ಮರ ಬೆಳೆಸಿ, ಪರಿಸರ ಉಳಿಸಿ- ಸಿಲಿಕಾನ್​ ಸಿಟಿಯಲ್ಲಿ ಪರಿಸರ ಬೆಳೆಸು ಕಾರ್ಯಕ್ಕೆ ಡಿಜಿಟಲ್​ ಟಚ್​​​

ಟೀಮ್​ ವೈ.ಎಸ್​. ಕನ್ನಡ

1

ಮರವಿದ್ದರೆ ಬದುಕು, ಮರವಿದ್ದರೆ ಆಯುಷ್ಯ ಮತ್ತು ಹಸಿರೇ ಉಸಿರು. ಆದ್ರೆ ಅಭಿವೃದ್ಧಿಯ ಮಾತಿನಲ್ಲಿ ಪರಿಸರ ಸಂರಕ್ಷಣೆಯನ್ನು ಮರೆತಿದ್ದೇವೆ. ಅಷ್ಟೇ ಅಲ್ಲ ಉಳಿದಿರುವ ಅಷ್ಟಿಷ್ಟು ಮರಗಳನ್ನು ಕೂಡ ನೆಲಸಮ ಮಾಡಲಾಗುತ್ತಿದೆ. ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದ್ದರೆ ಒಳಿತು, ಇಲ್ಲದಿದ್ದರೆ ಶಾಪ ಅನ್ನುವ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡವರೇ ಕಡಿಮೆ. ಕೇವಲ ಪರಿಸರವಾದಿಗಳು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರುತ್ತಿದ್ದಾರೆ. ಉಳಿದವರು ತಾವು ಮಾಡುವ ಮತ್ತು ಅಂದುಕೊಂಡ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಬೆಂಗಳೂರಿನಲ್ಲಂತೂ ಮರಗಳನ್ನು ನೆಡುವ ಬದಲು ಅದನ್ನು ಉರುಳಿಸುವ ಸಂಖ್ಯೆಯೇ ಹೆಚ್ಚಾಗಿದೆ. 

ಗಾರ್ಡನ್ ಸಿಟಿ ಬೆಂಗಳೂರು ಇತ್ತೀಚಿನ ಕೆಲ ದಿನಗಳಲ್ಲಿ ಕಾಂಕ್ರೀಟ್ ಕಾಡಾಗುತ್ತಿದೆ. ಗಗನಚುಂಚಿ ಕಟ್ಟಡಗಳು ಬೆಂಗಳೂರಿಗೆ ಆಧುನಿಕ ಟಚ್​ ನೀಡುತ್ತಿದೆ. ಆದ್ರೆ ಪರಿಸರ ನಾಶವಾಗಿದೆ. ಒಂದು ಕಾಲದಲ್ಲಿನ ಅತ್ಯುತ್ತಮ ವಾತಾವರಣಕ್ಕೆ ಹೆಸರುವಾಸಿಯಾಗಿದ್ದ ಬೆಂಗಳೂರು ಈಗ ಪರಿಸರ ನಾಶದಿಂದ ಕುಖ್ಯಾತಿ ಪಡೆಯುತ್ತಿದೆ. ಆದ್ರೆ ಬೆಂಗಳೂರನ್ನು ಹೀಗೇ ಬಿಡಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಗೆ ಸಿದ್ಧವಿಲ್ಲ. ಹೀಗಾಗಿ  ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ನಗರದಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸುವ ಕೆಲಸಕ್ಕೆ ಕೈ ಹಾಕಿದೆ. ಬೆಂಗಳೂರಿನಲ್ಲಿ ಸ್ಮಾರ್ಟ್​ ಫೋನ್​ ಬಳಕೆದಾರರಿಗೆ ಮೊದಲು ಪರಿಸರದ ಬಗ್ಗೆ ಕಾಳಜಿ ಹುಟ್ಟಿಸಲು ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಗ್ರೀನ್ಆ್ಯಪ್​ ಎಂಬ ಮೊಬೈಲ್​ ಆ್ಯಪ್​ನ್ನು ಬಿಡಗಡೆ ಮಾಡಿದೆ. ಬಿಬಿಎಂಪಿ ಅಂದುಕೊಂಡಂತೆಯೇ ಗ್ರೀನ್​ಆ್ಯಪ್​ಗೆ ನಾಗರಿಕ ವಲಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

 " ಗ್ರೀನ್ ಆ್ಯಪ್​​ಗೆ ಅದ್ಭುತ ಪ್ರತಿಕ್ರಿಯೆ ಬರುತ್ತಿದೆ. ಬೇಡಿಕೆ ಹೆಚ್ಚುತ್ತಿರುವುದರಿಂದ ಇನ್ನಷ್ಟು ಸಸಿಗಳನ್ನು ತಯಾರಾಗಿಟ್ಟುಕೊಳ್ಳುತ್ತೇವೆ. ಪ್ರತಿಯೊಬ್ಬರಿಗೂ ಪರಿಸರದ ಬಗ್ಗೆ ಅರಿವು ಮೂಡಬೇಕು ಅನ್ನುವುದು ನಮ್ಮ ಆಶಯ"
- ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

50 ಸಾವಿರ ಸಸಿಗಳಿಗೆ ಬೇಡಿಕೆ

ಬೆಂಗಳೂರಿನ ಜನಕ್ಕೆ ಪರಿಸರದ ಬಗ್ಗೆ ಕಾಳಜಿ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಆದರೆ ಅನಿವಾರ್ಯ ಕಾರಣಗಳಿಂದ ಪರಿಸರ ಸಂರಕ್ಷಣೆಯನ್ನು ಮರೆತಿದ್ದಾರೆ ಅನ್ನುವ ವಿಷಯ ಬೆಳಕಿಗೆ ಬಂದಿದೆ. ಇದಕ್ಕೊಂದು ಉದಾಹರಣೆ ಎಂಬಂತೆ, ಗ್ರೀನ್​ ಆ್ಯಪ್​ನ್ನು ಪರಿಚಯಿಸಿದ ಕೆಲವೇ ದಿನಗಳಲ್ಲಿ 50,000 ಕ್ಕೂ ಹೆಚ್ಚಿನ ಸಸಿಗಳಿಗೆ ಬೇಡಿಕೆ ಬಂದಿವೆ, ಸುಮಾರು 6ಸಾವಿರ ನಾಗರೀಕರು ಈ ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಂಡಿದ್ಧಾರೆ. ಬೆಂಗಳೂರು ನಗರದಲ್ಲಿ ಹಸಿರನ್ನು ಕಾಣಲು ನಾಗರಿಕರು ಬಹಳ ಉತ್ಸುಕರಾಗಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಆ್ಯಪ್​ನಿಂದ ಸಹಾಯ ಏನು..? 

ಗ್ರಿನ್​ ಆ್ಯಪ್​ ಮೂಲಕ ಹಸಿರು ಬೆಳವಣಿಗೆ ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಎದುರಾಗುತ್ತದೆ. ಅಲ್ಲೇ ಇರುವುದು ನಿಜವಾದ ಟ್ವಿಸ್ಟ್. ​ ಪರಿಸರದಲ್ಲಿ ಮರ ಬೆಳೆಸಲು ಆ್ಯಪ್ ಮೂಲಕ ಬೇಡಿಕೆ ಸಲ್ಲಿಸಿದ ಬಳಿಕ ಬಿಬಿಎಂಪಿ ನರ್ಸರಿಯಿಂದ ನಾಗರಿಕರು ಸಸಿಗಳನ್ನು ಪಡೆಯಬಹುದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸಲು ಅವಕಾಶವಿದೆ. ಇಂತಹ ಬೇಡಿಕೆ ಬಂದಲ್ಲಿ ಉಚಿತವಾಗಿಯೇ ಸಸಿಯನ್ನು ತಲುಪಿಸಲು ಬಿಬಿಎಂಪಿ ಮುಂದಾಗಿದೆ. ನಾಗರಿಕರೊಬ್ಬರು 50 ಸಸಿಗಳಿಗೆ ಬೇಡಿಕೆ ಸಲ್ಲಿಸಬಹುದು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆ, ಸರ್ಕಾರೇತರ ಸಂಸ್ಥೆಗಳು 200 ಸಸಿಗಳವರೆಗೂ ಬೇಡಿಕೆ ಸಲ್ಲಿಸಬಹುದು. ನಗರದ ವಿವಿಧೆಡೆ ಇರುವ ಬಿಬಿಎಂಪಿ ನರ್ಸರಿಗಳಲ್ಲಿ ಹೊಂಗೆ, ಸಂಪಿಗೆ, ಮಹಾಗನಿ, ಕಾಡು ಬಾದಮಿ, ನೇರಳೆ ಮತ್ತಿತರ ಸಸಿಗಳು ಲಭ್ಯವಿದೆ.

ಇದನ್ನು ಓದಿ: ಕಾಫಿ ಟೇಸ್ಟ್​ಗೆ ಜಿಎಸ್​ಟಿ ಕಿಕ್​- ಪಿಜ್ಹಾಗೆ ಎದುರಾಗಲಿದೆ ತೆರಿಗೆ ಭಾರ 

ಕೆಂಪಾಪುರ (ದಕ್ಷಿಣ ವಿಭಾಗ), ಅತ್ತೂರು (ಯಲಹಂಕ ವಿಭಾಗ), ಸುಮನಹಳ್ಳಿ (ಪಶ್ಚಿಮ ವಿಭಾಗ), ಜ್ಞಾನ ಭಾರತಿ (ರಾಜ ರಾಜೇಶ್ವರಿನಗರ ವಲಯ ) ಕೂಡ್ಲು (ಬೊಮ್ಮನಹಳ್ಳಿ ವಲಯ) ಮತ್ತು ಹೇಸರಘಟ್ಟ ( ದಾಸರಹಳ್ಳಿ ವಲಯ)ದಲ್ಲಿ ಬಿಬಿಎಂಪಿ ನರ್ಸರಿಗಳಿವೆ. ಸಸಿಗಳು ಬೇಕಿದ್ದಲ್ಲಿ ಗೂಗಲ್ ಪ್ಲೇಸ್ಟೋರ್​​ನಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಕೊಂಡು ಹೆಸರು, ಮೊಬೈಲ್ ನಂಬರ್ ಒದಗಿಸಿ ಬೇಡಿಕೆ ಸಲ್ಲಿಸಬಹುದು. ಬೇಡಿಕೆ ಸಲ್ಲಿಸಿದ ಬಳಿಕ ನರ್ಸರಿಯಿಂದ ಅಥವಾ ಸಮೀಪದ ಪಾರ್ಕ್​ನಲ್ಲಿ ಸಸಿ ತೆಗೆದುಕೊಳ್ಳಬಹುದು.   ಬಿಬಿಎಂಪಿಯ ಸ್ಥಳೀಯ ಸಿಬ್ಬಂದಿ ನೆರವು ಪಡೆದು ಸಸಿಗಳನ್ನು ಸ್ವಂತ ಜಾಗದಲ್ಲಿ ಇಲ್ಲವೇ ಸಾರ್ವಜನಿಕ ಜಾಗಗಳಲ್ಲಿ ನೆಡಬಹುದಾಗಿದೆ.

ಗಿಡಗಳ ಸಂರಕ್ಷಣೆಗೆ ‘ಟ್ರೀ ಟ್ರ್ಯಾಕಿಂಗ್ ಕಾರ್ಡ್’

ಬಿಬಿಎಂಪಿ ಗಿಡಗಳನ್ನು ಆ್ಯಪ್​​ಗಳ ಮೂಲಕ ಕೊಡುತ್ತಿರುವಾಗ, ಬೆಂಗಳೂರಿನಲ್ಲಿರುವ ಆದಮ್ಯ ಚೇತನ ಸಂಸ್ಥೆ ‘ಹಸಿರು ಬೆಂಗಳೂರು’ ಕಲ್ಪನೆಯೊಂದಿಗೆ ನಗರದಾದ್ಯಂತ 1 ಕೋಟಿ ಗಿಡ ನೆಡುವ ಅಭಿಯಾನ ಕೈಗೊಂಡಿದ್ದು, ಇದೀಗ ನೆಟ್ಟ ಹಾಗೂ ಮುಂದೆ ನೆಡಲಿರುವ ಸಸಿಗಳ ಸಂರಕ್ಷಣೆ ಹಾಗೂ ಪಾಲನೆ ಉಸ್ತುವಾರಿ ನೋಡಿಕೊಳ್ಳುವ ‘ಟ್ರೀ ಟ್ರ್ಯಾಕಿಂಗ್ ಕಾರ್ಡ್’ ಎಂಬ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಮಾಡಿದೆ.

ವಾಟರ್​ಪ್ರೂಫ್ ಮೆಟೀರಿಯಲ್​ನ ಬಾರ್​ಕೋಡ್ (ಕ್ಯೂ ಆರ್ ಕೋಡ್) ಒಳಗೊಂಡ ಫಲಕವನ್ನು ಪ್ರತಿ ಸಸಿಗಳಿಗೂ ಟ್ಯಾಗ್​​ಮಾಡಲಾಗುವುದು. ಪರಿಸರ ಪ್ರೇಮಿಗಳು ಬಾರ್​ಕೋಡ್ ಅನ್ನು ಮೊಬೈಲ್​ನಲ್ಲಿ ಸ್ಕ್ಯಾನ್ ಮಾಡಿದರೆ ಅದು ಅದಮ್ಯ ಚೇತನದ ಮೊಬೈಲ್ ಆ್ಯಪ್​ಗೆ ರವಾನೆಯಾಗಿ, ಆ ಗಿಡದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.

 " ಹೊಸದಾಗಿ ಗಿಡಗಳಿಗೆ ಅಳವಡಿಸಲಾಗುವ ಕಾರ್ಡ್​ನಲ್ಲಿರುವ ಕೋಡ್ ನಂಬರ್ ಗಿಡಗಳ ಸಂರಕ್ಷಣೆ ಹಾಗೂ ಪಾಲನೆಗೆಸಹಕಾರಿಯಾಗಲಿದೆ."
- ಡಾ. ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನದ ಅಧ್ಯಕ್ಷೆ

ಕಾರ್ಡ್​ ವಿಶೇಷವೇನು?

ಪ್ರತಿ ಭಾನುವಾರ ನಗರದ ನಾನಾ ಭಾಗಗಳಲ್ಲಿ ನೆಡಲಾಗುವ ಗಿಡಗಳಿಗೆ ‘ಟ್ರೀ ಟ್ರಾಕಿಂಗ್ ಕಾರ್ಡ್’ನಲ್ಲಿ ಕೋಡ್ ಅಳವಡಿಸಲಾಗುತ್ತಿದ್ದು, ಸಾರ್ವಜನಿಕರು ಮೊಬೈಲ್​ನಲ್ಲಿ ಈ ಕೋಡ್ ಸ್ಕಾನ್ ಮಾಡಿದರೆ, ಆ ಗಿಡ ನೆಟ್ಟ ದಿನಾಂಕ, ಸ್ಥಳ, ಅದನ್ನು ಉಸ್ತುವಾರಿನೋಡಿಕೊಳ್ಳುತ್ತಿರುವವರ ಮಾಹಿತಿ , ದೂರವಾಣಿ ಸಂಖ್ಯೆ, ಗಿಡದ ಸಂಪೂರ್ಣ ಮಾಹಿತಿ, ಅದರ ವಿಶೇಷಣಗಳು ಇತ್ಯಾದಿ ಮಾಹಿತಿ ಲಭ್ಯವಾಗಲಿದೆ. ಈ ಮೂಲಕ ಮತ್ತೊಬ್ಬರಿಗೂ ಗಿಡಗಳನ್ನು ನೆಡುವ ಮತ್ತು ಅದನ್ನು ಪೋಷಿಸುವ ಮನಸ್ಸು ಬರಬಹುದು ಅನ್ನುವುದು ಸಂಸ್ಥೆಯ ಲೆಕ್ಕಾಚಾರವಾಗಿದೆ.  ಒಟ್ಟಿನಲ್ಲಿ ಹಸಿರು ಬೆಂಗಳೂರಿಗಾಗಿ ಸಾಕಷ್ಟು ಕೈಗಳು ಕೆಲಸ ಮಾಡುತ್ತಿವೆ. ಪರಿಸರವನ್ನು ಕಾಪಾಡಿಕೊಳ್ಳಲು ದೊಡ್ಡ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. 

ಇದನ್ನು ಓದಿ:

1. ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!

2. ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..! 

3. ಕಾರ್ಪೋರೇಟ್​ ಕೆಲಸ ಬಿಟ್ಟ ಮಹಿಳೆ- ಪ್ಲಾಸ್ಟಿಕ್​ ವಿರೋಧಿ ಆಂದೋಲನ ಮಾಡುತ್ತಿರುವ "ಬೆಳ್ಳಿ ಕಿರಣ"

 

 


Related Stories