೆ. ಸುಮಾರು ಒಂದು ಸಾವಿರ ಜಾತಿಯ ಮರಗಳನ್ನು ಜಾದವ್ ಬೆಳೆಸಿದ್ದಾರೆ. ಕಾಡು ನಾಶವಾಗದಂತೆ ಬಿದಿರಿನ ಬೇಲಿಯನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಕಾಡಿಗೆ ಪ್ರತಿವರ್ಷ ನೂರಕ್ಕೂ ಹೆಚ್ಚು ಆನೆಗಳು ಭೇಟಿ ನೀಡುತ್ತವೆ. ಇಲ್ಲೇ 6 ತಿಂಗಳು ನೆಲೆಸುವ ಗಜಪಡೆ ಸಂತಾನೋತ್ಪತ್ತಿ ಕ್ರಿಯೆಯನ್ನೂ ನಡೆಸುತ್ತೆ.

ಒಮ್ಮೆ ಆನೆಗಳ ಹಿಂಡು ಪಕ್ಕದ ಹಳ್ಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸಿತ್ತು. ಆನೆಗಳನ್ನು ಕಾಡಿಗಟ್ಟಲು ಬಂದ ಅರಣ್ಯ ಇಲಾಖೆಗೆ ಅಚ್ಚರಿಯೋ ಅಚ್ಚರಿ. ಈ ಬರಡು ಜಾಗದಲ್ಲಿ ಹಸಿರು ನಳನಳಿಸುತ್ತಿದ್ದುದನ್ನು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳು ಆಶ್ಚರ್ಯಪಟ್ರು. ಆಗ್ಲೇ ಜಾದವ್ ಸುಮಾರು 2 ದಶಕಗಳ ಈ ಪ್ರಯತ್ನ ಕೊನೆಗೂ ಫಲಕೊಟ್ಟಿತ್ತು. 2008ರಲ್ಲಿ ಅಸ್ಸಾಂ ರಾಜ್ಯದ ಅರಣ್ಯ ಇಲಾಖೆಗೆ ಜಾದವ್ ಅವರ ಸಾಹಸದ ಅರಿವಾಯ್ತು. ಜಾದವ್ ಎಂಥ ಚಮತ್ಕಾರ ಮಾಡಿದ್ದಾರೆ ಅನ್ನೋದನ್ನು ಇಲಾಖೆ ತಿಳಿದುಕೊಂಡಿತ್ತು. ಅದಾದ್ಮೇಲೆ ಜಾದವ್ ಒಂಟಿಯಾಗಿ 1360 ಎಕರೆ ಅರಣ್ಯವನ್ನು ಬೆಳೆಸಿದ್ದಾರೆ.

ಸ್ಕೂಲ್ ಆಫ್ ಎನ್ವಿರಾನ್‍ಮೆಂಟಲ್ ಸೈನ್ಸ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜಾದವ್ ಅವರನ್ನು ಸನ್ಮಾನಿಸಿದೆ. 2012ರ ಎಪ್ರಿಲ್ 22ರಂದು ಜವಾಹರ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪರವಾಗಿ ಅವರನ್ನು ಗೌರವಿಸಲಾಗಿದೆ. ಜಾದವ್ ಅವರ ಅಭೂತಪೂರ್ವ ಸಾಧನೆಗೆ ನೀಡಿದ ಗೌರವ ಇದು. ಕಾಡು ಬೆಳೆಸಲು ತಾವು ಪಟ್ಟ ಪರಿಶ್ರಮ, ಅರಣ್ಯದ ಅಗತ್ಯತೆ ಹಾಗೂ ಅದನ್ನು ಕಾಪಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಬಗ್ಗೆ ಜಾದವ್ ಮಾತನಾಡ್ತಾರೆ. ಜೊತೆಗೆ ತಾವು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಾರೆ. ಜಾದವ್ ಅವರ ಪರಿಸರ ಕಾಳಜಿಯನ್ನು ಕೇಂದ್ರ ಸರ್ಕಾರ ಕೂಡ ಗುರುತಿಸಿದೆ. ಅವರಿಗೆ ಈ ವರ್ಷ ಭಾರತದ ನಾಲ್ಕನೇ ಅತ್ಯುನ್ನದ ಪದವಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಶೇಷ ಅಂದ್ರೆ ಜಾದವ್ ಈಗಲೂ ಅವರು ಬೆಳೆಸಿದ ಕಾಡಿನಲ್ಲೇ ವಾಸಿಸ್ತಿದ್ದಾರೆ. ಮೂವರು ಮಕ್ಕಳು ಹಾಗೂ ಹೆಂಡತಿ ಜೊತೆ ಕಾಡಲೇ ಗುಡಿಸಲು ಕಟ್ಕೊಂಡು ಬದುಕುತ್ತಿದ್ದಾರೆ. ಹಸು ಹಾಗೂ ಎಮ್ಮೆಗಳನ್ನು ಸಾಕ್ತಾ ಇರೋ ಅವರಿಗೆ ಹೈನುಗಾರಿಕೆಯೇ ಜೀವನಾಧಾರ. ಹಾಲು ಮಾರಿ ಅವರು ಬದುಕು ಸಾಗಿಸುತ್ತಿದ್ದಾರೆ. ಕಾಡಿನಲ್ಲೇ ಇರೋದ್ರಿಂದ ನೂರಕ್ಕೂ ಹೆಚ್ಚು ಹಸುಗಳು ಹುಲಿ-ಚಿರತೆಗಳ ಪಾಲಾಗಿವೆ. ಆದ್ರೆ ಇದಕ್ಕೆ ಕಾರಣ ಅರಣ್ಯ ಒತ್ತುವರಿ ಎನ್ನುತ್ತಾರೆ ಜಾದವ್.

ಜಾದವ್ ಅವರೇ ಬೆಳೆಸಿದ ಈ ಅರಣ್ಯಕ್ಕೆ ಮೊಲಾಯ್ ಕಾಡು ಎಂದೇ ಹೆಸರಿಡಲಾಗಿದೆ. ಜಾದವ್ ಅವರ ಸಾಹಸದ ಬಗ್ಗೆ ಹತ್ತಾರು ಸಾಕ್ಷ್ಯಚಿತ್ರಗಳನ್ನು ಮಾಡಲಾಗಿದೆ. ವಿಲಿಯಮ್ ಡೌಗಲ್ಸ್ ಅವರ ಫಾರೆಸ್ಟ್ ಮ್ಯಾನ್ ಸಾಕ್ಷ್ಯಚಿತ್ರ ಕೇನ್ಸ್ ಫೆಸ್ಟಿವಲ್‍ನಲ್ಲೂ ಪ್ರದರ್ಶನಗೊಂಡಿರುವುದು ವಿಶೇಷ.