ಬರುತ್ತಿದೆ ಹೋಳಿ ಹಬ್ಬದ ಸಂಭ್ರಮ : ಆಚರಣೆಗಿರಲಿ ನೈಸರ್ಗಿಕ ಬಣ್ಣಗಳ ರಂಗು...

ಸ್ವಾತಿ ಉಜಿರೆ

0

ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ. ಯುವಕ ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವುದರಿಂದ ಸುಲಭವಾಗಿ ಈ ಹಬ್ಬ ದೇಶದೆಲ್ಲಡೆ ಪಸರಿಸಿದೆ. ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿವಸ ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಕಾಮನ ಹಬ್ಬವೆಂದೂ ಕರೆಯಲಾಗುತ್ತದೆ. ಕಾಮನ ಹಬ್ಬವೆಂದೂ ಕರೆಯಲ್ಪಡುವ ಹೋಳಿ ಆಚರಣೆಯ ಹಿಂದೆ ಒಂದು ಕಥೆಯೂ ಇದೆ. ಆದ್ರೆ ಇಲ್ಲಿ ಪುರಾಣಗಳ ಕಥೆಗಿಂತ ಬಣ್ಣಗಳೊಂದಿಗೆ ಓಕುಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುವುದು ಪ್ರಾಮುಖ್ಯತೆ ಪಡೆದಿದೆ. ಅಲ್ಲದೆ ಹೋಳಿಯನ್ನ ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿ, ಒಗ್ಗಟ್ಟಿನ ಧ್ಯೋತಕವಾಗಿ ಆಚರಿಸಲಾಗುವುದು ಸಾಮಾನ್ಯವಾಗುತ್ತಿದೆ.

ಇನ್ನು ಹೋಳಿ ಅಂದಾಕ್ಷಣ ನೆನಪಿಗೆ ಬರುವುದೇ ವಿವಿಧ ಬಣ್ಣಗಳು.. ಬೇರೆಯವರ ಮುಖಕ್ಕೆ ರಂಗು ಬಳಿಯುವುದು, ಬಣ್ಣದೋಕುಳಿ ಎರಚುವುದು ಇವುಗಳೆಲ್ಲಾ ಈ ಹೋಳಿ ಹಬ್ಬದ ಮೋಜಿನ ಕ್ಷಣಗಳು. ಪರಸ್ಪರು ಬಣ್ಣದ ಪುಡಿಗಳನ್ನು ಮುಖಕ್ಕೆ ಹಚ್ಚುವ ಮೂಲಕ, ಅಥವಾ ಬಣ್ಣದ ಹುಡಿಯನ್ನು ನೀರಿನಲ್ಲಿ ಕದಡಿ ಈ ಬಣ್ಣದ ನೀರನ್ನು ಪಿಚಕಾರಿಗಳಲ್ಲಿ ಎರಚುತ್ತಾ, ಹಾಡುತ್ತಾ ನಲಿಯುವುದು ಹೋಳಿಯ ಸಂಭ್ರಮ. ಬಣ್ಣಗಳ ಖರೀದಿ, ಅವುಗಳೊಂದಿಗೆ ಆಟ ಹಬ್ಬದ ಉತ್ಕರ್ಷ. ಬಣ್ಣಗಳನ್ನು ಖರೀದಿಸಿ ಮನೆಗೆ ತರುವ ಮೂಲಕ ಮನೆಗೆ ಹರ್ಷೋಲ್ಲಾಸ, ಆನಂದ, ಸಂತಸವನ್ನು ಮನೆ-ಮನ ಬದುಕಿಗೆ ತರುತ್ತದೆ ಎಂಬುದು ಈ ಬಣ್ಣದ ಹಬ್ಬದ ಸಂಕೇತ. ಹೀಗಾಗಿ ಹೋಳಿಯಲ್ಲಿ ಬಣ್ಣಗಳಿಗೆ ಇನ್ನಿಲ್ಲದ ಮಹತ್ವ ನೀಡಲಾಗಿದೆ.

ಇನ್ನು ಹೋಳಿ ಹಬ್ಬ ಬಂದ್ರೆ ಸಾಕು ಮಾರ್ಕೆಟ್ ನಲ್ಲಿ ವಿವಿಧ ಗುಣಮಟ್ಟದ ಬಣ್ಣಗಳ ಮಾರಾಟ ಜೋರಾಗಿರುತ್ತದೆ. ಕೆಲವು ಅಂಗಡಿಗಳಂತೂ ಸ್ಪರ್ಧೆಗೆ ಬಿದ್ದಂತೆ ಮಾರಾಟಕ್ಕಿಳಿಯುತ್ತವೆ. ಜೊತೆಗೆ ಡಿಫರೆಂಟ್ ಆಗಿರೋ ಆಫರ್ ಗಳನ್ನ ನೀಡುವ ಮೂಲಕ ಗ್ರಾಹಕರನ್ನ ಸೆಳೆಯುವ ಪ್ರಯತ್ನ ನಡೆಸುತ್ತಾರೆ. ಆದ್ರೆ ಈ ಬಣ್ಣಗಳಲ್ಲಿ ಯಥೇಚ್ಛವಾಗಿ ರಾಸಾಯನಿಕಗಳನ್ನ ಬಳಸಲಾಗುತ್ತದೆ ಅನ್ನೋದು ಸತ್ಯ. ಈ ರಾಸಾಯನಿಕ ಯುಕ್ತ ಬಣ್ಣಗಳನ್ನ ಬಳಸುವುದರಿಂದ ಚರ್ಮದ ಕ್ಯಾನ್ಸರ್, ಅಲರ್ಜಿಯಂತಹ ಸಮಸ್ಯೆಗಳು ಕಾಡುತ್ತವೆ. ಕಣ್ಣಿಗೆ ಬಿದ್ದರಂತೂ ದೃಷ್ಠಿಯನ್ನೇ ಕಳೆದುಕೊಳ್ಳುವ ಅಪಾಯವಿರುತ್ತದೆ . 

“ ಹೋಳಿ ಸಂಭ್ರಮದಲ್ಲಿ ಬಣ್ಣಗಳನ್ನ ಬಳಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳಲ್ಲಿ ಬೆಳ್ಳಿ, ಹೊಳೆಯುವ ಹಸಿರು ಹಾಗೂ ಚಿನ್ನದ ಬಣ್ಣಗಳಲ್ಲಿ ಅತಿಯಾದ ರಾಸಾಯನಿಕಗಳಿರುತ್ತವೆ. ಇವುಗಳು ಚರ್ಮ ಹಾಗೂ ಕೂದಲನ್ನ ಬ್ಲೀಚ್ ಮಾಡುತ್ತವೆ ” 
-ಬಸವರಾಜ್ ,ಬಣ್ಣಗಳ ವ್ಯಾಪಾರಿ 

ಹೋಳಿ ಬಣ್ಣದಲ್ಲಿರುವ ರಾಸಾಯನಿಕಗಳ ಬಗ್ಗೆ ಕೆಲವರಿಗೆ ಅರಿವಿದೆ. ಅವುಗಳಿಂದಾಗುವ ಅಪಾಯಗಳ ಬಗ್ಗೆ ಕಾಳಜಿಯೂ ಇದೆ. ಹಾಗಂತ ಹೋಳಿ ದಿನ ಬಣ್ಣಗಳ ಮೋಹದಿಂದ ಹೊರಬರಲೂ ಸಾಧ್ಯವಿಲ್ಲ. ಅಂತಹವರು ಕಂಡುಕೊಂಡಿರುವ ಸುಲಭೋಪಾಯ ಸಾವಯವ ಬಣ್ಣಗಳು.. ಹೌದು ಮನೆಯಲ್ಲೇ ಸಾವಯವ ಬಣ್ಣಗಳನ್ನ ತಯಾರಿಸಿಕೊಂಡಿದ್ದೇ ಆದ್ರೆ ರಾಸಾಯನಿಕ ಮುಕ್ತ ಬಣ್ಣಗಳಿಂದ ದೂರವಿಡಬಹುದು.. ಇನ್ನು ರಾಸಾಯನಿಕ ಬಣ್ಣಗಳಿಂದ ಜನ ದೂರವುಳಿಯುತ್ತಿರುವುದನ್ನ ಗಮನಿಸಿರುವ ಬೆಂಗಳೂರಿನಲ್ಲಿರುವ ನೈಸರ್ಗಿಕ ಬಣ್ಣ ತಯಾರಕಿ ಮನೋರಮಾ ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದಾರೆ. ಮನೆಯಲ್ಲೇ ಬಣ್ಣಗಳನ್ನ ತಯಾರಿಸಿ ಹೋಳಿ ಹಬ್ಬದಂದು ಪೂರೈಸುವ ಇವರು ಭರ್ಜರಿ ಲಾಭವನ್ನೂ ಕಾಣುತ್ತಿದ್ದಾರೆ.

“ ಸಾವಯವ ಬಣ್ಣಗಳನ್ನ ಬಳಸುವುದರ ಮೂಲಕ ತ್ವಚೆಯನ್ನ ರಕ್ಷಿಸಿಕೊಳ್ಳಬಹುದು.. ಕಣ್ಣು, ಕೂದಲಿಗೆ ಸಾವಯವ ಬಣ್ಣಗಳು ಉತ್ತಮ. ಮನೆಯಲ್ಲೇ ಇವುಗಳನ್ನ ತಯಾರಿಸಲು ಸಾಧ್ಯವಿರುವುದರಿಂದ ಖರ್ಚೂ ಕಡಿಮೆ. ಜೊತೆಗೆ ನೀರೂ ಹೆಚ್ಚು ಪೋಲಾಗುವುದಿಲ್ಲ ”

                       - ಮನೋರಮಾ ಜೋಷಿ, ಸಾವಯವ ಬಣ್ಣ ತಯಾರಕರು

ಇನ್ನು ಮನೆಯಲ್ಲೇ ನೈಸರ್ಗಿಕ ಬಣ್ಣಗಳನ್ನ ತಯಾರಿಸುವ ವಿಧಾನವನ್ನೂ ಅವರೇ ಹೇಳಿ ಕೊಡುತ್ತಾರೆ. ಕೆಂಪು ದಾಸವಾಳ ಹೂವಿನ ಎಸಳುಗಳನ್ನು ನೆರಳಿನಲ್ಲಿ ಒಣಗಿಸಿ. ನಂತರ ಅದಕ್ಕೆ ಸ್ಪಲ್ಪ ಹಿಟ್ಟು ಸೇರಿಸಿ ಮಿಕ್ಸಿಯಲ್ಲಿ ಹಾಕಿದರೆ ಕೆಂಪುಬಣ್ಣ ಸಿದ್ಧ. ದಾಳಿಂಬೆಯ ಸಿಪ್ಪೆಯನ್ನು ನೀರಿಗೆ ಹಾಕಿ ಬಿಸಿ ಮಾಡಿದರೆ ಕೆಂಪು ಬಣ್ಣದ ನೀರು ಸಿದ್ಧವಾಗುತ್ತದೆ. ಇದನ್ನು ಪಿಚಕಾರಿಗೆ ತುಂಬಿ ರಂಗಿನೋಕುಳಿ ಆಡಬಹುದು. ಲಿಂಬೆ ನೀರಿಗೆ ಅರಸಿನ ಸೇರಿಸಿದರೆ ಅದು ಕೆಂಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಸ್ವಲ್ಪ ನೀರು ಹಾಕಿದರೆ ಕೆಂಪು ಬಣ್ಣದ ಪೇಸ್ಟ್ ರೆಡಿಯಾಗುತ್ತದೆ. ನಂತರ ಅದನ್ನು ಬಕೆಟ್ ನೀರಿನೊಂದಿಗೆ ಬೆರೆಸಿ. ಗಾಢ ಕೆಂಪು ಬಣ್ಣದ ಓಕುಳಿ ಬೇಕಿದ್ದರೆ ಕತ್ತರಿಸಿದ ಬೀಟ್‌ರೋಟ್ ಅನ್ನು ನೀರಿಗೆ ಹಾಕಿ ಬೇಯಿಸಿ. ಇನ್ನು ಶಂಕಪುಷ್ಟವನ್ನು ನೀರಿನಲ್ಲಿ ಕುದಿಸಿ ಅಥವಾ ರಾತ್ರಿ ನೆನೆಸಿಟ್ಟರೆ ನೀರಿನ ಬಣ್ಣ ನೀಲಿಯಾಗುತ್ತದೆ. ಇನ್ನು ಇವುಗಳನ್ನ ತಯಾರಿಸಲು ಸಮಯದ ಅಭಾವವಿದ್ರೆ ನೀವು ಬೆಂಗಳೂರಿನ ಮನೋರಮಾ ಜೋಷಿಯವರಿಗೆ ಒಂದು ಫೋನಾಯಿಸಿದರೆ ಸಾಕು.. ನಿಮಗೆ ಬೇಕಾಗಿರುವ ಬಣ್ಣ ಹೋಳಿಯ ದಿನ ತಯಾರಾಗಿರುತ್ತದೆ. ಈ ಮೂಲಕ ಕಲರ್ ಫುಲ್ ಹೋಳಿಯನ್ನ ಸಂಭ್ರಮದಿಂದ ಆಚರಿಸಬಹುದು.

ಲೇಖಕರು – ಸ್ವಾತಿ 

Related Stories