ಗೈಡೋ ಆ್ಯಪ್ ಮುಖಾಂತರ ಉತ್ತಮ ಪ್ರವಾಸದ ಅನುಭವ ಪಡೆಯಿರಿ, ಪ್ರವಾಸವನ್ನು ಆನಂದಿಸಿ

ಟೀಮ್​ ವೈ.ಎಸ್​. ಕನ್ನಡ

0

ಕೆಲ ವರ್ಷಗಳ ಹಿಂದೆ ಮೊದಲ ಅಂತರಾಷ್ಟ್ರೀಯ ಪ್ರವಾಸ ಕೈಗೊಳ್ಳುವವರ ಪಾಲಿಗೆ ಬಹಳಷ್ಟು ಕಷ್ಟಗಳು ಎದುರಾಗುತ್ತಿದ್ದವು. ಏನನ್ನಾದರೂ ಸಾಧಿಸಬೇಕೆಂಬ ಇಚ್ಛೆ ಇರುವವರಿಗೆ ಹೊಸ ಸ್ಥಳಗಳು, ಅಪರಿಚಿತ ಭಾಷೆಗಳ ಸಮಸ್ಯೆ ತೋರುತ್ತಿತ್ತು. ಆ ಕಾಲದಲ್ಲಿ ಅಂತರ್ಜಾಲ ಮತ್ತು ಮೊಬೈಲ್‌ನಲ್ಲಿ ಅಷ್ಟೇನೂ ಆಯ್ಕೆಗಳಿರಲಿಲ್ಲ. ಹೀಗಾಗಿ ನಾವು ಹೋಗಬೇಕಾಗಿದ್ದ ಸ್ಥಳಗಳ ಬಗ್ಗೆ ಮಾಹಿತಿಯ ಹುಡುಕಾಟಕ್ಕೆ ಹೊಸ ಮಾರ್ಗವನ್ನು ಸಂಶೋಧಿಸಬೇಕಾಗಿತ್ತು. ಆದರೆ ಈಗ ಪರಿಸ್ಥಿತಿಗಳು ಸಾಕಷ್ಟು ಬದಲಾಗಿವೆ. ಮಾಹಿತಿಯನ್ನು ಹುಡುಕಿ ತೆಗೆಯುವುದು ಈಗ ಅಷ್ಟೇನೂ ಕಷ್ಟದ ಕೆಲಸವಲ್ಲ. ಆದರೂ ನಮ್ಮಲ್ಲಿ ಹಲವರು ಇನ್ನೂ ಹಳೆಯ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಈ ಸಮಸ್ಯೆಯನ್ನು ಪರಿಹರಿಸಲೆಂದೇ ಹುಟ್ಟಿಕೊಂಡಿದ್ದು ಗೈಡೋ(Guiddoo) ತಂತ್ರಜ್ಞಾನ ಉದ್ಯಮ. ಈ ತಂತ್ರಜ್ಞಾನದ ಮೂಲಕ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಒಂದು ವಿಭಿನ್ನ ಅನುಭವ ಉಂಟಾಗುತ್ತದೆ. ಈ ಸಂಸ್ಥೆ ಪ್ರಯಾಣಿಕರಿಗೆ ಅಗತ್ಯವಿರುವ ಮಾಹಿತಿ ಮತ್ತು ಚಟುವಟಿಕೆಗಳ ಕುರಿತು ವಿವರ, ಧ್ವನಿ ಮತ್ತು ದೃಶ್ಯದ ಪ್ರವಾಸಿ ಮಾರ್ಗದರ್ಶಕರು ಮತ್ತು ಬುಕಿಂಗ್, ಹೋಟೆಲ್, ರೆಸ್ಟೋರೆಂಟ್‌ಗಳ ಮಾಹಿತಿ ಲಭ್ಯವಿದೆ.

ಯೋಜನೆ ರೂಪುಗೊಂಡಾಗ...

ವಿದೇಶಗಳಿಗೆ ನಿರಂತರವಾಗಿ ಪ್ರವಾಸ ಹೋಗುವ ನಿಧಿ ವರ್ಮಾ ಅವರ ಆಲೋಚನೆಯ ಫಲವೇ ಗೈಡೋ ಸಂಸ್ಥೆ. ಅವರು ಮೊದಲ ಬಾರಿಗೆ ಪ್ಯಾರಿಸ್ ಪ್ರವಾಸ ಹೋಗಿದ್ದಾಗ ಅವರು ಹೋಟೆಲ್‌ವೊಂದರಲ್ಲಿ ಐಫಲ್ ಟವರ್‌ನ ದೃಶ್ಯಗಳನ್ನು ಕಾಣಬಹುದಾದ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಅವರೊಬ್ಬ ರೊಮ್ಯಾಂಟಿಕ್ ವ್ಯಕ್ತಿಯಾಗಿದ್ದಿದ್ರಿಂದ ಅವರು ಐಫಲ್ ಟವರ್‌ನ ತುತ್ತತುದಿಯಲ್ಲಿ ಅವರಿಗೆ ವಿಶೇಷ ಅನ್ನಿಸುವ ವ್ಯಕ್ತಿಯೊಂದಿಗೆ ಸಮಯ ಕಳೆಯಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ ಅವರು ಮದುವೆಯಾದ ಬಳಿಕ ಪ್ಯಾರಿಸ್‌ಗೆ ಹೋದಾಗ ಎದುರಾದ ವಾಸ್ತವವೇ ಬೇರೆಯಾಗಿತ್ತು.

ಅವರ ಮೊದಲ ದಿನದ ಪ್ರವಾಸದಂದು ಐಫಲ್ ಟವರ್ ಮುಚ್ಚಲ್ಪಟ್ಟಿತ್ತು. ಎರಡನೇ ದಿನದಲ್ಲಿ ಉದ್ದವಾದ ಕ್ಯೂ ಐಫಲ್ ಟವರ್‌ನ ಮುಂದಿತ್ತು ಮತ್ತು ಟವರ್‌ನ ತುತ್ತ ತುದಿಯನ್ನು ಮುಚ್ಚಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ರೀತಿಯ ಮಾಹಿತಿಯೂ ಇರಲಿಲ್ಲ. ನಗರ ಮಾರ್ಗದರ್ಶಿಗಳು ನಮಗೆ ವಿಕಿಪೀಡಿಯಾವನ್ನು ಪರಿಶೀಲಿಸುವಂತೆ ತಿಳಿಸಿದರು ಅದರಂತೆ ಪರಿಶೀಲಿಸಿದಾಗ ಐಫಲ್ ಟವರ್ ನೋಡಲು ನಾವು ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಬೇಕಿತ್ತು ಎಂದು ನಮಗೆ ತಿಳಿಯಿತು ಎಂದು ನಿಧಿ ಹೇಳುತ್ತಾರೆ.

ಇದರಿಂದ ನಿಧಿ ದಂಪತಿಗಳು ಮೊಬೈಲ್ ಮೂಲಕ ಪ್ರಸ್ತುತ ಮಾಹಿತಿ ತಿಳಿಯುವ ಸಾಧ್ಯತೆಗಳಿದ್ದರೆ ಪ್ರವಾಸಗಳು ಬಹಳ ಸುಲಭವಾಗುತ್ತದೆ ಎಂಬುದನ್ನು ಕಂಡುಕೊಂಡರು. ಹೀಗಾಗಿ ಸ್ಮಾರಕಗಳ ಬಗ್ಗೆ ಧ್ವನಿ ಮತ್ತು ದೃಶ್ಯಗಳ ಮೂಲಕ ತಿಳಿಸುವ ಮಾರ್ಗದರ್ಶಿಯಾಗಿ ಗೈಡೋ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಕ್ರಮೇಣ ಇದನ್ನು ಹಲವು ಪ್ರದೇಶಗಳ ಮಾರ್ಗದರ್ಶನ ಮಾಡಲು, ಪ್ರವಾಸ ಮತ್ತು ಚಟುವಟಿಕೆಗಳನ್ನು ನಿಗದಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಇದನ್ನು ವಿಸ್ತರಿಸಲಾಯಿತು. ಪ್ರಸ್ತುತ ಅನೇಕ ಪ್ರವಾಸಿಗರು ಈ ಗೈಡೋ ಸಂಸ್ಥೆಯ ಮಾರ್ಗದರ್ಶನದ ಸೌಲಭ್ಯವನ್ನು ಅವರು ಸ್ಮಾರ್ಟ್ ಫೋನ್ ಮೂಲಕ ಪಡೆಯುತ್ತಿದ್ದಾರೆ.

ಗೈಡೋ ಸಂಸ್ಥೆಯ ತಂಡ

ಗೈಡೋ ಸಂಸ್ಥೆಯ ಪ್ರಧಾನ ತಂಡದಲ್ಲಿ 6 ಮಂದಿ ಸದಸ್ಯರಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಓ ವಿನೀತ್ ಬುಡ್ಕಿ, ಸಂಸ್ಥಾಪಕಿ ನಿಧಿ ವರ್ಮಾ, ಮಾರ್ಕೆಟಿಂಗ್ ತಂಡದ ಮುಖ್ಯಸ್ಥ ದರ್ಶನ್ ಶರ್ಮಾ, ಸಂಸ್ಥೆಯ ಸಿಟಿಓ ಪ್ರಶಾಂತ್ ಚೌಧರಿ, ಕಂಟೆಂಟ್ ವಿಭಾಗದ ಮುಖ್ಯಸ್ಥೆ ಅಲ್ವಿನಾ ಸೈಯದ್, ಉದ್ಯಮ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿ ಅನುರಾಧಾ ಮಾಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂಬೈ ಮೂಲದ ಈ ಸಂಸ್ಥೆಯಲ್ಲಿ 17 ಮಂದಿ ಕೆಲಸಗಾರರಿದ್ದಾರೆ.

ಇತರ ಉದ್ಯಮಗಳನ್ನು ಆರಂಭಿಸುವಾಗ ಉದ್ಭವಿಸುವ ಸಮಸ್ಯೆಗಳೇ ಅಂದರೆ, ಹೂಡಿಕೆ, ಪಾಲುದಾರಿಕೆ ಮತ್ತು ಆದಾಯ ಮಾದರಿ, ಜಾರಿಗೊಳಿಸುವ ರೀತಿಗಳೇ ಗೈಡೋ ಸಂಸ್ಥೆಯನ್ನು ಆರಂಭಿಸುವಾಗಲೂ ಎದುರಾಗಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ ನಿಧಿ ವರ್ಮಾ.

ಅಭಿವೃದ್ಧಿ

ಎಸ್‌ವಿಪಿ ಫ್ಲೈ ದುಬೈ ಸಂಸ್ಥೆಯ ಪವನ್ ಬೋರ್ಲೆ ಹೂಡಿಕೆ ಮಾಡಿದ್ದರಿಂದ ಮತ್ತು ಮೇಕ್ ಮೈ ಟ್ರಿಪ್ ಮತ್ತು ಮೆಕಾಂಗ್ ಟೂರಿಸಂ ಸಂಸ್ಥೆಯ ಪಾಲುದಾರಿಕೆಯಿಂದ ನಾವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆವು ಮತ್ತು ಪುನರಾವರ್ತಿತ ಉದ್ಯಮಗಳಿಂದ ಆದಾಯದ ಹರಿವನ್ನು ಸರಾಗವಾಗುವಂತೆ ನಡೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ನಿಧಿ.

ಶೀಘ್ರದಲ್ಲಿ ಗೈಡೋ ಸಂಸ್ಥೆಯ ವೆಬ್‌ಸೈಟ್ 2 ತಿಂಗಳಲ್ಲೇ 1,00,000 ಆರ್ಗ್ಯಾನಿಕ್ ಡೌನ್‌ಲೋಡ್ಸ್ ಹೊಂದಿದ್ದು, 2,00,000 ಮಂದಿ ವೆಬ್‌ಸೈಟ್‌ಗೆ ಭೇಟಿ ನೀಡಿದ್ದಾರೆ. ಆದಾಯದ ಹರಿತ ಸುಗಮವಾಗಿರಲು 3 ಹಂತದ ಆದಾಯ ಮಾದರಿಯನ್ನು ಹೊಂದಿದೆ. ಪ್ರವಾಸ ಮತ್ತು ಚಟುವಟಿಕೆಗಳಿಂದ ಸಂಸ್ಥೆಗೆ ಶೇ.60ರಷ್ಟು ಆದಾಯ ಹರಿದುಬರುತ್ತದೆ. ಶೇ.15ರಷ್ಟು ಆದಾಯ ಧ್ವನಿ ಮಾರ್ಗದರ್ಶನದಿಂದಲೂ ಉಳಿದ ಆದಾಯ ಬಿಸಿನೆಸ್ ಟು ಬಿಸಿನೆಸ್ ಸಬ್‌ಸ್ಕ್ರಿಪ್ಶನ್ ಮಾದರಿಯಿಂದಲೂ ಹರಿದುಬರುತ್ತದೆ.

ಗೈಡೋ ಸಂಸ್ಥೆಯ ತಂಡ ಬಳಕೆದಾರರಿಗೆ ಉತ್ತಮ ಅನುಭವ ನೀಡಲು ಮತ್ತು ಪ್ರವಾಸದ ಕುರಿತು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುವಂತೆ ಕಲ್ಪನೆಯ ಸಲಕರಣೆಗಳನ್ನು ನೀಡಲು ಶ್ರಮಿಸುತ್ತಿದೆ. ಪ್ರಯಾಣಿಕರ ಚಟುವಟಿಕೆ ಮ್ಯಾಪಿಂಗ್, ಚಟುವಟಿಕೆಗಳಿಗಾಗಿ ದರ ಮಾದರಿಯ ಮಾಹಿತಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸಂತೋಷವಾಗಿ ಅನುಭವಿಸುವುದು ಹೇಗೆ ಎಂಬ ಮಾಹಿತಿ, ಪ್ರವಾಸಿ ಸ್ಥಳದ ಜೀವನ ಶೈಲಿಯ ಮಾಹಿತಿಯನ್ನು ಹೊಸ ತಂತ್ರಜ್ಞಾನಗಳನ್ನು ಬಳಸಿ ಸಂಸ್ಥೆ ಒದಗಿಸುತ್ತಿದೆ.

ಮಾರುಕಟ್ಟೆಯ ವಿಸ್ತಾರ ಮತ್ತು ಭವಿಷ್ಯದ ಯೋಜನೆಗಳು

ಫೋಕಸ್ ವ್ರೈಟ್ ಸಂಸ್ಥೆಯ ವಾರ್ಷಿಕ ಸಂಶೋಧನೆಯ ಪ್ರಕಾರ ಈ ಉದ್ಯಮ ಕ್ಷೇತ್ರದ ವಾರ್ಷಿಕ ಮಾರುಕಟ್ಟೆ ಗಾತ್ರ 160 ಬಿಲಿಯನ್ ಯುಎಸ್ ಡಾಲರ್‌ನಷ್ಟಿದೆ. ಈ ಸಂಸ್ಥೆ ತನ್ನ ಆರಂಭಿಕ ಹೂಡಿಕೆಯನ್ನು ಫೆಬ್ರವರಿಯಲ್ಲಿ ಪವನ್ ಬೋರ್ಲೆ(ಎಸ್‌ವಿಪಿ ಫ್ಲೈ ದುಬೈ, ಇನ್ವೆಸ್ಟರ್ ಟೀಮ್ ಇಂಡಸ್, ಗ್ಯಾಪ್‌ ಜಂಪರ್ಸ್), ಅನೂಪ್ ಅಗರ್‌ವಾಲ್, ನಿರ್ಮಲ್ ಸಿಂಗ್(ಹೆಡ್ ಹೆಚ್ಆರ್, ಡುಕಾಬ್), ವಿಶಾಲ್ ಶಾ, ಉಶಿಕ್ ಗಾಲಾ ಮತ್ತು ಸಂಜಯ್ ಶಾ(ಮುಂಬೈ ಮೂಲದ ಸರಣಿ ಹೂಡಿಕೆದಾರರು)ರಿಂದ ಪಡೆದಿದೆ.

ಪ್ರವಾಸಿ ಸ್ಥಳಗಳ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಮತ್ತು ಭವಿಷ್ಯದಲ್ಲಿ ಗ್ರಾಹಕರಿಗೆ ಹೊಸತನದ ಉತ್ಪನ್ನಗಳನ್ನು ನೀಡುವ ಮುಖಾಂತರ ಉತ್ತಮ ಅನುಭವ ದೊರಕಿಸಿಕೊಡುವುದು ಸಂಸ್ಥೆಯ ಗುರಿಯಾಗಿದೆ. ಇದನ್ನು ಹೊರತುಪಡಿಸಿ ಆದಾಯ ಮಾದರಿಯಲ್ಲಿ ಮಾರ್ಪಾಡುಗಳನ್ನು ತಂದು ಹೆಚ್ಚಿನ ಆದಾಯ ಪಡೆಯುವುದು, ಪ್ರವಾಸಿ ಸ್ಥಳಗಳ ಕುರಿತಾದ ಪ್ರವಾಸ ಮತ್ತು ಚಟುವಟಿಕೆಗಳ ಪಾಲುದಾರರನ್ನು ಪಡೆಯುವುದು ಮುಂದಿನ ಯೋಜನೆ ಎಂದು ಹೇಳಿ ಮಾತು ಮುಗಿಸಿದರು ನಿಧಿ.


ಲೇಖಕರು: ಸಿಂಧು ಕಶ್ಯಪ್​

ಅನುವಾದಕರು: ವಿಶ್ವಾಸ್​

Related Stories

Stories by YourStory Kannada