ಉದ್ಯಮಿಗಳ ಯಶಸ್ಸಿನ ಕಹಾನಿಗೆ ನಾಂದಿ ಹಾಡಿದ ಶ್ರೀನಿವಾಸ್ … 

ಅರವಿಂದ್​ ಯಾದವ್​​

0

ಹೈದರಾಬಾದ್‍ನ್ನು ವಿಶ್ವದ ಅತ್ಯುನ್ನತ ಸ್ಟಾರ್ಟ್‍ಅಪ್ ಕ್ಷೇತ್ರವನ್ನಾಗಿ ಪರಿವರ್ತಿಸಲು ಕಸರತ್ತು...ವಿಶ್ವದಲ್ಲಿ ಹೊಸ ಅಲೆ ಸೃಷ್ಟಿಸಲೆಂದೇ ಜನ್ಮ ತಲೆದ ಟಿ-ಹಬ್...ಕುಟುಂಬದ ಸಂಪ್ರದಾಯವನ್ನು ಮುನ್ನಡೆಸುತ್ತಲೇ ಸ್ಟಾರ್ಟ್‍ಅಪ್‍ನ ವಿಶ್ವಸನೀಯ ಸಲಗೆಹಾರರಾದ ಸಾಹಸಿ..

ಆ ಮಗುವಿನ ಮನಸ್ಸಿನಲ್ಲಿ ಹತ್ತಾರು ಸವಾಲುಗಳಿದ್ವು. ಬೇರೆ ಬೇರೆ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಆಸಕ್ತಿ ಇತ್ತು. ಮನಸ್ಸಿನಲ್ಲಿ ಯಾವುದೇ ಸವಾಲುಗಳೆದ್ದರೂ ಯಾವುದೇ ಸಂಕೋಚವಿಲ್ಲದೆ ಆತ ತನ್ನ ತಂದೆಯನ್ನು ಕೇಳ್ತಾ ಇದ್ದ. ಆಗಸದಲ್ಲಿ ಮೋಡಗಳನ್ನು ನೋಡಿ ``ಮೋಡ ತನ್ನದೇ ಆಕಾರ, ರಂಗು ಹೇಗೆ ಪಡೆಯುತ್ತೆ?'' ಎಂದು ಕೇಳುತ್ತಿದ್ದ. ಮನುಷ್ಯನ ದೇಹ ಇದ್ದಕ್ಕಿದ್ದಂತೆ ಬಿಸಿಯಾಗುವುದು ಏಕೆ? ಮಕ್ಕಳಿಗೇಕೆ ಜ್ವರ ಬರುತ್ತೆ ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದ. ಆತನಲ್ಲಿ ಎಷ್ಟು ಕುತೂಹಲ ಇತ್ತೆಂದ್ರೆ ಗಡಿಯಾರವನ್ನು ಬಿಚ್ಚಿ ಯಾವ ತಂತ್ರ-ಯಂತ್ರ ವಿದ್ಯೆಯಿಂದ ಅದು ಚಲಿಸುತ್ತೆ ಅಂತಾ ಪರೀಕ್ಷಿಸ್ತಾ ಇದ್ದ. ಯಾವುದೇ ತಪ್ಪಿಲ್ಲದೆ ಯಾವಾಗಲೂ ಕ್ಯಾಲ್ಕ್ಯುಲೇಟರ್ ಹೇಗೆ ಸರಿ ಉತ್ತರ ನೀಡುತ್ತೆ? ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ, ಎಲ್ಲವನ್ನು ಬಿಚ್ಚಿ ಜೋಡಿಸುತ್ತಿದ್ದ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇತ್ತು. ಆ ಮಗುವಿಗೆ ಪ್ರತಿ ವಸ್ತುವಿನಲ್ಲೂ ಪ್ರಶ್ನೆಗಳಿತ್ತು, ಅದಕ್ಕೆ ಉತ್ತರ ಹುಡುಕಲು ತನ್ನ ತಂದೆಯ ನೆರವು ಪಡೆಯುತ್ತಿದ್ದ. ಯಾಕಂದ್ರೆ ಆತನ ತಂದೆ ಪ್ರಸಿದ್ಧ ವೈದ್ಯರಾಗಿದ್ರು, ಯಾವುದೇ ಜಿಜ್ಞಾಸೆಯಲ್ಲಿ ಮಗನನ್ನು ಬಿಡುತ್ತಿರಲಿಲ್ಲ, ಎಲ್ಲ ಪ್ರಶ್ನೆಗೂ ಉತ್ತರ ಹೇಳುತ್ತಿದ್ರು.

ದೊಡ್ಡವನಾಗ್ತಿದ್ದಂತೆ ಆ ಬಾಲಕ ತನ್ನ ಪ್ರಶ್ನೋತ್ತರಗಳ ಈ ಸರಣಿಯಿಂದ ಹೊಸ ಮಂತ್ರವನ್ನು ಕಲಿತಿದ್ದ. ಸರಿಯಾದ ವ್ಯಕ್ತಿಯಲ್ಲಿ ಸರಿಯಾದ ಪ್ರಶ್ನೆ ಕೇಳಿದಾಗ ಮಾತ್ರ ಯಶಸ್ಸಿನ ಮಾರ್ಗ ಸಿಗಲಿದೆ ಅನ್ನೋದು ಅರ್ಥವಾಗಿತ್ತು. ಇದೇ ಮಂತ್ರವನ್ನೇ ಅನುಸರಿಸಿ ಆತ ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾನೆ. ಇವತ್ತು ಜಗತ್ತಿನ ಅದೆಷ್ಟೋ ಉದ್ಯಮಿಗಳು ಮತ್ತು ಉತ್ಸಾಹಿ ಯುವಕರ ಕನಸನ್ನು ನನಸು ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

ಇದನ್ನು ಓದಿ: ಏನಾದರು ದಾಖಲೆ ಮಾಡಬೇಕು... ಜಗತ್ತೇ ತಿರುಗಿ ನೋಡಬೇಕು..!

ಅವರು ಯಾರು ಗೊತ್ತಾ? ಶ್ರೀನಿವಾಸ್ ಕೊಲ್ಲಿಪಾರಾ. ಹೈದ್ರಾಬಾದ್‍ನಲ್ಲಿ ಉದ್ಯಮಿಗಳಿಗೆ ಉತ್ತಮ ವಾತಾವರಣ ಮತ್ತು ಪರಿಸರ ನಿರ್ಮಾಣ ಮಾಡಲೆಂದೇ ಶ್ರೀನಿವಾಸ್ ಟಿ-ಹಬ್ ಸ್ಥಾಪಿಸಿದ್ದಾರೆ. ಸದ್ಯ ಶ್ರೀನಿವಾಸ್ ಟಿ-ಹಬ್‍ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಇಓ ಆಗಿದ್ದಾರೆ. ಅಸಲಿಗೆ ಶ್ರೀನಿವಾಸ್ ಅವರೇ ಟಿ-ಹಬ್‍ನ ಸಂಸ್ಥಾಪಕರು. ಬಾಲ್ಯದಲ್ಲಿನ ಪ್ರಶ್ನೋತ್ತರ ಸರಣಿಯ ಗುರು-ಮಂತ್ರದ ಲಾಭ ಪಡೆದು ಶ್ರೀನಿವಾಸ್, ಉದ್ಯಮಿಗಳಿಗೆ ವಿಶ್ವಾಸಾರ್ಹ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯುವರ್ ಸ್ಟೋರಿ ಜೊತೆ ಮಾತನಾಡಿದ ಶ್ರೀನಿವಾಸ್, ತಮ್ಮ ಬಾಲ್ಯದ ಕಲಿಕೆಯಿಂದ್ಲೇ ಈಗ ಉದ್ಯಮಿಗಳಿಗೆ ಸವಾಲಿನ ಮೇಲೆ ಸವಾಲು ಎಸೆಯುತ್ತಿದ್ದೇನೆ ಅಂತಾ ತಿಳಿಸಿದ್ರು. ಎಲ್ಲ ಪ್ರಶ್ನೆಗಳೂ ಸರಿಯಾಗಿರಬೇಕು ಅನ್ನೋದು ಅವರ ಪ್ರಯತ್ನ. ಸೂಕ್ತ ಪ್ರಶ್ನೆಗಳನ್ನು ಕೇಳುತ್ತ ಕೇಳುತ್ತ ಉದ್ಯಮಿಗಳ ಚಿಂತನೆ, ಶಕ್ತಿ, ಸಾಮಥ್ರ್ಯವನ್ನು ಅಂದಾಜಿಸುತ್ತಾರೆ. ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಲೇ ಅವರು ಉದ್ಯಮಿಗಳಿಗೆ ಸರಿಯಾದ ಮಾದರಿಯನ್ನು ತಿಳಿಸಿಕೊಡ್ತಾರೆ. 

``ನಾನು ಉದ್ಯಮಿಗಳು ಹಾಗೂ ಸ್ಟಾರ್ಟ್‍ಅಪ್‍ಗಳನ್ನು ಮುನ್ನಡೆಸುತ್ತಿರುವವರ ಸಮಸ್ಯೆಗಳಿಗೆ ಸಮಾಧಾನ ಮತ್ತು ಪರಿಹಾರ ಹೇಳುವುದಿಲ್ಲ. ಸರಿಯಾದ ಪ್ರಶ್ನೆಯ ಮೂಲಕ ಪರಿಹಾರ ಕಂಡುಕೊಳ್ಳಲು ಅವರಿಗೆ ನೆರವಾಗುತ್ತೇನೆ'' 
- ಶ್ರೀನಿವಾಸ್

ಭಾರತದ ಉದ್ಯಮಿಗಳ ಶಕ್ತಿ ಅತ್ಯಂತ ದೊಡ್ಡದು, ಜಗತ್ತನ್ನೇ ಬದಲಾಯಿಸುವ ತಾಕತ್ತು ಅವರಿಗಿದೆ ಅನ್ನೋದು ಶ್ರೀನಿವಾಸ್ ಅವರ ನಂಬಿಕೆ. ಯಾವುದೇ ರಾಷ್ಟ್ರಕ್ಕೆ ಯಶಸ್ಸಿನ ಕಹಾನಿ ಬರೆಯಬೇಕೆಂದಿದ್ದರೆ, ಇದಕ್ಕಾಗಿ ಕೇವಲ ಒಂದನ್ನು ಅನೇಕ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಬೇಕು. ಇದಕ್ಕಾಗಿ ಬೆಂಗಳೂರು ಮಾತ್ರವಲ್ಲ ಹೈದರಾಬಾದ್‍ನಲ್ಲೂ ಸ್ಟಾರ್ಟ್‍ಅಪ್‍ನ ದೊಡ್ಡ ಕೇಂದ್ರ ಮುನ್ನಡೆಸುವ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ. ಟಿ-ಹಬ್‍ನ ಸ್ಥಾಪನೆ ಹಾಗೂ ಅದರ ಕಾರ್ಯನಿರ್ವಹಣೆಯನ್ನು ನೋಡ್ತಾ ಇದ್ರೆ ತಮ್ಮ ಪ್ರಯತ್ನದಲ್ಲಿ ಶ್ರೀನಿವಾಸ್ ಯಶಸ್ಸು ಪಡೆದಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

2015ರ ನವೆಂಬರ್ 5ರಂದು ಟಿ-ಹಬ್ ಶುಭಾರಂಭ ಮಾಡಿದೆ. ಈ ಸಂದರ್ಭದಲ್ಲಿ ಜಗತ್‍ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ, ತೆಲಂಗಾಣ ರಾಜ್ಯಪಾಲ ನರಸಿಂಹನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ರು. ಟಿ-ಹಬ್ ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯ ಅದ್ಭುತ ಸಂಸ್ಥೆ. ತೆಲಂಗಾಣ ಸರ್ಕಾರ, ಐಐಐಟಿ ಹೈದರಾಬಾದ್, ಇಂಡಿಯನ್ ಸ್ಕೂಲ್ ಹಾಗೂ ದೇಶದ ಪ್ರಸಿದ್ಧ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಟಿ-ಹಬ್ ಆರಂಭಿಸಲಾಗಿದೆ. ಉದ್ಯಮಿಗಳಿಗೆ ಅಭಿವೃದ್ಧಿಯ ಮಾರ್ಗ ಮತ್ತು ಅತ್ಯುತ್ತಮ ವಾತಾವರಣ ನಿರ್ಮಾಣ ಮಾಡುವುದು ಟಿ-ಹಬ್ ಸ್ಥಾಪನೆಯ ಉದ್ದೇಶ. ಐಐಟಿ ಸಂಕೀರ್ಣದಲ್ಲಿರುವ ಟಿ-ಹಬ್ 70 ಸಾವಿರ ಚದರ ಅಡಿ ವಿಸ್ತಾರವಾಗಿದೆ. ಇಲ್ಲಿ ಕಾರ್ಯನಿರ್ವಹಿಸಲು ಉದ್ಯಮಿಗಳಿಗೆ ಅತ್ಯಾಧುನಿಕ ಹಾಗೂ ವಿಶ್ವಾಸಾರ್ಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದೀಗ ಹಲವು ಸ್ಟಾರ್ಟ್‍ಅಪ್‍ಗಳು ಟಿ-ಹಬ್‍ನಿಂದ್ಲೇ ಕಾರ್ಯನಿರ್ವಹಿಸುತ್ತಿವೆ. ಮಹತ್ವದ ವಿಚಾರ ಅಂದ್ರೆ ಟಿ-ಹಬ್‍ನಲ್ಲಿ ಇನ್ಕ್ಯುಬೇಟರ್ಸ್ ಮತ್ತು ಎಕ್ಸಲೇಟರ್ಸ್‍ಗೆ ಪ್ರತ್ಯೇಕ ಸ್ಥಳ ನೀಡಲಾಗಿದೆ. ಕಾಲಕಾಲಕ್ಕೆ ಹೂಡಿಕೆದಾರರನ್ನು ಭೇಟಿ ಮಾಡಲು ಉದ್ಯಮಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಉದ್ಯಮಿಗಳಿಗೆ ಜ್ಞಾನ, ವ್ಯವಸ್ಥೆಯ ರಚನೆ ಹಾಗೂ ಬೆಳವಣಿಗೆಯ ಮೂಲ ಟಿ-ಹಬ್. ಟಿ-ಹಬ್‍ನಲ್ಲಿ ಯಶಸ್ಸಿನ ಹಲವು ಕಥೆಗಳು ದಾಖಲಾಗಲಿವೆ, ಇವುಗಳ ಬಗ್ಗೆ ದೇಶದ ಮೂಲೆಮೂಲೆಯಲ್ಲೂ ಚರ್ಚೆಯಾಗಲಿದೆ ಎಂಬ ಭರವಸೆ ಸಿಇಓ ಶ್ರೀನಿವಾಸ್ ಅವರಿಗಿದೆ.

``ಬೆಂಗಳೂರು ಹಾಗೂ ಹೈದ್ರಾಬಾದ್ ಮಧ್ಯೆ ಕಲಹ ಸೃಷ್ಟಿಸುವುದು ಟಿ-ಹಬ್‍ನ ಉದ್ದೇಶವಲ್ಲ. ಎರಡು ನಗರಗಳ ನಡುವೆ ಪರಸ್ಪರ ಸಹಯೋಗ ಇದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಭಾರತದಲ್ಲಿ ಅಭಿವೃದ್ಧಿ ಕೇಂದ್ರಗಳು ಒಂದಲ್ಲ, ಹಲವು ಇರಬೇಕು. ನಗರಗಳ ಮಧ್ಯೆ ನಂಬರ್ ವನ್ ಪಟ್ಟಕ್ಕಾಗಿ ಸ್ಪರ್ಧೆ ಇರಬೇಕು ನಿಜ ಆದ್ರೆ ಕಲಹ ಒಳ್ಳೆಯದಲ್ಲ'' ಅನ್ನೋದು ಶ್ರೀನಿವಾಸ್ ಅವರ ಅಭಿಪ್ರಾಯ. ಹೈದರಾಬಾದ್‍ನ್ನೇ ಆಯ್ದುಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸುತ್ತ ಅವರು ಭಾವುಕರಾದ್ರು. ತಮ್ಮ ಬದುಕಿನ ಹಲವು ನೆನಪುಗಳನ್ನು ಮೆಲುಕು ಹಾಕಿದ್ರು.

ಹೈದರಾಬಾದ್‍ನೊಂದಿಗೆ ಶ್ರೀನಿವಾಸ್ ಅವರಿಗೆ ಅವಿನಾಭಾವ ಸಂಬಂಧವಿದೆ. ಅವರ ಆತ್ಮೀಯ ಗೆಳೆಯರು ಇರುವುದು ಹೈದ್ರಾಬಾದ್‍ನಲ್ಲಿ. ಹೈದ್ರಾಬಾದ್‍ನ ಪ್ರಸಿದ್ಧ ಹಾಗೂ ಪ್ರಬಲ ಕುಟುಂಬಗಳೊಂದಿಗೆ ಅವರು ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಹೈದರಾಬಾದ್‍ನಲ್ಲಿ ಆರಾಮಾಗಿ ಕೆಲಸ ಮಾಡಬಹುದೆಂದು ಅವರಿಗೆ ಅನಿಸಿತ್ತು. ರಾಜಕಾರಣಿಗಳು ಹಾಗೂ ಅಧಿಕಾರಿಗಳಿಂದ್ಲೂ ನೆರವು ಸಿಗಲಿದೆ ಎಂಬ ನಂಬಿಕೆಯಿತ್ತು.

ಶ್ರೀನಿವಾಸ್ ಅವರ ಪ್ರಕಾರ ಹೈದರಾಬಾದ್, ಜೀವಶಾಸ್ತ್ರ, ವೈದ್ಯಕೀಯ ಹಾಗೂ ಕೃಷಿಯ ಅತಿ ದೊಡ್ಡ ಕೇಂದ್ರ. ಅದಕ್ಕೆ ಸಂಬಂಧಪಟ್ಟ ಉದ್ಯಮ ಹಾಗೂ ಸ್ಟಾರ್ಟ್‍ಅಪ್‍ಗಳು ಟಿ-ಹಬ್‍ನಲ್ಲಿ ಕೆಲಸ ಮಾಡಿದ್ರೆ ಅವರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ಶ್ರೀನಿವಾಸ್. ಅಮೆರಿಕ ಹಾಗೂ ಬ್ರಿಟನ್‍ನಲ್ಲಿ ಪಡೆದ ಶಿಕ್ಷಣ ಮತ್ತು ಉದ್ಯೋಗದ ಅನುಭವ ಪಡೆದಿರುವ ಶ್ರೀನಿವಾಸ್, ಅನೇಕ ದೇಶಗಳು ಸಿಲಿಕಾನ್ ವ್ಯಾಲಿಯನ್ನು ಅವ್ಯವಸ್ಥಿತವಾಗಿ ನಕಲು ಮಾಡುತ್ತಿವೆ ಎನ್ನುತ್ತಾರೆ. ಶತಪ್ರಯತ್ನ ಮಾಡಿದ್ರೂ ಅದೆಷ್ಟೋ ದೇಶಗಳಿಗೆ ತಮ್ಮದೇ ಆದ ಸಿಲಿಕಾನ್ ವ್ಯಾಲಿ ನಿಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಲ ರಾಷ್ಟ್ರಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸಿಲ್ಲ. ಯಾವುದು ಸರಿ ಯಾವುದು ತಪ್ಪು ಅನ್ನೋದೇ ಅವರಿಗೆ ಅರ್ಥವಾಗಿಲ್ಲ ಅನ್ನೋದು ಶ್ರೀನಿವಾಸ್ ಅವರ ಅಭಿಪ್ರಾಯ. ಸರಿಯಾದ ಹಾಗೂ ಜನರಿಗೆ ಉಪಯುಕ್ತವಾದ ಕಾರ್ಯಗಳು ಮಾತ್ರ ಹೈದ್ರಾಬಾದ್‍ನಲ್ಲಿ ನಡೆಯುತ್ತವೆ ಅಂತಾ ಅವರು ಅಭಯ ನೀಡಿದ್ದಾರೆ.

ಹೈದರಾಬಾದ್ ಮುಂದಿರುವ ಸವಾಲುಗಳ ಬಗ್ಗೆ ಪ್ರಸ್ತಾಪಿಸಿದ ಅವರು, ``ಮೂರ್ನಾಲ್ಕು ವರ್ಷಗಳ ಹಿಂದಿನ ಪರಿಸ್ಥಿತಿಯೇ ಬೇರೆಯಾಗಿತ್ತು, ಎಲ್ಲರೂ ಬೆಂಗಳೂರಿನ ಬಗ್ಗೆ ಮಾತನಾಡ್ತಿದ್ರು. ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಹೈದರಾಬಾದ್‍ನಲ್ಲಿರುವ ಸ್ಟಾರ್ಟ್‍ಅಪ್‍ಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಎಲ್ಲ ಉದ್ಯಮಿಗಳು ಬೆಂಗಳೂರಿಗೆ ಹೋಗುತ್ತಿದ್ರು. ನಾನು ನನ್ನ ಕೆಲವು ಜೊತೆಗಾರರೊಂದಿಗೆ ಸೇರಿಕೊಂಡು ಹೈದ್ರಾಬಾದ್‍ನ ವಾತಾವರಣವನ್ನು ಬದಲಾಯಿಸುವ ಪ್ರಯತ್ನ ಆರಂಭಿಸಿದೆ. ನಿಧಾನವಾಗಿ ಸುಧಾರಣೆ ಆಗಿದೆ. ಪ್ರಯತ್ನಗಳು ಫಲ ಕೊಡಲಾರಂಭಿಸಿವೆ. ಇದರಲ್ಲಿ ಐಐಐಟಿ ಹೈದ್ರಾಬಾದ್‍ನ ಕೊಡುಗೆ ಅಪಾರ'' ಅಂತಾ ಹೇಳಿದ್ದಾರೆ.

ಆಸಕ್ತಿದಾಯಕ ವಿಚಾರ ಅಂದ್ರೆ 2014ರಲ್ಲಿ ತೆಲಂಗಾಣದಲ್ಲಿ ಹೊಸ ಸರ್ಕಾರ ರಚನೆಯಾದಾಗಿನಿಂದ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಹೊಸ ಸರ್ಕಾರದ ಐಟಿ ಸಚಿವ ತಾರಕ ರಾಮ ರಾವ್ ಅವರ ಸಕ್ರಿಯತೆ, ಸೂಕ್ತ ನಿರ್ಣಯ ಮತ್ತು ಪರಿಶ್ರಮದ ಫಲ ಇದು. ಹೈದ್ರಾಬಾದ್‍ನಲ್ಲಿ ಕೇವಲ ಐಟಿ ಕ್ಷೇತ್ರ ಮಾತ್ರವಲ್ಲ, ಉದ್ಯಮಿಗಳು ಹಾಗೂ ಸ್ಟಾರ್ಟ್‍ಅಪ್‍ಗಳ ಬೆಳವಣಿಗೆಗಾಗಿ ಸರ್ಕಾರ ಸಕಲ ನೆರವನ್ನೂ ನೀಡಿದೆ. ಸರ್ಕಾರದ ಹಸ್ತಕ್ಷೇಪ ಹೆಚ್ಚಿದಂತೆಲ್ಲ ಜನರಿಗೆ ಹೆಚ್ಹೆಚ್ಚು ಪ್ರಯೋಜನಗಳು ದೊರೆಯುತ್ತವೆ ಅಂತಾ ಶ್ರೀನಿವಾಸ್ ಖುಷಿಯಿಂದ ಹೇಳಿಕೊಳ್ತಾರೆ.

ಕಾರ್ಪೊರೇಟ್ ಕ್ಷೇತ್ರ ಹಾಗೂ ಸ್ವಂತ ವಹಿವಾಟನ್ನು ಬಿಟ್ಟು, ಸ್ಟಾರ್ಟ್‍ಅಪ್ ಜೊತೆ ಕೈಜೋಡಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 

``ನಮ್ಮ ಕುಟುಂಬದವರ ರಕ್ತದಲ್ಲೇ ಉದ್ಯಮಶೀಲತೆಯಿದೆ, ನಾನು ಅಜ್ಜ ಡಾ.ಸಿ.ಎಲ್ ರಾಯಡು ಅವರಿಂದ ಅತ್ಯಂತ ಪ್ರಭಾವಿತನಾಗಿದ್ದೇನೆ. ಅವರು ಎಡಪಂಥೀಯ ನಾಯಕರಾಗಿದ್ದರು. ಆಂಧ್ರಪ್ರದೇಶದ ಅವಿಭಜಿತ ರಾಜಧಾನಿ ವಿಜಯವಾಡದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಜನರ ಅಭ್ಯುದಯಕ್ಕಾಗಿ ಅವರು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಹಲವು ಶಾಲೆಗಳನ್ನು ಆರಂಭಿಸಿದ್ದಾರೆ. ಇದನ್ನೆಲ್ಲ ಅವರು ನಿಸ್ವಾರ್ಥ ಭಾವನೆಯಿಂದ ಮಾಡಿದ್ದರು. ಹಣದ ಬಗ್ಗೆ ಅವರೆಂದೂ ಯೋಚಿಸಿದವರಲ್ಲ. ಸಮಾಜಕ್ಕೆ ನೀವೇನು ಕೊಡಬಲ್ಲಿರಿ? ಏನು ಒಳ್ಳೆ ಕಾರ್ಯಗಳನ್ನು ಮಾಡಬಲ್ಲಿರಿ? ಇದೇ ಅವರ ಚಿಂತನೆಯಾಗಿತ್ತು. ಅವರ ಪ್ರಭಾವ ನನ್ನ ಮೇಲಾಗಿದೆ. ಸಮಾಜಸೇವೆಯ ಜೊತೆಗೆ ಸಕಾರಾತ್ಮಕ ಬದಲಾವಣೆ ತರಲು ಅವರು ಪ್ರಯತ್ನಿಸಿದ್ರು. ಸರ್ಕಾರದಿಂದ ಪುರಸ್ಕಾರವನ್ನೂ ಸ್ವೀಕರಿಸಲಿಲ್ಲ. ನಾನು ಕೂಡ ಸಮಾಜಕ್ಕಾಗಿ ಏನನ್ನಾದ್ರೂ ಮಾಡಬಯಸುತ್ತೇನೆ. ನನ್ನ ಒಳ್ಳೆ ಕಾರ್ಯದ ಮೂಲಕ ಸಮಾಜ ಮತ್ತು ವಿಶ್ವದ ಗಮನಸೆಳೆಯಲು ಇಚ್ಛಿಸುತ್ತೇನೆ. ಛಾಪು ಮೂಡಿಸಲು ಬಯಸುತ್ತೇನೆ, ಇದೇ ನನ್ನ ಬದುಕಿನ ಉದ್ದೇಶ, ಸಮಾಜಕ್ಕೆ ನನ್ನಿಂದೇನಾದ್ರೂ ಒಳಿತಾಗಬೇಕು''
-ಶ್ರೀನಿವಾಸ್​​

ನೈತಿಕತೆ ಮತ್ತು ಸಿದ್ಧಾಂತಗಳ ವಿಷಯದಲ್ಲೂ ಶ್ರೀನಿವಾಸ್ ಅವರದ್ದು ಕಠಿಣ ನಿಲುವು. ಅದರಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಈ ವಿಚಾರದಲ್ಲಿ ಮಾವ ಡಾ.ಬಸಂತ್ ಕುಮಾರ್ ಅವರ ಪ್ರಭಾವ ಶ್ರೀನಿವಾಸ್ ಅವರ ಮೇಲಾಗಿದೆ. ಬಸಂತ್ ಕುಮಾರ್ ಆಂಧ್ರದ ಮಾಜಿ ಸಿಎಂ ರಾಜಶೇಖರ ರೆಡ್ಡಿ ಅವರ ಸಹಪಾಠಿಯಾಗಿದ್ದರು. ಕಾಂಗ್ರೆಸ್ ಸೇರುವಂತೆ ರಾಜಶೇಖರ್ ರೆಡ್ಡಿ , ಬಸಂತ್ ಅವರಿಗೆ ಹಲವು ಬಾರಿ ಆಹ್ವಾನ ನೀಡಿದ್ದರು. ಸರ್ಕಾರದಲ್ಲಿ ಉನ್ನತ ಹುದ್ದೆ ನೀಡುವುದಾಗಿಯೂ ಹೇಳಿದ್ದರು. ಆದ್ರೆ ಬಸಂತ್ ಕುಮಾರ್ ತಮ್ಮ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ರಾಜಕೀಯದಿಂದ ದೂರವೇ ಉಳಿದ್ರು.

ವಿಶೇಷ ಅಂದ್ರೆ ಶ್ರೀನಿವಾಸ್ ಅವರು ಬಾಲ್ಯವನ್ನು ಕಳೆದಿದ್ದು, ಬ್ರಿಟನ್‍ನಲ್ಲಿ, ಅವರ ತಂದೆ ಖ್ಯಾತ ವೈದ್ಯರಾಗಿದ್ರು. ಬಳಿಕ ಉದ್ಯಮವನ್ನೂ ಆರಂಭಿಸಿದ್ರು. ಶ್ರೀನಿವಾಸ್ ಕೂಡ ಇದಕ್ಕೆ ಸಾಥ್ ಕೊಟ್ಟಿದ್ರು. ಬಳಿಕ ಕಾಲೇಜು ಶಿಕ್ಷಣಕ್ಕಾಗಿ ಶ್ರೀನಿವಾಸ್ ವಿಜಯವಾಡಕ್ಕೆ ಬಂದ್ರು. ಬ್ರಿಟನ್‍ನಲ್ಲಿ ಹುಟ್ಟಿ ಬೆಳೆದ ಅವರಿಗೆ ವಿಜಯವಾಡ ವಿಚಿತ್ರ ಸ್ಥಳ ಎನಿಸುತ್ತಿತ್ತು. ಅಲ್ಲಿನ ಸಂಸ್ಕøತಿ, ಆಚಾರ ವಿಚಾರ, ಆಹಾರ ಪದ್ಧತಿ ಎಲ್ಲವೂ ವಿಭಿನ್ನವಾಗಿತ್ತು. ವಾತಾವರಣ ಕೂಡ ಬದಲಾಗಿದ್ರಿಂದ ಅದಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಯ್ತು. ಆದ್ರೆ ಶ್ರೀನಿವಾಸ್ ಅವರಿಗೆ ಭಾರತದಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಯ್ತು. ಭಾರತದ ಸಂಸ್ಕøತಿ, ಕಲೆ, ಜನರ ಸಮಸ್ಯೆಗಳು ಎಲ್ಲವನ್ನೂ ಅರ್ಥಮಾಡಿಕೊಲ್ಳುವ ಅವಕಾಶ ಲಭಿಸಿತ್ತು. ತಮ್ಮ ಅಜ್ಜ ಹಾಗೂ ಮಾವನ ಜೊತೆಗಿರುತ್ತ, ಸಮಾಜವನ್ನು ಬದಲಾಯಿಸುವ ಅವರ ಉದ್ದೇಶವನ್ನು ಪಾಲಿಸುವ ಅವಕಾಶ ದಕ್ಕಿತ್ತು.

ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಶ್ರೀನಿವಾಸ್, ಒಮೆಗಾ ಇಮ್ಯುನೋಟೆಕ್ ಕಂಪನಿಯನ್ನು ಆರಂಭಿಸಿದ್ರು. ಈ ಕಂಪನಿ ಬ್ರಿಟನ್‍ನಿಂದ ರೋಗನಿರ್ಣಯ ಕಿಣ್ವಗಳನ್ನು ಆಮದುಮಾಡಿಕೊಳುತ್ತಿತ್ತು. ಕೆಲ ವರ್ಷಗಳ ನಂತರ ದೊಡ್ಡ ಫಾರ್ಮಾ ಕಂಪನಿಯೊಂದು ಇದನ್ನು ಟೇಕ್ ಓವರ್ ಮಾಡಿಕೊಂಡ್ತು. ಬಳಿಕ ಅವರು ವಿವಿಧ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಆದ್ರೆ 2007ರಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪಣ ತೊಟ್ಟ ಅವರು, ಸ್ಟಾರ್ಟ್‍ಅಪ್ ಕ್ಷೇತ್ರಕ್ಕೆ ತಮ್ಮ ಸರ್ವಸ್ವವನ್ನೂ ಸಮರ್ಪಿಸಲು ನಿರ್ಧರಿಸಿದ್ರು. ಇದಾದ ಮೇಲೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸ್ಟಾರ್ಟ್‍ಅಪ್ ಮೆಂಟರ್ ಆಗಿ ವಿಶ್ವದಾದ್ಯಂತ ಹೆಸರು ಗಳಿಸಿದ್ರು. ಈಗ ಶ್ರೀನಿವಾಸ್ ಅವರು ಸ್ಟಾರ್ಟ್‍ಅಪ್ ದುನಿಯಾದ ಮಹಾನ್ ವ್ಯಕ್ತಿತ್ವ ಎನಿಸಿಕೊಂಡಿದ್ದಾರೆ.

ಟಿ-ಹಬ್‍ನ ಸ್ಥಾಪನೆಯೇ ತಮ್ಮ ಬದುಕಿನ ಅತಿ ದೊಡ್ಡ ಸಾಧನೆ ಮತ್ತು ಯಶಸ್ಸು ಎನ್ನುತ್ತಾರೆ ಅವರು. ಇದು ಅವರ ಪಾಲಿಗೆ ಅತ್ಯಂತ ಸಂತೋಷದಾಯಕ ಕ್ಷಣ. ``ವಿಶ್ವದ ಮೂಲೆ ಮೂಲೆಯಲ್ಲೂ ಟಿ-ಹಬ್ ಅನ್ನು ಅತ್ಯಂತ ಶ್ರೇಷ್ಠ ಕ್ಷೇತ್ರವೆಂದು ಪರಿಗಣಿಸಿದ್ರೆ, ಟಿ-ಹಬ್‍ನಲ್ಲಿನ ಯಶಸ್ಸಿನ ಕಹಾನಿ ಬಗ್ಗೆ ಚರ್ಚೆಯಾದ್ರೆ ಆಗ ತಮ್ಮ ಕನಸು ಸಾಕಾರಗೊಂಡಂತೆ. ಆಗ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎನ್ನುತ್ತಾರೆ ಶ್ರೀನಿವಾಸ್. ಯುವರ್‍ಸ್ಟೋರಿ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ತಮ್ಮ ಬದುಕಿನ ಕಠಿಣ ದಿನಗಳನ್ನು ಕೂಡ ನೆನೆಸಿಕೊಂಡ್ರು. ``ನಾನು ಜೀವನದಲ್ಲಿ ಏಳು-ಬೀಳುಗಳನ್ನು ಕಂಡಿದ್ದೇನೆ. ಪ್ರತಿ ಬಾರಿಯೂ ಅದರಿಂದ ಕಲಿತಿದ್ದೇನೆ. ನನ್ನ ತಮದೆಯ ಕಂಪನಿಗೆ ಭಾರಿ ನಷ್ಟವಾದ ಸಂದರ್ಭವಂತೂ ಅತ್ಯಂತ ಕಷ್ಟಕರವಾಗಿತ್ತು. ಒಂದರ್ಥದಲ್ಲಿ ದಿವಾಳಿಯಾಗಿದ್ದೆವು. ಸಾಲಗಾರರ ಕಾಟ ಹೆಚ್ಚಾಗಿತ್ತು. ಆಗ ಸ್ನೇಹಿತರೆಲ್ಲ ಮಾಯವಾಗಿ ಹೋಗಿದ್ರು. ಸಂತೋಷದಲ್ಲಿ ಜೊತೆಗಿದ್ದ ಸ್ನೇಹಿತರು ಕಷ್ಟದ ಸಮಯದಲ್ಲಿ ಅಪರಿಚಿತರಂತೆ ವರ್ತಿಸಿದ್ರು, ನೆರವಿಗೆ ಬರಲಿಲ್ಲ. ಆದ್ರೆ ಕೆಲವರು ಸಹಾಯಕ್ಕಾಗಿ ಆಕಸ್ಮಿಕವಾಗಿ ಪ್ರತ್ಯಕ್ಷರಾದ್ರು. ನೀವು ಮಾಡ್ತಿರೋ ಒಳ್ಳೆ ಕೆಲಸಕ್ಕೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದಿದ್ದರು ಅವರು. ಅವರ ಮಾತು ಕೇಳಿ ನಮಗೆ ಖುಷಿಯಾಗಿತ್ತು. ಒಳ್ಳೆ ಕೆಲಸದ ಫಲಿತಾಂಶ ಒಳ್ಳೆಯದೇ ಆಗಿರುತ್ತದೆ ಅನ್ನೋದು ನಮಗೆ ಅರ್ಥವಾಗಿತ್ತು. ಬದುಕಿನಲ್ಲಿ ಒಳ್ಳೆಯ ವ್ಯಕ್ತಿಗಳನ್ನು ಹುಡುಕುವುದ ಮಾತ್ರವಲ್ಲ, ಅವರಿಗೆ ಸಹಾಯ ಮಾಡುವುದು ಕೂಡ ಅತ್ಯಂತ ಅವಶ್ಯಕ ಎಂಬ ಸತ್ಯ ನನಗೆ ಅರಿವಾಗಿತ್ತು'' ಎನ್ನುವ ಮೂಲಕ ತಾವು ಅನುಭವಿಸಿದ ಕಷ್ಟಗಳನ್ನೆಲ್ಲ ಶ್ರೀನಿವಾಸ್ ತೆರೆದಿಟ್ರು.

ಕಾರ್ಪೊರೇಟ್ ಜಗತ್ತನ್ನು ಬಿಟ್ಟು ಸ್ಟಾರ್ಟ್‍ಅಪ್ ಅನ್ನು ಆಯ್ಕೆ ಮಾಡಿಕೊಂಡ ಶ್ರೀನಿವಾಸ್ ಅವರ ನಿರ್ಧಾರದ ಹಿಂದೆ ಕೆಲವು ಕಾರಣಗಳೂ ಇವೆ. ಮೊದಲನೆಯದು - ಪ್ರತಿಯೊಬ್ಬರ ಬದುಕಿನಲ್ಲೂ ನಿಮ್ಮ ಛಾಪು ಮೂಡಿಸುವಂತಹ ಕಾರ್ಯವನ್ನು ವಿಶ್ವದ ಜನತೆಗಾಗಿ ಮಾಡುವುದು, ಎರಡನೆಯದು - ನಿಮಗೆ ಸಂತೋಷ ನೀಡುವ, ನಿಮಗಿಷ್ಟವಾಗುವ ಕೆಲಸವನ್ನೇ ಮಾಡುವುದು, ಮೂರನೆಯದು - ತಮ್ಮ ಕುಟುಂಬದ ಸಮಾಜ ಸೇವೆಯ ಸಂಪ್ರದಾಯವನ್ನು ಮುಂದುವರಿಸುವುದು. 

ಇದನ್ನು ಓದಿ

1. ಪಾಪ್‍ಕ್ವಿಲ್ ಆಭರಣಗಳ ತಯಾರಿಕೆಯ ಸಿದ್ಧಿ ಗಳಿಸಿಕೊಂಡ ಬೆಂಗಳೂರಿನ ಸುರುಚಿ ಅಗರ್‍ವಾಲ್ ಅನ್ನುವ ಸೃಜನಶೀಲ ಕಲಾವಿದೆ

2. ಬ್ರಿಟಿಷರ ಕಾಲದ ಕಟ್ಟಡಗಳಿಗೆ ಜೀವಕಲೆ - ಇದು ನೃತ್ಯ, ಯೋಗ ಕಲೆಗಳ ಅಧ್ಯಯನ ತಾಣ

3. ಅಪಘಾತ ತಪ್ಪಿಸಲು ಸ್ಮಾರ್ಟ್ ಡಿವೈಸ್ ಫಾರ್ ಸ್ಮಾರ್ಟ್ ಬಸ್

Related Stories