ಹೊಟೇಲ್ ಉದ್ಯಮದ ಹೊಸ ಯಶಸ್ಸು ಈ ಬ್ರೌನಿ ಹೆವನ್

ಉಷಾ ಹರೀಶ್​

ಹೊಟೇಲ್ ಉದ್ಯಮದ ಹೊಸ ಯಶಸ್ಸು ಈ ಬ್ರೌನಿ ಹೆವನ್

Tuesday April 19, 2016,

2 min Read

ಮನುಷ್ಯನಿಗೆ ಆಹಾರದಷ್ಟು ಮುಖ್ಯ ಈ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ ಎನಿಸುತ್ತದೆ. ಮೇಲಾಗಿ ಮನುಷ್ಯ ದುಡಿಯುವ ಬಹುಮುಖ್ಯ ಕಾರಣವೇ ಹಸಿವು. ಇದರಿಂದಾಗಿ ಇವತ್ತು ಆಹಾರ ಉದ್ಯಮವಾಗಿ ಪರಿವರ್ತನೆಯಾಗಿ ಇಂದು ಬಹಳ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ಭಾರತದಲ್ಲಿ ಇದರ ಸ್ಪೀಡ್ ಸ್ವಲ್ಪ ಹೆಚ್ಚೇ ಇದೆ. ಇಂತಹ ಒಂದು ಆಹಾರೋದ್ಯಮ ಬ್ರೈನಿ ಹೆವನ್ ಎಂಬ ಸ್ಟಾರ್ಟ್ ಅಪ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

image


ಗ್ರಾಹಕರು ಯಾವ ಫುಡ್ ಆರ್ಡರ್ ಮಾಡುತ್ತಾರೋ ಅದನ್ನು ಸಕಾಲದಲ್ಲಿ ಪೂರೈಕೆ ಮಾಡುವುದೇ ಈ ಬ್ರೌನಿ ಹೆವನ್ ಕೆಲಸ . ಈ ಬ್ರೌನಿ ಹೆವನ್ ಆರಂಭವಾಗಿ ಎರಡು ವರ್ಷಗಳಲ್ಲೇ ಸಾಕಷ್ಟು ಹೆಸರು ಮಾಡಿದೆ. ಈ ಯಶಸ್ಸು ಇದರ ಸಂಸ್ಥಪಾಕ ನಿಶಾಂತ್ ವಿಜಯ್​ಕುಮಾರ್ ಅವರಿಗೆ ಸಲ್ಲಬೇಕು. ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂದು ಯೋಚಿಸುತ್ತಿದ್ದ ನಿಶಾಂತ್ ಅವರಿಗೆ ತಲೆಗೆ ಹೊಳೆದದ್ದು ಆಹಾರೋದ್ಯಮದಲ್ಲಿ ಒಂದು ಕೋರ್ಸ್ ಮಾಡಬೇಕು ಎಂದು. ಕಾರಣ ಭಾರತದಲ್ಲಿ ಆಹಾರೋದ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿತ್ತು. ಇದಕ್ಕೆ ತಕ್ಕಂತೆ ಸಾಕಷ್ಟು ಕಾಲೇಜುಗಳು ಈ ಉದ್ಯಮಕ್ಕೆ ಬೇಕಾಗುವ ಮಾನವ ಸಂಪನ್ಮೂಲವನ್ನು ಪೂರೈಸುವ ಸಲುವಾಗಿ ಹೋಟೆಲ್ ಮ್ಯಾನೇಜ್​ಮೆಂಟ್ ಕೋರ್ಸನ್ನು ಆರಂಭಿಸಿ ಅವುಗಳಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದವು. ಹಾಗಾಗಿ ನಿಶಾಂತ್ ಮಣಿಪಾಲದಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್​ಮೆಂಟ್ ವಿಷಯದಲ್ಲಿ ಪದವಿ ಪಡೆದರು.

ತರಬೇತಿ ಹಂತದಲ್ಲಿ ಚಿನ್ನದ ಪದಕ

ಪದವಿ ಮುಗಿಸಿದ ನಂತರ ತರಬೇತಿಗಾಗಿ ನಿಶಾಂತ್ ಪ್ರತಿಷ್ಠಿತ ಐಟಿಸಿ ಹೋಟೆಲ್​ ಸೇರಿಕೊಂಡರು. ಅಲ್ಲಿ ಸುಮಾರು ಒಂದು ವರ್ಷ ತರಬೇತಿ ಪಡೆದರು. ಈ ತರಬೇತಿ ಅವಧಿಯಲ್ಲಿ ನಿಶಾಂತ್ ಅವರು ಅತ್ಯುತ್ತಮ ಪ್ರದರ್ಶನ ತೋರಿ ಹೊಟೇಲ್​ನಿಂದ ಚಿನ್ನದ ಪದಕವನ್ನು ಪಡೆದರು. ಚಿನ್ನದ ಪದಕ ಪಡೆದ ಹೊಟೇಲ್ ಮ್ಯಾನೇಜ್​​ಮೆಂಟ್ ವಿದ್ಯಾರ್ಥಿಗೆ ಖಾಸಗಿ ಹೊಟೇಲ್​ನಲ್ಲಿ ಕೆಲಸಗಳು ಕೈಬೀಸಿ ಕರೆಯತೊಡಗಿದವು.

image


ಆದರೆ ಎಷ್ಟು ದಿನ ಬೇರೊಬ್ಬರ ಕೈ ಅಡಿ ಕೆಲಸ ಮಾಡುವುದು ಎಂದು ತಾನೇ ಒಂದು ಹೊಸ ಉದ್ಯಮ ಪ್ರಾರಂಭಿಸಿದರೆ ಹೇಗೆ ಎಂದು ಯೋಚಿಸಿದರು. ಹೇಗೂ ಎರಡು ವರ್ಷಗಳ ಕಾಲ ಖಾಸಗಿ ಹೊಟೇಲ್​ಗಳಲ್ಲಿ ದುಡಿದ ಹಣದಲ್ಲಿ ಸ್ವಲ್ಪ ಉಳಿತಾಯ ಮಾಡಿದ್ದರು. ಅದನ್ನು ಹೊಸದಾಗಿ ಆರಂಭಿಸುವ ಉದ್ಯಮದಲ್ಲಿ ತೊಡಗಿಸಲು ಮುಂದಾದದರು. ಆಗ ಆರಂಭವಾಗಿದ್ದೇ ಈ ‘ಬ್ರೌನಿ ಹೆವನ್’ ಗ್ರಾಹಕರು ಆರ್ಡರ್​ ಮಾಡಿದ ತಿಂಡಿ, ತಿನಿಸುಗಳನ್ನು ಸಕಾಲದಲ್ಲಿ ಪೂರೈಕೆ ಮಾಡುವುದೇ ಈ ಕಂಪೆನಿಯ ಮುಖ್ಯ ಕೆಲಸ.

ಮೂರು ಔಟ್​ಲೆಟ್​ಗಳು

 ನಿಶಾಂತ್ ಆರಂಭಿಸಿದ ಈ ಬ್ರೌನಿ ಹೆವನ್ ಈಗಾಗಲೇ ಮೂರು ಔಟ್​ಲೆಟ್​​ಗಳನ್ನು ಹೊಂದಿದೆ.ಕಂಪೆನಿ ಆರಂಭಿಸಿದ ೧೧ ತಿಂಗಳಲ್ಲಿ ಮೂರು ಔಟ್​ಲೆಟ್​ಗಳನ್ನು ಹೊಂದಿರುವುದು ವಿಶೇಷ. ಉತ್ತಮ ರುಚಿ ಹಾಗೂ ಶುಚಿಯಾದ ಆಹಾರ ನೀಡುವುದರಿಂದಲೇ ನಿಶಾಂತ್ ಅವರಿಗೆ ಈ ಯಶಸ್ಸು ದೊರೆತಿರುವುದು.

ದೆಹಲಿಯಲ್ಲೂ ಬ್ರಾಂಚ್ ಓಪನ್..!

ಸದ್ಯದಲ್ಲೇ ದೇಶದ ರಾಜಧಾನಿ ದೆಹಲಿ ಮತ್ತು ಚಂಡೀಗಢದಲ್ಲೂ ತಮ್ಮ ಬ್ರೌನಿ ಹೆವನ್ ಔಟ್​ಲೆಟ್​ಗಳನ್ನು ತೆರೆಯುವ ಸಿದ್ಧತೆ ಮಾಡಿಕೊಂಡಿದ್ದಾರೆ ನಿಶಾಂತ್. ಕೇವಲ ಹನ್ನೊಂದು ತಿಂಗಳಲ್ಲಿ ಒಂದು ಉದ್ಯಮವನ್ನು ಲಾಭದತ್ತ ಕೊಂಡೊಯ್ಯುವುದು ಕಷ್ಟದ ಕೆಲಸ ಆದರೆ ನಿಶಾಂತ್ ವಿಜಯ್​ಕುಮಾರ್ ಅವರಿಗಿರುವ ಕೆಲಸದ ಮೇಲಿನ ಶ್ರದ್ಧೆ ಮತ್ತು ಅವರ ಶ್ರಮ ಸಾಧಿಸುತ್ತೇನೆ ಎಂಬ ಛಲ ಮತ್ತು ಅವರ ಶುಚಿ ರುಚಿಯ ಪ್ರಾಡಕ್ಟ್​ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಈ ಎಲ್ಲಾಕಾರಣಕ್ಕಾಗಿ ನಿಶಾಂತ್ ವಿಜಯ್​ಕುಮಾರ್ ಅವರ ಬ್ರೌನಿ ಹೆವನ್ ಯಶಸ್ವಿ ಉದ್ಯಮವಾಗಿದೆ.