ಬಾಂಬ್ ಸ್ಪೋಟದಿಂದ ತಯಾರಾದ ಮೊಬೈಲ್ ಅಪ್ಲಿಕೇಷನ್..!

ಟೀಮ್​​ ವೈ.ಎಸ್​​.

0

ದಿನೇ ದಿನೇ ಮಗ್ಧ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗ್ತಾನೆ ಇದೆ. ಭಾರತದಲ್ಲೇ ಲಕ್ಷಾಂತರ ಮಕ್ಕಳು ದಿನಂಪ್ರತಿ ತೊಂದರೆಗೆ ಸಿಲುಕುತ್ತಿದ್ದಾರೆ. ಬೇಲಿಯೇ ಎದ್ದು ಹೊಲಮೇಯ್ತು ಅನ್ನೋಹಾಗೇ ಮಕ್ಕಳನ್ನು ರಕ್ಷಿಸ ಬೇಕಾದವರೇ ಕ್ರೂರಿಗಳಾಗಿ ನಡೆದುಕೊಳ್ತಿದ್ದಾರೆ. ಯಾರನ್ನುನಂಬಬೇಕು ಅನ್ನೋದು ಪೋಷಕರಿಗೆ ತಿಳೀತಿಲ್ಲ ಅಂದ್ರೆ, ಏನೂ ಅರಿಯದ ಮಕ್ಕಳು ಅದೇನು ತಾನೆ ಮಾಡೋಕೆ ಸಾಧ್ಯಅಲ್ವಾ..?

ಆದ್ರೆ ಇನ್ಮುಂದೆ ಮಕ್ಕಳನ್ನು ರಕ್ಷಣೆಮಾಡೋದುಹೇಗೆ? ಯಾರನ್ನ ನಂಬಿ ಕಂದಮ್ಮಗಳನ್ನು ಆಚೆ ಕಳ್ಸೋಕೆ ಸಾಧ್ಯ? ಅಂತ ಭಯ ಪಡೋ ಪೋಷಕರು ಸ್ವಲ್ಪ ನಿರಾಳರಾಗಬಹುದು. ಯಾಕಂದ್ರೆ, ಮಕ್ಕಳ ಸುರಕ್ಷತೆಗೆ ಮೊಬೈಲ್ಅಪ್ಲಿಕೇಷನ್​​ ಒಂದುಸಿದ್ಧವಾಗಿದೆ.

ಅಂದಹಾಗೇ ಈ ಮೊಬೈಲ್ ಅಪ್ಲಿಕೇಶನ್ ನಿಮ್ಮ ಮಕ್ಕಳ ಸುರಕ್ಷತೆಗೆ ಹೇಳಿ ಮಾಡಿಸಿದ ಹಾಗಿದೆ. ಯಾಕಂದ್ರೆ, ನಿಮ್ಮ ಮಕ್ಕಳು ಎಲ್ಲಿಗೆ ಹೋಗ್ತಾರೆ, ಯಾರ ಜೊತೆ ಮಾತಾಡ್ತಾರೆ, ಏನೆಲ್ಲಾ ಮಾಡ್ತಾರೆ ಅನ್ನೋ ಡೀಟೇಲ್ಸ್ ಅನ್ನು ನೀವು ಕೂತಲ್ಲಿಗೆ ತಲುಪಿಸೋ ಸಾಮರ್ಥ್ಯ ಹೊಂದಿದೆ ಈ ಆ್ಯಪ್.

ಮಕ್ಕಳ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿದ ರಿತೇಶ್ ಪಾಂಡ್ಯ ಹಾಗೂ ವಿಶ್ವನಾಥ್ ಬಾಳೂರ್​​​ ಈ ಅಪ್ಲಿಕೇಷನ್ ಅನ್ನು ಕಂಡು ಹಿಡಿದಿದ್ದಾರೆ. ಹಾರ್ಡ್​ವೇರ್​​ ಸಂಯೋಜಿತ ಈ ಮೊಬೈಲ್ ಅಪ್ಲಿಕೇಷನ್​​ಗೆ ಲೋಕಸ್ ಎಂದು ಹೆಸರಿಡಲಾಗಿದೆ. ಇದು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡಲು ಪೋಷಕರಿಗೆ ತುಂಬಾ ಸಹಕಾರಿಯಾಗಿದೆ.

ಹೇಗಾಯ್ತು ಲೋಕಸ್ ಆರಂಭ..?

ಲೋಕಸ್ ಯೋಜನೆ ಆರಂಭವಾಗಲು ಕಾರಣ ಒಂದು ಬಾಂಬ್ ಸ್ಪೋಟ ಅಂದ್ರೆ ಎಂಥವರಿಗೂ ಆಶ್ಚರ್ಯವಾಗಬಹುದು. ಹೌದು, ಅದು ನಡೆದಿದ್ದು 2012ರ ಮೇ2ರಂದು. ರಿತೇಶ್ ಪಾಂಡ್ಯ ಕಾಬೂಲ್​​ನಲ್ಲಿದ್ದರು. ಅವರಿದ್ದ ಸ್ಥಳದ ಸಮೀಪದಲ್ಲೇ ತಾಲಿಬಾನಿಗಳು ಬಾಂಬ್ ದಾಳಿ ನಡೆಸಿದ್ದರು. ಹಲವು ಸಾವು - ನೋವುಗಳು ಸಂಭವಿಸಿತ್ತು. ಅಲ್ಲದೇ ಸಮೀಪದಲ್ಲೇ ಶಾಲೆಯಿದ್ದ ಕಾರಣ ಮಕ್ಕಳು, ಪೋಷಕರು ಹಾಗೂ ರಕ್ಷಣಾ ಪಡೆಗಳ ನಡುವೆ ಸಾಕಷ್ಟು ಗೊಂದಲ ಉಂಟಾಗಿತ್ತು. ಇದನ್ನು ಕಣ್ಣಾರೆ ಕಂಡ ರಿತೇಶ್, ಮಕ್ಕಳು ಹಾಗೂ ಪೋಷಕರ ನಡುವಿನ ಈ ಸಮಸ್ಯೆಗೆ ಇತಿಶ್ರೀ ಹಾಡಲು ಅಂದೇ ಪಣತೊಟ್ಟರು. ಇದೇ ಯೋಚನೆಯಲ್ಲಿ ಭಾರತಕ್ಕೆ ಹಿಂದಿರುಗಿದ ಅವರು ಆನ್​ಮೊಬೈಲ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಯೇ ಅವರಿಗೆ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರಾಗಿದ್ದ ವಿಶ್ವನಾಥ್ ಅವರ ಪರಿಚಯವಾಯ್ತು. ಹೀಗೇ ಒಮ್ಮೆ ಇಬ್ಬರೂ ಊಟಮಾಡುವಾಗ, ರಿತೇಶ್ ತಮ್ಮ ಐಡಿಯಾವನ್ನುವಿಶ್ವನಾಥ್​​ಗೆ ತಿಳಿಸಿದರು. ಅದಕ್ಕೆ ವಿಶ್ವನಾಥ್ ಅವರೂ ಸಮ್ಮತಿಸಿ ತಕ್ಷಣವೇ ಇಬ್ಬರೂ ತಾಂತ್ರಿಕವಾಗಿ ಹಾಗೂ ಸಾಫ್ಟ್​​ವೇರ್​​ಗಳ ಕುರಿತು ಸಾಕಷ್ಟು ಮಾಹಿತಿ ಕಲೆಹಾಕಿದರು. ಹಲವು ದಿನಗಳ ಕಾಲ ಹೀಗೆ ತಮ್ಮ ಕನಸಿನ ಬೆನ್ನುಹತ್ತಿದ ಈ ಜೋಡಿಗೆ ಅದನ್ನು ನನಸುಮಾಡಬಹುದು ಅನ್ನೋದು ದೃಢಪಟ್ಟಿದ್ದೇ ತಡ ಕೆಲಸಗಳಿಗೆ ರಾಜೀನಾಮೆ ನೀಡಿದರು. ಹಾಗೇ ತಾತ್ಯಾಟೆಕ್​​ ಪ್ರೈ ವೇಟ್​​ ಲಿಮಿಟೆಡ್ ಎಂಬ ತಮ್ಮದೇ ಸಂಸ್ಥೆ ಹುಟ್ಟು ಹಾಕಿದರು.

ರಿತೇಶ್​ ಪಾಂಡ್ಯ
ರಿತೇಶ್​ ಪಾಂಡ್ಯ

ಲೋಕಸ್ ಏನು ಎತ್ತ..?

ಲೋಕಸ್ ಜಿಪಿಎಸ್ ಹಾಗೂ ಜಿಪಿಆರ್​ಎಸ್​​ಗಳನ್ನು ಒಳಗೊಂಡ ಗುರುತಿನ ಚೀಟಿ. ಇದನ್ನು ಮಕ್ಕಳು ಎಲ್ಲಾ ಕಡೆಗಳಲ್ಲೂ ಧರಿಸಬಹುದು. ಹಾಗೇ ಈ ಗುರುತಿನ ಚೀಟಿಯ ಮೂಲಕ ಪೋಷಕರೂ ಕೂಡ ತಮ್ಮ ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆಯಬಹುದು. ಮಕ್ಕಳಿರುವ ನೈಜ ಸ್ಥಳಗಳ ಮಾಹಿತಿ ಮಾತ್ರವಲ್ಲ ಈ ಆಪ್ಲಿಕೇಶನ್​​ನಲ್ಲಿ​ ಸುರಕ್ಷಾತಾವಲಯ ಹಾಗೂ ಅಸುರಕ್ಷಾತವಲಯಗಳ ಮಾಹಿತಿಯೂ ಇದೆ. ಶಾಲಾ ಸಮಯದಲ್ಲಿ ಮಗುವೇನಾದರೂ ಶಾಲೆಯಿಂದ ಹೊರಬಂದರೆ ತಕ್ಷಣ ಪೋಷಕರ ಮೊಬೈಲ್​​ಗೆ ಅದರ ಕುರಿತು ಮಾಹಿತಿ ರವಾನೆಯಾಗುತ್ತೆ. ಅಷ್ಟುಮಾತ್ರವಲ್ಲ ಮಕ್ಕಳ ಮೊಬೈಲ್ ಚಾರ್ಜ್ ಮುಗಿದರೆ ಅಥವಾ ಮಕ್ಕಳು ಪ್ರಯಾಣಿಸುತ್ತಿರುವ ವಾಹನ ಅತಿವೇಗದಲ್ಲಿ ಸಂಚರಿಸುತ್ತಿದ್ದರೂ, ಅವುಗಳ ಮಾಹಿತಿ ತಕ್ಷಣ ಪೋಷಕರ ಮೊಬೈಲ್​​ನಲ್ಲಿ ಲಭ್ಯವಾಗುತ್ತವೆ.

ಜೊತೆಗೆ ಬೇರೆ ರೀತಿಯ ತೊಂದರೆಯಾದ್ರೆ ಮಕ್ಕಳು ಪ್ಯಾನಿಕ್​ ​ಬಟನ್ ಅನ್ನು ಒತ್ತಿದರೆ ಸಾಕು ತಕ್ಷಣ ಪೋಷಕರ ಮೊಬೈಲ್​ಗೆ ಕರೆಹೋಗುತ್ತದೆ ಹಾಗೂ ಪೋಷಕರು ತಮ್ಮಮಕ್ಕಳು ಯಾವ ರೀತಿಯ ಸಮಸ್ಯೆಗೆ ಸಿಲುಕಿದ್ದಾರೆ ಅನ್ನೋದನ್ನು ತಿಳಿದು ಕ್ರಮ ಕೈಗೊಳ್ಳಬಹುದು.

ಹೀಗೆ ಹಲವು ಸುರಕ್ಷಾತಾ ವೈಶಿಷ್ಟ್ಯತೆಗಳ ಜೊತೆಗೆ ಈ ಲೋಕಸ್ ಮೊಬೈಲ್ ಅಪ್ಲಿಕೇಶನ್ ಪೋಷಕರು ಮತ್ತು ಶಿಕ್ಷಕರ ನಡುವಿನ ಸಂವಹನಕ್ಕೂಸಹಕಾರಿಯಾಗಿದೆ.

ವಿಶ್ವನಾಥ್​ ಬಾಳೂರ್​​​
ವಿಶ್ವನಾಥ್​ ಬಾಳೂರ್​​​

ಈ ಯೋಜನೆ ಪ್ರಾರಂಭವಾದ ಒಂದೇ ವರ್ಷದಲ್ಲಿ ರಿತೇಶ್ ಮತ್ತು ವಿಶ್ವನಾಥ್ ಜೋಡಿ ಬೆಂಗಳೂರಿನ 40 ಶಾಲೆಗಳ 700 ಮಂದಿ ಪೋಷಕರನ್ನು ಭೇಟಿಮಾಡಿದೆ. ಅದಾಗಲೇ ಆಗಸ್ಟ್​​ನಿಂದ ನಾಲ್ಕು ಶಾಲೆಗಳು ಲೋಕಸ್ ಅನ್ನು ಅಳವಡಿಸಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಎಲೆಕ್ಟ್ರಾನಿಕ್ ಸಿಟಿಯ ಸೇಂಟ್​​​ ಪಬ್ಲಿಕ್​​ ಸ್ಕೂಲ್, ರಿಚ್​ಮಂಡ್​​ ರಸ್ತೆಯ ಕ್ಯಾಥೆಡ್ರಲ್ ಸ್ಕೂಲ್, ಸಂಜಯನಗರದ ಶಿಕ್ಷಾಸಾಗರ್ ಶಾಲೆಗಳು ಈಗಾಗಲೇ ಲೋಕಸ್ ಅನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿವೆ.

ವಿಶೇಷ ಅಂದ್ರೆ ಲೋಕಸ್ ಮೊಬೈಲ್ ಅಪ್ಲಿಕೇಷನ್ ಈಗಾಗಲೇ ಗೂಗಲ್ ಪ್ಲೇ ಸ್ಟೋರ್​ನಲ್ಲೂ ಲಭ್ಯವಿದ್ದು, ಪೋಷಕರು ತಾವೇ ಖುದ್ದಾಗಿ ಅದನ್ನುಡೌನ್​ ಲೋಡ್ ಮಾಡಿಕೊಂಡು, ಗುರುತಿನ ಚೀಟಿ ಖರೀದಿಮಾಡಿ ಉಪಯೋಗಿಸ ಬಹುದಾಗಿದೆ.

ಸವಾಲುಗಳು

ಈಗ ಒಟ್ಟು 8 ಸದಸ್ಯರ ತಂಡ ಲೋಕಸ್ ಸಂಸ್ಥೆಯಲ್ಲಿದೆ. 5 ಮಂದಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ. ಇಬ್ಬರು ಮಾರಾಟ ಮತ್ತು ಮಾರುಕಟ್ಟೆ (ಸೇಲ್ಸ್&ಮಾರ್ಕೆಟಿಂಗ್) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಚಿಕ್ಕ ಹಾಗೂ ಚೊಕ್ಕ ಸಂಸ್ಥೆಯಲ್ಲೂ ಇವರೆಲ್ಲಾ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಸಾಕಷ್ಟು ಏಳುಬೀಳುಗಳನ್ನು ಕಂಡು ಶೂನ್ಯದಿಂದ ಶುರುವಾದ ಲೋಕಸ್​​ನ ಸ್ವಂತಕಟ್ಟಡದ ನಿರ್ಮಾಣವೂ ಈಗಾಗಲೇ ಪ್ರಾರಂಭವಾಗಿರೋದು ವಿಶೇಷ.

ಯಾವುದೇ ಲಾಭವಿಲ್ಲದೇ ಆರಂಭದ ಹಂತದಲ್ಲಿ ತಾವೇ ಹಣಖರ್ಚುಮಾಡಿ, ಶ್ರಮವಹಿಸಿ, ಬೆವರುಹರಿಸುತ್ತಿದ್ದ ತಂಡವನ್ನುಪ್ರೇರೇಪಿಸಿ, ಸ್ಫೂರ್ತಿತುಂಬುವುದೇ ಅತೀ ದೊಡ್ಡ ಸವಾಲಾಗಿತ್ತು. ಜೊತೆಗೆ ಲೋಕಸ್ ಮೊಬೈಲ್ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿ, ಡಿಸೈನ್ ಮಾಡುತ್ತಿರುವಾಗ ನಾವೂ ಸಾಕಷ್ಟು ಏಳು – ಬೀಳುಗಳನ್ನು ಕಂಡಿದ್ದೇವೆ ಅಂತಾರೆ ರಿತೇಶ್.

ಒಟ್ಟಾರೆ ರಿತೇಶ್ ಮತ್ತು ವಿಶ್ವನಾಥ್ ಈಗ ಒಬ್ಬ ಒಳ್ಳೆಯ ಹೂಡಿಕೆದಾರನ ಹುಡುಕಾಟದಲ್ಲಿದ್ದಾರೆ. ಕೇವಲ ಹಣ ಮಾತ್ರವಲ್ಲ ತಮ್ಮ ಯೋಜನೆಯಲ್ಲಿ ಭಾಗಿಯಾಗುವ ಒಬ್ಬ ಉತ್ತಮ ವ್ಯಕ್ತಿಯ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಲೋಕಸ್ ನಂತರ ಇನ್ನೂ ಎರಡು ಹೊಸ ಅಪ್ಲಿಕೇಶನ್​​ಗಳನ್ನು ಹೊರತರುವ ಕುರಿತು ಈಗಾಗಲೇ ಕೆಲಸಗಳೂ ಪ್ರಾರಂಭವಾಗಿದೆ.