ಎಕ್ಸೆಲ್‌ನಲ್ಲಿ ಕೆಲಸ ಮಾಡಲು ಸಮಸ್ಯೆ ಇದೆಯಾ..? ಚಂದೂ ಬಳಿ ಇದೆ ಪರಿಹಾರ..!

ಟೀಮ್​​ ವೈ.ಎಸ್​​.

0

ಮೈಕ್ರೋಸಾಫ್ಟ್ ಎಕ್ಸೆಲ್ ಬಳಕೆಯಲ್ಲಿ ಜನರಿಗೆ ಸಹಾಯವಾಗುವ ಚಂದೂ.ಒಆರ್‌ಜಿ ಎಂಬ ವೆಬ್‌ಸೈಟ್‌ನ ಸಂಸ್ಥಾಪಕ ಪೂರ್ಣಚಂದ್ರ ರೋವಾ ಅಕಾ ಚಂದೂ. 2004ರಲ್ಲಿ ಇದನ್ನೊಂದು ಬ್ಲಾಗ್ ಆಗಿ ಆರಂಭಿಸಿದರು ಚಂದೂ. ಮೈಕ್ರೋಸಾಫ್ಟ್ ಎಕ್ಸೆಲ್ ಕುರಿತಾಗಿ ಹೊಸ ಐಡಿಯಾಗಳು ಮತ್ತು ಚರ್ಚೆಗಾಗಿ ಈ ಬ್ಲಾಗ್ ಮಾಡಲಾಗಿತ್ತು. ಇಂದೋರ್‌ನ ಐಐಎಂನ ವಿದ್ಯಾರ್ಥಿಯಾಗಿದ್ದ ಚಂದೂ ಟಿಸಿಎಸ್ ಸಂಸ್ಥೆಯಲ್ಲಿ ದತ್ತಾಂಶ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ 2009ರ ಮೈಕ್ರೋಸಾಫ್ಟ್ ಮೋಸ್ಟ್ ವ್ಯಾಲ್ಯುಬಲ್ ಪ್ರೊಫೆಶನಲ್ ಪ್ರಶಸ್ತಿ ಕೂಡ ಪಡೆದಿದ್ದಾರೆ ಚಂದೂ. ಅವರೊಂದಿಗೆ ಯುವರ್ ಸ್ಟೋರಿ ನಡೆಸಿದ ಸಂದರ್ಶನ ಇಲ್ಲಿದೆ.

ಉದ್ಯಮಿಯಾಗಿ ನಿಮ್ಮ ಪ್ರಯಾಣ ಆರಂಭವಾಗಿದ್ದು ಹೇಗೆ?

ಚಂದೂ: ನನ್ನ ಪಾಲಿಗೆ ಇದೊಂದು ತುಂಬಾ ಸಂತೋಷದಾಯಕ, ಉದ್ವೇಗಕಾರಿ ಘಟನೆಯಾಗಿತ್ತು. ಮಗುವಾಗಿದ್ದಾಗಿಲಿಂದಲೂ ನನ್ನದೇ ಸ್ವಂತ ಉದ್ಯಮ ಆರಂಭಿಸುವುದು ನನ್ನ ಕನಸಾಗಿತ್ತು. ಒಂದು ದಿನ ನಾನದನ್ನು ಸಾಧಿಸುವ ವಿಶ್ವಾಸವೂ ಇತ್ತು. ಆದರೆ ಎಂಬಿಎ ಪ್ರೋಗ್ರಾಮ್ ಮಾಡುವಾಗ ಅಲ್ಲಿ ಬಹಳಷ್ಟು ಸ್ಪರ್ಧೆ ಏರ್ಪಟ್ಟಿತ್ತು. ಎಂಬಿಎ ಮುಗಿದ ಬಳಿಕ ಕೆಲ ಅನಿವಾರ್ಯ ಕಾರಣಗಳಿಂದ ಉದ್ಯೋಗ ಹುಡುಕಿಕೊಳ್ಳಬೇಕಾಯಿತು. ಹೀಗಾಗಿ ಟಿಸಿಎಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲಾರಂಭಿಸಿದೆ. ಆದರೆ ನನ್ನೊಳಗೆ ಹುದುಗಿದ್ದ ಇಚ್ಛೆ ಹಾಗೆಯೇ ಇತ್ತು. 3 ವರ್ಷಗಳ ಕಾಲ ಟಿಸಿಎಸ್‌ನಲ್ಲಿ ಕಾರ್ಯನಿರ್ವಹಿಸಿ ಬಳಿಕ ರಾಜೀನಾಮೆ ನೀಡಿದೆ. ಆಮೇಲೆ ಆರಂಭಿಸಿದ್ದೇ ಚಂದೂ.ಒಆರ್‌ಜಿ ಎಂಬ ವೆಬ್‌ಸೈಟ್.

ಈ ವೆಬ್‌ಸೈಟ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಚಂದೂ: ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಅಲ್ಲಿ ನಿಮಗೆ ಕೆಲವು ಮಾಹಿತಿಗಳು ದೊರೆಯುತ್ತವೆ. ಆದರೆ ಎಕ್ಸೆಲ್ ಕುರಿತಾಗಿ ಹೊಸತನ್ನು ಪ್ರಕಟಿಸುವುದು ನಮ್ಮ ಉದ್ದೇಶ. ಎಲ್ಲಾ ಹೊಸ ಸಲಹೆಗಳು ಮತ್ತು ಲೇಖನಗಳೊಂದಿಗೆ ಹೊಸತನ್ನು ಕಲಿಯಲು ಮತ್ತು ತಮ್ಮ ಬಾಸ್‌ ಅಥವಾ ಸಹೋದ್ಯೋಗಿಗಳ ಮೇಲೆ ಪ್ರಭಾವ ಬೀರಲು ಸಹಕರಿಸುತ್ತೇವೆ. ಪ್ರತಿನಿತ್ಯ ಸಾವಿರಾರು ಮಂದಿ ಎಕ್ಸೆಲ್ ಕುರಿತಾಗಿ ಹೊಸ ವಿಚಾರಗಳನ್ನು ಕಲಿಯುತ್ತಿದ್ದಾರೆ ಮತ್ತು ಅವರ ಕಾರ್ಯಕ್ಷೇತ್ರಗಳಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ ಎಂದು ನಾನು ನಂಬುತ್ತೇನೆ.

ಬೇರೆಯವರಿಗೆ ಎಕ್ಸೆಲ್ ವಿಚಾರದಲ್ಲಿ ಸಹಾಯ ಮಾಡಲು ನಿಮಗೆ ಪ್ರೇರಣೆ ಏನು?

ಚಂದೂ: ನಾವಿಲ್ಲಿ ಹಣ ಸಂಪಾದನೆ ಮಾಡಲೇಬೇಕೆಂದು ಕುಳಿತಿಲ್ಲ ಅಥವಾ ಬಿಲಿಯನ್ ಡಾಲರ್ ಗಟ್ಟಲೆ ಸಂಪಾದಿಸಬೇಕೆಂದೂ ನಮಗಿಲ್ಲ. ಎಕ್ಸೆಲ್ ನಲ್ಲಿ ಬೇರೆಯವರಿಗೆ ಸಹಾಯ ಮಾಡುವ ಮೂಲಕ ಅವರು ಎಕ್ಸೆಲ್‌ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತಾಗಬೇಕೆಂಬುದೇ ನಮ್ಮ ಉದ್ದೇಶ. ನಾವೇನೇ ಮಾಡಿದರೂ ಈ ಸಿದ್ಧಾಂತದ ಸುತ್ತಲೇ ಸುತ್ತುತ್ತಿರುತ್ತೇವೆ. ನಾವು ಈ ಕುರಿತು ಸಂಶೋಧನೆ ನಡೆಸುತ್ತಿದ್ದೇವೆ ಮತ್ತು ಅದೇ ಉದ್ದೇಶವನ್ನು ಸಾಧಿಸುವುದು ನಮ್ಮ ಗುರಿಯಾಗಿದೆ. ಹೀಗೆ ಮಾಡುತ್ತಾ ನಾನು ಅನೇಕ ಹೊಸ ವಿಚಾರಗಳನ್ನು ಕಲಿಯುತ್ತಿದ್ದೇನೆ.

ನಿಮ್ಮ ಉತ್ಪನ್ನ ಯಾವ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ?

ಚಂದೂ: ಎಕ್ಸೆಲ್‌ನ ಕಾರ್ಯವಿಧಾನ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಸುವ 2 ಇ-ಬುಕ್‌ಗಳಿವೆ. ಬಳಕೆಗೆ ಸಿದ್ಧವಾಗಿರುವ ಎಕ್ಸೆಲ್ ಕಡತಗಳನ್ನೂ ಸಹ ಹೊಂದಿದ್ದೇವೆ. ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಮತ್ತು ಪ್ರೋಗ್ರಾಮ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಟೆಂಪ್ಲೇಟ್‌ಗಳನ್ನೂ ಸಹ ಹೊಂದಿದ್ದೇವೆ. ಈ ಉತ್ಪನ್ನಗಳಿಂದ ಎಕ್ಸೆಲ್ ಬಗ್ಗೆ ಹೆಚ್ಚು ತಿಳಿದುಕೊಳ್ಳದೇ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ತ್ವರಿತ ಫಲಿತಾಂಶ ಪಡೆಯಲು ಸಹಾಯಕವಾಗಿದೆ. ಬಹಳಷ್ಟು ಜವಾಬ್ದಾರಿ ಹೊಂದಿರುವ ಪ್ರಾಜೆಕ್ಟ್ ಮ್ಯಾನೇಜರ್ ನಂತಹ ವೃತ್ತಿಪರರಿಗೆ ಹೊಸತಾಗಿ ಅನ್ವೇಷಿಸುವುದಕ್ಕಾಗಲಿ, ವರದಿಗಳನ್ನಾಗಲಿ ಅಥವಾ ಟೆಂಪ್ಲೇಟ್​​ಗಳನ್ನಾಗಲಿ ಮಾಡುವುದಕ್ಕೆ ಸಮಯವಿರುವುದಿಲ್ಲ. ಇಂಥವರಿಗೆ ಈ ಫೈಲ್‌ಗಳು ಬಹಳ ಉಪಯುಕ್ತವಾಗಿವೆ. ಇದಲ್ಲದೇ ಎಕ್ಸೆಲ್ ಕಾರ್ಯನಿರ್ವಹಣೆ, ಎಕ್ಸೆಲ್ ಮುಖಾಂತರ ವರದಿ ತಯಾರಿಸುವುದು, ಡ್ಯಾಶ್ ಬೋರ್ಡ್‌ಗಳನ್ನು ಸೃಷ್ಟಿಸುವುದು ಇತ್ಯಾದಿ ವಿಚಾರಗಳ ಕುರಿತು ಆನ್‌ಲೈನ್ ತರಬೇತಿ ತರಗತಿಗಳನ್ನೂ ಸಹ ನಡೆಸುತ್ತಿದ್ದೇವೆ.

ಓರ್ವ ಉದ್ಯಮಿಗೆ ಎಕ್ಸೆಲ್ ಕಲಿಯುವಿಕೆ ಹೇಗೆ ಸಹಾಯಕ?

ಚಂದೂ: ಒಬ್ಬ ಉದ್ಯಮಿಗೆ ಅನೇಕ ಸಣ್ಣ ವಿವರಣೆಗಳ ಕುರಿತು ಗಮನಿಸಲು ಸಮಯದ ಅಭಾವವಿರುತ್ತದೆ. ಹೀಗೆಯೇ ಯಾವುದೇ ಸಂಸ್ಥೆಯ ಸಂಸ್ಥಾಪಕ ಅಥವಾ ಸಿಇಓ ಅನೇಕ ವಿಚಾರಗಳ ಕುರಿತು ಗಮನಿಸುತ್ತಿರಬೇಕಾಗುತ್ತದೆ. ಉದಾಹರಣೆಗೆ, ತಮ್ಮ ಉದ್ಯಮಗಳ ಕುರಿತು ಉತ್ತಮ ದೃಷ್ಟಿಕೋನ ಮತ್ತು ಏನಾಗುತ್ತಿದೆ ಎಂಬುದರ ಅರಿವು, ಉದ್ಯಮದಲ್ಲಿ ಅವರು ಯಶಸ್ವಿಯಾಗಿ ಮುಂದುವರೆಯುತ್ತಿದ್ದಾರೋ ಅಥವಾ ಹಿಂದುಳಿದಿದ್ದಾರೋ, ಯಾವ ಉತ್ಪನ್ನ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಅಥವಾ ನೌಕರರ ಉತ್ಪಾದನಾ ಶಕ್ತಿ ಕ್ಷೀಣಿಸುತ್ತಿದೆಯೋ ಇಲ್ಲವೋ ಎಂಬುದರ ಕುರಿತು ಗಮನಹರಿಸಲೇಬೇಕಾಗಿರುತ್ತದೆ. ಇವು ಉದ್ಯಮವೊಂದು ಯಶಸ್ವಿಯಾಗಲು ತುಂಬಾ ಮುಖ್ಯವಾದ ಅಂಶವಾಗಿರುತ್ತದೆ. ಯಾವುದನ್ನು ಅಳತೆ ಮಾಡಬಹುದೋ ಆ ವಿಚಾರಗಳನ್ನು ಮಾತ್ರ ನಿರ್ವಹಣೆ ಮಾಡಬಹುದು. ನೀವು ಸಣ್ಣ ತಂಡವನ್ನು ಕಟ್ಟಿದರೆ, ಆ ಸಂಸ್ಥೆಯ ಸಂಸ್ಥಾಪಕನೇ ಸಂಸ್ಥೆಯ ಸಮಗ್ರ ವರದಿಯನ್ನು ತಯಾರಿಸಬೇಕಾಗಿರುತ್ತದೆ ಮತ್ತು ಉದ್ಯಮವನ್ನು ಆತನೇ ಗಮನಿಸುತ್ತಿರಬೇಕಾಗುತ್ತದೆ. ಅಲ್ಲದೇ ಅದು ಅತೀ ಮುಖ್ಯವಾದ ಅಂಶವೂ ಆಗಿರುತ್ತದೆ. ಅಂಥವರು ಬೇರೆಯವರಿಂದ ಮಾಹಿತಿ ಪಡೆದು ಕೆಲಸ ಮಾಡುವುದಕ್ಕಿಂತ ಎಕ್ಸೆಲ್‌ ಬಳಸಿಕೊಂಡು ಅನೇಕ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಬೇರೆಯವರನ್ನು ನೇಮಿಸಿಕೊಂಡರೆ ನಿಮ್ಮ ಡೆಸ್ಕ್‌ಗೆ ವರದಿ ಬರುವುದು ವಾರಗಟ್ಟಲೆ ಸಮಯ ತೆಗೆದುಕೊಳ್ಳಬಹುದು. ಆದರೆ ಎಕ್ಸೆಲ್ ಮೂಲಕ ನಿಮಗೆ ಅನುಕೂಲವಾಗುವ ರೀತಿಯಲ್ಲಿ, ನಿಮಗೆ ಬೇಕಾದಂತೆ ಕೆಲಸ ಮಾಡಬಹುದಾಗಿದೆ. ಹೀಗೆ ಓರ್ವ ಉದ್ಯಮಿಗೆ ಎಕ್ಸೆಲ್ ಕಲಿಕೆ ಸಹಾಯಕವಾಗಿದೆ.

Related Stories