ಹೊಸ ವರ್ಷದಲ್ಲಿ ಕಾಲ ಕಳೆಯೋದು ಹೇಗೆ..?- ಹಾಲಿಡೇ ಪ್ಲಾನ್ ಬಗ್ಗೆ ಯೋಚನೆ ಮಾಡಿ..!​

ಟೀಮ್​ ವೈ.ಎಸ್​. ಕನ್ನಡ

1

ರಜೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮುಂದಿನ ತಿಂಗಳ ರಜೆಗೆ ಈಗಿಂದಲೇ ಎಲ್ಲಿಗೆ ಹೋಗೋದು ಅಂತ ಪ್ಲಾನ್ ಮಾಡುವ ಜನರಿಗೆ 2017 ಸಿಕ್ಕಾಪಟ್ಟೆ ಖುಷಿ ನೀಡುತ್ತೆ. ಮುಂಬರುವ ವರ್ಷ, ಸಾಕಷ್ಟು ರಜೆಗಳನ್ನು ನಿಮಗಾಗಿ ಹೊತ್ತು ತರ್ತಾಯಿದೆ. 2016ರಲ್ಲಿ ಸಾಲು ಸಾಲು ರಜೆ ಪಡೆದು ಸಂಭ್ರಮಿಸಿದವರಿಗೆ 2017ರಲ್ಲೂ ಕೂಡ ರಜೆಗಳ ಸಂಭ್ರಮ ಮಿಸ್ಸಾಗಲ್ಲ. ಯಾಕಂದ್ರೆ 2017ರಲ್ಲಿ ಬರೋಬ್ಬರಿ 22 ರಜೆಗಳು ನಿಮಗಾಗಿ ಕಾಯ್ತಾ ಇದಾವೆ.

ವಾರಕ್ಕೊಂದು ವೀಕ್‍ಆಫ್ ಪಡೆದು,ಒಂದು ರಜೆಯಲ್ಲಿ ಎಲ್ಲಿಗೆ ಹೋಗೋದು ಅಂತ ನಿರಾಶರಾಗೋರು ಈ ಬಾರಿ ಹೆಚ್ಚು ಖುಷಿಯಿಂದ ವರ್ಷವನ್ನು ಕಳೆಯಲಿದ್ದೀರಿ. ವರ್ಷದ ಕೊನೆಯಲ್ಲಿ ಇರೋ ಬಂಪರ್ ಹಾಲಿಡೇಗಳಿಂದ ಒಂದೂವರೆ ತಿಂಗಳ ಕಾಲ ಕೆಲಸ ಮಾಡದೆಯೇ ಸಂಬಳ ಪಡೆಯೋ ಸುವರ್ಣಾವಕಾಶ ನಿಮ್ಮದು. ಅದಾಗಲೇ ಮಾರುಕಟ್ಟೆಯಲ್ಲಿ ಲಭ್ಯವಾಗ್ತಿರೋ ಬೆಂಗಳೂರು ಮುದ್ರಣಾಲಯದ ಮುಂದಿನ ವರ್ಷದ ಕ್ಯಾಲೆಂಡರ್‍ನಲ್ಲಿ ಸಾಲುಸಾಲು ರಜೆಗಳನ್ನು ನೋಡಿ ಎಲ್ಲರೂ ಖುಷಿಪಡ್ತಿದ್ದಾರೆ. ಹೊಸ ಕ್ಯಾಲೆಂಡರ್ ನೋಡ್ತಿದ್ದ ಹಾಗೆ ಎಲ್ಲರ ಕಣ್ಣಿಗೆ ಕಾಣೋದು ಸರ್ಕಾರಿ ರಜೆಗಳೆಷ್ಟು? ಭಾನುವಾರ ಎಷ್ಟು? ಎರಡನೇ ಶನಿವಾರ ಎಷ್ಟು ?ಅನ್ನೋದು. ಎಲ್ಲರ ಕುತೂಹಲಗಳಿಗೆ ತೆರೆ ಎಳೆದಿರೋ ಬೆಂಗಳೂರು ಮುದ್ರಣಾಲಯ ಮುದ್ರಿಸಿರೋ ಕ್ಯಾಲೆಂಡರ್ ರಜೆಗಳ ಲೆಕ್ಕವನ್ನು ಮುಂದಿಟ್ಟಿದೆ. 2017ರಲ್ಲಿ ವೀಕ್ಲಿ ರಜೆಗಳನ್ನು ಹೊರತು ಪಡಿಸಿ ಸಿಗೋ ಸರ್ಕಾರಿ ರಜೆಗಳು ಬರೋಬ್ಬರಿ 22. 2017ರಲ್ಲಿ ಮೊದಲ ತಿಂಗಳು, ಸಂಕ್ರಾಂತಿ ಹಬ್ಬದಿಂದ ಶುರುವಾಗೋ ಸರ್ಕಾರಿ ರಜೆಗಳು ಮುಗಿಯೋದೇ ಇಲ್ಲ ಅಂದ್ರು ತಪ್ಪಾಗಲ್ಲ. ಸಂಕ್ರಾಂತಿ ಹಬ್ಬ ಮುಗಿದತ ಕ್ಷಣವೇ, ಅಂದ್ರೆ ಮರುದಿನವೇ ಭಾನುವಾರ. ಇದಾದ 10 ದಿನಗಳಿಗೆ ಜನವರಿ 26, ಗಣರಾಜ್ಯೋತ್ಸವ ಇರೋದ್ರಿಂದ ಸರ್ಕಾರಿ ರಜೆ ಇರುತ್ತೆ. ಇನ್ನೂ ಫೆಬ್ರುವರಿಯಲ್ಲಿ 24ರ ಶುಕ್ರವಾರ ಮಹಾಶಿವರಾತ್ರಿಯ ಸಂಭ್ರಮಕ್ಕಾಗಿ ನೀವು ರಜೆಯ ಜಾಗರಣೆ ಮಾಡಬಹುದು. ಇನ್ನೂ ಮಾರ್ಚ್ ತಿಂಗಳಿಗೆ ಬಂದ್ರೆ ಬಣ್ಣದೋಕುಳಿಯ ಹಬ್ಬ ಹೋಳಿ ನಿಮಗೆ ರಜೆಯ ಮಜಾ ನೀಡಲು ರೆಡಿಯಾಗಿರುತ್ತೆ. ಅದೇ ತಿಂಗಳ 29ರ ಬುಧವಾರದಂದು ನಾವೆಲ್ಲಾ ಹೊಸ ವರ್ಷ ಎಂದು ಆಚರಿಸೋ ಚಂದ್ರಮಾನ ಯುಗಾದಿಯಲ್ಲಿ ಬೇವು-ಬೆಲ್ಲ ತಿಂದು ಸಂಭ್ರಮಿಸಬಹುದು.

ಏಪ್ರಿಲ್‍ ತಿಂಗಳಿಗೆ ಬಂದ್ರೆ, ಎರಡನೇ ಶುಕ್ರವಾರ ಗುಡ್ ಫ್ರೈಡೇ ಇದೆ. ಎರಡನೇ ಶನಿವಾರ, ಭಾನುವಾರವನ್ನೂ ಸೇರಿಸಿ ಮೂರು ದಿನಗಳ ಕಾಲ ಮಜಾ ಮಾಡಬಹುದು. ಇನ್ನೂ ಅದೇ ತಿಂಗಳ 29ರ ಶನಿವಾರ ವಿಶ್ವಗುರು ಬಸವಣ್ಣನವರಜಯಂತಿಗಾಗಿ ಸರ್ಕಾರಿ ರಜೆ ಘೋಷಿಸಲಾಗಿದೆ. ಮರುದಿನ ಭಾನುವಾರ ಇರೋದ್ರಿಂದ ನೀವು ಇನ್ನೊಂದು ಸ್ಮಾಲ್‍ಟ್ರಿಪ್ ಹೋಗಿ ಬರಬಹುದು. ಹಾಗಂತ ಸೋಮವಾರ ಡ್ಯೂಟಿಗೆ ಹೋಗಲೇಬೆಕು ಅನ್ನೋ ತಲೆಬಿಸಿ ಇರೋದಿಲ್ಲ. ಯಾಕಂದ್ರೆ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ ತಿಂಗಳ 1ನೇ ತಾರೀಖಿನಂದು ರಜೆ ಇರುತ್ತೆ. ಏಪ್ರಿಲ್ ತಿಂಗಳಲ್ಲಿ ಕೆಲಸದ ತಲೆಬಿಸಿಗಿಂತ ಹೆಚ್ಚಾಗಿ ರಜೆಯ ಖುಷಿ ಇರೋದಂತು ಸುಳ್ಳಲ್ಲ. ಜೂನ್ ತಿಂಗಳಿಗೆ ಬಂದ್ರೆ 26ರ ಸೋಮವಾರ ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ರಂಜಾನ್‍ ಇರುತ್ತೆ. ಅದರ ಹಿಂದಿನ ದಿನ ಭಾನುವಾರ ಇರೋದ್ರಿಂದ ಎರಡು ದಿನಗಳ ಸಾಲು ರಜೆಯನ್ನು ಪಡೆಯಬಹುದು. ಆಗಸ್ಟ್ ತಿಂಗಳು ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ದಿನ, ಸ್ವತಂತ್ರವಾಗಿ ದೇಶದ ಹಬ್ಬ ಆಚರಿಸಿ, ಮನೆಯಲ್ಲೇ ಸಂಭ್ರಮಿಸಬಹುದು. ಅದೇ ತಿಂಗಳ 25ಕ್ಕೆ ಗೌರೀಗಣೇಶ ಹಬ್ಬ. ಭೂಮಿಗೆ ಬರೋ ಗೌರಿ-ಗಣೇಶನನ್ನು ವೆಲ್‍ಕಮ್ ಮಾಡಿ, ಮರುದಿನ ಶನಿವಾರ ಒಂದು ದಿನ ರಜೆ ಹಾಕಿದ್ರೆ, ಭಾನುವಾರ ಹೇಗಿದ್ರು ರಜೆ ಇದ್ದೇ ಇರುತ್ತೆ, ಆಗಸ್ಟ್​ನಲ್ಲೂ ಮೂರು ದಿನಗಳ ರಜೆಯ ಸಂಭ್ರಮ ನಿಮ್ಮದಾಗುತ್ತೆ.

ಸೆಪ್ಟೆಂಬರ್ ಬಂತಂದ್ರೆ ರಜೆಗೆ ಎಲ್ಲಿಗೆ ಹೋಗೋದು ಅನ್ನೋ ಯೋಚನೆ ನಿಮ್ಮನ್ನ ಕಾಡುತ್ತದೆ. ಯಾಕಂದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಲು ಸಾಲು ರಜೆಗಳ ಸುರಿಮಳೆ ಇದೆ. ಬಕ್ರೀದ್, ವಿಜಯದಶಮಿ, ಆಯುಧಪೂಜೆ ಸೇರಿದಂತೆ ಭಾನುವಾರ ಹಾಗೂ ಎರಡನೇ ಶನಿವಾರ ಹೊರತುಪಡಿಸಿ ನಾಲ್ಕು ದಿನ ರಜೆ ಸಿಗಲಿದೆ. ಅಕ್ಟೋಬರ್‍ನಲ್ಲೂ ನಾಲ್ಕು ದಿನ ಸರ್ಕಾರಿ ರಜೆಗಳಿವೆ. ಮೊಹರಂ ಹಬ್ಬಕ್ಕೆ ಸರ್ಕಾರಿ ರಜೆ ಇದ್ದರೂ ಅಂದು ಭಾನುವಾರ, ಆದ್ರೆ, ಮರುದಿನವೇ ಗಾಂಧೀಜಯಂತಿ ಇರೋದ್ರಿಂದ ಎರಡು ರಜೆ ಒಟ್ಟಾಗಿ ಸಿಗಲಿದೆ. ಉಳಿದಂತೆ, ಅಕ್ಟೋಬರ್ 5ರಂದು ವಾಲ್ಮೀಕಿಜಯಂತಿ, ಅಕ್ಟೋಬರ್ 18ರಂದು ನರಕ ಚತುರ್ದಶಿ, ಅಕ್ಟೋಬರ್ 20ರಂದು ಬಲಿಪಾಡ್ಯಮಿ ಹಬ್ಬಗಳು ನಿಮಗೆ ವಿಶ್ರಾಂತಿಗಾಗಿ ರಜೆ ನೀಡುತ್ತವೆ. ನವೆಂಬರ್‍ನಲ್ಲಿ ಕನಕದಾಸರ ಜಯಂತಿ ಹೊರತುಪಡಿಸಿ ಮತ್ಯಾವ ರಜೆಯೂ ಸಿಗೋದಿಲ್ಲ.

ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‍ನ 2ನೇ ತಾರೀಖು ಈದ್ ಮಿಲಾದ್‍ ಇರುತ್ತೆ, 25ರ ಸೋಮವಾರ ಕ್ರಿಸ್‍ಮಸ್ ಹಬ್ಬ ನಿಮಗಾಗಿ ಕಾಯ್ತಿರುತ್ತೆ. ಇವಿಷ್ಟೂ ಸರ್ಕಾರಿ ರಜೆಗಳೊಂದಿಗೆ ಎರಡನೇ ಶನಿವಾರ, ಭಾನುವಾರಗಳೂ ನಿಮಗೆ  ರಜೆಯ ಸವಿ ನೀಡ್ತವೆ. ಇವುಗಳ ಜೊತೆ ಬಂದ್, ಮುಷ್ಕರ ಅಂತ ಏನಾದ್ರೂಆದ್ರೆ ಅದಕ್ಕೂ ರಜೆಗಳೂ ಇದ್ದೇ ಇರುತ್ತವೆ. ಒಟ್ಟಾರೆ ಜನ 2017 ವರ್ಷವನ್ನು ಸಾಕಷ್ಟು ರಜೆಗಳೊಂದಿಗೆ ಖುಷಿಯಾಗಿಕಳೀತಾರೆ ಅನ್ನೋದು ಸುಳ್ಳಲ್ಲ.

ಇದನ್ನು ಓದಿ:

1.  ಡಿಜಿಟಲ್​ ಪೇಮೆಂಟ್​ ಕಡೆ ಗಮನ ಕೊಡಿ- ಆಕರ್ಷಕ ಬಹುಮಾನ ಗೆಲ್ಲಿರಿ..!

2. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್

3. ದೆಹಲಿಯ ಇಬ್ಬರು ಸಹೋದರರ ವಿಭಿನ್ನ ಕಥೆ- ಹೊಸ ಉದ್ಯಮ, ಹೊಸ ಕನಸು..!