ಕಾಫಿ ವಿತ್ ಕಾಮಿಕ್ಸ್ !- ಕುಡಿಯುತ್ತಾ ಖುಷಿ ಪಡಿ

ಟೀಮ್​​ ವೈ.ಎಸ್​​.ಕನ್ನಡ

ಕಾಫಿ ವಿತ್ ಕಾಮಿಕ್ಸ್ !- ಕುಡಿಯುತ್ತಾ ಖುಷಿ ಪಡಿ

Friday November 20, 2015,

3 min Read

ಕಾಮಿಕ್​​ಗಳನ್ನು ಓದುತ್ತಾ ಖುಷಿ ಪಡುವುದು ನಮ್ಮಂಥ ಹಲವರಿಗೆ ಟೈಂ ಪಾಸ್ ವಿಷಯ. ನೋವು, ಒತ್ತಡ ಮರೆಯೋ ಹಾದಿ. ಆದರೆ, ಇದೇ ಕಾಮಿಕ್​​ಗಳು ಹಲವರಿಗೆ ಉದ್ಯಮ. ಕೋಲ್ಕತ್ತಾದಲ್ಲಿ ಹುಟ್ಟಿ ಬೆಳೆದ ಬಿದಿಷಾ ಬಸು, ಅಮೆರಿಕಾದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ತಾನು ಏನು ಮಾಡಬೇಕು ಎನ್ನುವ ಖಚಿತತೆ ಇಲ್ಲದ ಕಾರಣ ಹಲವಾರು ಕಡೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆ ಬಳಿಕ ಮುಂಬೈಗೆ ತೆರಳಿ ಸ್ಯಾಂಕ್ಚುರಿ ಎನ್ನುವ ವನ್ಯಜೀವಿ ನಿಯತಕಾಲಿಕದಲ್ಲಿ ಕೆಲಸ ಆರಂಭಿಸಿದ್ದರು. ಆ ಕೆಲಸಕ್ಕೂ ವರ್ಷ ತುಂಬುತ್ತಲೇ ಗುಡ್​​ಬೈ ಹೇಳಿದರು. ಆ ಬಳಿಕ ಹವ್ಯಾಸಿ ಬರವಣಿಗೆ ಮತ್ತು ಜಾಹೀರಾತು ನಿರ್ಮಾಣ ಸಂಸ್ಥೆಗಳಲ್ಲೂ ಕೆಲಸ ಮಾಡಿದರು.

image


“ನನಗೆ ಮತ್ತೆ ಕೆಲಸ ಬದಲಾಯಿಸಬೇಕು ಎನಿಸಿತು. ಹೀಗಾಗಿ ನಾನು ಜಪಾನ್​​ಗೆ ಪ್ರಯಾಣ ಬೆಳೆಸಿದೆ. ಅಲ್ಲಿ ಜಪಾನ್ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಬೇಕಾಗಿತ್ತು. ಇದು ರಾಯಭಾರ ಕಚೇರಿ ನಡೆಸುವ ಕಾರ್ಯಕ್ರಮವಾಗಿತ್ತು. ಅವರು ಆಗತಾನೇ ಭಾರತೀಯ ಘಟಕವನ್ನು ಆರಂಭಿಸಿದ್ದರು.”

ಎರಡು ವರ್ಷಗಳ ಕಾಲ ಜಪಾನ್ನಲ್ಲಿ ಕೆಲಸ ಮಾಡಿದ್ದಕ್ಕೆ ಕೈತುಂಬಾ ಸಂಬಳ ಸಿಕ್ಕಿತ್ತು. ಇದು ಸ್ವಂತ ಉದ್ಯಮವೊಂದನ್ನು ಆರಂಭಿಸುವಷ್ಟು ಸಾಕಾಗಿತ್ತು. ಜಪಾನೀ ಕೆಫೆಗಳನ್ನು ನೋಡಿದ ಬಳಿಕ ಭಾರತದಲ್ಲಿಯೂ ಇಂತಹದ್ದೇ ಒಂದು ಕೆಫೆ ಆರಂಭಿಸಬೇಕು ಎಂದು ಯೋಚಿಸಿದರು. ಕಾಮಿಕ್ ಕೆಫೆ ಆರಂಭಿಸುವುದು ಅವರ ಕನಸಾಗಿತ್ತು.

ಕಾಮಿಕ್ ಲೈಬ್ರರಿ

ಅವರ ಬಹುತೇಕ ಗೆಳೆಯರು ಮುಂಬೈನಲ್ಲೇ ವಾಸವಾಗಿದ್ದರು. ಅಲ್ಲದೆ, ಈ ನಗರವನ್ನು ಅವರು ತುಂಬಾನೇ ಇಷ್ಟಪಡುತ್ತಿದ್ದರು. ಹೀಗಾಗಿ ಬಿದಿಷಾ ಕೂಡಾ ಇಲ್ಲೇ ನೆಲೆಸಲು ನಿರ್ಧರಿಸಿದರು.

“ಬಹುತೇಕ ಕಡೆಗಳಲ್ಲಿ ಸಮಸ್ಯೆ ಏನಾಗಿತ್ತೆಂದರೆ, ನಾನು ಬೇಗನೇ ಬೋರ್ ಆಗಿಬಿಡುತ್ತಿದ್ದೆ. ನೀವು ಏನೇ ಸಾಧನೆ ಮಾಡಿದರೂ, ಅದರ ಲಾಭ ತಕ್ಷಣವೇ ಸಿಕ್ಕಿಬಿಡುತ್ತದೆ. ಆಮೇಲೆ ಅದೂ ಬೋರ್ ಆಗುತ್ತದೆ. ನನ್ನ ಮನಸ್ಥಿತಿ ಅದಕ್ಕೆ ಒಗ್ಗುವುದಿಲ್ಲ. ಒಂದೇ ಕೆಲಸದಲ್ಲಿ ತುಂಬಾ ದಿನ ತೊಡಗಿಸಿಕೊಳ್ಳಲು ಇಷ್ಟವಾಗುತ್ತಿರಲಿಲ್ಲ. ನನ್ನದೇ ಶೈಲಿಯಲ್ಲಿ ಹೊಸ ಉದ್ಯಮವನ್ನೇನಾದರೂ ಆರಂಭಿಸಬೇಕು ಎಂದು ಗೆಳತಿಯರಲ್ಲಿ ಆಗಾಗ ಚರ್ಚೆ ಮಾಡುತ್ತಲೇ ಇರುತ್ತಿದ್ದೆ. ನಾನು ಕಷ್ಟಪಟ್ಟು ದುಡಿದರೂ ನನಗಾಗಿ ದುಡಿಯುತ್ತಿದ್ದೇನೆ ಎನ್ನುವುದು ನನ್ನ ಭಾವನೆಯಾಗಿತ್ತು. ನನ್ನನ್ನು ನಾನು ಪ್ರೂವ್ ಮಾಡಬೇಕಿತ್ತು.”

ಅಂಧೇರಿ ಉಪನಗರದಲ್ಲಿ ಅವರು ವಾಸಿಸುತ್ತಿದ್ದ ಜಾಗ ಹಿಂದೊಮ್ಮೆ ಬುಕ್ ಶಾಪ್ ಆಗಿತ್ತು. ಅಲ್ಲೊಂದು ಗ್ರಂಥಾಲಯವೂ ಮುಚ್ಚಿ ಹೋಗಿತ್ತು. ಅಲ್ಲೇ ಬಿದಿಷಾ ಲೀಪಿಂಗ್ ವಿಂಡೋಸ್ ಸ್ಥಾಪಿಸಿದರು. ಒಂದೇ ಪ್ರಕಾರದ ಪುಸ್ತಕಗಳನ್ನು ಇರಿಸುವುದರಿಂದ ಹೆಚ್ಚಿನ ಪ್ರಚಾರ ಪಡೆಯಬಹುದು ಎಂದು ಅವರು ಊಹಿಸಿದ್ದರು. ಹೀಗಾಗಿ ಅವರ ಗ್ರಂಥಾಲಯ ಕೇವಲ ಕಾಮಿಕ್ಸ್​​ಗಷ್ಟೇ ಸೀಮಿತವಾಯಿತು. ಗ್ರಾಹಕರು ನೇರವಾಗಿ ವೆಬ್​​ಸೈಟ್​​ಗೆ ಲಾಗಿನ್ ಆಗಿ ತಮಗೆ ಬೇಕಾದ ಕಾಮಿಕ್ ಅನ್ನು ಆರಿಸಿಕೊಳ್ಳಬಹುದಾಗಿತ್ತು ಅವರ ಆಯ್ಕೆಯ ಕಾಮಿಕ್ಸ್ ಅನ್ನು ಅವರ ಮನೆಗೆ ಕಳುಹಿಸಿಕೊಡಲಾಗುತ್ತಿತ್ತು. ಆದರೆ, ಈ ವ್ಯವಸ್ಥೆ ಕೇವಲ ಮುಂಬೈಗೆ ಮಾತ್ರ ಸೀಮಿತವಾಗಿತ್ತು. ಅಷ್ಟೇ ಅಲ್ಲ, ಕಾಮಿಕ್ ಗೆ ಸಂಬಂಧಿಸಿದ ಪುಸ್ತಕ ಬಿಡುಗಡೆ ಕಾಮಿಕ್ ಕಾನ್ ಮೊದಲಾದ ಕಾರ್ಯಕ್ರಮಗಳನ್ನೂ ಲೀಪಿಂಗ್ ವಿಂಡೋಸ್ ಆಯೋಜಿಸುತ್ತಿದೆ.

image


“ನಾನು ತುಂಬಾ ಪುಸ್ತಕಗಳನ್ನು ಓದುತ್ತಿರುತ್ತೇನೆ. ಆಸ್ಟೆರಿಕ್ಸ್, ರಿಚೀ ರಿಚ್ ಮೊದಲಾದ ಕಾಮಿಕ್ಸ್​​ಗಳೂ ನಮ್ಮಲ್ಲಿ ಲಭ್ಯವಿವೆ. ನಾನು ಕಾಮಿಕ್ ಇಷ್ಟ ಪಡುತ್ತೇನೆ ಎನ್ನುವ ಕಾರಣಕ್ಕೆ ಇದನ್ನು ಆರಂಭಿಸಿಲ್ಲ. ಜಪಾನ್​​ನಲ್ಲಿದ್ದಾಗ ಇದೆಲ್ಲವನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೆ. ಆಸ್ಟೆರಿಕ್ಸ್ ಎಂದಿಗೂ ನನ್ನ ಹೃದಯಕ್ಕೆ ಹತ್ತಿರವಾಗಿತ್ತು.”

ಕಪ್ ಕಾಫಿ ಜೊತೆ ಕಾಮಿಕ್ಸ್

ಕೆಫೆಯು ಹಲವು ಅವತಾರಗಳನ್ನು ತಾಳಿದೆ. ಆರಂಭದಲ್ಲಿ ಅವರು ಸ್ಯಾಂಡ್ವಿಚ್ ಮತ್ತು ಮ್ಯಾಗಿಗಳನ್ನಷ್ಟೇ ನೀಡುತ್ತಿದ್ದರು. ಅದಾದ ಬಳಿಕ ಕಾಂಟಿನೆಂಟಲ್ ಆಹಾರಗಳನ್ನು ಆರಂಭಿಸಿದರು, ಆ ಬಳಿಕ ಅಮೆರಿಕನ್ ತಿನಿಸುಗಳನ್ನು ಸೇರ್ಪಡೆಗೊಳಿಸಿದರು. ಸಧ್ಯ ಕೆಫೆಯಲ್ಲಿ 25 ಜನರ ತಂಡ ಕೆಲಸ ಮಾಡುತ್ತಿದ್ದು, ಲೈಬ್ರರಿಯಲ್ಲಿ ಮೂರು ಜನ ನೌಕರರಿದ್ದಾರೆ.

“ಎಲ್ಲವನ್ನೂ ಸಂಘಟಿಸುವುದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು. ತುಂಬಾ ದೊಡ್ಡ ವ್ಯವಸ್ಥೆಯೊಂದನ್ನು ಅಳವಡಿಸಬೇಕಾಗಿತ್ತು.”

ಟ್ಯಾಕ್ಸ್ ಪದ್ಧತಿ, ಅಕೌಂಟ್ಸ್ ನಿಂದ ಆರಂಭಿಸಿ ಎಲ್ಲವನ್ನೂ ನಾನು ಕಲಿತುಕೊಂಡೆ. ಉದ್ಯಮ ಆರಂಭಿಸುವಾಗ ಪರವಾನಗಿ ಪಡೆಯಲು ತುಂಬಾ ಕಷ್ಟಪಟ್ಟಿದ್ದೆ. ಎನ್ನುತ್ತಾರೆ ಬಿದಿಷಾ.

“ನಾವು ಬೆಂಗಳೂರಿನಲ್ಲೂ ಒಂದು ಶಾಖೆ ಆರಂಭಿಸಿದೆವು. ಆದರೆ, ಅಲ್ಲಿ ಎಲ್ಲವನ್ನೂ ನಿಭಾಯಿಸುವುದು ಮತ್ತು ನಡೆಸುವುದು ತುಂಬಾ ಕಷ್ಟವಾಗಿತ್ತು. ಇದು ಹೊಸ ಉದ್ಯಮವಾಗಿದ್ದರಿಂದ ಅದನ್ನು ದೂರದಲ್ಲಿ ಕುಳಿತು ನಿಭಾಯಿಸುವುದು ದುಸ್ವಪ್ನವಾಗಿ ಕಾಡತೊಡಗಿತ್ತು. ಈಗ ನಾವು ಒಂದೇ ಶಾಖೆ ಹೊಂದಿದ್ದೇವೆ. ಅದರಲ್ಲೇ ಖುಷಿಯಾಗಿದ್ದೇವೆ.

ಇಲ್ಲಿಯವರೆಗಿನ ಪ್ರಯಾಣ

ಬಿದಿಷಾರ ಕೆಫೆಗೆ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಆದರೆ, ಲೈಬ್ರರಿ ಕಥೆ ಮಾತ್ರ ಕುಂಟುತ್ತಾ ಸಾಗಿದೆ. ಕಾಮಿಕ್ಸ್ಗಳಲ್ಲಿ ಬದಲಾವಣೆ ತುಂಬಾ ಕಡಿಮೆ. ಈ ಮಾರುಕಟ್ಟೆ ಈಗಷ್ಟೇ ಬೆಳೆಯುತ್ತಿದೆ. ಆದರೆ, ಆಹಾರ ಜಾಗತಿಕ. ಕೆಫೆಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ.

“ನಾನು ಸೋತು ಹೋದಾಗಲೆಲ್ಲಾ, ಧನಾತ್ಮಕ ಅಂಶಗಳನ್ನೇ ಹೆಚ್ಚು ಯೋಚನೆ ಮಾಡುತ್ತೇನೆ. ಕೆಲವೊಮ್ಮೆ ಸಮಯ ಕಠಿಣ ಎನ್ನಿಸುತ್ತದೆ. ಆಗ ನಾನು ನನಗೆ ಹೆಚ್ಚು ಸಮಯ ಮೀಸಲಿಡುತ್ತೇನೆ. ನಿಮ್ಮ ಕಷ್ಟಗಳು ನಿಮಗೆ. ಹಾಗೆಯೇ ಒಳ್ಳೆಯ ದಿನಗಳೂ ನಿಮ್ಮವೇ ಎನ್ನುವುದು ನನ್ನ ನಂಬಿಕೆ ಎನ್ನುತ್ತಾರೆ ಬಿದಿಷಾ.

ಬಿದಿಷಾರಿಗೆ ತಮ್ಮ ಪ್ರಯಾಣದಲ್ಲಿ ಎಲ್ಲವೂ ಅಲ್ಪಸ್ವಲ್ಪ ಸಿಕ್ಕಿದೆ. ಅವರಿಗೆ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ದೊಡ್ಡದೊಡ್ಡ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅವರ ಸಾಹಸಮಯ ಬದುಕು ಅವರನ್ನು ತೆರೆಯ ಮರೆಯಲ್ಲಿರುವಂತೆಯೂ ಮಾಡಿದೆ.

“ನಾನು ಯಾವುದನ್ನೂ ದೂರಾಲೋಚನೆ ಮಾಡುವುದಿಲ್ಲ. ಯಾಕೆಂದರೆ ನಾನು ಬಹುಬೇಗನೆ ನನ್ನ ಮನಸ್ಸುನ್ನು ಬದಲಾಯಿಸಿಬಿಡುತ್ತೇನೆ. ಸ್ವತಂತ್ರವಾದ ಉದ್ಯಮವೊಂದನ್ನು ನಡೆಸಲು ಒಂದು ದಿನದ ಯೋಚನೆ ಸಾಕು. ಆದರೆ ಅದನ್ನು ನಡೆಸಿಕೊಂಡು ಹೋಗಲು ಪ್ರತಿದಿನವೂ ಅದಕ್ಕಾಗಿ ವ್ಯಯಿಸಬೇಕು,” ಎನ್ನುತ್ತಾರೆ ಬಿದಿಷಾ.

ಲೇಖಕರು: ದಿವ್ಯಾಚಂದ್ರ

ಅನುವಾದಕರು: ಪ್ರೀತಮ್​​