ಜೀವನದ ದಿಕ್ಕನ್ನೇ ಬದಲಿಸಿದ ಒಂದು ಐಡಿಯಾ

ಟೀಮ್​ ವೈ.ಎಸ್​​.

ಜೀವನದ ದಿಕ್ಕನ್ನೇ ಬದಲಿಸಿದ ಒಂದು ಐಡಿಯಾ

Saturday November 07, 2015,

4 min Read

‘ವಾಣಿಜ್ಯೋದ್ಯಮ ಒಂದು ಆಹ್ಲಾದಕರ ಅನುಭವ ನೀಡುತ್ತೆ. ಹೀಗಾಗಿಯೇ ಅದರಲ್ಲಿ ಪ್ರಯಾಣಿಕನಾಗಿದ್ದ ನಾನು ಚಾಲಕನ ಸೀಟ್ ಏರಲು ಇಷ್ಟಪಡುತ್ತಿದ್ದೆ.’ - ಹೀಗೆ ಹಲವು ವಾಣಿಜ್ಯೋದ್ಯಮಿಗಳು ನಿಮಗೆ ಹೇಳಬಹುದು. ಆದ್ರೆ ಈ ಹೇಳಿಕೆಯ ಅರ್ಥ ಆಗಾಗ ಬದಲಾಗುತ್ತಿರುತ್ತೆ ಅನ್ನೋದನ್ನು ಮರೆಯಬಾರದು.

ಸ್ಟಾರ್ಟಪ್ ಯುಗ ಭಾರತಕ್ಕೆ ಕಾಲಿಡುವ ಮೊದಲೇ ಗೌತಮ್ ಸಿನ್ಹಾ, 1996ರಲ್ಲೇ ತಮ್ಮ ಔದ್ಯಮಿಕ ಜೀವನ ಆರಂಭಿಸಿದ್ರು. 2000ರ ದಶಕದ ಪ್ರಾರಂಭದ ವರ್ಷಗಳಲ್ಲಿ ತಮ್ಮದೇ ಕಂಪನಿ ನಡೆಸುತ್ತಿದ್ದರು. ನಂತರ 2008ರಲ್ಲಿ ಅವರು ಈ ಕಂಪನಿಯನ್ನು ಮಾರಾಟ ಮಾಡಿ, ಮೂಲ ಬಂಡವಾಳ ಹೂಡಿಕೆದಾರನ ರೂಪದಲ್ಲಿ ಹೊಸ ಉದ್ಯಮಕ್ಕೆ ಕಾಲಿಟ್ಟರು.

image


2013ರಲ್ಲಿ ಗೌತಮ್, ಸಂಜೀವ್ ಪುನ್ವಾನಿ ಪ್ರಾರಂಭಿಸಿದ್ದ ಭಾರತದ ಕಂಪನಿಗಳಿಗೆ ವಿದೇಶಿ ಅಭ್ಯರ್ಥಿಗಳ ನೇಮಕಾತಿ ಕೇಂದ್ರದಲ್ಲಿ ಬಂಡವಾಳ ಹೂಡಿದರು. ‘ಆ ಸಮಯದಲ್ಲಿ ಇದು, ನನಗೆ ಹತ್ತರಲ್ಲಿ ಒಂದು ಹೂಡಿಕೆಯಂತಿತ್ತು. ನನಗೆ ಇದರಲ್ಲಿ ಸಂಪೂರ್ಣವಾಗಿ ತೊಡಗುವ ಯಾವ ಉದ್ದೇಶ ಅಥವಾ ಅಭಿಲಾಷೆಯೂ ಇರಲಿಲ್ಲ.’ ಅಂತಾರೆ ಗೌತಮ್.

ಆದ್ರೆ ಕಾಲ ಬದಲಾಯ್ತು. ಗೌತಮ್ ಮತ್ತು ಸಂಜೀವ್ ಉದ್ಯಮಕ್ಕೆ ಸಂಬಂಧಿಸಿದಂತೆ ಹೆಚ್ಚಾಗಿ ಜೊತೆಯಲ್ಲಿ ಕಾಲ ಕಳೆದಂತೆ, ಅವರಿಗೆ ಅಂತಾರಾಷ್ಟ್ರೀಯ ಕಂಪನಿಗಳಿಗೆ ಸಾಂಪ್ರದಾಯಿಕವಾಗಿ ಮಾಡೆಲ್‍ಗಳನ್ನು ನೇಮಿಸುವುದು ಸರಿಯಲ್ಲ ಅನ್ನಿಸಿತು. ಹೀಗಾಗಿಯೇ ಅದರ ವಿರುದ್ಧವಾಗಿ ಸಾಗಲು ತೀರ್ಮಾನಿಸಿದರು. ಜೊತೆಗೆ ದೊಡ್ಡ ಮಟ್ಟದಲ್ಲಿ, ಮೂಲಭೂತವಾಗಿ ಏನನ್ನಾದ್ರೂ ಮಾಡಬೇಕು ಎಂಬ ಹುಳ ಅವರ ತಲೆಗೆ ಹೊಕ್ಕಿತ್ತು. ವಿದೇಶೀ ಪ್ರತಿಭೆಗಳ ನೇಮಕಾತಿಯಲ್ಲಿ ಸಂಜೀವ್ ಅವರ ಹಿನ್ನೆಲೆ ಹಾಗೂ ನೇಮಕಾತಿ ಕಂಪನಿಯನ್ನು ಮುನ್ನಡೆಸುವ ಗೌತಮ್‍ರ ಅನುಭವ ಇಲ್ಲಿ ಅದ್ಭುತವಾಗಿ ಕೆಲಸ ಮಾಡಿತು.

ಇದರ ಫಲಿತಾಂಶವೇ ಸಿಬಿಆರ್‍ಇಎಕ್ಸ್ ಅಥವಾ ಸಿಬ್ರೆಕ್ಸ್. ವಿಶ್ವದಾದ್ಯಂತ ನೇಮಕಾತಿ ಸಲಹಾ ಕೇಂದ್ರಗಳು ಹಾಗೂ ಸ್ವತಂತ್ರ ನೇಮಕಾತಿ ಕಂಪನಿಗಳ ನಡುವೆ ಸಂಪರ್ಕ ಕಲ್ಪಿಸುವ ವೇದಿಕೆಯೇ ಈ ಸಿಬ್ರೆಕ್ಸ್.

‘5 ವರ್ಷಗಳಿಂದ ನಾನು ಈ ಯೋಜನೆಗೆ ಕೇವಲ ಒಬ್ಬ ಹೂಡಿಕೆದಾರನಾಗಿದ್ದೆ. ಆದ್ರೆ ಇದರ ವ್ಯಾಪ್ತಿಯ ವಿಸ್ತಾರ ನೋಡಿ, ಇದೊಂದು ಅತ್ಯುತ್ತಮ ಅವಕಾಶ ಅನ್ನೋದು ಗೊತ್ತಾಯ್ತು. ತಕ್ಷಣ ನನ್ನ ನಿಲುವು ಬದಲಾಯಿಸಿ, ಕಂಪನಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡೆ. ಸಾಂಪ್ರದಾಯಿಕವಾಗಿಯೇ ವಿದೇಶಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಹೋದಾಗ ನಾವು ಎಸಗಿದ ಒಂದು ತಪ್ಪಿನಿಂದಾಗಿ, ಸಿಬ್ರೆಕ್ಸ್ ಅಥವಾ ಸಿಬಿಆರ್‍ಇಎಕ್ಸ್ ಜನ್ಮತಾಳಿತು. ಹೀಗಾಗಿಯೇ ಈ ಆಲೋಚನೆ ಕಾರ್ಯರೂಪಕ್ಕೆ ಬಂದಿದ್ದೇ ಒಂದು ಪ್ರಮಾದದಿಂದ ಅಂತ ಹೇಳೋಕ್ಕೆ ನಾನು ಇಷ್ಟ ಪಡ್ತೀನಿ’ ಅಂತಾರೆ ಸಿಬ್ರೆಕ್ಸ್​​ನ ಸಹ-ಸಂಸ್ಥಾಪಕ ಮತ್ತು ಸಿಇಒ ಗೌತಮ್.

ಸಿಬಿಆರ್‍ಎಕ್ಸ್ / ಸಿಬ್ರೆಕ್ಸ್ ಕೆಲಸವೇನು?

ವಿದೇಶೀ ಪ್ರತಿಭೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹೆಚ್ಚು ಖರ್ಚಿಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಸೇವೆ ಒದಗಿಸುವುದೇ ಗೌತಮ್ ಮತ್ತು ಸಂಜೀವ್ ಅವರ ಸಿಬ್ರೆಕ್ಸ್ ಸಂಸ್ಥೆಯ ಉದ್ದೇಶ.

ಚೀನಾದಲ್ಲಿ ತನ್ನ ಉದ್ಯಮ ವಿಸ್ತರಿಸಿಕೊಳ್ಳುತ್ತಿರುವ ಭಾರತೀಯ ಕಂಪನಿಯೊಂದಕ್ಕೆ ಅಲ್ಲಿನ ಪ್ರತಿಭೆಗಳನ್ನು ದೊರಕಿಸುವ ಅಥವಾ ಇಲ್ಲಿಯೇ ಒಳ್ಳೆಯ ಬೆಳವಣಿಗೆ ಕಾಣುತ್ತಿರುವ ಭಾರತೀಯ ಕಂಪನಿಗೆ ಚೀನಾ ಮೂಲದ ಅಭ್ಯರ್ಥಿಯನ್ನು ಒದಗಿಸಲು ಸಿಬ್ರೆಕ್ಸ್ ಸಹಕಾರಿಯಾಗಿದೆ.

ಇಂತಹ ನೇಮಕಾತಿ ಕಂಪನಿಗಳು ಸುಮಾರು 40 ಬೇರೆ ಬೇರೆ ದೇಶಗಳಲ್ಲಿ ಬೇರೆ ಕಂಪನಿಗಳೊಂದಿಗೆ ಸಕ್ರಿಯ ಸಂಪರ್ಕ ಹೊಂದಿವೆ. ಸಿಬ್ರೆಕ್ಸ್ ಕೂಡ ಅವುಗಳಲ್ಲಿ ಒಂದಾಗಿದ್ದು, ಭಾರತ ಮತ್ತು ಚೀನಾದ ನೇಮಕಾತಿ ಕಂಪನಿಗಳ ನಡುವೆ ಸಂಪರ್ಕ ಕಲ್ಪಿಸಿಕೊಡುತ್ತದೆ. ವಿಶೇಷ ಅಂದ್ರೆ ಯಾವ ಕಂಪನಿಯವರೂ ಸಹ ಮತ್ತೊಂದು ದೇಶಕ್ಕೆ ಬರದೇ, ವ್ಯವಹಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ವ್ಯವಸ್ಥೆಯೂ ಸಿಬ್ರೆಕ್ಸ್​​​ನಲ್ಲಿದೆ. ಎಲ್ಲಕಿಂತ ಹೆಚ್ಚಾಗಿ ಸಿಬ್ರೆಕ್ಸ್ ನೇಮಕಾತಿ ಸಲಹಾ ಕೇಂದ್ರಗಳಿಂದ ಹಾಗೂ ಆಸಕ್ತ ವ್ಯಕ್ತಿಗಳೊಂದಿಗೆ ಸಂವಹನ ಮಾಡದೇ, ನೇಮಕಾತಿ ಮಾಡುವ ಕಂಪನಿಗಳೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ.

ಲಾಭ ಗಳಿಸುವುದು ಹೇಗೆ?

ಒಂದು ವ್ಯವಹಾರ ಮುಗಿದಾಗ, ಅಭ್ಯರ್ಥಿಗಳನ್ನು ಪೂರೈಸುವ ಕಂಪನಿ ಅವರ ಸಂಬಳದ ಶೇಕಡಾ 50ರಷ್ಟು ಹಣ ಪಡಿಯುತ್ತೆ. ಹಾಗೇ ವಿದೇಶೀ ಅಭ್ಯರ್ಥಿಗಳಿಗೆ ಬೇಡಿಕೆಯೊಡ್ಡುವ ಕಂಪನಿಯವರು ಶೇಕಡಾ 30ರಷ್ಟು ಹಣ ಗಳಿಸುತ್ತಾರೆ. ಉಳಿದ 10ರಿಂದ 20 ಪ್ರತಿಶತಃ ಪಾಲು ಸಿಬ್ರೆಕ್ಸ್​​ಗೆ ದೊರೆಯುತ್ತದೆ.

ಭಾರತೀಯ ಕಂಪನಿಯೊಂದು ಚೀನಾದಲ್ಲಿನ ತನ್ನ ಉದ್ಯಮಕ್ಕೆ ಚೀನಾ ಅಭ್ಯರ್ಥಿಯನ್ನು ಆರಿಸಿಕೊಳ್ಳುತ್ತದೆ ಅಂತಿಟ್ಟುಕೊಳ್ಳಿ. ಆಗ ಅಭ್ಯರ್ಥಿಯನ್ನು ಒದಗಿಸುವ ಚೀನಾ ಏಜೆನ್ಸಿ ಶೇಕಡಾ 50ರಷ್ಟು ಪಾಲು ಪಡೆಯುತ್ತದೆ. ಬೇಡಿಕೆ ಇಡುವ ಭಾರತೀಯ ಏಜೆನ್ಸಿ ಶೇಕಡಾ 30ರಷ್ಟು ಪಾಲು ಗಳಿಸುತ್ತದೆ. ಉಳಿದ ಶೇಕಡಾ 20ರಷ್ಟು ಈ ಎರಡೂ ಏಜೆನ್ಸಿಗಳ ನಡುವೆ ಸಂಪರ್ಕ ಕಲ್ಪಿಸುವ ಕಂಪನಿಗೆ ಹೋಗುತ್ತೆ.

2015ರ ಮೇ ತಿಂಗಳಿನಲ್ಲಿ ಪ್ರಾರಂಭವಾದ ಸಿಬ್ರೆಕ್ಸ್ ಈಗಾಗಲೇ ಸರಾಸರಿ 90 ದಿನಗಳ ಕಾಲಮಿತಿಯಲ್ಲಿ ಎರಡು ದೊಡ್ಡ ಅಂತಾರಾಷ್ಟ್ರೀಯ ವ್ಯಾಪಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಸಿಬ್ರೆಕ್ಸ್​​ನ ಸದಸ್ಯರು

ಸಿಬೆಕ್ಸ್​​ನಲ್ಲಿ ಒಟ್ಟು 11 ಮಂದಿ ಸದಸ್ಯರಿದ್ದಾರೆ. ಮುಂಬೈನಲ್ಲಿ 5, ಬೆಂಗಳೂರಿನಲ್ಲಿ 2, ದೆಹಲಿ ಹಾಗೂ ಚೆನ್ನೈನಲ್ಲಿ ತಲಾ ಒಬ್ಬರು ಹಾಗೂ ಅಮೆರಿಕಾದಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಕ್ರಾಸ್-ಬಾರ್ಡರ್ ಕಂಪನಿಯಾದ ಕಾರಣ, ದೇಶ- ವಿದೇಶಗಳಲ್ಲೂ ತಂಡ ರಚಿಸುವ ಜವಾಬ್ದಾರಿ ಸಿಬ್ರೆಕ್ಸ್ ಮೇಲಿದೆ. ವಿಶೇಷ ಅಂದ್ರೆ 11 ಮಂದಿಯ ತಂಡದಲ್ಲಿ ನಾಲ್ವರು ವಿದೇಶೀಯರಿದ್ದಾರೆ.

ಭೌಗೋಳಿಕವಾಗಿ ಬೇರೆ ಬೇರೆ ದೇಶಗಳಿಗೆ ಉದ್ಯಮ ವಿಸ್ತಾರವಾದಂತೆ, ತಂಡಕ್ಕೆ ವಿದೇಶೀಯರನ್ನೂ ನೇಮಕಾತಿ ಮಾಡಿಕೊಳ್ಳುವ ಉದ್ದೇಶ ಸಿಬ್ರೆಕ್ಸ್ ಕಂಪನಿಯದು. ಭವಿಷ್ಯದಲ್ಲಿ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುವ ಶೇಕಡಾ 80ರಷ್ಟು ಉದ್ಯೋಗಿಗಳು ವಿದೇಶೀಯರೇ ಆಗಿರುತ್ತಾರೆ. ಸದ್ಯ ದಕ್ಷಿಣ ಅಮೆರಿಕಾದಲ್ಲಿ ತನ್ನ ಉದ್ಯಮ ವಿಸ್ತರಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಿಬ್ರೆಕ್ಸ್, ಸ್ಪ್ಯಾನಿಶ್ ಭಾಷೆ ಗೊತ್ತಿರುವ 20 ಮಂದಿ ವೃತ್ತಿಪರರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಚಿಂತನೆ ನಡೆಸಿದೆ.

ಭೌಗೋಳಿಕ ಕಾರ್ಯಕ್ಷೇತ್ರ

ದೇಶ-ವಿದೇಶಗಳಲ್ಲಿ ಕಾರ್ಯ ನಿರ್ವಹಿಸಲು ಸೆಬ್ರಿಕ್ಸ್, ಭಾಷೆ ಹಾಗೂ ಮಾರುಕಟ್ಟೆ ಸಂವೇದನೆಗಳಿಗೆ ಅನುಗುಣವಾಗಿ ಭೌಗೋಳಿಕ ವಿಭಾಗಗಳನ್ನು ವಿಂಗಡಿಸಿಕೊಂಡಿದೆ. ಅದು ಸಾರ್ಕ್ ದೇಶಗಳ ಪೈಕಿ ಭಾರತ ಮತ್ತು ಮೈನ್ಮಾರ್‍ಗಳಲ್ಲಿದೆ. ಚೀನಾ, ಕೊರಿಯಾ ಮತ್ತು ಜಪಾನ್‍ಗಳು ಎರಡನೇ ವಲಯಗಳಲ್ಲಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಆಗ್ನೇಯ ಏಷ್ಯಾ ದೇಶಗಳು ಮೂರನೇ ವಲಯದಲ್ಲಿವೆ. ಆಫ್ರಿಕಾ ಖಂಡದಲ್ಲಿ ಫ್ರಾನ್ಸ್ ಮತ್ತು ಮಧ್ಯ ಪೂರ್ವದ ದೇಶಗಳನ್ನು ನಾಲ್ಕನೇ ವಲಯಗಳನ್ನಾಗಿ ವಿಂಗಡಿಸಲಾಗಿದೆ. ದಕ್ಷಿಣ ಅಮೆರಿಕಾದ ಸ್ಪ್ಯಾನಿಶ್ ಮಾತನಾಡುವ ದೇಶಗಳು, ಪಶ್ಚಿಮ ಯೂರೋಪ್, ಇಂಗ್ಲೆಂಡ್ ಹಾಗೂ ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳನ್ನು ಐದನೇ ವಲಯಗಳಾಗಿ ವಿಭಾಗ ಮಾಡಲಾಗಿದೆ. ಉತ್ತರ ಅಮೆರಿಕಾ ಕೂಡ ಸೆಬ್ರಿಕ್ಸ್​​ಗೆ ಪ್ರಮುಖ ಮಾರುಕಟ್ಟೆಯಾಗಿದೆ.

image


ಸದ್ಯ 40 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಉದ್ಯಮ ಚೀನಾ, ಫಿಲಿಪ್ಪೀನ್ಸ್, ಸಿಂಗಪೂರ್, ಬಹುತೇಕ ಆಫ್ರಿಕಾ, ರೊಮೇನಿಯಾ, ಸ್ವೀಡನ್ ಹಾಗೂ ನಾರ್ವೆ ದೇಶಗಳಲ್ಲಿ ಸಕ್ರಿಯವಾಗಿ ತೊಡಗಿದೆ.

ಮೇಲಿನ ದೇಶಗಳಲ್ಲಿ ಸುಮಾರು 50 ನೇಮಕಾತಿ ಘಟಕಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವ ಸಿಬ್ರೆಕ್ಸ್, ಇನ್ನು ಕೆಲವೇ ತಿಂಗಳಲ್ಲಿ ಆ ಸಂಖ್ಯೆಯನ್ನು 100ರ ಗಡಿ ದಾಟಿಸುವ ನಿರೀಕ್ಷೆಯಲ್ಲಿದೆ.

ಆಕಾಶಕ್ಕೇ ಗುರಿ!

ಡಿಸೆಂಬರ್ ಅಂತ್ಯಕ್ಕೆ ದೇಶ- ವಿದೇಶಗಳಲ್ಲಿ 500 ನೇಮಕಾತಿ ಘಟಕಗಳೊಂದಿಗೆ ಸಂಪರ್ಕ ಸಾಧಿಸುವ ಹಾಗೂ ತನ್ನ ಕಾರ್ಯಕ್ಷೇತ್ರವನ್ನು 50 ದೇಶಗಳಿಗೆ ವಿಸ್ತರಿಸುವ ಗುರಿ ಸೆಬ್ರಿಕ್ಸ್​​ನದು. ನೇಮಕಾತಿ ಸಮುದಾಯದ ಮೇಲೆ ತನ್ನ ಗಮನ ಕೇಂದ್ರೀಕರಿಸಿಕೊಂಡು ಗೌತಮ್ ತಮ್ಮ ಉದ್ಯಮದ ಕುರಿತು ಕುತೂಹಲಕಾರಿ ಅಂಶಗಳನ್ನು ಬಿಚ್ಚಿಡ್ತಾರೆ. ಈ ಉದ್ಯಮದಲ್ಲಿ ಯಾರು ಬೇಡಿಕೆಯೊಡ್ಡುತ್ತಾರೋ ಅವರೇ ಪೂರೈಸುತ್ತಾರೆ ಅನ್ನೋದೇ ಆ ಅಂಶ.

ಪ್ರತಿ ಮಾರುಕಟ್ಟೆಯಲ್ಲೂ ಒಂದು ಲಕ್ಷ ನೇಮಕಾತಿಯ ಸಾಮರ್ಥ್ಯವಿದ್ದು, ಸಿಬ್ರೆಕ್ಸ್ ಸಂಸ್ಥಾಪಕರು ಒಟ್ಟಾರೆ 6 ಲಕ್ಷ ಅಭ್ಯರ್ಥಿಗಳನ್ನು ಪೂರೈಸುವ ಆಶಾವಾದ ಹೊಂದಿದ್ದಾರೆ. 2018ರ ಡಿಸೆಂಬರ್ ಒಳಗೆ 30 ಸಾವಿರ ವಹಿವಾಟುಗಳನ್ನು ಪೂರ್ಣಗೊಳಿಸುವ ಗುರಿ ಅವರದು. ಹೀಗಾಗಿಯೇ ಭಾರತ, ಚೀನಾ ಹಾಗೂ ಅಮೆರಿಕಾ ಮಾರುಕಟ್ಟೆಗಳಲ್ಲಿ ಹೆಚ್ಚಿನ ಗಮನ ಹರಿಸಿದ್ದಾರೆ.

ಪ್ರೇರೇಪಣೆ

ಇದುವರೆಗಿನ ಔದ್ಯಮಿಕ ಜೀವನ, ತಮ್ಮ ತಂಡದೊಂದಿಗಿನ ಪಯಣಗಳ ಕುರಿತು ಕೊನೆಯಲ್ಲಿ ಮಾತನಾಡುವ ಗೌತಮ್, ‘ನೈಜ ಸಮಸ್ಯೆಯನ್ನು ಬಗೆಹರಿಸುತ್ತಿರುವಾಗಲೇ ನಿಮಗೆ ನಿಜವಾದ ಐಡಿಯಾಗಳು ಬರೋದು. ಸಣ್ಣ ಸಣ್ಣ ಕಂಪನಿಗಳ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ನಾವು ಜಾಗತೀಕರಣಕ್ಕೆ ಹೊಸ ಅರ್ಥ ಕಲ್ಪಿಸೋದೇ ನಮ್ಮ ಉದ್ದೇಶ. ನಾವು ಗ್ರಹಿಕೆಗಳನ್ನು ಬದಲಿಸಿ, ಎಂತಹ ಗಾತ್ರದ ಕಂಪನಿಯಾದ್ರೂ ಸರಿಯೇ, ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಥವಾ ಇಲ್ಲಿನ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ವಿದೇಶೀ ಕಂಪನಿಗಳಿಗೆ ಕಳುಹಿಸಿಕೊಡಲು ಒಂದೊಳ್ಳೆ ಅವಕಾಶ ಕಲ್ಪಿಸಿಕೊಡುತ್ತೇವೆ.’ ಅಂತಾರೆ.