ನೀವು ಪ್ರಯತ್ನಿಸುವವರೆಗೆ ನಿಮ್ಮ ಶಕ್ತಿಯ ಅರಿವಾಗದು – ಉದ್ಯಮಿ ಶ್ವೇತಾ ಸೋನಿ

ಟೀಮ್​​ ವೈ.ಎಸ್​​.

ನೀವು ಪ್ರಯತ್ನಿಸುವವರೆಗೆ ನಿಮ್ಮ ಶಕ್ತಿಯ ಅರಿವಾಗದು – ಉದ್ಯಮಿ ಶ್ವೇತಾ ಸೋನಿ

Tuesday October 13, 2015,

4 min Read

ನಾವು ಬಯಸದೇ ಇದ್ದಾಗಲೆಲ್ಲಾ ಜೀವನವು ನಮಗೆ ಸವಾಲುಗಳನ್ನು ಎಸೆಯುತ್ತಲೇ ಇರುತ್ತದೆ. ಶ್ವೇತಾ ಸೋನಿಯವರ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ಅವರ ಗಂಡನಿಗೆ ಹೃದಯಾಘಾತವಾಗುವವರೆಗೆ ಮನೆಯೊಡತಿಯಾಗಿ ಯಾವುದೇ ಸಮಸ್ಯೆಗಳಿಲ್ಲದೆ ಹಾಯಾಗಿದ್ದರು ಶ್ವೇತಾ ಸೋನಿ. ಗಂಡನ ಹೃದಯಾಘಾತ ಆಕೆಯ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು, ಆಕೆ ಉದ್ಯಮಿಯಾದರು.

image


2013ರಲ್ಲಿ ಶ್ವೇತಾ ಅವರು ಅಂಬರ್ ಜೈಪುರ್ ಸಂಸ್ಥೆಯನ್ನು ಸ್ಥಾಪಿಸಿದರು. ಮಕ್ಕಳ ಉಡುಪುಗಳ ಕ್ಷೇತ್ರದಲ್ಲಿರುವ ಖಾಲಿ ಜಾಗವನ್ನು ತುಂಬಲು ಅವರು ಚಿಂತನೆ ನಡೆಸಿದ್ದರು. ಭಾರತೀಯ ಕೌಶಲ್ಯದಲ್ಲಿ ಪಾಶ್ಚಾತ್ಯ ಉಡುಪುಗಳನ್ನು ಅವರು ತಯಾರಿಸಲಾರಂಭಿಸಿದರು. ಭಾರತೀಯ ಶೈಲಿಯಲ್ಲಿ ಅವರು ಹುಡುಗಿಯರಿಗೆ ಲೆಹೆಂಗಾ ಚೋಲಿ ಹುಡುಗರಿಗೆ, ಕುರ್ತಾ ಪೈಜಾಮ, ನೆಹರು ಜಾಕೆಟ್​​ಗಳನ್ನು ಹೊಲಿಯಲಾರಂಭಿಸಿದರು. ಆರಂಭದಲ್ಲಿ ತನ್ನ ಜೈಪುರದ ಗೆಳತಿಯಿಂದ ಹೊಲಿಗೆ ಯಂತ್ರವನ್ನು ಪಡೆದರು, ಒಬ್ಬ ಟೈಲರ್ ಜೊತೆ ಕೆಲಸ ಆರಂಭಿಸಿದರು.

ಕೇವಲ ಒಂದೂವರೆ ವರ್ಷದಲ್ಲಿ ನಾನು ಈಗ 8 ಉದ್ಯೋಗಿಗಳನ್ನು, 8 ಹೊಲಿಗೆ ಯಂತ್ರಗಳನ್ನು ಹೊಂದಿದ್ದೇನೆ. ಮುಂದಿನ 2 ವರ್ಷಗಳಲ್ಲಿ ಈ ಸಂಖ್ಯೆಯನ್ನು 50ಕ್ಕೆ ಏರಿಸುವುದು ನನ್ನ ಗುರಿ. ಆರಂಭದಲ್ಲಿ ನಾನು ಫೇಸ್​​ಬುಕ್​​​ನಲ್ಲಿ ಪುಟವೊಂದನ್ನು ತೆರೆಯುವ ಮೂಲಕ ಆರಂಭಿಸಿದೆ. ಫೇಸ್​ಬುಕ್​​ನಲ್ಲಿ ನನ್ನ ಪುಟದಲ್ಲಿರುವ ಜನರ ಗುಂಪಿನಿಂದಲೇ ನನಗೆ ಮೊದಮೊದಲು ಆರ್ಡರ್​​ಗಳು ಬಂದ್ವು. ಫೇಸ್​​ಬುಕ್​​ನಲ್ಲಿ ನನ್ನ ಕಲೆಕ್ಷನ್ ನೋಡಿದ ಆಸ್ಟ್ರೇಲಿಯಾದ ಕಂಪನಿಯೊಂದು ನನಗೆ ದೊಡ್ಡ ಆರ್ಡರ್ ಕೊಟ್ಟಿತು. ಅದು ನನ್ನ ಜೀವನದ ಮೊದಲ ಅಂತಾರಾಷ್ಟ್ರೀಯ ಆರ್ಡರ್ ಆಗಿತ್ತು, ಎಂದು ವಿವರಿಸುತ್ತಾರೆ ಶ್ವೇತಾ ಸೋನಿ.

ಸ್ವತಂತ್ರವಾಗಿರಲು ಶ್ವೇತಾಗೆ ಅಡ್ಡಿಯಾಗಿದ್ದದ್ದು, ಗುರಿಯ ಕೊರತೆಯಲ್ಲ. ಅವರು ಬೆಳೆದಿದ್ದೆಲ್ಲಾ ಉತ್ತರಪ್ರದೇಶದ ಚಿಕ್ಕ ಪಟ್ಟಣ ಷಹಜಾನ್ಪುರದಲ್ಲಿ. ಉತ್ತಮ ವಿದ್ಯಾರ್ಥಿಯಾಗಿದ್ದ ಶ್ವೇತಾ, ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿದ್ದರು. ಆದರೆ 90ರ ದಶಕದಲ್ಲಿ ಕ್ರಿಯೇಟಿವಿಟಿ ಎನ್ನುವುದು ಹವ್ಯಾಸಕ್ಕಷ್ಟೇ ಸೀಮಿತವಾಗಿತ್ತು. ಶಿಕ್ಷಣದ ಮೇಲೆ ಹೆಚ್ಚಿನ ಗಮನಹರಿಸಿ, ಡಾಕ್ಟರ್, ಇಂಜಿನಿಯರ್ ಅಥವಾ ಐಎಎಸ್ ಅಧಿಕಾರಿಯಾಗುವುದೇ ಆಗ ಮುಖ್ಯ ಕೆಲಸವಾಗಿತ್ತು. ಆದರೆ, ಶ್ವೇತ ವಿಜಾನ ವಿಭಾಗದಲ್ಲಿ 12ನೇ ತರಗತಿಗೇ ಓದು ನಿಲ್ಲಿಸಿದರು. ಅವರ ಅಂಕಗಳು ಕಡಿಮೆಯಾದವು, ಈ ಹಂತದಲ್ಲಿ ಅವರಿಗಿದ್ದ ಕ್ರಿಯೇಟಿವಿಟಿಯನ್ನು ಸಂಪೂರ್ಣವಾಗಿ ಬದಿಗೆ ಸರಿಸಬೇಕಾಯಿತು. ತುಂಬಾ ಕಳಪೆ ನಿರ್ವಹಣೆ ತೋಲರು ಆರಂಭಿಸಿದರು. ಯಾವುದರಲ್ಲೂ ಆಸಕ್ತಿ ತೋರದೆ, ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಟ್ಟಿದ್ದರು.

ಇದ್ಯಾಕೋ ಸರಿ ಹೋಗುತ್ತಿಲ್ಲ. ಬದಲಾಯಿಸಬೇಕು ಎಂದುಕೊಂಡ ಶ್ವೇತಾ, ಬಳಿಕ ಜೈಪುರದಲ್ಲಿ ಲಲಿತಕಲಾ ಶಿಕ್ಷಣಕ್ಕೆ ಸೇರಿಕೊಂಡು, ಅಲ್ಲಿ ಅಜ್ಜಿಯ ಜೊತೆಗೆ ವಾಸಿಸತೊಡಗಿದರು.

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆಯನ್ನು ಅದೆಲ್ಲೋ ಕೈಬಿಟ್ಟಿದ್ದರು. ಅಷ್ಟರಲ್ಲಿ ಬಹುತೇಕ ಭಾರತೀಯ ಹುಡುಗಿಯರಂತೆ, ಶ್ವೇತಾಗೂ ಮದುವೆಯಾಯಿತು. ಪ್ರತಿಭೆ ಮತ್ತು ಕ್ರಿಯೇಟಿವಿಟಿ ಸಂಪೂರ್ಣವಾಗಿ ಮರೆತು ಹೋಯ್ತು.

ಮದುವೆಯಾದ ಬಳಿಕ ಹೆಚ್ಚಿನ ಅವಕಾಶಗಳಿಲ್ಲದ ಸಣ್ಣ ಪಟ್ಟಣವೊಂದರಲ್ಲಿ ಶ್ವೇತಾ ನೆಲೆಸಿದರು. ಸಣ್ಣ ವಯಸ್ಸಿಗೆ ಮದುವೆಯಾಗಿ, ಇಂಟರ್ನೆಟ್ ಉದ್ಯಮಶೀಲತೆಯ ಸಂಪರ್ಕವಿಲ್ಲದ ಕಾಲದಲ್ಲಿ ಬದುಕಿದರು. ನಾನು ಅಲ್ಲಿ ಕೇಳಲ್ಪಟ್ಟ ದೊಡ್ಡ ಉದ್ಯಮವೆಂದರೆ ಕೆಲವು ಅಂಕಲ್ ಆಂಟಿಗಳು ಚಿಕ್ಕದಾದ ಬೊಟಿಕ್​​ಗಳನ್ನು ನಡೆಸುತ್ತಿದ್ದರು. ಅದೇ ಅವರಿಗೆ ದೊಡ್ಡ ವಿಷಯವಾಗಿತ್ತು. ಪೋಷಕರು ಮಕ್ಕಳ ಕನಸಿಗಿಂತ ಅವರ ಮದುವೆಯ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದರು. ಅಂತಹ ವಾತಾವರಣದಲ್ಲಿ ಬೆಳೆದ ನಾನು ಮದುವೆಯಾಗುವುದು ಸಂಸಾರ ಸಾಗಿಸುವುದೇ ಮಹಿಳೆಯರ ಮುಖ್ಯ ಜವಬ್ದಾರಿ ಎಂದುಕೊಂಡಿದ್ದೆ. ಅದು ನನ್ನ ಅತಿ ದೊಡ್ಡ ಭ್ರಮೆ ಎಂದುಕೊಳ್ಳುತ್ತೇನೆ.

ಆದರೆ, ವಿಧಿ ಬೇರೆಯದ್ದನ್ನೇ ಬಯಸಿತ್ತು. ಶ್ವೇತಾ ಪತಿಗೆ ಒಂದು ರಾತ್ರಿ ಇದ್ದಕ್ಕಿದ್ದಂತೆ ಹೃದಯಾಘಾತತವಾಗಿತ್ತು. ಕತ್ತಲಿನಲ್ಲಿಯೇ ಗಂಡನನ್ನು ಆಸ್ಪತ್ರೆಗೆ ಸೇರಿಸಿದರು. ಪ್ರಾಣಾಪಾಯದಿಂದ ಪಾರಾದರು. ಶ್ವೇತಾ ಮಾವನಿಗೆ ಕಾರು ಚಲಾಯಿಸುವುದು ಗೊತ್ತಿರಲಿಲ್ಲ. ಶ್ವೇತಾ ಕೂಡಾ ನುರಿತ ಚಾಲಕಿಯಾಗಿರಲಿಲ್ಲ. ಹೀಗಾಗಿ ಆ ಮಧ್ಯರಾತ್ರಿಯಲ್ಲಿ ನೋವಿನಿಂದ ನರಳುತ್ತಿದ್ದ ಪತಿಯನ್ನು ಕಾರಿನಲ್ಲಿ ಕರೆದೊಯ್ಯವುದು ಶ್ವೇತಾಗೆ ತುಂಬಾ ಕಷ್ಟವಾಗಿತ್ತು. ಇದನ್ನೆಲ್ಲಾ ಹೇಳುತ್ತಾ ಕಣ್ಣೀರಾದರು ಶ್ವೇತಾ.

ಆ ಐದಾರು ದಿನಗಳಲ್ಲಿ ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮನೆಗೆ ಓಡಾಟವೇ ಆಗಿ ಹೋಯ್ತು. ಈ ಮಧ್ಯೆ, ನಾನು ತಕ್ಷಣವೇ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಎಲ್ಲದರ ಉಸ್ತುವಾರಿಯನ್ನು ನಾನೇ ನೋಡಿಕೊಳ್ಳಬೇಕಾಯಿತು. ನಾನು ಮಾನಸಿಕವಾಗಿ, ದೈಹಿಕವಾಗಿ ಸೊರಗಿದ್ದರೂ, ನಾನು ನನ್ನ ಮಕ್ಕಳ ಮತ್ತು ಅತ್ತೆ-ಮಾವಂದಿರ ಎದುರು ಅಳಲಿಲ್ಲ.

ಗಂಡನ ಅನಾರೋಗ್ಯದಿಂದಾಗಿ ಅವರಿಗೆ ಬೇರೆ ದಾರಿಯೇ ಇರಲಿಲ್ಲ. ಮನೆಯ ಭಾರವನ್ನು ಹೊತ್ತುಕೊಳ್ಳಲೇ ಬೇಕಾಯಿತು. ಪತಿ ಮನೆಗೆ ಬಂದು ಗುಣಮುಖರಾಗತೊಡಗಿದರೂ, ಶ್ವೇತಾ ಗಂಡನ ಪಾಲನೆ ಮಾಡಬೇಕಾಯಿತು. ಪತಿಯ ಕೆಲಸ, ಮನೆ ಎಲ್ಲವನ್ನೂ ನಿಭಾಯಿಸಬೇಕಾಯಿತು. ನಾನು ತುಂಬಾ ಆತ್ಮವಿಶ್ವಾಸ ಭರಿಸಿಕೊಂಡೆ, ಎನ್ನುತ್ತಾರೆ ಶ್ವೇತಾ.

ನಾನು ಸ್ವತಂತ್ರವಾಗಿ ಇರಬೇಕು ಎಂದು ಜೀವನದಲ್ಲೇ ಮೊದಲ ಬಾರಿಗೆ ಶ್ವೇತಾ ನಿರ್ಧರಿಸಿದರು.

ನಾನು ಉದ್ಯಮ ಆರಂಭಿಸಬೇಕು, ಅದಕ್ಕೆ ನನ್ನನ್ನು ನಾನು ಸಿದ್ಧಪಡಿಸಿಕೊಳ್ಳುವುದೇ ನನಗೆ ದೊಡ್ಡ ಸವಾಲಾಗಿತ್ತು. ಅದರ ಮುಂದೆ ಉಳಿದದ್ದೆಲ್ಲವೂ ಸಣ್ಣಪುಟ್ಟ ಸವಾಲುಗಳಾಗಿದ್ದವು ಎಂದು ವಿವರಿಸುತ್ತಾರೆ ಶ್ವೇತಾ.

ಶ್ವೇತಾ ಜೀವನದಲ್ಲಿ ಯಾವತ್ತೂ ದುಡಿದಿರಲಿಲ್ಲ. ಹಣಕಾಸು ಸಮಸ್ಯೆಯಾಗಿದ್ದರೂ, ಅವರಿಗೆ ಆತ್ಮವಿಶ್ವಾಸದ ಮಟ್ಟವೇ ದೊಡ್ಡ ಸವಾಲಾಗಿತ್ತು. ಅವರ ಸಾಮರ್ಥ್ಯದ ಬಗ್ಗೆ ಅವರಲ್ಲೇ ವಿಶ್ವಾಸವಿರಲಿಲ್ಲ. ಹಾಗೂ ಹೀಗೂ ಅನಿವಾರ್ಯವಾಗಿ ಉದ್ಯಮಕ್ಕೆ ಇಳಿದೇ ಬಿಟ್ಟರು. ಅಕ್ಕಪಕ್ಕದವರು, ಗ್ರಾಹಕರು ಪ್ರಶಂಸಿಸಲಾರಂಭಿಸಿದ ಬಳಿಕವಷ್ಟೇ ಅವರಲ್ಲಿ ವಿಶ್ವಾಸ ಮೂಡತೊಡಗಿದ್ದು. ಈಗ ಅವರು ಮತ್ತು ಅವರ ಉದ್ಯಮ ಎರಡೂ ಬೆಳೆದಿದೆ.

ನಾನು ಮಹಿಳೆಯರಿಗೆ ಹೇಳಬಯಸುವುದೇನೆಂದರೆ, ನೀವು ಕನಿಷ್ಟ ಪಕ್ಷ ಪ್ರಯತ್ನ ಪಡಿ. ನೀವು ಪ್ರಯತ್ನ ಪಡುವವರೆಗೆ ನಿಮ್ಮೊಳಗೆ ಎಷ್ಟು ಶಕ್ತಿ ಇದೆ ಎಂಬುದು ನಿಮಗೆ ತಿಳಿಯುವುದಿಲ್ಲ. ನನ್ನ ಜೀವನದಲ್ಲಿ ಕೆಟ್ಟ ಘಟನೆಗಳು ನಡೆಯದೇ ಹೋಗಿದ್ದಲ್ಲಿ, ನಾನು ನನ್ನ ಪ್ರತಿಭೆ, ನನ್ನ ಉತ್ಸಾಹ, ನನ್ನ ಗುರುತು ಎಲ್ಲವನ್ನೂ ಕಳೆದುಕೊಂಡುಬಿಟ್ಟಿರುತ್ತಿದ್ದೆ. ಜನರು ನಿಮ್ಮನ್ನು ನಿಮ್ಮ ಸ್ವಂತ ಹೆಸರಿನಲ್ಲಿ ಗುರುತಿಸಬೇಕು. ನಿಮ್ಮ ಪತಿ/ ತಂದೆಯ ಹೆಸರಿನಿಂದಲ್ಲ.

image


ನಾವು ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಅದು ದ್ವಿಮುಖ ರಸ್ತೆಯಾಗಬೇಕು. ಮಹಿಳೆಯರಾಗಿ ನಾವು ನಮ್ಮ ಪುರುಷರನ್ನು ಬೆಂಬಲಿಸಬೇಕು. ಅದು ಅಪ್ಪನೇ ಆಗಲಿ, ಗಂಡ ಅಥವಾ ಮಕ್ಕಳೇ ಆಗಲಿ, ಆರ್ಥಿಕವಾಗಿ, ಮಾನಸಿಕವಾಗಿ ನಾವು ಅವರನ್ನು ಬೆಂಬಲಿಸಲೇ ಬೇಕು ಎನ್ನುತ್ತಾರೆ ಶ್ವೇತಾ ಸೋನಿ.

ಶ್ವೇತಾ ಅವರಿಗೆ ತನ್ನ ಪತಿಯೇ ದೊಡ್ಡ ಶಕ್ತಿ. ಉದ್ಯಮ ಹಾಗೂ ಮಕ್ಕಳ ಪೋಷಣೆಯಲ್ಲಿ ನೆರವಾಗುತ್ತಾರೆ ಅವರ ಪತಿ. ಮನೆಯವರು ತಮ್ಮ ವಿನ್ಯಾಸಗಳನ್ನು ಧರಿಸಿದಾಗ ಆಗುವ ಖುಷಿ ಅಷ್ಟಿಷ್ಟಲ್ಲ.

ನೀವು ಬಯಸಿದ್ದನ್ನೇ ಮಾಡುವಾಗ ನಿಮಗೆ ಅದೇ ದೊಡ್ಡ ಸ್ಫೂರ್ತಿಯಾಗುತ್ತದೆ. ಇದು ಅತಿಶಯೋಕ್ತಿಯಲ್ಲ ಎನ್ನುತ್ತಾರೆ ಶ್ವೇತಾ. ಅವರು ಕಚೇರಿಗೆ ಹೋಗಲೇ ಬೇಕಾಗಿಲ್ಲ. ವಿನ್ಯಾಸಗಳಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗಿಲ್ಲ. ಅವಳು ಬಯಸಿದ್ದನ್ನು ಮಾಡಲು ಸಂಪೂರ್ಣ ಸ್ವತಂತ್ರಳು ಎನ್ನುವ ವಿಚಾರಗಳೇ ಶ್ವೇತಾ ಅವರಿಗೆ ದುಪ್ಪಟ್ಟು ಸ್ಫೂರ್ತಿ ತುಂಬುತ್ತವೆ.

ಗ್ರಾಹಕರ ಶ್ಲಾಘನೆಯ ಸಾಕಷ್ಟು ಸ್ಪೂರ್ತಿ ತುಂಬಿದರೂ, ದೊಡ್ಡ ದೊಡ್ಡ ವಿನ್ಯಾಸಕಾರರ ಸಾಲಿನಲ್ಲಿ ನಿಲ್ಲಬೇಕು ಎನ್ನುವುದು ಶ್ವೇತ ಹೆಬ್ಬಯಕೆ. ಅಲ್ಲಿಗೆ ನಾನು ತಲುಪಿಯೇ ಸಿದ್ಧ ಎನ್ನುತ್ತಾರೆ ಶ್ವೇತಾ. ಯಾವಾಗ ಆ ಗುರಿ ತಲುಪುತ್ತೇನೆಯೋ ಗೊತ್ತಿಲ್ಲ. ಆದರೆ, ನಾನು ನನ್ನ ಕೆಲಸ ಆರಂಭಿಸಿದ್ದೇನೆ. ಅಲ್ಲಿಗೆ ತಲುಪುವುದಂತೂ ಖಚಿತ ಎಂದು ಪೂರ್ಣ ವಿಶ್ವಾಸದಲ್ಲಿ ಶ್ವೇತ ಹೇಳುತ್ತಾರೆ.

ಶ್ವೇತಾ ಅವರು ರೆಕ್ಕೆ ಬಿಚ್ಚಿ ಇನ್ನಷ್ಟು ಎತ್ತರಕ್ಕೆ ಹಾರಲು ಇಚ್ಚಿಸಿದರೂ ಅವರ ಕನಸುಗಳು ತುಂಬಾ ಸರಳ. ನಾನು ಪ್ರಖ್ಯಾತ ಡಿಸೈನರ್ ಆಗಲು ಬಯಸುವುದಿಲ್ಲ. ನನ್ನ ವಿನ್ಯಾಸಗಳನ್ನು ಜನ ದುಬಾರಿ ಬೆಲೆಗೆ ಕೊಂಡುಕೊಳ್ಳಬೇಕು ಎಂದು ಇಚ್ಛಿಸುವುದಿಲ್ಲ. ನನ್ನ ವಿನ್ಯಾಸಗಳು ದೇಶದ ಎಲ್ಲಾ ಮಳಿಗೆಗಳಲ್ಲೂ ಉತ್ತಮ ದರಕ್ಕೆ ದೊರೆಯಬೇಕು. ವಿದೇಶಗಳಲ್ಲೂ ದೊರೆಯಬೇಕು ಎನ್ನುವುದೇ ನನ್ನ ಆಸೆ ಎನ್ನುತ್ತಾರೆ ಶ್ವೇತಾ. ವಿದೇಶದಲ್ಲಿ ವಾಸಿಸುವ ಎಲ್ಲಾ ಮಕ್ಕಳೂ ಭಾರತೀಯ ವಿನ್ಯಾಸಗಳನ್ನೇ ಧರಿಸಬೇಕು. ನಮ್ಮ ಬ್ರಾಂಡ್ ಜಾಗತಿಕ ಬ್ರಾಂಡ್ ಆಗಬೇಕು ಎನ್ನುವುದು ಶ್ವೇತಾ ಕನಸು.