ಓಲಾ, ಉಬರ್ ಸೇರಿದಂತೆ ಟ್ಯಾಕ್ಸಿ ಸಮುದಾಯದವರಿಗೆ ಹೊಸ ನೀತಿ ರೂಪಿಸುವತ್ತ ರಾಜ್ಯ ಸರ್ಕಾರಗಳ ಚಿಂತನೆ

ಟೀಮ್​ ವೈ.ಎಸ್​. ಕನ್ನಡ

0

ಕರ್ನಾಟಕದಲ್ಲಿ ಪೀಕ್ ಟೈಂ ಚಾರ್ಜ್‌ಗಳನ್ನು ಇದೇ ರೀತಿ ಮುಂದುವರೆಸಿದರೆ ಓಲಾ ಮತ್ತು ಉಬರ್ ಸಂಸ್ಥೆಯ ವಾಹನ ಚಾಲಕರ ವಾಹನಾ ಚಾಲನಾ ಪರವಾನಗಿ ಅಮಾನತುಗೊಳ್ಳುತ್ತದೆ. ದೆಹಲಿ, ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಟ್ಯಾಕ್ಸಿ ಚಾಲಕರು ತಮ್ಮ ಸೇವೆಯನ್ನು ಮುಂದುವರೆಸಬೇಕೆಂದಿದ್ದರೆ ಆಪರೇಟರ್ಸ್ ಲೈಸೆನ್ಸ್ ಪಡೆಯಲೇಬೇಕಾಗಿದೆ. ಕೇರಳದಲ್ಲಂತೂ ಇಂತಹ ಟ್ಯಾಕ್ಸಿ ಚಾಲಕರ ಮೇಲೆ ಪೊಲೀಸರ ಕಟ್ಟುನಿಟ್ಟಿನ ನಿಗಾ ಇಡಲಾಗುತ್ತದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಇಂತಹ ಪದ್ಧತಿ ಜಾರಿಯಾಗುತ್ತದೆ ಅಂತ ಹೇಳಲಾಗ್ತಿದೆ.

ಈ ರೀತಿಯ ಕ್ಯಾಬ್ ಸಂಸ್ಥೆಗಳ ಬಿಸಿನೆಸ್ ಮಾದರಿಯಿಂದ ಭಾರತದ ಟ್ಯಾಕ್ಸಿ ಚಾಲಕರು ಕಳೆದ ಕೆಲ ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಓಲಾ ಮತ್ತು ಉಬರ್‌ ಸಂಸ್ಥೆಗಳೆರಡು ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿವೆ. ಆದರೆ ಇವರು ಟ್ಯಾಕ್ಸಿ ಆಪರೇಟರ್‌ಗಳಲ್ಲ. ಇವರಿಗೆ ಪ್ರಸ್ತುತ ಟ್ಯಾಕ್ಸಿ ಡ್ರೈವರ್‌ಗಳಿಗೆ ಅನ್ವಯಿಸುವ ಯಾವುದೇ ರೀತಿಯ ನಿಯಮಾವಳಿಗಳೂ ಅನ್ವಯಿಸುವುದಿಲ್ಲ.

ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ನೀಡಿ ಟ್ಯಾಕ್ಸಿ ಸೇವೆಗಳಿಗೆ ತಮ್ಮದೇ ಆದ ಕಾನೂನು ರೂಪಿಸುವಂತೆ ವಿವಿಧ ರಾಜ್ಯಗಳಿಗೆ ಆದೇಶ ಹೊರಡಿಸಿತ್ತು. ಪುನರ್​​ರಚನೆಯಾದ ನಿಯಮಾವಳಿಗಳು ಪ್ರಸ್ತುತ ರಾಜ್ಯಸರ್ಕಾರಗಳ ಭದ್ರತೆಯಲ್ಲಿವೆ. ಇವುಗಳು ವರ್ಷಾಂತ್ಯದೊಳಗೆ ಜಾರಿಯಾಗಲೇಬೇಕಿದೆ.

ಓಲಾ ಮತ್ತು ಉಬರ್‌ ಇದರಿಂದ ಸಮಸ್ಯೆ ಎದುರಿಸುತ್ತಿದೆ. ಏಕೆಂದರೆ ಪ್ರತಿ ರಾಜ್ಯಗಳು ವಿಭಿನ್ನ ರೀತಿಯ ನಿಯಮಾವಳಿಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯಗಳಿಗನುಗುಣವಾಗಿ ಈ ಸಂಸ್ಥೆ ತನ್ನ ನೀತಿ ನಿಯಮಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಆದರೆ ಇದರ ಬಗ್ಗೆ ಓಲಾ ಮತ್ತು ಉಬರ್ ಸಂಸ್ಥೆಗಳು ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಎಲ್ಲಾ ರಾಜ್ಯಸರ್ಕಾರಗಳ ಸಾಮಾನ್ಯವಾದ ವಾದ ಏನೆಂದರೆ ಟ್ಯಾಕ್ಸಿ ಚಾಲಕರ ಸಮುದಾಯದವರು ಭಾರತ ಮೋಟಾರ್ ವೆಹಿಕಲ್ ಆ್ಯಕ್ಟ್ ನ ಸೆಕ್ಷನ್ 93 ಅಡಿಯಲ್ಲಿ ಪರವಾನಗಿ ಪಡೆಯಬೇಕು. ಇದರ ಪ್ರಕಾರ ಕಾರ್ಯನಿರ್ವಾಹಕ ಪರವಾನಿಗೆ ಇಲ್ಲದೇ ಸಾರ್ವಜನಿಕ ಸೇವಾ ವಾಹನಗಳು ಅಥವಾ ಇತರ ರೀತಿಯ ವಾಹನ ಸೇವೆಗಳಿಗೆ ಯಾವುದೇ ವ್ಯಕ್ತಿ ಸ್ವತಃ ವಾಹನ ಚಾಲನೆಯಲ್ಲಿ ತೊಡಗಿಕೊಳ್ಳುವಂತಿಲ್ಲ. ಅಥವಾ ಏಜೆಂಟ್ ಆಗಿ ಕಾರ್ಯನಿರ್ವಹಿಸುವಂತಿಲ್ಲ. ಗ್ರಾಹಕರಿಗೆ ವಾಹನ ಸೇವೆ ಒದಗಿಸುವಂತಿಲ್ಲ. ಇದರರ್ಥ ಓಲಾ ಮತ್ತು ಉಬರ್ ಸಂಸ್ಥೆಗಳು ವಾಹನ ಕಾರ್ಯನಿರ್ವಾಹಕ ಪರವಾನಿಗೆ ಪಡೆಯಬೇಕು ಎಂದೇ ಆಗಿದೆ. ಓಲಾ ಸಂಸ್ಥೆ ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯನಿರ್ವಾಹಕ ಪರವಾನಿಗೆ ಪಡೆದುಕೊಂಡಿದೆ ಎಂದಿದ್ದಾರೆ ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು.

ರಾಷ್ಟ್ರ ರಾಜಧಾನಿಯ ಸಮಸ್ಯೆಗಳು

ಕೆಲವು ವಾರಗಳ ಹಿಂದೆ ದೆಹಲಿ ಹೈಕೋರ್ಟ್ ಮತ್ತೆ ಉಬರ್‌ ಸಲ್ಲಿಸಿದ್ದ ಕಾರ್ಯನಿರ್ವಾಹಕ ಪರವಾನಗಿಯನ್ನು ತಿರಸ್ಕರಿಸಿದೆ. ಕಳೆದ ವರ್ಷ ಹೇರಿದ್ದ ನಿಷೇಧದ ಹೊರತಾಗಿಯೂ ಉಬರ್ ಈ ಪರವಾನಗಿಗೆ ಅರ್ಜಿ ಸಲ್ಲಿಸಿತ್ತು. ಆದರೆ ಉಬರ್ ಡಿಜಿಟಲ್ ಮೀಟರ್, ಜಿಪಿಎಸ್ ಮತ್ತು ಸರ್ಕಾರದ ಅನುಮತಿ ಪಡೆದ ದರವನ್ನು ಅಳವಡಿಸಿಕೊಂಡಿಲ್ಲ. ಇನ್ನೂ ಓಲಾ ಸಂಸ್ಥೆಗೂ ಸಹ ದೆಹಲಿಯಲ್ಲಿ ಪರವಾನಗಿ ದೊರೆತಿಲ್ಲ. ಆದರೂ ಓಲಾ ಮತ್ತು ಉಬರ್ ದೆಹಲಿಯಲ್ಲಿ ತಮ್ಮ ಕಾರ್ಯನಿರ್ವಹಿಸುತ್ತಲೇ ಇವೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಓಲಾ 30,000 ಕ್ಯಾಬ್‌ಗಳನ್ನು ಹೊಂದಿದೆ.

ಸಿಟಿ ಟ್ಯಾಕ್ಸಿ ಸರ್ವಿಸ್ ಸ್ಕೀಮ್ 2015ರ ಅನ್ವಯ ಪರವಾನಿಗೆ ಪಡೆದಿರುವ ಟ್ಯಾಕ್ಸಿ ಚಾಲಕರ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಲಾಗುವುದು. ಆದರೆ ದೆಹಲಿಯಲ್ಲಿ ಓಲಾ ಮತ್ತು ಉಬರ್ ಸಂಸ್ಥೆಗಳು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿವೆ. ಅಲ್ಲದೇ ಸ್ಕೀಂ ಪ್ರಕಾರವೂ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ದೆಹಲಿಯಲ್ಲಿ ಉಬರ್ ಮತ್ತು ಓಲಾ ಸಂಸ್ಥೆಗಳಿಗೆ ಪರವಾನಿಗೆ ನಿರಾಕರಿಸಲಾಗಿದೆ ಎಂದಿದ್ದಾರೆ ದೆಹಲಿ ಜಂಟಿ ಸಾರಿಗೆ ಕಮಿಷನರ್ ಆನಂದ್ ತಿವಾರಿ. ಕಾಯ್ದೆಯನುಸಾರ ಟ್ಯಾಕ್ಸಿ ಚಾಲಕರ ಸಮುದಾಯ ಮತ್ತು ಕಾರ್ಯನಿರ್ವಾಹಕ ಸಮುದಾಯ ಇಬ್ಬರೂ ಒಂದೇ ವಿಭಾಗದಡಿಯಲ್ಲಿ ಬರುತ್ತಾರೆ. ಆದರೆ ಇದಕ್ಕೆ ಉಬರ್ ಒಪ್ಪುತ್ತಿಲ್ಲ. ಉಬರ್ ಸಂಸ್ಥೆ ತಾವು ತಂತ್ರಜ್ಞಾನವನ್ನು ಆಧರಿಸಿರುವ ವೇದಿಕೆಯಡಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ದೆಹಲಿ ಹೈಕೋರ್ಟ್ ಉಬರ್ ಸಂಸ್ಥೆಯೂ ಸಹ ಸಾಮಾನ್ಯ ಟ್ಯಾಕ್ಸಿ ಸೇವೆಯ ಸ್ಕೀಂನಡಿ ಬರಬೇಕೆಂಬ ತನ್ನ ಆದೇಶವನ್ನು ಎತ್ತಿಹಿಡಿದಿದೆ ಎಂದಿದ್ದಾರೆ ತಿವಾರಿ.

2001ರ ಸುಪ್ರೀಂ ಕೋರ್ಟ್ ಆದೇಶದನ್ವಯ ದೆಹಲಿಯಲ್ಲಿ ಸಾರ್ವಜನಿಕರಿಗೆ ವಾಹನ ಸೌಲಭ್ಯ ಕಲ್ಪಿಸುವವರು ಸಿಎನ್‌ಜಿ(ಕಂಪ್ರೆಸ್ಸಡ್ ನ್ಯಾಚುರಲ್ ಗ್ಯಾಸ್- ಸಂಕುಚಿತ ನೈಸರ್ಗಿಕ ಅನಿಲ)ಬಳಸಿಕೊಂಡೇ ವಾಹನ ಚಲಾಯಿಸಬೇಕೆಂಬ ಆದೇಶ ಹೊರಡಿಸಿದೆ. ಆನಂದ್ ತಿವಾರಿ ಹೇಳುವ ಪ್ರಕಾರ ದೆಹಲಿ ಹೈಕೋರ್ಟ್ ದೆಹಲಿಯಲ್ಲಿ ಡೀಸೆಲ್ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡದಂತೆ ಪ್ರಮಾಣಪತ್ರ ಸಲ್ಲಿಸುವಂತೆ ಆದೇಶ ನೀಡಿದೆ, ಆದರೆ ಟ್ಯಾಕ್ಸಿ ಚಾಲಕರು ಈ ಆದೇಶವನ್ನು ಪಾಲಿಸುತ್ತಿಲ್ಲ. ನಗರದಲ್ಲಿ ಪರವಾನಿಗೆ ಇಲ್ಲದೇ ವಾಹನ ಚಲಾಯಿಸುವುದೇ ಕಾನೂನಿನ ಉಲ್ಲಂಘನೆ. ಚಾಲಕರ ಹಿನ್ನೆಲೆ ಪರಿಶೀಲನೆ, ಪ್ಯಾನಿಕ್ ಬಟನ್, ಸಿಎನ್‌ಜಿ ಕ್ಯಾಬ್ಸ್, ಜಿಪಿಎಸ್ ವ್ಯವಸ್ಥೆ, ಸರ್ಕಾರ ಘೋಷಿಸಿದ ದರ ಮತ್ತು ಸಾರ್ವಜನಿಕ ಸೇವಾ ಬ್ಯಾಡ್ಜ್‌ ಗಳಂತಹ ವ್ಯವಸ್ಥೆಗೆ ಟ್ಯಾಕ್ಸಿ ಚಾಲಕರ ಸಮುದಾಯ ಒಳಪಡಲೇಬೇಕು. ಹಾಗಾದರೆ ಮಾತ್ರ ಪರವಾನಿಗೆ ಲಭಿಸುತ್ತದೆ ಎಂದಿದ್ದಾರೆ ಆನಂದ್ ತಿವಾರಿ.

2014ರ ಡಿಸೆಂಬರ್‌ನಲ್ಲಿ ಉಬರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಅತ್ಯಾಚಾರ ನಡೆದಿತ್ತು. ಈ ಘಟನೆಯ ಬಳಿಕ ಉಬರ್‌ನಂತಹ ಟ್ಯಾಕ್ಸಿ ಸಂಸ್ಥೆಗಳ ವಾಹನದಲ್ಲಿ ಪ್ರಯಾಣಿಕರ ರಕ್ಷಣೆಯ ಕುರಿತಾಗಿ ದೇಶಾದ್ಯಂತ ಚರ್ಚೆಯಾಗಿತ್ತು. ಹೀಗಾಗಿ ದೆಹಲಿಯಲ್ಲಿ ಈಗ ಕ್ಯಾಬ್‌ನೊಳಗೆ ಪ್ಯಾನಿಕ್ ಬಟನ್ ಇರಲೇಬೇಕೆಂಬ ನಿಯಮವೂ ಜಾರಿಯಾಗಿದೆ.

ದಕ್ಷಿಣ ಭಾಗದ ಕುತೂಹಲಕಾರಿ ಅಂಶಗಳು

ಆಗಸ್ಟ್ ನಲ್ಲಿ ಕೇರಳ ರಾಜ್ಯ ಸಾರಿಗೆ ಇಲಾಖೆ ಟ್ಯಾಕ್ಸಿ ಸಮುದಾಯದವರ ಸೇವೆ ಸಂಬಂಧಿಸಿದಂತೆ ಹೊಸ ಪ್ರಸ್ತಾಪಗಳನ್ನು ರಾಜ್ಯಸರ್ಕಾರದ ಮುಂದಿಟ್ಟಿತ್ತು. ಕೇರಳದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಲೈಸೆನ್ಸ್ ನೀಡಬೇಕೆಂದು ಉಬರ್ ಸಂಸ್ಥೆ ಕೋರಿಕೊಂಡಿತ್ತು. ಆದರೆ ಟ್ಯಾಕ್ಸಿ ಚಾಲಕರ ಸಮುದಾಯ ಸೇವೆಯೇ ಹೊಸತಾದ ಕಾನ್ಸೆಪ್ಟ್. ಹೀಗಾಗಿ ಯಾವುದೇ ಕಾನೂನು ರೂಪಿಸದೇ ಈ ಸಮುದಾಯದವರನ್ನು ಒಂದು ಚೌಕಟ್ಟಿನಲ್ಲಿ ತರುವುದು ಸರ್ಕಾರಕ್ಕೆ ಅಸಾಧ್ಯ ಎಂದಿದ್ದಾರೆ ಕೇರಳ ಜಂಟಿ ಸಾರಿಗೆ ಆಯುಕ್ತ(ಜಾರಿ ಮತ್ತು ಆಧುನೀಕರಣ ವಿಭಾಗ) ರಾಜೀವ್ ಪುತಲಾತ್. ಆದರೂ ಸಹ ಓಲಾ ಮತ್ತು ಉಬರ್ ಸಂಸ್ಥೆಗಳು ಈ ವರ್ಷದ ಆರಂಭದಲ್ಲೇ ಕೇರಳದಲ್ಲಿ ಕಾರ್ಯನಿರ್ವಹಿಸಲಾರಂಭಿಸಿದೆ.

ಕೇರಳ ಸರ್ಕಾರಕ್ಕೆ ಅಲ್ಲಿನ ಸಾರಿಗೆ ಇಲಾಖೆ ಸಲ್ಲಿಸಿರುವ ಪ್ರಸ್ತಾಪದನ್ವಯ ಟ್ಯಾಕ್ಸಿ ಚಾಲಕರು ಟ್ಯಾಕ್ಸಿ ಚಲಾಯಿಸಲು ಪೊಲೀಸರ ಅನುಮತಿ ಪಡೆದಿರಬೇಕು. ಟ್ಯಾಕ್ಸಿ ಸೇವೆ ನೀಡುವಾತನ ವಿಳಾಸದ ಪುರಾವೆ(ಅಡ್ರೆಸ್ ಪ್ರೂಫ್) ಹೊಂದಿರಬೇಕು. ಅವರ ಟ್ಯಾಕ್ಸಿ ಚಾಲನೆಯ ಗುರುತಿನ ಚೀಟಿ(ಐಡಿ ಪ್ರೂಫ್) ಇರಬೇಕು. ಈ ಕ್ಯಾಬ್‌ಗಳನ್ನು ಪೊಲೀಸರು ಜಿಪಿಎಸ್ ಮುಖಾಂತರ ಗಮನಿಸುತ್ತಿರಬೇಕು. ಹೀಗಾಗಿ ಮಾನಿಟರಿಂಗ್ ಸೆಂಟರ್‌ಗಳನ್ನು ನಿರ್ಮಿಸುವಂತೆಯೂ ಸಹ ಕೇರಳ ರಾಜ್ಯ ಸರ್ಕಾರಕ್ಕೆ ಅಲ್ಲಿನ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ತಮಿಳುನಾಡಿನಲ್ಲೂ ಸಹ ಟ್ಯಾಕ್ಸಿ ಚಾಲಕರಿಗೆ ಕಾರ್ಯನಿರ್ವಹಣಾ ಪರವಾನಗಿ ಇಲ್ಲ. ತಮಿಳುನಾಡು ಸಾರಿಗೆ ಇಲಾಖೆಯೂ ಸಹ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ. ಅದರಂತೆ ಟ್ಯಾಕ್ಸಿ ಮಾಲೀಕರ ಸಮುದಾಯವೂ ಸಹ ಟ್ಯಾಕ್ಸಿ ನಿರ್ವಾಹಕರ ವಿಭಾಗದಲ್ಲಿಯೇ ಸೇರಬೇಕೆಂಬುದನ್ನು ಸೇರಿಸಲಾಗಿದೆ. ಹೀಗಾದರೆ ಮಾತ್ರ ಕಾರ್ಯನಿರ್ವಹಣಾ ಲೈಸೆನ್ಸ್ ಗೆ ಅವರು ಅರ್ಹರಾಗುತ್ತಾರೆ ಎಂದು ಹೇಳಲಾಗಿದೆ.

ಕೆಲವು ಟ್ಯಾಕ್ಸಿ ಮಾಲೀಕರು ತಮಿಳುನಾಡು ಸಾರಿಗೆ ಆಯುಕ್ತರಿಗೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನೂ ಸಮರ್ಪಕವಾದ ಕಾನೂನು ಚೌಕಟ್ಟು ರಚಿಸಿರದ ಕಾರಣ ಅವರಿಗೂ ಪರವಾನಿಗೆ ನೀಡುತ್ತಿಲ್ಲ ಎಂದಿದ್ದಾರೆ ತಮಿಳುನಾಡು ಜಂಟಿ ಸಾರಿಗೆ ಆಯುಕ್ತ(ನಿಯಮಾವಳಿ ಮತ್ತು ರಸ್ತೆ ಸುರಕ್ಷತೆ) ಪಿ.ವಿಜಯರಾಜ್. ಚೆನ್ನೈನಲ್ಲಿ ಓಲಾ ಸಂಸ್ಥೆಯ 13,000ಕ್ಕೂ ಹೆಚ್ಚು ಕ್ಯಾಬ್‌ಗಳು ಸೇವಾನಿರತವಾಗಿವೆ.

ಇನ್ನು ಕರ್ನಾಟಕ ಸರ್ಕಾರವೂ ಸಹ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಕೆಲವೇ ದಿನಗಳಲ್ಲಿ ಸೂಕ್ತ ಕರಡಿನೊಂದಿಗೆ ನಿಯಮಾವಳಿ ರೂಪಿಸುವುದಾಗಿ ಹೇಳಿಕೊಂಡಿದ್ದಾರೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್. ಬೆಂಗಳೂರಿನಲ್ಲಿ 1998ರ ಸಿಟಿ ಟ್ಯಾಕ್ಸಿ ಸ್ಕೀಂ ಅನ್ನು ಪುನರ್ರಚಿಸಿದ ಬಳಿಕ ದರ ಮಾದರಿಯಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಹೆಚ್‌.ಜಿ.ಕುಮಾರ್. ರಸ್ತೆ ಮತ್ತು ಸಾರಿಗೆ ಹೆದ್ದಾರಿ ಸಚಿವಾಲಯದ ಆದೇಶದಂತೆ ಏಕರೂಪ ನಿಯಮಾವಳಿಗಳನ್ನು ನೀಡಲಾಗಿದೆ. ಅದರಂತೆ ಹೊಸ ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದೇವೆ ಎಂದಿದ್ದಾರೆ ಹೆಚ್‌.ಜಿ.ಕುಮಾರ್.

ಯುವರ್ ಸ್ಟೋರಿ ನಿಲುವು

ಟ್ಯಾಕ್ಸಿ ಮಾಲೀಕರ ಸಮುದಾಯಕ್ಕಾಗಿ ರಾಜ್ಯಸರ್ಕಾರಗಳು ಹೊಸ ನಿಯಮಾವಳಿಗಳನ್ನು ಜಾರಿಗೆ ತರುವತ್ತ ಚಿಂತನೆ ನಡೆಸುತ್ತಿವೆ. ಇದರಿಂದ ಓಲಾ, ಉಬರ್ ಸೇರಿದಂತೆ ಇತರ ಟ್ಯಾಕ್ಸಿ ಸಮುದಾಯಗಳು ಯಾವುದೇ ಅನುಮಾನವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶವಾಗುತ್ತದೆ. ಹಲವು ರಾಜ್ಯಗಳು ವಿಭಿನ್ನ ನಿಯಮಾವಳಿಗಳನ್ನು ರೂಪಿಸುವುದರಲ್ಲಿ ನಿರತವಾಗಿವೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಇದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣ ನಡೆಸುವಂತಾಗಲಿ ಎಂಬುದು ಯುವರ್ ಸ್ಟೋರಿ ಆಶಯ.


ಲೇಖಕರು: ಅತಿರಾ ಎ ನಾಯರ್​​

ಅನುವಾದಕರು: ವಿಶ್ವಾಸ್​

Related Stories

Stories by YourStory Kannada