ಸಿನೆಮಾ ನೋಡೋದಿಕ್ಕೆ ಟೈಮ್​ ಇಲ್ಲ- ಕಿರು ಚಿತ್ರಗಳ ಬಗ್ಗೆ ಬೇಜಾರಿಲ್ಲ..!

ಟೀಮ್​ ವೈ.ಎಸ್​. ಕನ್ನಡ

ಸಿನೆಮಾ ನೋಡೋದಿಕ್ಕೆ ಟೈಮ್​ ಇಲ್ಲ- ಕಿರು ಚಿತ್ರಗಳ ಬಗ್ಗೆ ಬೇಜಾರಿಲ್ಲ..!

Monday August 29, 2016,

3 min Read

ಈಗ ಎಲ್ಲವೂ ಶಾರ್ಟ್. ಬ್ಯುಸಿ ಲೈಫ್​ನಲ್ಲಿ ಜನರಿಗೆ ಸಮಯ ಕೂಡ ಇರುವುದಿಲ್ಲ. ಸಾಮಾಜಿಕ ಸಂದೇಶಗಳನ್ನು ಪುಟಗಟ್ಟಲೆ ಬರೆದರೆ ಯಾರು ಓದುವುದಿಲ್ಲ. ಹಾಗಾಗಿ ಕೆಲವರು ಸಂದೇಶಗಳನ್ನು ಪರಿಣಾಮಕಾರಿಯಾಗಿ ತಲುಪಿಸಲು ಕಿರು ಚಿತ್ರಗಳ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಿರು ಚಿತ್ರಗಳನ್ನು ನಿರ್ಮಾಣ ನಿರ್ದೇಶನ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕಿರು ಚಿತ್ರ ಎಂಬುದು ಸಿನಿಮಾದ ಮತ್ತೊಂದು ಪರಿಭಾಷೆ ಎಂದೇ ಹೇಳಬಹುದು. ಸುಮಾರು ಮೂರು ಗಂಟೆಗಳ ಸಮಯದ ಸಿನಿಮಾದಲ್ಲಿ ಹೇಳಲಾಗದ ವಿಷಯವನ್ನು, ಕೆಲ ನಿಮಿಷಗಳಲ್ಲಿ ಹೇಳುವಂತಹ ಪ್ರಕ್ರಿಯೆ ಕಿರುಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಇದು ಸಾಮಾನ್ಯವಾಗಿ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ, ತಮ್ಮ ಪ್ರತಿಭೆಗಳನ್ನು ಹೊರಹಾಕಲು ಯುವ ಪ್ರತಿಭೆಗಳು ಹೆಚ್ಚಾಗಿ ಮಾಡುತ್ತಾರೆ. ಇದರ ಜತೆಗೆ ಕೆಲ ಯುವಕರು ಈ ಕಿರು ಚಿತ್ರಗಳನ್ನು ಸಾಮಾಜಿಕ ಕಳಕಳಿಯಿಂದ ನಿರ್ಮಾಣ ಮಾಡುತ್ತಿದ್ದಾr

image


ಸಂಭಾಷಣೆಗಳಿಲ್ಲದೆ ಸಂದೇಶಗಳ ರವಾನೆ

ಕೆಲ ಕಿರು ಚಿತ್ರಗಳು ಸಂಭಾಷಣೆಗಳೇ ಇಲ್ಲದೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ರವಾನೆ ಮಾಡುತ್ತಿವೆ. ಆ ಸಾಲಿನಲ್ಲಿ ಇತ್ತೀಚಿಗೆ ಬಂದ ಪು.ತಿ.ನೋ ಚಿತ್ರ ಸೇರುತ್ತದೆ. ಕೆಲ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜೀವನ್ ಗಂಗಾಧರಯ್ಯ ಎಂಬ ಯುವಕ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ದೆಹಲಿ ಗ್ಯಾಂಗ್ ರೇಪ್​ ಆರೋಪಿಯ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರಕ್ಕೆ ಕಥೆ ರಚಿಸಿದ್ದರು. ಚಿತ್ರದ ಉದ್ದಕ್ಕೂ ಯಾವುದೇ ಸಂಭಾಷಣೆಗಳನ್ನು ಬಳಸಿಲ್ಲ. ಈ ಚಿತ್ರದಲ್ಲಿ ಮಹಿಳೆಯರು ತೊಡುವ ಉಡುಪು ಮತ್ತು ಅವರು ಯಾವ ಹೊತ್ತಿನಲ್ಲಾದರೂ ರಸ್ತೆಯಲ್ಲಿ ನಡೆದಾಡಲಿ ಅವರನ್ನು ಪ್ರತಿಯೊಬ್ಬರು ನಿಮ್ಮ ಮನೆಯವರಂತೆ ಟ್ರೀಟ್ ಮಾಡಿ ಎನ್ನುವ ಸಂದೇಶವನ್ನು ನೀಡಿದ್ದಾರೆ. ಕ್ಯಾಬ್​ಗಾಗಿ ಕಾಯುತ್ತಿರುವ ಯುವತಿ ತೊಟ್ಟ ಉಡುಪನ್ನು ನೋಡಿದ ಚಾಲಕ ಅವಳ ಮೇಲೆ ಕೆಟ್ಟ ದೃಷ್ಟಿ ಬೀರುತ್ತಾನೆ. ತಕ್ಷಣ ಅವನಿಗೆ ತನ್ನ ಮಗಳು ಜ್ಞಾಪಕ ಬಂದು ಯಾವುದೇ ಅನಾಹುತ ಮಾಡದೇ ಸುಮ್ಮನಾಗುತ್ತಾನೆ. ಹೀಗೆ ಪ್ರಪಂಚದಲ್ಲಿರುವ ಎಲ್ಲಾ ಮಹಿಳೆಯರನ್ನು ನಮ್ಮ ಮನೆಯವರೆಂದು ತಿಳಿದರೆ ಅತ್ಯಾಚಾರದಂತಹ ಪ್ರಕರಣಗಳು ನಡೆಯುವದೇ ಇಲ್ಲ ಎಂಬ ಸದುದ್ದೇಶ ಈ ಕಿರು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ.

" ನನ್ನ 'ಪು.ತಿ.ನೋ.' ಕಿರು ಚಿತ್ರ ಮಾಡಲು ನನಗೆ ದೆಹಲಿ ಗ್ಯಾಂಗ್ ರೇಪ್​ನ​ ಅಪರಾಧಿ ಕೊಟ್ಟ ಹೇಳಿಕೆಯೇ ಸ್ಪೂರ್ತಿ. ಅಲ್ಲದೆ ಬೆಂಗಳೂರಿನಲ್ಲಿ ಆಗಾಗ್ಗೆ ಕ್ಯಾಬ್ ಚಾಲಕರ ದುರ್ವರ್ತನೆಗಳು ಸ್ಪೂರ್ತಿಯಾಗಿವೆ. ನನ್ನ ಚಿತ್ರದ ಮೂಲಕ ಒಂದಷ್ಟು ಜನ ಎಲ್ಲ ಹೆಣ್ಣು ಮಕ್ಕಳನ್ನು ನಮ್ಮವರೆಂದುಕೊಂಡರೆ ಸಾಕು."
- ಜೀವನ್ ಗಂಗಾಧರಯ್ಯ, ಪು.ತೀ.ನೋ.ನಿರ್ದೇಶಕ
image


ಲೈಂಗಿಕ ದೌರ್ಜನ್ಯಗಳ ವಿರುದ್ಧ ಜನದನಿ

ಜನದನಿ ಎಂಬ ಸಂಘಟನೆ ಲೈಂಗಿಕ ದೌರ್ಜನ್ಯದ ವಿರುದ್ಧ ತನ್ನ ಹೋರಾಟವನ್ನು ಕೆಲ ವರ್ಷಗಳಿಂದ ಮಾಡುತ್ತಾ ಬಂದಿದೆ. ರಂಗಕರ್ಮಿ, ನಟಿ ಜಯಲಕ್ಷ್ಮೀ ಪಾಟೀಲ್ ಅವರ ಈ ಸಂಘಟನೆ ಮೂಲಕ ಎರಡು ಕಿರು ಚಿತ್ರಗಳನ್ನು ತಯಾರಿಸಿದ್ದಾರೆ. ಆ ಎರಡೂ ಚಿತ್ರಗಳೂ ಸಹ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟವು ಎಂಬುದು ವಿಶೇಷ. ಕೆಲ ವರ್ಷಗಳ ಹಿಂದೆ ಜಯಲಕ್ಷ್ಮೀ ಪಾಟೀಲ್ ನಿರ್ಮಾಣದಲ್ಲಿ ಅವರ ಪುತ್ರ ಅಮೋಲ್ ಪಾಟೀಲ್ ಫೀಡಿಂಗ್ ಪಾಯಿಸನ್ ಎಂಬ ಕಿರು ಚಿತ್ರ ನಿರ್ದೇಶಿಸಿದ್ದರು. ಪೋರ್ನ್ ವಿಡಿಯೋಗಳ ಹಾವಳಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಇದು ಬೆಳಕು ಚೆಲ್ಲಿತ್ತು. ಇತ್ತೀಚೆಗೆ ಜಯಲಕ್ಷ್ಮೀ ಪಾಟೀಲ್ ನಿರ್ದೇಶನ ಮಾಡಿದ ‘ನ್ಯಾಯ’ ಎಂಬ ಚಿತ್ರದಲ್ಲಿ ಎಂದೋ ಬಾಲಕಿಯಾಗಿದ್ದಾಗ ಆಗುವ ಅತ್ಯಾಚಾರದಿಂದ ಆ ಹೆಣ್ಣಿನ ಜೀವನ ಹಾಳಾಗಬಾರದು ಎಂಬ ಕಥೆ ಹೊಂದಿದೆ. ಕೇವಲ ಕೆಲ ನಿಮಿಷಗಳಿಗೆ ಸೀಮಿತವಾಗುವ ಈ ಕಿರು ಚಿತ್ರಗಳು ಸಾಕಷ್ಟು ಪರಿಣಾಮಕಾರಿ ಅಂಶಗಳನ್ನು ಹೊಂದಿವೆ. ಇನ್ನು ಮುಂದಿನ ದಿನಗಳಲ್ಲೂ ಇವರ ಸಂಘಟನೆಯಿಂದ ಇಂತಹ ಸಾಮಾಜಿಕ ಸಂದೇಶ ಉಳ್ಳ ಸಾಕಷ್ಟು ಕಿರು ಚಿತ್ರಗಳು ನಿರ್ಮಾಣವಾಗಲಿವೆ. ಒಟ್ಟಿನಲ್ಲಿ ಕಿರು ಚಿತ್ರಗಳೆಂದರೆ ಬರೀ ನಿರ್ದೇಶಕನಾಗಲು ಅರ್ಹತೆ ಗಿಟ್ಟಿಸುವ ಅಂಕಪಟ್ಟಿಯಾಗದೆ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯುವ ಒಂದು ಮಾಧ್ಯಮವಾಗಿರುವುದು ಸಂತಸದ ಸಂಗತಿ.

" ಕಿರು ಚಿತ್ರಗಳು ಬೇಗ ಜನರನ್ನು ತಲುಪುತ್ತವೆ. ಇವುಗಳು ವಿದ್ಯಾವಂತರನ್ನಷ್ಟೇ ಅಲ್ಲದೇ ಅವಿದ್ಯಾವಂತರಿಗೂ ಅರ್ಥವಾಗುತ್ತದೆ ಅದಕ್ಕಾಗಿ ಈ ಮಾರ್ಗವನ್ನು ನಾವು ಆರಿಸಿಕೊಂಡೆವು. ಲೈಂಗಿಕ ದೌರ್ಜನ್ಯ ಎಂದರೆ ಬರೀ ಮಹಿಳೆಯರ ಮೇಲಾಗುವಂತಹದ್ದು ಎಂಬ ನಂಬಿಕೆ ಇದೆ. ಆದರೆ ಲೈಂಗಿಕ ದೌರ್ಜನ್ಯಗಳು ಪುರಷರ ಮೇಲೂ ಆಗುತ್ತವೆ, ಅಂತಹ ದೌರ್ಜನ್ಯದ ವಿರುದ್ಧವೂ ನಮ್ಮ ಸಂಘಟನೆ ಹೋರಾಟ, ಕಿರು ಚಿತ್ರಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತದೆ."
- ಜಯಲಕ್ಷ್ಮೀ ಪಾಟೀಲ್, ಕಿರು ಚಿತ್ರ ನಿರ್ದೇಶಕಿ

ಪ್ರೆಸೆಂಟ್ ಸಾರ್

ಇತ್ತೀಚಿಗೆ ಬಂದ ‘ಪ್ರೆಸೆಂಟ್ ಸರ್’ ಸಹ ಒಂದು. ಯುವ ಟೆಕ್ಕಿ ಆಕರ್ಷ ಅವರು ನಿರ್ದೇಶಿಸಿದ ಈ ಚಿತ್ರ ಗಡಿ ಭಾಗದ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ಬಿಂಬಿಸುವ ಈ ಕಿರು ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಯಶಸ್ವಿಯಾಯಿತು. ಈ ಚಿತ್ರದಲ್ಲಿ ಗಡಿ ಭಾಗದ ಶಾಲೆಗಳ ಪರಿಸ್ಥಿತಿಯನ್ನು ಅವಲೋಕಿಸುತ್ತಲೇ ಈ ಭಾಗದಲ್ಲಿ ಕನ್ನಡದ ಶೋಚನೀಯ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಕೇವಲ 100 ಕಿಲೋಮೀಟರ್ ಅಂತರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಶಾಲೆಯಲ್ಲಿ ಕಲಿತರಷ್ಟೇ ಕನ್ನಡ ಇಲ್ಲದೇ ಹೋದಲ್ಲಿ ಪಕ್ಕದ ರಾಜ್ಯಗಳ ಮಾತೃಭಾಷೆಯೇ ಅಲ್ಲಿನ ಭಾಷೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಒಬ್ಬ ಶಿಕ್ಷಕ ಶಾಲೆ ಉಳಿಸಲು ಹೇಗೆ ಪ್ರಯತ್ನ ಪಡುತ್ತಾನೆ ಎಂಬುದೇ ಈ ಚಿತ್ರದ ಸಾರಾಂಶ. ದೂರದ ಫ್ರಾನ್ಸ್​ನಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿರುವ ಆಕರ್ಷ ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಮತ್ತು ಕನ್ನಡದ ಶಾಲೆಗಳನ್ನು ಮುಚ್ಚವ ಬಗ್ಗೆ ಮಾತನಾಡುತ್ತಿರುವ ಸರ್ಕಾರಕ್ಕೆ ಈ ಕಿರು ಚಿತ್ರ ಒಂದು ಮಾದರಿ.

ಇದನ್ನು ಓದಿ

1. ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

2. 15 ಲಕ್ಷದ ನೌಕರಿ ತೊರೆದು ಹಳೆ ಸೆಲೂನ್ ಗೆ ಹೊಸ ಟಚ್ ನೀಡಿದ ಸ್ನೇಹಿತರು

3. ಇಂಟರ್​ನೆಟ್ ಇಲ್ಲದೆಯೂ ಮೊಬೈಲ್​ನಲ್ಲಿ ಹಣದ ವರ್ಗಾವಣೆ-ಇನ್ಫೋಸಿಸ್​ನ ಮಾಜಿ ಉದ್ಯೋಗಿಯ ವಿಭಿನ್ನ, ವಿನೂತನ ತಂತ್ರಜ್ಞಾನ