ತಂತ್ರಜ್ಞಾನ, ಕಡಿಮೆ ಬಂಡವಾಳ ಮತ್ತು ದೀರ್ಘಾವಧಿಯಲ್ಲಿ ಲಾಭ ..!

ಟೀಮ್​​ ವೈ.ಎಸ್​​.

0

ಮೊದಲೆಲ್ಲ ಭಾರತದಲ್ಲಿ ಜನರಿಗೆ ಮನೆಗೆ ಅಗತ್ಯವಿರುವ ಸಾಮಾನು ಸರಂಜಾಮು, ತಿಂಡಿ-ತಿನಿಸುಗಳನ್ನು ಕೊಳ್ಳಬೇಕೆಂದರೆ ಕಿರಾಣಿ ಅಂಗಡಿಗಳು, ಸಣ್ಣ ಪುಟ್ಟ ಅಂಗಡಿಗಳಿಗೆ ಹೋಗಬೇಕಾಗುತ್ತಿತ್ತು. ಗೃಹ ಬಳಕೆಯ ಅಥವಾ ಬಟ್ಟೆ, ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಬೇಕೆಂದರೆ ಶಾಪ್​​ಗಳಿಗೆ ಅಲೆದಾಡಬೇಕಾಗುತ್ತಿತ್ತು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಕುಳಿತಲ್ಲಿಂದಲೇ ಸಾಧ್ಯವಾಗುತ್ತದೆ.

ಜಗತ್ತು ಅತೀ ವೇಗವಾಗಿ ಬೆಳೆಯುತ್ತಿದೆ. ಚಿಕ್ಕ ಚಿಕ್ಕ ನಗರ, ಪಟ್ಟಣ ಸೇರಿದಂತೆ ಹಳ್ಳಿಗಳಿಗೂ ಅಂತರ್ಜಾಲ ಎಲ್ಲೆಡೆ ಕಾಲಿಟ್ಟಿದೆ. ಜನರು ಪುಟ್ಟ ಪರದೆಯ ಮೇಲೆ ಇಡೀ ಜಗತ್ತನ್ನು ನೋಡುತ್ತಾರೆ. ಇದೇ ಅಂತರ್ಜಾಲದಿಂದಾಗಿ ನಮ್ಮ ಆರ್ಥಿಕ ವ್ಯವಸ್ಥೆಯೂ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇ ಕಾಮರ್ಸ್ ಹಾಗೂ ಎನ್ ಕಾಮರ್ಸ್ ವ್ಯವಸ್ಥೆ ಜನರಿಗೆ ಹೆಚ್ಚು ಪ್ರಿಯವಾಗತೊಡಗಿವೆ. ಇ ಕಾಮರ್ಸ್ ಸಹಾಯದಿಂದ ಜನರು ಬೆರಳ ತುದಿಯಲ್ಲಿಯೇ ತಮಗೆ ಬೇಕಾದದ್ದನ್ನು ಖರೀದಿಸುತ್ತಿದ್ದಾರೆ. ಇದ್ರಿಂದ ಸಣ್ಣ ಪುಟ್ಟ ಅಂಗಡಿಗಳಂತಹ ಅಸಂಘಟಿತ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಜನ್ರು ಇ ಕಾಮರ್ಸ್ ಸೇವೆಗೆ ಮೊರೆ ಹೋಗುತ್ತಿದ್ದರೆ ಇತ್ತ ಅಸಂಘಟಿತ ಕ್ಷೇತ್ರ ಬಡವಾಗುತ್ತಿದೆ. ಈ ಮಧ್ಯೆ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ ಎನ್ ಕಾಮರ್ಸ್ ಎಂಟ್ರಿ ಕೊಟ್ಟಿದೆ.

ಏನಿದು ಎನ್ ಕಾಮರ್ಸ್ ..?

ಶರವೇಗದಿಂದ ಬೆಳೆಯುತ್ತಿರೋ ಅಷ್ಟೇ ಜನರಿಗೆ ಆಪ್ತವಾಗಿರೋ ಈ ನೇಬರ್​​ಹುಡ್ ಕಾಮರ್ಸ್ ತಂತ್ರಜ್ಞಾನದ ಮೂಲಕ ಸ್ಥಳೀಯ ಉತ್ಪನ್ನಗಳಿಗೂ ವೇದಿಕೆ ಒದಗಿಸುತ್ತೆ. ಎನ್ ಕಾಮರ್ಸ್​ನಲ್ಲಿ ಎಲ್ಲಾ ಬೇರೆ ಬೇರೆ ಕಂಪನಿಗಳ ಜೊತೆ ಸ್ಥಳೀಯ ಉತ್ಪನ್ನಗಳ ಜೊತೆಯೂ ಟೈಅಪ್ ಮಾಡಿಕೊಳ್ಳಲಾಗುತ್ತೆ. ಇದರಿಂದಾಗಿಯೇ ಗ್ರಾಹಕರಿಗೆ ಸಾಕಷ್ಟು ವೈವಿಧ್ಯತೆಗಳು ದೊರಕೋದ್ರಿಂದ ಈ ಉದ್ಯಮಕ್ಕೆ ಗ್ರಾಹಕರು ಮನಸೋಲುತ್ತಿದಾರೆ.

ಆದ್ರೆ ಇಂದಿನ ಸ್ಪರ್ಧಾಯುಗದಲ್ಲಿ ದೀರ್ಘಾವಧಿ ಮಾರುಕಟ್ಟೆಯಲ್ಲಿ ಇವು ಹೇಗೆ ತನ್ನ ಪ್ರಭಾವ ಉಳಿಸಿಕೊಳ್ಳುತ್ತವೆ ಅನ್ನೋ ಪ್ರಶ್ನೆ ಎದುರಾಗೋದು ಸಹಜ. ಅವು ದೀರ್ಘಾವಧಿಯಲ್ಲಿ ಯಶಸ್ವಿಯಾಗೋಕೆ ಯಾವ ತಂತ್ರಗಳನ್ನು ಹೆಣೆದಿವೆ ಅನ್ನೋದನ್ನು ನೋಡೊದಕ್ಕಿಂತ ಮೊದಲು ಪ್ರಸ್ತುತ ಚಾಲ್ತಿಯಲ್ಲಿರೋ ವಿವಿಧ ವ್ಯವಹಾರಗಳ ವಿಧಾನಗಳನ್ನು ಅರ್ಥಮಾಡಿಕೊಳ್ಳೋಣ.

ಮಾರುಕಟ್ಟೆಯಲ್ಲಿ ವ್ಯವಹಾರ ಮಾಡೋಕೆ ಬಂಡವಾಳವಂತೂ ಬೇಕೇ ಬೇಕು. ಆದ್ರೆ ಕೆಲವೊಂದು ವಿಧಾನಗಳಿಗೆ ಬಹಳಷ್ಟು ಬಂಡವಾಳ ಬೇಕಾಗುತ್ತದೆ. ಇನ್ನು ಕೆಲವು ಅತಿ ಕಡಿಮೆ ಬಂಡವಾಳ ಬಯಸುವಂಥವು. ಅಂದ್ರೆ ಆ ವಿಧಾನಗಳನ್ನು ಸ್ಥಿರಾಸ್ತಿಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯ ಇಲ್ಲ. ಎನ್ ಕಾಮರ್ಸ್ ದೊಡ್ಡ ಸಂಸ್ಥೆಗಳಾದ ಬಿಗ್ ಬಾಸ್ಕೆಟ್, ಲೋಕಲ್ ಬಾನಿಯಾ, ಮುಂತಾದವುಗಳು ತಮ್ಮ ದಾಸ್ತಾನುಗಳನ್ನು ತಾವೇ ನಿರ್ವಹಿಸುತ್ತವೆ. ಗೋದಾಮು, ಸಾಗಣೆ ಸೇರಿದಂತೆ ಎಲ್ಲಾ ವ್ಯವಹಾರಗಳನ್ನೂ ತಾನೇ ನಿರ್ವಹಿಸುತ್ತೆ. ಆದರೆ ಬೇರೆ ಕಂಪನಿಗಳಾದ ಗ್ರೋಫರ್ಸ್, ಜಾಪ್ ನೌ ಮುಂತಾದವುಗಳು ತಮ್ಮದೇ ಆದ ವಿತರಣಾ ವ್ಯಸ್ಥೆಯನು ಹೊಂದಿವೆ. ಆದ್ರೆ ಗೋದಾಮುಗಳನ್ನು ಹೊಂದಿಲ್ಲ.

ಮತ್ತೆ ಕೆಲ ಸಂಸ್ಥೆಗಳಾದ ಲೇಜಿಲ್ಯಾಡ್, ಅರ್ಬನ್ ಕ್ಲಾಪ್, ಜಾಫರ್ ಮುಂತಾದವುಗಳು ತುಂಬಾ ಕಡಿಮೆ ಸಂಪತ್ತನ್ನು ಹೊಂದಿದ್ದು ಅವುಗಳು ಬೇರೆ ಮತ್ತೊಂದು ಕಂಪನಿಯ ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿ ವ್ಯವಹಾರ ಮಾಡುತ್ತವೆ. ಅಲ್ಲದೇ ಇವು ಯಾವುದೇ ದಾಸ್ತಾನು ವ್ಯವಸ್ಥೆ ಮತ್ತು ಸಾರಿಗೆ ಸಂಪರ್ಕ ವ್ಯವಸ್ಥೆ ಹೊಂದಿರುವುದಿಲ್ಲ. ಆದ್ರೆ ಕಡಿಮೆ ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡುವಂಥ ಎನ್ ಕಾಮರ್ಸ್ ಕಂಪನಿಗಳು ದೀರ್ಘಾವಧಿಯಲ್ಲಿ ಅನುಕೂಲ ಮತ್ತು ಲಾಭವನ್ನು ಹೊಂದುತ್ತವೆ.

ಗ್ರಾಹಕ ಸಂತೃಪ್ತಿಯ ಕಡೆಗೆ ಏಕಮುಖ ದೃಷ್ಟಿಕೋನ

ಈಗಾಗಲೇ ಜನರು ಶಾಪ್​​ಗಳ ಬದಲಾಗಿ ಇ ಕಾಮರ್ಸ್ ಹಾಗೂ ಎನ್ ಕಾಮರ್ಸ್​ಗಳತ್ತ ಮುಖಮಾಡುತ್ತಿದ್ದಾರೆ. ಇದರಲ್ಲೇ ಸಾಕಷ್ಟು ವೆರೈಟಿಗಳು ಹಾಗೂ ಆಫರ್​​ಗಳೂ ಸಿಗೋದ್ರಿಂದ ಸುಲಭಕ್ಕೆ ಮಾರುಹೋಗುತ್ತಿದ್ದಾರೆ. ತಂತ್ರಜ್ಞಾನ ಎನ್ ಕಾಮರ್ಸ್ ಮೂಲದ ಕಂಪನಿಗಳಿಗೆ ಒಂದು ವರದಾನವಾಗಿದೆ. ತುಂಬಾ ವೆಚ್ಚದ ಆಸ್ತಿಗಳನ್ನು ಕೊಂಡು, ಅದಕ್ಕೆ ದುಬಾರಿ ಬಂಡವಾಳ ಹಾಕಿ ಶ್ರಮ ಪಡುವುದಕ್ಕಿಂತ ಸರಳವಾದ ಹಾಗೂ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆದ್ರೆ ಇದೇ ಟೆಕ್ನಾಲಜಿಯನ್ನು ಮೇಲ್ದರ್ಜೆಗೇರಿಸೋದು ಗ್ರಾಹಕರ ಸಂತೃಪ್ತಿಯ ದೃಷ್ಟಿಯಿಂದ ಅನಿವಾರ್ಯವಾಗಿದೆ.

ಲಾಭಾಂಶದ ಹೆಚ್ಚಳ

ಸ್ಥಿರಾಸ್ತಿ ಹೆಚ್ಚು ಹೊಂದಿದ್ದಾರೆ ಅಂದ ಮಾತ್ರಕ್ಕೆ ಅವರಿಗೆ ರಿಸ್ಕ್ ಕಡಿಮೆ ಲಾಭ ಜಾಸ್ತಿ ಎಂದೇನಿಲ್ಲ. ಸ್ಥಿರಾಸ್ತಿ ಕಡಿಮೆ ಹೊಂದಿರೋ ಕಂಪನಿಗಳು ನಿಶ್ಚಿತವಾಗಿ ಅತಿ ಕಡಿಮೆ ನಿರ್ವಹಣೆ ವೆಚ್ಚ, ಹಣದ ಹರಿವು ಮತ್ತು ಅತಿ ಕಡಿಮೆ ರಿಸ್ಕ್ ಹೊಂದಿರುತ್ತವೆ. ದೀರ್ಘಾವಧಿಯಲ್ಲಿ ಒಂದು ಲಾಭದಾಯಕ ಕಂಪನಿಯಾಗಿ ಬೆಳೆಯಲು ಎನ್ ಕಾಮರ್ಸ್ ಕಂಪನಿಗಳು ಲಾಭಾಂಶದ ಮತ್ತು ಕಡಿಮೆ ಸ್ಥಿರಾಸ್ತಿಯ ಕಡೆಗೆ ಗಮನ ಹರಿಸಬೇಕು. ಯಶಸ್ವಿ ವ್ಯವಹಾರಕ್ಕಾಗಿ ಈ ಕಂಪನಿಗಳು ಗ್ರಾಹಕರ ಸಂತೃಪ್ತಿ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಅಷ್ಟಾದಲ್ಲಿ ಲಾಭಾಂಶದ ಮಟ್ಟ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಒಟ್ಟಾರೆಯಾಗಿ ಕಡಿಮೆ ಸ್ಥಿರಾಸ್ತಿಯನ್ನು ಹೊಂದಿರುವ ಎನ್ ಕಾಮರ್ಸ್ ಬ್ಯುಸಿನೆಸ್​​ಮ್ಯಾನ್​​ಗಳು ತಂತ್ರಜ್ಞಾನದ ಸಹಾಯದೊಂದಿಗೆ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರ ಮನಸ್ಸನ್ನು ಗೆಲ್ಲುತ್ತಾರೆ. ಜೊತೆಗೆ ಯಶಸ್ವಿ ವಹಿವಾಟು ನಡೆಸುತ್ತಾರೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ.

Related Stories