ನಿರ್ಗತಿಕ ಸಿರಿಯಾ ನಾಗರೀಕರಿಗೆ ಆಸರೆ-14,000 ಸಂಸ್ರಸ್ಥರಿಗೆ ಸಿಖ್ ಸಮುದಾಯದ ನೆರವು

ಟೀಮ್​ ವೈ.ಎಸ್​​. ಕನ್ನಡ

ನಿರ್ಗತಿಕ ಸಿರಿಯಾ ನಾಗರೀಕರಿಗೆ ಆಸರೆ-14,000 ಸಂಸ್ರಸ್ಥರಿಗೆ ಸಿಖ್ ಸಮುದಾಯದ ನೆರವು

Monday November 30, 2015,

2 min Read

ನಾಗರೀಕ ದಂಗೆಯಿಂದ ಸಿರಿಯಾ ತತ್ತರಿಸಿ ಹೋಗಿದೆ. ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಜನರು ನಿರಾಶ್ರಿತರಾಗಿದ್ದಾರೆ, ಅನ್ನ - ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಸಿರಿಯಾದಲ್ಲಿ ಯುದ್ಧ ಸಂತ್ರಸ್ಥರ ಸ್ಥಿತಿ ನೋಡಿದ್ರೆ ಎಂಥವರ ಕರುಳು ಕೂಡ ಕಿತ್ತು ಬರುತ್ತೆ. ಆಸರೆಯಾಗಲು ಸೂರಿಲ್ಲ, ಹೊದೆಯಲು ಬಟ್ಟೆಗಳಿಲ್ಲ, ತುತ್ತು ಅನ್ನವೂ ಸಿಗದೇ ನಿರಾಶ್ರಿತರು ಕಂಗಾಲಾಗಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳು, ಅಸಹಾಯಕ ವೃದ್ಧರು, ಮಹಿಳೆಯರು, ಗರ್ಭಿಣಿಯರು ಹೀಗೆ ಒಬ್ಬೊಬ್ಬರ ಪರಿಸ್ಥಿತಿಯೂ ಕರುಣಾಜನಕವಾಗಿದೆ. ಭೂಮಿಯ ಮೇಲಿನ ನಿರಾಶ್ರಿತರ ತಾಣ ಅಂದ್ರೆ ಸಿರಿಯಾ ಎಂಬಂತಾಗಿದೆ ಅಲ್ಲಿನ ಸ್ಥಿತಿ. ಹೀಗೆ ನಿರ್ಗತಿಕರಾಗಿರುವ 14,000 ಮಂದಿಗೆ ಸಿಖ್ ಸಮುದಾಯದವರು ಆಸರೆಯಾಗಿದ್ದಾರೆ. ಸಿರಿಯಾದಲ್ಲಿ ಸಿಖ್ ಸಮುದಾಯದವರು ತಮ್ಮ ಧಾರ್ಮಿಕ ಆತಿಥ್ಯ ಸಂಪ್ರದಾಯವನ್ನು ಮೆರೆಯುತ್ತಿದ್ದಾರೆ. ಸಿರಿಯಾ ಗಡಿಯಿಂದ 5 ಕಿಲೋ ಮೀಟರ್ ದೂರದಲ್ಲಿ ನಿಶಾಶ್ರಿತರ ಕ್ಯಾಂಪ್‍ಗಳಿವೆ. ಇಲ್ಲಿ ಸುಮಾರು 14,000 ಮಂದಿ ಆಸರೆ ಪಡೆದಿದ್ದಾರೆ. ಬ್ರಿಟನ್ ಮೂಲದ ಎನ್‍ಜಿಓ `ಖಾಲ್ಸಾ' ಸಿರಿಯಾ ಕ್ಯಾಂಪ್‍ನಲ್ಲಿ ಬೇಕರಿಯೊಂದನ್ನು ನಡೆಸುತ್ತಿವೆ. ಪ್ರತಿನಿತ್ಯ 14,000 ನಿರ್ಗತಿಕರಿಗೆ ಊಟ, ಉಪಹಾರ ಪೂರೈಸುತ್ತಿವೆ.

image


ಸಿರಿಯಾ ನಾಗರೀಕ ಯುದ್ಧದಲ್ಲಿ ತೊಂದರೆಗೀಡಾದ ಸಂತ್ರಸ್ಥರ ನೆರವಿಗೆ ಸ್ವಯಂ ಸೇವಕರು ಟೊಂಕಕಟ್ಟಿ ನಿಂತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಾವಿರಾರು ಜನರಿಗೆ ಆಹಾರ ಒದಗಿಸುವ ಮೂಲಕ, ಅವರ ಬದುಕಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದಾರೆ. ಮೊದಲು ನಿರಾಶ್ರಿತರಿಗೆಲ್ಲ ಉಚಿತವಾಗಿ ಹೊಟ್ಟೆ ತುಂಬ ಊಟ ಹಾಕಲಾಗ್ತಿತ್ತು. ಆದ್ರೆ ದಿನೇ ದಿನೇ ಆಹಾರ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ರಿಂದ ಇದೀಗ ಬೇಕರಿಯನ್ನು ತೆರೆಯಲಾಗಿದೆ. ಕುರ್ದಿಶ್ ಪ್ರದೇಶದ ನಿವಾಸಿಗಳಿಗೆಲ್ಲ ಆಹಾರ ಪೂರೈಸುವ ಜವಾಬ್ಧಾರಿಯನ್ನು ಸಿಖ್ ಸಮುದಾಯದ ಸ್ವಯಂ ಸೇವಕರು ಹೊತ್ತುಕೊಂಡಿದ್ದಾರೆ.

image


ಕೇವಲ ಇಲ್ಲಿ ಮಾತ್ರವಲ್ಲ, ಇನ್ನೊಂದೆಡೆ ಲೆಬನಾನ್-ಸಿರಿಯಾ ಗಡಿಯಲ್ಲಿರುವ ನಿರಾಶ್ರಿತರಿಗೂ ಸಿಖ್ ಸಮುದಾಯದ ಸ್ವಯಂ ಸೇವಕರು ನೆರವು ನೀಡ್ತಿದ್ದಾರೆ. 5000ಕ್ಕೂ ಹೆಚ್ಚು ಸ್ಥಳೀಯ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿದ್ದಾರೆ. `ಟೈಮ್ಸ್ ಆಫ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ `ಖಾಲ್ಸಾ' ಎನ್‍ಜಿಓನ ಸಿಇಓ ರವಿ ಸಿಂಗ್, ನಿರಾಶ್ರಿತರ ಸ್ಥಿತಿ ಮತ್ತು ಸ್ವಯಂ ಸೇವಕರ ಕಾರ್ಯದ ಬಗ್ಗೆ ಮಾಹಿತಿ ನೀಡಿದ್ರು. ಸಿಖ್ ಸಮುದಾಯದ ವೇಷಭೂಷಣಗಳನ್ನು ನೋಡಿ ಮೊದಲು ಸಿರಿಯಾ ನಿರ್ಗತಿಕರಲೆಲ್ಲ ತಪ್ಪು ತಿಳಿದುಕೊಂಡಿದ್ರು ಎನ್ನುತ್ತಾರೆ ರವಿ ಸಿಂಗ್. ಇನ್ನು ಖಾಲ್ಸಾ ಎನ್‍ಜಿಓನ ಬಹುತೇಕ ಸ್ವಯಂ ಸೇವಕರೆಲ್ಲ ಯುರೋಪ್ ಮೂಲದವರು. ಅವರ ಪೂರ್ವಜರೆಲ್ಲ ಉತ್ತರ ಭಾರತದ ಪಂಜಾಬಿ ಸಮುದಾಯದವರು.

image


ಸಿರಿಯಾ ಯುದ್ಧ ಇತ್ತೀಚೆಗೆ ಶುರುವಾಗಿದ್ದೇನಲ್ಲ. 2011ರಿಂದ ಆರಂಭವಾದ ಸಿರಿಯಾ ದಂಗೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಈಗಾಗ್ಲೇ ಸಿರಿಯಾ ಪೈಶಾಚಿಕ ಐಸಿಸ್ ಉಗ್ರರ ಕಪಿಮುಷ್ಠಿಯಲ್ಲಿದೆ. ಸಿರಿಯಾವನ್ನು ವಶಪಡಿಸಿಕೊಂಡಿರುವ ಐಎಸ್‍ಐಎಸ್ ಭಯೋತ್ಪಾದಕರು ಫ್ರಾನ್ಸ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದಾರೆ. ಅಮಾಯಕರ ನೆತ್ತರು ಹರಿಸುತ್ತಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ರಷ್ಯಾ, ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳು ಸಿರಿಯಾದ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಅಮೆರಿಕ ತನ್ನ ಕಾರ್ಯಾರಣೆಯನ್ನು ಸದ್ಯ ಸ್ಥಗಿತಗೊಳಿಸಿದೆ. ಆದ್ರೆ ರಷ್ಯಾ ಮಾತ್ರ ಐಸಿಸ್ ಉಗ್ರರನ್ನು ಮಟ್ಟಹಾಕಲು ವೈಮಾನಿಕ ದಾಳಿ ನಡೆಸ್ತಾ ಇದೆ. ಈ ಕಾಳಗದಲ್ಲಿ ಅಮಾಯಕ ಸಿರಿಯಾ ಪ್ರಜೆಗಳು ಬಲಿಯಾಗುತ್ತಿದ್ದಾರೆ. ಮನೆ-ಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಯುದ್ಧ ಪೀಡಿತ ಸಿರಿಯಾದಲ್ಲಿ ಸಂತ್ರಸ್ಥರ ಹಾಹಾಕಾರ ಮುಗಿಲು ಮುಟ್ಟಿದೆ. ಇಂತಹ ಸಂದರ್ಭದಲ್ಲಿ ನಿರಾಶ್ರಿತರ ನೆರೆವಿಗೆ ಧಾವಿಸಿರುವ ಸಿಖ್ ಸಮುದಾಯದವರ ಕಳಕಳಿ ನಿಜಕ್ಕೂ ಶ್ಲಾಘನೀಯ. ಹೀಗೆ ವಿಶ್ವದ ಮೂಲೆ ಮೂಲೆಯಿಂದ್ಲೂ ನೆರವಿನ ಪ್ರವಾಹ ಹರಿದು ಬಂದ್ರೆ ನಿರ್ಗತಿಕ ಸಿರಿಯಾ ನಾಗರೀಕರ ಬದುಕು ಹಸನಾಗಲಿದೆ.

ಅನುವಾದಕರು: ಭಾರತಿ ಭಟ್​​​​