ಚೆನ್ನೈ ಪ್ರವಾಹ ಪೀಡಿತರಿಗಾಗಿ ಅಮರಿಕದಿಂದ ಹರಿದು ಬಂತು ನೆರವು - ಕಸ್ಟಮ್ಸ್ ಕಿರಿಕಿರಿಯಿಂದ ಸಂತ್ರಸ್ಥರನ್ನು ಇನ್ನೂ ತಲುಪಿಲ್ಲ..!  

ಟೀಮ್​ ವೈ.ಎಸ್​. ಕನ್ನಡ

0

ಬದಲಾವಣೆಗೆ ಏನು ಬೇಕು? ಬದುಕಿನಲ್ಲಿ ಬದಲಾವಣೆ ತರುವಂತಹ ದೃಢ ನಿರ್ಣಯ ಮತ್ತು ಆ ಬಯಕೆ ಉಳ್ಳ ಒಬ್ಬ ವ್ಯಕ್ತಿ ಸಾಕು. ಆದ್ರೆ ನಮ್ಮ ನಿಯಂತ್ರಣವನ್ನು ಮೀರಿದ ಕೆಲ ವಿಷಯಗಳು ಅವರ ಪ್ರಯತ್ನವನ್ನು ಕುಂಠಿತಗೊಳಿಸಬಹುದು. ಅಮೆರಿಕದಲ್ಲಿದ್ದ ರಾಧಿಕಾ ಕೋವ್ತಾ ರಾವ್ ಕೂಡ ಇಂಥದ್ದೇ ಪರಿಸ್ಥಿತಿ ಎದುರಿಸಿದ್ದಾರೆ. ಸಾವಿರಾರು ಮೈಲಿ ದೂರದಲ್ಲಿ ಕುಳಿತು, ಅಂದಾಜು 13,870 ಕಿಲೋ ಮೀಟರ್ ದೂರದಲ್ಲಿದ್ದುಕೊಂಡೇ ರಾಧಿಕಾ ಇತ್ತೀಚೆಗಷ್ಟೆ ನೆರೆಯಿಂದ ತತ್ತರಿಸಿದ್ದ ಚೆನ್ನೈ ನಿವಾಸಿಗಳಿಗೆ ನೆರವಾಗಲು ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ್ರು. ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ ಎಂಬಂತೆ ಪರಿಹಾರ ಸಾಮಾಗ್ರಿಗಳು ಚೆನ್ನೈ ತಲುಪಿದ್ದರೂ ಸಂತ್ರಸ್ಥರಿಗೆ ಸಿಕ್ಕಿಲ್ಲ.

ರಾಧಿಕಾ ಬೆಳೆದಿದ್ದು ಚೆನ್ನೈನಲ್ಲಿ. ಮೂರು ಬಾರಿ ಅವರ ವೀಸಾ ತಿರಸ್ಕೃತಗೊಂಡಿದ್ರಿಂದ ಭಾರತದಲ್ಲೇ ಶಿಕ್ಷಣ ಪೂರೈಸಬೇಕಾಯ್ತು. ಮೂರು ವರ್ಷ ಬ್ರಸೆಲ್ಸ್​ನಲ್ಲಿ ನೆಲೆಸಿದ್ದ ರಾಧಿಕಾ ಬಳಿಕ ಇಬ್ಬರು ಮಕ್ಕಳ ಜೊತೆ 1997ರ ಏಪ್ರಿಲ್‍ನಲ್ಲಿ ಅಮೆರಿಕಕ್ಕೆ ಶಿಫ್ಟ್ ಆದ್ರು. ಚೆನ್ನೈ ಸಂತ್ರಸ್ಥರಿಗೆ ಸಹಾಯ ಮಾಡುವ ಕಾರ್ಯ ರಾಧಿಕಾ ಅವರು ತೆಗೆದುಕೊಂಡ ದೊಡ್ಡ ಸವಾಲುಗಳಲ್ಲೊಂದು. ಸಂಕಷ್ಟದಲ್ಲಿರುವ ಚೆನ್ನೈ ನಿವಾಸಿಗಳಿಗೆ ಸಹಾಯ ಹಸ್ತ ನೀಡಬೇಕೆಂದು ಅವರ ಮನಸ್ಸು ತುಡಿಯುತ್ತಿತ್ತು.

ಇದನ್ನು ಓದಿ: ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಸ್ನೇಹಿತರು, ಅಕ್ಕಪಕ್ಕದವರಿಂದ ರಾಧಿಕಾ ಅಗತ್ಯ ವಸ್ತುಗಳು ಮತ್ತು ಬಟ್ಟೆಗಳನ್ನು ಸಂಗ್ರಹಿಸಿ, ತಾವು ವಾಸವಿದ್ದ ವರ್ಜೀನಿಯಾದ ಚಾನಿಟ್ಲಿಯಿಂದ ಚೆನ್ನೈಗೆ ಕಳುಹಿಸಿಕೊಟ್ರು. ಒಳ್ಳೆ ಗುಣಮಟ್ಟದ ಬಟ್ಟೆಗಳು, ಅದರಲ್ಲೂ ಚೆನ್ನೈ ನಿವಾಸಿಗಳು ಧರಿಸುವಂತಹ ಸೀರೆ, ಮಕ್ಕಳ ಉಡುಪುಗಳು ಹಾಗೂ ಹೊಸ ಒಳಉಡುಪುಗಳನ್ನು ಕೂಡ ಕಳುಹಿಸಿಕೊಟ್ಟಿದ್ರು. ಇವನ್ನೆಲ್ಲ ಸಂಗ್ರಹಿಸಲು ರಾಧಿಕಾಗೆ 8 ದಿನಗಳೇ ಬೇಕಾಯ್ತು.

``ಅಲ್ಲಿ ಅಭಿಮಾನ, ಭರವಸೆ, ಅಗಾಧ ಪ್ರಮಾಣ ಸಹಾಯ ಮತ್ತು ಕಳಕಳಿ ಸಾಗರದಾಚೆಯಿಂದ್ಲೂ ಹರಿದು ಬಂದಿತ್ತು. ನಮ್ಮ ಸಮಯ, ಶ್ರಮ, ಹಣ, ಹಾರೈಕೆ ಎಲ್ಲವನ್ನೂ ಒಟ್ಟುಗೂಡಿಸಿ ಉಡುಪುಗಳ ರೂಪದಲ್ಲಿ ಕಳುಹಿಸಿಕೊಟ್ಟಿದ್ವಿ'' ಎನ್ನುತ್ತಾರೆ ರಾಧಿಕಾ. ಚೆನ್ನೈ ಪ್ರವಾಹದ ಬಗ್ಗೆ ಗೊತ್ತಾಗ್ತಿದ್ದಂತೆ ರಾಧಿಕಾ ಅವರು ವಾಸವಿದ್ದ ಪ್ರದೇಶದಲ್ಲೂ ಎಲ್ಲರೂ ನೆರವಿಗೆ ಧಾವಿಸಿ ಬಂದಿದ್ರು. ಪ್ರವಾಹಪೀಡಿತರಿಗೆ ಕೊಡಬಯಸುವ ವಸ್ತುಗಳನ್ನೆಲ್ಲ ರಾಧಿಕಾ ಅವರ ವಿಳಾಸಕ್ಕೆ ಕಳುಹಿಸಿದ್ರು. ಇವನ್ನೆಲ್ಲ ನೀಟಾಗಿ ಪ್ಯಾಕ್ ಮಾಡಲು ರಾಧಿಕಾ ಮತ್ತು ಕೆಲ ಸ್ವಯಂ ಸ್ವೇವಕರಿಗೆ 2 ದಿನಗಳೇ ಬೇಕಾಯ್ತು. 10 ದಿನಗಳ ಸತತ ಪ್ರಯತ್ನದ ಮೂಲಕ ರಾಧಿಕಾ 700 ಬಾಕ್ಸ್‍ಗಳನ್ನು ಸಂಗ್ರಹಿಸಲು ಸಫಲರಾದ್ರು. ಕೆಲವು ಬಾಕ್ಸ್‍ಗಳಲ್ಲಿ ದಿನಸಿಗಳನ್ನು ಕೂಡ ಸಂಗ್ರಹಿಸಲಾಯ್ತು. ಇದರ ಜೊತೆಜೊತೆಗೆ ರಾಧಿಕಾ ನೆರೆಪೀಡಿತರಿಗಾಗಿ 6000 ಡಾಲರ್ ಹಣವನ್ನು ಕೂಡ ಒಟ್ಟುಗೂಡಿಸಿದ್ರು.

ಇದನ್ನೆಲ್ಲ ರಾಧಿಕಾAID ಇಂಡಿಯಾ ಹಾಗೂ SODEWS ಮೂಲಕ ರವಾನಿಸಿದ್ರು. ಅಲ್ಲಿಂದ ಭಾರತಕ್ಕೆ ಇದನ್ನು ಕಳುಹಿಸಿಕೊಡಲಾಯ್ತು. ಜನವರಿ 27ರಂದು ನೆರವಿನ ಮಹಾಪೂರವನ್ನೇ ಹೊತ್ತ ಕಂಟೇನರ್ ಭಾರತ ತಲುಪಿದೆ. ಸಂತ್ರಸ್ಥರಿಗಾಗಿ ಸಂಗ್ರಹಿಸಿದ 6000 ಡಾಲರ್ ಹಣದ ಜೊತೆಗೆ ರಾಧಿಕಾ ಕೂಡ ಭಾರತಕ್ಕೆ ಬಂದ್ರು. ಆದ್ರೆ ಅವರ ಎಲ್ಲ ಪರಿಶ್ರಮ ಹಾಗೂ ಪ್ರವಾಹ ಸಂತ್ರಸ್ಥರಿಗಾಗಿ ಕಳುಹಿಸಿದ್ದ ಉಡುಪು ಮತ್ತು ಆಹಾರ ಅವರಿಗೆ ತಲುಪಿರಲೇ ಇಲ್ಲ. ಅದನ್ನೆಲ್ಲ ಜನರಿಗೆ ತಲುಪಿಸುವುದಾಗಿ ಚೆನ್ನೈ ಡಿಸಿ ಭರವಸೆಯನ್ನೇನೋ ನೀಡಿದ್ದರು, ಆದ್ರೆ ಕಂಟೇನರ್ ಇನ್ನೂ ಕಸ್ಟಮ್ಸ್ ಇಲಾಖೆಯಲ್ಲೇ ಕೊಳೆಯುತ್ತಿದೆ.

``ಅನಗತ್ಯವಾಗಿ ಈ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿರುವುದು ನಿಜಕ್ಕೂ ನೋವು ತಂದಿದೆ. ಕಂಟೇನರ್ ಇನ್ನೂ ಕೂಡ ಬಂದರಿನಲ್ಲೇ ಇದೆ'' ಎನ್ನುತ್ತಾರೆ ರಾಧಿಕಾ. ಸದ್ಯ ಕಂಟೇನರ್ ತಮಿಳುನಾಡಿನ ಪೊನ್ನೇರಿಯಲ್ಲಿದೆ. ಸಿಬ್ಬಂದಿ ಆದಷ್ಟು ಬೇಗ ಅದನ್ನು ಬಿಡುಗಡೆ ಮಾಡುವ ಕಸರತ್ತು ನಡೆಸಿದ್ದಾರೆ. ರಾಧಿಕಾ ಅಮೆರಿಕಕ್ಕೆ ಮರಳಿದ್ರೂ ಇಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಈ ವಿವಾದ ಬಗೆಹರಿಸಿ ಜನರಿಗೆ ವಸ್ತುಗಳನ್ನು ತಲುಪಿಸಲು ಪ್ರಯತ್ನಿಸುತ್ತಿದ್ದಾರೆ.

ಚೆನ್ನೈನಲ್ಲಿ ಅದೆಷ್ಟೋ ಕುಟುಂಬಗಳು ಪುನರ್ವಸತಿಯ ನಿರೀಕ್ಷೆಯಲ್ಲಿವೆ. ಬಂದರಿನಲ್ಲೇ ಸಿಕ್ಕಿಹಾಕಿಕೊಂಡಿರುವ ಆ ಉತ್ತಮ ಪರಿಹಾರ ವಸ್ತುಗಳು ದೊರೆತರೆ ನಿಜಕ್ಕೂ ಅವರಿಗೆ ನೆರವಾಗಲಿದೆ. ನೆರವಿನ ಹಸ್ತ ಚಾಚಿರುವ ರಾಧಿಕಾ ಮತ್ತವರ ಸ್ನೇಹಿತರು ಕೂಡ ಆದಷ್ಟು ಬೇಗ ವಸ್ತುಗಳು ಸಂತ್ರಸ್ಥರಿಗೆ ತಲುಪಲಿವೆ ಎಂಬ ನಂಬಿಕೆಯಲ್ಲಿದ್ದಾರೆ.

ಲೇಖಕರು: ತನ್ವಿ ದುಬೆ

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ:

1. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸುಲಭ ದಾರಿ: ಇದು ಆರ್​ಟಿಓ ಆನ್​​ಲೈನ್​ನಲ್ಲಿ ಕೊಟ್ಟ ರಹದಾರಿ

2. ಕೆಲಸಕ್ಕೆ ಗುಡ್‍ಬೈ, ಸ್ಟಾರ್ಟ್‍ಅಪ್‍ಗೆ ಜೈ - ಕಲೆಯನ್ನೇ ನಂಬಿ ಉದ್ಯಮ ಆರಂಭಿಸಿದ ಸಾಹಸಿ

3. ಹೊಸ ಉದ್ಯಮಕ್ಕೆ ನಾಂದಿ ಹಾಡಿತು ಆಫೀಸ್ ಗೆಳೆತನ....

Related Stories

Stories by YourStory Kannada