ಕೋಟೆ ನಾಡಿಗೆ ಬೇಕಿದೆ ಕೋಟಿ ಕೋಟಿ ಹೂಡಿಕೆ..!

ಟೀಮ್ ವೈ.ಎಸ್.ಕನ್ನಡ

0

ಚಿತ್ರದುರ್ಗ ಜಿಲ್ಲೆಯ ಅವಲೋಕನ

ಶರವೇಗದಲ್ಲಿ ಪ್ರಗತಿ ಸಾಧಿಸುತ್ತಿರುವ ಜಿಲ್ಲೆಗಳಲ್ಲಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಮುಂಚೂಣಿಯಲ್ಲಿದೆ. ಐಐಎಸ್ಸಿ ಇಲ್ಲಿ 2 ಸಾವಿರ ಎಕರೆ ವಿಸ್ತೀರ್ಣದಲ್ಲಿ 2ನೇ ಕ್ಯಾಂಪಸ್ ಆರಂಭಿಸಲು ನಿರ್ಧಾರ ಮಾಡಿದೆ. ದೇಶದಲ್ಲಿ ಪವನ ಶಕ್ತಿಯ 4ನೇ ಅತೀ ದೊಡ್ಡ ಉತ್ಪಾದಕ ನಮ್ಮ ಚಿತ್ರದುರ್ಗ ಜಿಲ್ಲೆ. ಲೈಮ್ಸ್ಟೋನ್ನ ಅನೇಕ ಗಣಿಗಳು ಇಲ್ಲಿವೆ. ಸಿಮೆಂಟ್ ಕಾರ್ಖಾನೆಗಳ ಬೀಡು ಈ ಕೋಟೆ ನಾಡು. ಸ್ಟೀಲ್ ಮತ್ತು ಸಿಮೆಂಟ್ ಉತ್ಪಾದಿಸುವ ಬೇರೆ ಜಿಲ್ಲೆಗಳಿಗೆ ಚಿತ್ರದುರ್ಗ ಪ್ರಬಲ ಪ್ರತಿಸ್ಪರ್ಧಿ ಎಂಬುದರಲ್ಲಿ ಎರಡು ಮಾತಿಲ್ಲ.

ಚಿತ್ರದುರ್ಗ ಇರೋದು ಎಲ್ಲಿ..?

ಬೆಂಗಳೂರಿನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಜಿಲ್ಲೆ 6 ತಾಲೂಕುಗಳನ್ನು ಒಳಗೊಂಡಿದೆ. ಅವು ಯಾವುದಂದ್ರೆ ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಕೊಳಲ್ಕೆರೆ, ಚಳ್ಳಕೆರೆ, ಮತ್ತು ಮೊಳಕಾಲ್ಮೂರು.

ಕೃಷಿಯೇ ಜೀವನಾಧಾರ

ಜನರ ಜೀವನ ಕಸುಬು ಕೃಷಿ. ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೃಷಿ ಕೊಡುಗೆಯೇ ನಿರ್ಣಾಯಕ. ಭತ್ತ, ರಾಗಿ, ಜೋಳ, ಮೆಕ್ಕೆ ಜೋಳ ಪ್ರಮುಖ ಬೆಳೆ. ಧಾನ್ಯಗಳನ್ನೂ ಹೇರಳವಾಗಿ ಇಲ್ಲಿ ಬೆಳೆಯುತ್ತಾರೆ. ಹೆಸರು ಬೇಳೆ, ತೊಗರಿ ಬೇಳೆ, ಹುರುಳಿ, ಮಸೂರ್ ಬೇಳೆ ಹೀಗೆ ವಿವಿಧ ಬೇಳೆ-ಕಾಳುಗಳನ್ನು ರೈತರು ಬೆಳೆಯುತ್ತಾರೆ. ನೆಲಗಡಲೆ, ಸೂರ್ಯಕಾಂತಿ, ಹತ್ತಿ ಮತ್ತು ತಂಬಾಕು ಜಿಲ್ಲೆಯ ವಾಣಿಜ್ಯ ಬೆಳೆಗಳು. ಪಶುಸಂಗೋಪನೆಯನ್ನು ಕೂಡಾ ಇಲ್ಲಿನ ಬಹುತೇಕ ಎಲ್ಲಾ ರೈತರು ಅವಲಂಬಿಸಿದ್ದಾರೆ.

ಕೈಗಾರಿಕೋದ್ಯಮ ಮೇಲೆ ಒಂದು "ಕ್ಷ" ಕಿರಣ

ಜಿಲ್ಲೆಯಲ್ಲಿ ಕೃಷಿಯೇ ಪ್ರಮುಖವಾಗಿರೋದ್ರಿಂದ ಹಿರಿಯೂರಿನ 106 ಎಕರೆ ವಿಶಾಲ ಪ್ರದೇಶದಲ್ಲಿ "ಅಕ್ಷಯ ಫುಡ್ ಪಾರ್ಕ್" ಸ್ಥಾಪಿಸಲಾಗಿದೆ. ಮೀನುಗಾರಿಕೆಗೆ ಕೂಡಾ ಇಲ್ಲಿ ಉತ್ತೇಜನ ಸಿಕ್ಕಿದೆ. ವಿ.ವಿ ಸಾಗರ್ ಡ್ಯಾಂನಲ್ಲಿ "ಮೀನು ಕೃಷಿ" ನಡೆಯುತ್ತಿದೆ. ಜಿಲ್ಲೆಯ ಶೇಕಡಾ 20ರಷ್ಟು ಸಣ್ಣ ಪ್ರಮಾಣದ ಕೈಗಾರಿಕೆಗಳು ಆಹಾರ ಸಂಸ್ಕರಣೆಯಲ್ಲಿ ನಿರತವಾಗಿವೆ. ಹೀಗಾಗಿ ಈ ಕ್ಷೇತ್ರ ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿದೆ.

ಪವನ ಶಕ್ತಿಯ ಉತ್ಪಾದನೆಯಲ್ಲಿ ಚಿತ್ರದುರ್ಗ ಮುಂಚೂಣಿಯಲ್ಲಿದೆ. 20 ಸಾವಿರ ಗಾಳಿ ಯಂತ್ರಗಳು 1472.75 ಮೆಗಾವಾಟ್ ಸಾಮಥ್ರ್ಯದ ವಿದ್ಯುತ್ ಉತ್ಪಾದಿಸುತ್ತಿವೆ. ಇದು ದೇಶದಲ್ಲೇ 4ನೇ ಅತಿದೊಡ್ಡ ಪವನ ಶಕ್ತಿ ಉತ್ಪಾದನಾ ಕೇಂದ್ರವೂ ಹೌದು. ಇನ್ನೊಂದು 21 ಮೆಗಾವಾಟ್ ಸಾಮಥ್ರ್ಯದ ಘಟಕ ಸ್ಥಾಪನೆಗೆ ಎನೆರ್ಕಾನ್ ಇಂಡಿಯಾ ಲಿಮಿಟೆಡ್ ಪ್ರಸ್ತಾವನೆ ಸಲ್ಲಿಸಿದೆ. ಜೊತೆಗೆ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಜವಳಿ ಉದ್ಯಮದ ಕೈಗಾರಿಕೆಗಳು ಜಿಲ್ಲೆಯಲ್ಲಿವೆ. ಶೇಕಡಾ 12ರಷ್ಟು ಸಣ್ಣ ಪ್ರಮಾಣದ ಘಟಕಗಳೂ ಕಾರ್ಯನಿರ್ವಹಿಸುತ್ತಿವೆ. ಕೈ ಮಗ್ಗ ಉದ್ಯಮದಲ್ಲಿ ಚಿತ್ರದುರ್ಗ ಎತ್ತಿದ ಕೈ. ಮೊಣಕಾಲ್ಮೂರು ಸೀರೆ ತುಂಬಾ ಪ್ರಸಿದ್ಧಿ ಪಡೆದಿದೆ. ಹೀಗಾಗಿ ಈ ವಲಯ ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣ ಅಂತಲೇ ಹೇಳಬಹುದು. ಚಿತ್ರದುರ್ಗ ಜಿಲ್ಲೆ ಖನಿಜ ಸಂಪತ್ತಿನ ಆಗರ ಅಂದರೆ ತಪ್ಪಾಗಲಿಕ್ಕಿಲ್ಲ. ಚಿನ್ನ, ತಾಮ್ರದ ಗಣಿ, ಇಷ್ಟೇ ಅಲ್ಲದೆ ಲೈಮ್ ಸ್ಟೋನ್ ಕೂಡಾ ಇಲ್ಲಿ ಹೇರಳವಾಗಿದೆ. ಹೀಗಾಗಿ ಈ ಪ್ರದೇಶ ಗಣಿಗಾರಿಕೆಯಿಂದಾಗಿ ತುಂಬಾ ಹೆಸರು ಮಾಡಿದೆ. ಸಿಮೆಂಟ್ ಮತ್ತು ಸ್ಟೀಲ್ ಕೈಗಾರಿಕಾ ಕ್ಷೇತ್ರದ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ.

ಜಿಲ್ಲೆಗೆ ನೀರಿನ ಮೂಲ ಯಾವುದು?

ತುಂಗಭದ್ರಾ ನದಿಯ ಉಪನದಿ ವೇದಾವತಿ ಜಿಲ್ಲೆಯಲ್ಲಿ ಹರಿಯುತ್ತಿದ್ದು, ಜನರ ನೀರಿನ ಬವಣೆ ತೀರಿಸುತ್ತಿದೆ. ಜಿಲ್ಲೆಯಲ್ಲಿ ಮಳೆ ಕಡಿಮೆ ಅಂತಲೇ ಹೇಳಬಹುದು. ವಾರ್ಷಿಕವಾಗಿ 744 ಎಂಎಂ ಮಳೆಯಾಗುತ್ತದೆ. 9,31,950 ಲೀಟರ್ ನೀರು ಜಿಲ್ಲೆಗೆ ಪ್ರತಿ ನಿತ್ಯ ಅಗತ್ಯವಿದೆ.

ಶಿಕ್ಷಣ ವ್ಯವಸ್ಥೆಯ ಅವಲೋಕನ

ಜಿಲ್ಲೆಯಲ್ಲಿ ತಲಾ 1 ಡೆಂಟಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜಿದೆ. 21 ಡಿಗ್ರಿ ಕಾಲೇಜುಗಳು, 3 ಪಾಲಿಟೆಕ್ನಿಕ್ ಮತ್ತು 13 ಲೈಬ್ರೆರಿಗಳಿವೆ. 2000 ಎಕರೆಯಲ್ಲಿ ಐಐಎಸ್ಸಿ ಕ್ಯಾಂಪನ್ ಕೂಡಾ ನಿರ್ಮಾಣವಾಗುತ್ತಿದೆ. ಐಐಎಸ್ಸಿ ಸೇರಿದಂತೆ 8 ಸಾವಿರ ಎಕರೆಯಲ್ಲಿ "ಸೈನ್ಸ್ ಹಬ್" ತಲೆಯೆತ್ತಲಿದೆ. ಇಸ್ರೋದ ಸಂಪರ್ಕ ಮತ್ತು ರಿಮೋಟ್ ಸೆನ್ಸಿಂಗ್ ಕೇಂದ್ರವೂ ಇಲ್ಲಿದೆ.

ಸಂಪರ್ಕ ಹೇಗೆ..?

ಮಾರ್ಗ, ರೈಲು, ಮತ್ತು ವಿಮಾನದ ಮೂಲಕ ಚಿತ್ರದುರ್ಗಕ್ಕ ಸಂಪರ್ಕ ಸಾಧ್ಯ. ಸಮೀಪದ ಬಂದರು ಅಂದರೆ ಮಂಗಳೂರು. ಕಾರವಾರ, ಗೋವಾ, ಮತ್ತು ಚೆನ್ನೈ.ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್, ಮಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ವಿಮಾನ ನಿಲ್ದಾಣದ ಮೂಲಕವೂ ಚಿತ್ರದುರ್ಗ ತಲುಪಬಹುದು. ಹೀಗಾಗಿ ವ್ಯಾಪಾರ ಮತ್ತು ವಾಣಿಜ್ಯ ವಹಿವಾಟು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಹೂಡಿಕೆಗೆ ಇರುವ ಅವಕಾಶಗಳೇನು..?

1. ಚಿತ್ರದುರ್ಗ - ಚಳ್ಳಕೆರೆ ಪಾವಗಡದ ಮೂಲಕ ಅಂಧ್ರ ಗಡಿಯವರೆಗೆ ರಸ್ತೆ ನಿರ್ಮಾಣ

2. ಕೈಗಾರಿಕಾ ಅಭಿವೃದ್ಧಿ ಕಾರಿಡಾರ್ ಯೋಜನೆಗಳು

3. ಚಳ್ಳಕೆರೆ ಸಮೀಪ ಕೈಗಾರಿಕಾ ಎಸ್ಟೇಟ್ ಸ್ಥಾಪನೆ

4. ಚಿತ್ರದುರ್ಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ

ಬನ್ನಿ ಹೂಡಿಕೆ ಮಾಡಿ...

ಕೈಮಗ್ಗ ಉದ್ದಿಮೆ ತುಂಬಾ ನಷ್ಟದಲ್ಲಿರುವುದರಿಂದ ಈ ಕ್ಷೇತ್ರದತ್ತ ಗಮನಹರಿಸಬೇಕಾಗಿದೆ. ಖನಿಜೋತ್ಪನ್ನಗಳು ಇಲ್ಲಿ ಹೇರಳವಾಗಿರುವುದರಿಂದ ಸಿಮೆಂಟ್ ಮತ್ತು ಸ್ಟೀಲ್ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಹೀಗಾಗಿ "ಇನ್ವೆಸ್ಟ್ ಕರ್ನಾಟಕ" ಸಮಾವೇಶದಲ್ಲಿ ಹೂಡಿಕೆದಾರರು ಚಿತ್ರದುರ್ಗದ ಜಿಲ್ಲೆಯತ್ತ ಗಮನ ಹರಿಸಲೇಬೇಕಾಗಿದೆ.