ಮುದ್ರಣ ಜಾಹೀರಾತು: ಆಳವಾದ ಸಂದೇಶ ತಲುಪಿಸಲು ವಿನೂತನ ಮಾರ್ಗ

ಟೀಮ್​ ವೈ.ಎಸ್​​.ಕನ್ನಡ

0

ಒಮ್ಮೆಯಾದ್ರೂ ನೀವು ನಿಮ್ಮ ದಿನಪತ್ರಿಕೆಯಲ್ಲಿ ಎಷ್ಟು ಜಾಹೀರಾತುಗಳಿವೆ ಅನ್ನೋದನ್ನು ಲೆಕ್ಕ ಮಾಡಿದ್ದೀರಾ? ಇತ್ತೀಚೆಗಷ್ಟೇ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದು ಮುಖಪುಟದಲ್ಲಿ ಸಂಪೂರ್ಣ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಓದುಗರಿಗೆ ಶುಭಾಶಯಗಳನ್ನು ತಿಳಿಸಿತ್ತು. ಆ ದಿನ, ನ್ಯೂಸ್‍ಪೇಪರ್‍ನಲ್ಲಿ 42 ಜಾಹೀರಾತುಗಳಿದ್ವು. ಆ ದಿನಪತ್ರಿಕೆಯ 35ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ವೀಕೆಂಡ್‍ನಲ್ಲಿ ನೂರಕ್ಕೂ ಅಧಿಕ ದೊಡ್ಡ ದೊಡ್ಡ ಜಾಹೀರಾತುಗಳಿರುತ್ತವೆ. 2014ರಲ್ಲಿ ಮುದ್ರಣ ಮಾಧ್ಯಮಗಳು ಒಟ್ಟಾರೆ ಜಾಹೀರಾತುಗಳಲ್ಲಿ ಶೇ.41ರಷ್ಟನ್ನು ತಮ್ಮದಾಗಿಸಿಕೊಂಡಿವೆ. ಮುದ್ರಣ ಮಾಧ್ಯಮ ಮಾರ್ಕೆಟಿಂಗ್ ತಂತ್ರಗಾರಿಕೆಯ ಹೃದಯವಿದ್ದಂತೆ. ಗ್ರಾಹಕರ ಮೇಲೆ ಪರಿಣಾಮ ಬೀರುವಂತಹ ಜಾಹೀರಾತುಗಳನ್ನು ಸೃಷ್ಟಿಸುವುದು ಬ್ರ್ಯಾಂಡ್ ಮಾರ್ಕೆಟರ್‍ಗಳ ಮುಂದಿರುವ ಬಹುದೊಡ್ಡ ಸವಾಲು. ಇತ್ತೀಚಿನ ವರ್ಷಗಳಲ್ಲಿ ಉತ್ತಮ ಅನುಭವಗಳನ್ನು ನೀಡಬಲ್ಲ ಅದ್ಭುತ ಸೃಜನಶೀಲತೆಯನ್ನು ಮುದ್ರಣ ಮಾಧ್ಯಮಗಳು ಅಳವಡಿಸಿಕೊಂಡಿವೆ. ಆಕಾರ, ಗಾತ್ರ, ಸ್ಥಳಾವಕಾಶ ಹಾಗೂ ತಂತ್ರಜ್ಞಾನದ ಮೂಲಕ ಗ್ರಾಹಕರನ್ನು ಸೆಳೆದ ಕೆಲ ಮುದ್ರಿತ ಜಾಹೀರಾತುಗಳು ಇಲ್ಲಿವೆ.

ಜಾಹೀರಾತಿನ ಮೂಲಕ ಉತ್ಪನ್ನಗಳ ವೈಶಿಷ್ಟ್ಯತೆಯ ವಿವರ

ಪರಿಣಾಮಕಾರಿ ಜಾಹೀರಾತು ಪ್ರಕಟಣೆ ಹಾಗೂ ಆಕಾರದ ಸೃಜನಶೀಲತೆ ಜೊತೆಗೆ ಆಟವಾಡುವುದು ಹೇಗೆ ಎಂಬುದಕ್ಕೆ ಈ `ಫೋರ್ಡ್' ಜಾಹೀರಾತು ಉತ್ತಮ ಉದಾಹರಣೆ. ಜಾಹೀರಾತಿನ ಆಕಾರ ಚೂಪಾದ ಕುರುಡು ತಿರುವುಗಳ ಬಗ್ಗೆ ಹಾಗೂ ಮೂಲೆಮೂಲೆಗಳಲ್ಲೂ ಕಾರ್‍ನ ಎಲ್‍ಇಡಿ ಹೆಡ್‍ಲೈಟ್ ಹೇಗೆ ಬೆಳಕು ಬೀರುತ್ತದೆ ಎಂಬುದರ ಬಗ್ಗೆ ಓದುಗರಿಗೆ ಅರಿವು ಮೂಡಿಸುತ್ತದೆ. ಮುಂದೆ ಚಲಿಸುವ ಮುನ್ನ, ತಿರುವುಗಳ ಸುತ್ತ ಒಮ್ಮೆ ನೋಡಿ ಅನ್ನೋದು ಈ ಜಾಹೀರಾತಿನ ಟ್ಯಾಗ್‍ಲೈನ್.

ಇನ್‍ಸ್ಟಂಟೀಸ್‍ನ ಇನ್‍ಸ್ಟಂಟ್ ಹೇಗಿದೆ..?

`ಇನ್‍ಸ್ಟಂಟ್ ಕಾಫಿ' ಜಾಹೀರಾತಿನ ಮೂಲಕ ನೆಸ್‍ಕೆಫೆ ಮುದ್ರಣ ಮಾಧ್ಯಮದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಬ್ರ್ಯಾಂಡೆಡ್ ದಿನಪತ್ರಿಕೆ, ಅದರಲ್ಲಿ ಎರಡು ಫೋಲ್ಡ್ ಮಾಡಬಹುದಾದ ಪೇಪರ್ ಮಗ್‍ಗಳು, ಕಪ್‍ಗಳಲ್ಲಿ ಕಾಫಿ ಪೌಡರ್ ಇದು ನೆಸ್‍ಕೆಫೆಯ ಅದ್ಭುತ ಜಾಹೀರಾತು. ಓದುಗರು ಆ ಪೌಡರ್‍ಗೆ ಬಿಸಿನೀರು ಸೇರಿಸಿದ್ರೆ ಮುಗೀತು, ನೆಚ್ಚಿನ ನೆಸ್‍ಕೆಫೆ ಕಾಫಿ ಹಾಗೂ ಮನಮೆಚ್ಚಿದವರ ಜೊತೆ ಸುಂದರ ಮುಂಜಾನೆಯನ್ನು ಆಸ್ವಾದಿಸಬಹುದು.

ಹೈಟೆಕ್ ಉತ್ಪನ್ನ ಹೈಟೆಕ್ ಜಾಹೀರಾತು

ಮ್ಯಾಗಝೀನ್ ಜಾಹೀರಾತಿನಲ್ಲಿರುವ ರೋಮಾಂಚನಕಾರಿ ಬಣ್ಣಗಳ ವ್ಯಾಪ್ತಿಗೆ ಈ `ಮೋಟೋ - ಎಕ್ಸ್' ಜಾಹೀರಾತೇ ಸಾಕ್ಷಿ. ಜಾಹೀರಾತಿನ ಕೆಳಗಿರುವ ಬಣ್ಣದ ಗುಂಡಿಗಳನ್ನು ಓದುಗರು ಒತ್ತಿದಂತೆಲ್ಲ ಮ್ಯಾಗಝೀನ್‍ನಲ್ಲಿರುವ ಜಾಹೀರಾತಿನ ಮೊಬೈಲ್ ಬಣ್ಣ ಬದಲಾಗುತ್ತದೆ. ಎಲ್‍ಇಡಿ ಲೈಟ್ ಬಲ್ಬ್‍ಗಳು ಹಾಗೂ ಪಾಲಿಕಾರ್ಬೋನೇಟ್ ಪೇಪರ್‍ಗಳನ್ನು ಬಳಸಿ ಈ ಜಾಹೀರಾತನ್ನು ಸೃಷ್ಟಿಸಲಾಗಿದೆ.

ಬದಲಾವಣೆಯೇ ಬದುಕಿನ ರೀತಿ

ಮ್ಯೂಸಿಕಲ್ ಗ್ರೀಟಿಂಗ್ ಕಾರ್ಡ್‍ಗಳಿಂದ ಪ್ರೇರಿತರಾಗಿ `ವೋಕ್ಸ್ ವ್ಯಾಗನ್' ಮಾತನಾಡಬಲ್ಲ ಮುದ್ರಿತ ಜಾಹೀರಾತನ್ನು ತಯಾರಿಸಿತ್ತು. ಬದಲಾವಣೆ ಜಗದ ನಿಯಮ ಮತ್ತು ನಮ್ಮ ಸಂವಹನವನ್ನೂ ಅದು ಪ್ರತಿಬಿಂಬಿಸುತ್ತದೆ ಎಂಬ ಸಂದೇಶವುಳ್ಳ ಜಾಹೀರಾತು ಇದು. ಓದುಗರು ದಿನಪತ್ರಿಕೆಯ ಕೊನೆಯ ಪುಟವನ್ನು ತೆರೆಯುತ್ತಿದ್ದಂತೆ, ಪುಟಕ್ಕೆ ಜೋಡಿಸಲಾದ ಬೆಳಕಿನ ಸೂಕ್ಷ್ಮ ಚಿಪ್, ಸಂಪೂರ್ಣ ವಿನ್ಯಾಸದ ಕಾರು ಎನ್ನುವ ಮೂಲಕ `ವೆಂಟೋ'ದ ಆಗಮನವನ್ನು ಪ್ರಕಟಿಸುತ್ತದೆ. ಈ ಜಾಹೀರಾತಿನಿಂದಾಗಿ `ವೋಕ್ಸ್‍ವ್ಯಾಗನ್ ವೆಂಟೋ' ಕಾರಿನ ವಾರ್ಷಿಕ ಮಾರಾಟ ಒಂದೇ ದಿನದಲ್ಲಿ ಶೇ.12ರಷ್ಟು ಹೆಚ್ಚಾಗಿತ್ತು.

ಸುವಾಸನೆಯನ್ನು ಹಿಡಿದಿಡುವ ಕಾಫಿ

ತಮ್ಮ ಅತ್ಯುತ್ತಮ ಕಾಫಿಯ ಪರಿಮಳ ಹಾಗೂ ಶ್ರೀಮಂತಿಕೆಯ ಜೊತೆ ಗ್ರಾಹಕರು ತೊಡಗಿಕೊಳ್ಳುವಂತೆ ಮಾಡಲು `ಬ್ರೂ ಗೋಲ್ಡ್', ದಿನಪತ್ರಿಕೆಗೆ ಸುಗಂಧ ದ್ರವ್ಯವನ್ನು ಸಿಂಪಡಿಸಿತ್ತು. ಅದು `ಬ್ರೂ ಗೋಲ್ಡ್'ನ ನಿಜವಾದ ಸುವಾಸನೆ. ಓದುಗರು ಪೇಪರ್ ಓದುತ್ತ ಕಾಫಿ ಪರಿಮಳವನ್ನೂ ಆಸ್ವಾದಿಸಬಹುದು.

ಮಿಸ್ಸಾಗದಂತಹ ಒಂದು ಕರೆಯಿಂದ ಕಾರ್ಯದವರೆಗೆ

`ಟಾಟಾ ಮೋಟಾರ್ಸ್' ಅವರ `ಝೆಸ್ಟ್'ಗಾಗಿ ವಿನೂತನ ಜಾಹೀರಾತನ್ನು ಪ್ರಕಟಿಸಿತ್ತು. ಬಾರ್ ಕೋಡ್‍ಗಳುಳ್ಳ ಕಾರ್ ಕೀಲಿಯ ಪಾರದರ್ಶಕ ಪ್ಯಾಕೆಟ್, 4 ಪುಟಗಳ ಜಾಹೀರಾತು ಪುರವಣಿ ಜೊತೆಗೆ ಬಂದಿತ್ತು. ಓದುಗರು ಹತ್ತಿರದ ಡೀಲರ್‍ಗಳ ಬಳಿ ತೆರಳಬೇಕು, ಅಲ್ಲಿ ಬಾರ್ ಕೋಡ್‍ಗಳು ಹೊಂದಾಣಿಕೆಯಾದ್ರೆ `ಟಾಟಾ ಝೆಸ್ಟ್' ಕಾರನ್ನು ಗೆಲ್ಲುವ ಅವಕಾಶ ಅವರಿಗಿತ್ತು. ನ್ಯೂಸ್ ಪೇಪರ್ ಜೊತೆಗೆ ಬಂದ ಆ ಕೀಲಿ, ಕಾರ್ ಮಾಲೀಕತ್ವದಿಂದ ಸಿಗುವ ಸಮಾಧಾನವನ್ನು ಹೇಳುತ್ತೆ.

ನೋಡಿದವರು ಮರುಳಾಗ್ತಾರೆ...

ಆಳವಾದ ವಿನ್ಯಾಸಗಳುಳ್ಳ 3ಡಿ ರೇಂಜ್‍ನ ಟೈಲ್ಸ್‍ನ್ನು `ಕಜಾರಿಯಾ ಸೆರಾಮಿಕ್ಸ್' ಬಿಡುಗಡೆ ಮಾಡಿತ್ತು. ವಿನೂತನ ಟೈಲ್ಸ್‍ಗಳ ಬಗ್ಗೆ ದಿನಪತ್ರಿಕೆ ಓದುಗರು ಕೂಡ ತಿಳಿದುಕೊಳ್ಳಬೇಕೆಂಬುದು ಅವರ ಬಯಕೆ. ಇದಕ್ಕಾಗಿ 3ಡಿ ಚಿತ್ರವನ್ನುಳ್ಳ ಜಾಹೀರಾತನ್ನು ಪ್ರಕಟಿಸಿದ್ರು. ನ್ಯೂಸ್ ಪೇಪರ್ ಜಾಹೀರಾತಿನ ಮೇಲೆ 3ಡಿ ಗ್ಲಾಸ್‍ಗಳನ್ನು ಅಳವಡಿಸಲಾಗಿತ್ತು. ಆ 3ಡಿ ಗ್ಲಾಸ್ ಮೂಲಕ ನೋಡಿದರೆ ಓದುಗರಿಗೆ 3ಡಿ ನೋಟದ ನೈಜ ಅನುಭವವಾಗುತ್ತದೆ.

ಪದರು ಪದರಾದ ಮುದ್ರಣ ಜಾಹೀರಾತಿನೊಂದಿಗೆ ಪದರುಪದರಾದ ಸ್ಮಾರ್ಟ್‍ಫೋನ್

ವಿಶ್ವದ ಮೊದಲ ಪದರು ಪದರಾದ ಸ್ಮಾರ್ಟ್‍ಫೋನ್, `ಲೆನೋವೋ ವೈಬ್ ಎಕ್ಸ್ 2' ಬಿಡುಗಡೆಯಾದ ಸಮಯ ಅದು. ಈ ವಿನೂತನ ವಿನ್ಯಾಸವನ್ನು ಮುದ್ರಣ ಜಾಹೀರಾತಿನ ಮೂಲಕವೇ ಜನರಿಗೆ ತಿಳಿಸಲು ಲೆನೋವೋ ಮುಂದಾಗಿತ್ತು. ಇದಕ್ಕಾಗಿ `ವೋಕೋನೌ' ಜೊತೆ ಪಾಲುದಾರಿಕೆ ಮಾಡಿಕೊಂಡ ಲೆನೋವೋ, ದಿನಪತ್ರಿಕೆಯಲ್ಲಿ ಡಿಜಿಟಲ್ ಲೇಯರ್ ಉಳ್ಳ ಜಹೀರಾತನ್ನು ಪ್ರಕಟಿಸಿತ್ತು. ವೋಕೋನೌ ಆ್ಯಪ್ ಮೂಲಕ ಸ್ಮಾರ್ಟ್‍ಫೋನ್‍ನ ವಿವಿಧ ಆಯಾಮ, ಬಣ್ಣಗಳು ಎಲ್ಲವನ್ನೂ ಓದುಗರು ನೋಡಬಹುದು ಜೊತೆಗೆ ಜಾಹೀರಾತನ್ನು ನೋಡುತ್ತಲೇ ಸ್ಮಾರ್ಟ್‍ಫೋನನ್ನು ಕೊಂಡುಕೊಳ್ಳಬಹುದು.

ಇವನ್ನೆಲ್ಲ ನೋಡ್ತಿದ್ರೆ ಪ್ರತಿಯೊಂದು ಜಹೀರಾತುಗಳು ಕೂಡ ಹೀಗೆ ವಿನೂತನವಾಗಿರಬೇಕು ಎನಿಸುವುದು ಸಹಜ. `ಐಪಿಜಿ ಮೀಡಿಯಾ ಬ್ರ್ಯಾಂಡ್ಸ್‍ಸಮ್ಸ್'ನ ಶಶಿ ಸಿನ್ಹಾ ಅವರ ಪ್ರಕಾರ, ಸಾಮಾನ್ಯ ಮುದ್ರಣ ಜಾಹೀರಾತುಗಳಿಗೂ ಅದರದ್ದೇ ಆದ ಜಾಗ ಇದ್ದೇ ಇದೆ, ಇನ್ನೂ ಆಳವಾದ ಸಂದೇಶ ತಲುಪಿಸಬೇಕಾದ ಅಗತ್ಯವಿದ್ದಲ್ಲಿ ನಾವೀನ್ಯತೆಯ ಅಗತ್ಯವಿರುತ್ತದೆ.

ಅನುವಾದಕರು: ಭಾರತಿ ಭಟ್​​

Related Stories

Stories by YourStory Kannada