ಸೌಂದರ್ಯ ವೃದ್ಧಿಗೆ ನೆರವಾಗುವ ಡಾ.ತ್ರಾಸಿ ಕ್ಲಿನಿಕ್

ಟೀಮ್​ ವೈ.ಎಸ್​.ಕನ್ನಡ

ಸೌಂದರ್ಯ ವೃದ್ಧಿಗೆ ನೆರವಾಗುವ ಡಾ.ತ್ರಾಸಿ ಕ್ಲಿನಿಕ್

Tuesday November 24, 2015,

4 min Read

ಸುಂದರವಾಗಿ ಕಾಣಬೇಕು ಅಂತ ಆಸೆ ಪಡದವರು ಯಾರಿದ್ದಾರೆ ಹೇಳಿ? ಸೌಂದರ್ಯ ಪ್ರಜ್ಞೆ ಅನ್ನೋದು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತೆ. ಸೌಂದರ್ಯ ವರ್ಧನೆಗೆಂದೇ ಮಾರುಕಟ್ಟೆಯಲ್ಲಿ ಹಲವು ಕಾಸ್ಮೆಟಿಕ್ಸ್, ಮೇಕಪ್ ಕಿಟ್​ಗ​ಳು ಲಭ್ಯವಿವೆ. ಇದರ ಹೊರತಾಗಿಯೂ ಅಂದವಾಗಿ ಕಾಣಬೇಕೆಂದು ಬಯಸುವವರಿಗೆ ಇಂದಿನ ಆಧುನಿಕ ಯುಗದಲ್ಲಿ ಹಲವು ಆಯ್ಕೆಗಳಿವೆ. ಆರ್ಯುವೇದಿಕ್, ಹೋಮಿಯೋಪತಿ ಔಷಧದ ಜೊತೆಗೆ ಸರ್ಜರಿ ಮಾಡಿಕೊಳ್ಳುವ ಅವಕಾಶಗಳಿವೆ.

image


ಕನಸುಗಳ ನಗರಿ ಎಂದೇ ಕರೆಸಿಕೊಳ್ಳುವ ಮುಂಬೈನಲ್ಲಿ ಸೌಂದರ್ಯ ವರ್ಧನೆಗೆ ಹಲವು ಅವಕಾಶಗಳಿವೆ. ಅದರಲ್ಲೂ ಸರ್ಜರಿಯ ವಿಷಯಕ್ಕೆ ಬಂದರೆ ಪ್ರತಿ ವಿಭಾಗದಲ್ಲೂ ಸರ್ಜರಿಯಲ್ಲಿ ನುರಿತರಾದ ತಜ್ಞರು ಇಲ್ಲಿ ಸಿಗುತ್ತಾರೆ. ಸೌಂದರ್ಯವನ್ನು ಉಳಿಸಿಕೊಳ್ಳಲು ಅಥವಾ ವೃದ್ಧಿಸಿಕೊಳ್ಳಲು ವಿಪುಲ ಅವಕಾಶಗಳು ಇಲ್ಲಿ ಲಭ್ಯವಾಗುತ್ತವೆ. ಗಣ್ಯರು, ಸೆಲೆಬ್ರಿಟಿಗಳು ಕೂಡಾ ಇಲ್ಲಿ ತಜ್ಞರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಾರೆ.

ಚರ್ಮರೋಗ, ಗುಪ್ತರೋಗ ಹಾಗೂ ಲೈಂಗಿಕ ರೋಗದ ಸಮಸ್ಯೆಯಿರುವವರು ಹಲವರಿರ್ತಾರೆ. ಡಾ.ಶ್ರೀಲತಾ ಸುರೇಶ್ ತ್ರಾಸಿ ಇವರಿಗೆಲ್ಲ ಪರಿಹಾರ ಒದಗಿಸ್ತಿದ್ದಾರೆ. ಶ್ರೀಲತಾ ಹೆಸರುವಾಸಿ ತಜ್ಞೆ. ಶ್ರೀಲತಾ ಅವರ ಬಳಿ ಸೆಲೆಬ್ರಿಟಿಗಳು,ರಾಜಕಾರಣಿಗಳು, ಗಣ್ಯರು ಕಳೆದ 25 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈನ ಪ್ರಖ್ಯಾತ ಕಾಲೇಜುಗಳಲ್ಲಿ ಮೆಡಿಕಲ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಶ್ರೀಲತಾ ತ್ರಾಸಿ ಅವರಿಗಿದೆ. ಮುಂಬೈನ ನಾಯರ್ ಆಸ್ಪತ್ರೆ, ರಾಜವಾಡಿ ಆಸ್ಪತ್ರೆಗಳಲ್ಲೂ ಶ್ರೀಲತಾ ಕಾರ್ಯನಿರ್ವಹಿಸಿದ್ದರು. 23ನೇ ವಯಸ್ಸಿನಲ್ಲಿಯೇ ಮದುವೆಯಾದ ಡಾ.ಶ್ರೀಲತಾ ತ್ರಾಸಿ, ಅವರ ಬದುಕು ಹಲವು ಏಳು ಬೀಳುಗಳನ್ನು ಕಂಡಿದೆ.

ಡಾ.ಶ್ರೀಲತಾ ಸುರೇಶ್ ತ್ರಾಸಿ ಪರಿಚಯ

image


ಡಾ.ಶ್ರೀಲತಾ ಅವರ ಮಾವ ಕೂಡಾ ಹೆಸರುವಾಸಿ ಚರ್ಮ ತಜ್ಞರಾಗಿದ್ದರು. ವೈದ್ಯಕೀಯ ಲೋಕದಲ್ಲಿ ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರಗೊಳ್ಳುವ ಮೊದಲೇ ಅವರು ಈ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲೇ ಹಲವು ಗಣ್ಯರು ತ್ರಾಸಿಯವರ ಮಾವನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಪ್ಲಾಸ್ಟಿಕ್ ಸರ್ಜರಿ ಹಾಗೂ ಬೋಟೆಕ್ಸ್ ತಂತ್ರಜ್ಞಾನ ಕಂಡು ಹಿಡಿಯುವ ಮೊದಲೇ ಹಲವು ವರ್ಷಗಳ ಕಾಲ ಚರ್ಮ ತಜ್ಞರಾಗಿ ಕೆಲಸ ಮಾಡಿದ ಹೆಗ್ಗಳಿಗೆ ಅವರಿಗಿತ್ತು.

ಮದುವೆಯಾದ ಬಳಿಕ ತ್ರಾಸಿ ಕೂಡಾ ತಮ್ಮ ಮಾವನ ಕ್ಲಿನಿಕ್​ಗೆ ದಿನವೂ ಭೇಟಿ ನೀಡುತ್ತಿದ್ದರು. ತಮ್ಮ ಮಾವನವರ ಬಳಿಯೇ ಶ್ರೀಲತಾ ಸಹಾಯಕರಾಗಿ ಸೇರಿಕೊಂಡರು. ಹೀಗಾಗಿ ಚರ್ಮದ ಸಮಸ್ಯೆಗಳ ಬಗ್ಗೆ ಹೊಸ ಹೊಸ ವಿಚಾರಗಳು ಶ್ರೀಲತಾಗೆ ಅರಿವಾಯಿತು. ಚರ್ಮರೋಗ, ಚಿಕಿತ್ಸೆಗಳ ಬಗ್ಗೆ ಶ್ರೀಲತಾಗೆ ಆಸಕ್ತಿ ಹೆಚ್ಚಾಗತೊಡಗಿತು.

‘ಕಾಲೇಜು ದಿನಗಳಲ್ಲಿ ನನಗೆ ದೊರಕಿದ ತರಬೇತಿ ಹಾಗೂ ಮಾರ್ಗದರ್ಶನ ಉತ್ತಮವಾಗಿತ್ತಾದರೂ, ಈ ಬಗ್ಗೆ ಪ್ರಾಕ್ಟಿಕಲ್ ಅನುಭವ ನನಗಿರಲಿಲ್ಲ. ಹೀಗಾಗಿ ಅನುಭವದ ಕೊರತೆಯಿಂದಾಗಿ ನನಗೆ ಈ ಕ್ಷೇತ್ರದಲ್ಲಿ ಏನನ್ನೂ ಸಾಧಿಸಲಾಗಲಿಲ್ಲ. ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ನಾನು ನಿರ್ಧರಿಸಿದೆ ’ ಎನ್ನುತ್ತಾರೆ ಶ್ರೀಲತಾ.

ಕಲಿಕೆ ಪೂರ್ಣಗೊಂಡ ಬಳಿಕ ಶ್ರೀಲತಾ ಸೌಂದರ್ಯ ಮತ್ತು ಚರ್ಮದ ಬಗ್ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ 1982ರಲ್ಲಿ ಪೆನ್ಸಿಲ್ವೇನಿಯಾಗೆ ತೆರಳಿದ್ರು. ಭಾರತಕ್ಕೆ ಹಿಂತಿರುಗಿದ ಬಳಿಕ ಅವ್ರು ಚರ್ಮಶಾಸ್ತ್ರ ಎಂಬ ಹೊಸ ವಿಭಾಗವನ್ನೇ ಶುರುಮಾಡಿದ್ರು. ನಾಯರ್ ಹಾಸ್ಪಿಟಲ್​ನಲ್ಲಿ ಈ ಹೊಸ ಚಿಕಿತ್ಸೆಯನ್ನು ಆರಂಭಿಸಲಾಯ್ತು. ಆ ಬಳಿಕ ತಮ್ಮ ಮಾವನವರ ಜತೆ ಕೂಡಾ ಶ್ರೀಲತಾ ಈ ಹೊಸ ವಿಧಾನವನ್ನು ಅಧ್ಯಯನ ಮಾಡಲಾರಂಭಿಸಿದರು. 1988ರಲ್ಲಿ ಚರ್ಮಶಾಸ್ತ್ರದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ ಶ್ರೀಲತಾ ಈ ವಿಭಾಗದಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಆರಂಭಿಸಿದ್ರು.

ಚರ್ಮಶಾಸ್ತ್ರದಲ್ಲಿ ಶ್ರೀಲತಾ ತ್ರಾಸಿ ಹಲವು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದ್ರು. ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯದಿಂದ ಯಾವ ರೀತಿ ಸೌಂದರ್ಯ ವೃದ್ಧಿ ಮಾಡಿಕೊಳ್ಳಬಹುದು ಅನ್ನೋ ಮಾಹಿತಿಯನ್ನು ಜನರಿಗೆ ನೀಡಿದ್ರು. ಮುಖದಲ್ಲಿ ಕಪ್ಪುಚುಕ್ಕೆ, ಮೊಡವೆಗಳ ನಿವಾರಣೆಗೆ ಹೊಸ ಚಿಕಿತ್ಸೆಯನ್ನು ಆವಿಷ್ಕರಿಸಿದ್ರು.

‘ಚರ್ಮಶಾಸ್ತ್ರದಲ್ಲಿ ಸಾಧನೆ ಮಾಡಲು ಈ ಕ್ಷೇತ್ರದ ಪ್ರತಿಯೊಂದು ಮಾಹಿತಿಯನ್ನೂ ತಿಳಿದುಕೊಂಡಿರುವುದು ಅತ್ಯಂತ ಅಗತ್ಯ. ಪ್ರತಿ ಆರು ತಿಂಗಳಿಗೊಮ್ಮೆ ನಾವು ಹೊಸ ಹೊಸ ಚಿಕಿತ್ಸೆಗಳನ್ನು ಗ್ರಾಹಕರಿಗೆ ಪರಿಚಯಿಸಿದೆವು. ಹೀಗಾಗಿ ನಮ್ಮ ಸೇವೆಯನ್ನು ಗ್ರಾಹಕರು ಮೆಚ್ಚಿಕೊಂಡರು’ ಅಂತ ಖುಷಿಯಿಂದ ಹೇಳ್ತಾರೆ ಶ್ರೀಲತಾ ತ್ರಾಸಿ..

ಎಲ್ಲೆಡೆ ಹೆಸರುವಾಸಿಯಾಯ್ತು ಡಾ.ತ್ರಾಸಿ ಕ್ಲಿನಿಕ್

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನೂತನ ಚಿಕಿತ್ಸಾ ವಿಧಾನಗಳಿಂದ ಶ್ರೀಲತಾ ತಮ್ಮಲ್ಲಿಗೆ ಬರುವ ಚರ್ಮರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಿದ್ರು. ಇದರಿಂದಾಗಿ ಇವರ ಹೆಸರು ಮನೆಮಾತಾಯಿತು. ಚರ್ಮರೋಗ ತಜ್ಞರು ಅಂದ್ರೆ ಡಾ.ತ್ರಾಸಿ ಎನ್ನುವಷ್ಟರ ಮಟ್ಟಿಗೆ ಶ್ರೀಲತಾ ಹೆಸರು ಪ್ರಸಿದ್ಧಿಯಾಯ್ತು.

ಸದ್ಯ ಶ್ರೀಲತಾ ಮುಂಬೈನಲ್ಲಿ ಮೂರು ಪ್ರಸಿದ್ಧ ಚರ್ಮರೋಗದ ಕ್ಲಿನಿಕ್ ಹೊಂದಿದ್ದಾರೆ. ಅಷ್ಟೇ ಅಲ್ಲ ರಾಮಕೃಷ್ಣ ಮಿಶನ್ ಆಸ್ಪತ್ರೆ, ಆಶಾ ಫರೇಕ್ ಆಸ್ಪತ್ರೆಗಳಲ್ಲೂ ಶ್ರೀಲತಾ ತ್ರಾಸಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಇಂಡಿಯನ್ ಏರ್​ಲೈನ್ಸ್​ ಹಾಗೂ ಏರ್​ ಇಂಡಿಯಾ ಸಂಸ್ಥೆಯಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

‘ಇವತ್ತಿನ ಮಾರುಕಟ್ಟೆಯಲ್ಲಿ ಸೌಂದರ್ಯವರ್ಧನೆ ಅತ್ಯಂತ ಬೇಡಿಕೆಯಿರುವ ಕ್ಷೇತ್ರವಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಉದ್ದಿಮೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಹೆಚ್ಚಿನ ವೈದ್ಯರು ಸೌಂದರ್ಯವರ್ಧನೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ತಮ್ಮನ್ನು ತಜ್ಞರೆಂದು ಕರೆದುಕೊಳ್ಳುತ್ತಾರೆ’ ಅಂತಾರೆ ತ್ರಾಸಿ. ಯಾವುದೇ ಅನುಭವವಿಲ್ಲದೆ ನೀಡುವ ಚಿಕಿತ್ಸೆಯಿಂದ ಅಪಾಯವಾಗುವ ಸಾಧ್ಯತೆಯಿದೆ, ಇಂತಹವರ ಬಳಿ ಚಿಕಿತ್ಸೆ ಪಡೆದವರು ಮತ್ತೆ ತಮ್ಮ ಕ್ಲಿನಿಕ್​ಗೆ ಬರುತ್ತಾರೆ. ಅಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನಿಜಕ್ಕೂ ಸವಾಲಿನ ವಿಚಾರ ಅನ್ನೋದು ಶ್ರೀಲತಾ ಅಭಿಪ್ರಾಯ.

ಸದ್ಯ ಡಾ.ತ್ರಾಸಿ ತಮ್ಮ ಮಗಳು ಡಾ.ಶೆಫಾಲಿಗೆ ಸೌಂದರ್ಯವರ್ಧನೆ,ಚರ್ಮಶಾಸ್ತ್ರದ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಶೆಫಾಲಿ ನೆರೂಕರ್ ಚರ್ಮರೋಗದಲ್ಲಿ ಎಂಡಿ ಪದವಿಯನ್ನು ಪಡೆದಿದ್ದು, ಈ ಕುಟುಂಬದ ಮೂರನೇ ತಲೆಮಾರಿನ ವೈದ್ಯೆಯಾಗಿದ್ದಾರೆ. ಪ್ರಸೂತಿ ಹಾಗೂ ದಂತ ವೈದ್ಯಕೀಯವನ್ನು ಆಯ್ಕೆ ಮಾಡಿಕೊಳ್ಳುವ ಬದಲು ಶೆಫಾಲಿ ಹಲವು ಅವಕಾಶಗಳಿರುವ ಆಸಕ್ತಿಯ ಕ್ಷೇತ್ರ ಚರ್ಮಶಾಸ್ತ್ರವನ್ನು ಆಯ್ಕೆ ಮಾಡಿಕೊಂಡರು.

‘ಚರ್ಮಶಾಸ್ತ್ರದಲ್ಲಿ ಹಲವು ತಂತ್ರಜ್ಞಾನಗಳು ಬಂದಿವೆ. ವಿವಿಧ ರೀತಿಯ ಆಸಕ್ತಿಕರ ಚಿಕಿತ್ಸಾ ವಿಧಾನಗಳು ಲಭ್ಯವಿವೆ. ಇಲ್ಲಿ ಇನ್ನಷ್ಟು ಕಲಿಯಲು ಸಾಕಷ್ಟು ಅವಕಾಶವಿದೆ. ಹೆಚ್ಚು ಹೆಚ್ಚು ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಿದೆ’ ಅನ್ನೋದು ಡಾ.ಶೆಫಾಲಿ ಅಭಿಪ್ರಾಯ.

ತಾಯಿ-ಮಗಳ ಅನುಬಂಧ

ತಮ್ಮ ಮಗಳು ಚರ್ಮಶಾಸ್ತ್ರವನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೆ ಡಾ.ತ್ರಾಸಿ ಖುಷಿವ್ಯಕ್ತಪಡಿಸುತ್ತಾರೆ. ಕಲಿಯಲು ಹಲವು ಅವಕಾಶಗಳಿದ್ದರೂ ಮಗಳು ನನ್ನ ಆಸಕ್ತಿಯನ್ನೇ ಆಯ್ಕೆ ಮಾಡಿಕೊಂಡಳು ಅಂತ ಹೆಮ್ಮೆಯಿಂದ ಹೇಳ್ತಾರೆ ತ್ರಾಸಿ..

ಬಾಲ್ಯವನ್ನು ನೆನಪಿಸಿಕೊಳ್ಳುವ ಶೆಫಾಲಿ, ‘ಬಾಲ್ಯದ ದಿನಗಳಲ್ಲಿ ತಾಯಿ ಸದಾ ರೋಗಿಗಳ ಆರೈಕೆ ಹಾಗೂ ಚಿಕಿತ್ಸೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಹೀಗಾಗಿ ನಮಗೆ ತಾಯಿಯ ಜತೆ ಹೆಚ್ಚು ಸಮಯವನ್ನು ಕಳೆಯಲು ಸಾಧ್ಯವಾಗಿರಲಿಲ್ಲ. ಶಾಲೆಯಲ್ಲಿ ನಡೆಯುವ ಸಮಾರಂಭಗಳಲ್ಲಿಯೂ ಆಕೆ ಭಾಗವಹಿಸದಿರುವುದು ಬೇಸರ ತರಿಸುತ್ತಿತ್ತು. ಆದ್ರೆ ಅವ್ರು ಅದೇನೋ ಮಹತ್ತರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಅನ್ನೋದು ನಮ್ಮ ಅರಿವಿಗೆ ಬರುತ್ತಿತ್ತು ಅಂತಾರೆ.

ಇನ್ನೊಂದು ವಿಶೇಷವಾದ ಸಂಗತಿಯೆಂದರೆ ತಾಯಿ-ಮಗಳಿಬ್ಬರೂ ಹೆಸರುವಾಸಿ ಚರ್ಮರೋಗ ತಜ್ಞರಾಗಿದ್ದರು ಸೌಂದರ್ಯ ವರ್ಧಕದ ಬಗ್ಗೆ ಯಾವುದೇ ಜಾಹೀರಾತುಗಳಲ್ಲಿ ಭಾಗವಹಿಸುವುದಿಲ್ಲ. ವೈದ್ಯರಾಗಿ ನಾವು ಯಾವುದೇ ನಿರ್ಧಿಷ್ಟ ಸೌಂದರ್ಯ ವರ್ಧಕವನ್ನು ಅತ್ಯುತ್ತಮವೆಂದು ಹೇಳಲು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಇವುಗಳ ಪರಿಣಾಮ ಬದಲಾಗುತ್ತಿರುತ್ತದೆ, ನಾವು ಚಿಕಿತ್ಸೆಗೆ ಬಳಸುವ ಎಲ್ಲಾ ಕಾಸ್ಮೆಟಿಕ್​ಗಳು ಉತ್ತಮವಾದವುಗಳೇ ಅನ್ನೋದು ಡಾ.ತ್ರಾಸಿ ಅಭಿಪ್ರಾಯ

ಈ ವೃತ್ತಿ ಬದುಕಿನಲ್ಲಿ ನೈತಿಕತೆಯೂ ಮುಖ್ಯ ಅನ್ನೋದು ಡಾ.ತ್ರಾಸಿ ಹಾಗೂ ಶೆಫಾಲಿ ಅವರ ಮನದಾಳದ ಮಾತು.

ಲೇಖಕರು : ಪ್ರೀತಿ ಚಾಮಿಕುಟ್ಟಿ

ಅನುವಾದಕರು : ವಿನುತಾ