ಸವಾಲು ಎದುರಿಸಿದ ಗಟ್ಟಿಗಿತ್ತಿ ಈಗ ರೆಸ್ಟೋರೆಂಟ್ ಒಡತಿ

ಟೀಮ್​​ ವೈ.ಎಸ್​​.ಕನ್ನಡ

ಸವಾಲು ಎದುರಿಸಿದ ಗಟ್ಟಿಗಿತ್ತಿ ಈಗ ರೆಸ್ಟೋರೆಂಟ್ ಒಡತಿ

Wednesday November 25, 2015,

4 min Read

ಅವರು ಶಿಕ್ಷಣ ತಜೆ, ಇನ್ಷುರೆನ್ಸ್ ವೃತ್ತಿಪರೆ, ರೆಸ್ಟೋರೆಂಟ್ ಒಡತಿ, ತಾಯಿ! ಇವೆಲ್ಲವೂ ಸೇರಿದರೆ ಬಹುಮುಖ ಪ್ರತಿಭೆಯ ಪಾಯಲ್ ಅಗರ್ವಾಲ್!

ಈ ಎಲ್ಲಾ ಪಾತ್ರಗಳು ಅವರಿಗೆ ಬದುಕಿನಲ್ಲಿ ನೂರಾರು ಸವಾಲುಗಳನ್ನು ತಂದೊಡ್ಡಿದ್ದವು. ಅದೆಲ್ಲವನ್ನೂ ಅವರು ಧೈರ್ಯದಿಂದ ಎದುರಿಸಿದರು. ತಾನು ನಿರ್ವಹಿಸುವ ಪ್ರತಿಯೊಂದು ಪಾತ್ರಕ್ಕೂ ಪಾಯಲ್ ಅವರು ತನ್ನ ಸಂಪೂರ್ಣ ಶಕ್ತಿ ವಿನಿಯೋಗಿಸಿ ಗೆದ್ದಿದ್ದಾರೆ. ಅವರೇ ಹೇಳುವ ಹಾಗೆ ಜೀವನವೇ ಅವರಿಗೆ ದೊಡ್ಡ ಗುರು.

image


ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಪಾಯಲ್, ಅವರ ಜೋಡಿ ಕುಟುಂಬದಲ್ಲಿ ನಾಲ್ಕನೇ ಪುತ್ರಿ. ತಂದೆ ತಾಯಿಗೆ ಮೊದಲ ಪುತ್ರಿ. ಪಶ್ಚಿಮ ಬಂಗಾಳದ ಮುಂಗ್ಪೂ ಎಂಬ ಪುಟ್ಟ ಪಟ್ಟಣದಲ್ಲಿ ಹುಟ್ಟಿದ್ದರು ಪಾಯಲ್. ಆದ್ರೆ, ಅವರು ಚಿಕ್ಕವರಿದ್ದಾಗಲೇ ತಂದೆ ಉದ್ಯೋಗ ನಿಮಿತ್ತ ಸಿಲಿಗುರಿಗೆ ಕುಟುಂಬವನ್ನು ಸ್ಥಳಾಂತರಿಸಿದರು. ಪಾಯಲ್ ಅಲ್ಲೇ 12ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ಕುಟುಂಬದ ಆದಾಯ ಕಡಿಮೆ ಇದ್ದ ಕಾರಣ, ಪಾಯಲ್ ಮುಂದೆ ಓದಲು ಸಾಧ್ಯವಾಗಲಿಲ್ಲ. 19ನೇ ವಯಸ್ಸಿನಲ್ಲಿಯೇ ಪಾಯಲ್​​ಗೆ ಮದುವೆಯನ್ನೂ ಮಾಡಿ ಬಿಟ್ಟರು.

ಇದು ಎಲ್ಲಾ ಹುಡುಗಿಯರು ಜಗತ್ತನ್ನು ಆಸ್ವಾದಿಸುತ್ತಾ ತಮ್ಮದೇ ವೃತ್ತಿಜೀವನವನ್ನು ಅರಸು ಕಾಲ. ಆದ್ರೆ, ಪಾಯಲ್ ಬದುಕಿನಲ್ಲಿ ಎಲ್ಲವೂ ಉಲ್ಟಾಪಲ್ಟಾ. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಗರ್ಭಧರಿಸಿದರು. ಆದರೆ ಅದು ಉಳಿಯಲಿಲ್ಲ. ಇನ್ನೆಂದೂ ನೀವು ಗರ್ಭಧರಿಸಲು ಸಾಧ್ಯವಿಲ್ಲ. ನೀವು ತಾಯಿಯಾಗಲ್ಲ ಎಂದು ವೈದ್ಯರು ಹೇಳಿದಾಗ ಇಡೀ ಜಗತ್ತೇ ಕುಸಿದು ಬಿದ್ದ ಅನುಭವವಾಗಿತ್ತು ಪಾಯಲ್ ಅವರಿಗೆ. ಆದರೆ, ಆ ಭಗವಂತನಿಗೆ ಅದ್ಭುತ ಸೃಷ್ಟಿಸೋ ಸಾಮರ್ಥ್ಯವಿದೆ ಎನ್ನುವುದು ಪಾಯಲ್ ಅವರ ಗಟ್ಟಿನಂಬಿಕೆಯಾಗಿತ್ತು.

ಆ ನಂಬಿಕೆ ಸುಳ್ಳಾಗಲಿಲ್ಲ. ಈ ಘಟನೆಯಾಗಿ ವರ್ಷ ಕಳೆಯುವಷ್ಟರಲ್ಲಿ ಮತ್ತೊಮ್ಮೆ ಗರ್ಭ ಧರಿಸಿದರು. ಮುದ್ದಾದ ಗಂಡು ಮಗುವಿಗೂ ಜನ್ಮ ಕೊಟ್ಟರು.

ಉದ್ಯಮಿಯಾದ ಪಾಯಲ್

ಮೊದಲ ಗರ್ಭಪಾತವಾದಾಗಲೇ ಅವರು ಪ್ಲೇಸ್ಕೂಲ್ ಆರಂಭಿಸಲು ಚಿಂತಿಸಿದ್ದರು. ಮಕ್ಕಳ ಜೊತೆಗೆ ಸಮಯ ಕಳೆಯುವುದು ಅವರ ಬಯಕೆಯಾಗಿತ್ತು. ಅದಕ್ಕೆ ಮಾವನವರಿಂದ ಸಂಪೂರ್ಣ ಬೆಂಬಲ ಸಿಕ್ಕಿತ್ತು. “ನನ್ನನ್ನು ಬೆಂಬಲಿಸಿದ್ದು ಅವರು ಮಾತ್ರ. ನಾನು ಇದನ್ನು ನಡೆಸಬಲ್ಲೆ ಎಂಬ ವಿಶ್ವಾಸ ತುಂಬಿದ್ದು ಕೂಡಾ ಅವರೇ.” ಎನ್ನಿತ್ತಾರೆ ಪಾಯಲ್. ಈ ಪುಟ್ಟ ಮಕ್ಕಳೊಂದಿಗೆ ಆಟವಾಡುತ್ತಾ ಅವರಿಗೆ ತರಬೇತಿ ನೀಡುತ್ತಿದ್ದದ್ದಕ್ಕೆ ಇರಬೇಕೇನೋ, ಪಾಯಲ್ ಎರಡನೇ ಬಾರಿ ಗರ್ಭಿಣಿಯಾದರು.

ಮಗು ಹುಟ್ಟಿದ್ದು ಅವರ ಜವಬ್ದಾರಿಯನ್ನು ಹೆಚ್ಚು ಮಾಡಿತ್ತು. ಅದರಿಂದ ಅವರು ಹಿಂದೆ ಸರಿಯಿಲ್ಲ. ಅವರ ಪತಿ ಯಾವುದಾದರೊಂದು ಕೆಲಸ ಮಾಡುತ್ತಿದ್ದರು. ಅವರ ಆದಾಯ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಇನ್ಸುರೆನ್ಸ್ ಕಂಪನಿಯೊಂದರಲ್ಲಿ ಪಾಯಲ್ ಕೆಲಸಕ್ಕೆ ಸೇರಿಕೊಂಡರು. ಅಂದ ಹಾಗೆ ಅವರ ಬಳಿ ಯಾವುದೇ ಪದವಿ ಇರಲಿಲ್ಲ !

ಅವರು ಕೆಲಸ ಮಾಡುತ್ತಲೇ ಅದರ ಪಟ್ಟುಗಳನ್ನು ತಿಳಿದುಕೊಂಡರು. 5 ವರ್ಷಗಳ ಕಾಲ ಇನ್ಷುರೆನ್ಸ್ ವಲಯದಲ್ಲಿ ಕೆಲಸ ಮಾಡಿದರು. ಪ್ರಶಂಸೆಯನ್ನೂ ಗಳಿಸಿದರು. ಅವರ ಅತ್ತೆಯವರು ಮಗುವಿನ ಲಾಲನೆ ಪಾಲನೆ ನೋಡಿಕೊಂಡರು. ಇನ್ಷುರೆನ್ಸ್ ವಲಯದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರು ತುಂಬಾನೇ ಪ್ರಯಾಣ ಮಾಡಬೇಕಾಗಿ ಬರುತ್ತಿತ್ತು.

ಆದರೆ, ಬದುಕಿನಲ್ಲಿ ಮತ್ತೊಂದು ಅನಿರೀಕ್ಷಿತ ತಿರುವು ಎದುರಾಗಿತ್ತು, ಪಾಯಲ್ ಕವಲು ದಾರಿಯಲ್ಲಿ ನಿಂತಿದ್ದರು. ಪಾಯಲ್ ತಂದೆಯನ್ನು ಕಳೆದುಕೊಂಡರು. ಪತಿ ಬೇರೆ ಮಹಿಳೆಯ ಜೊತೆ ಸಂಸಾರ ಶುರು ಮಾಡಿದ್ದ. ಪಾಯಲ್ ತವರಿಗೆ ವಾಪಸ್ ಬಂದರು. ತಾಯಿ, ಇಬ್ಬರು ಸಹೋದರರು ಮತ್ತು 7 ವರ್ಷದ ಮಗನ ಜೊತೆ ವಾಸಿಸಲಾರಂಭಿಸಿದರು. ಹೀಗಾಗಿ, ಇನ್ಷುರೆನ್ಸ್ ಕೆಲಸಕ್ಕೆ ಗುಡ್ಬೈ ಹೇಳಬೇಕಾಯಿತು. ಪ್ಲೇ ಸ್ಕೂಲ್ ಅನ್ನೂ ಮುಚ್ಚಬೇಕಾಯಿತು. ಏಕೆಂದರೆ, ಸ್ಕೂಲ್ನ ಜಾಗ ಪತಿಯ ಒಡೆತನಕ್ಕೆ ಸೇರಿತ್ತು.

image


ಬದುಕುವುದು ಕಷ್ಟವಾಗಿತ್ತು… ಪಾಯಲ್ ಬದುಕಲಾರಂಭಿಸಿದರು

ಬದುಕಲ್ಲಿ ಕಷ್ಟ ಎದುರಾದಾಗಲೇ ಮನುಷ್ಯ ಗಟ್ಟಿಯಗುತ್ತಾನಂತೆ. ಪಾಯಲ್ ಕೂಡಾ ಇಂತಹದ್ದೇ ಪರಿಸ್ಥಿತಿಗೆ ಸಿಲುಕಿದ್ದರು. ಕೈಯಲ್ಲಿ ಪದವಿ ಇಲ್ಲದಿದ್ದ ಕಾರಣ, ಅವರಿಗೆ ವೃತ್ತಿಯಲ್ಲಿ ಅವಕಾಶಗಳೂ ಕಡಿಮೆಯಾಗಿದ್ದವು. ಬೇರೆ ದಾರಿಯೇ ಕಾಣದಾಗಿತ್ತು. ಆದರೆ, ಈಗ ಅವರ ಕುಟುಂಬಕ್ಕೆ ಅವರೇ ಊಟ ತಂದುಕೊಡಬೇಕಿತ್ತು.

ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಸ್ಫೂರ್ತಿ ತುಂಬಿದ್ದೇ ದಿವಂಗತ ತಂದೆಯವರು ಹೇಳಿದ್ದ ಮಾತುಗಳು. ನಾನು ಚಿಕ್ಕವಳಿದ್ದಾಗಲೇ ಅಡುಗೆ ಕಾರ್ಯಕ್ರಮಗಳನ್ನು ಹೆಚ್ಚು ಇಷ್ಟ ಪಟ್ಟು ವೀಕ್ಷಿಸುತ್ತಿದ್ದೆ. ನಾನು ಸ್ವಂತ ಕ್ಯಾಟರಿಂಗ್ ಉದ್ಯಮ ಸ್ಥಾಪಿಸಬೇಕು ಎಂದು ತಂದೆಯವರು ಹೇಳುತ್ತಿದ್ದರು. ಅಪ್ಪನ ಕನಸನ್ನು ನನಸಾಗಿಸಲು ಇದೇ ಸರಿಯಾದ ಸಂದರ್ಭ ಎಂದು ನಾನು ನಿರ್ಧರಿಸಿದೆ. ದೇವರ ಮೇಲೆ ಭರವಸೆ ಇಟ್ಟುಕೊಂಡು ಹಿಂಜರಿಯುತ್ತಲೇ ನಾನು ಸಿಲಿಗುರಿಯಲ್ಲಿ ಮೊದಲ ರೆಸ್ಟೋರೆಂಟ್ ಆರಂಭಿಸಿದೆ.’ ಎನ್ನುತ್ತಾರೆ ಪಾಯಲ್. ಈಗ ಪಾಯಲ್ ಅವು ರೋಮ್ಹರ್ಷ್ ಹಾಸ್ಪಿಟಾಲಿಟಿ ಗ್ರೂಪ್​​ನ ಮ್ಯಾನೇಜಿಂಗ್ ಡೈರೆಕ್ಟರ್. ಈ ಗ್ರೂಪ್​​ನಲ್ಲಿ ಈಗ ಎರಡು ರೆಸ್ಟೋರೆಂಟ್​​ಗಳು ಮತ್ತು ಒಂದು ಬ್ಯಾಂಕ್ವೆಟ್ ಹಾಲ್ ಇದೆ.

ಮಹಿಳಾ ಉದ್ಯಮಿಯಾಗಿ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ಅವರು ಎಂದಿಗೂ ಮರೆತಿಲ್ಲ. 15 ವರ್ಷಗಳ ಕಾಲ ಇಡೀ ಕುಟುಂಬವನ್ನು ಸಾಕುವ ಜವಬ್ದಾರಿ ಹೊತ್ತಿದ್ದ ಪಾಯಲ್ ಅವರು ಯಾವುದೇ ಕೆಲಸನ್ನು ನಿರಾಕರಿಸುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನುತ್ತಾರೆ ಪಾಯಲ್.

ನಾನು ಮಹಿಳಾ ಉದ್ಯಮಿ ಎನ್ನುವುದನ್ನೇ ಆರಂಭದಲ್ಲಿ ಮರೆತು ಬಿಟ್ಟಿದ್ದೆ. ಪುರುಷ ಪ್ರಧಾನ ಈ ಉದ್ಯಮದಲ್ಲಿ ನಾನು ಎಲ್ಲಾ ತರಹದ ಸವಾಲುಗಳನ್ನೂ ಎದುರಿಸಿದ್ದೇನೆ.

33 ವರ್ಷದ ಈ ಉದ್ಯಮಿ ಬದುಕಿನಲ್ಲಿ ಒಂದನ್ನಂತೂ ಅರ್ಥಮಾಡಿಕೊಂಡಿದ್ದಾರೆ. ಜೀವನ ನಿಮಗೆ ನಿಂಬೆಹಣ್ಣು ಕೊಟ್ಟರೆ ಅದರಿಂದ ಪಾನಕ ತಯಾರಿಸಿಕೊಳ್ಳಿ ಎನ್ನುವುದೇ ಅವರ ತತ್ವ.

ಉದ್ಯಮ ಆರಂಭಿಸಿದ ದಿನಗಳಲ್ಲಿ ಟೀಕೆಗಳನ್ನು ಮಾಡುತ್ತಿದ್ದವರನ್ನೆಲ್ಲಾ ಅವರು ಇದೇ ದೃಷ್ಟಿಯಿಂದ ಕಾಣುತ್ತಿದ್ದರು. ನನ್ನ ಮಗನ ಕಣ್ಣೀರೇ ನನಗೆ ಕಷ್ಟಪಟ್ಟು ದುಡಿಯಲು ಪ್ರೇರಣೆಯಾಗಿದ್ದು. ಒಂದಲ್ಲಾ ಒಂದು ದಿನ ನಾನು ಹೆಮ್ಮೆಯ ತಾಯಿಯಾಗುತ್ತೇನೆ ಎನ್ನುವ ವಿಶ್ವಾಸ ಅವರಲ್ಲಿ ಮೂಡಿಸಿದ್ದು, ಎನ್ನುತ್ತಾರೆ ಪಾಯಲ್. ಒಬ್ಬಂಟಿ ತಾಯಿಯನ್ನು ಈ ಸಮಾಜ ನೋಡುವ ದೃಷ್ಟಿಯ ಬಗ್ಗೆಯೂ ಅವರಿಗೆ ವಿಪರೀತ ಸಿಟ್ಟಿದೆ.

ಅವರ ಆದರ್ಶ

ಭಾರತ್ ಹೊಟೇಲ್ಸ್​​ನ ಸಿಎಂಡಿ ಜ್ಯೋತ್ಸ್ನಾ ಸುರಿಯೇ ಪಾಯಲ್ ಅವರ ಆದರ್ಶ ಪ್ರಾಯರು. ಅವರನ್ನು ಒಂದಲ್ಲಾ ಒಂದು ದಿನ ನೇರವಾಗಿಯೇ ಭೇಟಿ ಮಾಡುವ ಆಸೆ ಇಟ್ಟುಕೊಂಡಿದ್ದಾರೆ.ಅವರ ಇನ್ನೊಬ್ಬರು ಆದರ್ಶ ವ್ಯಕ್ತಿ ದೀಪಾ ಮಲ್ಲಿಕ್. ಓಡಲು ಕಾಲುಗಳ ಅವಶ್ಯಕತೆ ಇಲ್ಲ, ಗಟ್ಟಿಯಾದ ಮಾನಸಿಕ ದೃಢತೆ ಬೇಕು ಎಂದು ಪಾಯಲ್ಅವರಲ್ಲಿ ವಿಶ್ವಾಸ ತುಂಬಿದ್ದೇ ಅವರು. ಪ್ರಖ್ಯಾತ ಅಡುಗೆ ಕಾರ್ಯಕ್ರಮದ ನಿರೂಪಕಿ ನಿಗೆಲ್ಲಾ ಲಾಸನ್ ಅವರು ಮತ್ತೊಂದು ಸ್ಪೂರ್ತಿ. ಅವರ ಕೈಗೆ ಒಂದಿಷ್ಟು ಸಾಂಬಾರ ಸಾಮಗ್ರಿಗಳನ್ನು ಕೊಡಿ, ಕೆಲವೇ ನಿಮಿಷಗಳಲ್ಲಿ ಬಾಯಲ್ಲಿ ನೀರೂರಿಸುವ ತಿಂಡಿ ತಯಾರಿಸಿಕೊಡುತ್ತಾರೆ. ನಾನೂ ಅವರ ಹಾಗೆಯೇ, ಅಡುಗೆಯಲ್ಲಿ ಎತ್ತಿದ ಕೈ ಆಗಬೇಕೆಂದು ಬಯಸುತ್ತೇನೆ ಎನ್ನುತ್ತಾರೆ ಪಾಯಲ್.

ಪ್ರತಿ ಪುರುಷರಿಗೂ ಗೌರವ ಕೊಡಿ, ಆದರೆ ಯಾವ ಪುರುಷರೂ ನಿಮಗೆ ಅಗೌರವ ಕೊಡದಂತೆ ನೋಡಿಕೊಳ್ಳಿ ಎನ್ನುತ್ತಾರೆ ಪಾಯಲ್.

ಪಾಯಲ್ ಅವರಿಗೆ ಅವರೇ ಬೆಸ್ಟ್ ಫ್ರೆಂಡ್. ಒಬ್ಬಂಟಿ ತಾಯಿಯಾಗಿದ್ದುಕೊಂಡು, ಅದರಲ್ಲೂ ಸಮಾಜವನ್ನು ಎದುರಿಸಿಕೊಂಡು ಬದುಕುವುದು ಸುಲಭದ ಕೆಲಸವಲ್ಲ. ಆದರೆ, ಉದ್ಯಮದ ಜೊತೆಜೊತೆಗೇ ಸಮಾಜವನ್ನೂ ಅವರು ನಿಭಾಯಿಸಿದರು. ತನ್ನಂತೆಯೇ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುವ ಮಹಿಳೆಯರಿಗೆ ಬೆಂಬಲ ನೀಡಲು ಎನ್​​ಜಿಒ ಒಂದನ್ನೂ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ ಪಾಯಲ್.

ಲೇಖಕರು: ಸಾಸ್ವತಿ ಮುಖರ್ಜಿ

ಅನುವಾದಕರು: ಪ್ರೀತಮ್​​​