ಕೈ ತುಂಬಾ ಸಂಬಳ, ಅತ್ಯುನ್ನತ ವ್ಯಕ್ತಿಗಳೊಡನೆ ನೆಟ್‍ವರ್ಕ್, ಬೆಂಗಳೂರಿನ ಹೈ-ಫೈ ಲೈಫ್​​ ಬಿಟ್ಟು ವಿದ್ಯೆ ಕಲಿಸಲು ಹೊರಟ "ಯುವಸಂತ"

ಚೈತ್ರ ಎನ್​​

1

ಕೈ ತುಂಬಾ ಸಂಬಳ, ಅತ್ಯುನ್ನತ ವ್ಯಕ್ತಿಗಳೊಡನೆ ನೆಟ್‍ವರ್ಕ್, ಬೆಂಗಳೂರಿನ ಹೈ - ಫೈ ಲೈಫೂ. ವೀಕೆಂಡ್ ಮಸ್ತಿ ಇದ್ದರೇ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಮಾಡರ್ನ್ ಮಾನವ. ಆದರೆ ಈ ಎಲ್ಲ ಸ್ವರ್ಗವನ್ನು ಬದಿಗೊತ್ತಿ ಅಕ್ಷರವೇ ಅಭಿವೃದ್ಧಿಯ ಮೂಲ ಎಂದು ನಿರ್ಧಾರ ಮಾಡಿ, ಅಮ್ಮನ ಕನಸು ನನಸು ಮಾಡಲು ಹೊರಟ ಯುವ ಸಾಧಕನ ಕಥೆ ಇದು!

ಆದರ್ಶ್ ಹುಂಚದ ಕಟ್ಟೆ..

ಎಸ್! ಆದರ್ಶ್ ಹುಂಚದ ಕಟ್ಟೆ ಎಂಬ ಇಂಜಿನಿಯರ್ ಸಾಫ್ಟ್​​ವೇರ್ ಕೆಲಸ ಬಿಟ್ಟು ಆಯ್ದುಕೊಂಡಿದ್ದು, ಮಾಧ್ಯಮ ಕ್ಷೇತ್ರವನ್ನು. ಸುಮಾರು 7 ವರ್ಷಗಳ ಕಾಲ ಮೀಡಿಯಾಗಳಲ್ಲಿ ಕೆಲಸ ಮಾಡಿದ ನಂತರ ತಾನು ಮಾಡಬೇಕಿರೋದು ಬೇರೇನೋ ಇದೆ. ಇದು ನನ್ನ ಕೆಲಸವಲ್ಲ ಎನ್ನುವ ಪ್ರಜ್ಞೆ ಜಾಗೃತವಾಗಿದೆ. ಆಗಲೇ ಬಡ ಮಕ್ಕಳಿಗೆ, ಸರ್ಕಾರಿ ಶಾಲೆ ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡಬೇಕು ಎನ್ನುವ ಹಂಬಲದಿಂದ ತನ್ನ ಹಟ್ಟೂರಿಗೆ ಹೊರಡುವ ಮಹತ್ತರ ಮತ್ತು ಮಾದರಿ ನಿರ್ಧಾರ ಕೈಗೊಂಡು ಅಲ್ಲೊಂದು ಶಾಲೆಯನ್ನು ಸ್ಥಾಪಿಸಿ ಸುಮಾರು 500 ಬಡ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಯಾವ ದೊಡ್ಡ ಶಾಲೆಗೂ ಕಡಿಮೆ ಇಲ್ಲದಂತೆ ವಿದ್ಯಾರ್ಜನೆಗೆ ಮುನ್ನುಡಿ ಬರೆದಿದ್ದಾರೆ. ಆದ್ರೆ ಈ ಯಶಸ್ಸು ಅಷ್ಟು ಈಸಿಯಾಗಿ ಬಂದಿದ್ದಲ್ಲ. ಅದರ ಹಿಂದಿನ ಸ್ಪೂರ್ತಿದಾಯಕ ರೋಚಕ ಸ್ಟೋರಿ ಇಲ್ಲಿದೆ ನೋಡಿ.

ಶಾಲೆ ಕಟ್ಟೋ ಕನಸು ಮೂಡಿದು ಹೀಗೆ !

"ಲೀಡರ್‍ಶಿಪ್ ಅಂದ್ರೆ, ಫೀಲ್ಡ್​ನಲಿ ನಿಂತು ಮಾಡಬೇಕು. ಟೀಂ ಮಾತ್ರ ಮುಂದೆ ಹೋಗೋದಲ್ಲ. ನೀನು ಮಾಡಿದ ಮೇಲೆ ನಿನ್ನ ಟೀಂ ಇರುತ್ತೆ." ಈ ಮಾತು ಸದಾಕಾಲ ನನ್ನ ಕಾಡುತ್ತಲೇ ಇತ್ತು. ಆದ್ದರಿಂದ ನಾನು ಮುಂದೆ ನಿಲ್ಲುವ ನಿರ್ಧಾರಕ್ಕೆ ಮುಂದಾದೆ. ಅದರ ಫಲವೇ ಶಿವಮೊಗ್ಗದ ಬಳಿ ಇರುವ ಆಯನೂರಿನಲ್ಲಿ ನಮ್ಮ ಹುಂಚದಕಟ್ಟೆ ಎಜುಕೇಷನಲ್ ಟ್ರಸ್ಟ್​ನ ವಾತ್ಸಲ್ಯ ಸ್ಕೂಲ್ ಆಫ್ ಫಾರ್ ಎಕ್ಸಲೆನ್ಸ್!

ಓದಿದ್ದು ಇಂಜಿನಿಯರಿಂಗ್ ಆದರೂ ಕನಸು ಮಾತ್ರ ಊರಿನ ಮಣ್ಣಿನಲ್ಲಿ ಶಾಲೆ ಮಾಡುವಲ್ಲಿಯೇ ಇತ್ತು. ಅಮ್ಮ ಸರ್ಕಾರಿ ಶಾಲೆ ಟೀಚರ್. ನಾನು ಓದಿದ್ದು ನವೋದಯ ಪಬ್ಲಿಕ್ ಶಾಲೆಯಲ್ಲಿ. ಅಲ್ಲಿನ ಎಜುಕೇಷನ್ ವ್ಯವಸ್ತಯೇ ಹಾಗಿತ್ತು. ಮಾಡಿ ಕಲಿ ನೋಡಿ ತಿಳಿ ಅನ್ನೋ ಹಾಗೆ. ಆ ಶಾಲೆಯಲ್ಲಿ ಕಲಿತವರು ಭೂಮಿ ಮೇಲೆ ಎಲ್ಲಿ ಬೇಕಾದರೂ ಲೈಫ್ ಲೀಡ್ ಮಾಡ್ತಾರೆ. ಇದೇ ಭರವಸೆಯನ್ನು ನಮ್ಮೂರಿನ ಶಾಲೆ ಮಕ್ಕಳಿಗೆ ನೀಡಬೇಕು ಅನ್ನೋ ಛಲ ಮೊದಲಿನಿಂಲೂ ನನ್ನಲ್ಲಿ ಹುಟ್ಟುತ್ತಿತ್ತು. ಸರಿ ಇದೆ ಕನಸನ್ನು ಇರಿಸಿಕೊಂಡು, ಇಂಜಿನಿಯರಿಂಗ್ ಮುಗಿಸಿ ಐಬೆಕ್ಸ್ ಸಿಸ್ಟಮ್‍ಗೆ ಕೆಲಸಕ್ಕೆ ಸೇರಿಕೊಂಡೆ. ಆದರೆ ಕಾರಣಾಂತರಗಳಿಂದ ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ 2006-07 ರಲ್ಲಿ ಮತ್ತೆ ಊರಿಗೆ ವಾಪಸ್ ಬಂದು ಶಾಲೆ ಮಾಡೋ ಕನಸು ನನಸು ಮಾಡಲು ಹೊರಟೆ. ಬೆಳಗಿನಿಂದ ಸಂಜೆಯ ತನಕ ಶಾಲೆಗೆ ಸೂಕ್ತವಾದ ಜಾಗವನ್ನು ಹುಡುಕುವುದರಲ್ಲೇ ಸಮಯ ಕಳೆದು ಹೋಗುತ್ತಿತ್ತು. ಆದರೆ ಇದೇ ಸಮಯ ಊರಿನಲ್ಲಿ ಒಂದೊಂದು ಮಾತು ಆಡಲು ಆರಂಭಿಸಿದರು. ಇಂಜಿನಿಯರ್ ಆಗಿ ಊರಿನಲ್ಲಿ ಏನ್ ಮಾಡ್ತಿದ್ದಾನೆ? ತಲೆ ಇಲ್ಲ ಇವನಿಗೆ ಎಂದು ಅಣಕಿಸುತ್ತಿದ್ದರು. ಆದರೆ ನಾನು ಅವರೆಲ್ಲರ ಮಾತಿಗೆ ಕಿವುಡನಾಗಿದ್ದೆ. ಒಂದು ವರ್ಷದಲ್ಲಿ ಲ್ಯಾಂಡ್ ಸಿಕ್ತು, 18 ಲಕ್ಷ ಸಾಲ ಮಾಡಿ ಆ ಸ್ಥಳವನ್ನು ತೆಗೆದುಕೊಂಡೆ. ಆದರೆ ಮತ್ತೆ ಆರ್ಥಿಕ ಸಂಕಷ್ಟ ಎದುರಾಯಿತು. ಈ ಬಾರಿ ಪುನಃ ಬೆಂಗಳೂರಿಗೆ ಬಂದೆ.

ಹುಟ್ಟಿದ ಊರು ಬಿಟ್ಟ ಬಂದ ಮೇಲೆ

ನನಗ್ಯಾಕೋ ಈ ಬಾರಿ ಇಂಜಿನಿಯರಿಂಗ್ ಕೆಲಸ ಇಷ್ಟವಾಗಲಿಲ್ಲ. ಆಗಷ್ಟೆ ಉದಯ ಟಿವಿಯಲ್ಲಿ ಪ್ರಾರಂಭವಾಗಿದ್ದ ಬಾಲಕೃಷ್ಣ ಕಾಕತ್ಕರ್ ಅವರ ಕ್ರೈಂ ಸ್ಟೋರಿ ಕಾರ್ಯಕ್ರಮದ ತಂಡಕ್ಕೆ ಸೇರಿಕೊಂಡೆ. 8-10 ತಿಂಗಳು ಕೆಲಸ ಮಾಡಿ ನಂತರ ಮನ್ವಂತರ, ಕಾಲಾಂತರ ಕಾರ್ಯಕ್ರಮಗಳಿಗೂ ಕೆಲಸ ಮಾಡಿದೆ. ಅಲ್ಲಿಂದ ಆಗಷ್ಟೆ ಆರಂಭವಾಗಿದ್ದ ಟಿವಿ9 ವಾಹಿನಿಗೆ ಸೇರಿಕೊಂಡೆ. ಅಲ್ಲಿಂದ ನನ್ನ ಲೈಫ್ ಕಂಪ್ಲೀಟ್ ಬದಲಾಯಿತು. ತುಂಬಾ ಜನರೊಟ್ಟಿಗೆ ನೆಟ್‍ವರ್ಕ್ ಬೆಳೆಯಿತು. ಟಿವಿ9ನ ನನ್ನ ಕಥೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ರಾಮಿ ಗ್ರೂಪ್‍ನ ಮುಖ್ಯಸ್ಥರಾದ ವರದರಾಜ ಶೆಟ್ಟಿಯವರ ಪರಿಚಯವಾಯಿತು. ಅವರಿಂದ ಬದುಕನ್ನು ನೋಡೊ ದೃಷ್ಟಿಯನ್ನೆ ಬದಲಾಯಿಸಿಕೊಂಡೆ. ನಂತರ ಅವರೊಟ್ಟಿಗೆ 2 ವರ್ಷ ದುಬೈಗೆ ಹೋದೆ. ಅಲ್ಲಿಂದ 2011 ರಲ್ಲಿ ಕನ್ನಡದ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿತ್ತು. ಅದರಲ್ಲಿ ಸ್ವಲ್ಪ ತಿಂಗಳು ಕೆಲಸ ಮಾಡಲು ಆರಂಭಿಸಿದೆ. ಅಷ್ಟರಲ್ಲೇ ಬರಸಿಡಿಲಿನ ಆಘಾತ ಎದುರಾಗಿತ್ತು ಅದುವೇ ನನ್ನ ತಂದೆ ತೀರಿಕೊಂಡಿದ್ದು.

ಅಪ್ಪನೇ ನನ್ನ ಗಾಡ್‍ಫಾದರ್

ಅಪ್ಪನೊಂದಿಗೆ ಬಹಳ ಬಾಂಧವ್ಯ ಹೊಂದಿದ್ದೆ. ಆ ಆಘಾತದಿಂದ ಹೊರಬರಲು ಎಲ್ಲರೂ ಸಹಕರಿಸಿದರು. ಮುಖ್ಯವಾಗಿ ಊರಿನವರು. ಶೀವಮೊಗ್ಗದ ಬಳಿ ಇರುವ ಹುಂಚದ ಕಟ್ಟೆ ಸಮೀಪದ ಆಯನೂರಿನಲ್ಲಿ ನಮ್ಮ ತಂದೆ ಸಾಕಷ್ಟು ಸಾಮಾಜಿಕ ಕೆಲಸ ನಿರ್ವಹಿಸಿದ್ದರು. ಸಹಕಾರಿ ಬ್ಯಾಂಕ್, ಸೊಸೈಟಿಯನ್ನು ಶುರು ಮಾಡಿದ್ರು. ಇದು ಆ ಊರಿನ ಜನಕ್ಕೆ ಹೊಸ ಬದುಕನ್ನು ಕಟ್ಟಿಕೊಟ್ಟಿತ್ತು. ಪ್ರತಿಯೊಬ್ಬರು ನನ್ನ ತಂದೆ ಬಗ್ಗೆ ಸೇವೆಯ ಬಗ್ಗೆ ಮಾತಾನಾಡುವಾಗ ನಾನು ಆಶ್ಚರ್ಯಚಕಿತನಾದೆ. ನನ್ನ ತಂದೆಯ ಕೆಲಸವನ್ನೆ ಮಾದರಿಯಾಗಿ ತೆಗೆದುಕೊಂಡು ಆಯನೂರಿನಲ್ಲೆ ಅರ್ಧಕ್ಕೆ ನಿಂತಿದ್ದ ನಮ್ಮ ಶಾಲೆ ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸ್ ಅನ್ನು ಕಟ್ಟುವ ಕನಸಿಗೆ ಮುಂದಾದೆ. ಮೊದಲು ಮನೆಯ ಪಕ್ಕದ ಶೆಡ್‍ನಲ್ಲಿ ನಮ್ಮ ಊರಿನ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದೆವು. ಮೊದಲು ಮಕ್ಕಳು ಶಾಲೆಗೆ ಬರುತ್ತಿರಲಿಲ್ಲ. ನಾವೇ ಮನೆ ಮನೆಗೂ ಹೋಗಿ ಕನ್ವಿನ್ಸ್ ಮಾಡಿ ಕರೆದುಕೊಂಡು ಬರುತ್ತಿದ್ದೆವು. ಅಷ್ಟೆ ಅಲ್ಲದೇ ನಾವೇ ಆ ಮಕ್ಕಳ ಎಲ್ಲಾ ಅಗತ್ಯತೆಗಳನ್ನು ಪೂರೈಸುತ್ತಿದ್ದೆವು. ಇದರಲ್ಲಿ ತಮಿಳುನಾಡಿನ ಅಲೆಮಾರಿ ಹಳ್ಳಿ ರೈತರು, ಗುಡ್ಡಗಾಡಿನ ಮಕ್ಕಳು ಸಹ ಕಲಿಯುತ್ತಿದ್ದರು.

ಅಆಇಈ ಜೊತೆ ಎಬಿಸಿಡಿ ಕಲಿತುಬಿಟ್ರು

ಕನ್ನಡದ ವರ್ಣಮಾಲೆ ಜೊತೆ ಜೊತೆ ಎಬಿಸಿಡಿ, ಮಗ್ಗಿ ಹೇಳಿಕೊಡುವುದನ್ನು ಮೊದಲು ಆರಂಭಿಸಿದೆವು. 1 ನೇ ತರಗತಿಯಿಂದ 5 ನೇ ತರಗತಿಯವರೆಗೆ 19 ಮಕ್ಕಳಿಂದ ಪ್ರಾರಂಭವಾದ ಶಾಲೆ ಎಲ್‍ಕೆಜಿ, ಯುಕೆಜಿ ಸೇರಿ 46 ಮಕ್ಕಳು ಶಾಲೆಗೆ ಬರಲು ಪ್ರಾರಂಭಿಸಿದರು. ಅಷ್ಟರಲ್ಲೇ ಮತ್ತೊಂದು ಸಮಸ್ಯೆ ಎದುರಾಯಿತು. ಶಾಲೆಯಿಂದ ಮಕ್ಕಳ ಮನೆಗೆ 20 ಕಿ.ಮಿ ಅಂತರವಿತ್ತು. ಇದನ್ನು ಬಗೆಹರಿಸಲು ನಾವೇ ಸ್ವಂತ ಬಸ್ ವ್ಯವಸ್ಥೆ ಮಾಡಿದ್ವಿ. ನಮ್ಮ ಈ ಕಾರ್ಯವನ್ನು ನಿಧಾನವಾಗಿ ಪೋಷಕರು ಮೆಚ್ಚಿಕೊಂಡು ಮಕ್ಕಳನ್ನು ನಮ್ಮ ಶಾಲೆಗೆ ಕಳಿಸೋ ಸಂಖ್ಯೆ ಹೆಚ್ಚಾಯಿತು. ಶಾಲೆ ಬಿಲ್ಡಿಂಗ್ ಪ್ರಾರಂಭಿಸೋ ಹೊಸ ಉತ್ಸಾಹ ಮೂಡಿತು. ಅಮ್ಮ ಟೀಚರ್ ಆಗಿದ್ದವರು ವಿಆರ್‍ಎಸ್ ತೆಗೆದುಕೊಂಡರು. ಅಪ್ಪನ ಪೆನ್‍ಷನ್, ಎಲ್ಲಾ ಸೇವಿಂಗ್ಸ್, ಊರಿನಲ್ಲಿದ್ದ ಎಲ್ಲಾ ಪ್ರಾಪರ್ಟಿಗಳನ್ನು ಮಾರಿದೆವು. ನನ್ನ ಸೇವಿಂಗ್ಸ್ ಕೂಡ ಖಾಲಿಯಾಯಿತು. ಸ್ನೇಹಿತರ ಸಹಕಾರದಿಂದ ಮೊದಲು 6 ರೂಮ್‍ಗಳಿರುವ ಬಿಲ್ಡಿಂಗ್ ಆರಂಭಿಸಿದೆವು. ಎಲ್ಲಾವೂ ಅಂದುಕೊಂಡಂತೆ ನಡೆಯಿತು. ಆದರೆ ಸಿಟಿಗಳಲ್ಲಿ ಸಿಗುವಂತೆ ಇಂಗ್ಲಿಷ್ ಬಲ್ಲ, ಪ್ರಾವಿಣ್ಯತೆ ಇರುವ ಶಿಕ್ಷಕರ ಕೊರತೆ ನಮ್ಮ ಹಳ್ಳಿಯಲ್ಲುಂಟಾಯಿತು. ಜೊತೆಗೆ ಹೇಗೋ ಶಿಕ್ಷಕರನ್ನು ಹೊಂದಿಸಿದೆವು. 6 ಕಂಪ್ಯೂಟರ್ ವ್ಯವಸ್ಥೆ ಕೂಡ ಮಾಡಿದೆವು. ಇಷ್ಟು ಹೊತ್ತಿಗೆ ನಮ್ಮ ಕೈ ಸಂಪೂರ್ಣ ಬರಿದಾಗಿತ್ತು. 20-30 ಸಾವಿರಕ್ಕೆ ಒದ್ದಾಡುತ್ತಿದ್ದೆವು. ತಿಂಗಳಿಗೆ 4 ಲಕ್ಷ ಖರ್ಚು ಬರುತ್ತದೆ. 4 ಬಸ್, ಟೀಚರ್ಸ್ ಸ್ಯಾಲರಿ, ಬಿಲ್ಡಿಂಗ್ ಮ್ಯಾನೆಜ್‍ಮೆಂಟ್ ಮಾಡಲು ಖರ್ಚಾಗುತ್ತದೆ. 200 ಜನ ಸ್ಟೂಡೆಂಟ್ಸ್​ಗೆ ಅಲ್ಲಿನ ಹಳ್ಳಿಯ ಶಿಕ್ಷಕರು ಟ್ರೈನ್ ಅಪ್ ಮಾಡ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯನ್ನು ಮಕ್ಕಳು ಸರಾಗವಾಗ ಆಡುವಾಗ ನಮ್ಮ ಶ್ರಮ ಸಾರ್ಥಕವೆನಿಸುತ್ತದೆ.

ಸದ್ಯ 12 ಟೀಚರ್ಸ್, 26 ಜನ ಎಂಪ್ಲಾಯಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವರ್ಷ 500 ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಸೇರಲಿದ್ದಾರೆ. ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ತೆಯನ್ನು ಮಾಡಿದ್ದೇವೆ. ಇದಕ್ಕಾಗಿ ನಮ್ಮ ಎಲ್‍ಐಸಿ ಬಾಂಡ್ ಅಡವಿಟ್ಟಿದ್ದೇವೆ. ಫಂಡಿಂಗ್ ಸಮಸ್ಯೆಯೇ ಒಮ್ಮೊಮ್ಮೆ ಭಯ ಮೂಡಿಸುತ್ತೆ. ಆದರೂ ಧೈರ್ಯದಿಂದ ನಡೆಸುತ್ತಿದ್ದೇವೆ.

ನಮ್ ಸ್ಕೂಲ್ ಬಹಳ ಡಿಫರೆಂಟ್

ನಮ್ಮ ಹಳ್ಳಿ ಮಕ್ಕಳಿಗೆ ಸಿಟಿ ಮಕ್ಕಳಷ್ಟೆ ಸೌಲಭ್ಯ ನೀಡಲಾಗುತ್ತಿದೆ. ಡಾನ್ಸ್, ಮ್ಯೂಸಿಕ್ , ಸ್ಪೋರ್ಟ್ಸ್​ , ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಬಳಕೆ ಹೇಳಿಕೊಡಲಾಗುತ್ತಿದೆ. ವಿಡಿಯೋ ಲೈಬ್ರರಿ ಮಾಡುವ ಕನಸು ಇದೆ. ಮಧ್ಯಾಹ್ನ ಪಾಲಿ ಹೌಸ್ ಮಾಡುತ್ತಿದ್ದೇವೆ. ಅಲ್ಲಿ ಮಕ್ಕಳ ಕೈಯಲ್ಲೇ ಸಾವಯವ ತರಕಾರಿ ಬೆಳೆಸುತ್ತೇವೆ. ಮಕ್ಕಳಿಗೆ ಟೋಮ್ಯಾಟೋ ಎಲ್ಲಿ ಸಿಗುತ್ತೆ? ಅನ್ನುವುದಕ್ಕಿಂತಲೂ ಹೇಗೆ ಸಿಗುತ್ತೇ?ಅನ್ನೋದನ್ನು ಕಲಿಸುತ್ತಿದ್ದೇವೆ. ಜೊತೆಗೆ ಸುಡೋಕು ಪದಬಂಧವನ್ನು ಕಲಿಸಲಾಗುತ್ತಿದೆ. ತುಂಬಾ ಬುದ್ದಿವಂತರಿಗೆ ಕಲಿಸಿ Rank ಪಡೆಯೋದಕ್ಕಿಂತ ಬಿಲೋ ದಿ ಆವರೇಜ್ ಮಕ್ಕಳಿಗೆ ಕಲಿಸಿ ಅವರ ಐಕ್ಯೂ ಮಾಡುತ್ತಿದ್ದೇವೆ. ಆ ಮೂಲಕ ಎಲ್ಲ ಮಕ್ಕಳು ಸಮಾನ ಬುದ್ದಿವಂತರು ಎನ್ನುವುದನ್ನು ತಿಳಿಯಪಡಿಸಿದ್ದೇವೆ. ಇಲ್ಲಿ ಕಿವುಡ ಮತ್ತು ಮೂಗ ಮಕ್ಕಳು ಕೂಡ ಇದ್ದಾರೆ. ಅವರಿಗೆ ವಿಶೇಷ ಕಾಳಜಿ ವಹಿಸಿ ಕಲಿಸಲಾಗುತ್ತಿದೆ.

ಅಮ್ಮನ ಕನಸು ಅಪ್ಪನ ಹೆಮ್ಮೆ ನಮ್ಮ ಶಾಲೆ

ಅಮ್ಮ ಕಟ್ಟಿದ ಕನಸಿನಂತೆ ನಮ್ಮ ಹಳ್ಳಿಯಲ್ಲೇ ಶಾಲೆಯಾಗಿದೆ. ಅಪ್ಪನ ಕಾಳಜಿಯಂತೆ ಅವರ ಶಾಲೆ ಬೆಳೆಯುತ್ತಿದೆ. ಅಕ್ಕ ಅಕ್ಷತಾ ಹುಂಚದ ಕಟ್ಟೆ ಮತ್ತು ಭಾವ ಎಲ್ಲಾ ಸ್ನೇಹಿತರು ಗೆಳೆಯ ಆಶ್ರಯ್ ಸುಮಾರು 20 ಲಕ್ಷದವರೆಗೆ ಹಣ ಸಹಾಯ ಮಾಡಿ ನನ್ನ ಕನಸಿಗೆ ನೀರು ಎರೆದಿದ್ದಾರೆ. ನನ್ನ ಪತ್ನಿ ಶೃತಿ ಕೂಡ ಮಾಧ್ಯಮದಲ್ಲಿ ಕೆಲಸ ಬಿಟ್ಟು ನನ್ನ ಕೆಲಸದಲ್ಲಿ ಕೈ ಜೋಡಿಸಿದ್ದಾರೆ. ಮಕ್ಕಳಿಗೆ ನೃತ್ಯ ಕಲಿಕೆ, ಕ್ರಾಫ್ಟ್ ವರ್ಕ್ ಹೇಳಿಕೊಡುವುದು ಮಾಡುತ್ತಾರೆ, ನಮಗೆ ಹಣ ಮಾಡುವ ಆಸೆ ಇಲ್ಲ. ಸಿಟಿಗಳಲ್ಲಿ ತಂದೆ ತಾಯಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಪರದಾಡುವ ಪರಿ ಪಾಟಲು ಅವರ ಬವಣೆಗಳು ಕಣ್ಣಲ್ಲಿ ಕಟ್ಟಿವೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮೂಲ ನೆಲದಲ್ಲೆ ಜಾಗತಿಕ ಸೌಲಭ್ಯಗಳು ದೊರೆತಾಗ ಆತ ತನ್ನ ಮಣ್ಣನ್ನು ಬಿಡುವುದಿಲ್ಲ. ಆಗ ತನ್ನ ಹಳ್ಳಿಯೂ ಬೆಳೆಯುತ್ತದೆ. ದೇಶವು ಬೆಳೆಯುತ್ತದೆ. ಈ ನಿಟ್ಟಿನಲ್ಲಿ ನಾನು ಓದಿದ ಇಂಜಿನಿಯರಿಂಗ್‍ನ ಜ್ಞಾನ, ಕೆಲಸ ಮಾಡಿದ ಮಾಧ್ಯಮದ ಕೌಶಲ್ಯತೆ ಮತ್ತು ನನ್ನ ಮನದ ಬಯಕೆಗೆ ಪೂರಕವಾಗಿ ಕಾಂಕ್ರೀಟ್ ಕಾಡು ತೊರೆದು ನನ್ನ ಹುಟ್ಟಿದ ಊರಿಗೆ ಮರಳಿ ಬಂದಿದ್ದೆನೆ, ಕನಸು ಹೆಣೆದಿದ್ದೇನೆ. ಅದು ನನಸಾಗುತ್ತಲೇ ಸಾಗಿದೆ.

Related Stories