ಸಾಮಾಜಿಕ ಉದ್ಯಮಿ ತನ್ನನ್ನು ತಾನೇ ಕೇಳಿಕೊಳ್ಳಬೇಕಾದ 5 ಪ್ರಶ್ನೆಗಳು...

ಟೀಮ್​ ವೈ.ಎಸ್​​.ಕನ್ನಡ

0

ನಿಮ್ಮ ಸಂದೇಶವನ್ನು ಬಿಲಿಯನ್‍ಗಟ್ಟಲೆ ಜನರಿಗೆ ತಲುಪಿಸೋದು ಈಗ ಎಂದಿಗಿಂತಲೂ ಸುಲಭ. ಯಾಕಂದ್ರೆ ಅಂತರ್ಜಾಲ ಅನ್ನೋ ಈಸಿ ಮಾಧ್ಯಮ ಇದೆ. ಆದ್ರೆ ಇಂಟರ್ನೆಟ್‍ನಲ್ಲಿ ಅಸಂಖ್ಯಾತ ಸಂದೇಶಗಳು ಹರಿದು ಬರ್ತಾ ಇರೋದ್ರಿಂದ ಗ್ರಾಹಕರ ಗಮನವನ್ನು ಉದ್ಯಮಗಳತ್ತ ಸೆಳೆಯೋದು ನಿಜಕ್ಕೂ ಕಠಿಣ ಎನಿಸಿದೆ. ಅಂತಹ ಸಾವಿರಾರು ಸಂದೇಶಗಳನ್ನು ನಿತ್ಯ ನೋಡುವ ಗ್ರಾಹಕರು ಅವುಗಳಲ್ಲಿ ಕೆಲವನ್ನು ಓಪನ್ ಮಾಡ್ತಾರೆ, ಕೆಲವನ್ನು ನೆನಪಿಟ್ಟುಕೊಳ್ತಾರೆ. ಮಿಲಿಯನ್ ಸಂದೇಶಗಳಲ್ಲಿ ಒಂದನ್ನು ಆ ಉದ್ಯಮದ ಜೊತೆ ಆಯ್ದುಕೊಂಡು ಸಂಪರ್ಕ ಸಾಧಿಸ್ತಾರೆ. ಸಾಮಾಜಿಕ ಉದ್ಯಮಗಳಲ್ಲಿ ಆನ್‍ಲೈನ್ ಮಾರ್ಕೆಟಿಂಗ್ ಅತ್ಯಂತ ಸರಳವಾದದ್ದು. ಅಂತರ್ಜಾಲ ಪ್ರವೇಶದ ಮೂಲಕ ಗ್ರಾಹಕರನ್ನು ತಲುಪಲು ಇಲ್ಲಿ ಅವಕಾಶವಿದೆ. ಆದ್ರೆ ಮಾರ್ಕೆಟಿಂಗ್ ಮೆಸೇಜ್ ತಯಾರಿಸುವ ಸಂದರ್ಭದಲ್ಲಿ ಸಾಮಾಜಿಕ ಉದ್ಯಮಗಳು ಎಚ್ಚರಿಕೆ ವಹಿಸಬೇಕು. ಪ್ರತಿಯೊಂದು ಸಂವಹನದ ಸಂದರ್ಭದಲ್ಲೂ ಕೆಲ ವಿಚಾರಗಳ ಬಗ್ಗೆ ಗಮನಹರಿಸಲೇಬೇಕು. ಇಲ್ಲಿ ಮೂರು ಸಾಮಾನ್ಯ ಪ್ರಶ್ನೆಗಳಿವೆ. ಅದಕ್ಕೆ ಸರಿಯಾಗಿ ಉತ್ತರಿಸಿದ್ರೆ ಕೊಡುಗೆದಾರರು, ಬೆಂಬಲಿಗರು ಮತ್ತು ಗ್ರಾಹಕರ ದೊಡ್ಡ ಜಾಲವನ್ನೇ ನೀವು ಹೊಂದಬಹುದು.

ನಿಮ್ಮ ಸಂದೇಶ ನೀವು ಕೊಡುತ್ತಿರುವ ಆಫರ್ ಹಾಗೂ ಅದರ ಪರಿಣಾಮಗಳನ್ನು ಸರಿಯಾದ ಸಮತೋಲನದಲ್ಲಿ ರವಾನಿಸುತ್ತಿದೆಯಾ ..?

ಉದ್ಯಮ ಮತ್ತದರ ಪರಿಣಾಮಗಳ ಬಗ್ಗೆ ಸಾಮಾಜಿಕ ವ್ಯಾಪಾರದಲ್ಲಿ ಸಮತೋಲನ ಇರಬೇಕು. ಈ ಸಮತೋಲವನ್ನು ಕಳೆದುಕೊಂಡ್ರೆ ಫಲಿತಾಂಶ ದುರಂತವಾಗಬಹುದು. ಮಾರ್ಕೆಟಿಂಗ್‍ನ ಎಲ್ಲಾ ಸಂದೇಶಗಳಿಗೂ ಇದು ಅನ್ವಯವಾಗುತ್ತದೆ. ನೀವು ನೀಡುತ್ತಿರುವ ಉತ್ತನ್ನ ಅಥವಾ ಸೇವೆ ಮತ್ತದು ಸೃಷ್ಟಿಸುವ ಪರಿಣಾಮ ಅಂತಿಮವಾಗಿ ನೀವು ಗ್ರಾಹಕರಿಗೆ ಕೊಡುತ್ತಿರುವಂತಹ ಪ್ಯಾಕೇಜ್. ನಿಮ್ಮ ಸಂದೇಶ ಸರಿಯಾಗಿ ಗ್ರಾಹಕರಿಗೆ ಮನವರಿಕೆ ಆಗದಿದ್ದಲ್ಲಿ ಅವರು ಆಸಕ್ತಿ ಕಳೆದುಕೊಳ್ಳುತ್ತಾರೆ.

ನಿಮ್ಮ ಸಂದೇಶ ಜನರಲ್ಲಿ ಸಮಸ್ಯೆ ಮತ್ತು ಪರಿಹಾರದ ಭಾಗವೆಂಬ ಭಾವನೆಯನ್ನು ಮೂಡಿಸುತ್ತಿದೆಯಾ ..?

ನಿಮ್ಮ ಮನೆಯ ಬಳಿ ಕಸದ ರಾಶಿ ಬಿದ್ದ ಕಾರಣಕ್ಕೆ ಪಕ್ಕದ ಮನೆಯವರ ಬೇಜವಾಬ್ಧಾರಿ ವರ್ತನೆಯಿಂದ ನಿಮಗೆ ಕೋಪ ಬಂದಿರಬಹುದು, ನಿರಾಸೆ, ಅಸಮಾಧಾನ ಮೂಡಿರಬಹುದು. ನೀವು ಕಸವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದಾಗ ಆ ಕಾರ್ಯಕ್ಕೆ ನಿಮಗೆ ಸಹಾಯದ ಅವಶ್ಯಕತೆ ಇರಬಹುದು. ಆದ್ರೆ ಈ ಕಸದ ಒಂದು ಭಾಗ ಅವರ ಮನೆಯಿಂದ ಬಂದಿದೆ ಅನ್ನೋ ಕಾರಣಕ್ಕೆ ಅವರು ನಿಮಗೆ ಸಹಾಯ ಮಾಡಬೇಕು, ಮಾಡೇ ಮಾಡ್ತಾರೆ ಅಂದುಕೊಂಡ್ರೆ ಅದು ಅಸಾಧ್ಯ. ನೀವೇ ಅವರನ್ನು ಸ್ವಚ್ಛತಾ ಕಾರ್ಯದ ಭಾಗವಾಗಿ ಪರಿವರ್ತಿಸಬೇಕು. ಕೆಟ್ಟ ಘಟನೆಗೆ ನೀವೇ ಕಾರಣ ಎಂದು ಜನರನ್ನು ದೂಷಿಸಿದ್ರೆ ತೊಂದರೆ ಕೊಡುವವರ ಗುಂಪನ್ನೇ ಕಟ್ಟಿಕೊಂಡಂತಾಗುತ್ತದೆ. ಅದನ್ನು ಬಿಟ್ಟು ಒಳ್ಳೆಯದನ್ನು ಸೃಷ್ಟಿಸಲು ಯತ್ನಿಸಿದ್ರೆ ಅದು ಉಳಿಸಿಕೊಳ್ಳಬಲ್ಲಂತಹ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ.

ನಿಮ್ಮ ಸಂದೇಶ ಅನುಭೂತಿ ಸೃಷ್ಟಿಸುತ್ತಿದೆಯೋ ಅಥವಾ ಸಹಾನುಭೂತಿಯನ್ನೋ ..?

ಸಹಾನುಭೂತಿ ಇತರರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ. ಆದ್ರೆ ಅನುಭೂತಿ ಭಾವನೆ ಮತ್ತು ಶಬ್ಧಗಳನ್ನೂ ಮೀರಿದ್ದು. ಜವಾಬ್ಧಾರಿಯ ಅರ್ಥವನ್ನು ಮೂಡಿಸುವುದರಿಂದ ಕಾರ್ಯಾಚರಣೆಗೂ ದಾರಿ ಮಾಡಿಕೊಡುತ್ತದೆ. ಸಮಸ್ಯೆಗಳನ್ನು ಎದುರಿಸುತ್ತಿರುವ ಜನರ ಜೊತೆ ಸಂಪರ್ಕ ಬೆಳೆಸುತ್ತದೆ ಜೊತೆಗೆ ಪರಿಹಾರದ ಭಾಗವಾಗಲು ಪ್ರೇರೇಪಿಸುತ್ತದೆ. ಪದಗಳನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಿ. ಮೆಸೇಜ್‍ಗಳಲ್ಲಿನ ಸಣ್ಣ ಬದಲಾವಣೆ ಕೂಡ ನಿಮ್ಮ ಆಟವನ್ನೇ ಬದಲಾಯಿಸಬಹುದು. ಸಹಾನುಭೂತಿ ಸಂದೇಶ ಹೃದಯವನ್ನು ಕರಗಿಸಬಹುದು ಆದ್ರೆ ಅನುಭೂತಿಯ ಸಂದೇಶದಿಂದ ನಿಮಗೆ ಬೇಕಾದ ಸಹಾಯ ಹಸ್ತ ದೊರೆಯಬಹುದು.

ನಿಮ್ಮ ಸಂದೇಶದ ಧ್ವನಿ ಧನಾತ್ಮಕವಾಗಿದೆಯೋ ಅಥವಾ ರುಣಾತ್ಮಕವಾಗಿದೆಯೋ ..?

ನಿಮ್ಮ ಸಮಸ್ಯೆಯಲ್ಲಿ ನೂರಾರು ರುಣಾತ್ಮಕ ಅಂಶಗಳನ್ನು ನೀವು ಎದುರಿಸಬಹುದು. ಸಂದರ್ಭಗಳು, ಮನೋಧರ್ಮ, ಸರ್ಕಾರದ ಕೆಲವು ನೀತಿಗಳು, ಅಸಹಕಾರ ತೋರಿಸುವ ಜನರು ಪದೇ ಪದೇ ನಿಮಗೆ ಎದುರಾಗಬಹುದು. ನೀವು ಅದನ್ನೆಲ್ಲ ಸವಾಲಾಗಿ ತೆಗೆದುಕೊಳ್ಳಲೇಬೇಕು. ಇದನ್ನು ಭೂತಕಾಲವಾಗಿ ಪರಿವರ್ತಿಸಿ, ಪ್ರಕಾಶಮಾನವಾದ ಭವಿಷ್ಯ ನಿಮ್ಮದಾಗುತ್ತೆ. ನಿಮ್ಮ ಮೆಸೇಜ್ ಕೂಡ ಧನಾತ್ಮಕತೆಯನ್ನೇ ಪ್ರತಿನಿಧಿಸಬೇಕು. ಇದು ಅಸಾಧ್ಯವಲ್ಲ, ಇದು ಸುಲಭವಾಗಿ ಸಾಧ್ಯ ಎಂದುಕೊಂಡರೆ ಅದು ನಿಮ್ಮ ಆಲೋಚನೆಗಳನ್ನೇ ಬದಲಾಯಿಸಬಲ್ಲದು. ಸಂವಹನದ ಮೃದು ಧೋರಣೆ ನಿಮ್ಮ ಪ್ರೇಕ್ಷಕರ ಜೊತೆಗೆ ಬಲವಾದ ಸಂಪರ್ಕ ಬೆಳೆಸಲು ಸಹಕಾರಿಯಾಗುತ್ತದೆ.

ನಿಮ್ಮ ಕೆಲಸದಿಂದ ಪ್ರಯೋಜನ ಪಡೆಯುತ್ತಿರುವವರನ್ನು ನಿಮ್ಮ ಸಂದೇಶ ಅದರಲ್ಲಿ ಬೆರೆಯುವಂತೆ ಮಾಡುತ್ತಿದೆಯಾ ..?

ನಿಮ್ಮ ಸಂಸ್ಥೆಯ ಮೂಲಕ ಗ್ರಾಹಕರ ಸಮಸ್ಯೆ ಪರಿಹಾರವಾಯ್ತು ಎಂದಾದಲ್ಲಿ ಅದು ನಿಮ್ಮ ಕೆಲಸಕ್ಕೆ ಸಿಕ್ಕ ಅತ್ಯುತ್ತಮ ಪ್ರಶಂಸಾಪತ್ರವಿದ್ದಂತೆ. ಅವರ ಕಥೆಯ ಜೊತೆಗೆ ಚಿತ್ರಗಳು ಹಾಗೂ ವಿಡಿಯೋವನ್ನು ಹಾಕಲು ಮರೆಯಬೇಡಿ. ನಿಮ್ಮ ಕೆಲಸದ ಬಗೆಗಿನ ನಂಬಿಕೆಯನ್ನು ಬೆಳೆಸಲು ಕೂಡ ಇದು ಸಹಕಾರಿಯಾಗಲಿದೆ. ಇದರ ಫಲಿತಾಂಶ ನಿಮ್ಮ ಯೋಜನೆಗಳನ್ನು ಹೆಚ್ಚು ವಿಸ್ತಾರವಾಗಿ ಮನವರಿಕೆ ಮಾಡಿಕೊಡುತ್ತದೆ.

ಲೇಖಕರು: ಕೃತಿ ಪೂನಿಯಾ
ಅನುವಾದಕರು: ಭಾರತಿ ಭಟ್​​​

Related Stories